ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ದೇವೇಗೌಡರ ಹೊಸಾ ಡೀಲು

By * ವೆಂಕಟೇಶ್ ದೊಡ್ಡಮನೆ
|
Google Oneindia Kannada News

(ಗೌಡರ ಡೀಲು ಮುಂದುವರಿದಿದೆ...)

"ಅಲ್ಲಾ ದತ್ತು, ದೇಶ್ಪಾಂಡೆಗೆ ಶುಭಾಶಯ ಜೊತೆಗೆ ಎನಾನ ಕಳುಸ್ ಕೊಡಬೇಕಾಗಿತ್ತಲಪ್ಪಾ" , ಎಂದರು ದೈನ್ಯತೆಯಿಂದ. "ಎಲ್ಲ ವ್ಯವಸ್ಥೆ ಆಗಿದೆ ಸ್ಸಾರ್, ಒಂದು ದೊಡ್ಡ ಹೂಗುಚ್ಛ, ಹಣ್ಣು, ಹಾರ, ಸ್ವೀಟು...ಕಳುಸ್ ಕೊಟ್ಟಿದೀನಿ" ದತ್ತು ಪೆದ್ದು ಪೆದ್ದಾಗಿ ವರದಿ ಮಾಡಿದರು. ಅದಕ್ಕೆ ಗೌಡರು, "ಅಣ್ಣು, ಊವು ಅಲ್ಲಪ್ಪಾ, ರೋಲೆಕ್ಸ್ ವಾಚು ಕೊಡಬೇಕು ಅಂತ ಏಳುದ್ನಲ ಕೊಟ್ಟಿಲ್ವ?" ತಮ್ಮ ಪ್ರೇಮದ ಕುರುಹಾಗಿ ಅಷ್ಟೂ ಕೊಡ್ದೊರೆ ಹೇಗೆ, ಮುಂದಿನ ಎಲೆಕ್ಷನ್ ಡೀಲ್ ಈಗ್ಲಿಂದಲೇ ಶುರುಹಚ್ಕಳದು ಬೇಡ್ವ? ಆದರೆ ದತ್ತಣ್ಣ ಪಳಗಿರೋರು ಬುಟ್ಬುಡ್ತಾರ.., ಪತ್ರಕರ್ತರ ಎಂಥೆಂತ ಕಮಂಗಿ ಪ್ರಶ್ನೆಗಳಿಗೆ ಉತ್ರಕೊಟ್ಟವರು, ಬತ್ತಳೆಕೆಲಿ ಯಾವ್ದರ ಒಂದು ಬಾಣ ಇಟ್ಕೊಂಡೇ ಇರ್ತಾರೆ.

"ವಾಚನ್ನ ನೀವೇ ಕೈಯ್ಯಾರ ಕೊಟ್ರೆ ಚಂದಾಕಿರುತ್ತೆ ಅಲ್ವ ಸ್ಸಾ..."ದತ್ತಣ್ಣನ ಜಾಣತನ ಮೆಚ್ಚಿಕೊಂಡರು ಗೌಡರು. ಎಷ್ಟಾದರೂ ಪಟ್ಟದ ಸಿಸ್ಯ ಅಲ್ವ.... ಗೌಡರು ಅಂತ ಹೆಗಲು ಮೇಲೆ ಕೈ ಹಾಕಿಕೊಂಡು"ನಾಳೆ ಇಪ್ತಾರ್ ಕೂಟದಾಗೆ ದೇಶಪಾಂಡೆ ಪಕ್ದಾಗೆ ಸೀಟ್ ಮಾಡ್ಬುಡಪ್ಪ". ಅರ್ಥವಾಗಿ "ಹ್ಞೂ ಸ್ಸಾ....ಅದೇನ್ ಬುಡಿ ಆಯ್ತು.." ಗೋಣು ಅಲ್ಲಾಡಿಸಿದರು ದತ್ತಣ್ಣ. "ಲೇಟಗೊಯ್ತು, ನಾನು ಬರ್ತೀನ್ ಸ್ಸಾ, ನಾಳೆ ಹೊತ್ಗೆಲ್ಲ ಬಂಬುಡ್ತೀನಿ" ಕೈ ವಾಚು ನೋಡುತ್ತಾ ದತ್ತು ಬಡ ಬಡ ಹೇಳಿದರು."ಮುದ್ದೆ ಉಂಡ್ಕಂಡು ಹೋಗುವೆಯಂತೆ ಬಾರಪ್ಪ" ಗೌಡರು ಪ್ರೀತಿಯಿಂದ ಕರೆದರು. ಆದರೆ ದತ್ತೂ ಆಗಲೇ ಮನೆಯಲ್ಲಿ ಹೆಂಡತಿ ಅಡುಗೆಯ ನುಗ್ಗೇಕಾಯಿ ಸಾರು ನೆನೆಸ್ಕೊಂಡಾಗಿತ್ತು, ಸರ ಸರ ಹೆಜ್ಜೆ ಹಾಕಿದರು.

ಗೌಡರು ಲೆಕ್ಕಾಚಾರ 'ಎಲ್ಲಾ ಸರಿಯಾಗ್ತಾ ಐತೆ, ಹೊದ್ವರ್ಸ ರುದ್ರ ಚಂಡೀ ಯಾಗ ಮಾಡ್ಸಿದ್ದು ಕೆಲ್ಸುಕ್ಕೆ ಬರ್ತಾ ಐತೆ' ಅಂತ ಮನುಸ್ನಾಗೇ ಅಂದ್ಕೊಳುತ್ತ ಒಳಗ್ ಬಂದ್ರು. ಚೆನ್ನಮ್ಮ ಇನ್ನೂ ಊಟಮಾಡದೆ ಟಿವಿಲಿ ಕನ್ನಡ ಸೀರಿಯಲ್ ನೋಡ್ತಾ, ಕಾಯ್ತಾನೆ ಇದ್ರು. ಆಹಾಹ್ ಅದೇನ್ ಘಮ್ ಅಂತ ಐತೆ, ಮುಲ್ಲಾ ಸಾಬರು ಯಾವ್ದೋ ಹೊಸ ಸೆಂಟ್ ಕೊಟ್ ಹೋಗಿರ್ಬೇಕು, ಆಮೇಲ್ ಕೇಳಣ. "ಬಿಸಿ ಮುದ್ದೆ ತಂದು ಇಕ್ಲ ದೇವ್ರು" ಚೆನ್ನಮ್ಮ ಗೌಡರ ಮುಖವನ್ನೇ ನೋಡುತ್ತಾ.

"ಆಯ್ತಮ್ಮ ಈಗ ತಂದು ಮಡಗು" ಗೌಡರು ತಲೆಯಮೇಲಿದ್ದ ಮಸೀದಿ ಟೊಪ್ಪಿಯನ್ನು ಗೂಟದ ಮೇಲೆ ತಗುಲಿ ಹಾಕುತ್ತಾ ಹೇಳಿದ್ರು. ಯೆಂಗೂ ಒಟ್ಟೆ ಹಸಿತ ಇತೆ ಒಂದೆಲ್ಡು ಮುದ್ದೆ ಇಕ್ಕೊಂಡ್ರೆ ಒಟ್ಟೆ ತಣ್ಗಾಯ್ತದೆ. ತಟ್ಟೆಯನ್ನ ಕೈಯಲ್ಲಿ ತೆಗೆದು ಕೊಳ್ತಾ ಇನ್ನೇನು ಮುದ್ದೆಗೆ ಕೈ ಹಾಕೋ ಹೊತ್ತಿಗೆ ಗೌಡರ ಪರ್ಸನಲ್ ಫೋನು ಮತ್ತೆ ಕುರ್ರ್ ಕುರ್ರ್ ಅಂತು. ಆಗಲೇ ಮುಂಸ್ಕೊಂಡಿದ್ದ ಚೆನ್ನಮ್ಮಂಗೆ ಫೋನು ವೈರು ಕತ್ತರಿಸಿ ಹಾಕುವಷ್ಟು ಸಿಟ್ಟು ಬಂತು. ಗೌಡರಿಗೆ ಸಂಜ್ಞೆ ಮಾಡಿ ತಾನೆ ತೋಗೊಳ್ತಿನಂತ ಪೋನು ತೊಗೊಂಡ್ರು.

"ಆಲೋ....." ಆಂಗ್ಲೋ ಇಂಡಿಯನ್ ರಿಸಪ್ಶನಿಸ್ಟ್ ತರ ಹೇಳಬೇಕು ಅಂತ ಚೆನ್ನಮ್ಮಾವ್ರಿಗೂ ಆಸೆ ಆದರೆ ಅದೆಂಗೋ ಆಕಡೆಯವರಿಗೆ ಗೊತ್ತಾಗ್ಬುಡ್ತೈತೆ. "ದೇವೇ ಗೌಡಾಜಿ ಇದಾರೇನೂ" ಯಾರೋ ಆಕಡೆಯಿಂದ ರಾಗವಾಗಿ ಕೇಳಿದರು. ಚೆನ್ನಮ್ಮಗೆ ಎಲ್ಲೋ ಬಹಳ ಸಾರಿ ಕೇಳಿದೀನಲ ಈ ಧ್ವನೀನ.... ಆದರೂ ತಾವು ಮಾಜಿಯವರ ಹೆಂಡತಿ ಅಲ್ವೇ? ಸುಮ್ಮ ಸುಮ್ಮನೆ 'ಗೌಡರು ಇದ್ದಾರೆ' ಅನ್ನೋಕ್ಕಾಯ್ತದ?

"ನೀವ್ಯಾರಪ್ಪಾ" ಮತ್ತೆ ಆಂಗ್ಲೋ ಇಂಡಿಯನ್ ರಿಸಪ್ಶನಿಸ್ಟ್ ನೆನಪು ಮಾಡಿಕೊಂಡರು."ನಾವು ದೇಶಪಾಂಡೆ, ಚೆನ್ನಮ್ಮಾಜಿ, ಗೊತ್ತಾಗ್ಲಿಲ್ವೇನೂ" ತಾಯಿಯ ಹತ್ತಿರ ಮಗುವಿನ ತರ ಮತ್ತೆ ರಾಗವಾಗಿ. " ಓ... ದೇಶಪಾಂಡೆಯವರಾ.... ಅನ್ಕೊಂಡೆ....."ಗೌಡರಿಗೆ ಗೊತ್ತಿತ್ತು, ಸಾಮಾನ್ಯದವರಿಗೆ ತಮ್ಮ ಪರ್ಸನಲ್ ಫೋನ್ ಗೊತ್ತಿಲ್ಲ ಅಂತ. ಮತ್ತೆ ನೀರಿಗೆ ಕೈ ಅದ್ದಿ ಟವಲ್ ಸರಿ ಮಾಡ್ಕಂಡು ದಡಬಡ ಬಂದರು. ಕಾಂಗ್ರೆಸ್ಸ್ ಅದ್ಯಕ್ಷ ಅಂದ್ರೆ ಸುಮ್ನೆನಾ?

ತಮಿಳ್ನಾಡಿನ ಜ್ಯೋತಿಷಿಗೆ ಈ ಸಲ ಮಾಮೂಲಿನ ಜತೆ ಚಿನ್ನದ ಬ್ರೇಸ್ಲೆಟ್ಟನ್ನೇ ಕಾಣಿಕೆ ಆಕ ಬೇಕು.....!"ಆಲೋ" ಆ ಕಡೆ ಯಾರು ಅಂತ ಗೊತ್ತಿದ್ರೂ ತೋರಿಸಿ ಕೊಳ್ಳದೆ. "ನಮಸ್ಕಾರ್ರೀ ಗೌಡಜೀ, ದೇಶ್ಪಾಂಡೆ""ಗೊತ್ತಾಯ್ತ ಬಿಡಿ ಕಾಂಗ್ರೆಸ್ಸ್ ಅಧ್ಯಕ್ಷರೂ ಅನ್ನಿ" ಎಷ್ಟೇ ಗೆಳೆಯನಾದ್ರೂ ಪದವಿ ದೊಡ್ಡದು ಅಲ್ವೇ?"ಎಲ್ಲಾ ನಿಮ್ಮ ಆಶೀರ್ವಾದ ಅಲ್ವೇನೂ" ದೈನ್ಯತೆಯಿಂದ. ಗೌಡರಿಗೆ ಒಮ್ಮೆ ರಾಮಕೃಷ್ಣ ಹೆಗಡೆಯವರು ನೆನಪಾದರೂ ತೋರಿಸಿಕೊಳ್ಳದೆ,"ನಮ್ಮಾಸೀರ್ವಾದ ಏನ್ಬಂತು, ಎಲ್ಲಾ ಡೆಲ್ಲಿ ಮೇಡಂ ಆಶೀರ್ವಾದ ಅನ್ನಿ" ಗೌಡರು ಮನದುಂಬಿ ಹೇಳಿದರು."ನಿಮ್ಮನ್ನ ಭೆಟ್ಟಿ ಮಾಡೋಕ್ಕೆ ಬರಬೇಕು ಯಾವಾಗ ಇಟ್ಕೊಳೂಣೂ",....

'ಸೌಹಾರ್ದಯುತ ಭೇಟಿ' ಅಂತ ಪೇಪರಿನೋರಿಗೆ ಸ್ಟೇಟ್ಮೆಂಟ್ ಕೊಟ್ಟು ಪಾರ್ಟಿ ವಿಷ್ಯ ಮಾತಾಡೋಣ ಅಂತ ಆಗಲೇ ತೀರ್ಮಾನ ಮಾಡ್ಕೊಂಡು ಹೇಳಿದರು. ಆದ ಖುಷಿಗೆ 'ಈಗಲೇ ಬಂದ್ಬಿಡಿ' ಅಂತ ಹೇಳನ ಅಂತ ಅನ್ನುಸ್ತು ಗೌಡರಿಗೆ, ಆದರೂ ರಾಜಕೀಯ ಮುತ್ಸದ್ದಿಯಲ್ಲವೇ? ಇನ್ಮೇಲೆ ರೇವೂನ ಹೈಲೈಟು ಮಾಡ್ಬೇಕು, ಕೊನೇಪಕ್ಷ ಮುಂದಿನ ಉಪ ಮುಖ್ಯ ಮಂತ್ರಿ ಅಲ್ವೇ? ಇನ್ಮುಂದೆ ಎಲ್ಲಾ ಮೀಟಿಂಗೀಗೂ ಅವುನ್ನೇ ಇಟ್ಕೊಂಡು ಮಾತಾಡಬೇಕು. ಆಗಲೇ ಪೆಪರ್ರಿಗೆ ಸ್ಟೇಟ್ಮೆಂಟ್ ಕೊಡಬೇಕು ಅಂತ ಅವರ 'PS' ಕಾಯ್ತಾ ಇದ್ರು. (ದೇಶ್ ಪಾಂಡೆಯವರು ತಮ್ಮ ಸೆಕ್ರೆಟರಿಗೆ 'ಪಿ ಎಸ್' ಅಂತಾರೆ) ಅದಕ್ಕೆ ದೇಶ್ ಪಾಂಡೆಯವರೇ ಬೇಗ ಮುಗಿಸಿ ಬಿಡೋಣ ಅಂತ,"ನಾಡಿದ್ದು ಸಂಜೇಗೆ ಇಟ್ಕೊಳ್ಳೋಣೂ" ಅಷ್ಟೊತ್ತಿಗೆ ಪೇಪರ್ರಲ್ಲಿ ಬಂದು ಪ್ರಚಾರಾನೂ ಚೆನ್ನಾಗಿ ಆಗುತ್ತದೆ, ಅಲ್ವೇ.."ಯಾಕೆ ದೇಶ್ಪಾಂಡೆ, ನಾಳೆ ಇಪ್ತಾರ್ ಕೂಟಕ್ಕೆ ಬರಲ್ವ?" ಅಲ್ಲೇ ಮಾತಾಡಣ ಅಂತ ಗೌಡರಿಗೆ.

ಈ ಗೌಡರಿಗೆ ಆತುರದ ಬುದ್ದಿ, ಬಂದರೂ ಅಲ್ಲೇನ್ ಮಾತಾಡಕ್ಕೆ ಆಗುತ್ತೇನೂ? ಆದರೂತೋರಿಸಿಕೊಳ್ಳದೆ,"ಯಾರೋ ಸಾಬರು ಹುಡುಗ್ರು ಬಂದು ಕರೆದು ಹೋಗಿದಾರೆ, ...ನೋಡೋಣೂ" ಏ ದೇಶ್ಪಾಂಡೆ ದೊಡ್ದವನಾಗಿಬಿಟ್ಟೆಯ ಈ ದೇವೇಗೌಡನ ಮುಂದೆ, ಒಂದ್ಸಾರಿ ಗುಡುಗಿ ಬಿಡ್ಬೇಕು ಅನ್ನುಸ್ತು. ತಾಳ್ಮೆ, ತಾಳ್ಮೆ ಎಂದಿತು ರಾಜಕೀಯ ಧರ್ಮ.

ಇರಲಿಬಿಡು ಯೆಂಗೂ ನಾಡಿದ್ದು ಬತ್ತೀನಿ ಅಂತ ಅವ್ನೆ ಯೇಳವ್ನೆ..."ಹೌದು ಬಿಡಿ ಅಲ್ಲೇನೂ ಮಾತಾಡಕ್ಕೆ ಆಗಲ್ಲ, ನಾಡಿದ್ದೇ ಎಲ್ಲಾ ಮಾತಾಡೋಣ" ಹೆಂಗೂ ರೇವೂನ, ಕುಮಾರನ್ನ ಕರ್ಸಕ್ಕೆ ಟೈಮೂ ಸಿಕ್ತು. "ಸರಿ ಹಂಗಾದ್ರೆ, ಮತ್ತೆ ಸಿಗೋಣೂ, ನಮಸ್ಕಾರ್ರೀ......." ಸದ್ಯ ಅಪಾಯಿಂಟ್ಮೆಂಟ್ ಫಿಕ್ಸ್ ಆಯ್ತಲ್ಲ ಅಂತ ದೇಶ್ಪಾಂಡೆಯವರ 'ಪಿಯಸ್ಸಿ'ಗೂ ಸಮಾಧಾನ ಆಯ್ತು. ''

ದೇವೇಗೌಡರಿಗೆ ಇನ್ನೇನು ಆಕಾಶ ಒಂದೇಗೇಣು..... ಮತ್ತೆ ಒಳ್ಳೆ ದಿನಗಳು ಬತ್ತಾ ಅವೆ, ಇನ್ನೇನು ಆರಾರ್ ಜನ್ಮಕ್ಕೂ ಲಕ್ಸ್ಮಿ ಕಾಲ್ಮುರ್ಕಂಡು ಬಿದ್ದಿರ್ತಾಳ್ಬಿಡು. ಇನ್ಮೇಲೆ ಮತ್ತೆ ಎಲ್ಲಾ ಓಡಿಹೋದ ಪಾರ್ಟಿ MLA ನನ್ಮಕ್ಕಳು ಕಾಲಿಗ್ ಬಿದ್ ವಾಪಸ್ ಬತ್ತವ್ರೆ ಬುಡು. ರಾಷ್ಟ್ರಪತಿ ಆಗೊ ಆಸೇನೂ ಅಂಗೇ ಮಡಿಕ್ಕಬೋದು. ಫೋನಿಟ್ಟಿದ್ದೇ, ಡ್ಯಾನ್ಸ್ ಮಾಡ್ಕೋಂತ ಬಂದು ಧಪ್ಪಂತ ಕುಂತು ಮುದ್ದೆಗೆ ಕೈ ಹಾಕಿದ್ರು. ಚೆನ್ನಾಮ್ಮಜಿಗೆ ಗೌಡರ ಡ್ಯಾನ್ಸ್ ನೋಡ್ದಲೇ ಬಹಳೇ ದಿನ ಆಗೋಗಿತ್ತು!

ವೆಂಕಟೇಶ್ ಇನ್ನೊಂದು ನಗೆಬರಹ

ಮೊನ್ನೆ ಅಂಬ್ರೀಸು-ಕುಮಾರಣ್ಣ ಭೇಟಿಯಾಗಿದ್ರಂತೆ?ಮೊನ್ನೆ ಅಂಬ್ರೀಸು-ಕುಮಾರಣ್ಣ ಭೇಟಿಯಾಗಿದ್ರಂತೆ?

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X