ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವಾಸ್ತುಪುರುಷನೊಂದಿಗೆ ಒಂದು ವರುಷ

By * ಗುರು ಕುಲಕರ್ಣಿ, ಧಾರವಾಡ
|
Google Oneindia Kannada News

Guru Kulkarni, Dharwad
ಆರ್ಥಿಕ ತಳಮಳ ತನ್ನ ದುಷ್ಪರಿಣಾಮಗಳನ್ನು ನಮ್ಮ ಕಂಪನಿಯ ಮೇಲೂ ತೋರಿ, ತಲೆಗಳು ಉರುಳಿ, 'ರೀಆರ್ಗ'ನ ಗಾಳಿ ಬೀಸುತ್ತಾ ಇತ್ತು. ನಾನು ಕೆಲಸ ಮಾಡುವ ಗುಂಪಿಗೂ ಬಾಸು ಬದಲಾಗಿ, ಸಂದೀಪ ನಮ್ಮ ಹೊಸ ಬಾಸಾಗಿ ಬಂದ. ವಯಸ್ಸಿನಲ್ಲಿ ನನಗಿಂತ ಸ್ವಲ್ಪವೇ ದೊಡ್ಡವನಿದ್ದರೂ, ಕಾರ್ಪೋರೇಟ್ ಏಣಿಯಲ್ಲಿ ಬಹಳ ಎತ್ತರಕ್ಕೇರಿದ್ದ ಅವನ ಬಗ್ಗೆ ನನಗೂ, ನನ್ನ ಇತರ ಸಹೋದ್ಯೋಗಿಗಳಿಗೂ ಗೌರವವಿತ್ತು.

ಇಂತಹ ಹೊಸ ಬಾಸು ಸಂದೀಪನೊಂದಿಗೆ ನಾನು ಮೊಟ್ಟ ಮೊದಲನೆಯದಾಗಿ ಹೋಗಿದ್ದ ಮೀಟಿಂಗು ಗುಂಪಿನ ಆಸನ ವ್ಯವಸ್ಥೆಯ ಬಗೆಗಿನದು. ಅಲ್ಲಿ ಎಲ್ಲ ಗುಂಪಿನ ಹಿರಿತಲೆಗಳು ತಮ್ಮ ಗುಂಪಿನ ಉದ್ಯೋಗಿಗಳಿಗೆ ಎಲ್ಲಿ ಜಾಗ ಬೇಕು ಎಂದು ಫೆಸಿಲಿಟಿ ಮುಖ್ಯಸ್ಥರೊಂದಿಗೆ ಚರ್ಚಿಸುತ್ತಿದ್ದರು. ಫೆಸಿಲಿಟಿ ಮುಖ್ಯಸ್ಥ ನಮಗಾಗಿ ಆಗ್ನೇಯ ದಿಕ್ಕಿನ ಸೀಟುಗಳನ್ನು ಕಾಯ್ದಿಟ್ಟಿದ್ದರು. ಅದರಿಂದ ನನಗಂತೂ ಬಹಳ ಖುಷಿಯಾಗಿತ್ತು. ಆ ಸೀಟುಗಳ ಹತ್ತಿರದಲ್ಲೇ ಪ್ಯಾಂಟ್ರಿ ಇದ್ದುದರಿಂದ, ಚಹಾ ಕುಡಿಯಲು ದೂರ ಹೋಗಬೇಕಾಗಿಲ್ಲ ಎನ್ನುವುದು ನನ್ನ ಖುಷಿಗೆ ಕಾರಣವಾಗಿತ್ತು. ಆದರೆ ಸಂದೀಪನಿಗೆ ಅದು ಸ್ವಲ್ಪವೂ ಇಷ್ಟವಾಗಲಿಲ್ಲ. ಅವನು ನೈರುತ್ಯ ದಿಕ್ಕಿನ ಆಸನಗಳೇ ಬೇಕು ಎಂದು ಹಟ ಹಿಡಿದ.

ಆಗ್ನೇಯ ದಿಕ್ಕಿನ ಸೀಟುಗಳು ಸಿಕ್ಕರೆ, ಚಹ ಕುಡಿಯುವ ಪ್ಯಾಂಟ್ರಿ ಹತ್ತಿರ ಆಗುತ್ತೆ ಎಂದು ನಾನು ಸಂದೀಪನಿಗೆ ಹೇಳುತ್ತಿದ್ದಾಗ, ಶಬ್ದಗಳು ನನ್ನ ಬಾಯಿಯಿಂದ ಪೂರ್ತಿ ಹೊರಬೀಳುವ ಮೊದಲೆ, ಸಂದೀಪು ನನಗೆ ಸ್ವಲ್ಪ ಸುಮ್ನಿರ್‌ತಿಯಾ? ಎಂದು ಲುಕ್ಕು ಕೊಟ್ಟ. ನಿಮ್ಮ ಜೊತೆ ಕೆಲಸ ಮಾಡುವ ಇತರ ಗುಂಪುಗಳಿಗೂ ಆಗ್ನೇಯ ಭಾಗದಲ್ಲಿಯೇ ಜಾಗ ಕೊಟ್ಟಿದ್ದೇವೆ, ಆದ್ದರಿಂದ ನೀವು ಅಲ್ಲಿಯೇ ಕುಳಿತರೆ ಅವರಿಗೆಲ್ಲ ಹತ್ತಿರವಾಗುತ್ತೆ ಎಂದು ಫೆಸಿಲಿಟಿ ಮುಖ್ಯಸ್ಥ ಸಂದೀಪನನ್ನು ಒಪ್ಪಿಸಲು ನೋಡಿದ. ಸಂದೀಪ ಅದಕ್ಕೆ ಈ ದಿನಗಳಲ್ಲಿ ಭೌತಿಕ ದೂರ ಏನೇನು ಸಮಸ್ಯೆಯಲ್ಲ. ಎವರಿಬಡಿ ಇಸ್ ಅ ಫೋನ್ ಕಾಲ್ ಅವೇ. ಅಂದ ಹಾಗೆ ನಮ್ಮೊಡನೆ ಕೆಲಸ ಮಾಡುವ ಇನ್ನೆರಡು ತಂಡಗಳು ಅಮೇರಿಕಾ- ಯುರೋಪಿನಲ್ಲಿ ಇವೆ. ಅವರಿಬ್ಬರಿಗೂ ಹತ್ತಿರವಾಗಲೆಂದು ನಮ್ಮನ್ನು ಶಾಂತಮಹಾಸಾಗರದಲ್ಲಿ ಕೂಡುವ ವ್ಯವಸ್ಥೆ ಮಾಡುತ್ತಿರೋ ಹೇಗೆ? ಎಂದು ಕ್ಷುದ್ರ ಪ್ರಶ್ನೆಯೊಂದನ್ನು ಮುಂದಿಟ್ಟು, ಹೆಂಗೆ? ಎಂಬಂತೆ ಮೀಟಿಂಗನಲ್ಲಿದ್ದವರ ಮುಖ ನೋಡಿದ. ಎಲ್ಲರಿಗೂ ನಗು ಬಂದರೂ, ನಕ್ಕರೆ ಫೆಸಿಲಿಟಿ ಮುಖ್ಯಸ್ಥನಿಗೆ ಹೆಚ್ಚು ಅವಮಾನ ಮಾಡಿದಂತಾಗುತ್ತೆ ಎಂದು ಸುಮ್ಮನಿದ್ದರು. ತಕ್ಷಣ ಎಚ್ಚೆತ್ತ ಫೆಸಿಲಿಟಿ ಮುಖ್ಯಸ್ಥ, ಈ ಸಂದೀಪನನ್ನು ಇನ್ನಷ್ಟು ಮಾತನಾಡಲು ಬಿಟ್ಟರೆ ತನ್ನ ಮಾನ ಹರಾಜು ಹಾಕ್ತಾನೆ ಎಂದುಕೊಂಡು, ಮುಖದ ಮೇಲೆ ಹಾಳಾಗಿ ಹೋಗಿ ಭಾವ ತಂದುಕೊಂಡು ಸರಿ, ನಿಮಗೆ ಅವೇ ಸೀಟು ಕೊಡೋಣ. ಎರಡು ನಿಮಿಷದಲ್ಲಿ ನಿಮ್ಮ ಗುಂಪಿಗೆ ಮೀಸಲಾದ ಜಾಗೆಗಳನ್ನು ಗುರುತು ಹಾಕಿ ನಕಾಶೆ ಕಳಿಸುತ್ತೇನೆ ಎಂದು ನಮ್ಮನ್ನು ಸಾಗಹಾಕಿದ. ಸಂದೀಪು ಗೆದ್ದ ಹುರುಪಿನಲ್ಲಿ ಹೊರಟರೆ, ಅವನ ಹಿಂದೆ ನಾನು ಕಾಲೆಳಿಯುತ್ತಾ ಹಿಂಬಾಲಿಸಿದೆ.

ನನ್ನನ್ನು ಇನ್ನೊಂದು ಖಾಲಿ ಮೀಟಿಂಗು ರೂಮಿಗೆ ದಬ್ಬಿಕೊಂಡು ಹೋದ ಸಂದೀಪ, ದಬಾಯಿಸತೊಡಗಿದ. ನಿಮಗೇನಾದರೂ ಬುದ್ಧಿ ಇದೆಯಾ? ಆ ಆಗ್ನೇಯ ದಿಕ್ಕಿನ ಸೀಟು ಬೇಕು ಅಂತಾ ಹೇಳ್ತಾ ಇದ್ದಿರಲ್ಲಾ? ಆಗ್ನೇಯ ದಿಕ್ಕು ಅಂದರೆ ಅದು ಅಗ್ನಿಮೂಲೆರೀ. ಅಲ್ಲಿ ಕೂತು ಕೆಲಸಮಾಡಿದರೆ ನಮ್ಮ ಕರೀಯರ್ ಪುರುಪುರು ಅಂತ ಉರಿದು ಹೋಗುತ್ತೆ.. ಎಂದ. ಕಟ್ಟಡಕ್ಕೆ ಬೆಂಕಿಬಿದ್ದರೆ ಅಗ್ನಿಶಾಮಕಗಳುಂಟು, ಕರೀಯರ್‌ಗೆ ಬೆಂಕಿ ಬಿದ್ದರೆ ಕಾಯುವರಾರು ಕೂಡಲಸಂಗಮದೇವ? ಎಂದು ನಾನು ಮನಸ್ಸಿನಲ್ಲಿ ಅಂದುಕೊಳ್ಳುತ್ತಾ, ಒಂದು ಪ್ಯಾಲಿ ನಗುವನ್ನು ಮುಖದ ಮೇಲೆ ತಂದುಕೊಂಡೆ. ನೋಡಿ, ವಾಸ್ತುಶಾಸ್ತ್ರದ ಪ್ರಕಾರ ನೈರುತ್ಯ ಕೆಲಸಮಾಡುವವರಿಗೆ ಬಹಳ ಪ್ರಶಸ್ತ. ಅದಕ್ಕೆ ನಾನು ಜಾಗೆಯ ಸಲುವಾಗಿ ಅಷ್ಟು ಹೋರಾಡಿದ್ದು ಎಂದ. ಮುಂದುವರಿದು ನೌ, ಲೆಟ್ಸ್ ಗೆಟ್‌ಡೌನ್ ಟು ಬಿಸಿನೆಸ್. ಆ ಫೆಸಿಲಿಟಿ ಮುಖ್ಯಸ್ಥ ನಕಾಶೆ ಕಳಿಸಿರಬೇಕು, ಅದನ್ನು ನೋಡಿ, ಯಾರ್‍ಯಾರು ಎಲ್ಲೆಲ್ಲಿ ಕೂಡಬೇಕು ಎಂದು ನಿರ್ಧಾರ ಮಾಡೋಣ ಎಂದ. ಅದಕ್ಕೆ ನನ್ನ ಲ್ಯಾಪ್‌ಟಾಪಿನಲ್ಲಿ ಫೆಸಿಲಿಟಿ ಮುಖ್ಯಸ್ಥ ಕಳುಹಿಸಿದ ಮ್ಯಾಪನ್ನು ನಾನು ಪ್ರೊಜೆಕ್ಟರನಿಂದ ಪರದೆಯ ಮೇಲೆ ಮೂಡಿಸಿದೆ. ಸಂದೀಪ ಅದನ್ನು ನೋಡಿ ಒಂದು ಈಸ್ಟ್ ಫೇಸಿಂಗ್, ಒಂದು ನಾರ್ತ್ ಫೇಸಿಂಗ್, ಒಂದು ಸೌತ್ ಫೇಸಿಂಗ್, ಉಳಿದಿದ್ದೆಲ್ಲಾ ವೆಸ್ಟ್ ಫೇಸಿಂಗ್ ಎಂದಾಗ ನಾನಿನ್ನೂ N ಎಂದು ಬರೆದ ಬಾಣದ ಗುರುತು ಎಲ್ಲಿದೆ ಎಂದು ಹುಡುಕುತ್ತಿದ್ದೆ!

ನಾರ್ತ್ ಫೇಸಿಂಗ್ ಜಾಗ ತುಂಬ ಒಳ್ಳೆಯದು, ಅಲ್ಲಿ ನಾನು ಕುತ್ಕೋತಿನಿ. ಈಸ್ಟ್ ಫೇಸಿಂಗ್ ಜಾಗ, ಅದೂ ಪರವಾ ಇಲ್ಲ. ಅಲ್ಲಿ ನೀವು ಕುತ್ಕೋಳಿ. ಉಳಿದ ಹುಡುಗರಿಗೆ ಅವರ ಎಂಪ್ಲಾಯಿ ನಂಬರಿನನ್ವಯ ವೆಸ್ಟ್ ಫೇಸಿಂಗ್ ಜಾಗಗಳನ್ನು ನೀವೇ ಅಲಾಟ್ ಮಾಡಿ, ಆದರೆ ಆ ಕಿರಿಕ್ ಪಾರ್ಟಿ ಕೊಂಗ ಇದ್ದಾನಲ್ಲ, ಅವನಿಗೆ ಸೌತ್ ಫೇಸಿಂಗ್ ಜಾಗನೇ ಕೊಡಿ ಎಂದು ಸಿಇಟಿ ಸೆಲ್ಲು- ಕಾಮೇಡ್‌ಕೆಗಳು ಅಷ್ಟು ಕಷ್ಟಪಟ್ಟು ಮಾಡುವ ಸೀಟು ಹಂಚಿಕೆ ಎಂಬ ಯಜ್ಞವನ್ನು ಎರಡೇ ನಿಮಿಷಗಳಲ್ಲಿ ಮುಗಿಸಿದ.

ಸಂದೀಪನೊಂದಿಗೆ ಕೆಲಸ ಮಾಡುತ್ತಾ ಅವನ ವಾಸ್ತು ಜ್ಞಾನದ ಇನ್ನಷ್ಟು ಪರಿಚಯವಾಯಿತು. ನಮ್ಮ ಕಸ್ಟಮರ್‌ಗಳನ್ನು ಭೇಟಿಯಾಗುವಾಗ, ಭೇಟಿಯ ಜಾಗಕ್ಕೆ ಅರ್ಧಗಂಟೆ ಮೊದಲೆ ಹೋಗಿ ನಾವು ಯಾವ ಕುರ್ಚಿಯಲ್ಲಿ ಕುಳಿತರೆ ವಾಸ್ತುಶಾಸ್ತ್ರದ ಪ್ರಕಾರ ಒಳ್ಳೆಯದು ನಿರ್ಧರಿಸುತ್ತಿದ್ದ! ಅಫ್‌ಕೋರ್ಸ್, ಅದಕ್ಕಿಂತ ಮೊದಲೆ ತನ್ನ ಲ್ಯಾಪ್‌ಟಾಪಿನಲ್ಲಿ ಹಾಕಿಕೊಂಡಿರುವ ರಾಹುಕಾಲ ಲೆಕ್ಕಹಾಕುವ ಸಾಫ್ಟ್‌ವೇರಿನಲ್ಲಿ ಭೇಟಿಯ ಸಮಯ ರಾಹುಕಾಲ ಅಲ್ಲ ಎಂದು ಖಾತರಿಪಡಿಸಿಕೊಂಡಿರುತ್ತಿದ್ದ! ಅವನು ನಮ್ಮ ಜಾಗೆಗಳ ಹತ್ತಿರವಿದ್ದ ಶೌಚಾಲಯಗಳನ್ನು ಎಂದೂ ಉಪಯೋಗಿಸುತ್ತಿರಲಿಲ್ಲ, ಬದಲಿಗೆ ಕಟ್ಟಡ ಇನ್ನೊಂದು ತುದಿಗೆ ಇದ್ದ ಶೌಚಾಲಯಕ್ಕೇ ಅವನ ನಿಷ್ಠೆ. ಅದಕ್ಕೆ ಕಾರಣ ಆ ಬದಿಯ ಶೌಚಾಲಯಗಳು ವಾಸ್ತುಶಾಸ್ತ್ರದ ಪ್ರಕಾರ ಸರಿಯಾಗಿ ಕಟ್ಟಿದಂತವುಗಳಂತೆ! ಊಟಕ್ಕೆ ಕೂಡ ಒಂದು ನಿರ್ದಿಷ್ಟ ದಿಕ್ಕಿನೆಡೆಗೆ ಮುಖಮಾಡಿ ಕುಳಿತರೆ ಆರೋಗ್ಯಕ್ಕೆ ಒಳ್ಳೆಯದು ಎಂಬುದು ಅವನ ವಾಸ್ತು ನಂಬಿಕೆ. ಆಫೀಸಿನ ಕ್ಯಾಂಟೀನಿನಲ್ಲಿ ತಡವಾಗಿ ಹೋದರೆ ಜನಸಂದಣಿ ಹೆಚ್ಚಾಗಿ ನಮಗೆ ಬೇಕಾದ ದಿಕ್ಕಿನ ಜಾಗ ಸಿಗಲಾರದು ಎಂದು, ಎಲ್ಲಕ್ಕಿಂತ ಮೊದಲೇ ನಮ್ಮನ್ನು ಊಟಕ್ಕೆ ಎಬ್ಬಿಸಿಕೊಂಡು ಹೋಗುತ್ತಿದ್ದ!

ಸಂದೀಪನೊಂದಿಗೆ ಕೆಲಸಮಾಡುತ್ತಾ ನನ್ನ ಆರೋಗ್ಯ ಸುಧಾರಿಸಿದೆ ಎಂದು ನನ್ನ ಅನಿಸಿಕೆ. ಅದಕ್ಕೆ ವಾಸ್ತುಶಾಸ್ತ್ರದ ಕೊಡುಗೆ ಎಷ್ಟು ಎಂದು ಗೊತ್ತಿಲ್ಲ. ಆದರೆ ಮೊದಲೆಲ್ಲಾ ಸಿಕ್ಕ ಸಮಯಕ್ಕೆ, ಸಿಕ್ಕಷ್ಟು ಊಟ ಮಾಡಿಬರುತ್ತಿದ್ದೆ. ಈಗ ಸಂದೀಪ ನಮ್ಮನ್ನು ಸರಿಯಾಗಿ ಹನ್ನೊಂದುವರೆಗೆ ಊಟಕ್ಕೆ ಎಳೆದುಕೊಂಡು ಹೋಗುತ್ತಾನಾದ್ದರಿಂದ ದಿನವೂ ಸರಿಯಾದ ಸಮಯಕ್ಕೆ, ಇನ್ನೂ ಬಿಸಿ-ಬಿಸಿಯಾಗಿರುವ ಅಡುಗೆಯನ್ನು ಉಣ್ಣಲು ಆರಂಭಿಸಿರುವುದೇ ಆರೋಗ್ಯಕ್ಕೆ ಕಾರಣ ಎನಿಸುತ್ತೆ. ಅದಕ್ಕಿಂತ ಹೆಚ್ಚಾಗಿ ನಮ್ಮ ಹೊಸ ಜಾಗ ಪ್ಯಾಂಟ್ರಿಯಿಂದ ದೂರವಿರುವುದರಿಂದ ಚಹಾ ಕುಡಿಯುವುದು ಕಮ್ಮಿಯಾಗಿ ಮತ್ತು ಪ್ರತಿ ಸಲ ಚಹಾ ಕುಡಿಯಬೇಕಾದಾಗ ಮೊದಲಿನಕ್ಕಿಂತ ಹೆಚ್ಚು ನಡೆಯಬೇಕಾಗಿರುವುದರಿಂದ ಆರೋಗ್ಯಕ್ಕೆ ಒಳ್ಳೆಯದಾಗಿದೆ ಎನಿಸುತ್ತದೆ!

ಒಮ್ಮೆ ನಾನು ಸಂದೀಪನಿಗೆ ತಮಾಷೆ ಮಾಡುತ್ತಾ ನಾಳೆ ಐಟಿ ಫೀಲ್ಡಿಗೆ ತೊಂದರೆಯಾದರೆ, ನೀವು ಯಾವುದಾದರೂ ರಾಜಕಾರಣಿಗಳಿಗೆ ವಾಸ್ತು ಸಲಹೆಗಾರ ಆಗಬಹುದು! ಎಂದಿದ್ದೆ. ಅದಕ್ಕೆ ಅವನು ಗುಡ್ ಜೋಕ್, ಆದರೆ ಸಿರೀಯಸ್ಸಾಗಿ ಹೇಳಬೇಕೆಂದರೆ ವಾಸ್ತುಶಾಸ್ತ್ರದ ಮಹತ್ವ ಕಾರ್ಪೋರೇಟ್ ವಲಯಕ್ಕೆ ಅರ್ಥವಾದರೆ ಯಾವುದಾದರೂ ಕಂಪನಿಗೆ ನಾನು ವೈಸ್-ಪ್ರೆಸಿಡೆಂಟ್ ವಾಸ್ತು ಇಲ್ಲವೇ ಚೀಫ್-ವಾಸ್ತು-ಆಫೀಸರ್ ಆದರೂ ಆಗಬಹುದು! ಎಂದು ಗಂಭೀರವಾಗಿ ಹೇಳಿದ್ದ. ಈಗ ಜಾಗತಿಕ ಆರ್ಥಿಕ ಹವಾಮಾನ ಸುಧಾರಿಸಿದೆ, ನಮ್ಮ ಕಂಪನಿಯ ಆರ್ಥಿಕ ಪರಿಸ್ಥಿತಿಯೂ ಮಜಬೂತಾಗಿದೆ. ಎಲ್ಲ ನೌಕರರಿಗೆ ಸಂಬಳ ಹೆಚ್ಚು ಮಾಡಲಾಗಿದೆ, ಅಲ್ಲೊಬ್ಬ-ಇಲ್ಲೊಬ್ಬರಿಗೆ ಭಡ್ತಿಯೂ ಸಿಕ್ಕಿವೆ. ಸಂದೀಪನಿಗೂ ಭಡ್ತಿ ದೊರೆತಿದೆ. ನಮ್ಮ ಕಂಪನಿಗೆ ಇನ್ನೂ ವಾಸ್ತುಶಾಸ್ತ್ರದ ಮಹತ್ವ ಅರ್ಥವಾಗಿಲ್ಲವಾದ್ದರಿಂದ ಅವನಿಗೆ ವೈಸ್-ಪ್ರಸಿಡೆಂಟ್ ವಾಸ್ತು ಹುದ್ದೆ ಸಿಕ್ಕಿಲ್ಲವಾದರೂ, ಅವನಿಗೆ ಸಿಕ್ಕಿರುವ ಹುದ್ದೆಯೂ ಕಡಿಮೆಯದೇನಲ್ಲ. ಈಗ ಖಾಲಿಯಾಗಿರುವ ಸಂದೀಪನ ಹುದ್ದೆಗೆ ನನಗೆ ಭಡತಿ ಕೊಡದಿದ್ದರೂ, ಕನಿಷ್ಟ ಅವನು ಕೂಡುತ್ತಿದ್ದ ಆ ನಾರ್ತ್ ಫೇಸಿಂಗ್ ಸೀಟನ್ನಾದರು ಕೊಡಿ ಎಂದು ಮ್ಯಾನೇಜ್‌ಮೆಂಟಲ್ಲಿ ಕೇಳ್ಬೇಕು ಅನಕೋತಾ ಇದೀನಿ...

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X