• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಪ್ರಮೀಳಾ ನೇಸರ್ಗಿಯೂ ಮಂತ್ರಿಸಿದ ನಿಂಬೆಹಣ್ಣೂ

By ಪ್ರಸಾದ ನಾಯಿಕ
|

ರಾಜ್ಯದಲ್ಲಿ ವಿಧಾನಸಭೆ ಚುನಾವಣೆ ಹತ್ತಿರವಾಗುತ್ತಿದ್ದಂತೆ ಗಲ್ಲಿಗಲ್ಲಿಗಳಲ್ಲಿ ಜ್ಯೋತಿಷಿಗಳು ಹುಟ್ಟಿಕೊಳ್ಳುತ್ತಿದ್ದಾರೆ. ಚುನಾವಣೆ ಇಲ್ಲದಿದ್ದರೂ ಅವರು ಇದ್ದೇ ಇರುತ್ತಾರೆ. ಯಾವ ಪಕ್ಷ ಗೆಲ್ಲುತ್ತೆ? ಮುಮಂ ಯಾರು? ಮೊದಲು ಎಡಗಾಲಿಡಬೇಕೋ, ಬಲಗಾಲಿಡಬೇಕೋ ಅವರೇ ಹೇಳುತ್ತಾರೆ. ಅರಳುತ್ತಿರುವ ಜ್ಯೋತಿಷಿಗಳು ಮರುಳಾಗುತ್ತಿರುವ ರಾಜಕಾರಣಿಗಳ ಕುರಿತು ಒಂದು ವಿಡಂಬನೆ. (2008ರ ವಿಧಾನಸಭೆ ಚುನಾವಣೆ ಸಂದರ್ಭ ಬರೆದ ಲೇಖನ)

* ಪ್ರಸಾದ ನಾಯಿಕ

ಪಕ್ಕದ ಓಣಿಯಲ್ಲಿದ್ದ ಗೆಳೆಯ ಡಿಬ್ಬಿ ಹಳೆಯ ಕಾಲದ ಚಿತ್ರದಲ್ಲಿ ತಾಯ್ ನಾಗೇಶ್ ವೇಗವಾಗಿ ನಡೆದುಕೊಂಡು ಬರುವ ಧಾಟಿಯಲ್ಲಿ ಲುಂಗಿ ಮತ್ತು ಬನಿಯನ್‌ನಲ್ಲೇ ಬೆಳಗಿನ ಪೇಪರ್ ಹಿಡಿದುಕೊಂಡು ಹಾಜರಾದ. ಸುಬ್ಬು ಆಗ ತಾನೆ ಮಾರ್ನಿಂಗ್ ಕಾಫಿ ಹೀರಿ ವರಾಂಡಾದಲ್ಲಿ ಕಾಲುಚಾಚಿಕೊಂಡು ದಂ ಎಳೆಯುತ್ತಾ ದಿನಪತ್ರಿಕೆ ಓದುತ್ತ ಕುಳಿತಿದ್ದ. ಓದೋದುತ್ತಿದ್ದಂತೆ ಪಟಕ್ಕನೆ ಎದ್ದು ಫೋನಿನ ಹತ್ತಿರ ಬರುವುದಕ್ಕೂ ಬಾಗಿಲಲ್ಲಿ ಡಿಬ್ಬಿ ದರ್ಶನ ಕೊಡುವುದಕ್ಕೂ ಸರಿಹೋಯಿತು.

"ಸರಿಯಾದ ಟೈಮಿಗೇ ಬಂದೆ ಬಾ. ನಿನಗೇ ಫೋನ್ ಮಾಡೋಣಾಂತಿದ್ದೆ" ಅಂದ ಸುಬ್ಬ.

"ನಿನಗೊಂದು ಪ್ರಮುಖ ವಿಷಯ ಹೇಳಬೇಕಾಗೇತಿ ಬಾ. ಇಲ್ಲಿ ಬ್ಯಾಡ ಟೆರೇಶಿಗೆ ಹೋಗೋಣ" ಅಂತ ಸುಬ್ಬನ ಅನುಮತಿಗೂ ಕಾಯದೇ ದರದರನೇ ಎಳೆದುಕೊಂಡು ಟೆರೇಸಿಗೆ ಹೋಗೇಬಿಟ್ಟ ಡಿಬ್ಬಿ.

"ನಿಂಗೊತ್ತೇನೋ, ಹೊಸಕೆರೆಹಳ್ಳಿಯಿಂದ ರಿಂಗ್‌ರೋಡನ್ಯಾಗ ಪೆಶಿಟ್‌ಗಿಂತ ಮದ್ಲೇಕ ಅದ್ಯಾವ್ದೋ ಏರಿಯಾ ಐತಲ್ಲ? ಹೆಸರು ನೆನಪಿಗೇ ಬರಾಕತ್ತಿಲ್ಲ. ಹೋಗ್ಲಿ ಬಿಡು. ಅಲ್ಲಿ ಬೆಳ್ಳಂಬೆಳಿಗ್ಗೆ ಉದ್ದೋಉದ್ದಕ್ಕೆ ಜನ ಕ್ಯೂ ನಿಂತಿದ್ದರು. ನನಗೂ ಅಜಬ್ ಆಗಿ ಹೋಗಿ ವಿಚಾರಿಸಿದಾಗ, ಯಾರೋ ಒಬ್ಬ ಜ್ಯೋತಿಷಿಯಂತ, ಅವರ ಹತ್ರ ಅಪಾಯಿಂಟ್‌ಮೆಂಟ್ ತೊಗೊಳ್ಳಾಕ ಜನ ಸೇರಿದ್ರು" ಡಿಬ್ಬಿ ಧ್ವನಿಯಲ್ಲಿ ಏನೋ ಕೌತುಕ.

"ಏನಪ್ಪಾ ಅಂಥಾ ವಿಶೇಷ? ಅವರು ಮಂತ್ರಿಸಿ ನಿಂಬೆಹಣ್ಣೇನಾದರೂ ಕೊಡ್ತಾರೇನೋ" ಅಂತ ಕೌಡೆ ಹಾಕಿದ ಸುಬ್ಬ.

"ನಿಂಗೂ ಖಬರ ತಿಳೀತ? ನೀನೂ ಭಾರಿ ಹ ಮತ್ತ?"

"ಅದರ ವಿಷಯ ಹೇಳೋಣಾ ಅಂತಾನೇ ನಿನಗೆ ಫೋನ್ ಮಾಡುವುದರಲ್ಲಿದ್ದೆ ಅಷ್ಟರಲ್ಲಿ ನೀನೇ ಬಂದುಬಿಟ್ಟೆ."

"ನಮ್ ಕೈಯಾಗ ನಿಂಬಿ ಹಣ್ಣು ಇಟ್ಟು. ಏನೂ ಕೇಳ್ದ, ನಾವೇನು ಮಾಡಾಕತ್ತೀವಿ, ಎಲ್ಲಿ ತ್ರಾಸ ಐತಿ, ಅದರ ಪರಿಹಾರ ಹೆಂಗ, ಎಲ್ಲಿಂದ ನಮಗ ಛೋಲೋ ಆಗತೈತಿ, ಮುಂದೇನು ಮಾಡಬೇಕು ಎಲ್ಲಾ ಹೇಳತಾರಂತ. ಆಮೇಲೆ ನಿಂಬಿಹಣ್ಣು ಮಂತ್ರಿಶಿ ಕೊಡ್ತಾರಂತ. ಅದನ್ನ ಹೋದಲ್ಲೆಲ್ಲಾ ಕಿಶೆದಾಗ ಇಟ್ಗೊಂಡು ಹೋದ್ರ ಆಗೋ ಕೆಲಸ ಆಗತೈತಂತ. ಇನ್ಯರೋ ಒಬ್ರು ಜ್ಯೋತಿಷಿ ಈಗ ಅಶೆಂಬ್ಲಿ ಶೀಟಿಗೆ ನಿಂತಾರಲ್ಲ ಪ್ರಮಿಳಾ ನೇಸರ್ಗಿ ಅವ್ರಿಗೂ ನಿಂಬಿಹಣ್ಣು ಮಂತ್ರಿಶಿ ಕೊಟ್ಟಾರಂತ. ಎಲ್ಲಾ ಕಡೆ ಈ ಜ್ಯೋತಿಷಿಗಳದೇ ಮಾತು. ನಾವೂ ಒಂದು ಕೈ ನೋಡೇ ಬಿಡೋಣೇನು?"

"ಎಲಾ ಇವನ ಭಾರೀ ಮಾಹಿತಿ ಸಂಗ್ರಹಿಸಿಕೊಂಡು ಬಂದೀಯಲ್ಲಾ? ಪ್ರಮಿಳಾ ಅವರು ನಾಮಿನೇಷನ್ ಫೈಲ್ ಮಾಡುವಾಗ ಐದು ನಿಂಬೆಹಣ್ಣನ್ನು ಕೈಯಲ್ಲಿ ಹಿಡಿದುಕೊಂಡಿದ್ದನ್ನು ನಾನೂ ನೋಡಿದೆ. ಪೇಪರಲ್ಲೂ ಬಂದಿದೆಯಲ್ಲಾ. ಹೋಗ್ಲಿ ಒಂದು ನಿಂಬೆಹಣ್ಣು ಸಾಕಾಗಿತ್ತು ಐದು ಯಾಕೆ ಬೇಕಿತ್ತು? ಬಹುಶಃ ಒಂದು ತಮ್ಮ ಬೆನ್ನತ್ತಿರುವ ಶನಿಕಾಟ ತಪ್ಪಿಸಲು, ಎರಡನೇಯದು ಪೋಲಿಂಗ್ ಆಫೀಸರ್‌ನನ್ನು ಮರಳು ಮಾಡಲು, ಇನ್ನೊಂದು ಮತದಾರರು ತಮಗೇ ಎಲ್ಲಾ ಮತಗಳನ್ನು ಹಾಕಲೆಂದು, ನಾಲ್ಕನೇಯದು ಗೆದ್ದು ಬಂದಾದ ಮೇಲೆ ಮಿನಿಸ್ಟ್ರಾಗಲೆಂದು, ಕೊನೇದು ಇನ್ನ್ಯಾದಕ್ಕೋ" ಅಂತ ಸುಬ್ಬು ಗಹಗಹಿಸಿ ನಗಲು ಶುರು ಮಾಡಿದ.

"ಚ್ಯಾಷ್ಟಿ ಸಾಕೋ ಮಾರಾಯ. ನಗಚ್ಯಾಟಿಕಿ ಮಾಡೋ ಟೈಮಲ್ಲ ಇದು. ಕೇಳಿಲ್ಲೆ. ಇನ್ನೆರಡು ತಿಂಗಳದಾಗ ಡಿಪಾರ್ಟ್‌ಮೆಂಟಿನ್ಯಾಗ ಎಗ್ಝಾಂ ಐತಿ. ಹ್ವಾದ ವರ್ಷ ಇಬ್ರೂ ಡುಮ್ಕಿ ಹೊಡ್ದೇವಿ. ಈ ಸತಿ ಈ ಜ್ಯೋತಿಷಿ ನಿಂಬಿಹಣ್ಣು ಮಂತ್ರಿಶಿ ಕೊಟ್ರ ಪಾಸಾಗಬಹುದೇನೋ. ಯಾರಿಗ್ಗೊತ್ತು?"

"ಈ ಥರ ಎಷ್ಟು ಜ್ಯೋತಿಷಿಗಳು ಹುಟ್ಕೊಂಡಿದ್ದಾರೋ? ಒಬ್ರು ನಿಂಬೆ ಹಣ್ಣು ಇಟ್ಕೊಂಡ್ರೆ ಕೆಲಸ ಆಗುತ್ತೆ ಅಂತಾರೆ, ಇನ್ನೊಬ್ರು ಎದುರಾಳಿಯಾಗಿ ಮಹಿಳೆಯನ್ನು ನಿಲ್ಲಿಸಿದರೆ ಗೆಲ್ಲುತ್ತಿಯಾ ಅಂತಾರೆ, ಮಗದೊಬ್ಬರು ನಾಲ್ಕನೇ ದಿನ ರಾಹುಕಾಲ ಮುಗಿದ ಮೇಲೆ ಎಡಗೈಯಿಂದಲೇ ನಾಮಿನೇಷನ್ ಪೇಪರ್ ಕೊಟ್ಟರೆ ಗೆಲುವು ಖಚಿತ ಅಂತಾರೆ. ಯಡಿಯೂರಪ್ಪ ಜನ್ಮದಲ್ಲೇ ಮುಖ್ಯಮಂತ್ರಿ ಆಗೋದಿಲ್ಲ ಅಂತ ಜ್ಯೋತಿಷಿಯೊಬ್ಬರು ಖಡಾಖಂಡಿತವಾಗಿ ಹೇಳಿದ್ದರು. ಆದಿದ್ದೇನು? ಒಂದೇ ವಾರದಲ್ಲಿ ಯಡ್ಡಿ ಮುಖ್ಯಮಂತ್ರಿಯಾದರು. ಒಂದೇ ವಾರದಲ್ಲಿ ಅದನ್ನು ಕಳಕೊಂಡರು, ಅದು ಬೇರೆ ಮಾತು. ನೀನು ಹೇಳುತ್ತಿರುವ ಜ್ಯೋತಿಷಿ ನನಗೂ ಗೊತ್ತಿದ್ದಾರೆ. ಎಕ್ಸಾಂ ಪಾಸಾಗೋಹಾಗೆ ಮಾಡಿ ಅಂತ ನಾನೂ ಅವರನ್ನು ಕೇಳಿಕೊಂಡು ನಿಂಬೆಹಣ್ಣು ಮಂತ್ರಿಸಿ ಪಡೆದಿದ್ದೆ. ಜೋಬಲ್ಲಿಟ್ಕೊಂಡು ಪರೀಕ್ಷೆಯನ್ನೂ ಬರೆದೆ. ರಿಸಲ್ಟ್ ನಿನಗೇ ಗೊತ್ತಿದೆಯಲ್ಲ? ಈ ಸತಿ ಗ್ಯಾರಂಟಿ ಪಾಸಾಗ್ತೀರಿ ಅಂತ ಮತ್ತೆ ಕೊಟ್ರು. ಮತ್ತೆ ಅದೇ ಫಲಿತಾಂಶ. ಆಮೇಲೆ ಹೋಗೋದು ಬಿಟ್ಟುಬಿಟ್ಟೆ."

"ನೀ ಎಲ್ಲೋ ಅವರು ಮಂತ್ರಿಶಿ ಕೊಟ್ಟಮ್ಯಾಲ ನಿಂಬಿಹಣ್ಣು ನೆಲ ಮುಟ್ಟಿಸಿದ್ದಿ ಅಂತ ಕಾಣತೈತಿ. ಮಂತ್ರಿಶಿದ ಮ್ಯಾಲ ನೆಲ ಮುಟ್ಟಿಸಿದ್ರ ಅದರ ಪ್ರಭಾವ ಕಮ್ ಆಗತೈತಂತ. ಛಂದಾಗಿ ಇಟ್ಗೋಬೇಕಪಾ" ಅಂತ ಉಪದೇಶ ಮಾಡಿದ.

"ಏನ್ ಛಂದಾಗಿ ಇಟ್ಕೋತಿ ನಿನ್ ತಲೆ. ನಿಯತ್ತಾಗಿ ಕೂತ್ಗೊಂಡು ಛಂದಾಗಿ ಓದಿದ್ರೆ ಒಂದೇ ಶಾಟಿಗೆ ಪಾಸಾಗಬಹುದು. ಮಂತ್ರಕ್ಕೆ ಮಾವಿನಕಾಯಿ ಉದುರೋದಿಲ್ಲ ಅನ್ನೋದು ನಿಜವಾದರೂ, ಅವರವರ ನಂಬಿಕೆ ಅವರವರಿಗೆ. ಹಾ ಈಗ ನೆನಪಾಯಿತು ನೋಡು. ಕಡೇ ನಿಂಬೆಹಣ್ಣು ಯಾಕಪ್ಪಾ ಅಂದ್ರೆ, ಅದನ್ನ ಶರಬತ್ ಮಾಡ್ಕೊಂಡು ಕುಡೀಬೇಕು. ನಡಿ ಕೆಳಗೆ ಹೋಗಿ ಲೈಮ್ ಜ್ಯೂಸ್ ಹಾಕೋಣ ಬಾ. ಎಕ್ಸಾಂ ಪಾಸಾಗದಿದ್ದರೆ ಹೋಗ್ಲಿ ಅತ್ಲಾಗೆ ತಲೆ ತಣ್ಣಗಾದರೂ ಇರುತ್ತೆ" ಅಂತ ಮತ್ತೆ ನಗಲು ಶುರು ಮಾಡಿದ ಸುಬ್ಬು.

"ಬರೋಬ್ಬರಿ ಹೇಳಿದಿ ನೋಡು. ಅಲ್ಲ. ವಾಜಮೈತಿ ಬಿಡು ನಿನ್ ಮಾತು. ನಾವೂ ಸ್ವಲ್ಪ ಮುಕಳಿ ಊರಿ ಓದಬೇಕು. ಆದ್ರೇನ್ ಮಾಡ್ತಿ, ಅವನೌನ ಎಷ್ಟು ಓದಿದ್ರೂ ತಲ್ಯಾಗನ ಹೋಗೋದಿಲ್ಲ. ಜರ ಕಡತಾ, ಪ್ರಮಿಳಾ ಗೆದ್ದುಬಿಟ್ರಪ್ಪಾ. ಆ ಜ್ಯೋತಿಷಿ ನಶೀಬನ ಖುಲಾಶಿಬಿಡ್ತದಲ್ಲಾ. ಸೋತ್ರೂ ಅವರ ಗಂಟೇನೂ ಹೋಗಂಗಿಲ್ಲ. ನಮ್ ನಶೀಬ ಹೆಂಗೈತೋ ಯಾರಿಗ್ಗೊತ್ತು? ಆದ್ರೂ ಒಂದ್ಸತಿ ಟ್ರೈ ಮಾಡಾಕ ಏನು ಗಂಟು ಹೋಗತೈತಿ?"

ನೀ ಮಾಡೋ ಮಾರಾಯಾ. ಇನ್ನೊಂದು ವಿಷಯ ಹೇಳ್ತೀನಿ ಕೇಳು. ನಾನು ಮೊದಲನೇ ಬಾರಿ ಸುಬ್ಬಿಯನ್ನು ನೋಡಲು ಹೋದಾಗ ಜೋಬಲ್ಲಿ ಒಳ್ಳೇ ಹುಡ್ಗಿ ಸಿಗಲೆಂದು ಇದೇ ತರಹ ಮಂತ್ರಿಸಿದ ನಿಂಬೆಹಣ್ಣು ಇಟ್ಕೊಂಡು ಹೋಗಿದ್ದೆ. ನೋಡು ಈಗ ಜೀವನ ಪರ್ಯಂತ ಅನುಭವಿಸುವಂತಾಗಿದೆ!

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Many politicians have been seeking advice from astrologers on the outcome of assembly election in Karnataka. A satire by Prasad Naik.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more