ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಈ ಫೋಟೋಗ್ರಫಿ ಹವ್ಯಾಸ ಯಾಕಾದ್ರೂ ಹಚ್ಚಿಕೊಂಡೆನೋ!

By * ಪಿ.ಎಸ್.ಮೈಯ, ಶಿಕಾಗೊ
|
Google Oneindia Kannada News

PS Maiya, Chicago, USA
ನನ್ನ ಹೆಂಡ್ತಿ ರಾಗವಾಗಿ "ಮುಂದಿನ ಕನ್ನಡ ಕೂಟ ಫಂಕ್ಷನ್ನಿನಲ್ಲಿ ನಾನು ಗ್ರೂಪ್ ಸಾಂಗ್ ಹಾಡೋಕೆ ಸೇರಿಕೊಂಡಿದ್ದೀನಿ, ರೀ" ಅಂದಳು. ಅದನ್ನ ಕೇಳಿದಾಕ್ಷಣ ನನ್ನ ಕೈ ಕಾಲು ಥರ ಥರ ನಡುಗೋಕೆ ಶುರುವಾಯ್ತು! ಇದಕ್ಕೆಲ್ಲ ಆ ನನ್ನ ಕ್ಯಾಮೆರಾನೇ ಕಾರಣ. ಯಾಕಾದ್ರೂ ಫೋಟೋಗ್ರಫಿ ಅನ್ನೋ ಹವ್ಯಾಸ ಶುರು ಮಾಡಿಕೊಂಡೆನೋ ಅಂತ ನನ್ನ ನಾನೇ ಬೈದುಕೊಂಡೆ.

ಇದು ಶುರುವಾಗಿದ್ದು ನನ್ನವಳು, ಸಾರಿ, ನಮ್ಮ ಅಮ್ಮಾವ್ರು ಮೊದಲನೆಯ ಸಾರಿ ಕನ್ನಡ ಕೂಟ ಫಂಕ್ಷನ್ನಿನಲ್ಲಿ ಸ್ಟೇಜ್ ಹತ್ತಿದಾಗಿನಿಂದ. ಏನೋ ಒಂದಿಷ್ಟು ಫೋಟೋ ತೆಗೆದಿದ್ದು ಉಂಟು ನಾನು. ಆ ಫೋಟೋಗಳೆಲ್ಲ ಚೆನ್ನಾಗಿ ಬಂದವು ಅಂತ ಹೊಗಳಿಸಿಕೊಂಡಿದ್ದೂ ಉಂಟು. ಅಲ್ಲಿಂದ ಶುರುವಾಯ್ತು ನೋಡಿ ನನ್ನ ಶನಿ ಕಾಟ! ಪ್ರತಿ ಫಂಕ್ಷನ್ನಿನಲ್ಲೂ ಅವಳು ಸ್ಟೇಜ್ ಹತ್ತಿದ್ದೇ ಹತ್ತಿದ್ದು. ನಾನು ಕ್ಯಾಮೆರಾ ಕ್ಲಿಕ್ಕಿಸಿದ್ದೇ ಕ್ಲಿಕ್ಕಿಸಿದ್ದು. ಅದಾದ ಮೇಲೆ ಬಂದವು ಒಂದೊಂದೇ ಕಂಪ್ಲೇಂಟುಗಳು. ನಮ್ಮ ಫ್ರೆಂಡ್ಸ್ ಫೋಟೋ ಎಲ್ಲ ಅಷ್ಟು ಚೆನ್ನಾಗಿ ಬಿದ್ದಿದೆ. ನಂದು ಯಾಕೆ ಇಷ್ಟು ಅಧ್ವಾನವಾಗಿದೆ. ನೀವು ತೆಗೆದ ಆಂಗಲ್ಲೇ ಸರಿ ಇಲ್ಲ. ಇತ್ಯಾದಿ ಇತ್ಯಾದಿ! ಪ್ರತಿ ಫಂಕ್ಷನ್ ಮುಗಿದ ಮೇಲೂ ಇವಳ ಕೈಲಿ ಪೂಜೆ, ಮಂಗಳಾರತಿ ತಪ್ಪಿದ್ದಲ್ಲ.

ಒಂದು ಸಾರಿ ಅಕಸ್ಮಾತ್ತಾಗಿ ಬಾಯಿ ಬಿಟ್ಟು ಹೇಳೇಬಿಟ್ಟೆ. "ನೀನು ಇದ್ದ ಹಾಗೇ ಬರುತ್ತೆ. ಇನ್ನು ಹೇಗೆ ಬರುತ್ತೆ?" ಅಂತ. ಅವಳ ಕಣ್ಣಲ್ಲಿ ಗಂಗಾ, ಭವಾನಿ ಹರಿದಿದ್ದು ಅದು ಒಣಗೋಕೆ ನಾಲ್ಕು ದಿನ ಬೇಕಾಯ್ತು. ಅದಾದ ಮೇಲೆ ಬುದ್ಧಿ ಕಲಿತುಕೊಂಡ ನನ್ನ ತಲೇಲಿ ಒಂದು ಹೊಸ ಉಪಾಯ ಥಟ್ಟನೆ ಹೊಳೆಯಿತು. "ಅಲ್ಲಿ ಲೈಟಿಂಗ್ ಸರಿ ಇರಲಿಲ್ಲ", "ನನ್ನ ಕ್ಯಾಮೆರಾ ಫ್ಲ್ಯಾಷ್ ವರ್ಕ್ ಆಗಲಿಲ್ಲ", "ನಿನ್ನ ಪಕ್ಕ ಇರೋ ಫ್ರೆಂಡಿಗಿಂತ ನೀನೇ ಚೆನ್ನಾಗಿ ಕಾಣಿಸ್ತಾ ಇದ್ದೀಯಾ" ಇತ್ಯಾದಿ, ಇತ್ಯಾದಿ ಬುರುಡೆ ಬಿಡೋಕೆ ಶುರು ಮಾಡಿದೆ.

ನನ್ನವಳು ನೋಡೋಕೆ ತುಂಬ ಸಭ್ಯರ ತರ ಕಾಣಿಸಿದರೂ ಮನೇಲಿ ನನ್ನ ತುಂಬ ಬಾಸ್ ಮಾಡ್ತಾಳೆ! ಈ ಕ್ಯಾಮೆರಾ ಕಾಟ ಶುರುವಾದ ಮೇಲಂತೂ ನಾನು ಅನ್ನಿಸಿಕೊಂಡಿದ್ದಕ್ಕೆ ಲೆಕ್ಕವೇ ಇಲ್ಲ. ಆದರೆ ಅದರಲ್ಲಿ ಒಂದು ಸ್ವಾರಸ್ಯವಿದೆ. ನನ್ನ ಕೈಲಿ ಕ್ಯಾಮೆರಾ ಹಿಡಿದ ತಕ್ಷಣ ಅವಳು ಬಹಳ ವಿಧೇಯಳಾಗಿ ನಾನು ಹೇಳಿದ್ದನ್ನೆಲ್ಲ ಚಾಚೂ ತಪ್ಪದೆ ಪರಿಪಾಲಿಸುತ್ತಾಳೆ! 'ತಲೆ ಆ ಕಡೆ ಮಾಡು", 'ಈ ಕಡೆ ಮಾಡು", 'ನಿಂತುಕೋ", 'ಕೂತುಕೋ", 'ಸ್ವಲ್ಪ ತಗ್ಗು", 'ಇನ್ನೂ ಜಾಸ್ತಿ ನಗು", 'ಬೇಡ ಕಡಿಮೆ ನಗು"... ಹೀಗೆ ನಾನು ಏನು ಹೇಳಿದ್ರೂ ಅದನ್ನೆಲ್ಲ ಆಜ್ಞಾಧಾರಕಳಾಗಿ ನಡೆಸುತ್ತಾಳೆ. ಒಂದು ಸಾರಿ ಬೇಕೂಂತ ಸಿಟ್ಟಿಗೆ 'ಸ್ವಲ್ಪ ತಗ್ಗು" ಅಂತ ಹೇಳಿ ಅವಳನ್ನ ಫರಂಗಿ ಮಣೆ ತರ ತುಂಬ ಹೊತ್ತು ನಿಲ್ಲಿಸಿ ಕ್ಯಾಮೆರಾ ಫೋಕಸ್ ಮಾಡೊ ತರ ನಟನೆ ಮಾಡ್ತಾ ಇದ್ದೆ! ಅವಳು, ಪಾಪ, ನಿಂತೂ ನಿಂತೂ ಸಾಕಾಗಿ ಅಳು ಮೋರೆ ಮಾಡಿಕೊಂಡು "ಇನ್ನೂ ಎಷ್ಟು ಹೊತ್ತೂ, ರೀ" ಅಂತ ಹೇಳಿದ ಮೇಲೆ ಕ್ಲಿಕ್ಕಿಸಿ ಒಳಗೊಳಗೇ ನಕ್ಕೆ! ನಾನು ಚಿಕ್ಕವನಿದ್ದಾಗ ನಮ್ಮ ಮೇಷ್ಟ್ರು ನನಗೆ ಶಾಲೆಯಲ್ಲಿ ಆಥರ ಶಿಕ್ಷೆ ಕೊಡುತ್ತಿದ್ದರು. ದೊಡ್ಡವನಾದ ಮೇಲೆ ಹೀಗೆ ನಿಂತದ್ದಿಲ್ಲ!

ನನ್ನವಳು ನೋಡೋಕೆ ತುಂಬ ಸಭ್ಯರ ತರ ಕಾಣಿಸಿದರೂ ಮನೇಲಿ ನನ್ನ ತುಂಬ ಬಾಸ್ ಮಾಡ್ತಾಳೆ!
ನಾನು ಕ್ಯಾಮೆರಾ ತಗೊಂಡು ಹೋಗದಿದ್ದಾಗ ಕನ್ನಡ ಕೂಟ ಫಂಕ್ಷನ್ನಿನಲ್ಲಿ ನನ್ನನ್ನ ಮಾತನಾಡಿಸುವವರೇ ಇಲ್ಲ. ಅಷ್ಟೇ ಯಾಕೆ? ನನ್ನ ಗುರುತೇ ಸಿಕ್ಕುವುದಿಲ್ಲ ಕೆಲವರಿಗೆ. ಎಷ್ಟೋ ಸಾರಿ ಬಾಗಿಲ ಹತ್ತಿರ ನಿಂತು "ನಾನು ನಳಿನಿ ಗಂಡ" ಅಂತ ಹೇಳಿದ ಮೇಲೆ ಒಳಗೆ ಹೋಗಲು ಪರ್ಮಿಶನ್ ಸಿಕ್ಕಿದ್ದೂ ಉಂಟು. ಆದರೆ ನನ್ನ ಕೈಯಲ್ಲಿ ಕ್ಯಾಮೆರಾ ಇದ್ದರೆ ಅದರ ಕಥೆಯೇ ಬೇರೆ, ಎಲ್ಲಿಲ್ಲದ ಆದರದ ಸನ್ಮಾನ ನಂಗೆ! ಒಂದು ಸಾರಿ ಮೊದಲನೆಯ ಸಾಲಿನ ಸೀಟನ್ನೆಲ್ಲ "ರಿಸರ್ವ್ಡ್" ಅಂತ ಪಟ್ಟಿ ಹಚ್ಚಿ ಕಾದಿಟ್ಟಿದ್ದರು. ನಾನು ಎಲ್ಲಿ ಕೂತುಕೊಳ್ಳೋದಪ್ಪಾ ಅಂತ ಯೋಚಿಸ್ತಾ ಕ್ಯಾಮೆರಾ ಹಿಡಿದುಕೊಂಡು ನಿಂತಿದ್ದೆ. ಅಧ್ಯಕ್ಷರು ನನ್ನ ಕಂಡ ತಕ್ಷಣ, ಅಲ್ಲ ನನ್ನ ಕ್ಯಾಮೆರಾ ಕಂಡ ತಕ್ಷಣ ನನ್ನ ಕಡೆ ಧಾವಿಸಿ ಬಂದರು. "ಬನ್ನಿ ಸಾರ್, ಇಲ್ಲೇ ಕೂತ್ಕೊಳ್ಳಿ." ಅಂತ ನನ್ನ ಕೈ ಹಿಡಿದು ಸಕಲ ಸನ್ಮಾನಗಳೊಡನೆ ನನ್ನನ್ನ ಮೊದಲನೆಯ ಸಾಲಿನ "ರಿಸರ್ವ್ಡ್"ಸೀಟಿನಲ್ಲಿ ಕೂರಿಸಿದರು. ಹಾಗೂ ಪಕ್ಕದ ಸೀಟಿನಲ್ಲಿ ನನ್ನ ಕ್ಯಾಮೆರಾಗೂ ಜಾಗ ಮಾಡಿ ಕೊಟ್ಟರು!

ಆ ದಿನ ನನ್ನಾಕೆಯ ಗ್ರೂಪ್ ಸಾಂಗು ಇತ್ತು. ನಾನು ನನ್ನ ಸ್ಟಿಲ್ ಕ್ಯಾಮೆರಾ ಮತ್ತು ವಿಡಿಯೊ ಕ್ಯಾಮೆರಾ ರೆಡಿ ಮಾಡಿ ಕೂತೆ. ಪರದೆ ತೆಗೆದ ಕ್ಷಣವೇ ವಿಡಿಯೋ ಕ್ಯಾಮೆರಾದಲ್ಲಿ ಎಲ್ಲರೂ ಕಾಣಿಸುವಂತೆ ಫೋಕಸ್ ಮಾಡಿ ಟ್ರೈಪಾಡ್ ಮೇಲೆ ಇಟ್ಟು, ಸ್ಟಿಲ್ ಕ್ಯಾಮೆರಾದಲ್ಲಿ ಲೆಕ್ಕವಿಲ್ಲದಷ್ಟು ಫೋಟೋ ಹೊಡೆದೆ. ಕಾರ್ಯಕ್ರಮ ಮುಗಿದ ಮೇಲೆ "ಉಸ್ಸಪ್ಪಾ" ಅಂತ ನಿಟ್ಟುಸಿರು ಬಿಟ್ಟೆ. ಪಕ್ಕ ಕುಳಿತಿದ್ದ ಅಧ್ಯಕ್ಷ ಹನುಮಂತಪ್ಪನವರು "ಮುಂದಿನ ಗ್ರೂಪ್ ಸಾಂಗು ನನ್ನ ಹೆಂಡ್ತೀದು. ಅದರದ್ದೂ ಸ್ವಲ್ಪ ವೀಡಿಯೋ ತೆಗೀರಿ ಸಾರ್" ಅಂತ ಗೋಗರೆದರು. ಹೋಗಲಿ ಪಾಪ ಅಂತ 'ಹ್ಞೂ" ಅಂದೆ. ಆ ಗ್ರೂಪ್ ಸಾಂಗು ಶುರುವಾಗುತ್ತಲೇ ವಿಡಿಯೋ ಕ್ಯಾಮೆರಾ ಕೈಯಲ್ಲಿ ಹಿಡಿದು ನಿಧಾನಕ್ಕೆ ಒಬ್ಬೊಬ್ಬರ ಮೇಲೆ ಜೂಮ್ ಮಾಡುತ್ತಾ ಆರಾಮಕ್ಕೆ ವಿಡಿಯೊ ತೆಗೆದೆ. ಯಾಕೆಂದರೆ ಸ್ಟಿಲ್ ಫೋಟೋ ತೆಗೆಯುವ ಟೆನ್ಶನ್ ಇರಲಿಲ್ಲ.

ಮನೆಗೆ ಬಂದ ಮೇಲೆ ನನಗೆ ದೊಡ್ಡ ಮಹಾ ಮಂಗಳಾರತಿ ಸಿಕ್ಕಿತು! "ನಮ್ಮ ಗ್ರೂಪ್ ಸಾಂಗಿನಲ್ಲಿ ನಾವೆಲ್ಲ ಒಳ್ಳೆ ಇರುವೆಗಳ ತರ ಕಾಣ್ತೀವಿ. ಒಬ್ಬರ ಮೇಲೂ ಜೂಮ್ ಮಾಡಲಿಲ್ಲ. ಅದೇ ಹನುಮಂತಪ್ಪನ ಹೆಂಡ್ತೀದು ಎಷ್ಟು ಚೆನ್ನಾಗಿ ಬಂದಿದೆ. ನೋಡಿ. ಯಾವಾಗಲೂ ಹಾಗೆ. ನಿಮ್ಮ ಹೆಂಡತಿಗಿಂತ ಬೇರೆಯವರ ಹೆಂಡತಿಯ ಮೇಲೇ ಜಾಸ್ತಿ ಗಮನ ನಿಮಗೆ!"... ಅಂತ ಸಹಸ್ರ ನಾಮಾರ್ಚನೆ ಮಾಡಿದಳು.

ಮುಂದಿನ ಫಂಕ್ಷನ್ನಿನ ಗ್ರೂಪ್ ಸಾಂಗಿನಲ್ಲಿ ಪರದೆ ತೆಗೆದ ತಕ್ಷಣ ನಾನು ನನ್ನವಳು ಸರಿಯಾಗಿ ಕಾಣುವ ಹಾಗೆ ಫೋಕಸ್ ಮಾಡಿ, ಅವಳ ಮುಖದ ಮೇಲೆ ಜೂಮ್ ಮಾಡಿ ಹಾಡು ಶುರುವಾಗುವುದಕ್ಕೆ ಮುಂಚೆಯೇ ಹನುಮಂತಪ್ಪನ ಹತ್ತಿರ ಹರಟೆ ಹೊಡೆಯೋಕೆ ಆಚೆ ಹೋದೆ. ಹಾಡು ಮುಗಿಯುತ್ತಲೇ ವಾಪಸ್ ಬಂದು ಕ್ಯಾಮೆರಾ ಆಫ್ ಮಾಡಿದೆ. ಈ ಸಾರಿ ಸರಿಯಾಗಿ ನನ್ನವಳಿಗೆ ತೃಪ್ತಿ ಆಗೊ ಹಾಗೆ ವಿಡಿಯೊ ಬಂದಿದೆ ಅನ್ನೋ ನೆಮ್ಮದಿ ನನ್ನಲ್ಲಿತ್ತು. ಮನೆಗೆ ಬಂದು ನೋಡಿದರೆ ಒಂದು ಎಡವಟ್ಟಾಗಿತ್ತು! ನಾನು ಹನುಮಂತಪ್ಪನ ಹತ್ತಿರ ಹರಟೆ ಹೊಡೆಯೋಕೆ ಹೋದಾಗ ಹಾಡುಗಾರರೆಲ್ಲ ತಮ್ಮ ಜಾಗ ಬದಲಾಯಿಸಿಕೊಂಡಿದ್ದರು ಮೈಕ್ ಅಡ್ಜಸ್ಟ್ ಮಾಡೋಕೆ. ನಾನು ಜೂಮ್ ಮಾಡಿದ್ದು ಗುಂಡೂ ರಾವ್ ಹೆಂಡ್ತಿ ಮೇಲೆ ಬಂದಿತ್ತು. ಅದನ್ನ ನೋಡಿದ ನನ್ನಾಕೆ ನನ್ನನ್ನ ಕೊಂದು ಹಾಕದೆ ಉಳಿಸಿದ್ದೇ ಆಶ್ಚರ್ಯ!

ಕನ್ನಡ ಕೂಟ ಫಂಕ್ಷನ್ ಮಾತ್ರವಲ್ಲದೆ ಬೇರೆ ಕಡೆಗಳಲ್ಲೂ ನನಗೆ ಕ್ಯಾಮೆರಾ ಮೂಲಕ ರಾಜ ಮರ್ಯಾದೆ ಸಿಕ್ಕಿದೆ! ಒಂದು ಸಾರಿ ನನ್ನ ಮಗನ ಸ್ಕೂಲ್ ಫಂಕ್ಷನ್ನಿನಲ್ಲಿ ಹೀಗೇ ಕ್ಯಾಮೆರಾ ಹಿಡಿದುಕೊಂಡು ಹೋಗಿದ್ದೆ. ಅದೇನೂ ದೊಡ್ಡ ಫಂಕ್ಷನ್ ಅಲ್ಲ. ಬೇರೆ ಯಾರೂ ಕ್ಯಾಮೆರಾ ತಂದಿರಲಿಲ್ಲ. ನನ್ನನ್ನು ನೋಡಿದ ಪ್ರಿನ್ಸಿಪಾಲರು ನಾನು ನ್ಯೂಸ್ ಪೇಪರ್ ಕಡೆಯಿಂದ ಬಂದವನು ಅಂದುಕೊಂಡು ನನಗೆ ಒಳ್ಳೆ ಸೀಟು ಮಾಡಿಕೊಟ್ಟು, "ವಿಚ್ ನ್ಯೂಸ್ ಪೇಪರ್ ಆರ್ ಯು ವಿದ್?" ಅಂದರು. ನಾನು ಯಾವ ನ್ಯೂಸ್ ಪೇಪರಿನವನೂ ಅಲ್ಲ ಅಂತ ಗೊತ್ತಾದ ಮೇಲೆ ಸಪ್ಪಗೆ ಮುಖ ಮಾಡಿಕೊಂಡರಾದರೂ ನನ್ನನ್ನು ಕುರ್ಚಿ ಬಿಟ್ಟು ಏಳು ಅಂತ ಒತ್ತಾಯ ಮಾಡಲಿಲ್ಲ.

ಹೀಗೆ ನನ್ನ ಆಪ್ತ ಗೆಳೆಯನಾಗಿದ್ದ ಕ್ಯಾಮೆರಾ ಒಂದು ದಿನ ಇದ್ದಕ್ಕಿದ್ದ ಹಾಗೆ ಕೊನೆಯುಸಿರು ಎಳೆಯಿತು. ಅದಕ್ಕೇನು ಕಾಯಿಲೆ ಬಂದಿತ್ತೋ ಗೊತ್ತಿಲ್ಲ. ಸುಸ್ತಾದವರ ಹಾಗೆ, ಜಿಗುಪ್ಸೆ ಬಂದವರ ಹಾಗೆ ಶಟರ್ ಎಂಬ ತನ್ನ ಕಣ್ಣು ಮುಚ್ಚಿತು. ನನಗೆ ತುಂಬ ಬೇಸರವಾಯಿತು. ಇಷ್ಟು ದಿನ ನನ್ನ ಸಂಗಾತಿಯಾಗಿ ನನಗೆ ಎಷ್ಟೆಲ್ಲ ಮರ್ಯಾದೆ ಕೊಡಿಸಿದ್ದ ಕ್ಯಾಮೆರಾ ಹೀಗೆ ಹೇಳದೆ ಕೇಳದೆ ಕೈ ಕೊಟ್ಟಿತಲ್ಲಾ ಅಂತ ಅನ್ನಿಸಿತು. ಇನ್ನು ಯಾವ ಹೊಸ ಕ್ಯಾಮೆರಾವನ್ನೂ ನನ್ನ ಈ ಕ್ಯಾಮೆರಾಗೆ ಸವತಿಯಾಗಿ ತರುವುದಕ್ಕೆ ಮನಸ್ಸಾಗಲಿಲ್ಲ. ನನ್ನ ಮತ್ತು ನನ್ನ ಕ್ಯಾಮೆರಾದ ಸಂಬಂಧ ಅಷ್ಟು ಆಳವಾದದ್ದು, ಪವಿತ್ರವಾದದ್ದು. ಅದನ್ನ ಜೋಪಾನವಾಗಿ ಬೀರುವಿನಲ್ಲಿ ಇಟ್ಟು ಆಗಾಗ ಅದನ್ನ ನೋಡಿ ಮುತ್ತು ಕೊಟ್ಟು ಅದರ ಮೈಯನ್ನು ಪ್ರೀತಿಯಿಂದ ನೇವರಿಸುತ್ತಾ ಇರುತ್ತೀನಿ. ಒಮ್ಮೊಮ್ಮೆ ಅದನ್ನ ತೊಡೆಯ ಮೇಲಿಟ್ಟುಕೊಂಡು ಆ ಕ್ಯಾಮೆರಾದಲ್ಲಿ ತೆಗೆದ ಫೋಟೋಗಳನ್ನು ನೋಡುತ್ತಾ ಸವಿನೆನಪುಗಳಲ್ಲಿ ತೇಲಿಹೋಗುತ್ತೀನಿ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X