• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಯಮಲೋಕದ ಸಿಇಓ ಯಮಣ್ಣನ ಪೀಕಲಾಟ

By Super
|

ಸಾಫ್ಟ್ ವೇರ್ ಕಂಪನಿಯಾಗಿ ನರಕವನ್ನು ಬದಲಾಯಿಸಿದ್ದ ಯಮ ಕಂಪ್ಯೂಟರ್ ಆಪರೇಟ್ ಹೇಗೆ ಮಾಡಬೇಕೆಂದು ತಿಳಿಯದೇ ಚಿಂತಾಕ್ರಾಂತನಾಗಿ ಕುಳಿತಿದ್ದ. ಆತ ಬಳಸುವ ಕಂಪ್ಯೂಟರ್ ಆನ್ ಅಗಿದ್ದೇ ಇಲ್ಲ. ಪವರ್ ಕೇಬಲ್ ಕಿತ್ತುಕೊಂಡು ಬಂದಿತ್ತು. ಯಮನಿಗೆ ಅಷ್ಟೂ ಗೊತ್ತಾಗಿರಲಿಲ್ಲ. ಇಷ್ಟೇ ಅಂತ ಹೇಳಿದೆ. ಪೆಕ್ರನ ಥರಾ ನನ್ನತ್ತ ನೋಡಿ ನಕ್ಕ. ಆಮೇಲೆ ಇದ್ದಕ್ಕಿದ್ದಂತೆ ಯಮನ ಮುಖ ಕಳೆಗುಂದಿತು. ಯಾಕೆ ಯಮಣ್ಣ ಏನಾಯ್ತು? ಯಮಲೋಕದ ಔಟ್ ಲುಕ್ಕೇ ಚೇಂಜಾಗಿದೆಯಲ್ಲಾ? ಒಳ್ಳೇ ಸಾಫ್ಟ್ ವೇರ್ ಕಂಪನಿ ಥರಾ ಆಗಿದೆಯಲ್ಲಾ? ನಿನ್ನ ಚಿಂತೆಗೆ ಕಾರಣವಾದರೂ ಏನು?

ಲೇಖನ : ಯಶ್

ಇಹಲೋಕ ತ್ಯಜಿಸಿದವರೆಲ್ಲ ನರಕ ದರ್ಶನ ಮಾಡಲೇಬೇಕೆಂಬ ನಿಯಮವಿದೆಯೋ ಇಲ್ಲವೋ ಗೊತ್ತಿಲ್ಲ. ನಾನಂತೂ ನರಕದಲ್ಲಿದ್ದೆ. ಯದ್ವಾತದ್ವಾ ಟ್ರಾಫಿಕ್ ಇರುವ ಹೊಸೂರ್ ರಸ್ತೆಯಲ್ಲಿ ಹೆಲ್ಮೆಟ್ ಇಲ್ಲದೆ ಗಾ‌ಡಿ ಓಡಿಸುವ ಧೈರ್ಯ ಮಾಡಿ ಲಾರಿ ಅಡಿ ಸಿಕ್ಕು ಟ್ರಾಜಿಕ್ ಸಾವನ್ನು ಪಡೆದಿದ್ದೆ. ಅದೇನೇನು ತಪ್ಪು, ಪಾಪ ಮಾಡಿದ್ದೆನೋ ಅಂತೂ ಯಮದೂತರು ಕುತ್ತಿಗೆಗೆ ಹಗ್ಗ ಹಾಕಿ ಎಳೆದುಕೊಂಡು ನಕರದ ಬಾಗಿಲಿಗೆ ತಂದು ನಿಲ್ಲಿಸಿದ್ದರು. ಮಾಡಿದ್ದುಣ್ಣೋ ಮಾರಾಯ ಅಂತ ಪ್ರಾಯಶ್ಚಿತಕ್ಕಾಗಿ ಸಿದ್ಧನಾಗಿನಿಂತಿದ್ದೆ.

ನೇರವಾಗಿ ಯಮನ ಬಳಿಗೆ ಕರೆದುಕೊಂಡು ಹೋಗಿ, ಚಿತ್ರಗುಪ್ತರ ಕಿರ್ದಿ ಪುಸ್ತಕದಲ್ಲಿ ನನ್ನ ಹೆಸರನ್ನೂ ನಮೂದಿಸಿ, ನನ್ನ ಪಾಪ ಪುಣ್ಯಗಳ ವಿಚಾರಣೆ ನಡೆದು ನನ್ನ ಪಾಲಿನ ಶಿಕ್ಷೆಯನ್ನು ಅನುಭವಿಸಿ ಸ್ವರ್ಗಕ್ಕೆ ಆರೋಹಣ ಮಾಡಿಸುತ್ತಾರೆಂದು ಅಂದುಕೊಂಡರೆ ದೂತರು ನೇರವಾಗಿ ಒಳಗೆ ಕಳೆದುಕೊಂಡು ಹೋಗದೆ ಯಮಲೋಕದ ಬಾಗಿಲಿಗೆ ತಂದು ನಿಲ್ಲಿಸಿದರು. ಭೂಲೋಕದಿಂದ ಕಗ್ಗತ್ತಲಲೋಕದಲ್ಲಿ ಹಾದು ನರಕದ ಬಾಗಿಲಿಗೆ ಬಂದಾಗಲೇ ಅಲ್ಪ ಬೆಳಕು ಕಂಡಿದ್ದು. ಯಮದೂತರಿಬ್ಬರೂ ಕೊರಳಿಗೆ ಟ್ಯಾಗ್ ಧರಿಸಿದ್ದಾರೆ. ಕಾರ್ಡನ್ನು ಬಳಸಿ ನಮ್ಮ ಸಾಫ್ಟ್‌ವೇರ್ ಕಂಪನಿಗಳಲ್ಲಿ ಬಾಗಿಲು ತೆರೆಯುವಂತೆಯೇ ಸೆನ್ಸಾರ್ ಬಳಸಿ ಬಾಗಿಲು ತೆರೆದರು. ನನಗಂತೂ ಆಶ್ಚರ್ಯವೋ ಅಶ್ಚರ್ಯ. ನರಕಲೋಕಕ್ಕೆ ಬಂದಿದ್ದೇನೆಯೋ ಅಥವಾ ಯಾವುದೇ ಸಾಫ್ಟ್‌ವೇರ್ ಕಂಪನಿಗೆ ಬಂದಿದ್ದೇನೆಯೋ ಎಂದು ದಿಗಿಲಾಯಿತು.

ಅಚ್ಚುಕಟ್ಟಾದ ರಿಸೆಪ್ಶನ್. ಸುಂದರ ತರುಣಿಯೊಬ್ಬಳು ಮಿನಿಟಾಪ್ ಹಾಕಿಕೊಂಡು ಡೆಸ್ಕ್‌ಟಾಪಲ್ಲಿ ಏನೋ ಮಾಡುತ್ತಾ ಕುಳಿತಿದ್ದಳು. ಅಪ್ಸರೆಯೇ ಇರಬೇಕು ಎಂದುಕೊಂಡು ಕಣ್ಣು ಅರಳಿದವು. 'ಅವಳೇ ನನ್ನ ಹೆಂಡ್ತಿ' ಚಿತ್ರದಲ್ಲಿ ಕಾಶಿನಾಥ್ ಕಣ್ಣು ಸೈಡಿಗೆ ವಾಲಿಸಿ ನೋಡುವಂತೆ ಅವಳ ಎದೆಯತ್ತ ನೋಡಿದೆ, ಎದೆ ಡವಡವ ಹೊಡೆದುಕೊಳ್ಳಲು ಪ್ರಾರಂಭಿಸಿತು. ಅಲ್ಲಿ ಏನೋ ಎಂಟ್ರಿ ಮಾಡಿಸಿ ಚೇಂಬರ್ ಬಳಿ ತಂದು ನಿಲ್ಲಿಸಿದರು. ಚೇಂಬರ್ ಬಾಗಿಲಿಗೆ ಯಮಲೋಕದ 'ಸಿಇಓ ಯಮಣ್ಣ' ಎಂದು ಬೋರ್ಡು ತಗುಲಿಹಾಕಿತ್ತು. ಆಗಾಗ ಯಾತನೆ, ನರಕಯಾತನೆ ಪಡುತ್ತಿದ್ದವರ ಆರ್ತನಾದ ಕೇಳಿಬರುತ್ತಿದ್ದರೂ ಯಮನ ಚೇಂಬರ್ ಬಳಿ ಪ್ರಶಾಂತವಾಗೇ ಇತ್ತು.

ಸತಿ ಸಾವಿತ್ರಿ ಚಿತ್ರದ ಉದಯ ಕುಮಾರ್ ಥರಾನೋ, ಯಮ ಚಿತ್ರದ ದೊಡ್ಡಣ್ಣನ ಥರಾನೋ ಇರಬಹುದೂಂತ ನಿಜವಾದ ಯಮನನ್ನು ಕಲ್ಪಿಸಿಕೊಳ್ಳುತ್ತಿದ್ದರೆ ಮತ್ತೊಂದು ಆಶ್ಚರ್ಯ ಕಾದಿತ್ತು. ಯಮ ಒಬ್ಬ ಸಣಕಲ ಕಡ್ಡಿ! ಮೇಲಿಂದ ಕೆಳಗಿನ ತನಕ ಮತ್ತೊಮ್ಮೆ ನೋಡಿದೆ. ಬೋಳು ತಲೆ, ಫ್ರೆಂಚ್ ಗಡ್ಡ, ಬ್ಲಾಕ್ ಟೀಶರ್ಟು, ಜೀನ್ಸ್ ಪ್ಯಾಂಟು, ಕಾಲಿಗೆ ಶೂಸು ಹಾಕಿರ್ತಾನಂದ್ರೆ ಹವಾಯಿ ಚಪ್ಲಿ! ನನ್ನ ಎಲ್ಲಾ ಇಮ್ಯಾಜಿನೇಷನ್ ಅನ್ನ ಯಮ, ಯಮಲೋಕ ಉಲ್ಟಾ ಮಾಡ್ತಿದೆ ಅಂತ ಭಾಸವಾಯಿತು.

ಕಂಪ್ಯೂಟರು ಗೊತ್ತೇ ಇಲ್ಲದ ಎಬ್ಬಂಕನನ್ನು ಅದರ ಮುಂದೆ ತಂದು ಕೂಡಿಸಿದರೆ ಹೇಗಾಡುತ್ತಾರೋ ಹಾಗಿ ಆಡುತ್ತಿದ್ದ ಯಮಣ್ಣ. ಬಾಗಿಲು ಸದ್ದಾಗಿದ್ದು ಓರೆಗಣ್ಣಿನಿಂದ ನೋಡಿ, ನಾನ್ಯಾರು, ಯಾಕೆ ಬಂದಿದ್ದೇನೆ, ನನಗೆ ಕೊಡಬೇಕಾಗಿರುವ ಶಿಕ್ಷೆ ಏನು, ಅವನ ಜವಾಬ್ದಾರಿಗಳೇನು ಒಂದನ್ನೂ ಲೆಕ್ಕಿಸದೇ... ನೀನು ಏನು ಕೆಲಸ ಮಾಡ್ಕೊಂಡಿದ್ದೀಯಾ? ಅಂತ ಕೇಳಿದ ಯಮ. ಕಂಪ್ಯೂಟರ್ ಮೈಂಟೆನನ್ಸ್ ಡಿಪಾರ್ಟ್ ಮೆಂಟಲ್ಲಿ ಎಂಜಿನೀಯರ್ ಆಗಿದ್ದೆ. ಈಗ ಅಪಘಾತದಲ್ಲಿ ಸತ್ತು... ನನ್ನ ಎರಡನೇ ವಾಕ್ಯ ಪೂರ್ತಿಯಾಗಲು ಬಿಡದೆಲೇ ಕಂಪ್ಯೂಟರ್ ಏನೋ ಆಗಿಬಿಟ್ಟಿದೆ, ಸ್ವಲ್ಪ ನೋಡು ಬಾ, ನಿನಗೆ ಪುಣ್ಯ ಬರ್ತದೆ ಅಂತ ಸ್ನೇಹಿತನ ಥರಾ ಎಳ್ಕೊಂಡೇ ಹೋಗಿಬಿಟ್ಟ.

ಕಂಪ್ಯೂಟರ್ ಆನ್ ಅಗಿದ್ದೇ ಇಲ್ಲ. ಪವರ್ ಕೇಬಲ್ ಕಿತ್ತುಕೊಂಡು ಬಂದಿತ್ತು. ಯಮನಿಗೆ ಅಷ್ಟೂ ಗೊತ್ತಾಗಿರಲಿಲ್ಲ. ಇಷ್ಟೇ ಅಂತ ಹೇಳಿದೆ. ಪೆಕ್ರನ ಥರಾ ನನ್ನತ್ತ ನೋಡಿ ನಕ್ಕ. ಆಮೇಲೆ ಇದ್ದಕ್ಕಿದ್ದಂತೆ ಯಮನ ಮುಖ ಕಳೆಗುಂದಿತು. ಯಾಕೆ ಯಮಣ್ಣ ಏನಾಯ್ತು? ಯಮಲೋಕದ ಔಟ್ ಲುಕ್ಕೇ ಚೇಂಜಾಗಿದೆಯಲ್ಲಾ? ಒಳ್ಳೇ ಸಾಫ್ಟ್ ವೇರ್ ಕಂಪನಿ ಥರಾ ಆಗಿದೆಯಲ್ಲಾ? ನಿನ್ನ ಚಿಂತೆಗೆ ಕಾರಣವಾದರೂ ಏನು? ಸುಳ್ಳು ಹೇಳ್ಬೇಡಾ ಅಂತ ಪ್ರಶ್ನೆಗಳ ಮಳೆಯನ್ನೇ ಸುರಿಗಳೆದೆ.

"ನಿನ್ನ ಹೆಸರು ಏನಂದೆ? ಯಲ್ಲಪ್ಪ ಅಲ್ವಾ? ಏನ್ಕೇಳ್ತಿಯಾ ನನ್ನ ಫಜಿತೀನಾ. ಸಿಂಹಾಸನದ ಮೇಲೆ ಕೂತ್ಗೊಂಡು, ಚಿತ್ರಗುಪ್ತ ತನ್ನ ಕಿರ್ದಿ ಪುಸ್ತಕದಲ್ಲಿ ಬರೆದಿಟ್ಟಂತೆ ನರಕಕ್ಕೆ ಶಿಕ್ಷೆ ಕೊಟ್ಕೊಂಡು ಆರಾಮವಾಗಿದ್ದೆ. ನಿನ್ ಥರಾನೇ ಹೊಸೂರು ರಸ್ತೆಯಲ್ಲಿ ಅಪಘಾತಕ್ಕೀಡಾಗಿ ಸತ್ತ ಸಾಫ್ಟ್ ವೇರ್ ಎಂಜಿನಿಯರನ್ನು ಎಳ್ಕೊಂಡ್ಬಂದೆ ನೋಡು... ನನ್ನ ಗ್ರಹಚಾರ ಕೆಟ್ಟುಹೋಯಿತು. ಯಮಲೋಕವನ್ನು ಕಾರ್ಪೋರೇಟ್ ಆಫೀಸಾಗಿ ಚೇಂಜ್ ಮಾಡೋಣ, ಹಳೇ ಕಾಲದ ಕಿರ್ದಿ ಪುಸ್ತಕವನ್ನು ಒಗಾಯಿಸಿ ಡೇಟಾಬೇಸ್ ಕ್ರಿಯೇಟ್ ಮಾಡೋಣ, ಆಗ ನರಕಕ್ಕೆ ಬಂದವನ್ನು ಕ್ಷಣಾರ್ಧದಲ್ಲಿ ಹುಡುಕುವುದು ಸಲೀಸು ಅಂತೆಲ್ಲಾ ತಲೆಗೆ ತುಂಬಿ ನನ್ನನ್ನೇ ಬ್ರೇನ್ ವಾಷ್ ಮಾಡಿಬಿಟ್ಟ. ಆಫೀಸು ಗೆಟಪ್ಪು ಬದಲಾಯಿಸಿದ್ದೂ ಆಯಿತು, ಕಂಪ್ಯೂಟರ್ ತಂದದ್ದೂ ಆಯಿತು. ಈಗ ಅವನದೇ ಆಟ. ನನ್ನನ್ನಂತೂ ಸರೀ ಆಟ ಆಡಿಸ್ತಿದ್ದಾನೆ. ನನಗೆ, ಚಿತ್ರಗುಪ್ತನಿಗೆ ಇವು ಯಾವುದೂ ತಲೆಗೆ ಹೋಗುತ್ತಿಲ್ಲ. ತಲೆ ಚಿತ್ರಾನ್ನ ಆಗಿಬಿಟ್ಟಿದೆ" ಎಂದು ಅಳಲನ್ನು ತೋಡಿಕೊಂಡ.

"ಅಷ್ಟೇ ಅಲ್ಲ. ಅವನು ಯಾವ ರಾಜ್ಯದವನೋ ಕಾಣೆ. ಕಂಪನಿಯಲ್ಲಿ ತನಗೆ ಬೇಕಾದವರನ್ನೇ ಎಳ್ಕೊತಾ ಇದ್ದಾನೆ. ಅವರು ಮಾತಾಡೋ ಭಾಷೆನೂ ಅರ್ಥ ಆಗ್ತಾ ಇಲ್ಲ. ಒಬ್ಬರೂ ಹೇಳಿದ ಮಾತು ಕೇಳುತ್ತಿಲ್ಲ. ಎಲ್ಲರ ಮುಖಾ ನೋಡಿದ್ರೆ ಯಾವ್ದೋ ಒಂದೇ ರಾಜ್ಯದವರು ಅಂತ ಕಾಣ್ತದೆ" ಅಂತ ಗೋಳಿಟ್ಟುಕೊಂಡ ಯಮ.

ಅವರೆಲ್ಲಾ ಯಾವ ರಾಜ್ಯದವರು, ಯಮ ಮತ್ತು ಚಿತ್ರಗುಪ್ತನನ್ನು ಹೇಗೆಲ್ಲಾ ಆಟ ಆಡಿಸ್ತಿದ್ದಾರೆ, ಯಮ ಎಂಥಾ ಸಂಕಷ್ಟದಲ್ಲಿ ಸಿಗ್ಹಾಕ್ಕಿಕೊಂಡಿದ್ದಾನೆ ಅಂತೆಲ್ಲಾ ಲೆಕ್ಕ ಹಾಕಿದೆ. ಏನಾದ್ರೂ ಉತ್ತರ ಕೊಡ್ತೀನೇನೋ ಅಂತ ದೈನ್ಯತೆಯಿಂದ ನನ್ನನ್ನೇ ಯಮ ನೋಡುತ್ತಿದ್ದ. ಆತನ ದಯನೀಯ ಸ್ಥಿತಿ ಕಂಡು ಕಿಸಕ್ಕನೆ ನಕ್ಕುಬಿಟ್ಟೆ. ಯಮನಿಗೆ ಒಂಥರಾ ಅವಮಾನವಾದಂತಾಯಿತು. ಮುಖ ಆಕಡೆ ತಿರುಗಿಸಿದ. ಆದ ಅವಮಾನವನ್ನು ಮರೆಮಾಚುವ ಹಾಗೆ, "ಎಲ್ಲಿ ಯಾರೂ ಕಾಣ್ತಿಲ್ಲವಲ್ಲ?" ಅಂತ ವಿಚಾರಿಸಿದೆ.

"ಎರಡು ದಿನಗಳ ವೀಕ್ಲಿ ಆಫಂತೆ. ನನ್ಮಕ್ಳು ಒಬ್ರೂ ಕೆಲಸಕ್ಕೆ ಬಂದಿಲ್ಲ. ಹೋಗ್ಲಿ ಒದ್ದು ಓಡಿಸಿಬಿಡೋಣವೆಂದರೆ, ಈ ಕಂಪ್ಯೂಟರನ್ನೆಲ್ಲಾ ನೋಡ್ಕೋಳ್ಳೋರು ಯಾರು? ಪೀಕಲಾಟಕ್ಕೆ ಇಟ್ಟುಕೊಂಡುಬಿಟ್ಟಿದೆ. ಮೊನ್ನೆ ನಾಬಂದ ಕೂಡ್ಲೆ ಏನೇನೋ ಆಡ್ಕೊಂಡು ನಗತಿದ್ದರು. ಬೇಜಾರಾಗಿಬಿಟ್ತು. ರಾಜೀನಾಮೆ ಒಗಾಸಿ ಹೋಗೋಣಾಂದ್ರೆ ಹೋಗೋದಾದ್ರೂ ಎಲ್ಲಿಗೆ? ನಾನೇ ಇಲ್ಲಿ ಯಜಮಾನ ಅಲ್ವಾ?" ಅಂತ ತನಗೆ ತಾನೇ ಪ್ರಶ್ನೆ ಕೇಳ್ಕೊಂಡ.

ಮತ್ತೆ ಮುಂದುವರಿಸುತ್ತ, "ಅವರ ಡಿಮ್ಯಾಂಡು ಏನಂತ ಹೇಳಲಿ. ವೀಕೆಂಡಲ್ಲಿ ಸುತ್ತಾಡಲೇ ಬೇಕೆಂತೆ. ಜೊತೆಗೆ ರಂಭೆ, ಊರ್ವಶಿ, ತಿಲೋತ್ತಮೆ, ಮೇನಕೆಯನ್ನೆಲ್ಲಾ ಕರೆದುಕೊಂಡು ಹೋಗಿದ್ದಾರೆ. ಅಲ್ಲಾ.. ಇವರಿಗೆ ತಿಲೋತ್ತಮೆ ಮೇನಕೆಯರೆಲ್ಲಾ ಏನಕೆ? ಆ ಮುಂಡೇವಕ್ಕಾದ್ರೂ ಅರ್ಥ ಆಗಬಾರ್ದಾ? ಕುಣಕೊಂಡು ಹೋದ್ವು. ಯಾವ್ದುರ ಮೇಲೆ ಹೋಗಿದ್ದಾರೆ ಅಂತೀಯಾ. ನನ್ನ ಕ್ವಾಣದ ಮೇಲೆ! ಹೆಂಗಿದ್ರೂ ಹೋಗ್ತಾ ಇದ್ದಾರಲ್ಲ. ಬಾಯಾರಿಕೆಗೆ ಇರಲಿ ಅಂತ ಅಮೃತ ತೊಗೊಂಡು ಹೋಗಿ ಅಂತ ಕರುಣೆ ತೋರ್ಸಿದ್ರೆ. ಆ ಅಮೃತವೂ ಟಿನ್ನಲ್ಲೇ ಬೇಕಂತ ಗಲಾಟೆ ಮಾಡಿದ್ರು. ಹೇಗೋ ಸಂಭಾಳಿಸಿ ಕಳಿಸಿದೆ. ಈ ಸಾಫ್ಟ್ ವೇರು, ಈ ಎಂಜಿನಿಯರುಗಳು, ನಾವಿದನ್ನೆಲ್ಲಾ ಕಲಿಯೋದು ಸಾಕಪ್ಪಾ ಸಾಕು" ಅಂತ ಧಸಕ್ಕನೆ ನೆಲದ ಮೇಲೆ ಕುಳಿತುಬಿಟ್ಟ. ಕಣ್ಣಲ್ಲಿ ನೀರು ಬರೋದೊಂದು ಬಾಕಿ.

"ನಾನು ಬಂದಿದ್ದೇನಲ್ಲ. ಎಲ್ಲ ಸರಿ ಮಾಡೋಣ ಬಿಡು. ಇದನ್ನೆಲ್ಲಾ ನಾನು ಹ್ಯಾಂಡಲ್ ಮಾಡ್ತೀನಿ, ಕಿಂಡಾಲ್ ಮಾಡೋರ್ಗೆಲ್ಲಾ ಪಿಂಕ್ ಸ್ಲಿಪ್ ಕೊಟ್ಟು ಕಳಿಸಿಬಿಡು" ಅಂತ ಅಭಯಹಸ್ತ ನೀಡಿದೆ.

"ಪಿಂಕ್ ಸ್ಲಿಪ್ಪಾ?" ಯಮ ಕಕ್ಕಾಬಿಕ್ಕಿಯಾಗಿದ್ದ!

ಭಾಗ 2 : ಸಿಇಓ ಯಮಧರ್ಮರಾಯನ ಪಿಂಕ್ ಸ್ಲಿಪ್ ಪುರಾಣ

English summary
A humurous write up about yamaloka turned software company. Kannada humor by Prasad Naik.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more