ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕಂಪ್ಯೂಟರ್ ನಂಬಿಕೊಂಡ ಸಂಸಾರದ ಗುಟ್ಟು ರಟ್ಟು

By Staff
|
Google Oneindia Kannada News

Computer coupleಅವರು ಗಂಡ ಹೆಂಡತಿ. ಇಬ್ಬರೂ ಉದ್ಯೋಗಿಗಳು. ಕಂಪ್ಯೂಟರ್ ನಂಬಿಕೊಂಡು ವ್ಯಾಪಾರ ಮಾಡುವ ಕಂಪನಿಯೊಂದರಲ್ಲಿ ಅವರಿಗೆ ಕೆಲಸ. ಗಂಡನಿಗೆ ರಾತ್ರಿ ಪಾಳಿ. ಹೆಂಡತಿಗೆ ಹಗಲು ಪಾಳಿ. ಹೀಗಾಗಿ ಅವರು ಎದುರಾಬದರಾ ಕುಳಿತು ಮಾತಾಡುವುದಕ್ಕೂ, ಒಟ್ಟಿಗೆ ಕುಳಿತು ಒಂದು ತುತ್ತು ಊಟ ಮಾಡುವುದಕ್ಕೂ ಸಮಯವಿರಲಿಲ್ಲ. ಅವರ ಭಾವನೆಗಳು, ಕಷ್ಟಗಳು, ಬಿಲ್ ಪೇಮೆಂಟ್ ವಿಚಾರಗಳು, ಕನಸುಗಳು, ನೆಂಟರ ಸಮಾಚಾರಗಳು ಪ್ರತಿಯೊಂದೂನೂವೆ ಇಮೇಲ್ ಮುಖಾಂತರವೇ ನಡೀಬೇಕಾದ ಪರಿಸ್ಥಿತಿಯಿತ್ತು. ಪಾಪ, ಅವರ ಉಸಿರು ಊಟ ಎಲ್ಲವೂ ಕಂಪ್ಯೂಟರ್‌ಮಯವಾದ್ದರಿಂದ ಅವರ ಭಾಷೆಯೂ ಅದೇ ಆಗಿತ್ತು!!

ಗಂಡನೆಂಬ ಪ್ರಾಣಿ ಹೆಂಡತಿಯ ಕೈಗೊಂಬೆ ಆದುದರಿಂದ ಅವನ ಹೆಸರು ಪಾಮ್‌ಟಾಪ್ ಅಂತ. ಇನ್ನು ಆಕೆಯ ಹೆಸರು ಲ್ಯಾಪ್‌ಟಾಪ್! ಅವರೀರ್ವರ ನಡುವೆ ಪ್ರತಿನಿತ್ಯ ಇಮೇಲ್ ಮೂಲಕವೇ ಮಾತುಕತೆ ನಡೆಯುತ್ತಿತ್ತು. ಮಾತುಕತೆ ಎಲ್ಲಿ ಬಂತು, ಸಂಸಾರವೇ ಕಂಪ್ಯೂಟರ್ ಮುಖಾಂತರ ಸಾಗುತ್ತಿತ್ತು ಎಂದರೆ ತಪ್ಪಿಲ್ಲ. ಅವರ ನಡುವೆ ನಡೆಯುತ್ತಿದ್ದ ಆಯ್ದ ಒಂದು ಪತ್ರ ವ್ಯವಹಾರವನ್ನು ಇಲ್ಲಿ ಜಗಜ್ಜಾಹೀರು ಮಾಡಲಾಗಿದೆ. ಕಂಪ್ಯೂಟರ್ ಕ್ಷೇತ್ರದಲ್ಲಿ ನೊಗಹೊತ್ತು ದುಡಿಯುತ್ತಿರುವವರು ಪಾಮ್‌ಟಾಪ್ ಮತ್ತು ಲ್ಯಾಪ್‌ಟಾಪ್ ಹಾಗೂ ಅವರ ಪತ್ರವನ್ನು ಹೊಸೂರು ರಸ್ತೆಯ ದಟ್ಸ್‌ಕನ್ನಡಕ್ಕೆ ಮಲ್ಲೇಶ್ವರದಿಂದ ಫಾರ್ವರ್ಡ್ ಮಾಡಿದ ಶಾಂತಾ ನಾಗರಾಜ್ ಅವರನ್ನು ಮತ್ತು ಪಬ್ಲಿಷ್ ಮಾಡಿದ ದಟ್ಸ್‌ಕನ್ನಡ ಆನ್‌ಲೈನ್ ಪತ್ರಿಕೆಯನ್ನೂ ತಾವುಗಳೆಲ್ಲ ಅರ್ಥಮಾಡಿಕೊಳ್ಳುವಿರೆಂದು ಅಪೇಕ್ಷಿಸಲಾಗಿದೆ - ಸಂಪಾದಕ.

ಗಂಡನ ಪತ್ರ

ನನ್ನ ಪ್ರೀತಿಯ ಲ್ಯಾಪ್‌ಟಾಪೇ,

ನಾನು ಏಳುವ ಹೊತ್ತಿಗೆ ನೀನು ಮನೆಯಿಂದ ಎಕ್ಸಿಟ್ ಆಗಿದ್ದೆ. ಮಾಮೂಲಿನಂತೆ ಹಲ್ಲುಗಳಲ್ಲಿಯ ಕ್ಯಾಷ್ ಕ್ಲೀನ್ ಮಾಡಿ ಡೌನ್‌ಲೋಡ್ ಮುಗಿಸಿ ಶುಚಿರ್ಭೂತನಾದಾಗ ಗಂಟೆ ಮದ್ಯಾನ್ಹ ಹನ್ನೆರಡೂವರೆ! ಹೊಟ್ಟೆ ಎನ್ನುವ ಬಿನ್‌ನಲ್ಲಿ ಮೌಸ್ ತನ್ನ ಲೆಫ್ಟ್ ಮತ್ತು ರೈಟ್ ಬಟನ್‌ಗಳನ್ನು ಪಟಪಟಾಯಿಸುತ್ತಾ ಹಾವಳಿ ಮಾಡುತ್ತಿತ್ತು. ಏನಾದರೂ ಅಪ್‌ಲೋಡ್ ಮಾಡಲೇಬೇಕಲ್ಲಾ?

ಬ್ರೇಕ್‌ಫಾಸ್ಟ್ ಮತ್ತು ಲಂಚ್ ಸೇರಿಸಿ ಬ್ರಂಚ್ (ಟೂ ಇನ್ ಒನ್ ಪ್ರೋಗ್ರಾಂ) ಮಾಡೋಣವೆಂದು ನಮ್ಮ ಡೆಸ್ಕ್‌ಟಾಪ್ (ಡೈನಿಂಗ್ ಟೇಬಲ್) ನೋಡಿದೆ. ನೀನೋ ನಿನ್ನೆಯ ಮೆನುಗಳನ್ನೇ ಟಾಪ್‌ಅಪ್ ಮಾಡಿ ಇಟ್ಟಿದ್ದೀಯ! ಜೊತೆಗೆ "ಥಿಂಗ್ಸ್ ಟು ಡು" ಚೀಟಿ ಬೇರೆ!! ಚಪಾತಿಗೆ ಪಲ್ಯ ಫ್ರಿಜ್‌ನಲ್ಲಿದೆ ಅದನ್ನು ಮೈಕ್ರೋ ಓವೆನ್‌ನಲ್ಲಿಟ್ಟು ರಿಫ್ರೆಶ್ ಮಾಡಿಕೋ ಅಂತ!

ನನಗೆ ತುಂಬಾ ಕೋಪ ಬಂದು ಮೆದುಳಿಗೆ ವೈರಸ್ ಬಡಿದಂತೆ ಹ್ಯಾಂಗ್ ಆಯಿತು. ಹಾಳಾಗಲಿ ನಾನೇ ಒಂದಷ್ಟು ಬಿಸಿ ಉಪ್ಪಿಟ್ಟು ಮಾಡಿ ತಿನ್ನೋಣವೆಂದು ಹೋದರೆ ಬರೀ ಇಲ್ಲೀಗಲ್ ಆಪರೇಷನ್ ಎರರ್ ಪಾಪಪ್ ಆಗಿ, ರವೆ ಒಂದೆಡೆ ಸೀದು, ಒಂದೆಡೆ ಹಸಿಯಾಗಿ ಉಳಿದು, ಉಪ್ಪಿಟ್ಟು ಗಂಟು ಗಂಟಾಗಿ, ತಳಸೀದು ಹೋಗಿ, ನನ್ನ ಪ್ರೋಗ್ರಾಂ ಸಂಪೂರ್ಣವಾಗಿ ಕ್ರಾಶ್ ಆಯಿತು. ಹಾಳಾಗಿ ಹೋಗಲಿ ಪಕ್ಕದ ಮನೆಯಲ್ಲಿ ಕೆಲಸ ಮಾಡುತ್ತಿರುವ ನಮ್ಮ ಹೌಸ್‌ಕೀಪಿಂಗ್ ಯುಟಿಲಿಟಿಗೆ (ಕೆಲಸದವಳಿಗೆ) ಕೊಟ್ಟು ಕೈತೊಳೆದುಕೊಳ್ಳೋಣವೆಂದು ಹಿತ್ತಲಿನ ವಿಂಡೋಸ್‌ಗೆ ಹೋಗಿ ವಾಯ್ಸ್‌ಮೇಲ್ ಮಾಡಿದೆ.

ಅದೇನು ನಾನು ಬಳಸಿದ ಐಡಿ ಸರಿಯಿರಲಿಲ್ಲವೋ, ಅಥವಾ ಪಾಸ್‌ವರ್ಡ್ ಪ್ರಾಬ್ಲಮ್ಮೋ ನನ್ನ ಮೇಯ್ಲ್ ನನಗೇ ಬೌನ್ಸ್ ಆಯಿತು. ಪಕ್ಕದ ಮನೆ ಮೈನ್‌ಫ್ರೇಂನಿಂದ (ದಪ್ಪಗಿನ ಆಂಟಿ) ದೊಡ್ಡ ಪರದೆ ಕಂಪ್ಯೂಟರ್ ವಾರ್ನ್ ಬೇರೆ ಮಾಡಿತು. "ನಿಮ್ಮ ಮನೆ ಕೆಲಸದವಳ ಹೆಸರು ರಂಗಮ್ಮ. ನಮ್ಮ ಮನೆ ಕೆಲಸದವಳ ಹೆಸರು ಗಂಗಮ್ಮ. ನೀವ್ಯಾಕೆ ಗಂಗಮ್ಮಾ ಗಂಗಮ್ಮಾಂತ ಕರೀತೀರಿ? ಡೋಂಟ್ ಯೂಸ್ ಪೈರೆಟೆಡ್ ಮೆಯ್ಡ್" ಅಂತ!!

ಕೊನೆಗೆ ವಿಧಿಯಿಲ್ಲದೇ ಗಂಟುಪ್ಪಿಟ್ಟನ್ನು ಡಸ್ಟ್‌ಬಿನ್‌ಗೆ ಟ್ರಾಶ್ ಮಾಡಿದೆ. ಈಗದರ ಇನ್‌ಬಾಕ್ಸ್ ಓವರ್‌ಫ್ಲೋ ಆಗಿದೆ. ನೀನು ಬಂದು ದಯವಿಟ್ಟು ಡೀಲಿಟ್ ಮಾಡು. ಈ ಎಲ್ಲ ವಿಷಯ ತಿಳಿಸಿ ನಿನ್ನಿಂದ ಎಫ್‌ಒನ್ ಪಡೆಯಲು ವಾಯ್ಸ್‌ಚಾಟ್‌ಗೆ ಪ್ರಯತ್ನಿಸಿದರೆ, ನೀನು ನಿನ್ನ ಸೀಟಿಂದ ನಾಟ್ ಫೌಂಡ್ ಆಗಿದ್ದೆ. ನಾನು ನಿನ್ನ ಲ್ಯಾಪ್‌ಟಾಪ್‌ನ್ನೂ ನೀನು ನನ್ನ ಲ್ಯಾಪ್‌ಟಾಪ್‌ನ್ನೂ ರಿಮೋಟ್ ಆಕ್ಸೆಸ್ ಮಾಡುವಂತೆ ನೀನು ಆಫೀಸಿನಿಂದಲೇ ನಮ್ಮ ಅಡುಗೆಮನೆಯನ್ನು ಆಕ್ಸೆಸ್ ಮಾಡುವಂತಿದ್ದರೆ ಎಷ್ಟು ಚೆನ್ನಾಗಿರುತ್ತಿತ್ತು?

ಜಪಾನಿನವರಿಗೆ ರಿಮೋಟ್ ರಿಕ್ವೆಸ್ಟ್ ಕಳಿಸಬೇಕು. ಅವರೇನಾದರೂ ಈಥರದ ಸಾಫ್ಟ್‌ವೇರ್ ಕಂಡುಹಿಡಿದರೆ ನಮ್ಮಂಥಾ ಅಡುಗೆ ಬಾರದ ಗಂಡುಗಳ ಜನ್ಮ ಪಾವನವಾಗಬಹುದು. ಅಂತೂ ನನ್ನ ಹೊಟ್ಟೆ ಎನ್ನುವ ಹಾರ್ಡ್‌ಡಿಸ್ಕ್ ಪೂರ್ತಿಯಾಗಿ ಫಾರ್ಮ್ಯಾಟ್ ಆಗಿದ್ದರಿಂದ ನಿನ್ನ ಮೆನುವನ್ನೇ ನನ್ನ ರೀಸೈಕಲ್ ಬಿನ್‌ಗೆ ಹಾಕಿಕೊಂಡೆ. ಸಂಜೆ ಬೇಗ ಬಂದು ದಯವಿಟ್ಟು ಒಂದಷ್ಟು ಹೊಸ ಮೆನುವನ್ನು ಕ್ರಿಯೇಟ್ ಮಾಡು. ನೋಡು, ನಡೆದಿದ್ದನ್ನು ಚಾಚೂ ತಪ್ಪದೇ ಕೀಇನ್ ಮಾಡಿದ್ದೇನೆ. ಇಲ್ಲಿಗೆ ನನ್ನ ಮೆಯ್ಲ್‌‌ಬಾಕ್ಸ್‌ನಿಂದ ಸೈನ್ ಆಫ್ ಆಗಿ ಸರಿಯಾಗಿ ಶಟ್‌ಡೌನ್ ಮಾಡುತ್ತಿದ್ದೇನೆ. ನೀನು ಬಂದು ಇಲ್ಲದ ಬಗ್‌ಗಳನ್ನು ಹುಡುಕಿ ಬೂಟಿಂಗ್ ಪ್ರಾರಂಭಿಸ ಬೇಡ.

ಇತಿ ನಿನ್ನ

ಪಾಮ್‌ಟಾಪ್

(ಇದು ಪಾಮ್‌ಟಾಪ್ ಲ್ಯಾಪ್‌ಟಾಪ್‌ಗೆ ಬರೆದ ಪತ್ರವಾಯಿತು. ಇದಕ್ಕೆ ಉತ್ತರವಾಗಿ ಲ್ಯಾಪ್‌ಟಾಪ್ ಉತ್ತರವೇನಿದ್ದೀತು? ನೀವು ಒಮ್ಮೆ ಪ್ರಯತ್ನಿಸಿ.)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X