ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನಾನು, ನನ್ನ ರೂಂಮೇಟುಗಳು ಮತ್ತು ಭೂತಕಾಲ

By * ಗುರು ಕುಲಕರ್ಣಿ
|
Google Oneindia Kannada News

Guru Kulkarni
ಬೀರ್ ತ್ರಿಪಾಠಿ ಬಗ್ಗೆ ನಾನು ಹೇಳಿದ್ದು ನೆನಪಿರಬೇಕಲ್ಲ? ನಮ್ಮ ರೂಂಮೇಟು ನಿರ್ಮಲಕುಮಾರನ ಬಾಸ್ ಆಗಿದ್ದವನು. ಹುಂಬ, ಹೆಣ್ಣುಬಾಕ, ವಿಘ್ನಸಂತೋಷಿ, ಬಾಯಿಬಡುಕ. ಒಟ್ಟಿನಲ್ಲಿ, ಅಡಿಯಿಂದ ಮುಡಿಯವರೆಗೆ, ಟೋಟಲ್ಲಿ ಲಫಂಗ ನನ್ಮಗ. ಆಗ ಬೀರ್‌ನ ಗುಂಪಿನಲ್ಲಿಯೇ ಕೆಲಸ ಮಾಡುತ್ತಿದ್ದ ನೀತಾಳಿಗೆ ಕಾಳು ಹಾಕ್ತಾ ಇದ್ದುದಕ್ಕಾಗಿ ನಿರ್ಮಲಕುಮಾರನಿಗೆ ಅವನು ಕೊಟ್ಟ ಕಾಟ ಅಷ್ಟಿಷ್ಟಲ್ಲ. ಅವನನ್ನು ಒಂಚೂರು ಆಟ ಆಡಿಸೋಣವೆಂದು ನಾವು ಜಯನಗರದ ನಿವೇಶನವೊಂದು ಮಾರಲಿಕ್ಕಿದೆ ಎಂದು ಬೀರನ ಹೆಸರಿನಲ್ಲಿ ಪತ್ರಿಕೆಯಲ್ಲಿ ಒಂದು ಜಾಹಿರಾತು ಹಾಕಿದ್ದೆವು. ಕಾಕತಾಳೀಯವಾಗಿ ಜಾಹೀರಾತಿನಲ್ಲಿ ನಾವು ಕೊಟ್ಟ ಕಾಲ್ಪನಿಕ ಸಂಖ್ಯೆಯ ನಿವೇಶನ ನಿಜವಾಗಿಯೂ ಜಯನಗರದಲ್ಲಿತ್ತು ಮತ್ತು ಅದರ ಮಾಲಿಕತ್ವದ ಬಗ್ಗೆ ವಿವಾದವಿತ್ತು. ವಿವಾದದ ಒಂದು ಪಾರ್ಟಿಯಾಗಿದ್ದ ಬಿಲ್ಡರುಗಳು ಜಾಹೀರಾತನ್ನು ನೋಡಿ, ಆ ಸ್ವತ್ತಿಗೆ ಇನ್ನೊಬ್ಬ ಹಕ್ಕುದಾರ ಹುಟ್ಟಿಕೊಂಡ ಎಂದು ಆತಂಕಗೊಂಡರು ಅನಿಸುತ್ತೆ. ಜಾಹೀರಾತಿನ ಸತ್ಯಾಸತ್ಯತೆಯ ಬಗ್ಗೆ ವಿಚಾರಿಸಲು ಬೀರ್‌ನ ಮೋಬೈಲಿಗೆ ಅವರು ಫೋನು ಮಾಡಿರಬೇಕು.. ಆದರೆ ಹುಟ್ಟಾ ಹುಂಬ ಬೀರ್ ಅವರಿಗೆ ಏನು ಉತ್ತರ ಕೊಟ್ಟನೋ, ಅವರೇನು ಅರ್ಥಮಾಡಿಕೊಂಡರೋ.. ನಾಲ್ಕೇ ದಿನಗಳಲ್ಲಿ ಬೀರ್‌ನನ್ನು ಹೊಡೆಸಿಹಾಕಿದ್ದರು. ದುರದೃಷ್ಟವಶಾತ್ ನಾವು ಆಡಿದ ಆಟ, ಬೀರನ್ ಜೀವಕ್ಕೇ ಎರವಾಗಿತ್ತು.

ಅದಾದ ನಂತರ ನಾವು ಮೂರೂ ಜನ ರೂಂಮೇಟುಗಳು ಪೊಲೀಸರು ಯಾವತ್ತು ನಮ್ಮ ಮನೆ ಬಾಗಿಲು ಬಾರಿಸುತ್ತಾರೋ ಎಂದು ಆತಂಕದಿಂದಲೇ ಕಳೆದಿದ್ದೆವು. ವಿನಾಯಕ ಇಂಡಿಯನ್ ಪೀನಲ್ ಕೋಡ್‌ನ ಯಾವ ಸೆಕ್ಷನ್ನಿನ ಪ್ರಕಾರ ನಮ್ಮನ್ನು ಒಳಹಾಕಬಹುದು ಎಂದು ಇಂಟರ್‌ನೆಟ್ಟಿನಿಂದ ಓದಿ ಹೇಳಿ, ತಾನೂ ಹೆದರಿ, ನಮ್ಮನ್ನೂ ಹೆದರಿಸಿಬಿಟ್ಟಿದ್ದ. ಪುಣ್ಯಕ್ಕೆ ಅಂತಹದೇನು ಆಗಿರಲಿಲ್ಲ. ಪೊಲೀಸರು ಯಾರೋ ನಾಲ್ಕು ಜನರನ್ನು ಹಿಡಿದು ಒಳಹಾಕಿದ್ದು ಪೇಪರಿನಲ್ಲಿ ಬಂದಿತ್ತಾದರೂ ಮುಂದೆ ಮುಖ್ಯಮಂತ್ರಿಯವರ ಕುರ್ಚಿ ಅಲುಗಾಡಿದ್ದು, ಯಾವುದೋ ಸ್ವಾಮಿ ಯಾವುದೋ ಹೆಂಗಸಿನೊಂದಿಗೆ ಸಿಕ್ಕಿಬಿದ್ದದ್ದು ದೊಡ್ಡ ಸುದ್ದಿಗಳಾಗಿ ಬೀರನ ಕೊಲೆಯನ್ನು ಎಲ್ಲರೂ ಮರತೇ ಬಿಟ್ಟಿದ್ದರು. ಹಾಗಾಗಿ ನಿಮಗೆ ಈಗ ಬೀರ್ ತ್ರಿಪಾಠಿಯ ನೆನಪಿರದಿದ್ದರೆ ಏನೂ ಆಶ್ಚರ್ಯ ಇಲ್ಲ. ನಾವೂ ಅವನನ್ನು ಮರತೇ ಬಿಟ್ಟಿದ್ದೆವು, ಅವನು ದೆವ್ವವಾಗಿ ಮತ್ತೆ ಒಕ್ಕರಿಸುವವರೆಗೆ!

ಬೀರ್‌ನ ಕೊಲೆಯಾಗಿ ಸುಮಾರು ಒಂದು- ಒಂದುವರೇ ವರುಷವೇ ಆಗಿ ಹೋಗಿತ್ತು. ನಿರ್ಮಲಕುಮಾರ ಕಾಳು ಹಾಕುತ್ತಿದ್ದ ನೀತಾ, ಅಪ್ಪ-ಅಮ್ಮ ತೋರಿಸಿದ ಅಮೇರಿಕದ ವರನನ್ನು ಮದುವೆಯಾಗಿ ಹೆಣ್ಣು ಹಡದೇ ತಿಂಗಳುಗಳಾಗಿದ್ದವು. ನೀತಾಳ ನಂತರ ಇನ್ನೆರಡು ಪ್ರೇಮಪ್ರಕರಣಗಳಲ್ಲಿ ಭಾಗಿಯಾಗಿದ್ದ ನಿರ್ಮಲಕುಮಾರ ಎರಡೂ ಕಡೆಗಳಲ್ಲಿ ಫೇಲಾಗಿದ್ದ. ಈಗೀಗ ಲವ್-ಫೇಲ್ಯುರು ಆದಾಗ ನಿರ್ಮಲಕುಮಾರನಿಗೆ ಬೇಜಾರಾಗುವುದೇ ನಿಂತುಬಿಟ್ಟಿತ್ತು. ಬಹುಷಃ ಇಷ್ಟೆಲ್ಲಾ ಲವ್-ಫೇಲ್ಯುರುಗಳಾಗಿ ಅವನಿಗೆ ಒಂದು ರೀತಿಯ ನಿರೋಧಕ ಶಕ್ತಿ ಅಂದರೆ ಇಮ್ಯೂನಿಟಿ ಅಗೇನ್‌ಸ್ಟ್ ಲವ್-ಫೇಲ್ಯೂರ್ ಬೆಳೆದು ಬಿಟ್ಟಿತ್ತು ಅನಿಸುತ್ತೆ. ಬೀರನ ನಂತರ ಬಂದಂತಹ ಬಾಸುಗಳು ಬೀರ್‌ನಿಗಿಂತ ಒಳ್ಳೆಯವರೇ ಆಗಿದ್ದರಿಂದ ಪಾಪ ಬೀರ್ ಒಳ್ಳೆಯ ಮನುಷ್ಯನಿದ್ದ ಎಂದು ಅವನನ್ನು ನೆನೆಸಿಕೊಳ್ಳುವ ಅವಕಾಶವೇ ಇರಲಿಲ್ಲ. ಹೀಗಾಗಿ ನಮ್ಮ ನೆನಪಿನ ಪರಿಧಿಯಿಂದ ಬೀರ್ ದೂರವೇ ಆಗಿದ್ದ, ದೆವ್ವವಾಗಿ ಅವನು ಬರೆದ ಈ-ಮೇಲ್ ತಲುಪವವರೆಗೆ!

ಅವತ್ತು ತನ್ನ ಪ್ರಾಜೆಕ್ಟನ ಡೆಡ್‌ಲೈನ್ ಇದ್ದಿದ್ದರಿಂದ ನಿರ್ಮಲಕುಮಾರ ಆಫೀಸಿನಲ್ಲಿ ಜಾಗರಣೆ ಮಾಡ್ತಾ ಇದ್ದ. ಅವನಿಗೆ ಸುಮಾರು ಹನ್ನೆರಡು ಗಂಟೆಗೆ ಒಂದು ಈಮೇಲ್ ಬಂದಿತಂತೆ. ಯಾರಿಂದ ಅಂತ ನೋಡಿದರೆ ಬೀರ್ ತ್ರಿಪಾಠಿ ಅಂತ ಹೆಸರಿತ್ತಂತೆ. ಕಳಿಸಿದವರ ಈಮೇಲ್ ಐಡಿ ನೋಡಿದರೆ ಬಿ-ತ್ರಿಪಾಠಿ ಆಟ್ ಸ್ಮಶಾನ ಡಾಟ್ ಕಾಮ್ ಅಂತಿತ್ತಂತೆ. ಆ ಮೇಲ್ ಬಂದ ನಂತರ ಗಾಬರಿಯಾಗಿ ನಿರ್ಮಲಕುಮಾರ ನನಗೆ ಫೋನು ಮಾಡಿದ. ನಿದ್ದೆಯಿಂದ ಅರ್ಧ ಎಚ್ಚರಗೊಂಡು ಅವನು ಹೇಳಿದ್ದು ಕೇಳಿಸಿಕೊಂಡಿದ್ದೆನಾದರೂ ನನ್ನ ತಲೆಯಲ್ಲಿ ಏನೂ ಹೋಗಿರಲಿಲ್ಲ. ಆದರೆ ರೂಮಿನಲ್ಲಿ ವಿನಾಯಕ ಇನ್ನೂ ಕಂಪ್ಯೂಟರ್ ಮುಂದೆ ಕುಳಿತು ಏನೋ ಮಾಡುತ್ತ ಕುಳಿತದ್ದು ನೋಡಿ ನಿರ್ಮಲಕುಮಾರನಿಗೆ ಅವನ ಜೊತೆ ಮಾತನಾಡಲು ಹೇಳಿ, ವಿನಾಯಕನಿಗೆ ಫೋನು ಕೊಟ್ಟು ಮಲಗಿಬಿಟ್ಟಿದ್ದೆ. ಮರುದಿನ ಬೆಳಿಗ್ಗೆ ತಿಳಿದುಬಂದದ್ದೆಂದರೆ, ಆ ಈ-ಮೇಲಿನಲ್ಲಿ ಬೀರ್ ಅಲ್ಲ ಅವನ ದೆವ್ವ, ಅವನ ಆತ್ಮ, ಅವನ ಪಿಶಾಚಿ, ಒಟ್ಟಿನಲ್ಲಿ ನೀವು ಅದಕ್ಕೆ ಏನು ಕರೆಯಬೇಕೆನ್ನುತ್ತಿರೋ ಅದು- ತನಗೆ ಕೊಲೆಯ ಹಿಂದೆ ನಿರ್ಮಲಕುಮಾರನ ಕೈವಾಡವಿರುವುದು ಗೊತ್ತು, ಆದ್ದರಿಂದ ನಿರ್ಮಲಕುಮಾರನ ಮೇಲೆ ಸೇಡು ತೀರಿಸಿಕೊಳ್ಳುವುದಾಗಿ ಹೇಳಿತ್ತು.

ನಿರ್ಮಲಕುಮಾರನಿಗೆ ನಿಜವಾಗಿ ಬಹಳ ಹೆದರಿಕೆಯಾಗಿತ್ತು. ಯಾರಿಗೆ ಆಗಲ್ಲಾ ಹೇಳಿ? ಭೂತ ಒಂದು ನಿಮ್ಮ ಮೇಲೆ ಸೇಡು ತೀರಿಸಿಕೊಳ್ಳುತ್ತೇನೆ ಎಂದರೆ ನಿಮಗೆ ಭಯವಾಗುವುದಿಲ್ಲವೇ? ದೆವ್ವ-ಭೂತ-ಆತ್ಮ-ಮಾಟ ಇತ್ಯಾದಿ ಸುಟ್ಟುಸುಡುಗಾಡು ವಿಷಯಗಳ ಬಗೆಗಿನ ಮೂರನೆ ದರ್ಜೆ ಕಾದಂಬರಿಗಳನ್ನು ಓದಿದ್ದ ನಾನು ಆ ಜನರಲ್ ನಾಲೇಜಿನ ಆಧಾರದ ಮೇಲೆ ನಿರ್ಮಲಕುಮಾರನಿಗೆ ಕೆಲ ಸಲಹೆಗಳನ್ನು ಕೊಟ್ಟೆ. ಮನೆಯ ಮುಂದೆ ತುಳಸಿಗಿಡವಿದ್ದರೆ, ಭೂತಬಾಧೆ ಇರುವುದಿಲ್ಲ, ಅದಕ್ಕೆ ಮನೆ ಮುಂದೆ ತುಳಸಿ ತಂದು ಹಚ್ಚಬೇಕು. ಜೇಬಲ್ಲಿ ಒಂದು ಚಿಕ್ಕ ಶೀಷೆಯಲ್ಲಿ ನೀರು ಇಟ್ಟುಕೊಂಡಿರಬೇಕು, ನೀರಿದ್ದರೆ ಭೂತ-ಪಿಶಾಚಿಗಳು ಏನೂ ಮಾಡುವುದಿಲ್ಲ. ಅಮವಾಸ್ಯೆ - ಹುಣ್ಣಿಮೆಗಳ ಆಚೆ-ಈಚೆ ಭೂತ ಚೇಷ್ಟೆಗಳು ಹೆಚ್ಚಿರುತ್ತವೆ, ಹಾಗಾಗಿ ಆ ದಿನಗಳಲ್ಲಿ ಅಲ್ಲಿಲ್ಲಿ ತಿರುಗದೇ ಮನೆಯಲ್ಲಿಯೇ ಇದ್ದು ಭಗವನ್ನಾಮ ಸ್ಮರಣೆ ಮಾಡುತ್ತಿರಬೇಕು. ನಿರ್ಮಲಕುಮಾರ ನಾನು ಹೇಳಿದ್ದನ್ನೆಲ್ಲಾ ನಿಷ್ಠೆಯಿಂದ ಪಾಲಿಸಲಾರಂಭಿಸಿದ. ಅದಲ್ಲದೇ ಹಲವು ಇಂಗ್ಲೀಷು ಹಾಗು ಅಸಂಖ್ಯಾತ ತಮಿಳು ದೆವ್ವದ ಸಿನೆಮಾಗಳನ್ನು ನೋಡಿದ್ದ ನಿರ್ಮಲಕುಮಾರ ಅವುಗಳಿಂದಲೂ ದೆವ್ವ-ನಿರೋಧಕ ಕ್ರಮಗಳನ್ನು ಆರಿಸಿ, ಆಚರಿಸತೊಡಗಿದ. ಅವುಗಳೆಲ್ಲವುಗಳ ಪರಿಣಾಮವೆಂಬಂತೆ ಸುಮಾರು ಒಂದು ತಿಂಗಳು ಬೀರ್‌ನ ದೆವ್ವದಿಂದ ಯಾವುದೇ ಕಾಟವಿರಲಿಲ್ಲ.

ಒಂದು ತಿಂಗಳ ನಂತರ ನಿರ್ಮಲನಿಗೆ ಮತ್ತೂ ಒಂದು ಈಮೇಲ್ ಬಂತು. ಈ ಸಲವೂ ಬಿ-ತ್ರಿಪಾಠಿ ಆಟ್ ಸ್ಮಶಾನ ಡಾಟ್ ಕಾಮ್‌ನಿಂದಲೇ. ನೀನು ತೆಗೆದುಕೊಂಡಿರುವ ಮುಂಜಾಗ್ರತೆಯಿಂದ ನಿನ್ನನ್ನು ಮುಟ್ಟಲು ಆಗುತ್ತಿಲ್ಲ. ಆದರೆ ಅದರಿಂದ ನೀನೇನೂ ಖುಷಿಯಿಂದ ಇರುವ ಕಾರಣವಿಲ್ಲ. ಪೊಲೀಸು ಇಲಾಖೆಗೆ ನನ್ನ ಕೊಲೆಯಲ್ಲಿ ನಿನ್ನ ಪಾತ್ರದ ಬಗ್ಗೆ ನಾನು ಒಂದು ಈಮೇಲ್ ಕಳುಹಿಸಿದರೂ ಸಾಕು, ಈಗಿನ ಕಾನೂನಿನಂತೆ ಅವರೇ ಸ್ವಯಂಪ್ರೇರಣೆಯಿಂದ ದೂರು ದಾಖಲಿಸಿಕೊಂಡು ನಿನ್ನನ್ನು ಒಳಗೆ ಹಾಕುತ್ತಾರೆ. ಸೋ ಎಂಜಾಯ್ ಯುವರ್ ಫ್ರೀಡಮ್ ಫಾರ್ ಫಿವ್ ಮೋರ್ ಡೇಯ್ಸ್ ಎಂದು ಬೀರ್‌ನ ದೆವ್ವ ನಿರ್ಮಲನಿಗೆ ಹೆದರಿಸಿತ್ತು.

ಈ ಮೇಲ್‌ನ್ನು ಓದಿದ ನಂತರ ನಾವು ಮೂರೂ ಜನ ಹೆದರಿ ಹಿಪ್ಪಿಯಾಗಿ ಹೋದೆವು. ವಿನಾಯಕನೇ ಮೊದಲು ಚೇತರಿಸಿಕೊಂಡು ನೋಡಿ ಸ್ನೇಹಿತರೇ, ಬೀರ್‌ನ ಹೆಸರಿನಲ್ಲಿ ಜಾಹೀರಾತು ಕೊಡಲು ಐಡಿಯಾ ಕೊಟ್ಟವನು ನಾನೇ ಆದರೂ ಅದರ ಬಗ್ಗೆ ಪೊಲೀಸರಿಗೆ ಯಾವುದೇ ಸುಳಿವಿಲ್ಲ. ಹೀಗಾಗಿ ನನಗೆ ಯಾವುದೇ ಭಯವಿಲ್ಲ. ಎಂದು ವಿನಾಯಕ ತನ್ನ ಕೈತೊಳೆದುಕೊಂಡ. ನಾನೂ ಕೂಡ ಬೀರ್ ಪೊಲೀಸರಿಗೆ ಕಳುಹಿಸುವ ಈಮೇಲಿನಲ್ಲಿ ನಿರ್ಮಲಕುಮಾರನ ಬಗ್ಗೆ ಅಷ್ಟೇ ಬರೆದಿರುತ್ತಾನಾದ್ದರಿಂದ, ನನಗೂ ಯಾವುದೇ ಭಯವಿಲ್ಲ ಎಂದುಕೊಂಡೆ. ಆದರೆ ವಿನಾಯಕನ ಹಾಗೆ ಅದನ್ನು ಬಾಯಿಬಿಟ್ಟು ಹೇಳಿದರೆ ನಿರ್ಮಲಕುಮಾರ ಬೇಜಾರು ಮಾಡಿಕೊಳ್ಳಬಹುದು ಎಂದುಕೊಳ್ತಾ ಇದ್ದೆ. ನನ್ನ ಮನಸ್ಸಿನಲ್ಲಿ ನಡೆಯುತ್ತಿದ್ದನ್ನು ಊಹಿಸಿ ನಿರ್ಮಲಕುಮಾರ ದೋಸ್ತ್, ವಿನಾಯಕನ ರೀತಿ ನೀನೂ ನುಣುಚಿಕೊಂಡು ಹೋಗಬಹುದು ಎಂದುಕೊಂಡಿದ್ದರೆ ಮರೆತು ಬಿಡು. ಆ ಪತ್ರಿಕೆಗೆ ಕೊಟ್ಟ ಜಾಹಿರಾತಿನಲ್ಲಿ ನಿನ್ನದೇ ಕೈಬರಹವಿದೆ. ಪೊಲೀಸರಿಗೆ ನಿನ್ನನ್ನೂ ಸಿಕ್ಕಿಸಿಹಾಕಲು ಅಷ್ಟು ಸಾಕು. ಹೀಗಾಗಿ ಮುಳುಗುವುದು-ತೇಲುವುದು ನಾವಿಬ್ಬರೂ ಕೂಡಿಯೇ ಎಂದು ಒಂದು ಪೇಲವ ನಗೆ ಕೊಟ್ಟ. ಇದೇನು ಕರ್ಮವೋ? ಲಿಂಗಮೆಚ್ಚಿ ಅಹುದು ಅಹುದು ಎನ್ನುವಂತೆ ಜಾಹಿರಾತು ಬರೆದುಕೊಟ್ಟದ್ದಕ್ಕೆ ಪೊಲೀಸ್ ಸ್ಟೇಷನ್ ಮೆಟ್ಟಿಲು ಹತ್ತಬೇಕಾಯಿತಲ್ಲ. ಇದೆಂತಹ ಸಂಭಾವನೆ? ಎಂದು ಮನಸ್ಸಿನಲ್ಲಿಯೇ ನಾನು ಮರುಗಿದೆ.

ನಾವು ಓದಿದ ಕಾದಂಬರಿಗಳಲ್ಲಿ ಬಂದ ವಿವರಗಳಿಂದ, ಸಿನೆಮಾಗಳಲ್ಲಿ ನೋಡಿದ ಮಾಹಿತಿಯ ಆಧಾರದ ಮೇಲೆ ಬೀರನ ದೆವ್ವದ ಜೊತೆ ಗುದ್ದ್ಯಾಡುವುದು ಆರ್‌ಎಂಪಿ ಡಾಕ್ಟರು ಓಪನ್ ಹಾರ್ಟ್ ಸರ್ಜರಿ ಮಾಡಿದಂತೆಯೇ ಸರಿ ಎಂದು ಲೆಕ್ಕ ಹಾಕಿ, ಅದಕ್ಕಾಗಿ ದೆವ್ವ-ಭೂತ-ಮಾಟ-ಮಂತ್ರಗಳಲ್ಲಿ ಎಮ್ಮೆಸ್ಸ್ ಮಾಡಿದ ಪರಿಣಿತರೊಬ್ಬರನ್ನು ಹುಡುಕತೊಡಗಿದೆವು. ಆಗ ನಮಗೆ ಸಿಕ್ಕವನೇ ಕಾಳಾಚಾರಿ. ಮುಂದೆ ಏನಾಯಿತು ಓದಿ...

ಮುಂದಿನ ಭಾಗ : ಸೈಬರ್ ಸೆಕ್ಯುರಿಟಿ ಎಕ್ಸ್‌ಪರ್ಟ್ ಕಾಳಾಚಾರಿ »

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X