ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವಿದೇಶಿ ಬ್ರ್ಯಾಂಡಿನ ತೀರ್ಥ, ಸ್ನೇಹಿತರ ಸ್ವಾರ್ಥ

By * ಗುರು ಕುಲಕರ್ಣಿ
|
Google Oneindia Kannada News

Me, my room mates and hot drinks
ನಮ್ಮ ಇನ್ನೊಂದು ತೀರ್ಥಯಾತ್ರೆಯ ಪ್ರಸಂಗ ಇನ್ನೂ ಸ್ವಾರಸ್ಯಕರವಾಗಿತ್ತು. ಹನುಮಂತನಗರದ ಸುತ್ತಮುತ್ತ ನಮ್ಮೂರಿನ ಬಹಳಷ್ಟು ಜನರಿರುವುದರಿಂದ, ಅದರ ಸುತ್ತ ಮುತ್ತಲಿನ ಬಾರುಗಳಿಗೆ ಹೋಗುವುದು ಇಷ್ಟವಿರಲಿಲ್ಲ. ಉಳಿದಿಬ್ಬರಿಗೂ ತಮ್ಮ ಪ್ರತಿಜ್ಞೆಯನ್ನು ಪೂರ್ತಿಗೊಳಿಸಲು ಹನುಮಂತನಗರದ ಬಾರುಗಳಲ್ಲಿಯೂ ಕುಡಿಯುವುದು ಅನಿವಾರ್ಯವಾಗಿತ್ತು. ನನ್ನನ್ನು ಒತ್ತಾಯಮಾಡಿ ಹನುಮಂತನಗರದ ಬಾರೊಂದಕ್ಕೆ ಕರೆದುಕೊಂಡು ಹೋದರು. ಕಾಕತಾಳೀಯವಾಗಿ ನನಗೆ ಕೆಮ್ಮು ಬಂದಿದ್ದರಿಂದ ನಾನು ಕೂಡ ನಾಲ್ಕು ಚಮಚ ಅಗ್ನಿದ್ರವವನ್ನು ಹಾಕಿಕೊಂಡು ಮಧುಪಾತ್ರೆಯನ್ನು ಹಿಡಿದಿದ್ದೆ. ಕಣ್ಣು ಮುಚ್ಚಿ ಇನ್ನೇನು ಗಂಟಲಿಗೆ ಅಗ್ನಿದ್ರವವನ್ನು ಸುರಿದುಕೊಳ್ಳಬೇಕು, ಅಷ್ಟರಲ್ಲಿ ಹಿಂದಿನ ಟೇಬಲ್ಲಿನಲ್ಲಿ ಕುಳಿತಿದ್ದ ವ್ಯಕ್ತಿಯೊಂದು ತಿರುಗಿ ನನ್ನ ಕಿವಿಯ ಹತ್ತಿರವೇ ಬಂದು "ಸಾರ್, ಕಡ್ಡಿಪೆಟ್ಟಿಗೆ ಇದೆಯಾ?" ಎಂದು ಕೇಳಿತು. ತುಟಿಯ ಹತ್ತಿರ ಬಂದಿದ್ದ ಮಧುಪಾತ್ರೆಯನ್ನು ಅಲ್ಲೆ ನಿಲ್ಲಿಸಿ, ತಿರುಗಿ ನೋಡಿದರೆ ಅದು ಪೂರ್ಣ ಅಂಕಲ್ ಫೇಸ್‌ಕಟ್ಟು! ಯಾವುದು ಆಗಬಾರದು ಅಂದುಕೊಂಡಿದ್ದೆನೋ ಅದೇ ಆಗಿತ್ತು.

ಈ ಪೂರ್ಣ ಅಂಕಲ್ಲರ ಪೂರ್ಣ ಹೆಸರು ಪೂರ್ಣಪ್ರಜ್ಞಾಚಾರ್ ಯಜ್ಞೇಶಾಚಾರ್ ನರಸಾಪುರ್ ಅಂತ. ಊರಿನಲ್ಲಿ ನಮ್ಮ ಓಣಿಯಲ್ಲಿಯೇ ಇರುತ್ತಿದ್ದರು. ಯಾವುದೋ ಬ್ಯಾಂಕಿನಲ್ಲಿ ಕೆಲಸ ಮಾಡುವ ಅವರು ಬಹಳ ಧಾರ್ಮಿಕ ಪ್ರವೃತ್ತಿಯ ಮನುಷ್ಯ. ಎಂದಾದರೊಮ್ಮೆ ಕೆಮ್ಮು ಬಂದಾಗ ಮಧು ಪಾತ್ರೆಯನ್ನು ಹಿಡಿಯುವ ನಾನು ಅವರ ಕೈಗೆ ಸಿಕ್ಕಿ ಬಿದ್ದುದಕ್ಕಾಗಿ, ನನ್ನ ದೈವವನ್ನು ಹಳಿದುಕೊಂಡೆ. ಇನ್ನೇನು ಈ ಸಲ ಊರಿಗೆ ಹೋದಾಗ ನಮ್ಮಪ್ಪನಿಗೆ ನಿಮ್ಮ ಮಗ ಕೆಟ್ಟು ಕೆರ ಹಿಡಿದಿದ್ದಾನೆ ಎಂದು ವರದಿ ಒಪ್ಪಿಸುತ್ತಾರೆ ಅಂದುಕೊಂಡೆ. ಮುಖದಲ್ಲಿ ಒಂದು ಪೇಲವ ನಗುವನ್ನು ತಂದುಕೊಂಡು "ಇಲ್ಲಾ ಅಂಕಲ್" ಎಂದೆ. ಆವಾಗ ನಾನು ಗಮನಿಸಿದ್ದೇನೆಂದರೆ ಅಂತಹ ಧಾರ್ಮಿಕ ಪ್ರವೃತ್ತಿಯ ಪೂರ್ಣಪ್ರಜ್ಞ ಅಂಕಲ್ಲು ಈಗ ಫುಲ್ ಟೈಟ್ ಆಗಿ, ತಮ್ಮ ಪ್ರಜ್ಞೆಯನ್ನೇ ಕಳೆದುಕೊಂಡು ಬಿಟ್ಟಿದ್ದರು. "ನಿಮ್ಮನ್ನೆಲ್ಲೋ ನೋಡಿದೀನಲ್ಲಾ?" ಎಂದು ಅವರು ಒಂದು ಕ್ಷಣ ತಡೆದಾಗ ನನ್ನ ಹೃದಯ ಬಾಯಿಗೇ ಬಂದಿತ್ತು. ಅವರೇ ಮುಂದುವರಿಸಿ "ನಮ್ಮ ಬ್ಯಾಂಕಿಗೆ ಬರತಾ ಇರತೀರೇನು?" ಎಂದು ನನ್ನನ್ನು ಪ್ರಶ್ನಿಸಿದರು. ಹೌದು ಎಂದು ತಲೆ ಅಲ್ಲಾಡಿಸಿ, ಈ ಕಡೆ ತಿರುಗಿ, ಒಂದೇ ಏಟಿಗೆ ಅಗ್ನಿದ್ರವವನ್ನು ಗಂಟಲಿಗೆ ಸುರಿದುಕೊಂಡು ನಿಟ್ಟುಸಿರು ಬಿಟ್ಟೆ!

ಈ ಎರಡು ಘಟನೆಗಳಾದ ಬಳಿಕ ನಾನು ಬಾರು-ಬೀರಂಗಡಿಗಳಲ್ಲಿ ನನ್ನ ಕೆಮ್ಮೌಷಧಿಯನ್ನು ತೆಗೆದುಕೊಳ್ಳುವುದು, ಈಚಲಗಿಡದ ಕೆಳಗೆ ಕುಳಿತು ಹಾಲು ಕುಡಿದಂತೆ ಎಂದು ನಿರ್ಧರಿಸಿದೆ. ನನ್ನಿಬ್ಬರೂ ರೂಂಮೇಟುಗಳು ತಮ್ಮ ಪ್ರತಿಜ್ಞೆಗೆ ಬದ್ಧರಾಗಿದ್ದರು. ಆದ್ದರಿಂದ ಅವರ ಜೊತೆಗೆ ತೀರ್ಥಯಾತ್ರೆ ಮಾಡ್ತಾ ಇದ್ದೆನಾದರೂ, ನಾನು ತೀರ್ಥ ತೆಗೆದುಕೊಳ್ತಾ ಇರಲಿಲ್ಲ. ಆದ್ದರಿಂದ ಕೆಮ್ಮು ಬಂದರೆ, ಔಷಧವನ್ನು ಮನೆಗೆ ತರಿಸಿ ಕುಡಿಯುವುದು ಶುರುಮಾಡಿದೆ. ನನ್ನ ಕೆಮ್ಮು ಕಡಿಮೆಯಾಗಿದೆ ಎಂದು ನಾನು ಹೇಳಿದ ದಿನ ಸಂಜೆ ಇಬ್ಬರು ಉಳಿದ ಔಷಧವನ್ನು ಸರಿಸಮನಾಗಿ ಹಂಚಿಕೊಂಡು, ನನ್ನ ಕೆಮ್ಮು ಕಡಿಮೆಯಾದ ಖುಶಿಗಾಗಿ ಎಂದು ಚೀಯರ್‍ಸ್ ಹೇಳಿ, ಗುಟುಕರಿಸುತ್ತಿದ್ದರು. ಆಗಾಗ ನನ್ನನ್ನು ಕೆಮ್ಮು ಬಂದಿದೆಯಾ? ಛೇ, ಬಹಳ ದಿನವಾಯ್ತಲ್ಲಾ ನಿನಗೆ ಕೆಮ್ಮು ಬಂದು? ಎಂದು ವಿಚಾರಿಸಿ ಕೊಳ್ಳುತ್ತಿದ್ದರು. ನನಗೇನಾದರು ಕೆಮ್ಮು ಬಂದಿದೆ ಎಂದು ಗೊತ್ತಾದರೆ, ಒಂದು ಸುತ್ತು ತಪಾಂಗುಚಿ ಕುಣಿದು, ರೂಂಮೇಟುಗಳಲ್ಲಿ ಒಬ್ಬ ತಾವೇ ತಾವಾಗಿ ಖುಷಿಯಿಂದ ಅಂಗಡಿಗೆ ಹೋಗಿ ಔಷಧಿಯನ್ನು ತಂದು, ಅದರ ಖರ್ಚನ್ನು ನಮ್ಮ ತಿಂಗಳ ಲೆಕ್ಕದ ಪುಸ್ತಕದಲ್ಲಿ ನನ್ನ ಹೆಸರಿಗೆ ಹಚ್ಚುತ್ತಿದ್ದರು.

ನನ್ನ ಇಬ್ಬರು ರೂಂಮೇಟುಗಳ ಸಹವಾಸದಿಂದ ತೀರ್ಥಗಳಲ್ಲಿ ಬ್ರ್ಯಾಂಡಿ, ವೈನು, ರಮ್ಮು, ವೋಡ್ಕಾ ಇತ್ಯಾದಿ ಹಲವು ಬಗೆಗಳಿವೆ, ಎಂದೇನೋ ತಿಳಿದುಕೊಂಡಿದ್ದೆ. ಆದರೆ ಅವರು ತಂದು ಕೊಟ್ಟ ಔಷಧಿಯನ್ನು ನಾನು ಕಣ್ಣುಮುಚ್ಚಿ ನೇರವಾಗಿ ಗಂಟಲಕ್ಕೆ ಸುರಿದು ಕೊಳ್ಳುತ್ತಿದ್ದರಿಂದ ಅವರು ಏನು ತಂದು ಕೊಟ್ಟಿದ್ದಾರೆ ಎಂದು ನಾನು ವಿಚಾರ ಮಾಡುತ್ತಿರಲಿಲ್ಲ. ನನ್ನ ಈ ದೊಡ್ಡತನವನ್ನು ನನ್ನ ರೂಂಮೇಟುಗಳು ದುರುಪಯೋಗಿಸಿಕೊಳ್ಳತೊಡಗಿದರು. ನನಗೆ ಕೆಮ್ಮು ಬಂದಾಗಲೆಲ್ಲಾ ತಮಗೆ ಬೇಕಾದ ವಿಧದ, ಬೇಕಾದ ಬ್ರ್ಯಾಂಡಿನ ತೀರ್ಥವನ್ನು ತಂದು ಅದನ್ನು ನನ್ನ ಲೆಕ್ಕಕ್ಕೆ ಹಚ್ಚತೊಡಗಿದರು.

ಒಮ್ಮೆಯಂತೂ ಯಾವುದೋ ವಿದೇಶಿ ಬ್ರ್ಯಾಂಡಿನ ತೀರ್ಥವನ್ನು ತಂದು ಕೊಟ್ಟು, ನನ್ನ ಲೆಕ್ಕಕ್ಕೆ ಹಚ್ಚಿದ್ದರು. ದಿನಾ ನಾಲ್ಕು ಚಮಚದಂತೆ ಅದರ ಬಾಟಲಿ ಖಾಲಿಯಾಗುವವರೆಗೆ ಕುಡಿದರೂ, ನನ್ನ ಕೆಮ್ಮು ಒಂದಿಂಚೂ ಕಮ್ಮಿಯಾಗಿರಲಿಲ್ಲ. ಮತ್ತೊಂದು ಬಾಟಲಿ ಅದೇ ಬ್ರ್ಯಾಂಡಿನ ತೀರ್ಥ ತಂದು ಕೊಟ್ಟು ಅದರ ಲೆಕ್ಕವನ್ನು ಹಚ್ಚುವಾಗ, ನಾನು ಅದರ ರೇಟನ್ನು ನೋಡಿದೆ, ನೋಡಿ ಹೌಹಾರಿದೆ. ನಾನು ಡಾಕ್ಟರಿಗೆ ತೋರಿಸಿ, ಅವರ ಫೀಸನ್ನು ಕೊಟ್ಟು, ಅವರು ಬರೆದು ಕೊಟ್ಟ ಔಷಧವನ್ನು ಕೊಂಡುತಂದರೂ ಅಷ್ಟು ಖರ್ಚಾಗುತ್ತಿರಲಿಲ್ಲ. ಆದುದರಿಂದ ನಾನು ಪ್ರತಿಭಟಿಸಿದೆ "ನೋಡಿ ತಮ್ಮಗಳಾ, ನಿಮ್ಮ ಈ ಡಾಕ್ಟರ್ ಮಲ್ಯರ ಔಷಧದಲ್ಲಿ ಯಾವ ದಮ್ಮೂ ಇಲ್ಲ, ಅದರಿಂದ ನನ್ನ ಕೆಮ್ಮೂ ಕಡಿಮೆಯಾಗುತ್ತಿಲ್ಲ. ಅದಕ್ಕೆ ನಾನು ಈ ಸಲದಿಂದ ಕೆಮ್ಮು ಬಂದರೆ ಡಾಕ್ಟರ ಹತ್ತಿರನೇ ಹೋಗಬೇಕು ಅಂತ ನಿಶ್ಚಯಮಾಡೇನಿ".

ನನ್ನ ಮಾತು ಕೇಳಿ ಇಬ್ಬರ ಮುಖಗಳೂ ಕಪ್ಪಿಟ್ಟವು. ಎಲ್ಲಿ ತಿಂಗಳಿಗೊಮ್ಮೆಯಾದರೂ ಸಿಗುತ್ತಿದ್ದ ಬಿಟ್ಟಿ ತೀರ್ಥಕ್ಕೆ ಸಂಚಕಾರ ಬಂದೀತೋ ಎಂದು ಆತಂಕಕ್ಕೊಳಗಾದರು. ನಿರ್ಮಲ್ ಕುಮಾರ "ಫ್ರೆಂಡ್, ನಮ್ಮಿಂದ ಈ ಸಲ ತಪ್ಪಾಗಿದೆ. ನಿನಗೆ ತೀರ್ಥ ತಂದು ಕೊಟ್ಟ ದಿನವೇ ನಾವಿಬ್ಬರು ಅದರ ರುಚಿ ನೋಡಿದ್ದೆವು. ರುಚಿ ಹತ್ತಿದ್ದರಿಂದ ಅಂದೇ ಪೂರ್ತಿಯಾಗಿ ಕುಡಿದು ಮುಗಿಸಿ ಅದರಲ್ಲಿ ನೀರು ತುಂಬಿಸಿ ಇಟ್ಟಿದ್ದೆವು.. ಅದಕ್ಕೆ ಇಷ್ಟು ದಿನವಾದರೂ ನಿನ್ನ ಕೆಮ್ಮು ಕಡಿಮೆಯಾಗಿಲ್ಲ. ಬಯ್ಯುವುದಿದ್ದರೇ ನಮ್ಮನ್ನೇ ಬಯ್ಯಿ, ದಯವಿಟ್ಟು ಡಾಕ್ಟರ್ ಮಲ್ಯರ ಔಷಧ-ತೀರ್ಥವನ್ನು ಅನುಮಾನಿಸ ಬೇಡ" ಎಂದು ಕೈಮುಗಿದ!

ತಮ್ಮಗಳಿರಾ ಕೆಮ್ಮು ಬಂದ್ರೆ ಏನು ಕುಡೀತಿರಾ?ತಮ್ಮಗಳಿರಾ ಕೆಮ್ಮು ಬಂದ್ರೆ ಏನು ಕುಡೀತಿರಾ?

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X