• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಸ್ವರ್ಗ-ನರಕದಲ್ಲಿ ಪತ್ರಿಕಾಗೋಷ್ಠಿ!

By * ಎಚ್. ಆನಂದರಾಮ ಶಾಸ್ತ್ರೀ, ಬೆಂಗಳೂರು
|

ಸ್ವರ್ಗ ಮತ್ತು ನರಕಗಳೆರಡರಲ್ಲಿಯೂ ಏಕಕಾಲಕ್ಕೆ ವಿಶೇಷ ಘಟಕಗಳನ್ನು ತೆರೆಯಲು ಈಚೆಗಷ್ಟೇ ನಿರ್ಧರಿಸಲಾಯಿತು. ಭೂಲೋಕದ ಮಾನವರಿಗಾಗಿ ಆ ಘಟಕಗಳಾದ್ದರಿಂದ ಆ ಬಗ್ಗೆ ಎರಡೂ ಕಡೆ ಪತ್ರಿಕಾಗೋಷ್ಠಿ ಏರ್ಪಡಿಸಿ ಭೂಲೋಕದ ಪತ್ರಕರ್ತರನ್ನು ಆಹ್ವಾನಿಸಲಾಯಿತು. ಪತ್ರಕರ್ತರಿಗಾಗಿ ಉಭಯ ಕಡೆಗಳಿಗೂ ದೇವೇಂದ್ರನ ಕಚೇರಿಯು ವಿಶೇಷ ಸಾರಿಗೆ ವ್ಯವಸ್ಥೆ ಮಾಡಿತ್ತು. ಕ್ಯಾಮೆರಾ, ಮೊಬೈಲ್ ಫೋನ್, ಕಂಪ್ಯೂಟರ್, ಚಿತ್ರಗ್ರಾಹಕ ಯಂತ್ರಗಳು ಹಾಗೂ ಧ್ವನಿಮುದ್ರಕ ಯಂತ್ರಗಳನ್ನು ನಿಷೇಧಿಸಲಾಗಿತ್ತು. ಪತ್ರಕರ್ತರು ಖಾಲೀಹಾತ್ ಬರಬೇಕಿತ್ತು. ಪೆನ್ನು ಮತ್ತು ಹಾಳೆಗಳನ್ನು ಅಲ್ಲಿಯೇ ಒದಗಿಸುವ ವ್ಯವಸ್ಥೆಯಾಗಿತ್ತು. ದೃಶ್ಯಮಾಧ್ಯಮದವರೂ ಕೂಡ ಈ ನಿಯಮಕ್ಕೆ ಒಳಪಡಬೇಕಾಗಿತ್ತು. ಆ ಪೆನ್ನು-ಹಾಳೆಗಳೋ, ಭೂಲೋಕದಿಂದ ತರಿಸಿದವೇ ಆಗಿದ್ದವು!

ಸ್ವರ್ಗದ ಪತ್ರಿಕಾಗೋಷ್ಠಿಗೆ ಹೋಗಿಬರಲು ಪತ್ರಕರ್ತರ ನೂಕುನುಗ್ಗಲು. ನರಕಕ್ಕೆ ಹೋಗಿಬರಲು ಯಾರೂ ತಯಾರಿಲ್ಲ. ಕೊನೆಗೆ ಜ್ಯೂನಿಯರ್ ಪತ್ರಕರ್ತ-ಕರ್ತೆಯರನ್ನು ನರಕಕ್ಕೆ ಅಟ್ಟಲಾಯಿತು.

ನರಕದ ಪತ್ರಿಕಾಗೋಷ್ಠಿಯಲ್ಲಿ ಯಮನ ವಕ್ತಾರನು, ಭೂಲೋಕದ ರಾಜಕಾರಣಿಗಳಿಗಾಗಿಯೇ ಸ್ಥಾಪಿಸಲಾಗುವ ಸದರಿ ವಿಶೇಷ ಘಟಕದ ಬಗ್ಗೆ ಈ ರೀತಿ ವಿವರಿಸಿದನು:

'ರಾಜಕಾರಣಿಗಳು ತಾವು ಮಾಡಿದ ಪಾಪಗಳಿಗೆ ಭೂಲೋಕದಲ್ಲಿ ಯಾವುದೇ ಶಿಕ್ಷೆಯನ್ನು ಅನುಭವಿಸದೇ ಹಾಯಾಗಿ ಮಜಾಮಾಡಿಕೊಂಡಿದ್ದು ಕೊನೆಗೆ ನರಕಕ್ಕೆ ಬರುತ್ತರಾದ್ದರಿಂದ ನರಕದಲ್ಲಿ ಅವರಿಗೆ ನಾನಾ ಬಗೆಯ ಶಿಕ್ಷೆಗಳನ್ನು ಕೊಡುವ ಅವಶ್ಯಕತೆಯಿದೆ. ಭೂಲೋಕದಿಂದ ಬರುವ ರಾಜಕಾರಣಿಗಳ ಸಂಖ್ಯೆಯೂ ಬರಬರುತ್ತ ಏರತೊಡಗಿದೆ. ಆದ್ದರಿಂದ ಅವರಿಗಾಗಿಯೇ ವಿಶೇಷ ಘಟಕವನ್ನು ಸ್ಥಾಪಿಸುವ ನಿರ್ಧಾರವನ್ನು ಕೈಗೊಳ್ಳಲಾಗಿದೆ. ಈ ಸಲದ ಭಾರತೀಯ ಯುಗಾದಿಯ ಮುನ್ನಾದಿನವಾದ ಅಮಾವಾಸ್ಯೆಯ ರಾತ್ರಿ ಹನ್ನೆರಡಕ್ಕೆ ಘಟಕದ ಉದ್ಘಾಟನೆ', ಎಂದು ನರಕದ ವಕ್ತಾರನು ಪತ್ರಕರ್ತರಿಗೆ ವಿವರಿಸಿದನು.

'ಭೂಲೋಕದಲ್ಲಿ ಚುನಾವಣಾ ನೀತಿಸಂಹಿತೆಯನ್ನು ಉಲ್ಲಂಘಿಸಿದ್ದವರಿಗೆ ಇಲ್ಲಿ ಯಾವ ರೀತಿಯ ಶಿಕ್ಷೆಗಳನ್ನು ಕೊಡುತ್ತೀರಿ?' ಎಂದು ಇಂಗ್ಲಿಷ್ ದೃಶ್ಯಮಾಧ್ಯಮವೊಂದರ ಪ್ರತಿನಿಧಿ ಕೇಳಿದಳು. (ಅವಳ ಹೆಸರು ಬುರ್ಖಾ ದತ್.)

'ಚುನಾವಣಾ ನೀತಿಸಂಹಿತೆಯನ್ನು ಉಲ್ಲಂಘಿಸಿದ್ದವರಿಗೆ ಯಾವ ಶಿಕ್ಷೆಯನ್ನೂ ಇಲ್ಲಿ ನೀಡಲಾಗುವುದಿಲ್ಲ. ಏಕೆಂದರೆ ನೀತಿಸಂಹಿತೆ ಉಲ್ಲಂಘನೆಗಾಗಿ ಅವರೆಲ್ಲ ಭೂಲೋಕದಲ್ಲೇ ಚುನಾವಣಾ ಆಯೋಗದ ಕೈಲಿ ತಕ್ಕ ಶಿಕ್ಷೆ ಅನುಭವಿಸಿಯೇ ಬಂದಿರುತ್ತಾರೆ. ಆದ್ದರಿಂದ ಅದಕ್ಕಾಗಿ ಇಲ್ಲಿ ಪುನಃ ಶಿಕ್ಷೆ ಕೊಡುವ ಅಗತ್ಯವಿಲ್ಲ', ಎಂದು ನರಕದ ವಕ್ತಾರನು ಉತ್ತರಿದನು.

ಅತ್ತ ಸ್ವರ್ಗದ ಪತ್ರಿಕಾಗೋಷ್ಠಿಯಲ್ಲಿ ಸ್ವರ್ಗದ ವಕ್ತಾರನು ಹೇಳಿದ್ದಿಷ್ಟು:

'ಈ ಸಲದ ಭಾರತೀಯ ಯುಗಾದಿಯ ಆರಂಭದ ಶುಭಗಳಿಗೆಯಾದ ರಾತ್ರಿ ಹನ್ನೆರಡು ಗಂಟೆ, ಒಂದು ಸೆಕೆಂಡಿಗೆ ನಮ್ಮ ವಿಶೇಷ ಘಟಕದ ಉದ್ಘಾಟನೆ. ತಮ್ಮ ನ್ಯಾಯಬದ್ಧ ಬೇಡಿಕೆಗಳನ್ನು ಹಿಡಿದುಕೊಂಡು ಸರ್ಕಾರಿ ಕಚೇರಿಗಳಿಗೆ ಅಥವಾ/ಮತ್ತು ರಾಜಕಾರಣಿಗಳ ಬಳಿಗೆ ಓಡಾಡಿ ಓಡಾಡಿ ಓಡಾಡಿ ಬೇಸತ್ತು ಸತ್ತು ಇಲ್ಲಿಗೆ ಬರುವ ಬಡಪಾಯಿಗಳಿಗೆ ವಿಶೇಷ ಸುಖ-ಸೌಲತ್ತುಗಳನ್ನು ನೀಡುವ ಮೂಲಕ ನ್ಯಾಯ ದೊರಕಿಸಿಕೊಡಲಿಕ್ಕಾಗಿ ಈ ಘಟಕದ ಸ್ಥಾಪನೆ.'

ಆಗ ವರದಾ ನಾಯಕ್ ಎಂಬ ಟಿವಿ ಪತ್ರಕರ್ತೆ ಬಾಲಕಿಯು ಈ ರೀತಿ ಪ್ರಶ್ನೆ ಕೇಳಿದಳು: 'ಮುಖ್ಯಮಂತ್ರಿಗಳ ಜನತಾದರ್ಶನದ ಬಲೆಗೆ ಬಿದ್ದು ಒದ್ದಾಡಿದ ಮಿಕಗಳಿಗೇನಾದರೂ ವಿಶೇಷ ಸುಖ-ಸೌಲತ್ತುಗಳಿವೆಯೆ?'

ವಕ್ತಾರನ ಉತ್ತರ: 'ಖಂಡಿತ ಖಂಡಿತ. ಇಲ್ಲದಿದ್ದರೆ ಹೇಗೆ?'

ಮೇಲಿನ ಎರಡೂ ಪತ್ರಿಕಾಗೋಷ್ಠಿಗಳಿಗೆ (ಊಹ್ಞೂಂ, ಒಂದು ಮೇಲಿನ ಮತ್ತು ಇನ್ನೊಂದು ಕೆಳಗಿನ ಪತ್ರಿಕಾಗೋಷ್ಠಿಗೆ) ಹೋಗಿಬಂದ ಪತ್ರಕರ್ತರನ್ನು ಗುಳಿಗೆಪ್ಪನವರು ವಿಚಾರಿಸಿದಾಗ ಒಂದು ಆಶ್ಚರ್ಯಕರ ಸಂಗತಿ ಹೊರಬಿತ್ತು! ಸದಾಕಾಲ ಮೃಷ್ಟಾನ್ನಭೋಜನವನ್ನೇ ಉಂಡು ಉಂಡು ನಾಲಗೆ ಜಡ್ಡು ಹಿಡಿಸಿಕೊಂಡಿದ್ದ ಸ್ವರ್ಗದ ವ್ಯವಸ್ಥಾಪಕರು ಇದೇ ಅವಕಾಶವೆಂದು ಪತ್ರಿಕಾಗೋಷ್ಠಿಯಲ್ಲಿ ಸಖ್ಖತ್ ಖಾರದ ಅಡುಗೆ (ಅಂದರೆ ಎನ್.ವಿ. ಅಲ್ಲ) ಮಾಡಿಸಿದ್ದರಂತೆ! 'ಯಮ'ಖಾರವಂತೆ! ಅದೇವೇಳೆ ನರಕದಲ್ಲಿ, ಇದೇ ಚಾನ್ಸ್ ಎಂದು ಅಲ್ಲಿನ ವ್ಯವಸ್ಥಾಪಕರು ಬಗೆಬಗೆಯ ಭಕ್ಷ್ಯಭೋಜ್ಯಗಳ ಭೂರಿಭೋಜನದ ಏರ್ಪಾಟು ಮಾಡಿದ್ದರಂತೆ!

ಇನ್ನೊಂದು ವಿಷಯವೆಂದರೆ, ಬಹುಪಾಲು ನಟನಟಿಯರು, ಜನನಾಯಕರು, ರೂಪದರ್ಶಿಯರು ಇತ್ಯಾದಿಯವರೆಲ್ಲ ನರಕದಲ್ಲೇ ಇದ್ದರಂತೆ! ಪತ್ರಕರ್ತರಿಗೆ ಅವರನ್ನೆಲ್ಲ ಕಾಣುವ ಅವಕಾಶ ದೊರಕಿತಂತೆ. ಸ್ವರ್ಗದಲ್ಲೋ, ಅಪ್ಪಟ ಗಾಂಧಿವಾದಿಗಳು, ನಿಜಸನ್ಯಾಸಿಗಳು, ಮುಗ್ಧರು, ಭೂಲೋಕದಲ್ಲಿ ನಾನಾ ಬಗೆಯ ಶೋಷಣೆಗೊಳಗಾದವರು ಇಂಥವರೇ ತುಂಬಿದ್ದರಂತೆ. ಸ್ವರ್ಗಕ್ಕೆ ಹೋಗಿಬಂದ ಪತ್ರಕರ್ತರೀಗ ಕೈಕೈ ಹಿಸುಕಿಕೊಳ್ಳುತ್ತಿದ್ದಾರೆ!

ಮತ್ತೊಂದು ಹಾಸ್ಯ

ಯಮಲೋಕದ ಸಿಇಓ ಯಮಣ್ಣನ ಪೀಕಲಾಟ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more