ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಿಇಓ ಯಮಧರ್ಮರಾಯನ ಪಿಂಕ್ ಸ್ಲಿಪ್ ಪುರಾಣ

By Super
|
Google Oneindia Kannada News

Yama, CEO of yamaloka
ನೋಡನೋಡುತ್ತಿದ್ದಂತೆ ಯಮಲೋಕದ ಗೆಟಪ್ಪೇ ಬದಲಾಗಲು ಪ್ರಾರಂಭಿಸಿತು. ಬೋಳು ತಲೆ, ಫ್ರೆಂಚ್ ಗಡ್ಡ, ಬ್ಲಾಕ್ ಟೀಶರ್ಟು, ಜೀನ್ಸ್ ಪ್ಯಾಂಟು, ಕಾಲಿಗೆ ಹವಾಯಿ ಚಪ್ಲಿ ಹಾಕ್ಕೊಂಡು ಸಣಕಲ ಕಡ್ಡಿಯಂತಿದ್ದ ಯಮ ಕಣ್ಣು ಮಿಟುಕಿಸುವುದರೊಳಗಾಗಿ ತನ್ನ ಮೂಲರೂಪ ಪಡೆದಿದ್ದ. ತಲೆಯನ್ನೊಮ್ಮೆ ಕೊಡವಿ ಕಿರೀಟ ಧರಿಸಿದ ನೋಡು ಆತನ ಖದರೇ ಬದಲಾಗಿಹೋಯಿತು. ಕಣ್ಣೆಲ್ಲ ಬೆಂಕಿಯ ಉಂಡೆ, ಕಿವಿಯಿಂದ ಬುಸ್ಸನೆ ಹೊಗೆ.

ಲೇಖನ : ಯಶ್

'ಪಿಂಕ್ ಸ್ಲಿಪ್' ಅನ್ನುವ ಪದವನ್ನು ಯಮಲೋಕದ ಸಿಇಓ ಯಮಣ್ಣ ಫುಲ್ ಕನ್‌ಫ್ಯೂಸ್ ಮಾಡಿಕೊಂಡುಬಿಟ್ಟಿದ್ದ. 'ಪಿಂಕ್ ಸ್ಲಿಪ್ಪಾ?' ಅಂತ ಉದ್ಗಾರ ತೆಗೆದನಾದರೂ ಅದೇನೆಂದು ಕೇಳಿದರೆ ಸಿಇಓ ಆಗಿಯೂ ಏನೇನೂ ಗೊತ್ತಿಲ್ಲವೆಂದು ನಾನು ತಿಳಿಯುತ್ತೇನೆಂದು 'ಹೂಂ ಹೂಂ' ಅನ್ನುತ್ತ ಸುಮ್ಮನಾಗಿಬಿಟ್ಟ.

'ಏನಂತೀಯಾ ಯಮಣ್ಣ. ಪಿಂಕ್ ಸ್ಲಿಪ್ ಕೊಟ್ಟುಬಿಡೋದೋ ಹೇಗೆ?' ಅಂತ ಓರೆಗಣ್ಣು ಮಾಡಿಕೊಂಡು ಬೇಕಂತೆಲೇ ಕೇಳಿದೆ. ಮತ್ತೆ 'ಹೂಂ ಹೂಂ' ಅಂತ ಮುಖ ಅತ್ತ ತಿರುಗಿಸಿಬಿಟ್ಟ. ಹೋಗ್ಲಿ ಸುಮ್ನೆ ಯಾಕೆ ಗೋಳು ಹೊಯ್ಕೊಳ್ಳೋದು, ಡೇಟಾ ಎಲ್ಲಾ ಹೇಗೆ ಸೇರಿಸಿದ್ದಾರೆ ನೋಡೋಣ ಅಂತ ಕಂಪ್ಯೂಟರತ್ತ ಕಣ್ಣು ಕೀಲಿಸಿದೆ. ಅಪರಾಧಗಳನ್ನೆಲ್ಲಾ ಹೇಗೆ ವಿಂಗಡಿಸಿರ್ತಾರೆ, ಯಾರ್ಯಾರಿಗೆ ಏನೇನು ಶಿಕ್ಷೆ ಕೊಡ್ತಾರೆ ಅಂತ ನನಗೂ ಕುತೂಹಲ ಇತ್ತು.

ಕೂಲಂಕಷವಾಗಿ ನೋಡಿದಾಗ ನಿಜವಾಗಿಯೂ ದಂಗಾಗಿಬಿಟ್ಟೆ. ಆ ಸಾಫ್ಟ್‌ವೇರ್ ಇಂಜಿನಿಯರು ತನ್ನ ರಾಜ್ಯದವರನ್ನೆಲ್ಲಾ ಸೇರಿಸಿಕೊಂಡು ಯಮರಾಜನಿಗೆ ಸರೀ ಉಂಡೆ ನಾಮ ತಿಕ್ಕಿಬಿಟ್ಟಿದ್ದ. ಸ್ವಹಿತಪ್ರೇತಗಳಿಗೆಲ್ಲಾ ಅರ್ಹತೆಗಿಂತ ಕಡಿಮೆ ಶಿಕ್ಷೆ ಎಂಟ್ರಿ ಮಾಡಿಸಿಬಿಟ್ಟಿದ್ದಾನೆ. ಬೇಡದವರಿಗೆಲ್ಲಾ ಯರ್ರಾಬಿರ್ರಿ ಶಿಕ್ಷೆ ನೀಡಬೇಕೆಂದು ಡೇಟಾಬೇಸಲ್ಲಿ ಸೇರಿಸಿಬಿಟ್ಟಿದ್ದಾರೆ. ಇವರ ಕೈಯಿಂದ ನಾನು ಸದ್ಯ ಬಚಾವಾದೆ ಅಂತ ಸಮಾಧಾನವಾದರೂ ಅವರ ಖತರನಾಕ್ ಆಟಗಳನ್ನೆಲ್ಲಾ ನೋಡಿ ಕಿವಿಯೆಲ್ಲಾ ಕೆಂಪಾಗಿಬಿಟ್ಟವು. ಈ ಭಾನಗಡಿಗೆಯನ್ನೆಲ್ಲಾ ಯಮನಿಗೆ ಹೇಳಿರದಿದ್ದರೆ ನನಗೂ ವಿಪರೀತ ಶಿಕ್ಷೆ ಸೇರಿಸಿ ನರಕಯಾತನೆ ನೀಡುವ ಹಾಗೆ ಮಾಡಿರುತ್ತಿದ್ದರು ಅಂತ ನೆನೆಸಿಕೊಂಡು ಮೈಯೆಲ್ಲಾ ಮುಳ್ಳಾದೆ.

'ಯಮಣ್ಣಾ...' ಅಂತ ಕೂಗಿ ಕರೆದೆ. 'ಏನಾಯ್ತು ಯೆಲ್ಲಪ್ಪಾ...' ರಾಕ್ಷಸರಿಂದ ಸಂಕಷ್ಟ ಎದುರಾದಾಗಲೆಲ್ಲ ಕಾಪಾಡು ತಂದೆಯೇ ಅಂತ ಎದ್ದುಬಿದ್ದು ವಿಷ್ಣುವಿನ ಬಳಿಯೋ, ಶಿವನ ಬಳಿಯೋ ಓಡೋಡಿ ಬರುವ ಅಸಹಾಯಕ ದೇವತೆಗಳಂತೆ ನನ್ನೆದುರು ಬಂದು ನಿಂತಿದ್ದ ಯಮಧರ್ಮರಾಯ. ಯಮನಿಗೆ ಈ ಸ್ಥಿತಿ ಬಂದಿದ್ದು ನೋಡಿ ಮೈಯೆಲ್ಲಾ ಕುದ್ದುಹೋಯಿತು. ಹೇಗಾದ್ರೂ ಮಾಡಿ ಯಮನನ್ನು ಈ ಸಂಕಷ್ಟದಿಂದ ಬಚಾವ್ ಮಾಡಲೇಬೇಕೆಂದು ಪಣತೊಟ್ಟೆ.

'ಯಮಣ್ಣಾ, ಯಮಣ್ಣಾ... ಆ ನನ್ ಮಕ್ಕಳು ಮಾಡಿರುವ ಪಾಪಗಳಿಗೂ ಇಲ್ಲಿ ನಮೂದಿಸಿರುವ ಶಿಕ್ಷೆಗೂ ಸರಿಯಾಗಿ ತಾಳೆಯಾಗುತ್ತಲೇ ಇಲ್ಲ. ಸಿಕ್ಕಾಪಟ್ಟೆ ಪಾಪ ಮಾಡಿದ ದುರಾತ್ಮರೂ ಲವಲೇಶವೂ ಶಿಕ್ಷೆಯಿಲ್ಲದೇ ಬಚಾವಾಗಿದ್ದಾರೆ. ವೇರಿಫೈ ಮಾಡಿಲ್ವಾ? ಹಿಂಗೇ ಬಿಟ್ರೆ ನಿನ್ನ ಹೆಸರನ್ನೂ ಶಿಕ್ಷೆಗೆ ಒಳಪಡುವವರ ಪಟ್ಟಿಯಲ್ಲಿ ಸೇರಿಸಿಬಿಡುತ್ತಾರೆ. ನಿನಗೂ ನರಕ ಯಾತನೆ ಗ್ಯಾರಂಟಿ' ಅಂತ ಸ್ವಲ್ಪ ಉಪ್ಪು ಖಾರ ಸೇರಿಸಿ ವಿವರಿಸಿ ಹೇಳಿದೆ.

ಕಂಪ್ಯೂಟರ್ ಅಳವಡಿಕೆಯಿಂದ, ಆ ಸಾಫ್ಟ್‌ವೇರ್ ಇಂಜಿನಿಯರನ್ನು ಅಪಾಯಿಂಟ್ಮೆಂಟ್ ಮಾಡಿಕೊಂಡಾಗಿನಿಂದ, ಕಿರ್ದಿ ಪುಸ್ತಕದ ಹಳೇ ವ್ಯವಸ್ಥೆ ಕೈಬಿಟ್ಟಿದ್ದರಿಂದ ಏನೇನು ಅನಾಹುತಗಳಾಗಿರಬಹುದು ಎಂಬ ಬಗ್ಗೆ ಯಮನಿಗೆ ಒಂದು ಅಂದಾಜು ಸಿಕ್ಕಿತು. ನಾನೊಬ್ಬ ಆಪದ್ಬಾಂಧವ ಅಂತ ನನ್ನ ಕಡೆ ಒಮ್ಮೆ ಅಭಿಮಾನದಿಂದ ನೋಡಿದ. ಮರುಕ್ಷಣವೇ ಹೊಗೆಯಾಡಲು ಪ್ರಾರಂಭಿಸಿದ.

'ಯಮಣ್ಣ, ನೀನೇನೂ ಹೆದರ್ಕೋಬೇಡ. ನಾನಿದ್ದೇನೆ. ಎಲ್ಲರಿಗೂ ಪಿಂಕ್ ಸ್ಲಿಪ್ ನೀಡಿಬಿಡೋಣ' ಅಂತ ಮತ್ತೆ ರಾಗ ತೆಗೆದೆ. ಯಮನ ಮತ್ತೆ ಪೆದ್ದುಪೆದ್ದಾಗಿ ನಕ್ಕ, ಮುಖದ ಮೇಲೆಲ್ಲಾ ಬೆವರು. ಏನು ಸ್ವಾಭಿಮಾನ ಅಂತೀನಿ ಈ ಯಮನಿಗೆ? ಪಿಂಕ್ ಸ್ಲಿಪ್ ಬಗ್ಗೆ ಗೊತ್ತಿಲ್ಲ ಅಂತ ಬಾಯಿಬಿಟ್ಟು ಹೇಳಿದರೆ ಎಲ್ಲಿ ಮಖೇಡಿಯಾಗುತ್ತೇನೋ ಅಂತ ಎಲ್ಲಾ ಗೊತ್ತಿರುವವರ ಥರ ನಟಿಸಲು ಪ್ರಾರಂಭಿಸಿದ.

'ಹುಡುಗಿಯರಿಗೇನೋ ಸ್ಲಿಪ್ ಕೊಡಬಹುದು, ಆದರೆ ಹುಡುಗರಿಗೆ ಹ್ಯಾಗೆ ಕೊಡುವುದು?' ಅಂತ ಮರುಪ್ರಶ್ನೆ ಹಾಕಿದ. ಗೊಳ್ಳೆಂದು ನಕ್ಕುಬಿಟ್ಟೆ. 'ಸ್ಲಿಪ್' ಅನ್ನುವ ಪದವನ್ನು ಯಾರ್ದ್ಯಾರ್ದೋ ಬಳಿ ಕೇಳಿ ತಿಳಿದುಕೊಂಡಿದ್ದ ಅಂತ ಕಾಣತ್ತೆ. ನಾನು ನಕ್ಕಿದ್ದು ನೋಡಿ ಯಮನಿಗೆ ಭಯಂಕರ ಅವಮಾನವಾಗಿ ಹೋಯಿತು. ಮುಖ ವಿವರ್ಣವಾಯಿತು. ಸಿಟ್ಟಿನಿಂದ ಕುದಿಯಲು ಪ್ರಾರಂಭಿಸಿದ. ಹಾಗೇ ಬಿಟ್ರೆ ನನ್ನ ಮತ್ತೊಮ್ಮೆ ಸಾಯಿಸಿ ಸಿಕ್ಕಾಪಟ್ಟೆ ಶಿಕ್ಷೆ ಎಲ್ಲಾದ್ರೂ ನೀಡಿಯಾನೆಂದು ನಾನೇ ಸಾವರಿಸಿಕೊಂಡು, 'ಯಮಣ್ಣ. ಪಿಂಕ್ ಸ್ಲಿಪ್ ಅಂದ್ರೆ ಸಾಫ್ಟ್‌ವೇರ್ ಉದ್ಯಮದ ಪರಿಭಾಷೆಯಲ್ಲಿ ಕೆಲಸಗಾರರಿಗೆ ಯಾವ ಮುನ್ಸೂಚನೆಯೂ ನೀಡದೇ ಕೆಲಸದಿಂದ ತೆಗೆದು ಮನೆಗೆ ಅಟ್ಟುವುದು' ಅಂತ ವಿವರಿಸಿ ಹೇಳಿದೆ.

ಪಿಂಕ್ ಸ್ಲಿಪ್ ಬಗ್ಗೆ ತನಗಿರುವ ಅಜ್ಞಾನವನ್ನು ಹಳಿಯುತ್ತಾ, ನಾನು ವಿವರಿಸಿದ್ದಕ್ಕೆ ಮೆಚ್ಚಿಕೊಳ್ಳುತ್ತಾ, ಪಿಂಕ್ ಸ್ಲಿಪ್ ಬಗ್ಗೆ ತನ್ನ ವ್ಯಾಖ್ಯಾನಕ್ಕೆ ತಾನೇ ನಾಚಿಕೊಳ್ಳುತ್ತಾ, 'ಓ ಇದಾ ಅರ್ಥ, ನಾನು ಏನೇನು ಅಂದುಕೊಂಡುಬಿಟ್ಟಿದ್ದೆ. ಸರಿ ಎಲ್ಲಾರಿಗೂ ಸ್ಲಿಪ್, ಪಿಂಕ್ ಸ್ಲಿಪ್ ಕೊಡೋಣ' ಅಂತ ಗಹಗಹಿಸಿ ನಗಲು ಪ್ರಾರಂಭಿಸಿದ. ಇದ್ದಕ್ಕಿದ್ದಂತೆ ಗಂಭಿರವದನನಾಗಿ, 'ಕೆಲಸಕ್ಕೆ ಬರಲಿ ಆ ಹುಲುಮಾನವರು, ನರಕ ಅಂದ್ರೆ ಏನೆಂದು ತೋರಿಸಿಬಿಡುತ್ತೇನೆ. ನನ್ನನ್ನೇನು ನಾಟಕ ಪಾತ್ರಧಾರಿ ಯಮ ಅಂತ ತಿಳಿದುಕೊಂಡುಬಿಟ್ಟಿದ್ದಾರೇನೋ ಇವರು' ಅಂತ ಕುದಿಯಲು ಪ್ರಾರಂಭಿಸಿದ.

ದಿ ಕ್ಲೈಮ್ಯಾಕ್ಸ್ : ನನಗಂತೂ ಬಲು ಖುಷಿಯೋ ಖುಷಿ. ನನ್ನ ಪ್ಲಾನು, ಸ್ಟ್ರಾಟೆಜಿ, ಎಕ್ಸಿಕ್ಯೂಷನ್ನು ಸರಿಯಾಗಿ ಕೆಲಸ ಮಾಡಿವೆಯೆಂದು ಹೆಮ್ಮೆಯಾಯಿತು. ಇನ್ನು ಯಮಲೋಕಕ್ಕೆ ನಾನೇ ಡಿಫಾಲ್ಟ್ ಅಧಿಪತಿ, ಯಮ ನಿಮಿತ್ತ ದೊರೆ ಮಾತ್ರ. ಇನ್ಮುಂದೆ ಪ್ರತಿಯೊಂದಕ್ಕೂ ನನ್ನನ್ನೇ ಯಮ ಅವಲಂಬಿಸಬೇಕು. ಪ್ರತಿ ಪಾಪಿಗೂ ನನ್ನನ್ನೇ ಕೇಳಿ ಶಿಕ್ಷೆ ಕೊಡಬೇಕು. ರಂಭೆ, ಊರ್ವಶಿ, ಮೇನಕೆ, ತಿಲೋತ್ತಮೆ... ಅಂತ ಏನೇನೋ ಎಣಿಸುತ್ತಾ ಕನಸಿನ ಲೋಕಕ್ಕೆ ಜಾರಿಬಿಟ್ಟಿದ್ದೆ.

ಆದರೆ, ಈ ಕಲ್ಪನಾವಿಲಾಸ ಜಾಸ್ತಿ ಹೊತ್ತು ಉಳಿಯಲಿಲ್ಲ. ಈ ಕಂಪ್ಯೂಟರ್ ವಿಭಾಗಕ್ಕೆಲ್ಲಾ ನೀನೇ ಲೀಡರು ಅಂತ ಘೋಷಿಸುತ್ತಾನೆಂದು ಎಣಿಸಿದರೆ, ಈ ಕಂಪ್ಯೂಟರು, ಈ ಡೇಟಾಬೇಸು, ಈ ಸಾಫ್ಟ್‌ವೇರ್ ಇಂಜಿನಿಯರುಗಳು, ಈ ಕೋಡಿಂಗು, ಈ ಕಾರ್ಪೊರೇಟ್ ಆಫೀಸು, ಈ ಅವಲಂಬನೆ, ಈ ಹಾಳು ಸಿಇಓ ಪಟ್ಟ... ಒಂದು ಕ್ಷಣ ಚಳಿ ಮೈಯಲ್ಲಿ ಹೊಕ್ಕಿದರೆ ಹೇಗೆ ಗಡಗಡ ನಡುಗುತ್ತಾರೋ ಹಾಗೆ ಗಡಗಡನೆ ನಡುಗಿ, ನನಗೆ ಇದು ಯಾವುದೂ ಬೇಡ, ಈಗಲೇ ಹಳೇ ವ್ಯವಸ್ಥೆಗೇ ಹಿಂದಿರುಗುತ್ತೇನೆ. ಎಲ್ಲಿ ಆ ಚಿತ್ರಗುಪ್ತ? ಕೂಡಲೇ ಬರಹೇಳು ಆ ಧೂರ್ತನಿಗೆ. ವೀಕ್ಲಿ ಆಫ್ ಬೇಕಾ, ಅಪ್ಸರೆಯರ ಸಂಗ ಬೇಕಾ, ಟಿನ್‌ನಲ್ಲಿ ಅಮೃತ ಬೇಕಾ? ಸರಿ ಪಾಠ ಕಲಿಸುತ್ತೇನೆ ಇವರಿಗೆಲ್ಲಾ ಅಂತ ಇಡೀ ನರಕವೇ ನಡುಗುವ ಹಾಗೆ ಅಬ್ಬರಿಸಿದ.

ನೋಡನೋಡುತ್ತಿದ್ದಂತೆ ಯಮಲೋಕದ ಗೆಟಪ್ಪೇ ಬದಲಾಗಲು ಪ್ರಾರಂಭಿಸಿತು. ಬೋಳು ತಲೆ, ಫ್ರೆಂಚ್ ಗಡ್ಡ, ಬ್ಲಾಕ್ ಟೀಶರ್ಟು, ಜೀನ್ಸ್ ಪ್ಯಾಂಟು, ಕಾಲಿಗೆ ಹವಾಯಿ ಚಪ್ಲಿ ಹಾಕ್ಕೊಂಡು ಸಣಕಲ ಕಡ್ಡಿಯಂತಿದ್ದ ಯಮ ಕಣ್ಣು ಮಿಟುಕಿಸುವುದರೊಳಗಾಗಿ ತನ್ನ ಮೂಲರೂಪ ಪಡೆದಿದ್ದ. ತಲೆಯನ್ನೊಮ್ಮೆ ಕೊಡವಿ ಕಿರೀಟ ಧರಿಸಿದ ನೋಡು ಆತನ ಖದರೇ ಬದಲಾಗಿಹೋಯಿತು. ಕಣ್ಣೆಲ್ಲ ಬೆಂಕಿಯ ಉಂಡೆ, ಕಿವಿಯಿಂದ ಬುಸ್ಸನೆ ಹೊಗೆ ಹೊರಬರಲು ಪ್ರಾರಂಭಿಸಿತ್ತು.

ನಾನು ನರಕಕ್ಕೆ ಬಂದಿದ್ದು, ಕಂಪ್ಯೂಟರ್ ವಿಷಯದಲ್ಲಿ ಅವನಿಗೆ ಸಹಾಯ ಮಾಡಿದ್ದು, ಡೇಟಾಬೇಸಿನಲ್ಲಿನ ಎಲ್ಲಾ ಹುಳುಕುಗಳನ್ನು ಅವನಿಗೆ ತೋರಿಸಿ ಜ್ಞಾನೋದಯ ಮಾಡಿಸಿದ್ದು ಎಲ್ಲಾ ಮರೆತು... ಯಾರೀ ಧೂರ್ತ, ಭೂಲೋಕದಲ್ಲಿ ಏನೇನು ಪಾಪ ಮಾಡಿದ್ದಾನೆ, ತಕ್ಕ ಶಿಕ್ಷೆ ನೀಡಲು ಇವನನ್ನು ಎಳೆದುಕೊಂಡು ಹೋಗಿ ಅಂತ ಆದೇಶಿಸಿಯೇ ಬಿಟ್ಟ!

ನಾನು, ಯಮಣ್ಣ... ಮೋಸ... ಮೋಸ... ಅಂತ ಕೂಗಲು ಪ್ರಯತ್ನಿಸಿದೆನಾದರೂ ಧ್ವನಿ ಗಂಟಲಿಂದಲೇ ಹೊರಬರಲಿಲ್ಲ!

ಭಾಗ 1 : ಯಮಲೋಕದ ಸಿಇಓ ಯಮಣ್ಣನ ಪೀಕಲಾಟ

English summary
A humurous write up about yamaloka turned software company. Kannada humor by Prasad Naik.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X