• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಕೊಳೆತ ಮಾರುಕಟ್ಟೆಯಲ್ಲಿ ಹೆಂಗಸರ ತಾಜಾ ರಾಜಕೀಯ

By Super
|

ಭಾನುವಾರ ಬೆಳಿಗ್ಗೆ ಸಂತೆ. ಹಣ್ಣು, ಹೂವು, ತರಕಾರಿ ಮಾರುವವರದೇ ಭರಾಟೆ. ತರಕಾರಿ ಹೆಸರನ್ನು ಹಿಡಿದುಕೊಂಡು ಗಿರಾಕಿಗಳನ್ನು ತಮ್ಮತ್ತ ಸೆಳೆಯುವವರದೇ ಚೀರಲು ಧ್ವನಿಗಳು. ಆದರೆ, ಒಂದು ಮೂಲೆಯಲ್ಲಿ ಈ ಎಲ್ಲ ಚೀರು ಧ್ವನಿಗಳನ್ನು ಮೀರಿ ರೋಷಾವೇಷದ ಮಾತುಗಳು ಕೇಳಿಬರುತ್ತಿತ್ತು. ಮಹಿಳಾಮಣಿಗಳದ್ದೇ ಅಬ್ಬರ. ಏನೋ ಮಜಾ ನಡೆದೈತಿ ಅಂತ ನನ್ನ ಅನುಮತಿಗೂ ಕಾಯದೇ ಡಿಬ್ಬಿ ಅತ್ತ ಎಳೆದುಕೊಂಡು ಹೋದ. (2008ರ ಚುನಾವಣೆ ಸಂದರ್ಭದಲ್ಲಿ ಬರೆದ ಲೇಖನ.)

ಯಶ್

ನಿನ್ನೆ ಭಾರೀ ಬಿರುಗಾಳಿ ಆಲಿಕಲ್ಲು ಮಳೆ ಹುಯ್ದಿದ್ದರಿಂದ ಸಿಟಿ ಮಾರ್ಕೆಟ್ಟು ತನ್ನ ಎಂದಿನ 'ಸೌಂದರ್ಯ'ಕ್ಕಿಂತ ಹೆಚ್ಚಾಗಿಯೇ ರೂಪವತಿಯಂತೆ ಕಾಣುತ್ತಿದ್ದಳು. ಬಿರುಗಾಳಿಯ ಹೊಡೆತಕ್ಕೆ ಒಣ, ಗಲೀಜಿಲ್ಲದ ಅಂಗಾಲಗಲದ ನೆಲ ಸಿಗಲಾರದಷ್ಟು ಹಣ್ಣು, ತರಕಾರಿ, ಸೊಪ್ಪಿನ ರಾಶಿ ಎಲ್ಲೆಡೆ ಚೆಲ್ಲಾಡಿತ್ತು. ತರಕಾರಿ ತರಲು ಹ್ಯಾಗಿದ್ದರೂ ಬಂದಾಗಿತ್ತು ವಾಪಸ್ಸು ಹೋಗುವ ಹಾಗಿರಲಿಲ್ಲ. ಡಿಬ್ಬಿಯೊಡನೆ ನಾಲ್ಕು ಹೆಜ್ಜೆ ನಡೆಯುತ್ತಿದ್ದಂತೆ ಬಲಗಾಲಿನ ನಾಲ್ಕನೇ ಬೆರಳು ಮತ್ತು ಕಿರುಬೆರಳಿನ ಸಂದಿಯೊಳಗಿನಿಂದ ರಾಡಿ ಪಿಚಕ್ ಅಂತ ಚಿಮ್ಮಿತು. ಮಾರ್ಕೆಟೊಳಗೆ ಬಂದು ರಾಡಿಗೆ ಹೆದರಿದರೆ ಆಗುತ್ತಾ ಅಂತ ಮುಂದಡಿಯಿಟ್ಟೆ.

ಭಾನುವಾರ ಬೆಳಿಗ್ಗೆ ಸಂತೆ. ಹಣ್ಣು, ಹೂವು, ತರಕಾರಿ ಮಾರುವವರದೇ ಭರಾಟೆ. ತರಕಾರಿ ಹೆಸರನ್ನು ಹಿಡಿದುಕೊಂಡು ಗಿರಾಕಿಗಳನ್ನು ತಮ್ಮತ್ತ ಸೆಳೆಯುವವರದೇ ಚೀರಲು ಧ್ವನಿಗಳು. ಆದರೆ, ಒಂದು ಮೂಲೆಯಲ್ಲಿ ಈ ಎಲ್ಲ ಚೀರು ಧ್ವನಿಗಳನ್ನು ಮೀರಿ ರೋಷಾವೇಷದ ಮಾತುಗಳು ಕೇಳಿಬರುತ್ತಿತ್ತು. ಮಹಿಳಾಮಣಿಗಳದ್ದೇ ಅಬ್ಬರ. ಏನೋ ಮಜಾ ನಡೆದೈತಿ ಅಂತ ನನ್ನ ಅನುಮತಿಗೂ ಕಾಯದೇ ಡಿಬ್ಬಿ ಅತ್ತ ಎಳೆದುಕೊಂಡು ಹೋದ.

ನೋಡಿದ್ರೆ, ಮೊಣಕಾಲು ಕಾಣುವಂತೆ ಸೀರೆಯನ್ನು ಸೊಂಟಕ್ಕೆ ಸಿಕ್ಕಿಸಿಕೊಂಡ ಮೂವರು ವೀರ ವನಿತೆಯರು ಯಾವನೋ ಒಬ್ಬನ ಕೊರಳುಪಟ್ಟಿ ಹಿಡಿದು ಎಳೆದಾಡುತ್ತಿದ್ದರು. ಇದ್ಯಾಕೋ ತೀರಾ ಅತಿರೇಕಕ್ಕೆ ಹೋದಂತೆ ಕಾಣುತ್ತಿತ್ತು. ಮೂವರ ಮುಂದೆ ನರಸತ್ತವನಂತೆ ಆತ ಕಾಣುತ್ತಿದ್ದ. ಬೇರೆ ಯಾರೂ ಆತನನ್ನಾಗಲಿ, ಮಹಿಳೆಯರನ್ನಾಗಲಿ ಬೆಂಬಲಿಸಲು, ಜಗಳ ಬಿಡಿಸಲು ಮುಂದೆ ಬರಲಿಲ್ಲ. ಸುಮ್ನೆ ತಮಾಷೆ ನೋಡಿಕೊಂಡು ನಿಂತಿದ್ದರು. ಒಬ್ಬರಿಗೊಬ್ಬರು ಕಾಂಪಿಟೀಷನ್ನಿಗೆ ನಿಂತವರಂತೆ ಯಾವ ಪರಿ ಚೀರಾಡುತ್ತಿದ್ದರೆಂದರೆ ಯಾರ ಮಾತು ಯಾರಿಗೂ ತಿಳಿಯುತ್ತಿರಲಿಲ್ಲ. ವಿಚಾರಿಸಿದಾಗ, ಅನಧಿಕೃತ ಡಾನ್ ನಂತಿದ್ದ ಆತ ಆ ಮೂವರಿಗೆ ಸೇರಿದ ಜಾಗವನ್ನು ಇನ್ನಾರಿಗೋ ಬಿಟ್ಟುಕೊಟ್ಟಿದ್ದ. ಇದರಿಂದ ಕೆರಳಿಕೆಂಡವಾಗಿದ್ದ ಅವರು ಹಕ್ಕಿಗಾಗಿ ಅಕ್ಷರಶಃ ಯುದ್ಧಕ್ಕಿಳಿದಿದ್ದರು. ಕೆಲ ಹೊತ್ತಿನಲ್ಲಿ ಅದೇನಾಯಿತೋ, ಮೂವರು ಬಿರುಗಾಳಿ ಇದ್ದಕ್ಕಿದ್ದಂತೆ ಶಾಂತವಾದಂತೆ ತಣ್ಣಗಾದರು. ಕೈಯಲ್ಲಿ ನೋಟುಗಳು ನಲಿದಾಡುತ್ತಿದ್ದವು. ಸೇಫೆಸ್ಟ್ ಸ್ಥಳದಲ್ಲಿ ತುರುಕಿಕೊಂಡವರೇ ಜಗಳಕ್ಕೂ ತಮಗೂ ಏನೂ ಸಂಬಂಧವೇ ಇಲ್ಲ ಅನ್ನುವವರಂತೆ ಜಾಗ ಖಾಲಿ ಮಾಡಿದ್ದರು.

ಕೆಲ ನಿಮಿಷಗಳಲ್ಲಿ ಮುಗಿದುಹೋದ ಈ ಪ್ರಹಸನದ ಬಗ್ಗೆ ಹೇಗೆ ಪ್ರತಿಕ್ರಿಯಿಸಬೇಕೆಂದೇ ತಿಳಿಯದೇ ನಾವಿಬ್ಬರೂ ಏನು ಕೊಳ್ಳಬೇಕೆಂದು ಸುತ್ತಮುತ್ತ ನೋಡತೊಡಗಿದೆವು. ಡಿಬ್ಬಿ ಇಲ್ಲಿ ನಿಂಬಿಹಣ್ಣದಾವತಡಿ, ತೊಗೊಂಡುಬಿಡೋಣಂತ ಅಂದು ಕಾರ್ನರಲ್ಲಿ ಕುಳಿತಿದ್ದವಳ ಹತ್ತಿರ ಹೋದ. ಆಕೆಯನ್ನು ನೋಡುತ್ತಿದ್ದಂತೆ ದಂಗಾಗಿಬಿಟ್ಟೆವು. ಸುಕ್ಕುಗಟ್ಟಿದ ಮುಸುಡಿಯ ಕಣ್ಣ ಮೇಲೆ ಕೂಲಿಂಗ್ ಗ್ಲಾಸು. ಕೂದಲಿಗೆ ಬಣ್ಣ ಹಚ್ಚಿದ್ದಾಳೆಂದು ಮೇಲ್ನೋಟಕ್ಕೆ ಗೊತ್ತಾಗುತ್ತಿತ್ತು. ತುಟಿಗೆ ಅಬ್ಬಬ್ಬಬ್ಬಾ...

"ಏನಬೇ ಅಜ್ಜಿ, ಹೆಂಗ ನಿಂಬಿ ಹಣ್ಣು?" ತನಗೆ ಪರಿಚಯವಿರುವವಳ ಹಾಗೆ ಡಿಬ್ಬಿ ಮಾತಿಗೆ ನಿಂತುಬಿಟ್ಟ.

"ಯಾಕೋ ಹೆಂಗ ಕಾಣತೈತಿ. ಕಣ್ಣಿಗೆ ಚಸ್ಮಾ ಬಂದಾವೇನು ನೋಡು. ಅಜ್ಜಿ ಥರಾ ಕಾಣತೇನೇನು? ಇನ್ನೊಮ್ಮೆ ಅಜ್ಜಿ ಅಂದ್ರ ನೋಡು. ತಮಾಟಿ ಇಟಗೊಂಡು ಕುಂತೇನಿ. ನಿಂಬಿಹಣ್ಣು ಬೇಕಂತೀಯಲ್ಲ. ಮತ್ತ ಈ ನಿಂಬಿಹಣ್ಣು ಮಾರಲಿಕ್ಕಲ್ಲ ತಿಳ್ಕೊ. ಬೇಕಾದ್ರ ತಮಾಟಿ ತೊಗೊಂಡು ಹೋಗು" ಅಪ್ಪಟ ಹುಬ್ಬಳ್ಳಿ ಭಾಷೆಯಲ್ಲಿ ಉತ್ತರ ನೀಡಿದ ಆ ಯೌವನೆಯ ವರಸೆಗೆ ಡಿಬ್ಬಿಯೇ ಚಿತ್ತುಬಿದ್ದಿದ್ದ. ಆದರೆ, ಇವನೂ ಸೋಲುವವನಲ್ಲವಲ್ಲ.

"ಕೈಯಾಗ ನಿಂಬಿಹಣ್ಣು ಹಿಡಕೊಂಡಿದ್ದು ನೋಡಿ, ಅವನ್ನ ಮಾರಾಕತ್ತಿ ಅನಕೊಂಡೆಬೇ ಅಜ್ಜೀ, ಅಲ್ಲ ಮ್ನಮ್ನಮ್ನ ಅಕ್ಕಾರ. ಹಿಂದ ಒಂದ್ಯಾಡ ಸತಿ ಮೇನ ಗೇಟಿನ ಹತ್ರ ನೋಡಿದ್ದೆ ನಿನ್ನ".

"ಹಿಂಗ ಬಾ ದಾರಿಗೆ. ಏನ್ಮಾಡ್ತಿ ಅಲ್ಲಿ ಯಾಪಾರ ಜಮಾಸಲಿಲ್ಲಂತ ಈ ತುದಿಗೆ ಬಂದೇನಿ. ಸ್ವಾಮಗೋಳು ನಿಂಬಿಹಣ್ಣು ಮಂತ್ರಿಸಿ ಕೊಟ್ಟಾರ. ಯಾಪಾರ ಹೆಂಗಾಗಂಗಿಲ್ಲ ನೋಡೇ ಬಿಡ್ತೇನಿ. ಈಗ ತಮಾಟಿ ಬೇಕೋ ಬ್ಯಾಡೋ ಹೇಳು. ಬ್ಯಾಡಂದ್ರ ಜಾಗಾ ಖಾಲಿ ಮಾಡ" ಅಜ್ಜಿ ಧಿಮಾಕಿಗೇನು ಕಡಿಮೆಯಿರಲಿಲ್ಲ.

"ಜನರಿಗೆ ಬೇಕಾಗಿರೋದು ಬಿಟ್ಟು, ಬ್ಯಾಡಾಗಿದ್ದು ಮಾರಾಕ ನಿಲ್ಲು, ಯಾಪಾರ ಆಗತೇತಿ. ಈ ಸತಿನೂ ಯಾಪಾರ ಗಿಟ್ಟಂಗಿಲ್ಲ ತಗಿ. ಮುಂದ ನೋಡೋಣು ನಡಿ ಸುಬ್ರಾಯ್" ಅಂತ ಅಜ್ಜಿಗೆ ಕೇಳಿಸದ ಹಾಗೆ, ನನಗೆ ಮಾತ್ರ ಕೇಳಿಸುವ ಹಾಗೆ ಹೇಳಿ ಕಣ್ಣು ಮಿಟುಕಿದ ಡಿಬ್ಬಿ.

ಮುಂದೆ ಹೋದ್ರೆ, ತಾಜಾ ಬೆಂಡೆಕಾಯಿ, ಕೋಸುಗೆಡ್ಡೆ, ಆಲೂಗೆಡ್ಡೆ, ಬದನೆಕಾಯಿ, ಟೊಮೆಟೊ, ಸೊಪ್ಪು ಅಂತ ಕೂಗಿ ಹೇಳುವ ಧ್ವನಿ ಕೇಳುತ್ತಿತ್ತಾದರೂ, ಧ್ವನಿ ಗಂಟಲಿಂದ ಆಚೆಗೇ ಬರುತ್ತಿರಲಿಲ್ಲ. ಡಾಲ್ಡಾದಿಂದ ಮಾಡಿದ ಒಂದು ಹಿಡಿ ಶಂಕರಪೋಳೆ ತಿಂದರೆ ಗಂಟಲು ಹಿಡಿದುಕೊಂಡವರ ಹಾಗೆ ಧ್ವನಿ ಆಚೆ ಬರುತ್ತಿತ್ತು. ತರಕಾರಿ ಹೆಸರು ಹಿಡಿದು ಕೂಗಿ ಕೂಗಿ ಆಕೆಯ ಗಂಟಲು ಹಿಡಿದುಕೊಂಡಿದ್ದು ಸ್ಪಷ್ಟವಾಗಿತ್ತು. ಹತ್ತಿರ ಹೋಗಿ ನೋಡಿದರೆ ನಮಗೆ ಇನ್ನೂ ಆಶ್ಚರ್ಯ ಕಾದಿತ್ತು.

ಆಕೆ ತನ್ನ ಮುಂದೆ ಕೂಗುತ್ತಿದ್ದ ಯಾವ ಐಟಂಗಳನ್ನೂ ಇಟ್ಟುಕೊಂಡಿರಲಿಲ್ಲ. ಡಿಬ್ಬಿ ಅಂದ, "ಒಂದ್ಸತಿ ಹುಬ್ಬಳ್ಳಿ ಬಸ್ ಸ್ಟ್ಯಾಂಡಿನ್ಯಾಗ ಕಂಡಕ್ಟರೊಬ್ಬ ಹುಚ್ಚಂಥರ ನವಲಗುಂದ, ಬುಡರಸಿಂಗಿ, ರಾಣೆಬೆನ್ನೂರು, ಶಿಗ್ಗಾವಿ ಅಂತೆಲ್ಲ ಕೂಕ್ಕೊಂಡು ಓಡಾಡೋನೊಬ್ಬಾತನ್ನ ನೋಡಿದ್ದೆ. ಇಕಿನೂ ಹಂಗ ಹಾಪ್ ಆಗ್ಯಾಳಂತ ಕಾಣತೇತಿ".

ಆದ್ರೆ ನೋಡಿದ್ರೆ ಒಂದಿಬ್ಬರು ಅವಳ ಜೊತೆ ವ್ಯಾಪಾರ ನಡೆಸಿದ್ದರು. ಹೋಗಿ ನೋಡೇಬಿಡೋಣ ನಡಿ ಅಂತ ಡಿಬ್ಬಿಯನ್ನು ಕರೆದುಕೊಂಡು ಹೋದೆ. ಶುರುವಾಯಿತು ನೋಡಿ ಅವಳ ವ್ಯಾಪಾರ,

"ಆರ್ಡರ್ ಕೊಡಿ. ತಾಜಾತಾಜಾ ತರಕಾರಿ, ಹಣ್ಣು ಮನೆಮನೆಗೆ ತಲುಪಿಸುತ್ತೇವೆ. ಭರ್ಜರಿ ರಿಯಾಯಿತಿ. ಲಿಂಗಾಯತ, ಗೌಡ ಜಾತಿಯವರಿಗೆ ಶೇ.10 ಪರ್ಸೆಂಟ್, ಉಳಿದವರಿಗೆ ಶೇ.5 ಪರ್ಸೆಂಟ್ಟ್. ಚಿಲ್ಲರೆ ಮಾರಾಟಗಾರರಿಗೂ ಹೋಲ್ ಸೇಲ್ ದರದಲ್ಲಿ ಆರ್ಡರ್ ನೀಡಿದರೆ ಮಾರಾಟ ಮಾಡುತ್ತೇವೆ. ನಮ್ಮಲ್ಲಿ ಆರ್ಡರ್ ನೀಡಿದ ಚಿಲ್ಲರೆ ವ್ಯಾಪಾರಿಗಳಿಗೆ ಮಾರುಕಟ್ಟೆಯಲ್ಲಿ ಪರ್ಮನೆಂಟ್ ಜಾಗ ಕೊಡಿಸುವ ಜವಾಬ್ದಾರಿಯೂ ನನ್ನದು...." ಹಾಗೆ ಹೀಗೆ... ಸಾಗುತ್ತಲೇ ಇತ್ತು ಆಕೆಯ ವರಾತ. ಮೊದಲು ಅವಳ ಬಳಿ ಬಂದವರಿಬ್ಬರೂ ಆಕೆಯ ಕಡೆಯವರೇ ಇರಬೇಕೆಂಬ ಗುಮಾನಿ ಕೂಡ ಬಂತು. ಸಹವಾಸವೇ ಬೇಡ ಅಂತ ಮುಂದೆ ನಡೆದೆವು.

ಏನೇನು ಬೇಕೋ ಎಲ್ಲ ತೆಗೆದುಕೊಂಡು ಮನೆಗೆ ವಾಪಸ್ಸಾಗುವಾಗ ಇನ್ನೊಬ್ಬಳು ವಿಚಿತ್ರ ಹೆಂಗಸು ಕಣ್ಣಿಗೆ ಬಿದ್ದಳು. ಮಾರುಕಟ್ಟೆ ಆವರಣದಿಂದ ಹೊರಬದಿಯಲ್ಲಿ ಕುಳಿತಿದ್ದಾಳೆ. ಬುಟ್ಟಿತುಂಬ ತಾಜಾ ಸೊಪ್ಪುಗಳನ್ನು ಇಟ್ಟುಕೊಂಡಿದ್ದರೂ ಯಾರನ್ನೂ ಕೂಗಿ ಕರೆಯುತ್ತಿಲ್ಲ, ಮುಖ ನೋಡಿದರೆ ಕೆಂಡಕೆಂಡ, ದುಸುಮುಸು ಎನ್ನುತ್ತಿದ್ದಾಳೆ. ಯಾವೊನೋ ಒಬ್ಬ ಹೋಗಿ ಕೇಳಿದವನಿಗೆ ಸೊಪ್ಪು ಕೊಡಲೂ ಇಲ್ಲ, ಮಾತಾಡಲೂ ಇಲ್ಲ. ಕೆಕ್ಕರಿಸಿ ನೋಡಿದಳು. ಪಾರ್ಟಿ ಸರಿಯಾಗಿಲ್ಲ ಅಂತ ಆತನೂ ಹೊರಟುಹೋದ, ನಾವೂ ಮನೆಯ ದಾರಿ ಹಿಡಿದೆವು.

(ಓದುಗರ ಅವಗಾಹನೆಗೆ :

ಮೂವರು ವೀರ ವನಿತೆಯರು : ಟಿಕೆಟ್ಟಿಗಾಗಿ ಬಡಿದಾಡಿದ ಕಾಂಗ್ರೆಸ್ ಕಾರ್ಯಕರ್ತೆಯರು

ನಿಂಬೆಹಣ್ಣು ಹಿಡಿದಾಕೆ : ಪ್ರಮಿಳಾ ನೇಸರ್ಗಿ

ಖಾಲಿ ಕೈ ಮಾರಾಟಗಾರ್ತಿ : ಕುಮಾರಿ ಶೋಭಾ ಕರಂದ್ಲಾಜೆ

ಕೊನೆಯ ಮಹಿಳೆ : ಪರಿಮಳಾ ನಾಗಪ್ಪ)

ಓದಲು ಮರೆತಿದ್ದರೆ

ಪ್ರಮಿಳಾ ನೇಸರ್ಗಿಯೂ ಮಂತ್ರಿಸಿದ ನಿಂಬೆಹಣ್ಣೂ

English summary
The vegetable vendor. The rotten vegetable market is mirror to present politics. The women vendors are reflection of woman candidates. Humor in the market place by Yash.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more
X