ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

10 ಸಾಧಕರಿಗೆ ರಾಜ್ಯೋತ್ಸವ ಪ್ರಶಸ್ತಿ

|
Google Oneindia Kannada News

Jai Karnataka
ರಾಜ್ಯ ಸರಕಾರ ಈ ಬಾರಿ ರಾಜ್ಯೋತ್ಸವ ಪ್ರಶಸ್ತಿಗಳನ್ನು ರದ್ದು ಮಾಡಿರಬಹುದು. ಆದರೆ, ಸಾಧಕರಿಗೆ ವಂಚನೆ ಆಗಬಾರದು ಎಂಬ ಏಕೈಕ ಉದ್ದೇಶದಿಂದ ದಟ್ಸ್ ಕನ್ನಡ ವಿಶೇಷ ಪ್ರಶಸ್ತಿಗಳನ್ನು ನೀಡುತ್ತಿದೆ. ಬಿಜೆಪಿ ಕಪಟ ನಾಟಕದಲ್ಲಿ ಅದ್ಭುತ ಅಭಿನಯ ನೀಡಿದ ಹತ್ತು ವ್ಯಕ್ತಿ, ಶಕ್ತಿಗಳಿಗೆ ಈ ಪ್ರಶಸ್ತಿ ಸಲ್ಲುತ್ತದೆ. ಸಾಧಕರಿಗೆ ಅಭಿನಂದನೆಗಳು-ಸಂಪಾದಕ.

* ಎಚ್. ಆನಂದರಾಮ ಶಾಸ್ತ್ರೀ, ಬೆಂಗಳೂರು

ಯಡಿಯೂರಪ್ಪ :
ಇವರಿಗೆ ಹೇಗಾದರೂ ಮುಖ್ಯಮಂತ್ರಿ ಆಗಬೇಕಿತ್ತು. ಅಧಿಕಾರ, ಕೀರ್ತಿ ಮತ್ತು ಸಂಪತ್ತಿಗಾಗಿ ಮನಸ್ಸು ಹಪಹಪಿಸುತ್ತಿತ್ತು. ವಿರೋಧ ಪಕ್ಷದಲ್ಲಿದ್ದು ಅಷ್ಟು ವರ್ಷ ಕಂಠಶೋಷಣೆ ಮಾಡಿಕೊಂಡದ್ದೆಲ್ಲ ವ್ಯರ್ಥವಾಗಿಬಿಡುತ್ತೇನೋ ಎಂಬ ಭಯ ಇವರನ್ನು ವಯಸ್ಸಾದಂತೆ ಹೆಚ್ಚೆಚ್ಚು ಕಾಡತೊಡಗಿತು. ಸಾಲದ್ದಕ್ಕೆ ಅನಂತಕುಮಾರ್ ಎಂಬ ತೀವ್ರ ಪ್ರತಿಸ್ಪರ್ಧಿ ಬೇರೆ. ಇವೆಲ್ಲದರ ಪರಿಣಾಮ, ಪಕ್ಷದ ಸಿದ್ದಾಂತಗಳನ್ನೆಲ್ಲ ಗಾಳಿಗೆ ತೂರಿ ಇವರು ಹಣ ಮತ್ತು ದರ್ಪವೇ ಜೀವನದ ಧ್ಯೇಯವಾಗಿರುವ ಗಣಿ ರೆಡ್ಡಿಗಳ ಕಾಲು ಹಿಡಿದರು. ರಾತ್ರಿ ಕಂಡ ಬಾವಿಯಲ್ಲಿ ಹಗಲು ಹೋಗಿ ಬಿದ್ದರು.

ಜನಾರ್ದನ ರೆಡ್ಡಿ : "ಅಲ್ಪನಿಗೆ ಐಶ್ವರ್ಯ ಬಂದರೆ ಅರ್ಧರಾತ್ರಿಯಲ್ಲಿ ಕೊಡೆ ಹಿಡಿದ!" ಎಂಬ ಗಾದೆಮಾತಿದೆ. ಹಾಗಾಯಿತು ಜನಾರ್ದನರೆಡ್ಡಿ ಕಥೆ. ಬಳ್ಳಾರಿ ರಾಜಕಾರಣಕ್ಕೆ ಸೀಮಿತವಾಗಿದ್ದಾತನಿಗೆ ಭೂಸಂಪತ್ತು ದೋಚಿದ ಹಣ ಬಂದು ಸೇರಿದ್ದೇ ತಡ, ರಾಜ್ಯ ರಾಜಕಾರಣ ಪ್ರವೇಶಿಸುವ ಮನಸ್ಸಾಯಿತು. ಬಿ‌ಎಸ್‌ವೈ ಎಂಬ ಬಕರಾ ಸಿಕ್ಕಿದಮೇಲೆ ಕೇಳಬೇಕೇ? "ಆಪರೇಷನ್" ಮಾಡಿ ಬಿಜೆಪಿ ಪಕ್ಷದ ಮುಖಚರ್ಯೆಯನ್ನೇ ಜನಾರೆಡ್ಡಿ ಬದಲಾಯಿಸಿಬಿಟ್ಟರು. ಎಲ್ಲೋ ಇರಬೇಕಾದವರು ಬಂದು ಪರಿವಾರಸಮೇತ ವಿಧಾನಸೌಧ ಸೇರಿಕೊಂಡದ್ದಲ್ಲದೆ ತನ್ನ ಅಗ್ರಜ ಮತ್ತು ಬಂಟ ಇವರಿಬ್ಬರ ಸಮೇತ ಕ್ಯಾಬಿನೆಟ್ಟನ್ನೂ ಪ್ರವೇಶಿಸಿಬಿಟ್ಟರು. ಈಗ ಈ ತ್ರಿಮೂರ್ತಿಗಳಿಗೆ ಕರ್ನಾಟಕ ರಾಜ್ಯವನ್ನೇ ನುಂಗಿ ನೀರು ಕುಡಿಯಬೇಕೆನ್ನುವ ರಾವಣ ಹಸಿವು. ಇವರ ರಾಜಕೀಯ ನಿಷ್ಠೆ ಏನಿದ್ದರೂ ಆಂಧ್ರಕ್ಕೆ ಮತ್ತು ವೈ‌ಎಸ್‌ಆರ್ ಪುತ್ರ, ಕಾಂಗ್ರೆಸ್ ಸಂಸದ ಜಗನ್‌ಮೋಹನ್ ರೆಡ್ಡಿಗೆ.

ಕರುಣಾಕರ ರೆಡ್ಡಿ : ತಮ್ಮನಾದ ಜನಾರೆಡ್ಡಿ ಬಳಿ ಗಣಿ ಹಣ ಬಂದು ಸೇರುವ ಮೊದಲು ಈ ಅಣ್ಣನೇ ಕುಟುಂಬದ ಮತ್ತು ವ್ಯವಹಾರದ ಮುಖ್ಯಸ್ಥ. ತಮ್ಮನ ಬಳಿ ಲಕ್ಷ್ಮಿ ಬಂದು ಕಾಲು ಮುರಕೊಂಡು ಬಿದ್ದದ್ದೇ ತಡ, ಅಣ್ಣ ಸೈಡ್‌ಲೈನ್! ಆದರೂ ಅಣ್ಣನೆಂಬ ಗೌರವ ಜನಾರೆಡ್ಡಿಗೆ ಇಲ್ಲದಿಲ್ಲ. ಆದ್ದರಿಂದಲೇ ಅಣ್ಣನಿಗೂ ಒಂದು ಮಂತ್ರಿಪದವಿ.

ಶ್ರೀರಾಮುಲು : "ಮಂಗನ ಕೈಲಿ ಮಾಣಿಕ್ಯ"ದಂತೆ ಶ್ರೀರಾಮುಲು ಕೈಲಿ ಆರೋಗ್ಯ ಇಲಾಖೆ. ಜನಾರೆಡ್ಡಿಯ ಆರೋಗ್ಯ ನೋಡಿಕೊಳ್ಳುವುದರಲ್ಲಿಯೇ ಈತ ಸುಸ್ತು. ರೆಡ್ಡಿ ಸಹೋದರರ ಪಾಲಿಗೆ ಈ ಶ್ರೀರಾಮ ಸಾಕ್ಷಾತ್ ರಾಮಬಂಟ. ತೋಳ್ಬಲದಿಂದ, ಜಾತಿಬಲದಿಂದ ಮತ್ತು ತೆಲುಗು ಸಿನೆಮಾ ಹೀರೊ ಸದೃಶ ಸ್ಟಂಟ್‌ಗಳಿಂದ ರೆಡ್ಡಿ ಸಹೋದರರಿಗೆ ಈತ ತಂದುಕೊಡುತ್ತಿರುವ ವೋಟುಗಳಿಗೆ ಪ್ರತಿಯಾಗಿ ಈತನಿಗೆ ವ್ಯವಹಾರದಲ್ಲಿ ಪಾರ್ಟ್‌ನರ್‌ಷಿಪ್ ಮತ್ತು ಕ್ಯಾಬಿನೆಟ್ ಮಂತ್ರಿಪದವಿ. ಕನ್ನಡವೇ ಸರಿಯಾಗಿ ಗೊತ್ತಿಲ್ಲದ ಈ ಆಂಧ್ರಕುವರ ಕನ್ನಡನಾಡಿನ ಸಚಿವ!

ಸದಾನಂದ ಗೌಡ : ಅತ್ತ ಹೈಕಮಾಂಡ್ ಹೇಳಿದ್ದಕ್ಕೂ ಸರಿ, ಇತ್ತ ಯಡಿಯೂರಪ್ಪ ಹೇಳಿದ್ದಕ್ಕೂ ಸರಿ, "ಆಪರೇಷನ್ ಕಮಲ"ಕ್ಕೂ ಸರಿ, ರೆಡ್ಡಿ ಗ್ಯಾಂಗ್‌ನೊಡನೆ ರಾಜಿಗೂ ಸರಿ, ರಾಜ್ಯ ಏನಾದರೇನು, ನೋ ವರಿ. ಸದ್ಯದ ವರಿ ತನಗೆ ಕೆ.ಎಂ.ಎಫ್.ನ ಅಧ್ಯಕ್ಷಪದವಿ ಸಿಗಲಿಲ್ಲವಲ್ಲಾ ಎಂಬುದು. ಹೊರಗೆ ಸದಾ ನಗುತ್ತಿದ್ದರೂ ಒಳಗೆ ಗಂಭೀರ ಲೆಕ್ಕಾಚಾರಗಳಲ್ಲಿ ಮಗ್ನ. ಪಕ್ಕಾ ದಕ್ಷಿಣ ಕನ್ನಡಿಗ.

ಶೋಭಾ ಕರಂದ್ಲಾಜೆ :ಶೋಭಾ ಕರಂದ್ಲಾಜೆ :

ವಿ.ಪಿ. ಬಳಿಗಾರ್ : "ರೆಡ್ಡಿ ಅಂಡ್ ಕಂಪನಿ"ಯ ಕಾಲಿನ ಮುಳ್ಳು. ದಕ್ಷ ಮತ್ತು ಪ್ರಾಮಾಣಿಕ ಅಧಿಕಾರಿಯಾಗಿರುವುದೇ ಈತನ ದೋಷ. ಐ‌ಎ‌ಎಸ್ ಅಧಿಕಾರಿಯಾಗಿರುವವನು ದಕ್ಷತೆ, ಪ್ರಾಮಾಣಿಕತೆ ಮೆರೆಯುವುದೇ?! ತಪ್ಪು, ತಪ್ಪು.

ಜಗದೀಶ ಶೆಟ್ಟರ್ : ಸಭ್ಯ, ಪಾಪ. ಇದೇ ಇವರ ವೀಕ್‌ನೆಸ್, ಪಾಪ. ರೆಡ್ಡಿ ಗ್ಯಾಂಗು ತಮ್ಮ ಬಳಿ ಬಂದಾಗ ಛೀಮಾರಿ ಹಾಕಿ ಕಳಿಸೋದು ಬಿಟ್ಟು ಅವರನ್ನು ಕುಳ್ಳಿರಿಸಿ, ಅವರ ಮಾತನ್ನೆಲ್ಲ ಕಿವಿಯರಳಿಸಿಕೊಂಡು ಕೇಳಿ ಒಳಗೊಳಗೇ ಜೊಲ್ಲು ಸುರಿಸುವಷ್ಟು ಸಭ್ಯ, ಪಾಪ. ಕೈತಪ್ಪಿಹೋದ ಮಂತ್ರಿಪದವಿಯ ಬದಲು ಮುಖ್ಯಮಂತ್ರಿಯ ಪದವಿಯೇ ಸಿಗುವುದಾದರೆ ಯಾರಿಗೆ ಬೇಡ? ಅಯ್ಯೋ ಪಾಪ.

ರಾಜ್ಯ ಬಿ.ಜೆ.ಪಿ. ಸಿದ್ಧಾಂತ : ಗಣಿರೆಡ್ಡಿಗಳು ವಿಧಾನಸೌಧವೆಂಬ ಓ.ಟಿ. ಪ್ರವೇಶಿಸಿ ಕಮಲಕ್ಕೆ ಆಪರೇಷನ್ ಮಾಡಲು ಶುರುಹಚ್ಚಿಕೊಂಡ ತಕ್ಷಣವೇ ರಾಜ್ಯ ಬಿ.ಜೆ.ಪಿ. ಸಿದ್ಧಾಂತವು ಪಕ್ಷದ ಕಚೇರಿಯಿಂದ ಮಾಯವಾಯಿತು. ಅದೀಗ ಕಾಲು ಮುರಿದುಕೊಂಡು "ಕೇಶವ ಕೃಪಾ"ದಲ್ಲಿ ಬಿದ್ದಿದೆ.

ಕರ್ನಾಟಕ ರಾಜ್ಯ : "ಜಯ್ ಭಾರತ ಜನನಿಯ ತನುಜಾತೆ, ಜಯಹೇ ಕರ್ನಾಟಕ ಮಾತೆ" ಈಗ "ಹೇ ಭಾರತ ಜನನಿಯ ತನುಜಾತೆ, ಅಯ್ಯೋ ಕರ್ನಾಟಕ ಮಾತೆ!"

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X