ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಾರ್ಕ್ಸ್ ಕಡಿಮೆ ಬಂದ್ರ ಕಪಾಳದ ಮೇಲೆ ಮಾರ್ಕು!

By * ಗುರು ಕುಲಕರ್ಣಿ
|
Google Oneindia Kannada News

Teachers and marks theory
ಇದೀಗ ತಾನೆ ಮಕ್ಕಳ ಪರೀಕ್ಷೆಗಳು ಮುಗಿದಿವೆ. ಚಿಲ್ಟು-ಪಿಲ್ಟು ಪರೀಕ್ಷೆಗಳ ಫಲಿತಾಂಶ ಕೂಡ ಬಂದು ಪಾಲಕರು ತಮ್ಮ ಮಕ್ಕಳಿಗೆ ಕಡಿಮೆ ಮಾರ್ಕು ಬಂದಿದ್ದಕ್ಕೆ ಬಯ್ಯುವ ಕರ್ತವ್ಯ ಕೂಡ ಮಾಡಿ ಮುಗಿಸಿ ನಿರಾಳರಾಗಿದ್ದಾರೆ. ಹತ್ತನೆ ತರಗತಿ, ಹನ್ನೆರಡನೆ ತರಗತಿ ಫಲಿತಾಂಶ ಬರುವ ಯಮಗಂಡಕಾಲ ದೂರವಿದೆ. ಪರೀಕ್ಷೆಗಳು ನಡೆದಾಗ ಅಪ್ಪ-ಅಮ್ಮಂದಿರು ಗಂಭೀರರಾಗಿ 'ಐದು ಮಾರ್ಕಿನ ಕೂಡಿಸಿ ಬರೆಯಿರಿ ಪ್ರಶ್ನೆಗೆ ಏನು ಉತ್ತರ ಬರದಿ? ಹತ್ತು ಮಾರ್ಕಿನ ಎಸ್ಸೆ ಟಾಯಿಪ್ ಪ್ರಶ್ನೆಗೆ ಏನು ಉತ್ತರ ಬರದಿ?' ಎಂದು ಮಕ್ಕಳ ತಲೆ ತಿನ್ನುತ್ತಿರುತ್ತಾರಾದ್ದರಿಂದ ನನ್ನ ಲೇಖನ ಓದುವುದಿಲ್ಲ. ಇನ್ನೂ ಹತ್ತು-ಹನ್ನೆರಡನೇ ಅಗ್ನಿ ಪರೀಕ್ಷೆಯ ಫಲಿತಾಂಶ ಬಂದ ಮೇಲಂತೂ ಕಡಿಮೆ ಮಾರ್ಕು ಬಂದದ್ದಕ್ಕೋ, ನಪಾಸಾದದ್ದಕ್ಕೋ ಆತ್ಮಹತ್ಯೆ ಮಾಡಿಕೊಂಡವರ ಸುದ್ದಿಗಳು ದಿನಪತ್ರಿಕೆಯನ್ನು ತುಂಬಿರುತ್ತವಾದ್ದರಿಂದ ನನಗೇ ಈ ಲೇಖನ ಬರೆಯುವ ಉಮೇದು ಇರುವುದಿಲ್ಲ. ಆದುದರಿಂದ ಈಗಿನ ಈ ಶಾಂತಪರ್ವವೇ ನಾವು ನಮ್ಮ ಜೀವನದ "ಆ" ಅಂಕದಲ್ಲಿ ನಮ್ಮನ್ನು ಅಷ್ಟೊಂದು ಕಾಡಿದ ಅಂಕಗಳು- ಮಾರ್ಕುಗಳು- ಅವುಗಳ ಬಗ್ಗೆ ಬರೆದ ಈ ಲಘುಬರಹಕ್ಕೆ ಸೂಕ್ತ ಸಮಯ ಅನಿಸುತ್ತದೆ. ದಯವಿಟ್ಟು ಓದಿ ಪಾಸೋ, ನಪಾಸೋ ಹೇಳ್ಬಿಡಿ, ಸಾಕು!

ಮಾರ್ಕುಗಳ ವಿಷಯ ಬಂದಾಗಲೆಲ್ಲಾ ನನಗೆ ನನ್ನ ಆರನೇ ತರಗತಿಯ ಸ್ನೇಹಿತ ನೆನಪಾಗುತ್ತಾನೆ. ಆಗ ನಮ್ಮ ಗಣಿತದ ಗುರುಗಳು ಒಂದು ಒಳ್ಳೆಯ ರೂಢಿಯನ್ನು ನಮಗೆ ಕಲಿಸುವ ಪ್ರಯತ್ನದಲ್ಲಿದ್ದರು. ಯಾವುದೇ ಲೆಕ್ಕದ ಕೊನೆಗೆ ಬರುವ ಉತ್ತರವನ್ನು ಅಂಡರ್ಲೈನ್ ಮಾಡಿ, ಅದರ ಪಕ್ಕ ನಾವು ಕೋಡಿನಲ್ಲಿ ಕಮೆಂಟು ಬರೆಯುವ ರೀತಿಯಲ್ಲಿ "Ans" ಎಂದು ಬರೆಯಿರಿ ಎಂದಿದ್ದ ನಮ್ಮ ಗುರುಗಳು ಪರೀಕ್ಷೆಯಲ್ಲಿ ಹಾಗೇ ಮಾಡದಿದ್ದರೆ ಅರ್ಧ ಮಾರ್ಕು ಕಡಿಯುವುದಾಗಿ ಬೆದರಿಕೆ ಕೂಡ ಹಾಕಿದ್ದರು. ಆ ಸಲದ ಯುನಿಟ್ ಟೆಸ್ಟಿನಲ್ಲಿ ನಾನು ಚೆನ್ನಾಗಿ ಮಾಡಿದ್ದರಿಂದ ಇಪ್ಪತ್ತೈದಕ್ಕೆ ಇಪ್ಪತ್ತೈದು ಬಂದಿತ್ತು. ನಾವೆಲ್ಲಾ ಉತ್ತರಪತ್ರಿಕೆಗಳನ್ನು ನೋಡಿಕೋಳ್ಳುತ್ತಿರುವಾಗ ನನ್ನ ಸ್ನೇಹಿತ ನನ್ನ ಉತ್ತರ ಪತ್ರಿಕೆಯನ್ನು ಇಸಿದುಕೊಂಡು ತನ್ನ ಉತ್ತರಗಳೊಡನೆ ಹೊಲಿಸಿಕೊಳ್ಳತೊಡಗಿದ. ಒಂದು ಉತ್ತರಕ್ಕೆ ನಾನು "Ans" ಎಂಬ ಶ್ರೀಕಾರ ಹಾಕಿರಲಿಲ್ಲ. ನನ್ನ ಸ್ನೇಹಿತ ನೇರವಾಗಿ ನಮ್ಮ ಗುರುಗಳ ಹತ್ತಿರಹೋಗಿ ಅದನ್ನು ತೋರಿಸಿದ್ದ. ಕೊಟ್ಟ ಮಾತಿಗೆ ತಪ್ಪದ ಗುರುಗಳು, ಅರ್ಧ ಮಾರ್ಕು ಕಡಿದು ಕೊಟ್ಟಿದ್ದರು. ಇಪ್ಪತ್ತೈದಕ್ಕೆ ಇಪ್ಪತ್ತೈದು ಬಂದ ಖುಷಿಯಲ್ಲಿದ್ದ ನನ್ನ ಬಲೂನಿಗೆ ಸೂಜಿ ಚುಚಿದ್ದರು. ಈ ಘಟನೆಯಾಗಿ ಈಗ ಇಪ್ಪತ್ತು-ಇಪ್ಪತ್ತೈದು ವರುಷಗಳಾಗಿವೆ. ಮಾರ್ಕುಗಳ ವಿಷಯ ಬಂದಾಗಲೆಲ್ಲ ನನಗೆ ಅರ್ಧ ಮಾರ್ಕು ಕಡಿಸಿದ ಗೆಳೆಯ ನೆನಪಾಗುತ್ತಾನೆ, ಮತ್ತು ಪ್ರತೀ ಸಲವೂ ಅವನು ಮಾರ್ಕು ಕಡಿಸಿದ್ದಕ್ಕೆ ನಾನು ಹಲ್ಲು ಕಡಿಯುತ್ತೇನೆ!

ಈಗ ಹೇಗೊ ಏನೋ ಗೊತ್ತಿಲ್ಲ, ನಾವು ಸಣ್ಣವರಿದ್ದಾಗ ಮಾತ್ರ ಮಾಸ್ತರುಗಳು ನಮ್ಮ ಮಾರ್ಕುಗಳಿಗೆ ಬಹಳ ಮಹತ್ವಕೊಡುತ್ತಿದ್ದರು. ಈಗ ವಿಶ್ವವಿದ್ಯಾಲಯಗಳಲ್ಲಿ ಮಾರ್ಕ್ಸವಾದಿಗಳು ಸೇರಿ ಹಿಂಸೆಯನ್ನು ಪ್ರಚೋದಿಸುತ್ತಿದ್ದಾರೆಂದು ಆರೋಪಗಳಿವೆ. ನಮ್ಮ 'ಮಾರ್ಕ್ಸ್'ವಾದಿ ಮಾಸ್ತರುಗಳು ಕೂಡ ನಮಗೆ ಕಡಿಮೆ ಮಾರ್ಕು ಬಂದಾಗ ಕೊಡುತ್ತಿದ್ದ ಹಿಂಸೆಯೇನು ಕಡಿಮೆಯಿರಲಿಲ್ಲ. ಕಡಿಮೆ ಮಾರ್ಕು ಬಂದರೆ ಅವರು ನಮ್ಮ ಕಪಾಳದ ಮೇಲೆ ತಮ್ಮ ಬೆರಳುಗಳ ಮಾರ್ಕು ಮೂಡಿಸಿ ಕಡಿಮೆಯಾದ ಮಾರ್ಕುಗಳಿಗೆ ಸಮಾ ಮಾಡಿಕೊಳ್ಳುತ್ತಿದ್ದರು. ನಾವು ಏನಾದರೂ ಕಿತಾಪತಿ ಮಾಡಿದಾಗ, I mean ಮಾಡಿ ಸಿಕ್ಕಿಕೂಡ ಬಿದ್ದಾಗ, ನಮ್ಮ ಗುರುಗಳು ಪೂಜೆ ಶುರುಮಾಡುತ್ತಿದ್ದುದುದೇ "ಈ ಸಲದ ಯುನಿಟ್ ಟೆಸ್ಟನ್ಯಾಗ ಮಾರ್ಕು ಎಷ್ಟು ಬಂದಾವು?" ಎಂಬ ನಾಂದಿಯಿಂದ. ಕಡಿಮೆ ಮಾರ್ಕು ಬಂದಿದ್ದರೆ ಉಗ್ರವಾಗುತ್ತಿದ್ದ ಪೂಜೆ, "ಎದೀ ಸೀಳಿದರ ನಾಕ ಅಕ್ಷರ ಇಲ್ಲ, ಕಿತಾಪತಿ ಮಾಡ್ತಾನ, ಕಿತಾಪತಿ" ಎಂಬ ಮಂತ್ರದ ಪುನರುಚ್ಚಾರದ ನಡುವೆ ಸಾಂಗವಾಗುತ್ತಿತ್ತು. ಒಂಚೂರು ಅಡ್ದಿಯಿಲ್ಲ ಎನ್ನಬಹುದಾದ ಮಾರ್ಕು ಬಂದಿದ್ದರೆ, "ಏನು ಅಷ್ಟೇ ಸಾಕಾ?" ಎಂತಲೊ, "ಮಾರ್ಕು ಛಲೊ ಬಂದಾವಂತ ಕೊಡು ಮೂಡ್ಯಾವಾ?" ಎಂಬ ಸ್ತುತಿಯಿಂದ ಸೌಮ್ಯವಾಗಿಯೇ ಮುಗಿಯುತ್ತಿತ್ತು.

ಶಾಲೆಯಲ್ಲಷ್ಟೇ ಅಲ್ಲ, ನಮ್ಮ ಮಾಸ್ತರುಗಳ ಜೀವನದಲ್ಲಿ ಕೂಡ ಮಾತು ಮಾರ್ಕು, ಪಾಸು-ನಪಾಸು, ಫಸ್ಟ್ ಕ್ಲಾಸು-ಸೆಕೆಂಡು ಕ್ಲಾಸುಗಳ ಸುತ್ತನೇ ಸುತ್ತುತ್ತಿದ್ದವು. ಉದಾಹರಣೆಗೆ ಶಾಲೆಯಿಂದ ಮರಳಿದ ತಕ್ಷಣ ಹೆಂಡತಿ ತಿಂಡಿ ಕೊಟ್ಟರೆ ಅದಕ್ಕೆ ನಮ್ಮ ಮಾಸ್ತರರು ಕೊಡುತ್ತಿದ್ದ ಟಿಪಿಕಲ್ ಫೀಡ್ಬ್ಯಾಕ್ ಹೀಗಿರುತ್ತಿತ್ತು "ಮೆಣಸಿನಕಾಯಿಬಜಿ ಫಸ್ಟ್ ಕ್ಲಾಸ್ ಆಗ್ಯಾವು. ಚುಮ್ಮರಿ ಅಡ್ಡಿಯಿಲ್ಲ, ನೂರಕ್ಕ ಐವತ್ತು ಕೊಡಬಹುದು. ಆದರ ಚಾ ಮಾತ್ರ ನಪಾಸ್ - ತೀರ ಕಲಗಚ್ಚ ಆಗೇತಿ"!

ಈ 'ಅಂಕಾ'ಲಾಜಿ - ಅಂಕಗಳಿಗೆ ಅನವಶ್ಯಕ ಪ್ರಾಮುಖ್ಯತೆ ಕೊಡುವ ರೋಗ, ಒಂದು ಬಗೆಯ ಕ್ಯಾನ್ಸರ್ - ಆವಾಗ ಬಹಳ ಪಾಲಕರಿಗೆ ಅಮರಿಕೊಂಡಿತ್ತು. ನಮ್ಮಂತಹ ಗ್ರಾಮೀಣ ಪ್ರದೇಶದಲ್ಲಿ ಪರಿಸ್ಥಿತಿ ಅಷ್ಟೇನು ಹದಗೆಟ್ಟಿರಲಿಲ್ಲವಾದರೂ, ನಗರ ಪ್ರದೇಶದಲ್ಲಿ ಅದು ಅತಿಯಾಗಿತ್ತು. ಇಲ್ಲವಾದರೆ, ಜೀವನದಲ್ಲಿ ಎಂದೆಂದಿಗೂ, ಯಾರ್ಯಾರಿಗೂ ಉಪಯೋಗವಾಗದ ಹತ್ತನೇ ತರಗತಿ ಪರೀಕ್ಷೆಯಲ್ಲಿ ಹೆಚ್ಚಿನ ಮಾರ್ಕ್ಸ್ ಬರುತ್ತವೆ ಎಂಬ ಮೂಢನಂಬಿಕೆಯಿಂದ ಕನ್ನಡದ ಬದಲು ಸಂಸ್ಕೃತ ವಿಷಯ ತೆಗೆದುಕೊಳ್ಳಲು ಪಾಲಕರು ಯಾಕೆ ಒತ್ತಾಯ ಮಾಡುತ್ತಿದ್ದರು? ಅದಿರಲಿ, ಆದ್ಯಾವನೋ ಅಡ್ಡಕಸುಬಿ ಮಾಸ್ತರು ತನ್ನ ಹತ್ತಿರ ಟ್ಯೂಶನ್ನಿಗೆ ಬಂದವರಿಗೆ ಕ್ಲಾಸ್ ಪರೀಕ್ಷೆಗಳಲ್ಲಿ ಹೆಚ್ಚಿನ ಮಾರ್ಕು ಕೊಡುತ್ತಾನೆ ಎಂದು ಅವನ ಹತ್ತಿರ ತಮ್ಮ ಮಕ್ಕಳನ್ನು ಯಾಕೆ ಕಳುಹಿಸುತ್ತಿದ್ದರು?

English summary
Few decades earlier school teachers would find various methods and theories to gauge the students and give them marks. Few of them were really funny. Guru Kulkarni from Bangalore recalls his good old days in school and college.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X