ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹಣದುಬ್ಬರ

By Staff
|
Google Oneindia Kannada News

Radhika MG, Bangalore
ಈಗೀಗ ಐಟಿ ಹುಡುಗಿಯರು ಮದುವೆ ಮಾರುಕಟ್ಟೆಯಲ್ಲಿ ಹುಡುಗರನ್ನು ತಿರಸ್ಕರಿಸುತ್ತಿರುವ ಸಂಖ್ಯೆ ಜಾಸ್ತಿ ಆಗ್ತಾ ಇದೆ. ಡೊಮೈನ್ ಸರಿ ಇಲ್ಲ, ಟೇಕ್ ಹೋಮ್ ಕಮ್ಮಿ,ಪ್ರಾಡಕ್ಟ್‌ಗೆ ಭವಿಷ್ಯ ಇಲ್ಲ ತರಹೇವರಿ ಕಾರಣಗಳು. ವರದಕ್ಷಿಣೆ ಅಪರಾಧ ಯಾವ ಸೆಕ್ಷನ್‌ನಲ್ಲಿ ಬರುತ್ತೆ ಅನ್ನುವಷ್ಟು ಸಾಮಾನ್ಯ ಜ್ಞಾನವಿರುವ ಬುದ್ಧಿವಂತೆಯರು!

ಲೇಖಕಿ : ರಾಧಿಕಾ ಎಮ್.ಜಿ.

ಜ್ಯೂಸ್ ಗ್ಲಾಸ್ ಸ್ವಲ್ಪ ಚಿಕ್ಕದಾಗಿದೆ ಅನ್ನಿಸ್ತು ಸಂದೀಪಂಗೆ. ಅಥವಾ ತನ್ನ ಕುಬ್ಜ ದೇಹ ತನ್ನ ಸುತ್ತಮುತ್ತಲಿರುವುದನ್ನೆಲ್ಲ ತನ್ನಂತೆಯೇ ಎಂಬ ಭಾವನೆಯನ್ನು ಮೂಡಿಸ್ತಾ ಇದೆಯೇನೋ ಅನ್ನಿಸ್ತು. "ಸಾಲಾ ಜ್ಯೂಸ್ ಕ ಗಿಲಾಸ್ ಛೋಟಾ ಕರ್ ದಿಯಾ ಹೈ" ಎಂದು ಜ್ಯೂಸ್ ಗ್ಲಾಸ್ ಹೊತ್ತು ಪಕ್ಕದಲ್ಲೇ ಕೂತ ಬಿಹಾರದ ರಾಕೇಶ್. 2.5 ಪಾಸಿಟಿವ್ ಪವರ್ ಇರುವ ತನ್ನ ಕನ್ನಡಕ ಏನೂ ತಪ್ಪು ಮಾಡಿಲ್ಲ ಅಂತ ಮನಸ್ಸು ನಿರಾಳ ಆಯ್ತು ಸಂದೀಪಂಗೆ.

ಹಣದುಬ್ಬರ ಒಂಭತ್ತು ಹತ್ತು, ಹನ್ನೊಂದಾಯ್ತು ಅಂತ CNN IBN ಉದ್ಘೋಷಕಿ ಪ್ರಪಂಚ ಪ್ರಳಯವಾದ ಹಾಗೆ ದಿನೇ ದಿನೇ ಉದ್ಗರಿಸುತ್ತಿದ್ದರೂ ಅದರ ಬಿಸಿ ಅಷ್ಟಾಗಿ ತಗಲಿರಲಿಲ್ಲ. ಉಬ್ಬರದ ಅರಿವಾದದ್ದು ಕೆಫೆಟೇರಿಯದಲ್ಲಿ ಹತ್ರುಪಾಯಿ ಕೊಟ್ಟು ಚೌಚೌ ಭಾತ್, ಇಡ್ಲಿ, ವಡೆ ತಿಂದು ವೆಂಡಿಂಗ್ ಮೆಶೀನಿನ ಕಾಫಿ ಅಥವಾ ಕೂಪನ್ ಹಾಕಿ ತೊಗೋಬೇಕಿರೋ ಜ್ಯೂಸ್ ಅನ್ನು ಹಳೇ ಬಿಟಿಎಸ್ ಟಿಕೆಟ್ ಅಥವಾ ಕಾಗದದ ಮಡಿಕೆ ಹಾಕಿ ತೊಗೊಂಡು ಕುಡಿದ್ರೂ 12ಕ್ಕಾಗಲೇ ಹೊಟ್ಟೆ ತಾಳ ಹಾಕಲಿಕ್ಕೆ ಶುರುವಾದಾಗ! "ಹೇ ವೈ ಆರ್ ಯೂ ಈಟಿಂಗ್ ಲೈಕ್ ಅ ಪಿಗ್" ಅಂತ ಅಮ್ಮ ಮಾಡಿದ ಮೆಂತ್ಯದ ದೋಸೆ ಐದನೆಯದನ್ನ ಚಪ್ಪರಿಸುವಾಗ ವಂದನಾ ಉಸುರಿದ್ದಳು ಒಮ್ಮೆ. ಏನೋ ಅದು ಇಂಗ್ಲಿಷ್ನಲ್ಲಿ ಗುಸು ಗುಸು ಅಂತ ಅಮ್ಮ ಅಂದಾಗ ಹಂದಿ ಅಂತಾಳೆ ನಿನ್ನ ಸೊಸೆ ಅಂದರೆ ಸರಿಯಾಗಿ ತರಾಟೆಗೆ ತೊಗೋತಾಳೆ ಅಂದ್ಕೊಂಡು ಏನಿಲ್ಲಮ್ಮಾ ನಾನು ವರಾಹಾವತಾರ ಅಂತಾಳೆ ಅಂದಿದ್ದಕ್ಕೆ ಪರವಾಗಿಲ್ಲ ಗಂಡನ್ನ ಈ ಕಾಲದ ಹುಡ್ಗೀರೂ ದೇವ್ರು ಅಂತ ಭಾವಿಸ್ತಾರಲ್ಲ ಅಂತ ಅಮ್ಮಂಗೆ ಎಂಥಾ ಸೊಸೆಯನ್ನ ಆರಿಸಿದೆ ಅಂತ ಒಳಗೊಳಗೇ ಖುಷಿ ಆಯ್ತು. ಹೆಂಡ್ತಿ ಕೈ ಚೀಲ, ಅಮ್ಮ ತುತ್ತಿನ ಚೀಲ ನೋಡ್ತಾಳೇ ಅನ್ನೋ ಮಾತು ಎಷ್ಟು ಸತ್ಯ ಅನ್ನಿಸಿ ಆರನೇ ದೋಸೆಯನ್ನು ತಿನ್ನೋ ಚಪಲವನ್ನು ಹತ್ತಿಕ್ಕಿ ಕೈ ತೊಳ್ಕೊಂಡಿದ್ದ.

ಕೆಫೆಟೇರಿಯದ ಸಂತೃಪ್ತಿ ಕ್ಯಾಟರರ್ ಬೆಲೆ ಜಾಸ್ತಿ ಮಾಡಿದ್ರೆ ಐದಂಕಿ ಸಂಬಳ ತೊಗೊಳ್ಳೋ ಐಟಿ ಮಂದಿ ತನ್ನ ಕೌಂಟರ್ ಬಳಸಿ ಹೋಗಿ ಆ ಬದಿಯ ಸ್ಯಾಂಡ್‌ವಿಚ್ ತಿಂದು ಬಿಟ್ಟಿ ಕಾಫಿ ಕುಡಿಯೋ ಪೈಕಿ ಅಂದುಕೊಂಡು ತಾನು ಬಳಸುವ ಸೌಟು, ಸ್ಪೂನುಗಳ ಸೈಜ್ ಕಡಿಮೆ ಮಾಡಿಬಿಟ್ಟಿದ್ದ! ಅದರ ಅರಿವಾದದ್ದು ಸ್ವಲ್ಪ ನಿಧಾನವಾಗಿಯೇ! ಬರೀ ಚೌಚೌ ಭಾತ್ ಈಗ ಸಾಕಾಗಲ್ಲ ಜೊತೆಗೆ ಉದ್ದಿನ ವಡೆಯನ್ನೂ ತಿಂದು ಕಾಫಿ ಕುಡಿದು ಹೋದರೆ ಷೇರು ಮಾರುಕಟ್ಟೆಯ ಕುಸಿತವನ್ನು, ಲೇ ಆಫ್ ನ್ಯೂಸ್‌ಗಳನ್ನು ಅರಗಿಸಿಕೊಂಡು ಕೆಲಸದ ಕಡೆ ಗಮನ ಹರಿಸೋಕ್ಕಾಗೋದು! ಇಂದಿನ ದಿನವೇ ಶುಭದಿನವೂ ಎಂಬ ಪುರಂದರರಕೀರ್ತನೆಯನ್ನು ದಿವಸಾ ಮನಿಕಂಟ್ರೋಲ್‌ನಲ್ಲಿ ಕೇಳಿ ಕೇಳಿ ರೋಸಿದ್ದ ಸಂದೀಪ ಈಗ ಷೇರು ಮಾರುಕಟ್ಟೆಯ ಕಡೆ ಅಪ್ಪಿ ತಪ್ಪಿಯೂ ಇಣುಕು ಹಾಕೋಲ್ಲ. ತನಗೆ ಮಾತ್ರ ಈ ನಿರುತ್ಸಾಹಾನಾ ಜೀವನದಲ್ಲಿ ಅಂದ್ಕೋತಾ ಇದ್ದ ಹಾಗೇ ಡೊಮೈನ್ ಸ್ಪೆಶಲಿಸ್ಟ್ ಸುರೇಂದ್ರ ಬಂದು ಭುಜ ತಟ್ಟಿ "ಹೌ ಅಬೌಟ್ ಕಾಫಿ" ಅಂದ. ಮಗ ಕಾಫಿ ಬಿಸ್ಕತ್ ಬಿಟ್ಟಿ ಅಲ್ಲದೇ ಇದ್ರೆ ಪ್ಯಾಂಟ್ರಿ ಕಡೆ ತಲೆ ಹಾಕ್ತಾ ಇದ್ದನೋ ಇಲ್ಲವೋ ಅಂದ್ಕೊಂಡು ಜೊತೆಗೆ ಹೆಜ್ಜೆ ಹಾಕಿದ. ಮದುವೆಯಾದ ಒಂದು ವರ್ಷದಲ್ಲೇ ಬೆಂಗಳೂರಿನ ಯಾವ ಅಂಗಡಿಯಲ್ಲಿ ಕಡಿಮೆ ಬೆಲೆಗೆ ಎಣ್ಣೆ, ಬೇಳೆ ಸಿಗುತ್ತೆ ಅನ್ನೋ ನಿಖರ ಅಂಕಿ ಅಂಶ ಇವನ ಹತ್ತಿರ ಇತ್ತು. ಈ ರಿಲೈಯನ್ಸ್ ಅಂಬಾನಿ ಭಾರೀ ಚಾಣಾಕ್ಷ ಈರುಳ್ಳಿ ಕಡಿಮೆ ಬೆಲೆಗೆ ಮಾರ್ತಾನೆ ಆದರೆ ಈರುಳ್ಳಿ ಆಸೆಗೆ ಇನ್ನೆಲ್ಲ ಸಾಮಾನನ್ನು ಒಂದು ರುಪಾಯಿ ಹೆಚ್ಚೇ ಕೊಟ್ಟು ತೊಗೋತೀವಿ ನಾವು ಅಂದ. ಇಲ್ವಲ್ಲ ರಿಲೈಯನ್ಸ್ ಕಾರ್ಡ್ ಇದ್ದರೆ ಕಡಿಮೆ ಆಗುತ್ತೆ ಅಂದ ಸಂದೀಪ. ಕಿರು ನಗೆ ಬೀರಿದ ಸುರೇಂದ್ರ. ಅಂಬಾನಿಗೆ "loss leader" ತತ್ವ ನಮಗಿಂತ ಚೆನ್ನಾಗೇ ಗೊತ್ತು ಅಂದ. ಬಿಇ ಮಾಡುವಾಗ ಓದಿದ್ದು ಈಗೆಲ್ಲಿ ಜ್ನಾಪಕ ಇರುತ್ತೆ! ಈರುಳ್ಳಿಯನ್ನು ಕಡಿಮೆ ಬೆಲೆಗೆ ಮಾರ್ತಾರೆ ಅಂತ ನಾವೆಲ್ಲ ರಿಲೈಯನ್ಸ್ ಫ್ರೆಶ್‌ಗೆ ಮುಗಿ ಬೀಳ್ತೀವಿ. ಆದರೆ ಈರುಳ್ಳಿ ಬಿಟ್ರೆ ಬೇರೆಲ್ಲ ವಸ್ತುಗಳೂ ಜಾಸ್ತಿ ಬೆಲೆ ಅನ್ನೋದನ್ನ ನಾವು ಗಮನಿಸೋದೇ ಇಲ್ಲ ಅಂದ. ಅಂಬಾನಿ ಕಾರ್ಡ್ ಕೊಟ್ಟಿರೋದು ನಮ್ಮ ಲಾಯಲ್ಟಿ ಚೆಕ್ ಮಾಡಕ್ಕೆ! ಬೆಲೆ ಜಾಸ್ತಿ ಮಾಡಿದ್ರೂ ಅವನ ಹತ್ರಾನೇ ಬರ್ತಾರೆ ಅಂತ ಗೊತ್ತಾದ್ಮೇಲೆ ಡಿಸ್ಕೌಂಟ್ ಕೊಡೋದನ್ನ ನಿಲ್ಲಿಸ್ತಾನೆ! ಅರೆ! ಇದೊಂಥರಾ ಹಗಲು ದರೋಡೆ ಅಲ್ವಾ ಅಂದಿದ್ದಕ್ಕೆ ನಿನಗೆ ದರೋಡೆ ಅವರಿಗೆ ಅದು marketing strategy ಅಂದ.

ಇವ್ನಿಗೇನೂ ಬೇರೆ ಕಡೆ ಕೆಲಸ ಹುಡುಕೋ ಧೈರ್ಯ ಇಲ್ಲ. ಜೀರೊ ಪರ್ಸೆಂಟ್ ಹೈಕ್ ಕೊಟ್ಟು ಬಡ್ತಿ ಕೊಡದೇ ಇದ್ರೂ ಸುಮ್ಮನೇ ಇರ್ತಾನೆ ಅನ್ನುವ ಧೈರ್ಯದಲ್ಲಿರೋ ಮ್ಯಾನೇಜರ್ ವೇಲಾಯುಧನ್ ರೀತಿಗೂ ರಿಲೈಯನ್ಸ್ strategyಗೂ ಸಾಮ್ಯ ಇದೆಯೇನೋ ಅನ್ನಿಸ್ತು. ಒಳ್ಳೇ ಹೈಕು, ಪ್ರಮೋಷನ್ ಕೊಡ್ದೇ ಇದ್ರೆ ಪೇಪರ್ ಹಾಕ್ತೀನಿ ಅಂತ ವಂದನಾ ಹೇಳ್ದಾಗ ಹೆಣ್ಣು ಹೆಂಗಸು ಅವಳಿಗೆ ಇರುವ ಧೈರ್ಯ ನನಗೆ ಇಲ್ವಲ್ಲ ಅಂತ ಸಂದೀಪಂಗೆ ಅನ್ನಿಸಿದ್ದಿದೆ. ಹಾಗೇ ಈಗಿನ ಹುಡುಗಿಯರು ಯಾವ ರೀತಿಯಲ್ಲೂ ಹುಡುಗರಿಗಿಂತ ಏನೂ ಕಡಿಮೆ ಇಲ್ಲ ಅನ್ನೋ ಸತ್ಯಾನೂ ಗೋಚರವಾಯ್ತು. ಈಗೀಗ ಐಟಿ ಹುಡುಗಿಯರು ಮದುವೆ ಮಾರುಕಟ್ಟೆಯಲ್ಲಿ ಹುಡುಗರನ್ನು ತಿರಸ್ಕರಿಸುತ್ತಿರುವ ಸಂಖ್ಯೆ ಜಾಸ್ತಿ ಆಗ್ತಾ ಇದೆ. ಡೊಮೈನ್ ಸರಿ ಇಲ್ಲ, ಟೇಕ್ ಹೋಮ್ ಕಮ್ಮಿ,ಪ್ರಾಡಕ್ಟ್‌ಗೆ ಭವಿಷ್ಯ ಇಲ್ಲ ತರಹೇವರಿ ಕಾರಣಗಳು. ವರದಕ್ಷಿಣೆ ಅಪರಾಧ ಯಾವ ಸೆಕ್ಷನ್‌ನಲ್ಲಿ ಬರುತ್ತೆ ಅನ್ನುವಷ್ಟು ಸಾಮಾನ್ಯ ಜ್ಞಾನವಿರುವ ಬುದ್ಧಿವಂತೆಯರು! ಹಿಂದೆ ಹುಡುಗರು ಹುಡುಗಿಯರನ್ನು ರಿಜೆಕ್ಟ್ ಮಾಡ್ತಾ ಇದ್ದದನ್ನೆಲ್ಲ ಈಗಿನ ಹುಡುಗಿಯರು ಒಮ್ಮೆಲೇ ಶತಮಾನಗಳ ಅಪಮಾನದ ವಿರುದ್ಧ ಸೇಡು ತೀರಿಸಿಕೊಳ್ಳೋ ಹುರುಪಿನಲ್ಲಿದ್ದಾರೋ ಏನೋ.

ವಂದನಾ ಸಂದೀಪನ್ನ ಒಪ್ಪಿಕೊಂಡಾಗ ಸದ್ಯ ಎಂದು ಒಂದು ದೀರ್ಘ ಉಸಿರನ್ನು ತೆಗೆದಿದ್ದ. ಸೌತ್ ಇಂಡಿಯದಲ್ಲೇ ಪರವಾಗಿಲ್ಲ. ಓದಿ ಐಟಿ ಉದ್ಯೋಗದಲ್ಲಿರೋ ಹುಡುಗಿಯರಿದ್ದಾರೆ. ನಮ್ಮ ಕಡೆ ಹುಡುಗಿಯರು ಹೆಚ್ಚು ಓದಲ್ಲ ಅಂತ ಪೇಚತ್ತುಕೊಂಡಿದ್ದ ಬಿಹಾರದ ರಾಕೇಶ್. ಅದೇ ಒಳ್ಳೆಯದೇನೋ ಅನ್ನಿಸಿತ್ತು. ತನ್ನಷ್ಟೆ ಸಂಬಳ ಗಳಿಸೋ ಹೆಂಡತಿ ಆಫೀಸಿಂದ ಬರ್ತಾ ಪಿಜ್ಜಾ ಪಾರ್ಸೆಲ್ ತಂದು ಅನಿಮಲ್ ಪ್ಲಾನೆಟ್‌ನ ಕೋತಿಗಳನ್ನು ನೋಡುತ್ತಾ ತುಟಿಗೆ ತಗಲಿಸದ ಹಾಗೆ ನಾಜೂಕಾಗಿ ತಿನ್ನುತ್ತಿದ್ದರೆ ಪಿಜ್ಜಾ ಸೇರದ (ಅದರ ಆಫ್ಟರ್ ಎಫೆಕ್ಟ್ ಕಾನ್ಸ್ಟಿಪೇಷನ್‌ಗೆ ಹೆದರಿ!) ಸಂದೀಪ ಅವಲಕ್ಕಿ ಮೊಸರು ಹಿಡ್ಕೊಂಡು ಟಿವಿಯಲ್ಲಿ ಬರ್ತಾ ಇರೋ ಕೋತೀನೇ ನೋಡ್ತಾ ನಗ್ತಾ ಇದ್ದಾಳೋ ಅಥವಾ ತನ್ನ ದನಿಯೆತ್ತದ ಅಸಹಾಯಕತೆಯನ್ನೇ ನೋಡಿ ನಗ್ತಾ ಇದ್ದಾಳೋ ಗೊತ್ತಾಗದೆ ಅವಳನ್ನೊಮ್ಮೆ ಕೋತಿಗಳನ್ನೊಮ್ಮೆ ನೋಡ್ತಾ ಕೂತ. ವೇಲು ಇವತ್ತು ಆನ್‌ಸೈಟ್ ಆಪರ್ಚುನಿಟಿ ಇದೆ ಅಂತಾ ಇದ್ದ ಅಂದ. ಟಿವಿಯಿಂದ ಕಣ್ತೆಗೆಯದೆ ಹೌದಾ ಅಂದ್ಲು ತಣ್ಣಗೆ ವಂದನಾ. ಅವ್ಳಿಗೇನು ಅಮೆರಿಕಾ ಪಕ್ಕದ ಮನೆಯೇನೋ ಅನ್ನುವಷ್ಟು ಅತಿಯಾಗಿ ಓಡಾಡ್ತಾ ಇರ್ತಾಳೆ. ಮದ್ವೆ ಗೊತ್ತಾದಾಗಲಿಂದಲೂ ಪರದೇಶಕ್ಕೆ ಹೋಗ್ತೀನಿ ಅಂತಲೇ ಹೇಳುತ್ತಾ ಬಂದಿದ್ದ ಸಂದೀಪಂಗೆ ಎರ್ಡು ವರ್ಷ ಅದ್ರೂ ಘಳಿಗೆ ಕೂಡಿ ಬಂದಿರಲಿಲ್ಲ. ಈ ಸಾರಿಯಾದರೂ ನಿಜವಾಗಲಪ್ಪ ರಾಘವೇಂದ್ರ ಅಂದ್ಕೊಂಡ. ವಿಂಟರ್ ಕ್ಲೋತ್ಸ್ ಎಲ್ಲಿ ತೊಗೊಳ್ಳೋದು ಅಂದ. ಎಲ್ಲಿಗೆ ಹೋಗ್ತಾ ಇದ್ದೀಯ ಅಂದ್ಲು. ಅದೇ ಇನ್ನೂ ಒಗಟಿನ ವಿಷಯ. ಆದ್ರೂ ಸುಮ್ಮನೆ ಯುಎಸ್ ಅಂದ. ಮಾರಾಯಾ ಯುಎಸ್‌ನಲ್ಲಿ ಎಲ್ಲಿ ಅಂದ್ಲು. ಸುಮ್ನೆ ಇದ್ದ ಸಂದೀಪ. ಅವನ ಹತ್ರ ಉತ್ತರ ಇಲ್ಲ ಅಂತ ಗೊತ್ತಾಗಿ ಅವಳೂ ಮಾತು ಬೆಳೆಸಲಿಲ್ಲ.

ಮಾರನೇ ದಿನ ವೇಲು ಡು ಯೂ ಹ್ಯಾವ್ ಫ್ಯೂ ಮಿನಟ್ಸ್ ಅಂತ ಕರೆದು ದ ಲಾಂಗ್ ಪೆಂಡಿಂಗ್ ಆನ್‌ಸೈಟ್ ಆಪರ್ಚುನಿಟಿ ಈಸ್ ಕನ್ಫರ್ಮ್ದ್ (the long pending onsite opportunity is confirmed) ಅಂದ. ಮನಸ್ಸು ಗರಿಗೆದರಿತು. ಅಂತೂ ಇಂತೂ ಆನ್‌ಸೈಟ್ ಬಂತೂ ಅಂತ ಗುನುಗುನಿಸುವಷ್ಟರಲ್ಲಿ ತಣ್ಣನೆಯ ಬಾಂಬ್ ಸ್ಫೋಟವಾಯ್ತು. ಯೂ ವಿಲ್ ಬಿ ಆನ್‌ಸೈಟ್ ವಿತ್ ಅವರ್ ಪ್ರೀಮಿಯರ್ ಕ್ಲೈಯಂಟ್ ಅಂಡ್ ವಿಲ್ ಬಿ ವರ್ಕಿಂಗ್ ಇನ್ ರಿಲೈಯನ್ಸ್ ನಾಲೆಡ್ಜ್ ಸಿಟಿ ಇನ್ ಮುಂಬೈ (you will be onsite with our premier client and will be working in reliance knowledge city) ಅಂದ. ವಂದನಾ ರೈನ್ ಕೋಟ್ ಯಾವಾಗ ಶಾಪಿಂಗ್ ಮಾಡೋಣ ಅಂದು ನಕ್ಕ ಹಾಗಾಯ್ತು!

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X