ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬಿಜೆಪಿ ಸರಕಾರದ ಯಶಸ್ಸಿಗೆ ಶಾಸ್ತ್ರಿ ಸೂತ್ರ!

By * ಎಚ್. ಆನಂದರಾಮ ಶಾಸ್ತ್ರೀ
|
Google Oneindia Kannada News

Advice to BSY for good governance
ಸೂತ್ರ ಹರಿದ ಗಾಳಿಪಟದಂತಾಗಿರುವ ಕರ್ನಾಟಕ ಸರ್ಕಾರದ ಯಶಸ್ಸಿಗೆ ನರೇಂದ್ರ ಮೋದಿಯವರು ಕೆಲವು ಸೂತ್ರಗಳನ್ನು ಉಪದೇಶಿಸಿದ್ದಾರೆ. ಪಾಪ, ಗುಜರಾತ್‌ನ ಮೋದಿಗೇನು ಗೊತ್ತು ಕರ್ನಾಟಕ ಸರ್ಕಾರದ ಯಶಸ್ಸಿನ ಸೂತ್ರ? ಕರ್ನಾಟಕದ ರಾಜಧಾನಿಯಲ್ಲೇ ವಾಸವಾಗಿರುವ ಅಪ್ರತಿಮ ರಾಜಕೀಯ ವಿಶ್ಲೇಷಕನಾದ ನಾನು ಹೇಳುತ್ತೇನೆ ಕೇಳಿ, ನಮ್ಮ ಬಿಜೆಪಿ ಸರ್ಕಾರವು ಯಶಸ್ಸು ಹೊಂದಲು ಅನುಸರಿಸಬೇಕಾದ ಸಪ್ತಸೂತ್ರ:

* ಬೆಳೆದ ಬೆಳೆಗೆ ರೈತನಿಗೆ ಉತ್ತಮ ಬೆಲೆ ಸಿಗುತ್ತಿಲ್ಲ. ಗ್ರಾಹಕನಿಗೋ, ದವಸಧಾನ್ಯ, ತರಕಾರಿ, ಹಣ್ಣುಹಂಪಲು ಕೈಗೆಟುಕುತ್ತಿಲ್ಲ. ಮಧ್ಯೆ ಮಧ್ಯವರ್ತಿಗಳು ದುಡ್ಡು ಬಾಚುತ್ತಿದ್ದಾರೆ. ಆದ್ದರಿಂದ ಮಧ್ಯವರ್ತಿಗಳಿಂದ ನಿಯಮಿತವಾಗಿ ಪಾರ್ಟಿ ಫಂಡ್ ವಸೂಲು ಮಾಡತಕ್ಕದ್ದು.

* ರೈತನ ಏಳಿಗೆಗಾಗಿ ಸಮಾರಂಭಗಳಲ್ಲಿ ಒಂದು ರೈತಗೀತೆ ಹಾಡಿಸಿ ಮೈಸೂರು ದಸರಾದಲ್ಲಿ 'ಉಳುವಾ ಯೋಗಿಯ ನೋಡಲ್ಲಿ' ನೃತ್ಯ ಮಾಡಿಸಿಬಿಟ್ಟರೆ ಸಾಲದು. ರೈತನ ಪರವಾಗಿ ಕನ್ನಡದಲ್ಲಿ ಎಷ್ಟು ಹಾಡುಗಳಿವೆಯೋ ಅಷ್ಟನ್ನೂ ಹಾಡಿಸಿ ಕುಣಿಸತಕ್ಕದ್ದು. ಇನ್ನೂ ಬೇಕೆಂದರೆ ಸಂಘಪರಿವಾರದ ಸಾಹಿತಿಗಳು ರೈತರಾಷ್ಟ್ರಭಕ್ತಿಯ ಗೀತೆಗಳನ್ನು ರಚಿಸಿಕೊಡುತ್ತಾರೆ.

* ಮುಖ್ಯಮಂತ್ರಿಗಳು ದಿನಕ್ಕೊಂದು ಹೊಸ ಯೋಜನೆ ಪ್ರಕಟಿಸತಕ್ಕದ್ದು ಮತ್ತು ಕನಿಷ್ಠಪಕ್ಷ ದಿನಕ್ಕೆರಡು ಮಠಮಂದಿರ ಸಂಘಸಂಸ್ಥೆಗಳಿಗೆ ಸಹಾಯಧನ ಘೋಷಿಸತಕ್ಕದ್ದು.

* ರಸ್ತೆ ಸಾರಿಗೆ ಇಲಾಖೆ ವತಿಯಿಂದ ದಿನಕ್ಕೊಂದು ನಮೂನೆಯ ಬಸ್ಸನ್ನು ರಸ್ತೆಗಿಳಿಸುತ್ತ ಪ್ರಯಾಣಿಕರನ್ನು ಆಕರ್ಷಿಸುವ ಷೋಕಿ ಮೆರೆಯತಕ್ಕದ್ದು.

* ಉದ್ದೇಶಿತ ಸಂಸ್ಕೃತ ವೇದ ವಿಶ್ವವಿದ್ಯಾಲಯಕ್ಕೆ ಮಹಾನ್ ಸಂಸ್ಕೃತ ವಿದ್ವಾನ್ ರಾಮಚಂದ್ರಗೌಡರನ್ನು ಖಾಯಂ ಕುಲಪತಿಯನ್ನಾಗಿ ನೇಮಿಸತಕ್ಕದ್ದು.

* ಸರ್ಕಾರದ ಲೋಪದೋಷಗಳ ಬಗ್ಗೆ ಮತ್ತು ಪ್ರತಿಪಕ್ಷಗಳ ಆರೋಪಗಳ ಬಗ್ಗೆ ಪತ್ರಕರ್ತರು ಏನೇ ಪ್ರಶ್ನೆ ಕೇಳಲಿ, ನಮ್ಮ ಮುಖ್ಯಮಂತ್ರಿಯವರು, "ಈ ರಾಜ್ಯದ ಐದೂವರೆ ಕೋಟಿ ಜನರಿಗೆ ನಿಜ ಏನು ಅನ್ನೋದು ಗೊತ್ತು", ಎಂಬ ಉತ್ತರ ನೀಡಿ ನುಣುಚಿಕೊಳ್ಳುತ್ತಿದ್ದಾರೆ. ಬಲು ಜಾಣ್ಮೆಯ ಉತ್ತರ! ಅದನ್ನೇ ಮುಂದುವರಿಸಿಕೊಂಡುಹೋಗತಕ್ಕದ್ದು.

* ಯುವಕರ ಕೈಗೆ ರಾಜ್ಯದ ಆಡಳಿತ ಕೊಡಬೇಕಾದ್ದು ಇಂದಿನ ಅಗತ್ಯ. ನಮ್ಮ ಮುಖ್ಯಮಂತ್ರಿಗಳು ಈಗಾಗಲೇ ತಮ್ಮ ಯುವಪುತ್ರರಿಬ್ಬರ ಕೈಗೆ ಭಾಗಶಃ ಆಡಳಿತವನ್ನು ಕೊಟ್ಟಿರುವುದು ಶ್ಲಾಘನೀಯ. ಸಂಪೂರ್ಣ ಆಡಳಿತವನ್ನು ಅವರಿಗೊಪ್ಪಿಸಿಬಿಡುವ ಮೂಲಕ ಆ ಯುವಪುತ್ರರತ್ನರಿಬ್ಬರು ಸ್ವ-ರಾಜ್ಯದ ಏಳಿಗೆಗಾಗಿ ಇನ್ನೂ ಹೆಚ್ಚಿನ ರೀತಿಯಲ್ಲಿ ಧನಸಂಗ್ರಹಣೆಯಲ್ಲಿ ತೊಡಗಲು ನೆರವಾಗತಕ್ಕದ್ದು.

ಈ ಸಪ್ತಸೂತ್ರಗಳನ್ನು ಅನುಷ್ಠಾನಕ್ಕೆ ತಂದರೆ ಸಾಕು, ನಮ್ಮ ಹಾಲಿ ಮುಖ್ಯಮಂತ್ರಿಗಳೂ ಅವರ ಪುತ್ರದ್ವಯರೂ ರಾಜಕಾರಣದಲ್ಲಿ ಭರ್ಜರಿ ಆಯುರಾರೋಗ್ಯ ಐಶ್ವರ್ಯ ಹೊಂದಿ ಶೋಭಿಸುವರು.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X