ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನಾನು ಮನೆ ರಾಹುಕಾಲದಲ್ಲಿ ಬಿಟ್ಟಿದ್ದೆ, ಛೆ!

By * ಗಿರೀಶ್ ಜಮದಗ್ನಿ, ಸಿಂಗಪುರ
|
Google Oneindia Kannada News

Girish Jamadagni, Singapore
(...ಹಿಂದಿನ ಪುಟದಿಂದ)

ವಾಪಸ್ಸು ಮನೆಗೆ ಹೋದರೆ ನನ್ನವಳ ಶೋಕಾಸ್ ನೋಟೀಸ್‌ಗೆ ಉತ್ತರಿಸಬೇಕು. ನನ್ನ ಗ್ರಹಚಾರ ಎಂದು ಹತ್ತಿ ಕುಳಿತೆ. ಮನಸ್ಸಿನಲ್ಲಿ ನಾನೇ "ಬಿಡ್ತು" ಎಂದು ಮೂರು ಬಾರಿ ಹೇಳಿಕೊಂಡೆ. ಈ ವಿದ್ಯೆಯೆಲ್ಲಾ ಅಜ್ಜಿ ಹೇಳಿಕೊಟ್ಟಿದ್ದು. "ಸಾರ್ ನಾನು ತಾಲ್ಲುಕ್ ಆಫೀಸ್ ಹತ್ರ ಬಿಡಲ್ಲ ಸಾರ್, ಅದರ ಮೊದ್ಲೇ ಇಳ್ಕೊಳ್ಳಿ" ಅಂದ. ಇದು ಮಾಮೂಲಿ ಅಲ್ಲವ. ಆಟೋದವರು ಹೋದ ಕಡೆ ತಾನೆ ನಾವು ಹೋಗ್ಬೇಕು? "ಸರಿ ಮಹರಾಯ, ಮೀಟರ್ ಹಾಕು" ಅಂತ ಹೇಳಿ ಹಿಂದಕ್ಕೆ ಒರಗಿ ಕುಳಿತೆ.

ಎರಡು ನಿಮಿಷವಾಗಿರಲಿಲ್ಲ. "ಸಾರ್, ಮೀಟರ್ ಓಡ್ತಾ ಇದ್ಯಾ, ಸ್ವಲ್ಪ ನೋಡಿ ಹೇಳಿ" ಅಂದ. ಮೀಟರ್ ಕಡೆ ನೋಡಿದೆ. ಗಾಬರಿಯಾಯ್ತು. ನಿಜವಾಗ್ಲೂ ಜೋರಾಗೇ "ಓಡ್ತಾ" ಇತ್ತು. "ಏನಪ್ಪ ಸಿಕ್ಕಾಪಟ್ಟೆ ಓಡ್ತಾ ಇದ್ಯಲ್ಲ?" ಅಂದೆ. "ಆಟೋನೂ ಜೋರಾಗೇ ಓಡ್ತಾ ಇದ್ಯಲ್ಲಾ ಸಾರ್" ಅಂತ ಹಲ್ಲು ಕಿರಿದ.

ಆಟೋ ನಿಲ್ಲಿಸಿದ್ದಲ್ಲಿಂದಲೇ ಏದುಸಿರು ಬಿಡುತ್ತಾ ತಾಲ್ಲೂಕ್ ಕಚೇರಿಯತ್ತ ನಡೆದೆ. ಬಾಗಿಲಲ್ಲೇ ಪ್ಯೂನ್ ಪುಟ್ಸಾಮಿ ಸಿಕ್ಕಿ ಹಲ್ಲು ಕಿರಿದ. ನನ್ನಿಂದ ಆದಷ್ಟು ದುಡ್ಡು ಕಸಿಯಬೇಕೆಂದು, ಬಹಳ ದಿನಗಳಿಂದ ಪ್ರಯತ್ನಿಸುತ್ತಲೇ ಇದ್ದ. "ಸಾಯೇಬ್ರು ಲೇಟ್ ಇವತ್ತು. ಅವರ ಸಂಬಂಧಿ ಮದುವೆ. ಕುಂತ್ಕಳಿ ಬತ್ತಾರೆ" ಅಂದ. ಬೆಂಚಿನ ಮೇಲೆ ಕುಳಿತೆ. ಸಮಯ ನೋಡಿದೆ. ಹತ್ತು ಗಂಟೆ ಆಗುತ್ತಿತ್ತು. ಆಗಲೇ ನನಗೆ ನೆನಪಿಗೆ ಬಂದಿದ್ದು. ಇವತ್ತು ಸೋಮವಾರ. ರಾಹುಕಾಲ 7.30ರಿಂದ 9.00. ಅಂದರೆ, ನಾನು ಮನೆ ರಾಹುಕಾಲದಲ್ಲಿ ಬಿಟ್ಟಿದ್ದೆ. ಛೆ! ಏನಾಗಿದೆ ಇವತ್ತು. ಒಂದರ ಮೇಲೆ ಒಂದು ಅಪಶಕುನಗಳು. ನನ್ನ ಮೇಲೆಯೇ ನನಗೆ ಸಿಟ್ಟು ಬಂದಿತ್ತು.

ಇನ್ನೇನು ಮಾಡುವುದು. ಬಂದಾಗಿತ್ತಲ್ಲ. ಕಾಲಹರಣ ಮಾಡುತ್ತಾ ಕುಳಿತೆ. ಅತ್ತಿತ್ತ ನೋಡಿದೆ. ನನ್ನತ್ತಲೇ ವಯಸ್ಸಾದ ವ್ಯಕ್ತಿಯೊಬ್ಬ ಬರುತ್ತಿದ್ದ. ಹತ್ತಿರ ಬಂದಾಗ ಗೊತ್ತಾಯ್ತು ಯಾರು ಅಂತ. ಹಿಂದೊಮ್ಮೆ ಸಿಕ್ಕಿ ಒಂದು ಗಂಟೆ ತಲೆ ಕೊರೆದಿದ್ದ ಮನುಷ್ಯ. ಇನ್ನು ಅವನ ಭೈರವಿ ರಾಗ ಕೇಳಲು ಸಂಯಮವೇ ಇಲ್ಲ. ಹತ್ತಿರ ಬಂದು ಕೇಳೇ ಬಿಟ್ಟ. "ನೀವು ಸೀತಾರಾಂ ಅಲ್ಲವೇ". "ಅಲ್ಲ ನಾನು ಸೇತುರಾಂ" ಗಡಸು ದನಿಯಲ್ಲೇ ಉತ್ತರಿಸಿದೆ. ಅರುಳೊ ಮರುಳೊ ಆದರೂ, ನನ್ನ ಹೆಸರನ್ನು ಹೆಚ್ಚು ಕಮ್ಮಿ ಸರಿಯಾಗೇ ನೆನಪಿನಲ್ಲಿಟ್ಟುಕೊಂಡಿದ್ದ.

"ಎರಡೂ ಹೆಸರೂ ಸಾಕೇತಪುರವಾಸಿ ಶ್ರಿರಾಮಚಂದ್ರನದೇ ಅಲ್ಲವೇ, ಪರವಾಗಿಲ್ಲ. ಏನು ಬಂದಿದ್ದು?" ನನಗೆ ಸಾಕು ಸಾಕಾಯ್ತು.

"ತಾಲ್ಲೂಕ್ ಕಚೇರಿಯಲ್ಲಿ ಹಾಕೋ ತಿಥಿ ಊಟಕ್ಕೆ ಬಂದಿದ್ದೆ" ಎಂದು ಹೇಳೋಣವೆಂದುಕೊಂಡೆ. ಆ ವ್ಯಕ್ತಿ ಅದೂ ನಿಜವೆಂದುಕೊಂಡುಬಿಟ್ಟರೆ ಅಂತ "ಅದೇ ಹಿಂದಿನ ಸಾರಿ ಹೇಳಿದ್ನಲ್ಲ, ಅದೇ ಕೆಲಸಕ್ಕೆ" ಬಂದೆ ಅಂದೆ.

"ಏನು? ಇನ್ನೂ ಆಗಿಲ್ಲವೇ ನಿಮ್ಮ ಆ ಕೆಲಸ?" ಗಾಯದ ಮೇಲೆ ಉಪ್ಪು ಖಾರ ಚೆನ್ನಾಗಿ ಹಚ್ಚುತ್ತಿದ್ದ ಆ ಆಸಾಮಿ. ನನಗೆ ಹುಚ್ಚು ಹಿಡಿಯುವುದು ಒಂದು ಬಾಕಿ. ಬರುತ್ತಿರುವ ಕೋಪ ತಡೆದು "ಇಲ್ಲ" ಅಂದಷ್ಟೆ ಹೇಳಿ ಬೇರೆತ್ತಲೋ ನೋಡಿದೆ. ಇನ್ನು ಇವತ್ತು ನನ್ನ ಕೆಲಸವಾಗುವ ಹಾಗೆ ಕಾಣಿಸೋದಿಲ್ಲ ಅಂತ ಜಾಗ ಬಿಟ್ಟು ಎದ್ದೆ. "ಅಯ್ಯೊ, ಯಾಕೆ ಹೊರಟು ಬಿಟ್ಟಿರಿ. ಬನ್ನಿ ಕೂತ್ಕೊಳ್ಳಿ. ಬಹಳ ದಿನವಾಯ್ತು, ನಿಮ್ಮೊಂದಿಗೆ ಮಾತನಾಡಿ" ಕೈ ಹಿಡಿದು ಮತ್ತೆ ಕೂರಿಸಿದ ಆ ವ್ಯಕ್ತಿ. ನನಗೆ ಬಲವಂತದ ಮಾಘ ಸ್ನಾನ. "ಸರಿ ಹೇಳಿ" ಅಂದೆ.

"ಮತ್ತೆ, ನೀವು ಯಾವ ಕೆಲಸದ ಮೇಲೆ ಇಲ್ಲಿ ಬಂದಿರೋದು". ಸರಿ, ಶುರುವಾಯ್ತು. ಇನ್ನು ಮೊದಲಿನಿಂದ ಪೂರ್ತಿ ಹೇಳಬೇಕು. ಅಷ್ಟರಲ್ಲಿ, ಪುಟ್ಸಾಮಿ ಬಂದು ಮತ್ತೆ ಹಲ್ಲು ಕಿರಿದ "ಸಾಯೆಬ್ರು, ಬೇಗ್ನೇ ಬಂದವ್ರೆ. ಸೀಟ್ನಾಗೆ ಕುಂತವ್ರೆ" ಅಂದ. ಸದ್ಯ ಎಂದು ಹೊರಡಲು ಎದ್ದೆ. ಬಿಡಬೇಕಲ್ಲ ನನ್ನ ಪಕ್ಕದಲ್ಲಿದ್ದ ಸೀನಿಯರ್ ಸಿಟಿಜನ್. "ಕೂತ್ಕೊಳ್ಳಿ, ಕೂತ್ಕೊಳ್ಳಿ, ಮಾತಾಡೋಣ" ಅನ್ನೋದೆ. ಅಲ್ಲ ನಾ ಏನು ಮಾತನಾಡುವ ಗೊಂಬೇನಾ? ಸಿಕ್ಕಿದವರ ಹತ್ತಿರವೆಲ್ಲ, ಅವರ ಸಮಯ ಕಳೆಯಲು ಹರಟೆ ಹೊಡೆಯುವುದಕ್ಕೆ. "ಅದೆ, ನಿಮ್ಮ ಕೇಸ್ ಹೇಳ್ತಿದ್ದರಲ್ಲ, ಹೇಳಿ" ಅಂದ. "ಮರ್ಡರ್ ಕೇಸ್" ಅನ್ನೋಣವೆಂದುಕೊಂಡೆ. ಮುದುಕ ಹಾಗೆ ಹಾರ್ಟ್ ಅಟಾಕ್ ಆಗಿ ಗೊಟಕ್ ಅಂದ್ರೆ ಅಂತ ಹೆದರಿ "ದೊಡ್ಡ ಕೇಸ್ ಏನಿಲ್ಲ, ಸಣ್ಣ ಕೆಲಸ" ಅಂದೆ.

ಮತ್ತೆ ಬಂದ ಪುಟ್ಸಾಮಿ "ಇನ್ನು ಅರ್ಧ ಗಂಟೆ ಯಾರ್‍ನು ಬಿಡಬೇಡ ಅಂತ ಸಾಯೇಬ್ರು ಏಳವ್ರೆ" ಅಂದ. ಸರಿ ಹೋಯ್ತು. ಇನ್ನು ಬೇರೆ ವಿಧಿ ಇರಲಿಲ್ಲ. ನನ್ನ ಕೇಸು, ಕೆಲಸ ಎಲ್ಲ ಮುದುಕನಿಗೆ ಒದರಿದೆ. ಎಲ್ಲ ಕೇಳಿ "ಅಯ್ಯೋ ಇಷ್ಟೇನಾ? ಇದಕ್ಕೆ ನೀವು ಆರು ತಿಂಗಳಿಂದ ಅಲೆಯುತ್ತಿದ್ದೀರಾ?" ಅಂತ ಬೊಚ್ಚು ಬಾಯಗಲಿಸಿ ನಕ್ಕ. ಅದರಲ್ಲಿ ಅಷ್ಟೊಂದು ನಗಲು ಜೋಕ್ ಏನಿದೆ ಎಂದು ಅರ್ಥವಾಗಲಿಲ್ಲ. ಹಾಳಾಗಿ ಹೋಗಲಿ ಅವನಿಗ್ಯಾಕೆ ಜಾಸ್ತಿ ವಿವರಣೆ ಅಂತ ಸುಮ್ಮನಾದೆ.

ನಕ್ಕಿದ್ದೆಲ್ಲ ಮುಗಿದ ಮೇಲೆ "ಎಲ್ಲಿ ನಿಮ್ಮ ಕೇಸ್‌ನ ಕಾಗದ ಎಲ್ಲ ಕೊಡಿ" ಅಂದ. ಇನ್ನೇನಪ್ಪ ಗ್ರಹಚಾರ? ಎಲ್ಲ ಕಾಗದ ನನ್ನಿಂದ ಕಸಿದು ಓಡಿ ಹೋಗಿ ಬಿಟ್ಟರೆ? ಹುಚ್ಚರಂತೆ ಕಾಣುವುದಿಲ್ಲ. ಆದರೂ ಕಲಿಯುಗದಲ್ಲಿ ಯಾರನ್ನೂ ನಂಬಲಾಗುವುದಿಲ್ಲ. "ಇಲ್ಲ ಬೇಡ ಬಿಡಿ" ಅಂದೆ. ಉಹೂಂ..ಮುದುಕ ಕೇಳಬೇಕಲ್ಲ! ನನ್ನ ಬ್ಯಾಗ್‌ನಿಂದ ಪೇಪರ್ ಎಲ್ಲಾ ತೆಗೆದುಕೊಂಡು ಹೊರಟೇಬಿಟ್ಟ. ಅಯ್ಯೊ.. ಇದೊಳ್ಳೆ ಕಥೆ ಆಯ್ತಲ್ಲಾ ಎಂದು ಅವರ ಹಿಂದೆ ಓಡಿದೆ. ಪುಟ್ಸಾಮಿಯೇ ನನ್ನ ತಡೆದು ಹೇಳಿದ. "ಎದರ್ಕೊಬ್ಯಾಡಿ. ಓಗ್ಲಿ ಬಿಡಿ. ಎಲ್ಲಿ ಓಗ್ತಾರೆ. ಆಯಪ್ಪನೆ ಬಂದು ನಿಮಗೆ ಪೇಪರ್ ವಾಪಸ್ಸು ಕೊಡ್ತಾರೆ ಅತ್ತು ನಿಮಿಷದಲ್ಲಿ". ನಾನು ಅಳೋದೊಂದು ಬಾಕಿ.

ಇನ್ನೇನು ಮಾಡೊದು? ಅಲ್ಲೇ ಕಾದೆ. ಹತ್ತಲ್ಲ. ಇಪ್ಪತ್ತು ನಿಮಿಷವಾಯ್ತು. ಮುದುಕನ ಪತ್ತೇಯೇ ಇಲ್ಲ. ಬಂದ ಕೆಲಸ ಆಗೋದು ಇರಲಿ, ನನ್ನ ಎಲ್ಲಾ ಕಾಗದಗಳನ್ನೂ ಕಳಕೊಂಡಿದ್ದೆ. ಇನ್ನು ನನಗೆ ಮನೆಯಲ್ಲಿ ಏನು ಕಾದಿದೆಯೋ ಎಂದು ಹೊರಡುತ್ತಿದ್ದಾಗ, ಬಂದೇ ಬಿಟ್ಟ ಮುದುಕಪ್ಪ. "ತಗೊಳ್ಳಿ, ನಿಮ್ಮ ಎಲ್ಲ ಕಾಗದಗಳು..ಹಿ.ಹಿ.ಹಿ..ಹಾಗೆ ಇದೆ. ಯಾವ್ದೂ ಕಳೆದಿಲ್ಲ". ಸದ್ಯ ಸಿಕ್ಕಿತಲ್ಲ, ಒಳ್ಳೆ ಹುಚ್ಚನ ಸಹವಾಸವಾಯ್ತು, ಎಂದು ಬ್ಯಾಗಿನಲ್ಲಿ ತುರುಕಿದೆ. ಸಾಹೇಬರ ರೂಮಿಗೆ ಹೊರಡುತ್ತಿದ್ದವನನ್ನು ಮತ್ತೆ ಹಿಡಿದು ನಿಲ್ಲಿಸಿದ ಮುದುಕ. "ಕಾಗದ ನೋಡದೆ ಬ್ಯಾಗ್‌ಗೆ ಸೇರಿಸಿಬಿಟ್ರಲ್ಲ. ಒಮ್ಮೆ ತೆಗೆದು ನೋಡಿ". ಅದ್ಯಾಕಪ್ಪ, ಅದರಲ್ಲೂ ಏನಾದ್ರು ಕರಾಮತ್ತು ಮಾಡಿದಾನ? ಹಾಳಾಗಿ ಹೋಗ್ಲಿ ಅಂತ ಪೇಪರ್ ತೆಗೆದೆ. ಆಶ್ಚರ್ಯ! ಎಲ್ಲ ಕಾಗದದ ಮೇಲೂ ಸಾಹೇಬ್ರ ಸಹಿ! ಅಂದರೆ ಆರು ತಿಂಗಳಿಂದ ಅಲೆಯುತ್ತಿದ್ದ ಕೆಲಸ ಆಗಿ ಹೋಗಿತ್ತು.

ಮುದುಕ ಬೊಚ್ಚು ಬಾಯಗಲಿಸಿ ನಗುತ್ತಿದ್ದ. "ನಿಮಗೆ ಗೊತ್ತಿಲ್ಲ, ನೀವು ಯಾರನ್ನು ಸಾಹೇಬ್ರು ಅಂತೀರೋ, ಅವರು ನನ್ನ ಎರಡನೇ ಅಳಿಯ. ನಿಮ್ಮ ಕೇಸ್‌ನಲ್ಲಿ, ಸುಮಾರು ತೊಂದರೆಗಳಿತ್ತು. ನೀವೇ ಹೋಗಿ ಮಾಡೋದಾದ್ರೆ, ತುಂಬಾ ಸತಾಯಿಸ್ತಾರೆ. ಅದಕ್ಕೆ, ನಾನೇ ಅಳಿಯನಿಗೆ ಕೊಟ್ಟು ಕೆಲಸ ಮಾಡಿಸಿದ್ದೀನಿ. ನಿಮ್ಮ ಕೇಸ್‌ನಲ್ಲಿರೊ ಕೆಲವು ತೊಂದರೆಗಳನ್ನು ಸರಿ ಮಾಡ್ಸಿದ್ದೀನಿ. ನಿಮ್ಮ ಕೆಲಸ ಆಗಿದೆ" ಎನ್ನುತ್ತಾ, ಮತ್ತೆ ಕಿರುನಗೆ ನಕ್ಕು ಹೊರಟೆ ಬಿಟ್ಟರು. ನನಗಾಗಿದ್ದ ಸಂತೋಷ, ಆಶ್ಚರ್ಯದಲ್ಲಿ, ಅವರನ್ನು ಬಾಯಿತುಂಬಾ ಅಭಿನಂದಿಸುವುದನ್ನೂ ಮರೆತಿದ್ದೆ. ಹಿಂದಿನ ಪೀಳಿಗೆಯವರೇ ಹಾಗೇ ಏನೋ. ಗೊತ್ತು, ಪರಿಚಯ ಇಲ್ಲದೇ ಇದ್ರೂ, ಇನ್ನೊಬ್ಬರಿಗೆ ಸಹಾಯ ಮಾಡಲು ಸದಾ ಸಿದ್ಧ. ಪಾಪ, ಅವರ ಬಗ್ಗೆ ಅಪಾರ್ಥ ಮಾಡಿಕೊಂಡಿದ್ದಕ್ಕೆ ನನಗೇ ನಾಚಿಕೆಯಾಯ್ತು.

ಬೆಳಗ್ಗಿನಿಂದ ಅಷ್ಟೊಂದು ಅಪಶಕುನಗಳು ನನ್ನನ್ನು ಕಾಡಿದ್ದರೂ ನನ್ನ ಬಹುದಿನಗಳ ಕೆಲಸ ಸುಗಮವಾಗಿ ಆಗಿತ್ತು! ಬೇಗ ಮನೆಗೆ ಹೋಗಿ ನನ್ನವಳ ಮುಂದೆ ಈ ನನ್ನ (!) ಸಾಧನೆಯನ್ನು ಕೊಚ್ಚಿಕೊಳ್ಳಬೇಕೆಂದು ಆಟೋ ಹತ್ತಿದೆ. ಬಾಗಿಲು ತೆಗೆದ ಅವಳ ಗಡಿಗೆ ಮುಖ ನನ್ನನ್ನು ನೋಡಿದಾಕ್ಷಣ ಇನ್ನೂ ಊದಿ ಕೆಂಪು ಕುಂಬಳಕಾಯಾಯ್ತು. ನನ್ನ ಕೆಲಸವಾಗಿದ್ದನ್ನು ಬಡಬಡನೆ ಹೇಳಿದೆ. ಯಾಕೋ ಖುಶಿಯಾಗಲಿಲ್ಲ ಅವಳಿಗೆ. ಸಿಟ್ಟು ಇನ್ನೂ ಜೋರಾಗುತ್ತಿರುವಂತಿತ್ತು. ಅವಳ ಹಿಂದೆ ಅದುವರೆಗೂ ಮರೆಯಾಗಿ ನಿಂತಿದ್ದ ನನ್ನ ಕುಮಾರ ಕಂಠೀರವ ಮುಂದೆ ಬಂದ. ನೋಡಿದರೆ, ಅವನ ಎಡಗೈಗೆ ಪ್ಲಾಸ್ಟರ್!

"ಏನಾಯ್ತೋ? ಎಲ್ಲಿ ಬಿದ್ದು ಬಂದೆ" ಅಂದೆ. "ಅವನು ಎಲ್ಲೂ ಬೀಳಲಿಲ್ಲ. ಇದೆಲ್ಲಾ ನಿಮ್ಮ ಅಪಶಕುನದ ಪರಮಾವಧಿ" ಎಂದಳು ಅರ್ಧಾಂಗಿ. ಯೋಚಿಸಿದೆ. ಸಮಸ್ಯೆಯ ಅರ್ಧ ಭಾಗವೂ ಅರ್ಥವಾಗಲಿಲ್ಲ. ಪ್ರಶ್ನಾರ್ಥಕ ಚಿಹ್ನೆಯನ್ನು ಮುಖದ ಮೇಲಿಟ್ಟುಕೊಂಡು ಅವಳತ್ತ ನೋಡಿದೆ.

"ನಿಮ್ಮ ಶಕುನ ಶಾಸ್ತ್ರದ ಪ್ರಕಾರ, ಬೆಳಗ್ಗೆ ಬಲದಾ ಮಗ್ಗಲಿನಿಂದ ಏಳಲು ಹೋಗಿ, ಮಗನ ಕೈ ತುಳಿದ್ರಲ್ಲಾ, ಅದರ ಫಲಿತಾಂಶ ಇದು. ಎಡ ಮಗ್ಗಲಲ್ಲೇ ಎದ್ದು ಹೋಗಿದ್ದರೆ ಏನಾಗ್ತಿತ್ತು ನಿಮ್ಗೆ?" ಮುಂದಿನ ಅರ್ಧ ಗಂಟೆ ಏನಾಯ್ತು ಎಂದು ಹೇಳುವ ಅವಶ್ಯಕತೆ ಇಲ್ಲ ಅಲ್ಲವಾ? ಅದರ ಕಲ್ಪನೆ ನಿಮಗೆ ಬಿಟ್ಟದ್ದು. ಒಟ್ಟಿನಲ್ಲಿ ಶಕುನವೇ ಸರಿ ಇಲ್ಲ ಸಾರ್ ಇವತ್ತು...!

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X