ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸೈಬರ್ ಸೆಕ್ಯುರಿಟಿ ಎಕ್ಸ್‌ಪರ್ಟ್ ಕಾಳಾಚಾರಿ

By * ಗುರು ಕುಲಕರ್ಣಿ
|
Google Oneindia Kannada News

Guru Kulkarni
(ಮುಂದುವರಿದಿದೆ...)

ಯಾರೋ ಪರಿಚಿತರ ಮುಖಾಂತರ ಕಾಳಾಚಾರಿಯ ಬಗ್ಗೆ ಕೇಳಿ, ಅವನನ್ನು ನಾವು ಮೊದಲು ಭೇಟಿಯಾದದ್ದು ಕಲಾಸಿಪಾಳ್ಯದ ದರಿದ್ರ ಹೋಟೆಲೊಂದರಲ್ಲಿ. ನಾವು ಹೋದಾಗ ಗೊರಕೆಹೊಡೆಯುತ್ತಿದ್ದ ಕಾಳಾಚಾರಿಯನ್ನು ಎಚ್ಚರಗೊಳಿಸುವುದೇ ನಮಗೆ ದೊಡ್ಡ ಸಮಸ್ಯೆಯಾಗಿತ್ತು. ಗಾಂಜಾ, ಚುಟ್ಟಾ ಮತ್ತು ಕಂಟ್ರಿಸಾರಾಯಿಯ ಸಮಪಾಲು ವಾಸನೆಯ ಆ ರೂಮಿನಲ್ಲಿ ದಿವ್ಯ ಯೋಗನಿದ್ರೆಯಲ್ಲಿದ್ದ ಅವನನ್ನು ಎಚ್ಚರಿಸಲಿಕ್ಕೆ ಅರ್ಧಗಂಟೆಯೇ ಹಿಡಿಯಿತು. ಎದ್ದ ಕಾಳಾಚಾರಿ ಒಮ್ಮೆ ದೊಡ್ಡದಾಗಿ ಮೈಮುರಿದು, ನಿನ್ನಿ ಚಂಜಿಕ ಹರಿಚ್ಚಂದ್ರ ಗಾಟಿನಲ್ಲಿ ನೈಟ್ ಡ್ಯೂಟಿ ಮಾಡ್ತಾ ಇದ್ದೆ, ಅದುಕ್ಕೆ.. ಎಂದು ಕಾಲ್‌ಸೆಂಟರ್ ನೌಕರನ ತರಹ ಡೈಲಾಗ್ ಹೊಡೆದು ಆಕಳಿಸಿದ. ನಂತರ ನಾವು ಮೊದಲೆ ಮಾತನಾಡಿಕೊಂಡಂತೆ ಬೀರ್‌ನ ಕೊಲೆಗೆ ನಮ್ಮ ಕಿತಾಪತಿಯೇ ಕಾರಣ ಎಂಬುದನ್ನು ಮುಚ್ಚಿಟ್ಟು ಉಳಿದ ವಿಷಯವನ್ನು ನಿವೇದಿಸಿಕೊಂಡೆವು - ಬೀರ್‌ನಿಗೆ ನಿರ್ಮಲಕುಮಾರನಿಗೂ ಹುಡುಗಿಯ ವಿಚಾರದಲ್ಲಿ ಮನಸ್ತಾಪವಿತ್ತು, ಅದಕ್ಕಾಗಿಯೇ ಈಗ ದೆವ್ವವಾಗಿ ಬಂದು ಬೆದರಿಕೆಯ ಈಮೇಲ್ ಕಳುಹಿಸುತ್ತಿದ್ದಾನೆ ಹೀಗೆ.

ಕಣ್ಣು ಮುಚ್ಚಿಕೊಂಡು ಕೇಳುತ್ತ ಕುಳಿತಿದ್ದ ಕಾಳಾಚಾರಿ, ಕಣ್ಣು ತೆಗೆದು ಈಮೇಲು ಅಂದುರೆ ಏನ್ ಸಾವ್ಕಾರ? ಎಂದು ಮುಖವನ್ನು ಪ್ರಶ್ನಾರ್ಥಕಚಿನ್ಹವಾಗಿಸಿದ. ನಿರ್ಮಲಕುಮಾರ ಪೂರ್ತಿ ಹತ್ತು ನಿಮಿಷ ತೆಗೆದುಕೊಂಡು ಈಮೇಲು ಅಂದರೇನು ಎನ್ನುವುದನ್ನು ಇಪ್ಪತ್ತು ಮಾರ್ಕಿನ ಪ್ರಶ್ನೆಗೆ ಉತ್ತರಿಸುವಂತೆ ವಿವರಿಸಿದ. ಹಂಗಾರೆ ಈಮೇಲು ಅಂದರೆ ಕಂಪೀಟರಲ್ಲಿ ಬರಾ ಪತ್ರ ಅನ್ನಿ ಎಂದು ನಿರ್ಮಲಕುಮಾರನ ಉತ್ತರವನ್ನು ಮೂರೇ ಮೂರು ಶಬ್ದಗಳಲ್ಲಿ ಹಿಡಿದಿಟ್ಟು ತೋರಿಸಿದ. ನಂತರ ನಾಲ್ಕೈದು ಪ್ರಶ್ನೆ ಕೇಳಿ, ನಮ್ಮಿಂದ ಉತ್ತರ ಪಡೆದುಕೊಂಡ. ಕೊನೆಗೆ ತನ್ನ ವಿಶ್ಲೇಷಣೆಯನ್ನು ತಾರ್ಕಿಕ ಅಂತ್ಯ ಮುಟ್ಟಿಸುವಂತೆ ಹಂಗಂದರ ಇದೊಂದು ಪಿಶಾಚಿ ಕಾಟ ಎಂದು ಹೇಳಿ ದೀರ್ಘ ಉಸಿರುಬಿಟ್ಟ. ಈಗ ನಮ್ಮ ಹತ್ರ ಎರಡ್ ದಾರಿ ಅದಾವು ಇದಕ್ಕೆ ಎರಡು ಪರಿಹಾರಗಳಿವೆ ಎಂದು ನಮ್ಮತ್ತ ನೋಡಿ ಒಂದು ಚಿಕ್ಕ ವಿರಾಮ ತೆಗೆದುಕೊಂಡ. ನಾವು ಕಾಳಾಚಾರಿಯ ಬಾಯಿಯಿಂದ ಯಾವ ಮುತ್ತುಗಳು ಉದುರುತ್ತವೋ ಎಂದು ಕಾತರದಿಂದ ಕಾಯುತ್ತಿದ್ದೆವು. ಮುಂದುವರಿದ ಕಾಳಾಚಾರಿ ಆಸೆ ಪೂರ್‌ತಿಗೊಳಿಸಿಕೊಳ್ಳದೇ ಯಾವನರ ಮನಶ್ಯಾ ಸತ್ತರ, ಅವನ ಆತುಮ ಇದ ಲೋಕದಾಗ ಪಿಶಾಚಿಯಾಗಿ ತಿರುಗಿಕೊಂಡಿರುತೈತಿ. ಒಂದ್ನೇ ದಾರಿ ಅಂದ್ರ, ಆ ಆತುಮದ ಕಡೇ ಆಸೆ ಈಡೇರಿಸಿ ಅದುಕ್ಕೆ ಸದ್ಗತಿ ಕೊಡಿಸಿಬಿಡೋದು. ಎರಡ್ನೆದು, ಆತುಮ ಹಾಳಾಗಿ ಹತ್ತಿಬಿತ್ತಿಗೊಂಡು ಹೋಗ್ಲಿ, ನಮಗ ಕಾಟಾ ಕೊಡದಿದ್ದರ ಸಾಕು ಎಂದು ಅದಕ್ಕ ತಕ್ಕ ಯವಸ್ಥಾ ಮಾಡುವುದು ಎಂದ. ಅವನ ಮಾತು ಕೇಳಿ ನಾವಿಬ್ಬರು ವಿಚಾರಮಾಡಿದೆವು - ಬೀರ್ ಜೀವಂತವಿದ್ದಾಗಲೇ ಅತೃಪ್ತ ಆತ್ಮದಂತಿದ್ದವನು. ಅವನೇನಾದರೂ ಐಶ್ವರ್ಯ ರೈಯನ್ನು ಮದುವೆಯಾಗಬೇಕೆಂದು ಆಶೆ ಇಟ್ಟುಕೊಂಡು ಸತ್ತಿದ್ದರೆ, ನಾವೀಗ ಬಚ್ಚನ್ ಬಚ್ಚಾಗೆ ಹೋಗಿ ಒಂದು ದಿವಸ ಐಶ್ವರ್ಯಳನ್ನು ಕೊಡಪ್ಪಾ, ನಮ್ಮ ಬೀರ್‌ನ ದೆವ್ವದ ಜೊತೆ ಮದುವೆ ಮಾಡಿಸುತ್ತೇವೆ ಎನ್ನಲು ಆಗುತ್ತಾ? ಅದಕ್ಕಾಗಿ ಮೊದಲನೇ ಹಾದಿಯಂತೂ ಸಾಧ್ಯವೇ ಇಲ್ಲ ಎಂದು ಕಾಳಾಚಾರಿಗೆ ಹೇಳಿದೆವು.

ನಮ್ಮ ಮಾತನ್ನು ಕೇಳಿದ ಕಾಳಾಚಾರಿ ಸರಿ ಹಂಗಾರ, ಇವತ್ತ ರಾತ್ರಿ ಹನ್ನೊಂದರ ಸುಮಾರಿಗೆ ಹರಿಚ್ಚಂದ್ರಗಾಟಿಗೆ ನಿಮ್ಮ ಆ ಕಂಪಿಟರಿಯನ್ನ ತಗೊಂಡು ಬರ್ರಿ ಎಂದ. ಅವನ ಮಾತಿಗೆ ನಾವು ಹರಿಶ್ಚಂದ್ರ ಘಾಟಿಗಾ? ನಾವಾ? ತಡಬಡಿಸಿದೆವು. ಅದಕ್ಕೆ ಆತ ಹೌಂದು, ಆ ಪಿಸಾಚಿ ನಿಮ್ಮ ತಂಟೆಗೆ ಬರಬಾರದಂದ್ರ ನೀವು ಬರಾಕಬೇಕು. ಸುಡುಗಾಡೊಳಗ ಬರಾಕ ನಿಮಗ ಅಂಜಿಕೆಯಾದರ, ನೀವು ಅದರ ಗೇಟಿನ್ಯಾಗ ಕಾಯಿರಿ. ನಾನೊಬ್ಬನ ಕಂಪೀಟರನ್ನು ಒಳಾಕೊಯ್ದು ಪೂಜಿ ಮಾಡಿ ತರ್ತೇನಿ ಎಂದ. ನನಗೆ ಒಂದು ಅನುಮಾನ ಕಂಪ್ಯೂಟರ್ ಒಂದು ಯಂತ್ರ. ಯಂತ್ರಗಳಿಗೂ ದೆವ್ವಗಳು ಕಾಟಕೊಡುತ್ತವೆಯಾ? ನನ್ನ ಅನುಮಾನಕ್ಕೆ ಕಾಳಾಚಾರಿ ಯಾಕಿಲ್ಲಾ? ಎಂದು ಹೇಳಿ, ಡಬ್ಬಲ್ ರೋಡಿನಲ್ಲಿ ಒಮ್ಮೆ ಕಲ್ಲು ಹೊತ್ತು ಹೋಗುತ್ತಿದ್ದ ಲಾರಿಗೆ ದೆವ್ವ ಹಿಡಿದು, ನಿಂತಲ್ಲಿ ನಿಂತಿದ್ದಕ್ಕೆ, ಟ್ರಾಫಿಕ ಜಾಮ್ ಆಗಿ, ತಾನು ಹೋಗಿ ಗಾಡಿಗೆ ದೆವ್ವ ಬಿಡಿಸಿದ ಮೇಲೆಯೇ ಟ್ರಾಫಿಕ್ಕು ಕರಗಿದ ಘಟನೆಯನ್ನು ಹೇಳಿ ನನ್ನ ಬಾಯಿಮುಚ್ಚಿಸಿದ. ಮುಂದುವರಿದು ರಾತ್ರಿ ಬರಾಗ ಪೂಜೆಗೆ ಒಂದ ನಾಟಿ ಕೋಳಿ, ಮೂರ ನಿಂಬಿಹಣ್ಣ, ಒಂದ ಸೇರ್ ರಂಗೋಲಿ.. ಎಂದು ಹೇಳುತ್ತಿದ್ದ. ಅವನ ಮಾತನ್ನು ಅರ್ಧಕ್ಕೆ ಕತ್ತರಿಸಿ ನಿರ್ಮಲಕುಮಾರ ಆ ಪೂಜೆ ಸಾಮಾನುಗಳನ್ನು ನೀವೇ ಹೊಂದಿಸಿಕೊಂಡು ಬಂದರೆ ಅದರ ಖರ್ಚು ಕೊಡುತ್ತೇವೆ. ಅಂದಹಾಗೆ ನಿಮ್ಮ ದಕ್ಷಿಣೆ ಎಷ್ಟು? ಎಂದು ಕೇಳಿ ನಿರ್ಮಲಕುಮಾರ, ಅವನು ಕೇಳಿದಷ್ಟು ದುಡ್ಡು ಕೊಟ್ಟ. ನಂತರ ರಾತ್ರಿ ಸಿಗುವುದಾಗಿ ಹೇಳಿ ಕಾಳಾಚಾರಿಯಿಂದ ವಿದಾಯ ತೆಗೆದುಕೊಂಡೆವು.

ರಾತ್ರಿ ನಾವು ಹರಿಶ್ಚಂದ್ರ ಘಾಟಿನ ಗೇಟಿನಲ್ಲಿ ಕಾಯುತ್ತಾ ನಿಂತಿದ್ದೆವು. ನಿರ್ಮಲಕುಮಾರನ ಲ್ಯಾಪ್‌ಟಾಪನ್ನು ತೆಗೆದುಕೊಂಡು ಕಾಳಾಚಾರಿ ಸ್ಮಶಾನದೊಳಗೆ ಹೋಗಿದ್ದ. ನಾನು ವಿಚಾರ ಮಾಡುತ್ತ ಇದ್ದೆ ಕಾಳಾಚಾರಿಯಂತಹವರು ತಮ್ಮ ಮಾಟ-ಮಂತ್ರಗಳ ಮೂಲಕ ಕಂಪ್ಯೂಟರಲ್ಲಿ ಬಂದು ಕಾಡುವ ಭೂತಗಳನ್ನು ಸೆದೆಬಡಿಯ ಬಲ್ಲವರಾದರೆ, ಕಂಪ್ಯೂಟರ್‌ಗಳನ್ನು ಕಾಡುವ ವೈರಸ್ಸುಗಳನ್ನು ಸೆದೆಬಡಿಯಬಲ್ಲರಲ್ಲವೇ? ನಮ್ಮಂತಹ ಕಂಪನಿಗಳು ಮಿಲಿಯನ್ನುಗಟ್ಟಲೇ ಡಾಲರುಗಳನ್ನು ಬಡಿದು ಯಾಂಟಿ-ವೈರಸ್ ಸಾಫ್ಟ್‌ವೇರುಗಳನ್ನು ಕೊಳ್ಳುವುದಕ್ಕಿಂತ ಕಾಳಾಚಾರಿಯಂತವನನ್ನು ನಿಯಮಿಸಿಕೊಳ್ಳುವುದು ಒಳ್ಳೆಯದಲ್ಲವೇ? ಕಾಳಾಚಾರಿ ತನ್ನ ರೆಸ್ಯೂಮ್‌ನಲ್ಲಿ ಸೈಬರ್ ಸೆಕ್ಯುರಿಟಿ ಎಕ್ಸ್‌ಪರ್ಟ್ ಎಂದು ಬರೆದುಕೊಂಡು ನಮ್ಮ ಕಂಪನಿಗೆ ನೌಕರಿಗೆ ಅಪ್ಲೈ ಮಾಡುವುದನ್ನು ಕಲ್ಪಿಸಿಕೊಳ್ಳುತ್ತಿದ್ದೆ. ನಿರ್ಮಲಕುಮಾರ ಸುಮ್ಮನೆ ನಿಂತುಕೊಂಡಿದ್ದನಾದರೂ, ಏನೋ ಅವನ ಮನಸ್ಸಿನಲ್ಲಿ ಕೊರೆಯುತ್ತಿತ್ತು ಅನಿಸುತ್ತೆ. ಅಲ್ಲಾ ಫ್ರೆಂಡ್, ಈ ಕಾಳಾಚಾರಿಯನ್ನು ನಂಬಿ ನಾವು ತಪ್ಪುಮಾಡಿದೆವಾ? ಎಂದು ನನ್ನನ್ನು ಮಾತಿಗೆ ಎಳೆಯುತ್ತಾ ತನ್ನ ಮನಸ್ಸಿನಲ್ಲಿನ ಹುಳವನ್ನು ನನಗೆ ದಾಟಿಸುವ ಕಾರ್ಯದಲ್ಲಿ ತೊಡಗಿದ. ಈ ಕಾಳಾಚಾರಿಯ ಕೈಯಲ್ಲಿ ನಾವು ಲ್ಯಾಪ್‌ಟಾಪ್ ಕೊಟ್ಟು, ಇಲ್ಲಿ ಕಾಯ್ತಾ ನಿಂತಿದ್ದೇವಲ್ಲಾ, ಅವನೇನಾದರೂ ನಮ್ಮ ಕಣ್ಣು ತಪ್ಪಿಸಿ, ಲ್ಯಾಪ್‌ಟಾಪ್ ಎತ್ತಿಕೊಂಡುಹೋದರೆ? ಅದನ್ನು ಕಳ್ಳನಿಗೆ ಮಾರಿದರೂ ಅರವತ್ತು ಸಾವಿರ ಸಿಗುತ್ತೆ. ಎಂದು ಯಶಸ್ವಿಯಾಗಿ ನನ್ನ ತಲೆಗೆ ಹುಳು ದಾಟಿಸಿದ. ನಾನು ಅರ್ಧ ಅವನನ್ನು ಸಮಾಧಾನ ಮಾಡುವುದಕ್ಕೆ, ಇನ್ನರ್ಧ ನನಗೆ ನಾನೇ ಸಮಾಧಾನ ಮಾಡಿಕೊಳ್ಳುವುದಕ್ಕೆ ಅವನ ಮುಖ ನೋಡಿದರೆ, ದುಷ್ಟ ಕಳೆ ಇರಲಿಲ್ಲ ಎಂದೆ. ಅದಕ್ಕೆ ನಿರ್ಮಲಕುಮಾರ ಅಷ್ಟೇ ಅಲ್ಲ, ಅವನಿಗೆ ಲ್ಯಾಪ್‌ಟಾಪಿಗೆ ಎಷ್ಟು ದುಡ್ಡು ಇರುತ್ತದೆ ಎನ್ನುವುದನ್ನು ತಿಳಿದುಕೊಳ್ಳುವಷ್ಟು ಬುದ್ಧಿಯೂ ಇರಲಿಲ್ಲ ಅನಿಸುತ್ತೆ. ಅದೇ ಸಮಾಧಾನದಿಂದ ಕಾಯ್ತಾ ಇರೋಣ ಎಂದ. ಪುಣ್ಯಕ್ಕೆ ಕಾಳಾಚಾರಿ ನಮ್ಮನ್ನು ಬಹಳ ಕಾಯಿಸದೇ ಲ್ಯಾಪ್‌ಟಾಪಿನೊಂದಿಗೆ ವಾಪಸು ಬಂದ.

ಬಂದು ಕಾಳಾಚಾರಿ ಈ ಕಂಪೀಟರಿಗೆ ಇನ್ನ ಮುಂದ ಯಾವುದೇ ಪಿಸಾಚಿ ಕಾಟ ಇರುದಿಲ್ಲ. ಇನ್ನ ನೀವು ಹೆದ್ರಿಕಿ ಬಿಟ್ಟ ಆರಾಮ ಇರ್ರಿ. ಎಂದು ಹೇಳಿದ. ಅವನ ಮಾತು ಕೇಳಿ, ಅದಕ್ಕಿಂತ ಹೆಚ್ಚಾಗಿ ಅವನು ವಾಪಸು ತಂದುಕೊಟ್ಟ ಲ್ಯಾಪ್‌ಟಾಪಿನಿಂದಾಗಿ, ನಮಗೆ ಸಮಾಧಾನವಾಯಿತು. ಆದರೂ ನಿರ್ಮಲಕುಮಾರನಿಗೊಂದು ಅನುಮಾನ- ಈ ಲ್ಯಾಪ್‌ಟಾಪಿಗೆ ಯಾವುದೇ ಭೂತಬಾಧೆ ಆಗದೇ ಇರಬಹುದು. ಆದರೆ ಬೀರ್‌ನ ಆತ್ಮ ಇಂಟರ್‌ನೆಟ್ಟಿಗೆ ಸಂಪರ್ಕ ಹೊಂದಿರುವ ಇನ್ನೊಂದು ಕಂಪ್ಯೂಟರಿಗೆ ಅಮರಿಕೊಂಡು ಈಮೇಲು ಕಳಿಸುವುದಿಲ್ಲ ಎನ್ನುವುದಕ್ಕೆ ಏನು ಗ್ಯಾರಂಟಿ? ನಿರ್ಮಲಕುಮಾರನ ಅನುಮಾನದಿಂದ ಕೊಂಚ ಸಪ್ಪಗಾದ ಕಾಳಾಚಾರಿ ಇಂಟರ್‌ನೆಟ್ಟು ಅಂದ್ರೆ? ಎಂದು ಮುಗ್ಧವಾಗಿ ಪ್ರಶ್ನಿಸಿದ. ಇಂಟರ್‌ನೆಟ್ ಅಂದರೇನು ಎನ್ನುವುದನ್ನು ನಿರ್ಮಲಕುಮಾರ ಮತ್ತೆ ಇಪ್ಪತ್ತು ಮಾರ್ಕಿನ ಪ್ರಶ್ನೆಗೆ ಉತ್ತರಿಸುವಂತೆ ವಿವರವಾಗಿ ತಿಳಿಹೇಳಿದ. ಜಗತ್ತಿನ ಯಾವುದೇ ಮೂಲೆಯಲ್ಲಿರುವ ಕಂಪ್ಯೂಟರ್‌ನಿಂದ ನಮ್ಮ ಕೈಯಲ್ಲಿರುವ ಲ್ಯಾಪ್ಟಾಪ್ ಕಂಪ್ಯೂಟರಿಗೆ, ಯಾವಾಗ ಬೇಕಾದರೂ ಪತ್ರ ಕಳಿಸಬಹುದು ಎಂದು ಚೂರು ಅಪನಂಬಿಕೆಯಿಂದಲೇ ಅರ್ಥಮಾಡಿಕೊಂಡ ಕಾಳಾಚಾರಿ, ಇಂಟರ್‌ನೆಟ್ಟಿನ ವಿಶ್ವರೂಪ ತಿಳಿದು ದಂಗಾಗಿ ಹೋದ. ನಿರಾಸೆಯಿಂದಲೇ ಅಂಗಾರೆ ನನ್ನ ಕೈಲಿ ಏನು ಮಾಡಾಕಾಗಲ್ಲ ಎಂದು ತನ್ನ ಅಸಹಾಯಕತೆ ತೋರಿಸಿದ. ನಮ್ಮ ಒಟ್ಟು ಪ್ರಯತ್ನ ಹೊಳೆಯಲ್ಲಿ ಹುಣಸೆಹಣ್ಣು ತೊಳೆದಂಗಾಯ್ತು ಎಂದು ಅರ್ಥಮಾಡಿಕೊಂಡ ನಾವು ಕಾಲೆಳಿಯುತ್ತಾ ಹೋಗಿ ಬೈಕು ಹತ್ತಿ ಮನೆಯ ದಾರಿ ಹಿಡಿದೆವು.

ವಾಪಸು ಮನೆಗೆ ಬಂದು ನಾವು ಬಾಗಿಲಿನ ಕೀಲಿ ತೆಗೆದು ಒಳಹೋದಾಗ ಹಾಲಿನಲ್ಲಿಯ ಟ್ಯೂಬ್‌ಲೈಟು ಇನ್ನೂ ಉರಿಯುತ್ತಿತ್ತು, ಕಂಪ್ಯೂಟರ್ ಇನ್ನೂ ಚಾಲೂ ಇತ್ತು. ವಿನಾಯಕ ಕಂಪ್ಯೂಟರನಲ್ಲಿ ಏನೋ ಕೆಲಸ ಮಾಡುತ್ತಿದ್ದವ, ಕಂಪ್ಯೂಟರನ್ನು ಹಾಗೇ ಬಿಟ್ಟು ಸಂಡಾಸಿಗೆ ಹೋಗಿದ್ದ. ಇಂಥ ಅಪರಾತ್ರಿಯಲ್ಲಿ ವಿನಾಯಕ ಏನು ಮಹತ್ಕಾರ್ಯ ಮಾಡುತ್ತಿದ್ದ ಎಂದು ಕುತುಹಲದಿಂದ ನೋಡಿದರೆ ಬಿ-ತ್ರಿಪಾಠಿ ಅಟ್ ಸ್ಮಶಾನ ಡಾಟ್ ಕಾಮ್‌ನಿಂದ ನಿರ್ಮಲಕುಮಾರನಿಗೆ ಒಂದು ಅರ್ಧ ಬರೆದ ಈಮೇಲೊಂದು ಕಾಣಬೇಕೇ? ವಿನಾಯಕನಂತೆ ನೂರಎಂಭತ್ತರ ಐಕ್ಯು ನಮಗಿರದಿದ್ದರೂ, ಕಷ್ಟವಿಲ್ಲದೇ ಬೀರ್ ತ್ರಿಪಾಠಿಯ ದೆವ್ವದ ಹೆಸರಿನಿಂದ ಈಮೇಲು ಕಳಿಸಿದ್ದವನು ಅವನೇ ಎಂದು ಅರ್ಥಮಾಡಿಕೊಂಡೆವು. ನಾನು ಪರಪ್ಪನ ಅಗ್ರಹಾರದಲ್ಲಿ ಮುದ್ದೆ ಮುರಿಯಬೇಕಾಗಿಲ್ಲ ಎಂದು ನಿರಾಳನಾದೆರೂ, ನಿರ್ಮಲಕುಮಾರನಿಗೆ ಬಂದ ಸಿಟ್ಟಿನಲ್ಲಿ ಆಗಿದ್ದಾಗಲಿ ಇವತ್ತು ವಿನಾಯಕನ ತಿಥಿ ಮಾಡಿಯೇ ಸಿದ್ಧ ಎಂದ. ಸಂಡಾಸಿನ ಬಾಗಿಲನ್ನು ನಿರ್ಮಲಕುಮಾರ ಧಡಧಡ ಬಡಿಯುತ್ತಿದ್ದನ್ನು ನೋಡಿ ವಿನಾಯಕನಿಗೆ ತನ್ನ ಗುಟ್ಟು-ರಟ್ಟಾದುದು ಮನವರಿಕೆಯಾಗಿರಬಹುದು. ಅವನು ಅಲ್ಲಿಂದಲೇ ಸಾರಿ ಸಾರಿ ಎಂದು ಅಂಗಲಾಚಿನಾದರೂ ಬಾಗಿಲು ತೆಗೆಯಲಿಲ್ಲ. ಬಹಳ ಹೊತ್ತು ನಿರ್ಮಲಕುಮಾರ ಕಾದರೂ ವಿನಾಯಕ ಬಾಗಿಲು ತೆರೆಯಲಿಲ್ಲ. ಕೊನೆಗೆ ಸಿಟ್ಟು ಒಂದು ಹದಕ್ಕೆ ಬಂದ ಮೇಲೆ ನಿರ್ಮಲ ಸಂಡಾಸಿಗೆ ಹೊರಗಿನಿಂದ ಕೀಲಿ ಹಾಕಿ ನಮಗೆ ಕೊಟ್ಟ ಕಾಟಕ್ಕೆ ಅವನು ಇವತ್ತು ರಾತ್ರಿ ಸಂಡಾಸಿನಲ್ಲಿಯೇ ಕುಳಿತು ಪ್ರಾಯಶ್ಚಿತ್ತ ಮಾಡಿಕೊಳ್ಳಲಿ ಎಂದು ಕೀಲಿಕೈಯನ್ನು ತನ್ನ ಉಡದಾರದಲ್ಲಿ ಕಟ್ಟಿಕೊಂಡು ಮಲಗಲು ಹೋದ...

ನಾನು, ನನ್ನ ರೂಂಮೇಟುಗಳು ಮತ್ತು ಭೂತಕಾಲನಾನು, ನನ್ನ ರೂಂಮೇಟುಗಳು ಮತ್ತು ಭೂತಕಾಲ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X