ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಇಮಾನ ಒಳ್ಡತಾವ್ ಮೋಯ್ನಿ ಅಡ್ಡಾಕ್ತಳಂತೆ?

By Staff
|
Google Oneindia Kannada News

Na Bhaskar, Auckland
* ನಾ ಭಾಸ್ಕರ, ಆಕ್ಲಂಡ್

ತನ್ನ ಭಾಮೈದನ ನೆಲೆಸೂರಾದ ನ್ಯುಜೀಲೆಂಡಿಗೆ ಪ್ರವಾಸ ಹೊರಟಿದ್ದ ರಾಮಣ್ಣ ಮತ್ತು ಅವನ ಬಲಗೈ ಬಂಟ ಬಚ್ಚಪ್ಪ ಬೆಂಗಳೂರು ವಿಮಾನ ನಿಲ್ದಾಣದ ಕಸ್ಟಮ್ಸ್ ತಪಾಸಣೆಯ ಸಾಲಿನಲ್ಲಿ ನಿಂತಿದ್ದರು. ವಿಮಾನ ಹತ್ತುವುದಕ್ಕೆ ಮುಂಚೆಯೇ ಅವರಿಗೆ ಬೆಂಗಳೂರಿನಿಂದ ಈಗಾಗಲೇ ಬಹಳ ದೂರ ಹೊರಟುಹೋಗಿದ್ದಂತೆ ಭಾಸವಾಗಿಸುತ್ತಿತ್ತು ಅಲ್ಲಿಯ ವಾತಾವರಣ. ಎಲ್ಲೆಡೆ ಲಾಲೂ ಯಾದವ್ ತಮ್ಮಂದಿರಂತಿದ್ದ ಪೇದೆಗಳು, ಐದು ಹೆಜ್ಜೆಗೊಮ್ಮೆ ಅವರಿವರ ಪಾಸ್‌ಪೋರ್ಟುಗಳನ್ನು ತೆರೆದು ನೋಡುವ ಚಟವಿದ್ದಂತಿದ್ದ ಕೋಟುಧಾರೀ ಚಿತ್ರಗುಪ್ತರು, ಬಚ್ಚಪ್ಪ ಟಿಕೆಟ್ಟು ತೋರಿಸಿ "ಇದ್ಕೆಲ್ ನಿಂತ್ಗಬೇಕವ್ವ?" ಎಂದರೆ "ಗೋ ದಟ್ ಕ್ಯೂ" ಎಂದುತ್ತರಿಸುವ ಆಂಗ್ಲಮೋಹೀ ಸ್ಥಳೀಯರು. ಲಾಗಾಯ್ತಿನಿಂದ ಪರಿಚಿತವಾಗಿದ್ದ ನಿದ್ರಾಲೋಲ ದೇವನಹಳ್ಳಿಯಲ್ಲಿ ಇದೊಂದು ಪರಕೀಯರ ದ್ವೀಪವಿದ್ದಂತೆ ತೋರುತ್ತಿತ್ತು.

ತಪಾಸಣೆಗೆ ಬಚ್ಚಪ್ಪನ ಸರದಿ ಬಂದಾಗ ಖಾಲಿಯಾಗಿದ್ದ ಹೆಂಗಸರ ಸಾಲಿಗೆ ಕಳುಹಿಸಿದರು. ಅಲ್ಲಿದ್ದ ಸದ್ರುಢ ಹೆಣ್ಣು ಪೇದೆ ಅವನ ಎರಡೂ ಕೈಗಳನ್ನು ಸೂರ್ಯನಮಸ್ಕಾರಕ್ಕೆಂಬಂತೆ ಮೇಲ್ಮಾಡಿಸಿ ಬರಸೆಳೆದು ಮೈದಡವುತ್ತ ಕೈಲಿದ್ದ ಮೆಟಲ್ ಡಿಟೆಕ್ಟರನ್ನು ಆತ್ಮೀಯತೆಯಿಂದ ಎಲ್ಲೆಡೆ ಓಡಾಡಿಸಿ ಬಿಡುಗಡೆಯಿತ್ತಳು. ಎಕ್ಸ್‌ರೇ ಮೆಷೀನಿನಿಂದ ಹೊರಬರುತ್ತಿದ್ದ ಬಚ್ಚಪ್ಪನ ಕೈಚೀಲವನ್ನು ಅಲ್ಲೇ ಪಕ್ಕದಲ್ಲಿ ನಿಂತುಕೊಂಡು ಮೂಗಿನೊಳಗೆ ಬೆರಳಾಡಿಸುತ್ತಿದ್ದ ಲಾಲೂ ತಮ್ಮಾಜಿಯೊಬ್ಬ ತಡೆಹಿಡಿದು,

"ಮಸೀಣಮೇ ಇಸಕೆ ಬಿತ್ತರ್ ಬೋತಲ್ ದಿಕೆ. ಖೊಲೀಕ್ ಪಡಿ" ಎಂದ, ಬೆರಳನ್ನು ಹೊರತೆಗೆದು ಫಲಿತಾಂಶವನ್ನು ಪರೀಕ್ಷಿಸುತ್ತ. ಫಲಿತಾಂಶದ ವೀಕ್ಷಣೆಯಲ್ಲಿ ತನ್ಮಯನಾಗಿ ಪಾಲ್ಗೊಳ್ಳತೊಡಗಿದ್ದ ಬಚ್ಚಪ್ಪ ಎಚ್ಚೆತ್ತು "ಯೇನ್ಸೋಮಿ?" ಎಂದ.

ದೂರದರ್ಶನದ ಕೃಪೆಯಿಂದ ಹಿಂದಿಯಲ್ಲಿ ಅಲ್ಪಸ್ವಲ್ಪ ಪಳಗಿದ್ದ ರಾಮಣ್ಣ "ಆ ಮಸೀನ್ಗೆ ನಿನ್ ಬ್ಯಾಗೊಳ್ಗೇನೊ ಬಾಟ್ಲು ಕಾಣ್ತದಂತೆ ಕಣ್ಲೆ, ಅದೇನೈತೋ ತಗುದ್ ತೋರ್ಸತ್ಲಗೆ" ಎನ್ನುತ್ತ ತಾನೇ ಮುಂದಾಗಿ ಬ್ಯಾಗು ತೆರೆದಿಟ್ಟ. ಲಾಲೂ ಸಿಂಗ್ ತನ್ನ ಇದೀಗ ಪವಿತ್ರಗೊಳಿಸಿದ ಕೈಯನ್ನು ಬ್ಯಾಗಿನೊಳಗೆಲ್ಲ ಆಡಿಸಿ ಅರ್ಧತುಂಬಿದ ಹಳೇ ಟ್ರಿಪಲೆಕ್ಸ್ ರಮ್ ಬಾಟಲೊಂದನ್ನು ಈಚೆಗೆಳೆಯುತ್ತ "ಇಸಮೇ ಕಾ ಹೆ?" ಎಂದು ಬಚ್ಚಪ್ಪನ ಕಡೆ ದರ್ಪದ ಹುಬ್ಬಾಡಿಸಿದ.

"ಅಳ್ಳೆಣ್ಣೆ" ಎಂದ ಬಚ್ಚಪ್ಪ, ಅವನ ದರ್ಪಕ್ಕೆ ಮಣಿಯದೆ. ಸುದೀರ್ಘ ಚರ್ಚೆಯ ನಂತರ ಕೈಚೀಲದಲ್ಲಿ ಒಂದೆರಡು ಚಮಚೆಗಿಂತ ಹೆಚ್ಚಾಗಿ ಯಾವ ದ್ರವ್ಯಗಳನ್ನೂ ಕೊಂಡೊಯ್ಯುವಂತಿಲ್ಲವೆಂಬುದು ಮನದಟ್ಟಾಗಿ ಬಾಟಲನ್ನು ಅಲ್ಲೇ ಕಸದ ಬುಟ್ಟಿಗೆ ಎಸೆದ ಬಚ್ಚಪ್ಪ ರೋಸಿ "ಒಟ್ಟ್‌ತುಂಬ ನೀರ್ ಕುಡ್ದಿವ್ನಿ, ಅದ್ನು ಬುಡ್ತನಾ ಇಲ್ಲಾ ಇಲ್ಲೇ ಉಯ್ದೋಬೆಕ ಕೇಳವುನ್ನ" ಎಂದು ಭುಸುಗುಡುತ್ತ ಮುಂದೆ ನಡೆದ. ಇಬ್ಬರೂ ಪ್ರಯಾಣಿಕರ ನಿರೀಕ್ಷಣಾ ಕೊಠಡಿಯೊಳಕ್ಕೆ ಕಾಲಿಟ್ಟು ಸುತ್ತ ಕಣ್ಣುಹಾಯಿಸಿದರು.

ಅಲ್ಲಲ್ಲಿ ಇವರಂತೆ ಮೊದಲಬಾರಿಗೆ ವಿಮಾನ ಹತ್ತಲಿದ್ದವರು ತಮ್ಮ ಬ್ಯಾಗು ಟಿಕೆಟ್ಟುಗಳನ್ನು ಮತ್ತೆ ಮತ್ತೆ ಭದ್ರಪಡಿಸಿಕೊಳ್ಳುತ್ತ ಪೇಟೆಯಲ್ಲಿ ಸಿನಿಮಾ ನೋಡಲು ಹೊರಟಿರುವ ಹಳ್ಳಿ ಹುಡುಗರಂತೆ ಉತ್ಸುಕರಾಗಿ ಅಕ್ಕಪಕ್ಕದವರನ್ನು ನೋಡುತ್ತ ಕುಳಿತಿದ್ದರು. ಅವರ ಅನನುಭವೀ ಚರ್ಯೆಗಳನ್ನು ಇದೀಗ ಎರಡನೇ ಬಾರಿ ವಿಮಾನ ಪ್ರಯಾಣ ಮಾಡಲಿದ್ದವರು ತಾತ್ಸಾರದ ಹುಬ್ಬುಗಂಟಿಕ್ಕಿ ಗಮನಿಸುತ್ತಿದ್ದರು, ನೂರಾರು ಬಾರಿ ದೇಶಾಟನೆ ಮಾಡಿ ನುರಿತವರಂತೆ ನಟಿಸುತ್ತ. ನಿಜವಾಗಿಯೂ ನೂರಾರು ಬಾರಿ ಪ್ರಯಾಣ ಮಾಡಿದ್ದವರು ಯಾರೂ ಇಲ್ಲದ ಮೂಲೆಗಳನ್ನು ಹುಡುಕಿ ಪೇಪರು ಪುಸ್ತಕಗಳಲ್ಲಿ ಮಗ್ನರಾಗಿದ್ದರು.

"ಆವಮ್ಮ ಯಾಕ್ ನನ್ನ್ ಅಂಗ್ ಮೈದಡ್ವಿ ನೋಡಿದ್ದು?" ಬಚ್ಚಪ್ಪ ಖಾಲಿಯಿದ್ದ ಕೆಲವು ಸಾಲುಕುರ್ಚಿಗಳ ಕಡೆ ಹೆಜ್ಜೆಯಿಡುತ್ತ ಕೇಳಿದ.

"ಈಟಗ್ಲ ಕೋಟು ಪ್ಯಾಂಟಾಕಿರವ್ನು ಎಲ್ಲೋ ದಾರಾಸಿಂಗ್ ತಮ್ಮ್‌ನೇ ಇರ್ಬೇಕು ಅಂತ ಮುಟ್ ನೋಡವ್ಳೇಳೊ" ಎಂದ ರಾಮಣ್ಣ, ಮತ್ತೆ ಬಚ್ಚಪ್ಪನ ಸಡಿಲ ಬಟ್ಟೆಗಳ ಗೇಲಿಗಿಳಿಯುತ್ತ.

"ಅದಲ್ಲಪೋ, ಅದೆಂತದೋ ಮೀಟ್ರ ಮೈಮ್ಯಾಗೆಲ್ಲ ಓಡಾಡ್ಸುದ್ಲಲ್ಲ....ಅದೇ, ನನ್ನ್ ತಾಯ್ತುದ್ ತಾವ್ ಕೀ ಕೀ ಅಂತ್ ಬಡ್ಕಣ್ತಲ್ಲ, ಅದೇನ್ಕೇಂತ?"

"ಒಟ್ಟೆ ತಾವ್ ಚಾಕೂ ಚೂರೀ ಬಾಂಬು ಬಟ್ರೆ ಏನಾರ ಅವ್ತಿಟ್ಗಂಡೀಯೆನೋ ಅಂತ್ ನೋಡಕ್ ಕಣ್ಲೆ"

"ಓ?......ಬಾಂಬ ಮಡೀಕಂಡೇ ಬಂದಿರೋರ್ನ ಈಪಾಟಿ ತಬ್ಗ್ಯಂಡ್ ಮುದ್ದಾಡುದ್ರೆ ಅದು ಡಮ್ ಅನ್ಬುಡಕುಲ್ವೆ?"

"ಅನ್ನ್‌ದೆ ಮತ್ತಿಗ!" ಎಂದ ರಾಮಣ್ಣ, ನಗು ಹತ್ತಿಕ್ಕಿ. "ಅದ್ಕೆ ಆ ಮೀಟ್ರು ಓಡ್ಸೋ ಕೆಲ್ಸುಕ್ಕೆ ದಿನಾ ಲಾಟ್ರಿ ತಗಿತರಂತೆ ಕಣ. ಯಾರೆಸ್ರು ಬತ್ತದೋ ಅವ್ರೆಸ್ರಲ್ ಮಿಕ್ಕೋರು ದ್ಯಾವುರ್ಗ್ ಅರ್ಚ್ನೆ ಮಾಡುಸ್ತರಂತೆ"

".....ಸಾಬ್ರೆಸ್ರು ಬಂದ್ರೆ?"

"ಥೂ ಆಳಾಗೋಗ್ಲಿ ಬುಡ್ಲ.." ಎಂದ ರಾಮಣ್ಣ, ಯಾರಿಗೂ ಹೊಳೆಯದ ಪ್ರಶ್ನೆಗಳನ್ನು ಕೇಳುವ ಬಚ್ಚಪ್ಪನ ಅಪೂರ್ವ ಕಲೆಗೆ ಮತ್ತೊಮ್ಮೆ ಸೋಲುತ್ತ.

ಬಚ್ಚಪ್ಪ ಕೈಚೀಲವನ್ನು ಸಾಲುಕುರ್ಚಿಯೊಂದಕ್ಕೊರಗಿಸಿ ಕಿಟಕಿಯಾಚೆ ನೋಡಿದ. ಮುಸ್ಸಂಜೆಯ ಮಬ್ಬು ಕತ್ತಲೆಯಲ್ಲಿ ತಮ್ಮ ಬೆಳ್ಗೊಳಕ್ಕೆ ಮರಳುತ್ತಿರುವ ಹಂಸಗಳಂತೆ ವಿಮಾನಗಳು ಬಿಂಕದಿಂದ ಬಂದಿಳಿಯುವುದೂ, ಸ್ವಲ್ಪ ಹೊತ್ತಿಗೆ ಏನೋ ಮರೆತಂತೆ ಮತ್ತೆ ಅದೇ ಪ್ರಯಾಸವಿಲ್ಲದ ಬೆಡಗಿನಿಂದ ರೆಕ್ಕೆ ಮಿಡಿಯದೆ ಹಾರಿಹೋಗುವುದನ್ನು ಎವೆಯಿಕ್ಕದೆ ನೋಡುತ್ತಾ, "ಈ ಇಮಾನ್ಗೋಳು ರೆಕ್ಕೆ ಬಡಿದಲೆನೆ ಅದೆಂಗ್ ಮ್ಯಾಕ್ಕೊಯ್ತವಪ್ಪ" ಎಂದ.

"ಇವಗ್ ಅನ್ಮಂತ ರೆಕ್ಕೆ ಬಡಿದಲೆ ಲಂಕೆಗ್ ಆರ್ಕಂಡ್ ಓಗ್ಬರ್ಲಿಲ್ವ? ಅಂಗೇ..." ತಾಂತ್ರಿಕ ಉತ್ತರ ಕೊಡಲಾಗದೆ ಉಪಮಾನದ ಉಪೇಕ್ಷೆಗೆ ಮೊರೆಹೋದ ರಾಮಣ್ಣ. "ಕೈ ಅಗಲ್ವಾಗಿಕ್ಕಂಡ್ ಪಾಷ್ಟಾಗ್ ಓಡುದ್ರೆ ನೀನೂ ಮ್ಯಾಕ್ ಓಬೋದೇಳ"

"ಅದ್ಸರೀನ್ನು...ಕೈ ಅಗುಲ್ವಾಗಿಟ್ಗಣದೇನ್ ಬ್ಯಾಡ...ಆ ಅಲ್ಸೂರಗ್ ರೋಡ್ ದಾಟದ್ ವಸಿ ತಡ್ವಾದ್ರಾಯ್ತು, ಬಸ್ಸು ಲಾರಿಗುಳೇ ಚಕ್ ಅಂತ ಮ್ಯಾಕ್ ಕಳುಸ್‌ಬುಡ್ತವೆ....ಆರಾಡ್ಕಂಡಿರ್ಲೀಂತ" ಎಂದ ಬಚ್ಚಪ್ಪ.

ಮೇಲಕ್ಕೆ ಹೋಗುವ ಮಾತು ಬಂದೊಡನೆ ಅವನ ತಲೆಯಲ್ಲಿ ಕೊರೆಯುತ್ತಿದ್ದ ಇನ್ನೊಂದು ವಿಷಯ ಪ್ರಸ್ತಾಪಿಸಿದ. "ಔದೂ, ಈ ಇಮಾನ ಮ್ಯಾಕ್ಕೋಗೋ ತಾವ ಯಾವ್ದೋ ಬೀಳೀ ಸೀರೆ ಉಟ್ಗಂಡಿರೋ ಮೋಯ್ನಿ ಅಡ್ಡ್ ಬತ್ತಳಂತ್ ಔದೇನಪೊ?"

"ಊಂ ಕಣ್ಲೆ......ಕತ್ತ್ಲಾದ್ಮೇಲ್ ಒಲ್ಡೋ ಇಮಾನ್ಗುಳ್ನ್ ಅಡ್ಡಾಕ್ತದಂತೆ...." ರಾಮಣ್ಣ ಮುಖ ಬಿಗಿ ಹಿಡಿದು ಬಚ್ಚಪ್ಪನ ಕಡೆ ನೋಡಿದ.

"ಇನ್ನೇನ್ ಕತ್ಲಾಯ್ತಾದಲಪ..." ಎಂದ ಬಚ್ಚಪ್ಪ ತವಕದಿಂದ, ರಾಮಣ್ಣನ ಕಣ್ಣಲ್ಲಿ ಕೀಟಲೆಯ ಕುರುಹು ಹುಡುಕುತ್ತ.

"ಇಲ್ಲೇಳ, ಅದ್ ಅಮಾಸೆ ದಿನ ಮಾತ್ರನಂತೆ ಬರದು.." ರಾಮಣ್ಣ ಇಲ್ಲದ ಆಕಳಿಕೆ ಬರಿಸಿಕೊಂಡು ಅಂಗೈಯಲ್ಲೇನೋ ಹುಡುಕತೊಡಗಿದ.

"ಅಯ್, ಇವತ್ತೇ ಅಲ್ವ ಅಮಾಸೆ !" ಬಚ್ಚಪ್ಪನ ತವಕ ನಸುಗಾಬರಿಗೆ ತಿರುಗಿತು.

"ಥೂ ಅದ್ಯಾಕಂಗಾಡೀ ಬುಡ್ಲ, ಅದ್ ಬರೀ ಸಡ್ಲ ಪ್ಯಾಂಟ್ ಆಕಿರೋರ್ಗೇನಂತೆ ಕಾಣದು..." ಎನ್ನುತ್ತ ರಾಮಣ್ಣ ಬಚ್ಚಪ್ಪನ ಪೇಚಿಗೆ ಮೈಯೆಲ್ಲ ಕುಲುಕಿಸಿ ನಕ್ಕ. "ಯಾಕ್ ಮೋಯ್ನಿ ಸಂದಾಗಿದ್ರೆ ಒಳುಕ್ ಕರ್ದು ಪಕ್ದಾಗ್ ಕೂರ್ಸ್ಕಂಡೀಯಾ?"

"ಯೇ, ಅವು ಕರ್‍ಯೋಗಂಟ ಇದ್ದಾವಾ? ಗಾಳೀಗ್ ಬಂದು ಅಂಗೆ ಮೈಯಗ್ ಸೇರ್ಕಬುಡಲ್ವೆ..!" ಎಂದ ಬಚ್ಚಪ್ಪ, ಸ್ವಲ್ಪ ನಿರಾಳದ ಉಸಿರೆಳೆಯುತ್ತ.

"ಒಹೊಹೊ....ರಮ್ಮೊಳಿಕ್ ಕೋಲ ಸೇರ್ಕಬುಟ್ಟಂಗೆ ನನ್ಮಗುಂದು ! ಬಾಕ್ಲು ಸೊಂದಗ್ ಅವ್ ಬರ್ಬೌದು, ಆದ್ರೆ ಸೀರೆ ಸಿಗಾಕ್ಕಬುಡ್ತದಲಪ! ಅಂದಂಗೇ....ಈ ನಿಮ್ಮ್ ಮೋಯ್ನಿಗುಳೆಲ್ಲ ಯಾಕ್ ಯಾವಾಗೂ ಬಿಳೀ ಸೀರೇನೇ ಉಟ್ಗಂಡ್ ಓಡಾಡ್ತವ್ಲ?"

ಮುಂದಿನ ಭಾಗ : ಮೋಯ್ನಿಗುಳೆಲ್ಲ ಯಾಕ್ ಯಾವಾಗೂ ಬಿಳೀ ಸೀರೇನೇ ಉಟ್ಗಂತವೆ? »

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X