• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ನಾನು, ನನ್ನ ರೂಂಮೇಟುಗಳು ಮತ್ತು ಆಪರೇಶನ್ ಕಮಲ

By Staff
|

ಸಾಫ್ಟ್ ವೇರ್ ಜಗತ್ತಿನಲ್ಲಿ ಕೋಡ್ ಗಳೊಂದಿಗೆ ಆಟವಾಡುತ್ತಲೇ ಕನ್ನಡ ಅಕ್ಷರ ಪೋಣಿಸುವ ಹವ್ಯಾಸ ಬೆಳೆಸಿಕೊಂಡಿರುವ ಧಾರವಾಡದ ಗುರು ಕುಲಕರ್ಣಿ ಅವರ 'ನಾನು, ನನ್ನ ರೂಂಮೇಟುಗಳು ಮತ್ತು ಭಾಷೆ' ಹಾಸ್ಯ ಲೇಖನಕ್ಕೆ ಕೊರವಂಜಿ-ಅಪರಂಜಿ ಟ್ರಸ್ಟ್ ಆಯೋಜಿಸಿದ್ದ ಪಡುಕೋಣೆ ರಮಾನಂದರಾವ್ ಸ್ಮಾರಕ ಹಾಸ್ಯ ಲೇಖನ ಸ್ಪರ್ಧೆಯಲ್ಲಿ ಮೊದಲ ಬಹುಮಾನ ದೊರೆತಿದೆ. ಗುರು ಅವರಿಗೆ ದಟ್ಸ್ ಕನ್ನಡದ ಅಭಿನಂದನೆ . ಇದೇ ಲೇಖನ ಸರಣಿಯ ಒಂದು ಹಾಸ್ಯ ತುಣುಕನ್ನು ನಮ್ಮ ಓದುಗರಿಗಾಗಿ ಇಲ್ಲಿ ನೀಡುತ್ತಿದ್ದೇವೆ.

ಒಂದು ಕಾಡಿನಲ್ಲಿ ಒಂದು ಮುದಿ ಹುಲಿ ಇತ್ತಂತೆ. ಅದಕ್ಕೆ ಬೇಟೆಯಾಡಲು ಶಕ್ತಿ ಇರಲಿಲ್ಲ. ಅದು ಎಲ್ಲಿಂದಲೋ ಒಂದು ಚಿನ್ನದ ಬಳೆ ಸಂಪಾದಿಸಿಟ್ಟುಕೊಂಡಿತ್ತು. ಒಂದು ಕೆಸರಿನಿಂದ ತುಂಬಿರುವ ಕೆರೆಯ ಮಧ್ಯದ ದ್ವೀಪದಲ್ಲಿ ಕುಳಿತು, ದಾರಿಯಲ್ಲಿ ಹೋಗುವವರಿಗೆ "ನಾನು ಒಬ್ಬ ಮುದಿ ಹುಲಿ, ಯಾರಿಗೂ ತೊಂದರೆಕೊಡೋದಿಲ್ಲ. ನಾನು ಈ ಅಮೂಲ್ಯ ವಸ್ತುವನ್ನು ಇಟ್ಟುಗೊಂಡು ಏನು ಮಾಡಲಿ? ದಯವಿಟ್ಟು ಇದನ್ನು ತೆಗೆದುಕೊಂಡು ಉಪಯೋಗಿಸಿಕೊಳ್ಳಿ" ಎಂದು ಚಿನ್ನದ ಬಳೆಯನ್ನು ತೋರಿಸುತ್ತಿಂತೆ. ಯಾರಾದರೂ ಚಿನ್ನದ ಬಳೆಯ ಆಶೆಗೆ ಬಲಿಯಾಗಿ ಅದರ ಹತ್ತಿರ ಹೋಗಲು ಪ್ರಯತ್ನಿಸಿದರೆ ಕೆಸರಲ್ಲಿ ಸಿಕ್ಕಿಕೊಳ್ತಿದ್ದರು, ಮತ್ತು ಅರಾಮವಾಗಿ ಮುದಿ ಹುಲಿ ಅವರನ್ನು ಹಿಡಿದು ತಿನ್ನುತ್ತಿತ್ತು.

ಕತೆಯಲ್ಲಿನ ಮುದಿ ಹುಲಿ ತನ್ನ ಪಾಪದ ಫಲವಾಗಿ ಕಲ್ಪಾಂತರಗಳಲ್ಲಿ ಹತ್ತು ಹಲವು ಜನುಮ ಪಡೆದು, ಭವಸಾಗರದಲ್ಲಿ ಈಜುತ್ತಾ, ಈ ಕಲಿಯುಗದಲ್ಲಿ ಆರಾಧ್ಯ ಅಂಕಲ್ ಆಗಿ ಹುಟ್ಟಿದ್ದಾರೆ ಎಂಬುದು ನಾವು ಮೂರು ಜನ ರೂಂಮೇಟುಗಳ ಧೃಢವಾದ ನಂಬಿಕೆ. ಈ ಆರಾಧ್ಯ ಅಂಕಲ್ ನಮ್ಮ ಮನೆಯಿಂದ ನಾಲ್ಕು ಮನೆ ಆಚೆ ಇರ್ತಾರೆ. ಮೊದಲು ಯಾವ ಕೆಲಸಾ ಮಾಡ್ತಾ ಇದ್ದರೋ ಗೊತ್ತಿಲ್ಲ, ಈಗಂತೂ ರಿಟೈರ್‍ಡ್ ಜೀವನ ನಡೆಸ್ತಾ ಇದ್ದಾರೆ. ಎಲ್ಲಾ ರೀಟೈರ್‍ಡ್ ಜನರಿಗೆ ಇರುವಂತೆ, 'ಯಾರು-ನನ್-ಮಾತ್-ಕೇಳಲ್ಲಾ' ಸಿಂಡ್ರೋಮು ಅವರಿಗೂ ಇದೆ. ಯಾರಾದರೂ, ಯಾವುದೇ ಕಾರಣಕ್ಕೂ, ಅವರಿಗೆ ಮಾತನಾಡಲು ಸಿಕ್ಕರೆ, ತಮ್ಮ ಹಿಂದಿನ ಜನುಮಗಳ ಹಸಿವನ್ನು ತೀರಿಸಿಕೊಳ್ಳುವಂತೆ, ಸಿಕ್ಕವರ ತಲೆ ತಿಂದು ಬಿಡುತ್ತಾರೆ. ಇಲ್ಲಾಂದರೆ ಯಾವುದಾದರೂ ಬಕರಾ ಸಿಗುತ್ತಾ ಅಂತ ಮನೆ ಗೇಟಿಗೆ ಕುರ್ಚಿ ಹಾಕಿಕೊಂಡು ಕಾಯ್ತಾ ಕೂತಿರ್ತಾರೆ.

ಕತೆಯಲ್ಲಿನ ಮುದಿ ಹುಲಿಗೂ, ನಮ್ಮ ಆರಾಧ್ಯ ಅಂಕಲ್ ಮಧ್ಯ ಬಕರಾಗಳನ್ನು ಹಿಡಿಯುವುದರಷ್ಟೇ ಅಲ್ಲ, ಇನ್ನೂ ಒಂದು ಹೋಲಿಕೆ ಇದೆ. ಆರಾಧ್ಯ ಅಂಕಲ್ ಹತ್ತಿರನೂ ಒಂದು ಅಮೂಲ್ಯ ವಸ್ತುವಿದೆ - ಅವರ ಮಗಳು ಕಮಲಾ!

ನಮ್ಮ ಮನೆಮಾಲಕರ ಹೆಸರೂ ಕೂಡ ಆರಾಧ್ಯ ಅಂತಲೇ. ಅವರು ಬೆಂಗಳೂರಿನ ಬೇರೊಂದು ಭಾಗದಲ್ಲಿ ವಾಸವಾಗಿದ್ದು ನಮಗೆ ಈ ಮನೆಯನ್ನು ಬಾಡಿಗೆಗೆ ಕೊಟ್ಟಿದ್ದರು. ನಮ್ಮ ಕಂಪೋಂಡಿಗೆ 'ಎಚ್ಚೆಸ್ ಆರಾಧ್ಯ, ಬಿಎ ಎಲ್ಲೆಲ್‌ಬಿ' ಎಂಬ ಶಿಲಾಲೇಖವನ್ನು ತಮ್ಮ ಒಡೆತನದ ಹಕ್ಕಿನ ಕುರುಹಾಗಿ ಕೆತ್ತಿಸಿದ್ದರು. ಅದನ್ನು ನೋಡಿದ ಪೋಸ್ಟಮನ್ನುಗಳು, ಕುರಿಯರ್‌ನವರು ಆರಾಧ್ಯ ಅಂಕಲ್ ಅವರ ಕಾಗದ ಪತ್ರಗಳನ್ನು ನಮ್ಮ ಪೋಸ್ಟ್‌ಬಾಕ್ಸಿಗೆ ಹಾಕಿ ಹೋಗುತ್ತಿದ್ದರು. ಜವಾಬ್ದಾರಿಯುತ ನಾಗರಿಕರಂತೆ ನಾವು ಅವುಗಳನ್ನು ಜೋಪಾನದಿಂದ ಆರಾಧ್ಯ ಅಂಕಲ್ ಮನೆಗೆ ಮುಟ್ಟಿಸುತ್ತಿದ್ದೆವು. ನಮ್ಮ ಈ ಪರೋಪಕಾರದ ಗುಣವೇ ಕೆಲಬಾರಿ ನಮ್ಮನ್ನು ತೊಂದರೆಗೆ ಸಿಲುಕಿಸುತ್ತಿತ್ತು. ಅವರ ಕಾಗದಗಳನ್ನು ಕೊಡಲು ಹೋದ ನಮ್ಮನ್ನೇ ಹಿಡಿದು ಆರಾಧ್ಯ ಅಂಕಲ್ "ನಾನು ಇಲ್ಲಿ ಜಾಗ ಕೊಂಡಾಗ ಏನು ರೇಟಿತ್ತು, ಗೊತ್ತಾ?" ಎಂದು ಶುರು ಮಾಡಿ ಅರ್ಧಗಂಟೆ ಕೊರೆಯುತ್ತಿದ್ದರು.

ನಾವು ಮೂರು ಜನ ರೂಂಮೇಟುಗಳಲ್ಲಿ ವಿನಾಯಕನದು ಪ್ರೀತಿ-ಪ್ರೇಮಗಳ ಬಗ್ಗೆ ಅಗಾಧ ನಿರಾಸಕ್ತಿ. ಸಣ್ಣ ಹುಡುಗನಿದ್ದಾಗ, ಸ್ಕೂಲಲ್ಲಿನ ಟೀಚರನ್ನೇ ಲವ್ವು ಮಾಡಿದ್ದನಂತೆ, ಅವರು ಮದುವೆಯಾಗಿ ಹೋದ ಮೇಲೆ ಭಗ್ನ ಪ್ರೇಮಿಯಾಗಿ ಈಗ ಬರೀ ಪುಸ್ತಕಗಳಲ್ಲಿ ಮುಳುಗಿರತಾನೆ. ನಾನು ಕೂಡ ಸ್ಕೂಲಲ್ಲಿದ್ದಾಗಲೇ ಲವ್ವು ಮಾಡಿದ್ದೆನಾದರೂ, ಟೀಚರ್‌ನ್ನಲ್ಲ, ಅವರ ಮಗಳನ್ನು! ಹೀಗಾಗಿ ನನ್ನದು ಭಗ್ನ ಪ್ರೇಮವಾಗದೇ, ಇನ್ನೊಂದೆರಡು ವರುಷಗಳಲ್ಲಿ ಮದುವೆಯಾಗಿ ಮಾರ್ಪಾಟಾಗಲಿದೆ. ಹಕ್ಕಿಗಳ ಬಗ್ಗೆ ನನಗೆ ವಿಶೇಷಾಸಕ್ತಿ ಇಲ್ಲವಾದರೂ, 'ನೋಡಿದರೆ ತಪ್ಪೇನು?' ಎಂಬ ಭಾವನೆ. 'ಡಯಟಿಂಗ್ ಮಾಡುವವರು ಹೋಟಲ್ಲಿಗೆ ಹೋದಾಗ ಎಣ್ಣೆಯಲ್ಲಿ ಕರಿದ ತಿಂಡಿ ತಿನ್ನಬಾರದು, ಸರಿ. ಆದರೆ ಮೆನುನೂ ನೋಡಬಾರದಾ?' ಎಂಬ ಸಿದ್ಧಾಂತ ನನ್ನದು. ಆದರೆ ನಮ್ಮ ಮೂರನೆ ರೂಂಮೇಟು ನಿರ್ಮಲ್ ಕುಮಾರನಿಗೆ ಹಕ್ಕಿಗಳಲ್ಲಿ ವಿಶೇಷ ಆಸಕ್ತಿ. ಒಂದೇ ಕಲ್ಲಿಗೆ ಎರಡು ಹಕ್ಕಿ ಹೊಡೆಯೋಕ್ಕಾಗದಿದ್ದರೆ ಏನಂತೆ? ಎರಡ್ಯಾಕೆ, ಇಪ್ಪತ್ತು ಕಲ್ಲು ಹೊಡೆಯೋಣ, ಒಂದಾದರೂ ಹಕ್ಕಿ ಬೀಳುತ್ತೆ ಎನ್ನುವುದು ಅವನ ಸಿದ್ಧಾಂತ. ಹೀಗಾಗಿ ಆಫೀಸಿನಲ್ಲಿ ನೀತಾ, ಬಬೀತಾರಿಗೂ, ಈ ಆರಾಧ್ಯ ಅಂಕಲ್ ಮಗಳು ಕಮಲಾಗೂ ಏಕಕಾಲಕ್ಕೆ ಕಾಳು ಹಾಕ್ತಾ ಇದ್ದ.

ಅಡ್ರೆಸ್ಸು ತಪ್ಪಿ ಬಂದ ಆರಾಧ್ಯ ಅಂಕಲ್ ಅವರ ಕಾಗದಗಳನ್ನು ಅವರ ಮನೆಗೆ ಮುಟ್ಟಿಸಲು ಮೊದಲು ನಮ್ಮ ನಡುವೆ ನಾನೊಲ್ಲೆ, ನಾನೊಲ್ಲೆ ಎಂಬ ಕಿತ್ತಾಟವಿರುತ್ತಿತ್ತು. ಮೂವರಲ್ಲಿ ಒಬ್ಬನನ್ನು ಇನ್ನಿಬ್ಬರು ಅಂತೂ-ಇಂತೂ ಒತ್ತಾಯಮಾಡಿ ಒಪ್ಪಿಸಿದರೆ, ಅವನು ಆರಾಧ್ಯ ಅಂಕಲ್ ಮನೆಯ ಮುಂದೆ ಮೂರು-ನಾಲ್ಕು ಸಲ ಸುಳಿದಾಡಿ, ಅವರು ನಿಸರ್ಗದ ಕರೆಗೆ ಹೋದಾಗ, ಅವರ ಗೇಟಿನಲ್ಲಿ ಪತ್ರ ಬೀಸಾಕಿ ಓಡಿಬರುತ್ತಿದ್ದ. ನಿರ್ಮಲ ಕುಮಾರ ಕಮಲಾಳ ಬಗ್ಗೆ ಆಸಕ್ತಿ ತಳೆದಾದ ಮೇಲೆ ಪರಿಸ್ಥಿತಿ ಬಹಳ ಬದಲಾಯಿತು. ಅವನೇ ಪತ್ರಗಳ ವಿಲೇವಾರಿಗೆ ಸ್ವಯಂ ಪ್ರೇರಣೆಯಿಂದ ತಯಾರಾಗುತ್ತಿದ್ದ. ಅವನೂ ಮೂರು-ನಾಲ್ಕು ಸಲ ಅವರ ಮನೆ ಮುಂದೆ ಸುಳಿದಾಡಿ, ಅಂಕಲ್ಲು ಸನಿಹದಲ್ಲಿಲ್ಲ ಎಂದು ಖಾತರಿ ಮಾಡಿಕೊಂಡು ಅವರ ಮನೆಯ ಬಾಗಿಲು ಬಡಿದು, ಪತ್ರ ಕೊಟ್ಟು ಬರುತ್ತಿದ್ದ. ಕೆಲಸಲ ಕಮಲಮುಖಿಯ ಮುಖದರ್ಶನವಾದರೆ, ಬಹಳ ಸಲ ಹಳೆ ಹುಲಿಯೇ ಬಾಗಿಲು ತೆಗೆದು ನಿರ್ಮಲ ಕುಮಾರನನ್ನು ಹಿಡಿದುಕೊಂಡು ಬೆಂಗಳೂರಿನ ದರಿದ್ರ ರಸ್ತೆಗಳ ಕುರಿತೋ, ಭ್ರಷ್ಟ ರಾಜಕಾರಣಿಗಳ ನಿರ್ಲಜ್ಜತನದ ಬಗ್ಗೆಯೋ ನಿರರ್ಗಳವಾಗಿ ಅರ್ಧ ಗಂಟೆ ಕೊರೆದು ಕಳುಹಿಸಿರುತ್ತಿತ್ತು.

ಅಷ್ಟೆಲ್ಲಾ ಕಷ್ಟ ಪಟ್ಟದ್ದಕ್ಕೆ ಕಮಲಾ ರಸ್ತೆಯಲ್ಲಿ ಭೇಟಿಯಾದರೆ ನಿರ್ಮಲ ಕುಮಾರನಿಗೆ ಮುಗುಳು ನಗೆ ಬೀರುವಷ್ಟು ಸನಿಹವಾಗಿದ್ದಳು. ಅದೊಂದು ದಿನ ನಿರ್ಮಲ್ ಕುಮಾರ ರೂಮಿಗೆ ಬಂದು "ಈ ವಾರಾಂತ್ಯದ ವಿಶೇಷ 'ಆಪರೇಷನ್ ಕಮಲ - ಭಾಗ ಒಂದು', ಮುಖ್ಯ ಪಾತ್ರದಲ್ಲಿ ಸ್ಟೈಲ್ ಕಿಂಗ್ ನಿರ್ಮಲ ಕುಮಾರ್" ಎಂದು ನಾಟಕೀಯವಾಗಿ ಹೇಳಿ, "ನಿರ್ದೇಶನ ಮಾಸ್ಟರ್ ಸ್ಟ್ರ್ಯಾಟಜಿಸ್ಟ್ ವಿನಾಯಕರದು, ಮತ್ತು ಸಾಹಿತ್ಯ ಕವಿರತ್ನ ಕಾಳಿದಾಸನ ಅಪರಾವತಾರವಾದ ತಮ್ಮದು" ಎಂದು ನನಗೆ ಪ್ರೇಮಪತ್ರ ಬರೆಯುವ ಜವಾಬ್ದಾರಿಯನ್ನು ಹೊರಿಸಿದ. ವಿನಾಯಕ ಮತ್ತು ನಿರ್ಮಲ ಕುಮಾರ, ಶನಿವಾರ ಕಮಲಾ ಕಾಲೇಜು ಮುಗಿಸಿ ಬರುವಾಗ ಅವಳನ್ನು ಎಲ್ಲಿ ಭೇಟಿಯಾಗಬೇಕು? ಅವತ್ತು ಯಾವ ಬಟ್ಟೆ ಹಾಕಿಕೊಂಡಿರಬೇಕು? ಅವಳಿಗೆ ಗಿಫ್ಟು ಏನು ಕೊಂಡುಕೊಳ್ಳಬೇಕು? ಎಲ್ಲಿ ಕೊಂಡುಕೊಳ್ಳಬೇಕು? ಅವಳು 'ಹ್ಞೂಂ' ಅಂದರೇನು ಮಾಡಬೇಕು? 'ಊಹ್ಞೂಂ' ಅಂದರೇನು ಮಾಡಬೇಕು? ಇತ್ಯಾದಿ ಎಲ್ಲ ವಿಷಯಗಳನ್ನು ಚರ್ಚಿಸಿ, ನಿರ್ಧರಿಸಿದರು. ನಾನು ಕೆಲ ವರುಷಗಳಿಂದ ನನ್ನ ಹುಡುಗಿಗೆ ಬರೆದ ಪತ್ರಗಳ ಸಾಲುಗಳನ್ನು ನೆನಪಿಸಿಕೊಳ್ಳುತ್ತಾ, ಆಕರ್ಷಕ ಪತ್ರ ಬರೆದು ಕೊಟ್ಟೆ.

ಶನಿವಾರ ಮೊದಲು ಹನುಮಂತ ದೇವರ ಗುಡಿಗೆ ಹೋಗಿ ನಮಸ್ಕಾರ ಮಾಡಿ, ನಿರ್ಮಲ್ ಕುಮಾರ ಆಪರೇಷನ್ ಕಮಲ - ಭಾಗ ಒಂದಕ್ಕೆ ಹೊರಟ. ಹತ್ತನೇ ಈಯತ್ತೆ ಪರೀಕ್ಷೆಗೆ ಮಗನನ್ನು ಕಳುಹಿಸುವಾಗ ಅಪ್ಪ-ಅಮ್ಮ "ಪೆನ್ನು ಇಟ್ಕೋಂಡಿದಿಯಾ? ಸ್ಕೇಲೂ? ಹಾಲ್ ಟಿಕಿಟು ತೆಗೆದುಕೊಂಡಿದಿಯಾ ತಾನೆ?" ಎಂದು ಕೇಳುವಂತೆ, ನಾವಿಬ್ಬರೂ ನಿರ್ಮಲ್ ಕುಮಾರನಿಗೆ "ಲವ್ ಲೆಟರ್ ತೆಗೆದುಕೊಂಡಿದಿಯಾ? ಗಿಫ್ಟಿನ ಚೀಲ ಜೋಪಾನ" ಇತ್ಯಾದಿ ಹೇಳಿ ಕಳುಹಿಸಿ, ಮನೆಗೆ ಬಂದೆವು. ಮನೆಗೆ ಬಂದ್ರೂ ನಮಗೆ ಟೆನ್ಶನ್, ಥೇಟ್ ಎಸ್ಸೆಸ್ಸೆಲ್ಸಿ ಹುಡುಗನ ಪಾಲಕರಂತೆ! ಮಧ್ಯಾಹ್ನ ಮನೆಗೆ ಬಂದ ನಿರ್ಮಲ ಕುಮಾರ ಅಪರೇಷನ್ ಯಶಸ್ವಿಯಾದ ಸಿಹಿ ಸುದ್ದಿ ಹೇಳಿ, ನಮ್ಮನ್ನು ಕರೆದೊಯ್ದು ಪಾರ್ಟಿ ಕೊಟ್ಟ.

ಮುಂದೆ ನಿರ್ಮಲ ಕುಮಾರ - ಕಮಲರ ಪ್ರಕರಣ ವೇಗ ಪಡೆದುಕೊಂಡಿತು. ದಿನವೂ ಸಾಯಂಕಾಲ ನಿರ್ಮಲ ಕುಮಾರ ನಮ್ಮ ಬಾಲ್ಕನಿಯಲ್ಲಿ ನಿಂತಿರುತ್ತಿದ್ದ, ಕಮಲಾ ತಮ್ಮ ಮನೆಯ ಬಾಲ್ಕನಿಯಲ್ಲಿ. ಮೋಬೈಲಿನಲ್ಲಿ ಗಂಟೆಗಟ್ಟಲೇ ಪಿಸುಪಿಸು ಮಾತು-ನಗು- ಪಿಸುಪಿಸು ಮಾತು-ನಗು. ಆಮೇಲೆ ಮಲಗುವ ಸಮಯಕ್ಕೆ ಮೊದಲು ಒಂದರ್ಧ ಗಂಟೆ ಎಸ್ಸೆಮೆಸ್ಸುಗಳು ಮೇಘದೂತಗಳಾಗಿ ಪ್ರೇಮಿಗಳ ನಡುವೆ ಹರಿದಾಡುತ್ತಿದ್ದವು. ನಿರ್ಮಲ ಕುಮಾರ ಉಳಿದೆಡೆ ಫ್ಲರ್ಟ್ ಮಾಡುವುದನ್ನು ಬಿಟ್ಟು, ಏಕ-ಪ್ರೇಯಸಿ-ವೃತಸ್ಥನಾಗಿದ್ದ.

ಒಂದು ದಿನ ರಾತ್ರಿ ನಿರ್ಮಲ ಕುಮಾರನ ಮೋಬೈಲಿಗೆ ಅಪರಿಚಿತ ನಂಬರಿನ ಒಂದು ಫೋನು ಬಂತು. ಆಚೆ ಬದಿಯಿಂದ ಒಂದು ಒರಟು ಧ್ವನಿ ನಿರ್ಮಲ ಕುಮಾರನಿಗೆ ಸಿಕ್ಕಾ ಪಟ್ಟೆ ಬೈಯಲು ಶುರು ಮಾಡಿತು. ನಿದ್ದೆಗಣ್ಣಿನಲ್ಲಿದ್ದ ನಿರ್ಮಲ ಕುಮಾರ ಫೋನು ಕಟ್ ಮಾಡಿ, ಫೋನು ಬಂದು ಮಾಡಿ ಮಲಗಿದ. ಮರುದಿನ ಕಮಲಾ ಫೋನು ಮಾಡಿದಾಗ ತಿಳಿದದ್ದೇನಂದರೆ, ಆ ಫೋನು ಮಾಡಿದ್ದು ಜಗ್ಗ. ಜಗ್ಗ ಕಮಲಾಳ ಸೋದರಮಾವನ ಮಗ. ಕಮಲಾಳನ್ನು ಅವನಿಗೆ ಮದುವೆ ಮಾಡಿಕೊಡುವ ಬಗ್ಗೆ ಮಾತುಕತೆಗಳು ನಡೆದಿದ್ದವು. ಕಮಲಳ ಬಗ್ಗೆ ಅವನಿಗೆ ಮೊದಲಿನಿಂದಲೂ ಸ್ವಲ್ಪ ಪೊಸೆಸ್ಸಿವ್ ಭಾವನೆ. ಆರಾಧ್ಯರ ಮನೆಗೆ ಬಂದಾಗ, ಜಗ್ಗ ಕಮಲಾಳ ಮೋಬೈಲು ತೆಗೆದುಕೊಂಡಿದ್ದಾನೆ. ಅದರಲ್ಲಿ ನಿರ್ಮಲ ಕುಮಾರ ಕಳುಹಿಸಿದ, ಕಮಲ ಅಳಿಸದೇ ಬಿಟ್ಟ ಎಸ್ಸೆಮ್ಮೆಸ್ಸೊಂದನ್ನು ಓದಿದ್ದಾನೆ. ಅದನ್ನು ಕಳುಹಿಸಿದ್ದು ಯಾರೆಂದು ಕಮಲಾಳನ್ನು ಕೇಳಿದ್ದಾನೆ. ಕಮಲಾ ಯಾರದೋ ಮಿಸ್ಟಿಕಿನಿಂದ ಬಂದ ಮೆಸೇಜು ಎಂದು ಅವನಿಗೆ ಸಮಾಧಾನ ಮಾಡಿದ್ದಾಳೆ. ಆದರೂ ಜಗ್ಗ ಆ ನಂಬರನ್ನು ಬರೆದುಕೊಂಡು, ರಾತ್ರಿ ಎಣ್ಣೆ ಹೊಡದು ಅದಕ್ಕೆ ಫೋನು ಮಾಡಿದ್ದಾನೆ.

ಇದಷ್ಟಲ್ಲದೇ ಕಮಲ ಅವನ ಬಗ್ಗೆ ಎಚ್ಚರಿಕೆಯನ್ನೂ ಹೇಳಿದ್ದಳು. ಜಗ್ಗನಿಗೆ ಹೀಗೆ ಅಂತ ಉದ್ಯೋಗ ಇಲ್ಲ. ಆದ್ದರಿಂದ ಪೋಲಿ ಅಲೆದುಕೊಂಡಿರ್ತಾನೆ. ಅವನಿಗೆ ಭೂಗತಜೀವಿಗಳ ಸಂಪರ್ಕವಿದೆ. ಅವನಿಗೆ ಅಫೇರಿನ ಬಗ್ಗೆ ಗೊತ್ತಾದರೆ ನಿರ್ಮಲ ಕುಮಾರನ ಜೀವ ತೆಗೆಯುವದಕ್ಕೂ ಹೇಸುವವನಲ್ಲ, ಆದ್ದರಿಂದ ಸ್ವಲ್ಪ ಹುಶಾರಿನಿಂದ ಇರಬೇಕು ಎನ್ನುವುದು ಆಕೆಯ ಎಚ್ಚರಿಕೆಯ ಮಾತು. ರಣಧೀರ ರವಿಚಂದ್ರನ್ "ಪ್ರೀತಿ ಮಾಡಬಾರದು, ಮಾಡಿದರೆ ಜಗಕೆ ಹೆದರಬಾರದು" ಎಂದು ಹೇಳಿದಾರೆಯೇ ಹೊರತು ಜಗ್ಗನಿಗೆ ಹೆದರಬಾರ್ದು ಅಂತ ಹೇಳಿಲ್ಲ ಎಂದು ನಾವು ನಿರ್ಮಲನಿಗೆ ಬುದ್ಧಿ ಹೇಳಿದೆವು. ಅದರಂತೆ ಮೊದಲು ನಿರ್ಮಲಕುಮಾರ ಹಳೇ ಸಿಮ್‌ನ್ನು ಬೀಸಾಕಿ ಹೊಸ ಸಿಮ್ ಕೊಂಡು ತಂದು ಫೋನು ನಂಬರನ್ನು ಬದಲಿಸಿದ. ಎಸ್ಸೆಮ್ಮೆಸ್ಸುಗಳು ಪೂರ್ತಿ ನಿಂತೇ ಹೋದವಾದರೂ, ಫೋನಿನಲ್ಲಿ ಮಾತುಕತೆ ಮುಂದುವರಿದಿತ್ತು.

***

ಅದೇ ಆಗ ಬೇಸಿಗೆ ಶುರುವಾಗಿತ್ತು. ನಿರ್ಮಲ ಕುಮಾರ - ಕಮಲರ ಪಿಸುಪಿಸು ಮಾತು-ನಗು ಬಹಳ ಕಡಿಮಯಾಗಿದ್ದವು. ಆಗಾಗ ಆ ಕಡೆಯಿಂದ ಮುಸುಮುಸು ಅಳು, ಈ ಕಡೆಯಿಂದ ಸಮಾಧಾನದ ಮಾತು ಕೇಳಿ ಬರ್ತಾ ಇದ್ದವು. ಹುಡುಗಿಯ ಪರೀಕ್ಷೆ ಹತ್ತಿರ ಬಂದಿದ್ದಕ್ಕೆ ಟೆನ್ಷನ್ ಆಗಿದೆ ಎಂದು ನಾನು-ವಿನಾಯಕ ಅಂದುಕೊಂಡಿದ್ದೆವು. ಆದರೆ ಪರೀಕ್ಷೆ ಬಗ್ಗೆ ಇಬ್ಬರಿಗೂ ಯಾವ ಚಿಂತೆ ಇರಲಿಲ್ಲ - ಡುಮ್ಕಿ ಹೊಡೆಯೋದು ಗ್ಯಾರಂಟಿನೇ ಇತ್ತು. ಪರೀಕ್ಷೆ ಮುಗಿದ ನಂತರ ಮೇ ಒಂದಕ್ಕೆ ಕಮಲಾ-ಜಗ್ಗರ ಮದುವೆಯನ್ನು ಮಾಡುವುದೆಂದು ಅವರ ಮನೆಯಲ್ಲಿ ನಿಶ್ಚಯವಾಗಿ, ಅದಕ್ಕಾಗಿ ನಿರ್ಮಲ ಕುಮಾರ - ಕಮಲ ಇಬ್ಬರಿಗೂ ಟೆನ್ಷನ್ ಆಗಿತ್ತು.

ವಿಷಯ ತಿಳಿದು ನನಗೂ, ವಿನಾಯಕನಿಗೂ ಟೆನ್ಷನ್ ಆಯಿತು. ಈಗ ಸ್ವಲ್ಪ ಯಾಮಾರಿದರೂ ಆಪರೇಷನ್ ಕಮಲ ಗೋತಾ ಹೊಡೆಯುತ್ತೆ ಅಂದು ಕೊಂಡೆವು. ಮಾಸ್ಟರ್ ಸ್ಟ್ರ್ಯಾಟಜಿಸ್ಟ್ ವಿನಾಯಕ ಒಂದು ಸ್ಕೀಮು ಸೂಚಿಸಿದ. ಅದರ ಪ್ರಕಾರ ನಿರ್ಮಲ ಕುಮಾರ ಕ್ಲಯಂಟ್ ದೆಹಲಿಯಲ್ಲಿಯೋ, ಬಾಂಬೆಯಲ್ಲಿಯೋ ಇರೋ ಪ್ರಾಜೆಕ್ಟಿಗೆ ವರ್ಗಮಾಡಿಸಿಕೊಂಡು, ಅಲ್ಲಿಗೆ ಹೋಗುವಾಗ ಕಮಲಳನ್ನು ಕರೆದುಕೊಂಡು ಹೋಗುವುದು, ಮೂರ್ನಾಲ್ಕು ತಿಂಗಳು ಅಲ್ಲಿರುವುದು. ಮುಂದೆ ಪರಿಸ್ಥಿತಿ ನೋಡಿಕೊಂಡು ವಾಪಸು ಬರುವುದು. ದಿಲ್ಲಿಗೋ ಬಾಂಬೆಗೋ ಹೋಗುವವರೆಗೆ ಈ ವಿಷಯವನ್ನು ಗುಟ್ಟಾಗಿಯೇ ಇಡುವುದು. ಅದರಂತೆ ನಿರ್ಮಲ ಕುಮಾರ ಆಫೀಸಿನಲ್ಲಿ ಹತ್ತು ಮಂದಿಗೆ ಭೇಟಿಯಾಗಿ ದೆಹಲಿಯಲ್ಲಿ ಕ್ಲಯಂಟ್ ಇರುವ ಪ್ರಾಜೆಕ್ಟಿಗೆ ವರ್ಗವನ್ನೇನೋ ಮಾಡಿಸಿಕೊಂಡ. ಆದರೆ ಅವನ ಈಗಿನ ಮ್ಯಾನೇಜರು ಎಪ್ರಿಲ್ ಮೂವತ್ತಕ್ಕಿಂತ ಮೊದಲು ಅವನನ್ನು ಬಿಟ್ಟು ಕೊಡಲು ಸಾಧ್ಯವೇ ಇಲ್ಲ ಎಂದು ಹೇಳಿದ. ಇದರಿಂದಾಗಿ ಆಪರೇಷನ್ ಕಮಲದ ಕೊನೆಯ ಭಾಗ ದಿ ಗ್ರೇಟ್ ಎಸ್ಕೇಪ್ ಮೇ ಒಂದರ ಬೆಳಿಗ್ಗೆ, ಅಂದರೆ ಕಮಲಾ-ಜಗ್ಗರ ಮದುವೆಯ ದಿನದ ಬೆಳಿಗ್ಗೆ ಎಂದು ನಿರ್ಧಾರವಾಯಿತು. ಅದರ ಪ್ರಕಾರ ನಿರ್ಮಲ ಕುಮಾರ ತನ್ನ ಜೊತೆಗೆ ಕಮಲಳಿಗೂ ಮೇ ಒಂದರ ಬೆಳಿಗ್ಗೆ ಐದು ಗಂಟೆಗೆ ಬೆಂಗಳೂರಿನಿಂದ ದೆಹಲಿಗೆ ಹೋಗುವ ಕಿಂಗ್‌ಫಿಷರ್ ವಿಮಾನದ ಟಿಕೀಟು ಬುಕ್ ಮಾಡಿಸಿದ. ದೆಹಲಿಯಲ್ಲಿ ಇರಲು ಹೋಟಲು, ವಿಮಾನ ನಿಲ್ದಾಣದಿಂದ ಹೋಟಲಿಗೆ ಹೋಗಲು ಟ್ಯಾಕ್ಸಿ ಎಲ್ಲಾ ಬುಕ್ ಮಾಡಿಸಿದ.

ಎಪ್ರಿಲ್ ಮೂವತ್ತರ ಸಂಜೆ ನಮಗೆ ನಿರ್ಮಲ ಕುಮಾರ ಬ್ಯಾಚಲರ್ ಪಾರ್ಟಿ ಕೊಡಲು ಒಂದು ಒಳ್ಳೆಯ ಹೋಟಲ್ಲಿಗೆ ಕರೆದುಕೊಂಡು ಹೋದ. ನಿರ್ಮಲ ಕುಮಾರನ ಆಪರೇಷನ್ ಕಮಲದ ಬಗ್ಗೆ ನಮಗೆ ಏನೋ ಸಾಹಸ ಮಾಡುತ್ತಿದ್ದೆವೆಂಬ ಎಕ್ಸೈಟ್‌ಮೆಂಟ್ ಇದ್ದರೂ, ಸುಮಾರು ದಿನಗಳಿಂದ ನಮ್ಮ ಜೊತೆಗೆ ಇದ್ದ ನಿರ್ಮಲ ಕುಮಾರ, ನಮ್ಮನ್ನು ಬಿಟ್ಟು ಹೋಗುತ್ತಿರುವುದಕ್ಕೆ ಬೇಸರವೂ ಇತ್ತು. ತೀರ್ಥ ಒಳ ಹೋದಂತೆಲ್ಲ ಮನಸಿನಲ್ಲಿದ್ದ ಭಾವನೆಗಳು ಮಾತಾಗಿ ಹರಿಯತೊಡಗಿದವು. ನಿರ್ಮಲ ಕುಮಾರನಿಗೆ ತಂದೆ-ತಾಯಿಯರಿಗೆ ಹೇಳದೇ, ಹೀಗೆ ಓಡಿ ಹೋಗಿ ಮದುವೆಯಾಗುತ್ತಿರುವ ಬಗ್ಗೆ ಅಪರಾಧಿ ಭಾವ ಕಾಡುತ್ತಾ ಇತ್ತು. ಅದಕ್ಕೆ ವಾಪಸು ಬಂದು ಅಪ್ಪಾ-ಅಮ್ಮಗೆ ಎಲ್ಲಾ ವಿಷಯ ಹೇಳಿಯೇ, ನಾನು ಫಸ್ಟ್ ನೈಟು ಮಾಡಿಕೊಳ್ಳುವುದು ಎಂದು ಭೀಷ್ಮ ಪ್ರತಿಜ್ಞೆಯನ್ನು ಕೈಯಲ್ಲಿನ ಗ್ಲಾಸಿನ ಮೇಲೆ ಆಣೆ ಮಾಡಿ ಹೇಳಿದ. ವಿನಾಯಕ ಅದಕ್ಕೆ ನಿನ್ನ ಪ್ರತಿಜ್ಞೆ ಈಡೇರುವಲ್ಲಿ ಯಾವುದೇ ಸಂಶಯವಿಲ್ಲ, ದೆಹಲಿಯ ಬಿಸಿಲಿನ ಝಳದಲ್ಲಿ ನಿನಗೆ ಫಸ್ಟ್ ನೈಟು ಮಾಡಿಕೊಳ್ಳೋಕೆ ಸಾಧ್ಯವೇ ಇಲ್ಲ. ಎಂದು ನಗೆಯಾಡಿದ. ಅಂದು ಮಧ್ಯರಾತ್ರಿಯವರೆಗೆ ತೀರ್ಥಸೇವನೆ, ಅದರ ಜೊತೆಗೆ ನಾವು ಜೊತೆಗೆ ಕಳೆದ ಮಧುರ ಕ್ಷಣಗಳ ಉಜಳಣೆ ನಡೆದೇ ಇತ್ತು.

***

ಜೋರಾಗಿ ಹೊಡೆದು ಕೊಳ್ಳುತ್ತಿದ್ದ ನಿರ್ಮಲ ಕುಮಾರನ ಮೋಬೈಲಿನ ಸದ್ದಿಗೆ ನನಗೆ ಎಚ್ಚರವಾಯಿತು. ಅದಾಗಲೇ ಬೆಳಗಾಗಿ ಎಷ್ಟೋ ಹೊತ್ತಾಗಿತ್ತು. ಮೋಬೈಲು ಎತ್ತಿಕೊಂಡರೆ ಆ ಕಡೆಯಿಂದ ಸಾಬ್, ನಾನು ಟ್ಯಾಕ್ಸಿ ಡ್ರೈವರು. ಗೇಟ್ ನಂಬರು ಮೂರರ ಹತ್ತಿರ ಕಾಯ್ತಾ ಇದೇನೆ ಎಂದು ಹೇಳಿತು. ಕಾಲ್ ಕಟ್ ಮಾಡಿನೋಡಿದರೆ, ನಿರ್ಮಲ ಕುಮಾರನ ಮೋಬೈಲಿನಲ್ಲಿ ಹದಿನೈದು ಮಿಸ್ ಕಾಲ್ಗಳಿವೆ ಕಮಲಳಿಂದ ಹತ್ತು, ಇನ್ನ್ಯಾವುದೋ ನಂಬರಿನಿಂದ ಐದು. ಪಕ್ಕದಲ್ಲಿ ನೋಡಿದರೆ ನಿರ್ಮಲ ಕುಮಾರ ಇನ್ನೂ ಹಾಯಾಗಿ ಗೊರಕೆ ಹೊಡೆಯುತ್ತಾ ಇದ್ದ. ಹೊರಗೆ ಬಾಲ್ಕನಿಯಲ್ಲಿ ಬಂದು ನೋಡಿದರೆ ಆರಾಧ್ಯ ಅಂಕಲ್ ಮನೆ ಮುಂದೆ ಚಪ್ಪರದಲ್ಲಾಗಲೇ ಜನ ಜಮಾಯಿಸಿದ್ದಾರೆ, ನವ ವಧು-ವರರಾದ ಕಮಲ ಮತ್ತು ಜಗ್ಗ ಆರಾಧ್ಯ ಅಂಕಲ್ ಮತ್ತು ಆಂಟಿಯ ಕಾಲಿಗೆ ನಮಸ್ಕರಿಸುತ್ತಿದ್ದಾರೆ!

ಟಿಪ್ಪಣಿ : ಈ ಬರಹವನ್ನು ಬರೆದಿದ್ದು ಸುಮಾರು ದಿನಗಳ ಹಿಂದೆ. ಆವಾಗ ಇನ್ನೂ ರಾಜಕೀಯದಲ್ಲಿ 'ಆಪರೇಶನ್ ಕಮಲ'ವೆಂಬ ಕೆಸರಾಟ / ಕೆಸರುಮಾರಾಟ ಶುರುವಾಗಿರಲಿಲ್ಲ. ಆದ್ದರಿಂದ ಈ ಬರಹದ ಹೆಡ್ಡಿಂಗ್‌ನಲ್ಲಿ 'ಆಪರೇಶನ್ ಕಮಲ'ವೆಂದು ಸೇರಿಸಿಕೊಳ್ಳಲು ನನಗೆ ತುಸುವೂ ಮುಜುಗರವಾಗಿರಲಿಲ್ಲ.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more