• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಎಲ್ಲಾ ಚುಟುಕವೋ, ಪ್ರಭುವೇ, ಎಲ್ಲಾ ಚುಟುಕವೋ!

By Staff
|

ದೇವಸ್ಥಾನಗಳಲ್ಲಿ ಪೂಜೆ ಪುನಸ್ಕಾರ ಚುಟುಕು, 'ಮುಂದುವರಿದ'ವರ ಮನೆಗಳಲ್ಲಿ - ಆಮಂತ್ರಣ ಪತ್ರಿಕೆ ಸಹಿತ - ಮದುವೆ ಮುಂಜಿ ಚುಟುಕು, ಶ್ರಾದ್ಧವಂತೂ 'ಸಂಕಲ್ಪ ಶ್ರಾದ್ಧ'ವೆಂಬ ಹೆಸರಿನಲ್ಲಿ ಚುಟುಕೋ ಚುಟುಕು, ವಿದ್ಯೆ ಹೆಚ್ಚಾದಂತೆಲ್ಲ ಜನರ ನಡುವಿನ ಸಂಭಾಷಣೆ ಚುಟುಕು, ಪತ್ರ ವ್ಯವಹಾರ ಚುಟುಕು, ಪತ್ರಿಕೆಗಳಲ್ಲಿ ಸ್ಥಳಾಭಾವದಿಂದ ಲೇಖನಗಳೂ ಚುಟುಕು, ರಾಜ್, ಜಯ್, ವಿಷ್, ವಿನು, ಅನು, ಹೀಗೆ ಹೆಸರುಗಳೂ ಚುಟುಕು, ಇವರ ಉಡುಪುಗಳೂ ಚುಟುಕು!

* ಎಚ್. ಆನಂದರಾಮ ಶಾಸ್ತ್ರೀ, ಬೆಂಗಳೂರು

ಆ ಕಾಲವೊಂದಿತ್ತು. ಮನೆಮಂದಿಯೆಲ್ಲ ಒಟ್ಟಿಗೆ ಕುಳಿತು ಹರಟುತ್ತ ಒಂದೊಂದೇ ಖಾದ್ಯವನ್ನು ಸವಿಯುತ್ತ ವಿಮರ್ಶಿಸುತ್ತ ನಿಧಾನವಾಗಿ ಸರಕು ಒಳಗಿಳಿಸುತ್ತಿದ್ದ ಭವ್ಯ ಭೋಜನದ ದಿವ್ಯ ಕಾಲ ಅದಾಗಿತ್ತು. ಈಗ ಗಡಿಬಿಡಿಯಲ್ಲಿ 'ಟೂ ಮಿನಿಟ್ಸ್ ನೂಡಲ್ಸ್' ನುಂಗಿ ಎದ್ದೇಳುವ ಕಾಲ ಬಂದಿದೆ. ಇನ್ನೂ ಅರ್ಜೆಂಟ್ ಇರುವವರು ಬ್ರೆಡ್ಡಿನ ತುಣುಕುಗಳನ್ನು ಬಸ್ಸಿನಲ್ಲೋ ತಮ್ಮ ಕಾರಿನಲ್ಲೋ ತಿಂದು ಮುಗಿಸಿ ಡ್ಯೂಟಿಗೆ ಹಾಜರಾಗುತ್ತಾರೆ. ಮಧ್ಯಾಹ್ನ ಕಚೇರಿಯ ಬಿಡುವಿನ ವೇಳೆಯಲ್ಲಿ ಕ್ಯಾರಿಯರ್ ತಂಗಳನ್ನು ಗಬಗಬನೆ ಮುಕ್ಕಿ ನೀರು ಕುಡಿಯುತ್ತಾರೆ. ಊಟ ಚುಟುಕಾಗಿದೆ. ಎರಡು ಹೊತ್ತಿನ ಊಟಕ್ಕಾಗಿ ಜೀವನವಿಡೀ ಕಷ್ಟಪಡುವ ನಾವು ಆ ಊಟವನ್ನು ಆನಂದಿಸುವಷ್ಟು ಸಮಯ ಹೊಂದಿಲ್ಲ.

ಹಿಂದೆಲ್ಲ ಗಂಡಸರು ಮನೆ ಜಗಲಿಯ ಮೇಲೋ ಊರ ಅರಳಿಕಟ್ಟೆಯ ಮೇಲೋ ಕುಳಿತು ಗಂಟೆಗಟ್ಟಲೆ ಹರಟುತ್ತಿದ್ದರು. ಹೆಂಗಸರು ದೇವಸ್ಥಾನದಲ್ಲೋ ತಂತಮ್ಮ ಮನೆಗಳ ತುಳಸಿಕಟ್ಟೆಗಳೆದುರೋ ಮುಖಾಮುಖಿಯಾಗಿ ಕೇರಿ ಸುದ್ದಿಯೆಲ್ಲ ಸುದೀರ್ಘವಾಗಿ ಮಾತಾಡುತ್ತಿದ್ದರು. ಈಗೇನಿದ್ದರೂ 'ಹಾಯ್, ಬಾಯ್, ಆರಾಮಾ? ಹ್ಞೂಂ, ಕೆಲ್ಸ ಆಯ್ತಾ, ಇನ್ನೂ ಇಲ್ಲ', ಇಷ್ಟೆ. ಹೆಚ್ಚೆಂದರೆ ದೂರವಾಣಿಯಲ್ಲಿ - ಅವರು ಹತ್ತಿರದಲ್ಲೇ ಇದ್ದರೂ - ಒಂದೆರಡು ಮಾತು, ಫಿನಿಷ್. ಕೆಲವರಿಗೆ ಅದಕ್ಕೂ ಸಮಯವಿಲ್ಲ ಅಥವಾ ಮನಸ್ಸಿಲ್ಲ, ಅವರದು ಬರೀ ಎಸ್‌ಎಂಎಸ್! ಮಾತು ಚುಟುಕಾಗಿದೆ. ಪಶುಪಕ್ಷಿಗಳಿಗಿಂತ ನಾವು ಭಿನ್ನವಾಗಿರುವುದೇ ನಮ್ಮ ನಡೆ'ನುಡಿ'ಯಿಂದಾಗಿ ಎಂಬ ಅರಿವಿದ್ದೂ ಸುಸೂತ್ರ ನಾಲ್ಕು ಮಾತಾಡುವಷ್ಟು ನಮಗಿಂದು ವ್ಯವಧಾನವಿಲ್ಲ ಅಥವಾ ಮನಸ್ಸಿಲ್ಲ.

ಚುಟುಕು-ಜೋಕು : ಕಾಳಿದಾಸನ ಮಹಾಕಾವ್ಯಗಳು ನಮಗೆ ಗೊತ್ತು. ಗೊತ್ತು ಅಂದರೆ, ಕನಿಷ್ಠ ಅವುಗಳ ಹೆಸರಾದರೂ ಗೊತ್ತು. ಅದೂ ಗೊತ್ತಿಲ್ಲದ ವಿದ್ಯಾವಂತರಿಗೆ ಕೊನೇಪಕ್ಷ ಕಾಳಿದಾಸ ಎಂಬ ಹೆಸರಾದರೂ ಗೊತ್ತು. ಇದೇರೀತಿ ಬಾಣನ ಬೃಹತ್ 'ಕಾದಂಬರಿ' ನಮಗೆ ಗೊತ್ತು. ಪಂಪನ ಮಹಾಭಾರತದಿಂದ ಮೊದಲ್ಗೊಂಡು ಕುವೆಂಪುರವರ 'ಶ್ರೀ ರಾಮಾಯಣ ದರ್ಶನಂ'ವರೆಗೆ ಅನೇಕಾನೇಕ ಮಹಮಹಾ ಮಹಾಕಾವ್ಯಗಳನ್ನು ನಮ್ಮ ಹಿರಿಯರು ಓದಿದ್ದಾರೆ, ನಾವು ಹೆಸರು ಕೇಳಿದ್ದೇವೆ. ಆದರೆ ಇಂದು ಕಥೆ, ಕಾವ್ಯ ಎಲ್ಲ ಚುಟುಕಾಗಿದೆ. ಕಾರ್ಡಿನಲ್ಲಿ ಕಥೆ, ಒಂದೇ ವಾಕ್ಯದ ಕಥೆ, ಅರ್ಧ ವಾಕ್ಯದ ಕಥೆ, ಇಂಥವು ಜನಪ್ರಿಯವಾಗತೊಡಗಿವೆ. ಪೂರ್ಣ ಪ್ರಮಾಣದ ಕವಿತೆಗಳಿಗಿಂತ ಚುಟುಕಗಳೇ ಮೆರೆಯತೊಡಗಿವೆ. 'ಚುಟುಕ ಕವಿ'ಗೋಷ್ಠಿಗಳಲ್ಲಿ ಚುಟುಕು ಕವಿಗಳು ಚುಟುಕಾಗಿ ಕುಟುಕುವುದು ಜನರಿಗೆ ಇಷ್ಟವಾಗತೊಡಗಿದೆ. ಸುದೀರ್ಘ ಲಲಿತ ಪ್ರಬಂಧವನ್ನಾಗಲೀ ಹಾಸ್ಯಬರಹವನ್ನಾಗಲೀ ಓದಲು ಯಾರಿಗೆ ಈಗ ಸಮಯವಿದೆ? ಸಮಯವಿದ್ದರೂ ಅಂಥ ಓದು ಯಾರಿಗೆ ಬೇಕಾಗಿದೆ? ನಗೆಹನಿಗಳನ್ನು ಓದಿ ನಕ್ಕು-ಬಿಡೋಣ, ಸಾಕು, ಹೀಗಾಗಿದೆ ನಮ್ಮ ಇಂದಿನ ಮನೋಭಾವ. ಅಂದು ನಾಡಿಗೇರ ಕೃಷ್ಣರಾಯರಾಗಲೀ ಬೀಚಿಯವರಾಗಲೀ ಮಾಡುತ್ತಿದ್ದಂಥ ಸುದೀರ್ಘ ಲಘುಭಾಷಣಗಳು ಇಂದು ನಮಗೆ ಬೇಕಿಲ್ಲ. ಅಭಿನವ ಬೀ'ಛಿ'ಗಳ ಚುಟುಕು-ಜೋಕುಗಳಿಗೆ ಬಿದ್ದುಬಿದ್ದು ನಕ್ಕು ಎದ್ದುನಡೆಯುವ ಜೋಕುಮಾರರು ನಾವಾಗಿದ್ದೇವೆ. ಕಿರಿ-ಕಿರಿ ಜೋಕು ನಮಗೆ ಸಾಕು. 'ಔರೇಕ್ ಜೋಕ್ ಮಾರೋ ಸಾಮೀ', ಎನ್ನುತ್ತೇವೆ, ಅವರು ಜೋಕು ಮಾರುತ್ತಾರೆ. ನಾವು (ಕೇಳಿದ್ದನ್ನೇ ಕೇಳಿ)ಕೊಂಡು - ನಗಾಡಿಕೊಂಡು - ಎದ್ದು ನಡೆಯುತ್ತೇವೆ.

ಸಾಹಿತ್ಯವೂ ಚುಟುಕು : ಜೋಕಿನ ವಿಷಯ ಬಿಡಿ. ಆಧ್ಯಾತ್ಮ, ಮನೋವಿಕಾಸ, ಜೀವನವಿಧಾನ, ಇಂಥ ಗಂಭೀರ ವಿಷಯಗಳೂ ನಮಗಿಂದು ಚುಟುಕಾಗಿಯೇ ತಿಳಿಸಲ್ಪಡಬೇಕು. ಮೂರುಮೂರು ಗಂಟೆಯ ಹರಿಕಥೆ, ಪ್ರವಚನ, ಉಪನ್ಯಾಸಗಳನ್ನು ಕೇಳಲು ನಮಗಿಂದು ವ್ಯವಧಾನವಿಲ್ಲ. ('ಎಲ್ಲೀ ಹರಿಕಥೆ ಹಚ್ಚಿದಿ, ಷಾರ್ಟಾಗಿ ಒದರು', ಅನ್ನುತ್ತೇವೆ.) ಮೂರು ನಿಮಿಷದಲ್ಲಿ ರೇಡಿಯೋದಲ್ಲಿ 'ಚಿಂತನ' ಮುಗಿದುಬಿಡಬೇಕು, ಐದು ನಿಮಿಷದಲ್ಲಿ ಟಿವಿಯಲ್ಲಿ ಉಪನ್ಯಾಸ ಶುಭಂ ಆಗಬೇಕು. ಅಖಿಲ ಭಾರತ ಸಾಹಿತ್ಯ ಸಮ್ಮೇಳನದಲ್ಲೂ ಗಹನಪ್ರಬಂಧವೊಂದು ಆರೇಳು ನಿಮಿಷಗಳೊಳಗೆ ಮಂಡನೆಯಾಗಿಬಿಡಬೇಕು. ಇಲ್ಲದಿದ್ದಲ್ಲಿ ಆರೇಳು ಮಂದಿಯನ್ನುಳಿದು ಇತರರೆಲ್ಲ, 'ಯಾರಿಗೆ ಬೇಕು ಈ ಬೈರಿಗೆ', ಎಂದು ಗೊಣಗುತ್ತ ಎದ್ದು ನಡೆದುಬಿಡುವರೆಂದು (ವೃಥಾ) ಭಯ ಸಂಘಟಕರಿಗೆ! ಒಟ್ಟಾರೆ, ಸಾಹಿತ್ಯವೂ ಇಂದು ಚುಟುಕಾಗಿರಬೇಕು. ಕ್ಷಣಹೊತ್ತಿನೊಳಗೇ ಆಣಿಮುತ್ತು ಉದುರಿಬಿಡಬೇಕು.

ಸಾಹಿತ್ಯ ಮಾತ್ರವಲ್ಲ, ಸಂಗೀತ, ನಾಟಕ, ಎಲ್ಲ ಅಷ್ಟೇ. ಅಹೋರಾತ್ರಿ ಶಾಸ್ತ್ರೀಯ ಸಂಗೀತ, ಬೆಳತನಕ ಯಕ್ಷಗಾನ-ಬಯಲಾಟ, ಅಂಥ ಕಾಲ ಹೋಯಿತು. ಈಗ - ಟಿವಿಯಲ್ಲಿ ನೋಡುವುದಿಲ್ಲವೆ, ಆ ರೀತಿ - ಅರ್ಧ, ಹೆಚ್ಚೆಂದರೆ ಒಂದು ಗಂಟೆಯೊಳಗೆ ಸಂಗೀತ, ಯಕ್ಷಗಾನ ಮುಗಿದುಬಿಡಬೇಕು. ಟಿವಿಯಲ್ಲಂತೂ ಒಮ್ಮೊಮ್ಮೆ ಮೂರೇ ನಿಮಿಷದಲ್ಲಿ ಒಂದು ಶಾಸ್ತ್ರೀಯ ಗಾಯನ ಪೂರೈಸಿಬಿಡಬೇಕು. ಝಲಕ್ ಆದರೂ ಸರಿಯೇ. (ಅಶಾಸ್ತ್ರೀಯವಾದರೂ ಚಿಂತೆಯಿಲ್ಲ!) ಚುಟುಕಾಗಿ ಮುಗಿದುಬಿಡುವುದು ಮುಖ್ಯ.

'ಟಿವಿ ಧಾರಾವಾಹಿ ಮಾತ್ರ ಚುಟುಕಾಗಿಲ್ಲ, ಅದೆಂದಿದ್ದರೂ ಮೆಗಾ ಮಗಾ', ಅನ್ನುವಿರಾ? ಇಲ್ಲೇ ನೀವು ಎಡವಿದ್ದು. ಮೇಲ್ನೋಟಕ್ಕೇನೋ ಅದು ಮೆಗಾ ಅನ್ನಿಸುತ್ತದೆ, ಆದರೆ ಸೂಕ್ಷ್ಮವಾಗಿ ಗಮನಿಸಿದಾಗ ಟಿವಿ ಧಾರಾವಾಹಿಗಿಂತ ಚುಟುಕು ಇನ್ನೊಂದಿಲ್ಲ ಎಂಬ ಸತ್ಯದ ಅರಿವಾಗುತ್ತದೆ. ಪ್ರತಿ ಎಪಿಸೋಡೂ ಕೇವಲ ಅರ್ಧಗಂಟೆ; ಅದರಲ್ಲಿ ಜಾಹಿರಾತು ಕಳೆದರೆ ಉಳಿಯುವುದು ಹದಿನೈದೇ ನಿಮಿಷ; ಅದರಲ್ಲಿ ಐದು ನಿಮಿಷ ಟೈಟಲ್, ಶೀರ್ಷಿಕೆ ಗೀತೆ, ಇದುವರೆಗಿನ ಕಥೆ, ಇತ್ಯಾದಿ; ಉಳಿದ ಹತ್ತು ನಿಮಿಷದಲ್ಲಿ ಅರ್ಧಪಾಲು ಅವಧಿ ಮಾತಿಲ್ಲದ ಕ್ಲೋಸಪ್ ಷಾಟುಗಳು; ಇದೆಲ್ಲ ಜಾತಾ, ಕಥೆಗೆ ಮೀಸಲಾದ ಸಮಯ (ವಾರದಲ್ಲಿ) ಕೇವಲ ಐದೇ ನಿಮಿಷ! ಇದು ಚುಟುಕಲ್ಲದೆ ಮತ್ತೇನು? ಇಷ್ಟಾಗಿ, ಒಂದು ವರ್ಷವಿಡೀ ಓಡಿದ (ಕುಂಟಿದ) ಧಾರಾವಾಹಿಯ ಕಥೆಯನ್ನು ಚುಟುಕಾಗಿ ಒಂದೇ ವಾಕ್ಯದಲ್ಲಿ ಹೇಳಿಬಿಡಬಹುದಲ್ಲವೆ?

ಪಾಠ-ಆಟ : ಶಾಲಾ ಕಾಲೇಜುಗಳ ಪರೀಕ್ಷಾ ಉತ್ತರಗಳೂ ಚುಟುಕಾಗತೊಡಗಿವೆ. ನಾವು ಚಿಕ್ಕವರಿದ್ದಾಗ ಅಡಿಷನಲ್ ಷೀಟುಗಟ್ಟಲೆ ಬರೆಬರೆದು ಲಗತ್ತಿಸುತ್ತಿದ್ದೆವು. ಇದೀಗ ನ್ಯೂ ಟೈಪ್. ಪ್ರಶ್ನೆಪತ್ರಿಕೆಯಲ್ಲೇ ಉತ್ತರ ಟಿಕ್ ಮಾಡಿ ವಾಪಸ್ ಕೊಟ್ಟರಾಯಿತು. ಏಕ್‌ದಂ ಚುಟುಕು. ಕಾಲೇಜು ವಿದ್ಯಾರ್ಥಿಗಳಿಗಂತೂ ಪುಸ್ತಕಗಳೂ ಚುಟುಕು. ತೆಳುವಾದ ಒಂದು ನೋಟ್‌ಬುಕ್ಕನ್ನು ಕೈಯಲ್ಲಿ ತೂಗಾಡಿಸಿಕೊಂಡು ಹೋದರೆ ಸಾಕು, ಇಡೀ ದಿನದ ಕಾಲೇಜು ಪಾಠ ಅಟೆಂಡ್ ಮಾಡಬಹುದು. ಅಂಥ ಎರಡು ನೋಟ್‌ಬುಕ್ ಇದ್ದರೆ ಸಾಕು, ಇಡೀ ವರ್ಷ ತಳ್ಳಬಹುದು! ಪ್ರೈಮರಿ ಶಾಲೆಗಳ ಪುಸ್ತಕಗಳ ಹೊರೆಯನ್ನೂ ಚುಟುಕುಗೊಳಿಸುವ ಚಿಂತನೆ ತೀವ್ರವಾಗಿ ನಡೆದಿದೆ.

ಪಾಠವಷ್ಟೇ ಅಲ್ಲ, ಆಟವೂ ಚುಟುಕಾಗಿದೆ. ಐದು ದಿನಗಳ ಕ್ರಿಕೆಟ್ ಪಂದ್ಯ ಇತ್ತು. ಮೂರು ದಿನಕ್ಕಿಳಿಯಿತು. ಒಂದು ದಿನದ ಪಂದ್ಯ ಶುರುವಾಯಿತು. ಇದೀಗ ಟ್ವೆಂಟಿ20 ಭರಾಟೆ. ಮೂರೇ ಗಂಟೆಯಲ್ಲಿ ಪಂದ್ಯ ಖಲಾಸ್! ಮುಂದೆ, ಟೆನ್10, ಫೈವ್5, ಕೊನೆಗೆ 'ಏಕಾ ಏಕಿ' ಪಂದ್ಯ ಬಂದರೂ ಆಶ್ಚರ್ಯವಿಲ್ಲ. ಕಚೇರಿ ಕೆಲಸದ ಮಧ್ಯೆ ಎದ್ದುಹೋಗಿ ಸಿಗರೇಟ್ ಸೇದಿಬರುವಂತೆ ಒನ್1 ಪಂದ್ಯ ನೋಡಿಬಿಟ್ಟು ಬರಬಹುದು! ಚುಟುಕಿನ ಪರಾಕಾಷ್ಠೆಯಲ್ಲವೆ ಇದು?

ದೇವಸ್ಥಾನಗಳಲ್ಲಿ ಪೂಜೆ ಪುನಸ್ಕಾರ ಚುಟುಕು, 'ಮುಂದುವರಿದ'ವರ ಮನೆಗಳಲ್ಲಿ - ಆಮಂತ್ರಣ ಪತ್ರಿಕೆ ಸಹಿತ - ಮದುವೆ ಮುಂಜಿ ಚುಟುಕು, ಶ್ರಾದ್ಧವಂತೂ 'ಸಂಕಲ್ಪ ಶ್ರಾದ್ಧ'ವೆಂಬ ಹೆಸರಿನಲ್ಲಿ ಚುಟುಕೋ ಚುಟುಕು, ವಿದ್ಯೆ ಹೆಚ್ಚಾದಂತೆಲ್ಲ ಜನರ ನಡುವಿನ ಸಂಭಾಷಣೆ ಚುಟುಕು, ಪತ್ರ ವ್ಯವಹಾರ ಚುಟುಕು, ಪತ್ರಿಕೆಗಳಲ್ಲಿ ಸ್ಥಳಾಭಾವದಿಂದ ಲೇಖನಗಳೂ ಚುಟುಕು, ರಾಜ್, ಜಯ್, ವಿಷ್, ವಿನು, ಅನು, ಹೀಗೆ ಹೆಸರುಗಳೂ ಚುಟುಕು, ಇವರ ಉಡುಪುಗಳೂ ಚುಟುಕು.......ಎಲ್ಲಾ ಚುಟುಕವೋ, ಪ್ರಭುವೇ, ಎಲ್ಲಾ ಚುಟುಕವೋ!

ಚುಟುಕು ಅನಾದಿ : ಹಾಗಂತ, ಈ ಚುಟುಕೆಂಬುದು ಇಂದಿನ ಧಾವಂತದಿಂದಾಗಿ ಹುಟ್ಟಿರುವ ಕೂಸೆಂದು ವಿಶ್ಲೇಷಿಸುವುದೂ ತಪ್ಪಾಗುತ್ತದೆ. ಮಹಾಭಾರತವನ್ನು ರಚಿಸಿದ ವ್ಯಾಸಮಹರ್ಷಿಗಳೇ, 'ಪರೋಪಕಾರಂ ಪುಣ್ಯಾಯ, ಪಾಪಾಯ ಪರಪೀಡನಂ', ಎಂದು ಮಹಾಭಾರತದ ಸಾರವನ್ನು ಚುಟುಕಾಗಿ ಎರಡೇ ಮಾತಿನಲ್ಲಿ ಹೇಳಿಬಿಟ್ಟಿದ್ದಾರೆ. 'ಈ ಎರಡು ಮಾತುಗಳೇ ಹದಿನೆಂಟೂ ಪುರಾಣಗಳ ಸಾರಾಂಶ (ಅಷ್ಟಾದಶ ಪುರಾಣೇಷು ವ್ಯಾಸಸ್ಯ ವಚನದ್ವಯಂ)', ಎಂದು ತೀರ್ಮಾನಿಸುವ ಮೂಲಕ ನಮ್ಮ ಹಿರಿಯರು ಅಷ್ಟಾದಶ ಪುರಾಣಗಳಿಗೂ ಚುಟುಕು ರೂಪವನ್ನು ಬಲು ಹಿಂದೆಯೇ ಕೊಟ್ಟುಬಿಟ್ಟಿದ್ದಾರೆ. ರಾಮಾಯಣದಂಥ ರಾಮಾಯಣವನ್ನು ಕೂಡ ನಮ್ಮ ಹಿರಿಯರು ಚುಟುಕಾಗಿ, 'ಪೂರ್ವಂ ರಾಮ ತಪೋವನಾತ್ ಗಮನಂ, ಹತ್ವಾ ಮೃಗಂ ಕಾಂಚನಂ. ವೈದೇಹಿ ಹರಣಂ. ಜಟಾಯು ಮರಣಂ, ಸುಗ್ರೀವ ಸಂಭಾಷಣಂ, ವಾಲೀ ನಿಗ್ರಹಂ, ಸಮುದ್ರ ತರಣಂ, ಲಂಕಾಪುರೀ ದಹನಂ, ಪಶ್ಚಾತ್ ರಾವಣ ಕುಂಭಕರ್ಣ ಹನನಂ, ಏತತ್ ಹಿ ರಾಮಾಯಣಂ', ಎಂದು ಸಾರಿಬಿಟ್ಟಿದ್ದಾರೆ. ಇನ್ನೂ ಅಗ್ದಿ ಚುಟುಕುಪ್ರಿಯರು ಇದನ್ನು, 'ಶ್ರೀರಾಮ ಜನನಂ, ಸೀತಾಪಹರಣಂ, ರಾವಣ ಹನನಂ, ಏತತ್ ರಾಮಾಯಣಂ', ಎಂದು ಇನ್ನಷ್ಟು ಮೊಟಕುಗೊಳಿಸಿದ್ದಾರೆ! 'ಶ್ಲೋಕಾರ್ಧೇನ ಪ್ರವಕ್ಷ್ಯಾಮಿ ಯದುಕ್ತಂ ಗ್ರಂಥಕೋಟಿಭಿಃ, ಬ್ರಹ್ಮಂ ಸತ್ಯಂ ಜಗನ್ಮಿಥ್ಯಂ ಜೀವೋ ಬ್ರಹ್ಮಸ್ಯ ನಾಪರಃ', ಎಂದು ಸಾರುವ ಮೂಲಕ ಆದಿಶಂಕರರು ಕೋಟಿ ಗ್ರಂಥಗಳ ಸಾರವನ್ನು ಚುಟುಕಾಗಿ ಕೇವಲ ಅರ್ಧ ಶ್ಲೋಕದಲ್ಲಿ ಹೇಳಲು ಯತ್ನಿಸಿದ್ದಾರೆ. ಇದನ್ನೆಲ್ಲ ಗಮನಿಸಿ ನಾನೀಗ ಚುಟುಕಾಗಿ ಹೇಳುವುದಿಷ್ಟೆ: 'ಚುಟುಕು-ಚುಟುಕ ಇದು ಅನಾದಿ ಸಂಗತಿ; ಸನಾತನವಾದದ್ದು; ಇಂದು ಇದಕ್ಕೆ ಡಿಮಾಂಡ್ ಅತಿ; ಅಷ್ಟೆ'.

ಈ ಬ್ರಹ್ಮಾಂಡದಲ್ಲಿ ನಾವೆಲ್ಲ ಒಂದು ತಟಕು. ಅನಂತ ಕಾಲದೆದುರು ನಮ್ಮ ಜೀವಿತಾವಧಿಯೇ ಒಂದು ಚುಟುಕು. ಆದ್ದರಿಂದ, ಚುಟುಕಿಗೆ ಜೈ!

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more