ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೌರವರು ಪಾಂಡವರಿಗೆ ರಾಜ್ಯ ಕೊಡಲ್ಲ ಅಂದ್ರಂತೆ!

|
Google Oneindia Kannada News

Vijay Shetty, Hyderabad
ಕೌರವರ ಅರಮನೆಯಿಂದ ಹೊರಗೆ ಕಂಡ ಸಂಜಯನನ್ನ ಬ್ರೇಕಿಂಗ್ ನ್ಯೂಸ್ ಟೀವೀ ವರದಿಗಾರ್ತಿ ಫಕ್ಕನೆ ಹಿಡ್ಕೊಂಬಿಟ್ಳು. " ಸಾರ್ ಸಾರ್ .. ವಿಷ್ಯ ಏನು ಹೇಳಿ ಸಾರ್.. ಕೌರವರು ಪಾಂಡವರಿಗೆ ರಾಜ್ಯ ಕೊಡಲ್ಲ ಅಂದ್ರಂತೆ.."

ಸಂಜಯ, "ನೋಡ್ರೀ ಇನ್ನೂ ವಿಷ್ಯದ ಬಗ್ಗೆ ಚರ್ಚೆ ನಡಿತಿದೆ.. ಈಗ್ಲೆ ಊಹಾಪೋಹ ನಡೆಸೋದು ಒಳ್ಳೆದಲ್ಲ.."

ವರದಿಗಾರ್ತಿ, " ಸಾರ್ ಅತ್ತ ಕೌರವರು ಪಾಂಡವರ ಜತೆ ಮಾತಾಡ್ತಿಲ್ಲ, ಯಾವುದೇ ಸಮಾರಂಭಕ್ಕೂ ಜೊತೆಯಾಗಿ ಕಾಣಿಸ್ಕೊಳ್ತಿಲ್ಲ.. ಈ ಕಡೆ, ಧರ್ಮರಾಜ, ನೂರೈವರಾವಲ್ಲವೇ ಅಂತ ರಾಗ ಹಾಡ್ತಾವ್ರೆ.. ಏನ್ ವಿಷ್ಯ? ನಾಡಿನ ಜನತೆಗೆ ಪೂರ್ತಿ ಮಾಹಿತಿ ಬೇಕು ಸಾರ್.."

ಸಂಜಯ "ನೋಡ್ರೀ, ಈಗಾಗಲೆ ವಿಷ್ಯ ಹೈಕ್ಮಾಂಡ್ ಧೃತರಾಷ್ಟ್ರ ಅವರ ಮುಂದಿದೆ.. ಕಾದು ನೋಡಿ.."

ವರದಿಗಾರ್ತಿ ಕೂಡಲೇ "ಸಾರ್ ನಮ್ಗೆ ಬಂದಿರೋ ಮಾಹಿತಿ ಪ್ರಕಾರ, ಪಾಂಡವರ ಬದಿಗೆ ಕೃಷ್ಣ ಇರೋದು ಕೌರವರಿಗೆ ಇಷ್ಟ ಇಲ್ಲ. ಮತ್ತೆ, ಇವೆಲ್ಲದರ ಹಿಂದೆ ಅಂದ್ರೆ ಕೌರವ ಪಾಂಡವರ ಜಗಳದ ಹಿಂದೆ ರಾಜ್ಯಸಭಾ ಸದಸ್ಯ ಸಲಹೆಕಾರ ಶಕುನಿ ಅವರ ಪಾತ್ರ ಬಹಳಷ್ಟಿದೆ ಅಂತ ಕೇಳಿ ಬರ್ತಿದೆಯಲ್ಲ.."

ಸಂಜಯ "ಅಯ್ಯೋ ನಂಗೊತ್ತಿಲ್ಲ ಹೋಗ್ರಿ.."

ಇತ್ತ ನ್ಯೂಸ್ ಚ್ಯಾನೆಲ್ ನಲ್ಲಿ ಮತ್ತೊಂದು ಬ್ರೇಕಿಂಗ್ ನ್ಯೂಸ್.. "ಈದೀಗ ಬಂದ ಸುದ್ದಿ.. ನಮ್ಮ ಕುರು ರಾಜ್ಯದ ಬಾತ್ಮೀದಾರ ಕಪೀಶ ಅವರಿದ್ದಾರೆ.. ಹೆಲೋ ಕಪೀಶ್, ಏನ್ ನಡಿತಿದೆ ಅಲ್ಲಿ.."

"ಹೆಲೋ ವರದ, ಇದೀಗ ನಮಗೆ ಕಂಡುಬಂದ ದೃಶ್ಯ ಅಂದ್ರೆ, ಧರ್ಮರಾಜನ ಹಿತೈಷಿಗಳಾದಂತಹ ದ್ರೋಣ, ಕೃಪ ಅಷ್ಟೇ ಏಕೆ ಭೀಷ್ಮರು ಕೂಡ ಕೌರವರ ಜೊತೆಲಿದಾರೆ.. ಅವ್ರೆಲ್ಲಾ ಬೆಳಗ್ಗೆಯೇ ಕೌರವರ ರಥದಲ್ಲಿ ಕುಳಿತು ದೂರದ ಆಶ್ರಮವೊಂದಕ್ಕೆ ತೆರಳಿದರು ಎಂಬುದು ಖಚಿತವಾಗಿದೆ.. ವರದ, ಇನ್ನೂ ಪೂರ್ತಿ ವರದಿಗಾಗಿ ಕಾಯ್ತಿದ್ದೀವಿ.. ನಾನು ಕಪೀಶ್ , ಕ್ಯಾಮರಮನ್ ಜೊತೆ.."

"ತುಂಬಾ ದೊಡ್ಡ ಬ್ರೇಕಿಂಗ್ ನ್ಯೂಸ್ ಅದು.. ನಿರಂತರ ಕೊರೆತಕ್ಕಾಗಿ ನೋಡ್ತಾ ಇರಿ.. ನಮ್ಮ ಚ್ಯಾನೆಲ್.. ಮಹಾಭಾರತದಲ್ಲಿ ಭಿನ್ನಮತ... ಈಗ ಒಂದು ಚಿಕ್ಕ ಬ್ರೇಕ್ ನ ಜೊತೆ..."

......ಬ್ರೇಕ್ ..

ಮನುಷ್ಯ ಸಂಘಜೀವಿ ಆಗಿರೋದ್ರಿಂದಲೇ ರಾಜಕೀಯ ಬಂದಿರೋದು. ರಾಜಕೀಯ ಇರೋದ್ರಿಂದಲೇ ಭಿನ್ನಮತ ಬಂದಿರೋದು ಎಂದು ಯಾರೋ ರಾಜಕೀಯ ಪಿತಾಮಹರು ಅಪ್ಪಣೆ ಕೊಡಿಸಿದಾರೆ. ಇದೀಗ ನೋಡಿ. ಬಿಜೆಪಿ ಸರಕಾರದಲ್ಲೂ ಭಿನ್ನಮತ ಕಾಣಿಸ್ಕೊಂಡಿದೆ. ಇದ್ರಲ್ಲಿ ಜನ (ಜನಾರ್ಧನರೆಡ್ಡಿ ಆಸಕ್ತಿ ಇರಬಹುದು) ಹಿತಾಸಕ್ತಿಯಂತೂ ಖಂಡಿತ ಇಲ್ಲ. ಈ ವಿಷ್ಯದಲ್ಲಿ ಕೊಂಚ ವಸ್ತುಸ್ತಿತಿಯನ್ನ ಪರೀಶೀಲಿಸೋಣ.

ಬಿಜೆಪಿಗೆ ಬಹುಮತ ಬರೋದ್ರಲ್ಲಿ ಗಣಿ ರೆಡ್ಡಿಗಳ ಹಣಬಲದ ಪಾತ್ರ ತುಂಬಾನೇ. ಸರಿ, ಸರಕಾರ ಬಂತು. 40 ವರ್ಷ ವಿರೋಧ ಪಕ್ಷದಲ್ಲಿದ್ದ ಯಡಿಯೂರಪ್ಪ, ಮುಖ್ಯಮಂತ್ರಿಯಾಗಿ ಒಳ್ಳೆಯ ಆದಳಿತ ನಡೆಸೋ ಗುರಿ ಇಟ್ಕೊಂಡಿದ್ದದ್ದು ಸುಸ್ಪಷ್ಟ. ಯಾಕಂದ್ರೆ ಜನ ಕಾಂಗ್ರೆಸ್ಸಿಗೆ 50 ವರ್ಷ ಚಾನ್ಸ್ ಕೊಡ್ತಾರೆ, ಆದ್ರೆ ಬಿಜೆಪಿಗೆ ಒಂದೇ ಚಾನ್ಸ್. 5 ವರ್ಷದಲ್ಲಿ ರಾಮ ಮತ್ತೆ ಹುಟ್ಟಿ ಬಂದನೋ ಸರಿ, ಇಲ್ಲಾಂದ್ರೆ, ಬಿಜೆಪಿಗೆ ವೋಟ್ ಹಾಕಲ್ಲ.

ಸರಿ, ಇತ್ತ ಗಣಿ ರೆಡ್ಡಿಗಳ ಇನ್‌ವೆಸ್ಟ್‌ಮೆಂಟ್ ವಾಪಸ್ ಬರ್ಲಿಲ್ಲ, ಸರಕಾರವನ್ನೇ ತೊಗಲುಬೊಂಬೆಯಂತೆ ಆಡಿಸೊ ಇರಾದೆಗೆ ಧಕ್ಕೆ ಬಂದಾಗ ಎಚ್ಚೆತ್ತುಕೊಂಡು ನಡೆಸಿದ ಕಿತಾಪತಿನೇ ಈ ಭಿನ್ನಮತ. ಅಷ್ಟೇನಾ..? ಅಲ್ಲ.... ಸಾಲದ್ದಕ್ಕೆ, ಈಯಪ್ಪ ಯಡಿಯೂರಪ್ಪ, ಉಳಿದ ಮಂತ್ರಿಗಳನ್ನ, ಶಾಸಕರನ್ನ ಮತ್ತು ಪಕ್ಷಕ್ಕಾಗಿ ದುಡಿದವ್ರನ್ನ ಕಡೆಗಣಿಸಿದ್ದು ಉರಿವ ಬೆಂಕಿಗೆ ತುಪ್ಪ ಸುರಿದಂತಾಯ್ತು. ಆದ್ರೆ ಒಂದ್ ವಿಷ್ಯ ತಿಳ್ಕೊಳ್ಳಿ, ವರ್ಗಾವಣೆ ದಂಧೆನಲ್ಲಿ ದುಡ್ಡು ಹೊಡಕೊಂಡೆ ಬಂದಿರೋ, ಕಾಂಗ್ರೆಸ್, ಜನತಾದಳದ ವಲಸಿಗರಿಗೆ, ಯಡಿಯೂರಪ್ಪ ಮತ್ತೆ ಒಬ್ಬ ದಕ್ಷ ಅಧಿಕಾರಿ, ವಿಪಿ ಬಳಿಗಾರ್ ಅವ್ರನ್ನ ಹೈಜಾಕ್ ಮಾಡೋದು ಸುಲಭವಾಗಿರ್‍ಲಿಲ್ಲ. ಅಲ್ಲಿಗೆ ಯಡ್ಡಿಯ ಖೆಡ್ಡ ರೆಡಿ ಆಯ್ತು.

ಇನ್ನೊಂದ್ ವಿಷ್ಯ. ಈ ಗಣಿಗಳಿಗೆ ಹಣ ಎಲ್ಲಿಂದ ಬಂತು? ಕರ್ನಾಟಕದ ಭೂಮಿ ತಾಯಿಯನೇ ಕೊಳ್ಳೆ ಹೊಡೆದದ್ದು ತಾನೆ. ರಾಜಕೀಯ ಬಲದಿಂದ ಅರಣ್ಯ ಸಂಪತ್ತು ಹಾಗೂ ಖನಿಜ ಸಂಪತ್ತು ಲೂಟಿ ಮಾಡಲು ಅನುವು ಕೊಟ್ಟಿದ್ದಾರೆ. ಬನ್ನಿ ಜಸ್ಟ್ ಉತ್ತರಕನ್ನಡದಲ್ಲಿ ನಿಮಗೆ ರೆಡ್ಡಿ ಅಲ್ಲ ಅವ್ರಪ್ಪರಂಥರವರು ಪ್ರತಿ ಊರ ಊರಲ್ಲೂ ತೋರಿಸ್ತೀನಿ. ರೀ ಈ ಬಳ್ಳಾರಿ ರೆಡ್ಡಿಗಳು ಏನ್ ಮಹಾ. ಅವ್ರು ಒಬ್ಬ ಲೂಟಿಕೋರರು. ಅತ್ತ ಆಂಧ್ರದ ಕಾಂಗ್ರೆಸ್ಸನ್ನೇ ಬುಟ್ಟಿ ಹಾಕ್ಕೊಂಡ್ ಆಡ್ತವ್ರೆ ಆಂಧ್ರದ ಮಹಾಭ್ರಷ್ಟ ಜಗನ್ ರೆಡ್ಡಿ ಕೂಡ ಪಾಲುದಾರ.

ಹಾಗೆ ಇನ್ನೊಂದ್ ವಿಷ್ಯ. ಸದ್ಯದ ಸಿಎಂ ಬಿಟ್ರೆ ತೂಗುಗತ್ತಿಯ ಕೆಳಗೆ ನಿಂತಿರೋ ಇನ್ನೊಬ್ಬರು ಶೋಭಾ ಕರಂದ್ಲಾಜೆ. ರೀ ಈಯಮ್ಮನ ಗಮನಿಸಿದ್ದಿರಾ? ತಮ್ಮ ಗ್ರಾಮೀಣಾಭಿವೃದ್ದಿ ಖಾತೆಯ ಪ್ರತಿ ಅಂಕಿಅಂಶಗಳನ್ನೂ ತಲೆಯಲ್ಲಿಟ್ಟಕೊಂಡು, ಜೊತೆಗೆ ಮುಂದಿನ ಅಭಿವೃದ್ದಿ ಯೋಜನೆನ ನಿರ್ದಿಷ್ಟವಾಗಿ ಅರಿತಿರುವ ಉತ್ಸಾಹಿ, ಚುರುಕು ಮಂತ್ರಿ ಆಕೆ. ಕನ್ನಡದ ಒಬ್ಬ ಪ್ರತಿಭಾವಂತ ಮಹಿಳೆ ಮುಂದೊಮ್ಮೆ ಸಿಎಂ ಆದರೂ ಅಚ್ಚರಿಯಿಲ್ಲ. ನಮಗೆ ಅವರ್ಯಾರ ಮನೆ ಕತೆನೂ ಬೇಕಾಗಿಲ್ಲ. ಒಳ್ಳೆಯ ಕೆಲಸಗಾರರು ಇಂದಿನ ಅವಶ್ಯಕತೆ. ಹಾಗೆ ಇನ್ನೊಬ್ಬ ಮಂತ್ರಿ ವಿಎಸ್ ಆಚಾರ್ಯ ಕೂಡ ಶುದ್ಧಹಸ್ತರಂತೆ. ಅವರ ಮಕ್ಕಳು ವರ್ಗಾವಣೆ ದಂಧೆಗೆ ಇಳಿದ್ರೆ ಅವರು ಏನ್ಮಾಡ್ತಾರೇ ಪಾಪ.

ನೋಡಿ ವಿಷ್ಯ ಎಲ್ಲರಿಗೆದುರೆ ಇದೆ. ನಾಡಿನ ಎಲ್ಲ ಮಾಧ್ಯಮಗಳೂ, ಭಿನ್ನಮತದ ಬಗ್ಗೆ ಭಿನ್ನವಾಗಿಲ್ಲ. ಇಬ್ಬರನ್ನೂ ತೆಗಳಿ ಎಲ್ರನ್ನೂ ಕನ್ಫ್ಯೂಸ್ ಮಾಡ್ತಿದ್ದಾರೆ. ಯಾವುದು ಸರಿ, ಯಾವುದು ತಪ್ಪು ಎಂಬ ಯೋಚನೆಯೊಂದಿಗೆ ಯಾರಾದರೊಬ್ಬರಿಗೆ ನೈತಿಕ ಬೆಂಬಲ ಅಗತ್ಯ. ಈ ಕಾಲದ ಅವಶ್ಯಕತೆ ಒಂದು ಸುಭದ್ರ ಸರಕಾರ. ದೋಷ ಕಮ್ಮಿ ಇರಬೇಕು, ಬ್ರಷ್ಟಾಚಾರ ಚೂರು ಚೂರೇ ಕಮ್ಮಿ ಆಗ್ತಾ ಬರ್ಬೇಕು.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X