ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಏನ್ ಸುಬ್ಬು ಸಾರ್ ಹಬ್ಬ ಜೋರಾ?

By * ಯಶ್
|
Google Oneindia Kannada News

Festivals of Karnataka and dilemma of Subbu
"ಏನ್ ಸುಬ್ಬು ಸಾರ್ ಹಬ್ಬ ಜೋರಾ?"

ಯಾರಪ್ಪಾ ಅದು ಅಂತ ಪಕ್ಕಕ್ಕೆ ತಿರುಗಿ ನೋಡಿದ್ರೆ ಮನೆ ಹತ್ರ ಕಿರಾಣಿ ಅಂಗಡಿ ಇಟ್ಕೊಂಡಿರೋ ದಿನೇಸ. ಯಾವುದೇ ಹಬ್ಬ ಇರಲಿ, ಯಾರೇ ಸಿಕ್ಕರೂ ಕೇಳಿ ಬರುವ ಸಾಮಾನ್ಯ ಡೈಲಾಗಿದು. ನನಗಂತೂ ಮೈಯೆಲ್ಲಾ ಉರಿದುಹೋಯಿತು. ಏನ್ ಉತ್ತರ ಕೊಡೋದು ಈ ನನ್ ಮಗನಿಗೆ? ಆದರೂ ಸುಧಾರಿಸಿಕೊಂಡು ಎಲ್ಲಾ ಮಾಮೂಲಿ ಅಂತ ಉತ್ತರ ಕೊಟ್ಟು ಅತ್ತ ಸಾಗ ಹಾಕಿದೆ.

ಅವನಿಗೆ ಉತ್ತರ ನೀಡುವಾಗ ಯಾಂತ್ರಿಕವಾಗಿ ಹಿಗ್ಗಿದ್ದ ಬಾಯಿ ಅವನತ್ತ ಹೋದಕೂಡಲೆ ಮತ್ತೆ ಯಥಾಸ್ಥಾನಕ್ಕೆ ಬಂದಿತು. ಆ ನನ್ ಮಗಾ ಆ ಪ್ರಶ್ನೆ ಕೇಳದಿದ್ದರೇ ಚೆನ್ನಾಗಿತ್ತು ಅಂತ ಅಂದ್ಕೊಂಡೆ.

ಅಲ್ಲಾ, ಕಾಮನ್ ಸೆನ್ಸೇ ಇಲ್ವಾ ಈ ಜನರಿಗೆ? ಈ ಕಷ್ಟಕರ ಕಾಲದಲ್ಲಿ ಹಬ್ಬ ಜೋರಾಗಾರಿರೋದಾದ್ರೂ ಉಂಟಾ? ಜೋರಾಗಿ ಮಾಡಿದವರ ಮೊಗದಲ್ಲಿ ನಗು ಬರೋದಾದ್ರೂ ಉಂಟಾ? ಒಂದೇ ಒಂದು ಪ್ರಶ್ನೆ ಕೇಳಿ, ಸದ್ಯಕ್ಕೆ ಹಬ್ಬ ಮುಗೀತಲ್ಲಪ್ಪಾ ಅಂದ್ಕೊಂಡವನ ಹಣೆಯಲ್ಲಿ ಮತ್ತೆ ಚಿಂತೆಯ ಗೆರೆಗಳು ಮೂಡುವಂತೆ ಮಾಡಿದ್ದ. ಆ ಮಾತನ್ನು ಕೇಳಿಸಿಕೊಂಡಿದ್ದಕ್ಕೆ ಜೋರು ಮಾಡಿಯೂ ಕೇಳಲಾರದಂತೆ ಗಂಟಲು ಕಟ್ಟಿಕೊಂಡಿತು.

ಗಣೇಶ ಚತುರ್ಥಿ, ನವರಾತ್ರಿ, ದಸರಾ, ದೀಪಾವಳಿ, ತುಳಸಿ ಹಬ್ಬ... ಸಾಲೋಸಾಲು ಹಬ್ಬಗಳು. ನನ್ನ ಹೆಂಡತಿಗಂತೂ ಪ್ರತಿ ಹಬ್ಬವನ್ನು ಚಾಚೂತಪ್ಪದೆ ಸಾಂಪ್ರದಾಯಿಕವಾಗಿ ಮತ್ತು ಅಷ್ಟೇ ಸಿಹಿಮಯವಾಗಿ ಮಾಡದಿದ್ದರೆ ಮನಸ್ಸಿಗೆ ತೃಪ್ತಿಯಿರುವುದಿಲ್ಲ. ನಮ್ಮಂಥ ಗಂಡರಿಗೆ ಹಬ್ಬವೂ ಆಗಬೇಕು, ಜೇಬೂ ಖಾಲಿಯಾಗಬಾರದು ಅನ್ನುವ ಪರಿಸ್ಥಿತಿ. ಸಾಲದ್ದಕ್ಕೆ ದಸರಾ ಈ ಬಾರಿ ಬಂದಿದ್ದು ತಿಂಗಳ ಕೊನೆಯಲ್ಲಿ. ಬ್ಯಾಂಕಿನಿಂದ ಹಣ ತೆಗೆಯುವುದಿರಲಿ, ಬ್ಯಾಲನ್ಸ್ ಬಗ್ಗೆ ಯೋಚಿಸುವುದಕ್ಕೂ ಮನಸ್ಸಾಗಿದ್ದಿಲ್ಲ.

ಕಿರಾಣಿ ಅಂಗಡಿಯವರು, ಹೂವಾಡಗಿತ್ತಿಯರು, ಹಣ್ಣು ಮಾರಾಟಗಾರರು ಸಾಲೋಸಾಗಾಗಿ ದರೊಡೆಗೆ ನಿಂತುಬಿಟ್ಟಿದ್ದಾರೆ. ಚಂದ್ರಯಾನಕ್ಕೆ ಹೊರಟ ಚಿನ್ನ, ಚಿನ್ನದ ಬಣ್ಣ ನನಗೂ ಇದೆ ಎಂದು ಬಿಮ್ಮುತ್ತಿರುವ ತೊಗರಿಬೇಳೆ. ತೊಗರಿಯ ಟೆಬರು ಇಳಿಯುವ ಹಾಗೂ ಕಾಣುತ್ತಿಲ್ಲ. ಅಕ್ಕಿಯನ್ನಂತೂ ಹೆಕ್ಕಿ ಹೆಕ್ಕಿ ತಿನ್ನಬೇಕು. ಅಕ್ಕಿಯ ಮೇಲೆ ಆಸೆ ನೆಂಟರ ಮೇಲೆ ಪ್ರೀತಿ ಎಂಬ ಗಾದೆ ಹಳತಾಗಿಬಿಟ್ಟಿದೆ. ಅಕ್ಕಿಯ ಮೇಲೆ ಆಸೆಯೇನೋ ಜೋರಾಗಿದೆ, ನೆಂಟರ ಮೇಲಿನ ಪ್ರೀತಿಯನ್ನು ನಾನೇ ದೂರವಿಟ್ಟಿದ್ದೇನೆ.

ಆದರೆ, ರಾಣೆಬೆನ್ನೂರು ಚೋಟ್ ಮೆಣಸಿನಕಾಯಿ, ನನ್ನ ಹೆಂಡತಿ ಸುಬ್ಬಿ ಕೇಳಬೇಕಲ್ಲ? ಎಲ್ಲ ಮೆಣಸಿನಕಾಯಿಗಳು ನೆಲಕ್ಕೆ ಮುಖ ಮಾಡಿ ಬೆಳೆದರೆ, ಚೋಟ್ ಮೆಣಸಿನಕಾಯಿ ಮುಖ ಆಕಾಶಕ್ಕೆ. ಏತಿ ಅಂದ್ರೆ ಪ್ರೇತಿ ಅಂತಾಳೆ ಸುಬ್ಬಿ. ಈ ಬಾರಿ ಎಲ್ಲ ದುಬಾರಿಯಾಗಿದೆ ಜಾಸ್ತಿ ಬೇಳೆ, ಅಕ್ಕಿ, ಸಕ್ಕರೆ ಬಳಸಬೇಡ ಅಂತ ಹೇಳಿದ್ರೆ, ಎಕ್ಸಾಕ್ಟ್ ಲಿ ಉಲ್ಟಾ ಮಾಡಿರ್ತಾಳೆ. ಎಲ್ಲಾ ಜಾಸ್ತಿ ಸುರುವಿ ನನ್ನ ಬಿಪಿ ಏರಿಸಿರ್ತಾಳೆ. ಈ ಹಬ್ಬಕ್ಕೆ ಯಾವ ನೆಂಟರನ್ನೂ ಕರೆಯುವುದು ಬೇಡ ಅಂತ ರಾಗ ಎಳೆದ್ರೆ, ತನ್ನ ಹತ್ತಿರದ ನೆಂಟರೆಲ್ಲಾ ವಕ್ಕರಿಸುವ ಹಾಗೆ ಹಟ ಹಿಡಿಯುತ್ತಾಳೆ. ಎಲ್ಲದಕ್ಕೂ ಉಲ್ಟಾ ಅಂತ ತಿಳಿದು, ಈ ಹಬ್ಬಕ್ಕೆ ನಿಮ್ಮ ನೆಂಟರನ್ನು ಕರೆಯೋಣ ಅಂತೇನಾದ್ರೂ ಹೇಳಿದ್ರೆ, ಮುಗೀತು ನನ್ ಕಥೆ. ಕರೆಯೋದು ಬ್ಯಾಡ ಅಂದ್ರೇನೆ ಕರೀತಾಳೆ, ಇನ್ನು ಕರಿಯೋಣ ಅಂದ್ರೆ ಬಿಡ್ತಾಳಾ? ಬಲೆ ಕಿಲಾಡಿ ಹೆಣ್ಣು.

ಹಾಗಾಗಿ ಅಕ್ಕಿ, ಬೇಳೆ, ನೆಂಟರ ಬಗ್ಗೆ ಏನನ್ನೂ ಹೇಳದೇ ತುಟಿ ಪಿಟಕ್ ಅನ್ನಬಾರದೆಂಬ ಹೊಸ ತಂತ್ರವನ್ನು ಇತ್ತೀಚೆಗೆ ಕಂಡುಕೊಂಡಿದ್ದೇನೆ. ಅವಳು ಏನೇ ಹೇಳಲಿ, ಹುಂ ಹುಂ ಅಂತ ತಲೆಹಾಕಿ ಅತ್ತ ಸಾಗ ಹಾಕಿದರೆ ನಂತರ ಎಲ್ಲವನ್ನೂ ಮರೆತುಬಿಟ್ಟಿರುತ್ತಾಳೆ. ಅದೊಂದು ಒಳ್ಳೆ ಬುದ್ಧಿ ದೇವರು ಕೊಟ್ಟಿದ್ದಾನೆ ಸುಬ್ಬಿಗೆ.

ಹಬ್ಬ ಬಂದಾಗ ಹಾಕ್ಕೊಂಡ ಜುಬ್ಬದ ಜೋಬಿಗೆ ತೂತು ಬೀಳುವಂಥ ಕಾಲವಿದು. ದಸರೆಗೆ ಸೀರೆ ಕೊಡಿಸಿಲ್ಲ ಅಂತ ದೀಪಾವಳಿಗೆ ದುಬಾರಿ ಸೀರೆ ಕೊಂಡು ನನ್ನ ಮೇಲೆ ಸೇಡು ತೀರಿಸಿಕೊಂಡಿದ್ದಾಳೆ. ಅರ್ಧ ತಿಂಗಳು ಮುಗಿಯುವ ಹೊತ್ತಿಗೆ ಸಂಬಳ ಮುಕ್ಕಾಲು ಭಾಗ ಖಾಲಿ ಆಗಿದೆ. ಮುಂದೇನು ಕಾದಿದೆಯೋ ಆ ದೇವರೇ ಬಲ್ಲ!

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X