ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನಾನು, ನನ್ನ ರೂಂಮೇಟುಗಳು ಮತ್ತು ಒಂದು ಕ್ರೈಂ ಸ್ಟೋರಿ

By * ಗುರು ಕುಲಕರ್ಣಿ, ಧಾರವಾಡ
|
Google Oneindia Kannada News

Guru Kulkarni, Dharwad
"ಇವತ್ತು ಒಂಭತ್ತು ಕಾಲ್ ಬಂದವು, ಇಡೀ ವಾರದ್ದು ಒಟ್ಟು ಐವತ್ನಾಲ್ಕಾಯಿತು" ಎಂದು ಉತ್ಸಾಹದಲ್ಲಿಯೇ ಹೇಳುತ್ತ ಒಳಬಂದ ನಿರ್ಮಲಕುಮಾರ. ಶುಕ್ರವಾರದ ಸಂಜೆಯ ತೀರ್ಥಯಾತ್ರೆಗೆ ಹೋಗಲು ತಯಾರಾಗುತ್ತಿದ್ದ ನಾನು, ವಿನಾಯಕ ಸಕ್ಕತ್ ಖುಷಿಯಾಗಿ ನಿರ್ಮಲನಿಗೆ ಹೈ-ಫೈ ಮಾಡಿದೆವು. ನಾವು ಮೂರು ಜನ ರೂಂಮೇಟುಗಳು ಸುಮಾರು ದಿನಗಳಿಂದ ಎರಡು ಕಾರ್ಯಕ್ರಮಗಳನ್ನು ನಿಯಮದಂತೆ ನಡೆಸಿಕೊಂಡು ಬರುತ್ತಿದ್ದೇವೆ. ಒಂದು, ಪ್ರತಿ ಶನಿವಾರ ಒಂದು ಹೊಸ ಹನುಮಂತನ ದೇವಸ್ಥಾನ ಹುಡುಕಿಕೊಂಡು ಹೋಗುವುದು, ಹನುಮನಿಗೆ ನಮಿಸಿ, ಪಾಪ ಪರಿಹಾರ ಮಾಡಿಕೊಂಡು ಬರುವುದು. ಗಾಳಿ ಆಂಜನೇಯ, ಕಾರಂಜಿ ಆಂಜನೇಯ, ವಿಜಯನಗರದ ಮಾರುತಿ ದೇವಸ್ಥಾನ, ಹನುಮಂತನಗರದ ರಾಮಾಂಜನೇಯ ಹೀಗೆ ಹಲವು ದೇವಸ್ಥಾನಗಳನ್ನು ಈಗಾಗಲೇ ಸಂದರ್ಶಿಸಿದ್ದೇವೆ, ಹೋಗಬೇಕಾದ ದೇವಸ್ಥಾನಗಳ ಪಟ್ಟಿಯೂ ದೊಡ್ಡದಿದೆ. ನಮ್ಮ ಎರಡನೇ ಕಾರ್ಯಕ್ರಮ, ಒಂದನೆಯದಕ್ಕೆ ಪೂರ್ವ ತಯಾರಿಯಂತಹದು! ಪ್ರತಿ ಶುಕ್ರವಾರ ಸಂಜೆ ಒಂದು ಹೊಸ ಬಾರ್ ಹುಡುಕಿಕೊಂಡು ತೀರ್ಥಯಾತ್ರೆಗೆ ಹೋಗುವುದು!

ಈ ವಾರದ ತೀರ್ಥಕ್ಷೇತ್ರ ಯಾವುದು ಎಂದು ನಾನು ಮತ್ತು ವಿನಾಯಕ ವಿಚಾರಮಾಡುತ್ತಿದ್ದಾಗ ಬಾತ್ ರೂಮಿಗೆ ಹೋಗಿದ್ದ ನಿರ್ಮಲಕುಮಾರ, ಅಲ್ಲಿಂದಲೇ ಕೂಗಿ ಹೇಳಿದ ರಿಂಗರೋಡಿನಲ್ಲಿ ಒಂದು ಹೊಸ ಬಾರ್ ಶುರುವಾಗಿದೆ, ಅಲ್ಲಿಗೇ ಹೋಗೋಣ. ಇವತ್ತಿನ ಎಣ್ಣೆ ಖರ್ಚು ನನ್ನದೇ. ನಾವು ಮೂರು ಜನ ತೀರ್ಥಯಾತ್ರೆಗೆ ಹೋದರೆ, ಯಾತ್ರೆಯ ಒಟ್ಟು ಖರ್ಚನ್ನು ಸಮನಾಗಿಹಂಚಿಕೊಂಡು ಬರೆದಿಟ್ಟು, ತಿಂಗಳಿಗೊಮ್ಮೆ ಲೆಕ್ಕ ಮಾಡುವುದು ನಮ್ಮ ಪದ್ಧತಿಯಾಗಿತ್ತು. ಅಂತಹದರಲ್ಲಿ ನಿರ್ಮಲಕುಮಾರ ಎಣ್ಣೆಯ ಕಾರ್ಯಕ್ರಮವನ್ನು ಪೂರ್ತಿಯಾಗಿ ಪ್ರಾಯೋಜಿಸಲು ತಯಾರಾಗಿರುವುದು ದಾನಶೂರ ಕರ್ಣನ ಪೋಸ್ ಕೊಡುವುದಕ್ಕಲ್ಲ, ಇನ್ ಫ್ಯಾಕ್ಟ್ ನಮ್ಮ ಉಪಕಾರ ಸ್ಮರಣೆಗಾಗಿ!

ಏನಾಗಿತ್ತು ಅಂದ್ರೆ, ಕಳೆದ ವಾರದ ತೀರ್ಥಯಾತ್ರೆಯಲ್ಲಿ ತೀರ್ಥ ಒಳ ಸೇರಿದ ತಕ್ಷಣ ನಿರ್ಮಲ ಕುಮಾರನ ಹೊಟ್ಟೆಯಲ್ಲಿದ್ದ ದುಃಖ ಹೊರ ಬರತೊಡಗಿತ್ತು. ಅವನ ಹೊಸ ಬಾಸು ಬೀರ್ ತ್ರಿಪಾಠಿ ನಿರ್ಮಲಕುಮಾರನಿಗೆ ಸುಖಾಸುಮ್ಮನೆ ಕಿರಿಕಿರಿ ಕೊಡತೊಡಗಿದ್ದನಂತೆ. ಕೋಡ್‌ನಲ್ಲಿ ಕಮೆಂಟ್ ಬರದಿಲ್ಲಾ ಅಂತಾ, ಕಮೆಂಟ್ ಬರೆದಿದ್ದರೆ, ಅದರ ಇಂಗ್ಲೀಷು ಸರಿ ಇಲ್ಲಾ ಅಂತ, ಹೀಗೆ ಯಾವುದಾದರೂ ಕಾರಣಕ್ಕೆ ನಿರ್ಮಲಕುಮಾರನನ್ನು ಕರೆದು ಕಿರಿಕಿರಿಮಾಡುತ್ತಿದ್ದನಂತೆ. ನಿರ್ಮಲಕುಮಾರ ಅದನ್ನೆನೋ ಹೇಗೋ ತಡೆದುಕೊಂಡಿದ್ದ. ಬೀರ್ ತ್ರಿಪಾಠಿ ತನ್ನ ಜೊತೆ ಶುಕ್ರವಾರದ ಸಂಜೆಗಳಲ್ಲಿ ಎಣ್ಣೆ ಹೊಡೆಯಲು ಬರುವವರಿಗೆ annual appraisalನಲ್ಲಿ ಹೆಚ್ಚಿನ ರೇಟಿಂಗ್ ಕೊಟ್ಟು ಉಳಿದವರಿಗೆ ಕಮ್ಮಿ ಕೊಡುತ್ತಾನೆ ಎಂಬ ಮಾತು ಜಾರಿಯಲ್ಲಿತ್ತು. ನಿರ್ಮಲಕುಮಾರ ಅದಕ್ಕೇನು ತಲೆ ಕೆಡೆಸಿಕೊಂಡಿರಲಿಲ್ಲ. ಅವನ ಮುಖ ನೋಡ್ತಾ ಸೋಡಾ ಹಾಕ್ದೆ ಕುಡಿದರೂ, ಕಿಕ್ ಸಿಗಲ್ಲಾ ಎಂದು ನಿರ್ಮಲ ನಮ್ಮ ರೂಢಿಯ ಕಾರ್ಯಕ್ರಮದೊಂದಿಗೆ ಅಂಟಿಕೊಂಡಿದ್ದ.

ಆದರೆ ಅದೀಗ ಚಿಗುರೊಡೆಯುತ್ತಿದ್ದ ತನ್ನ ಮತ್ತು ಸಹೋದ್ಯೋಗಿ ನೀತಾಳ ಸ್ನೇಹಕ್ಕೆ ಬೀರ್ ತ್ರಿಪಾಠಿ ಕಲ್ಲು ಹಾಕಲು ಶುರುಮಾಡಿದ್ದು ನಿರ್ಮಲಕುಮಾರನ ದುಃಖಕ್ಕೆ ಮೂಲವಾಗಿತ್ತು. ನೀತಾಳ ಜೊತೆ ಒಂದೆರಡು ಮಾತನಾಡಬೇಕೆಂದು ನಿರ್ಮಲಕುಮಾರ ಅವಳ ಕ್ಯುಬಿಕಲ್ಲಿಗೆ ಹೋದ ತಕ್ಷಣ, ಬೀರ್ ಅಲ್ಲಿ ಪ್ರತ್ಯಕ್ಷನಾಗಿ ನಿರ್ಮಲಕುಮಾರನಿಗೆ ಹಾ, ಆ ಬಗ್ ಪರಿಹಾರ ಆಯ್ತಾ ? ಈ ಡಿಸೈನ್ ಡಾಕ್ಯುಮೆಂಟ್ ನನಗೆ ಕಳುಹಿಸಿದ್ದೀಯಾ? ಎಂದು ಏನಾದರು ನೆವ ಹುಡುಕಿ ಅವನನ್ನು ಅಲ್ಲಿಂದ ಓಡಿಸಿ ತಾನು ನೀತಾಳ ಜೊತೆ ಲಲ್ಲೆ ಹೊಡೀತಾ ನಿಲ್ಲುತ್ತಿದ್ದನಂತೆ.

ಒಂದೊಂದೆ ಸಿಪ್ ತಗೋಳ್ತಾ ನಿರ್ಮಲಕುಮಾರ ತನ್ನ ಮನದಲ್ಲಿನ ದುಃಖವನ್ನು ಹೊರಹಾಕ್ತಾ ಇದ್ದುದನ್ನು ಕೇಳ್ತಾ ಕುಳಿತಿದ್ದ ವಿನಾಯಕನಿಗೆ ಒಂದು ಐಡಿಯಾ ಬಂದಿತು. ತನ್ನ ಗ್ಲಾಸಿನಲ್ಲಿದ್ದುದನೆಲ್ಲಾ ಬಾಟಂ-ಅಪ್ ಮಾಡಿ, ನೀನೊಂದು ಕೆಲಸಾ ಮಾಡು, ಪೇಪರಿನಲ್ಲಿ ಜಯನಗರ ನಾಲ್ಕನೇ ಬ್ಲಾಕಿನಲ್ಲಿ ಒಂದು ಸಿಕ್ಸ್ಟಿ-ಫಾರ್ಟಿ ಸೈಟು ಮಾರಾಟಕ್ಕಿದೆ, ಚದುರಡಿಗೆ ಕೇವಲ ಎರಡು ಸಾವಿರ ಎಂದು ಅಡ್ವರ್ಟೈಸ್ ಹಾಕಿ ಬೀರ್‌ನ ಮೋಬೈಲ್ ನಂಬರ್ ಕೊಟ್ಟು ಬಿಡು. ಇನ್ನೊಂದು ವಾರ ಅವನ ಮೊಬೈಲಿಗೆ ತೆರಪಿಲ್ಲದೇ ಫೋನ್ ಬರ್ತಾ ಇರ್ತಾವೆ, ನಿನ್ನ ತಂಟೆಗೆ ಅವನು ಬರೋದೇ ಇಲ್ಲ ಎಂದು ವಿನಾಯಕ ತನ್ನ ಐಡಿಯಾವನ್ನು ಹೇಳಿದ. ವಿನಾಯಕನದು ಕ್ರೈಮ್ ಶಾಸ್ತ್ರದಲ್ಲಿ ಅದ್ವೀತಿಯ ತಲೆ. ಚಿಕ್ಕಂದಿನಿಂದಲೇ ಸ್ಪೈ, ಡಿಟೆಕ್ಟಿವ್, ಪೋಲಿಸ್ ನ್ಯೂಸ್ ಪತ್ರಿಕೆಗಳನ್ನೂ, ನರಸಿಂಹಯ್ಯ, ಸುದರ್ಶನ ದೇಸಾಯಿ, ಅನಂತರಾಮ್ ಇತ್ಯಾದಿ ಪತ್ತೇದಾರಿ ಸಾಹಿತಿಗಳ ಸಾಹಿತ್ಯ ಓದಿ, ಅರಗಿಸಿಕೊಂಡ ತಲೆ. ಆಷ್ಟಲ್ಲದೇ ಈಗೀಗ ಟೀವಿಯಲ್ಲಿ ಬರುವ ಕ್ರೈಂ ಸ್ಟೋರಿ, ಕ್ರೈಂ ಡೈರಿ, ವಾರಂಟ್, ಅರೆಸ್ಟ್ ಇತ್ಯಾದಿ ಎಲ್ಲ ಕಾರ್ಯಕ್ರಮಗಳನ್ನು ನೋಡಿ ಅಪ್‌ಡೇಟ್ ಆದ ತಲೆ. ಸರಿ ಮತ್ತಿನ್ನೇನು, ಐಡಿಯಾ ಸರ್ವಾನುಮತದಿಂದ ಒಪ್ಪಿಗೆಯಾಯ್ತು.

ನಾವು ಮೂವರಲ್ಲಿ ಅವರಿಬ್ಬರು ತೀರ್ಥ ತಗೋಳ್ತಾರೆ, ನಾನೊಬ್ಬ ಮಾತ್ರ ಇಲ್ಲ. ಸುಮಾರು ಸಲ ನನ್ನನ್ನು ಹೇಡಿ, ಅಂಜುಬುರುಕ ಎಂದು ಕಿಚಾಯಿಸಿದ್ದಾರಾದರೂ, ನಾನು ಕುಡಿಯದೇ ಇರೋದು ಅವರಿಗೆ ವರವೇ ಆಗಿದೆ. ಮುಖ್ಯವಾಗಿ ಕುಡಿದು ಚಿತ್ ಆದ ಅವರಿಬ್ಬರನ್ನು, ಅವರ ಜೇಬುಗಳ ಸಮೇತ, ಸುರಕ್ಷಿತವಾಗಿ ಮನೆಗೆ ಕರೆದುಕೊಂಡು ಬರುವವ ಸಿಕ್ಕಿದ್ದಾನೆ! ಅದಲ್ಲದೇ ಕುಡಿದಾಗ ಅವರಲ್ಲಿ ಬರುವ ಅನೇಕ ಸಾಹಸೀ ಐಡಿಯಾಗಳನ್ನು ಅದುಮಿ ಅದರಿಂದಾಗುವ ಅನೇಕ ಅಡ್ಡಪರಿಣಾಮಗಳನ್ನೂ ನಾನು ತಪ್ಪಿಸಿದ್ದೇನೆ. ಆದರೆ ಅವತ್ತು ವಿನಾಯಕನ ಐಡಿಯಾವನ್ನು ನಾನು ವಿರೋಧಿಸಿರಲಿಲ್ಲ. ಬೀರ್‌ನನ್ನು ಸ್ವಲ್ಪ ಆಟ ಆಡಿಸಿದರೆ ಒಳ್ಳೆಯದೆ ಎಂದುಕೊಂಡಿದ್ದೆ. ಯಾಕೆಂದರೆ ಅದೇ ಕಂಪನಿಯಲ್ಲಿ ಕೆಲಸ ಮಾಡುವ ನನಗೂ ಬೀರ್‌ನ ಚರಿತ್ರೆ ಹೊಸದಾಗಿರಲಿಲ್ಲ.

ಬೀರ್ ತ್ರಿಪಾಠಿ, ಅಂದರೆ ಬೀರೇಂದ್ರ ತ್ರಿಪಾಠಿ, ಉತ್ತರ ಭಾರತದ ಕಡೆಯವನು. ಹುಂಬತನ, ದೊಡ್ಡ ದನಿ, ಚಮಚಾಗಿರಿಯೇ ಮೂರ್ತಿವೆತ್ತಂತಿದ್ದಾನೆ. ಎಂಟೋ ಹತ್ತೋ ವರುಷ ಅಮೇರಿಕೆಯಲ್ಲಿದ್ದು, ಬಹಳಷ್ಟು ದುಡ್ಡು-ಕಾಸು ಮಾಡಿಕೊಂಡು ಬಂದಿದ್ದಾನೆ. ಬೆಂಗಳೂರಿನ ರೀಯಲ್ ಎಸ್ಟೇಟ್ ಧಂದೆಯಲ್ಲಿ ಬಹಳಷ್ಟು ಆಟ ಆಡಿ, ಅದರಲ್ಲೂ ದುಡ್ಡು ದುಡಿದಿದ್ದಾನೆ. ಇಂತಹ ಬೀರ್‌ನಿಗೆ ಇರುವ ದೊಡ್ಡ ಕೆಟ್ಟಗುಣವೆಂದರೆ ಹುಡುಗಿಯರನ್ನು ಕಂಡೊಡನೆ ಜೊಲ್ಲು ಸುರಿಸುವುದು. ಆ ಕಾರಣಕ್ಕಾಗಿಯೇ ಅವನು ಕಂಪನಿಯಲ್ಲಿ ಸುಳಿ ಸುಮಾರು ಎಂದು ಕುಖ್ಯಾತನಾಗಿರುವುದು. ಸಾಫ್ಟ್‌ವೇರು ಕಂಪನಿಯಲ್ಲಿ ಕೆಲಸ ಮಾಡಬೇಕೆಂದರೆ ಎಫೀಸಿಎಂಟ್, ಎಥಿಕಲ್, ಪ್ರೊಫೆಶನಲ್ ಇತ್ಯಾದಿ ಇತ್ಯಾದಿ ಗುಣಗಳಿರಬೇಕಲ್ವಾ, ಅಂತ ಕೇಳ್ತಾ ಇದಿರಾ? ಮಣ್ಣಂಗಾಟಿ, ಸಾಫ್ಟ್‌ವೇರು ಕಂಪನಿ ಅಂದರೆ ಅದೇನು ಜಗತ್ತು ಬಿಟ್ಟು ಬೇರೆ ಇರುತ್ತಾ? ಉಳಿದ ಜಗತ್ತಿನಲ್ಲಿದ್ದಂತೆ ಅಲ್ಲಿಯೂ ಸುಳ್ಳರು, ಸೋಮಾರಿಗಳು, ಹೆಣ್ಣುಬಾಕರು ಎಲ್ಲ ಇದಾರೆ. ಅದೇ ರೀತಿ ವಶೀಲಿಬಾಜಿ, ಸ್ವಜನ ಪಕ್ಷಪಾತ ಎಲ್ಲಾ ಅಲ್ಲಿಯೂ ಇದೆ!

ಮರುದಿನ ಬೆಳಿಗ್ಗೆ ನನಗೆ ಗಂಟು ಬಿದ್ದು, ಲಿಂಗ ಮೆಚ್ಚಿ ಅಹುದು ಅಹುದು ಎನ್ನುವಂತಹ ಜಾಹಿರಾತು ಬರೆಸಿಕೊಂಡು ಹೋಗಿ, ನಿರ್ಮಲಕುಮಾರ ಒಂದು ಪತ್ರಿಕೆಗೆ ಕೊಟ್ಟು ಬಂದ. ಅದರಿಂದ ವಾರವಿಡೀ ಬೀರ್‌ನ ಮೋಬೈಲು ರಿಂಗಣಿಸುತ್ತಿತ್ತು, ಮತ್ತು ನಿರ್ಮಲಕುಮಾರ ಸಿಕ್ಕ ಅವಕಾಶವನ್ನು ಉಪಯೋಗಿಸಿಕೊಂಡು ತನ್ನ ಪ್ರೇಮಪಯಣದಲ್ಲಿ ಇನ್ನೆರಡು ಹೆಜ್ಜೆ ಮುಂದಿಟ್ಟಿದ್ದ. ಐಡಿಯಾವನ್ನು ಕೊಟ್ಟು ಮತ್ತು ಅದನ್ನು ಕಾರ್ಯರೂಪಕ್ಕೆ ತರುವಲ್ಲಿ ಅವನಿಗೆ ಸಾಥ್ ಕೊಟ್ಟದ್ದಕ್ಕಾಗಿ ನಿರ್ಮಲಕುಮಾರ ನಮಗೆ ಪಾರ್ಟಿ ಕೊಟ್ಟು ಋಣಸಂದಾಯ ಮಾಡ್ತಾ ಇದ್ದ.

ಪ್ರತೀ ದಿನ ಬೆಳ್ಳಂ ಬೆಳಿಗ್ಗೇನೆ ಎದ್ದು ಜಾಗಿಂಗ್ ಹೋಗುವ ನಿರ್ಮಲಕುಮಾರ, ಹಿಂದಿನ ರಾತ್ರಿಯ ಗುಂಡಿನ ಪ್ರಭಾವದಿಂದ ಇನ್ನೂ ಮಲಗೇ ಇದ್ದ. ಕೆಲಸದವಳು ಬಂದು ತನ್ನ ಕೀಲಿಕೈಯಿಂದ ಬಾಗಿಲು ತೆಗೆದು ಅಡಗಿ ಮನೆಯಲ್ಲಿ ತಿಂಡಿಯ ತಯಾರಿ ನಡೆಸಿದ್ದಳು. ನಾನಿನ್ನೂ ಚಾದರು ಹೊದ್ದುಕೊಂಡು, ನಿನ್ನೆ ರಾತ್ರಿಯ ಕನಸಲ್ಲಿ ಬಂದವಳು ಸಾನಿಯಾಳೋ ಅಥವಾ ಸೆರೆನಾಳೊ ಎಂಬ ಕನ್‌ಫ್ಯೂಷನ್ನು ಬಗೆಹರಿಸಿಕೊಳ್ಳುವ ಪ್ರಯತ್ನ ನಡೆಸಿದ್ದೆ. ಅಷ್ಟರಲ್ಲಿ ಪೇಪರಿನವನು ಬೀಸಿ ಒಗೆದ ದಿನಪತ್ರಿಕೆ ನನ್ನ ಹಾಸಿಗೆಯ ಮೇಲೆಯೇ ಬಂದು ಬಿತ್ತು. ಏನಿದೆ ಎಂದು ಮುಖಪುಟ ತೆರೆದು ನೋಡಿದರೆ ದೊಡ್ಡ ಅಕ್ಷರಗಳಲ್ಲಿ ಸಾಫ್ಟ್‌ವೇರ್ ಉದ್ಯೋಗಿಯ ಭೀಕರ ಕೊಲೆ ಎಂಬ ಸುದ್ದಿ. ನಗರದ ಪ್ರತಿಷ್ಠಿತ ಸಾಫ್ಟ್‌ವೇರ್ ಸಂಸ್ಥೆಯಲ್ಲಿ ಕೆಲಸ ಮಾಡುವ ಬೀರ್ ಉರ್ಫ್ ಬೀರೇಂದ್ರ ತ್ರಿಪಾಠಿ ಎಂಬುವರನ್ನು ದುಷ್ಕರ್ಮಿಗಳು ನಿನ್ನೆ ಸಂಜೆ ಭೀಕರವಾಗಿ ಕೊಲೆ ಮಾಡಿದ್ದಾರೆ. ಕೊಲೆಯಾಗಿರುವ ಬೀರೇಂದ್ರ ತ್ರಿಪಾಠಿ ಜಯನಗರದ ವಿವಾದಿತ ನಿವೇಶನವನ್ನು ಮಾರಿಸಿಕೊಡಲು ಪ್ರಯತ್ನಿಸುತ್ತಿದ್ದರು ಎನ್ನಲಾಗಿದೆ. ಆ ಸಂಬಂಧವಾಗಿ ಕೆಲ ಬಿಲ್ಡರುಗಳೊಂದಿಗೆ ಅವರ ಚಕಮಕಿಯಾಗಿ, ಅದು ಈ ಕೊಲೆಯಲ್ಲಿ ಪರ್ಯಾವಸನಗೊಂಡಿದೆ ಎಂದು ಹೇಳಲಾಗಿದೆ ಎಂದು ಬರೆದಿದ್ದನ್ನು ಓದುತ್ತಾ ನಾನು ಚಾದರದಲ್ಲಿಯೇ ಬೆವರತೊಡಗಿದೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X