ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ತಮ್ಮಗಳಿರಾ ಕೆಮ್ಮು ಬಂದ್ರೆ ಏನು ಕುಡೀತಿರಾ?

By * ಗುರು ಕುಲಕರ್ಣಿ
|
Google Oneindia Kannada News

What do you drink when you have cough?
ಕೆಮ್ಮಿಗೆ ವಿರುದ್ಧ ಪದ ಯಾವುದು? ನನಗೂ ಬಹಳ ದಿನಗಳವರೆಗೆ ಗೊತ್ತಿರಲಿಲ್ಲ. ಆದರೆ ಡಾಕ್ಟರ್ ಮಲ್ಯರೆಂಬ ದ್ರೋಣಾಚಾರ್ಯರ ಮಾನಸ ಶಿಷ್ಯರಾಗಿರುವ ನನ್ನಿಬ್ಬರು ರೂಂಮೇಟುಗಳು ಸತತ ಪ್ರಯತ್ನದಿಂದ ಕೆಮ್ಮಿಗೆ ವಿರುದ್ಧ ಪದ ರಮ್ಮು ಎಂದು ನನಗೆ ಮನವರಿಕೆ ಮಾಡಿಕೊಟ್ಟಿದ್ದಾರೆ. ಬೆಂಗಳೂರಿನ ವಾತಾವರಣದ ಕಾರಣವೋ ಅಥವಾ ನನ್ನ ಪ್ರಕೃತಿಯೇ ಸ್ವಲ್ಪ ಸೂಕ್ಷ್ಮವೋ, ಒಟ್ಟಿನಲ್ಲಿ ನನಗೆ ಆಗಾಗ ನೆಗಡಿ-ಕೆಮ್ಮು ಬಂದು ತೊಂದರೆ ಕೊಡುತ್ತಿತ್ತು. ಆದರೆ ನನ್ನಿಬ್ಬರು ರೂಂಮೇಟುಗಳಿಗೆ ಈ ನೆಗಡಿ-ಕೆಮ್ಮಿನ ಕಾಟ ಅಷ್ಟಿರಲಿಲ್ಲ. ಅದಕ್ಕೆ ಅವರು ನಂಬಿದ್ದ ಕಾರಣ, ಅವರ ವಾರಾಂತ್ಯದ ತೀರ್ಥಸೇವನೆ. ತೀರ್ಥ, ವಿಶೇಷವಾಗಿ ರಮ್ಮು, ಕೆಮ್ಮಿಗೆ ರಾಮಬಾಣವೆಂಬುದು ಅವರಿಬ್ಬರ ವಾದ.

ಒಂದು ಸಲ ನನಗೆ ಕೆಮ್ಮು ಬಂದಾಗ ಒತ್ತಾಯ ಮಾಡಿಸಿ ನಾಲ್ಕು ಚಮಚ ತೀರ್ಥ ಕುಡಿಸಿದರು, ಮುಂದೆ ನಾಲ್ಕೇ ದಿನಗಳಲ್ಲಿ ನನ್ನ ಕೆಮ್ಮು ಕಣ್ಮರೆಯಾಯಿತು. ನಮ್ಮೂರ ಕಡೆಗೆ ನೆಗಡಿ-ಕೆಮ್ಮಿನ ಬಗ್ಗೆ ಒಂದು ಮಾತಿದೆ. ಈ ನೆಗಡಿ-ಕೆಮ್ಮು ಔಷಧ ತೆಗೆದುಕೊಂಡರೆ ಒಂದೇ ವಾರದಲ್ಲಿ ಆರಾಮವಾಗುತ್ತದೆ, ಇಲ್ಲದಿದ್ದರೆ ಅದಕ್ಕೆ ಏಳು ದಿವಸ ಬೇಕು ಅಂತ! ಹಾಗೆಯೇ ನನ್ನ ಕೆಮ್ಮು ಕೂಡ ತನ್ನಿಂದ ತಾನೇ ನಾಲ್ಕೇ ದಿನಗಳಲ್ಲಿ ಆರಾಮವಾಗುತ್ತಿತ್ತೋ ಏನೋ, ಆದರೆ ನಾಲ್ಕು ಚಮಚ ತೀರ್ಥ ಕುಡಿದದ್ದರಿಂದ, ತೀರ್ಥಕ್ಕೆ ಕೆಮ್ಮನ್ನು ಓಡಿಸಿದ ಕ್ರೆಡಿಟ್ ಬಂದು ಬಿಟ್ಟಿತು. ನಾನು ಕೂಡ ಕೆಮ್ಮಿಗೆ ರಮ್ಮೇ ಮದ್ದು ಎಂದು ನಂಬತೊಡಗಿದೆ.

ನನ್ನ ರೂಂಮೇಟುಗಳಿಬ್ಬರು ಒಂದು ಪ್ರತಿಜ್ಞೆ ಮಾಡಿದ್ದರು. ಬ್ಯಾಚಲರು ದಿನಗಳು ಮುಗಿಯುವ ಮೊದಲು ಬೆಂಗಳೂರಿನ ಎಲ್ಲಾ ಬಾರು-ಬೀರಂಗಡಿಗಳಲ್ಲಿ ಕನಿಷ್ಠ ಒಮ್ಮೆಯಾದರು ತೀರ್ಥಂಕರರಾಗುವುದು. ಆ ದಿನಗಳಲ್ಲಿ ಇನ್ನೂ ರಾಜಕಾರಣಿಗಳಿಗೆ ಬೆಂಗಳೂರನ್ನು ಸಿಂಗಾಪುರವನ್ನಾಗಿಸುವ ತೆವಲು ಹೊಕ್ಕಿರಲಿಲ್ಲವಾಗಿ, ಫೂಡ್‌ವರ್‍ಡು, ಫುಡ್‌ಮಾರ್ಟು ಇತ್ಯಾದಿ ಕಿರಾಣಿ ಅಂಗಡಿಗಳಲ್ಲಿ ಎಣ್ಣೆ ದೊರೆಯುವ ವ್ಯವಸ್ಥೆಯಾಗಿರಲಿಲ್ಲ. ಆದುದರಿಂದ ನನ್ನ ರೂಂಮೇಟುಗಳ ಪ್ರತಿಜ್ಞೆ ಅಷ್ಟೇನು ಕಷ್ಟಕರ ಅನ್ನಿಸಿರಲಿಲ್ಲ, ಇರಲಿ. ಆ ಪ್ರತಿಜ್ಞಾ ಪೂರ್ತಿಗಾಗಿ ನಾವು ಪ್ರತಿವಾರ ಒಂದೊಂದು ಹೊಸ ಜಾಗಕ್ಕೆ ತೀರ್ಥಂಕರರಾಗಲು ಹೋಗುತ್ತಿದ್ದೆವು. ಅಂದ ಹಾಗೆ ತೀರ್ಥಂಕರ ಅನ್ನುವುದು ಕುಡುಕರ ಜಗತ್ತಿನ ಪಾರಿಭಾಷಿಕ ಪದ. ಕರದಲ್ಲಿ ತೀರ್ಥ ಹಿಡಿದವನು ಯಾವನೋ ಅವನೇ ತೀರ್ಥಂಕರ, nasty-ಸತ್ಪುರುಷ ಸಮಾಸ.

ಒಮ್ಮೆ ತೀರ್ಥಯಾತ್ರೆಗೆ ನಾವು ಒಂದು ಸಣ್ಣ ಬಾರಿಗೆ ಹೋಗಿದ್ದೆವು. ಆ ಬಾರಿನಲ್ಲಿ ಪ್ರೈವಸಿ, ಡೀಸೆನ್ಸಿ ಇತ್ಯಾದಿಗಳಿಗೆ ಒಂದು ನಯಾಪೈಸೆಯ ಬೆಲೆ ಇರಲಿಲ್ಲ. ನಾಲ್ಕು ಜನರ ಟೇಬಲ್ಲಿನಲ್ಲಿ ನಾವು ಮೂರೇ ಜನ ಕೂತಿರುವುದನ್ನು ನೋಡಿ, ಒಬ್ಬ ಮಧ್ಯವಯಸ್ಕ ಸದ್‌ಗೃಹಸ್ಥರು ನಮ್ಮ ಟೇಬಲ್ಲಿಗೆ ಬಂದು ಕುಳಿತುಕೊಂಡರು. ಎಂದಿನಂತೆ ನನ್ನ ರೂಂಮೇಟುಗಳು ಗೋಷ್ಠಿಯಲ್ಲಿ ತೊಡಗಿದ್ದರು. ಸಾಮಾನ್ಯವಾಗಿ ತೀರ್ಥ ಸೇವಿಸದ ನಾನು, ಆಗ ನನಗೆ ಕೆಮ್ಮು ಇದ್ದರಿಂದ ನಾನು ಕೂಡ ಮಧುಪಾತ್ರೆಯನ್ನು ಹಿಡಿದಿದ್ದೆ. ಬಂದ ಆಗಂತುಕ ಸದ್‌ಗೃಹಸ್ಥರು, ಸುಮ್ಮನೇ ತೀರ್ಥ ಸೇವಿಸದೇ, ನಮ್ಮ ಬಗ್ಗೆ ವಿಚಾರಣೆ ಶುರು ಮಾಡಿದರು. ಯಾವೂರು, ಇಲ್ಲೇನು ಮಾಡಿಕೊಂಡಿದ್ದೀರಿ ಇತ್ಯಾದಿ. ಆ ದಿನಗಳಲ್ಲಿ ಸಾಫ್ಟ್‌ವೇರು ಇಂಜನೀಯರುಗಳಾಗಿ ಕೆಲಸ ಮಾಡುತ್ತಿದ್ದೇವೆ ಎಂದರೆ ಅನಗತ್ಯ ಕುತೂಹಲಕ್ಕೆ ಕಾರಣವಾಗುತ್ತೇವೆ ಎನ್ನಿಸಿ, ನಾವಿನ್ನೂ ವಿದ್ಯಾರ್ಥಿಗಳು ಎಂದು ಹೇಳುವುದನ್ನು ರೂಢಿ ಮಾಡಿಕೊಂಡಿದ್ದೆವು. ನಮ್ಮ ಮುಖದಲ್ಲಿನ್ನೂ ಅದೇ ಆಗ ಮೂಡಿದ ಚಿಗುರು ಮೀಸೆ ಇರುತ್ತಿದ್ದರಿಂದ ಜನ ನಮ್ಮ ಮಾತನ್ನು ನಂಬುತ್ತಿದ್ದರು. ಅಷ್ಟಲ್ಲದೇ ವಿದ್ಯಾರ್ಥಿಗಳು ಎಂಬ ಕಾರಣಕ್ಕೆ ನಮಗೆ ಒಂದೊಂದು ಸಲ ರಿಯಾಯತಿ ಕೂಡ ಸಿಗುತ್ತಿತ್ತು. ಆದ್ದರಿಂದ ನಮ್ಮ ಟೇಬಲ್ಲಿಗೆ ಬಂದು ಕುಳಿತಿರುವ ಸದ್‌ಗೃಹಸ್ಥರಿಗೂ ಹಾಗೆಯೇ ನಾವು ವಿದ್ಯಾರ್ಥಿಗಳು ಎಂದು ಹೇಳಿಕೊಂಡೆವು.

ನಮ್ಮ ಮಾತು ಕೇಳಿ ಅವರಿಗೆ ಪಿತ್ತ ನೆತ್ತಿಗೇರಿತು. "ಅಲ್ಲರಯ್ಯಾ, ನಿಮ್ಮ ಅಪ್ಪ-ಅಮ್ಮಂದಿರು ನಿಮ್ಮನ್ನು ಓದಲಿ ಅಂತ ಬೆಂಗಳೂರಿಗೆ ಕಳುಹಿಸಿದರೆ, ನೀವು ಇಲ್ಲಿಗೆ ಬಂದು ಎಣ್ಣೆ ಹೊಡಿತಿದೀರಲ್ಲಾ?" ಎಂದು ನಮ್ಮನ್ನು ತರಾಟೆಗೆ ತೆಗೆದುಕೊಂಡರು. "ಅವರಿಬ್ಬರೂ ಇನ್ನೂ ಹಸುಗೂಸುಗಳ ತರಹ ಇದ್ದಾರೆ, ನೀನೇ ಅವರಿಬ್ಬರಿಗೆ ಕೂಡಿಯುವುದನ್ನು ಕಲಿಸಿದೀಯಾ ಅನಿಸುತ್ತೆ. ಅವರ ಅಪ್ಪಾ-ಅಮ್ಮನ ಮರುಗು ನಿನ್ನನ್ನು ಬಿಡಲ್ಲ.." ಎಂದು ನನ್ನನೇ ದಬಾಯಿಸತೊಡಗಿದರು. ನನ್ನಿಬ್ಬರೂ ರೂಂಮೇಟುಗಳು ಅದಾಗಲೇ ಟೈಟ್ ಆಗಿದ್ದರು. ನಾನು ಅದೇ ಆಗ ನನ್ನ ಕೆಮ್ಮಿನೌಷಧವನ್ನು ಗಂಟಲಲ್ಲಿ ಸುರಿದುಕೊಂಡಿದ್ದೆ. ಅವರ ಮಾತು ಕೇಳಿ ನನ್ನ ಔಷಧವಷ್ಟೇ ಅಲ್ಲ, ಹೊಟ್ಟೆ ಸೇರಿದ್ದ ಹುರಿಗಾಳುಗಳು ವಾಪಸ್ಸು ಬಂದಾವೆಂದು ನಾನು ಬಾತ್ರೂಮಿಗೆ ಓಡಿದೆ.

ಟೈಟಾಗಿದ್ದರೂ ನನ್ನ ರೂಂಮೇಟು ವಿನಾಯಕನ ತಲೆ ಇನ್ನೂ ಕೆಲಸ ಮಾಡುವುದನ್ನು ನಿಲ್ಲಿಸಿರಲಿಲ್ಲ. ಅವನು ಆ ಆಗಂತುಕರ ವಿರುದ್ಧವೇ ವಾದ ಹೂಡಿದ. "ನಾವು ವಿದ್ಯಾರ್ಥಿಗಳಿಗೆ ಯಾರು ರೋಲ್ ಮಾಡಲ್ಲುಗಳಿದ್ದಾರೆ ಹೇಳಿ? ನಮ್ಮ ಆಟಗಾರರು ಹೆಂಡದ ದೊರೆಗಳಿಗೆ ತಮ್ಮನ್ನು ತಾವು ಮಾರಿಕೊಂಡಿದ್ದಾರೆ, ನಮ್ಮ ನಾಯಕರುಗಳು ಕಾಸಿನಾಸೆಗೆ ಹೆಂಡದ ದೊರೆಗಳನ್ನೇ ರಾಜ್ಯಸಭೆಗೆ ಆರಿಸಿ ಕಳುಹಿಸಿದ್ದಾರೆ. ಅವರಿವರ ಮಾತು ಬಿಡಿ, ನೀವೇನು ಮಾಡ್ತಾ ಇದೀರಿ? ಮನೆಯಲ್ಲಿದ್ದು ಮಗನಿಗೆ ಹೋಂವರ್ಕಿನಲ್ಲಿ ಸಹಾಯ ಮಾಡುವುದನ್ನು ಬಿಟ್ಟು ಇಲ್ಲಿ ಕೂತು ಹೆಂಡಾ ಹೀರತಾ ಇದೀರ" ಎಂದ ವಿನಾಯಕನ ಮಾತಿಗೆ ಸದ್‌ಗೃಹಸ್ಥರು ಅಂಡು ಸುಟ್ಟ ಬೆಕ್ಕಿನಂತೆ ಎದ್ದು ಹೋಗಿದ್ದರು.

ಮುಂದೆ ಓದಿ : ವಿದೇಶಿ ಬ್ರ್ಯಾಂಡಿನ ತೀರ್ಥ, ಸ್ನೇಹಿತರ ಸ್ವಾರ್ಥ »

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X