ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಗಂಡುಸಂತಾನದ ಹಗಲುಗನಸು

By ಮಾಲತಿ ಎಸ್, ಬೆಂಗಳೂರು
|
Google Oneindia Kannada News

Dream boyದಿನಪತ್ರಿಕೆಯೊಂದರಲ್ಲಿನ ಮುಖಪುಟದಲ್ಲಿನ ಸುದ್ದಿ : "ಕ್ರಿಕೆಟ್ ಕಾಮೆಂಟರಿ ಮಾಸ್ಟರ್ ರವಿ ಶಾಸ್ತ್ರಿಗೆ 18 ವರ್ಷದ ನಂತರ ಅಪ್ಪನ (ತಂದೆಯಾಗುವ) ಭಾಗ್ಯ" ಸುದ್ದಿ ಓದಿ ಬಹುಶಃ ರವಿಶಾಸ್ತ್ರಿಗಿಂತ ನಾನೆ ಜಾಸ್ತಿ ಎಗ್ಸೈಟ್ ಆದೆ. ಹೇಗಂತೀರಾ?

ನನಗೂ ಒಂದು ಮಗು ಬೇಕನ್ನಿಸ್ತು. ಪ್ರಾಯ 38 ಆದರೇನಾಯ್ತು. ಹೆಲ್ತು, ವೆಲ್ತು , ಟೈಮೂ ಇದೆ. ಮಗುವಿಗೆ 20 ವರ್ಷ ವಯಸ್ಸಾದಾಗ ನನಗೆ 58 ಆಗಿರತ್ತೆ. ಅಡ್ಡಿಲ್ಲ ಅನ್ನಿಸ್ತು. ನನ್ನ ಮುತ್ತಜ್ಜಿ ಅಜ್ಜಿ ಇಬ್ಬರೂ 90 ಪ್ಲಸ್ ವಯಸ್ಸಿನ ತನಕ ಬದುಕಿದ್ರು. ಹಾಗೆ ನಾನು ಲಾಂಗ್ ಲೈಫ್ ಉಳ್ಳವಳು ಅಂತ ಧೃಡವಾದ ನಂಬಿಕೆ. ಮೊದಲೆರಡು ಮಕ್ಕಳು ಟ್ರಾಯಲ್ ಆಂಡ್ ಎರರ್ ತರಹ ಗಡಿಬಿಡಿಯಲ್ಲಿ ಹುಟ್ಟಿದ್ರು. ಈಗಲಾದ್ರೂ ಎಂಜಾಯ್ ಮಾಡುವ ಅಂದಾಜಿತ್ತು ನನಗೆ.

ಸರಿ. ಅಲ್ಲೇ ಪಕ್ಕದಲ್ಲಿ ಪತ್ರಿಕೆ ಓದ್ತಾ ಇರುವ ಇವರಿಗೆ ಹೇಳ್ದೆ. "ರೀ, ನಾವು ಒಂದು ಮಗು ಮಾಡಿಕೊಳ್ಳೋಣ. ರವಿ ಶಾಸ್ತ್ರೀಗೆ ನಾಗ ದೇವರ ಪೂಜೆ ಮಾಡಿ ಮೊನ್ನೆ ಒಂದು ಹೆಣ್ಣು ಮಗು ಹುಟ್ತಂತೆ". ಪತ್ರಿಕೆ ಹಿಡ್ಕೊಂಡು ಕೂತ್ರೆ ಇವ್ರನ್ನೂ, ಕಲ್ಲನ್ನೂ ಮಾತಾಡ್ಸೋದು ಅಂದ್ರೆ ಒಂದೇ. ಬೇರೆ ದಿನ ಆದ್ರೆ ಏನೇ ಅದು ನಾನು ಪೇಪರ್ ಓದುವಾಗ ನಿನ್ನ ಪಿರಿಪಿರಿ ಅಂತ ಸಿಟ್ಟಾಗ್ತಾರೆ. ಇವತ್ತು ಮಾತ್ರ ಕೂಡಲೇ ಹುಬ್ಬು ಮೇಲೇರಿದವು. ಕಾಮನಬಿಲ್ಲೋ, noahs arc ನಂತಹ ಯಾವುದೋ ಎಕ್ಸ್‌ಪ್ರೆಶನ್ ಹಾದು ಹೋಯ್ತು. ನಾನೋ ಯಾವಾಗಲೂ ಪೊಸಿಟಿವ್ ಥಿಂಕರ್. ಕೂಡಲೆ ಹುಬ್ಬು ಹಾರಿಸುತಿಹುದು ಮಿಂಚಿನಲಿ ಮೋಡ, ಶೃಂಗಾರ ಚೇಷ್ಟೆ ಇದು ಯಾರ ಕೂಡ ಅಂತ ಅನ್ನಿಸಿ ಸೂಕ್ಷ್ಮ ವಾಗಿ ನೋಡಿದ್ರೆ ಇವರ ಮುಖದಲ್ಲೆಲ್ಲೂ ಶೃಂಗಾರ ರಸ ಕಾಣಿಸಲಿಲ್ಲ. ಅಲ್ಲೇ ಇದ್ದ ಮಗಳಿಗೆ ಅಮ್ಮನಿಗೆ ಮೆನೋಪಾಸ್ ಬಂದ್ಬಿಟ್ತು ಕಣೆ ಅಂದ್ರು. ಅದ್ಸರಿ ನಾವು ಯಾವ ದೇವರ ಪೂಜೆ ಮಾಡುವ ಅಂದ್ರು. ನಾನೂ ನಿಧಾನವಾಗಿ ಲಿಂಗ ದೇವರ ಪೂಜೆ ಅಂದೆ.

ಪಿ.ಯು.ಸಿ. ಪರೀಕ್ಷೆ ಮುಗ್ಸಿ ಈಗ ಸಿ.ಇ.ಟಿ.ಗೆ ತೈಯಾರಿ ನಡೆಸ್ತಾ, ಇವತ್ತು ಬೋರ್ ಆಗ್ತಿದೆ ಅಂದು ಶೋ ಕೇಸಿನ ಗಾಜನ್ನು ತಿಕ್ಕಿ ತಿಕ್ಕಿ ಒರೆಸ್ತಾ ಇರುವ ಅಲ್ಲೇ ಇದ್ದ ನನ್ನ ಜೇಷ್ಠ ಪುತ್ರಿ ಲಾಂಗ್ ಲಿಂಗ ಅಂದ್ಬಿಟ್ಲು. ಪೇಪರ್ನಲ್ಲಿ ಮಗ್ನರಾಗಿದ್ದಾರೆ ಇವರು ಅಂತ ನಾನು ಅಂದ್ಕೊಂಡಿದ್ರೆ.. ಇವರು ಗುರ್ರ್ ಅಂತ ಎನೇ ಇದು Long Linga ಅಂತ ಬಡಬಡಿಸ್ತಿದ್ದಾಳೆ ಅಂದ್ಬುಟ್ರು. ಇನ್ನು ಸಿಂಗಲ್ ಮೀನಿಂಗ್ ಡಬಲ್ ಮೀನಿಂಗ್ ಅಂತ ಪರಿಸ್ಥಿತಿ ವಿಕೋಪಕ್ಕೆ ಹೋಗುವ ಮುಂಚೆ ನಾನು ಬಿಳಿ ಪತಾಕೆ (ಉರ್ಫ್ ಪಾತ್ರೆ ಒರೆಸುವ ಬಿಳಿ ಬಟ್ಟೆ) ಹಿಡ್ಕೊಂಡು ಅದು ಹಾಗಲ್ಲ "ಲಾಂಗು ಎಸ್ ಇನ್ ಲಾಂಗು ಮಚ್ಚು ಎಟ್ಸೆಟ್ರಾ ಎಟ್ಸೆಟ್ರಾ ಅನ್ದ್ ಲಿಂಗ" ಸಿನಿಮಾ ರೌಡಿ ಹೆಸ್ರು ಅಂತ ಸಮಾಜಾಯಿಸಿದೆ. ಇವರು ಮಗ್ನರಾಗಿ ಓದುವುದು ಒಂದು ಪೋಸ್ ಅಂತ ಇವತ್ತು ಗೊತ್ತಾಯ್ತು.

ಮತ್ತೇ ಅವಳಿಗೆ ಕೇಳ್ದೆ. ನೀನೇನಂತಿಯಾ? ಮಗುವಿನ ಬಗ್ಗೆ? ಅದಕ್ಕೆ ಅವಳ ರೆಸ್‌ಪಾನ್ಸ್ : "ಹೋ ಹೇಗೂ ಈಗ ರಜೆ. ನನ್ಗೂ ಆಡ್ಲಿಕ್ಕೆ ಒಂದು ಮಗು ಸಿಕ್ಕ ಹಾಗಾಯ್ತು". ಒಂದು ಕ್ಷಣ ಅವಳ ಮುಖವನ್ನೇ ಅವಲೋಕಿಸಿದೆ. ಇದೇನಿದು ಪಿ.ಯು.ಸಿ ಯಲ್ಲಿ ವಿಜ್ಞಾನವನ್ನು ಆಯ್ದು ಕೊಂಡಿರುವ ಇವಳಿಗೆ ಮಗು ಹುಟ್ಟಲು 9 ತಿಂಗಳು ಬೇಕಾಗ್ತದೆ ಅಂತ ಗೊತ್ತಿಲ್ವಾ? ಮಗು ಹುಟ್ಟುವುದು ಫ್ಯಾಕ್ಟರಿಯಲ್ಲಿ ಅಂತ ಏನಾದ್ರೂ ತಿಳ್ದುಕೊಂಡಿದ್ದಾಳಾ ಹೇಗೆ?

ಈಗ ಅಮ್ಮನಿಗೆ ಫೋನಾಯಿಸಿದೆ. ಅಮ್ಮನ ಉವಾಚ : ಆಗ್ಲೇ ಬಡ್ಕೊಂಡೆ. ಎರಡನೇಯವಳು ಹುಟ್ಟಿದಮೇಲೆ ಒಂದು ಗಂಡು ಮಗು ಆಗ್ಲಿ ಅಂತ. ಆವಾಗ ಕೇಳ್ಲಿಲ್ಲ. ಈಗ ಹುಚ್ಚು ಗಿಚ್ಚು ಏನಾದರೂ ಹಿಡ್ಕೊಂಡುಬಿಡ್ತಾ ಹೇಗೆ? ನಿನ್ನ ಬಾಣಂತನ ಮಾಡಿಸ್ಲು ನನ್ನ ಕೈಲ್ಲಂತ್ಲೂ ಆಗಲ್ಲ.

ಈಗ ತಮ್ಮನ ಸೆಲ್ ಫೋನ್ಗೆ ಕರೆ ಮಾಡ್ದೆ. ಅವನು, ಬೇಗ ಹೇಳೆ ಮಾರಾಯ್ತಿ. ನನ್ನ ಫ್ಲೈಟ್ ಅನೌಂನ್ಸ್ ಮಾಡಿದಾರೆ. ಸೆಲ್ ಫೋನ್ ಸ್ವಿಚ್ ಆಫ್ ಮಾಡ್ಬೇಕು ಅಂದ. ಅವನು ಕಛೇರಿ ಕೆಲಸದ ಮೇಲೆ ಡೆನ್‌ಮಾರ್ಕ್‌ಗೆ ಹೊರಟಿದ್ದ. ಅರ್ಜೆಂಟ್ ವಿಷಯ ಏನಿಲ್ಲ. ಬಂದ ಮೇಲೆ ಫೋನ್ ಮಾಡ್ತೀನಿ. ಹ್ಯಾಪಿ ಜರ್ನಿ ಅಂತ ಹೇಳಿ ಪೋನ್ ಇಟ್ಬಿಟ್ಟೆ.

ಇನ್ನು ನನ್ನ ಮುದ್ದಿನ ತಮ್ಮನ ಸರದಿ. ಅವನಿಗೆ ಫೋನ್ ಮಾಡಿ ಹೀಗೆ ಹೀಗೆ ಕಣೋ ಅಂದೆ. ಅವನು ಭಾವಾಜಿಗೆ ಫೋನ್ ಕೊಡು ಅಂದ. ಏನ್ ಹೇಳ್‌ಬಹುದು ಅಂತ ಕ್ಯುರಿಯಾಸಿಟಿಯಿಂದ ಸ್ಪೀಕರ್ ಫೋನ್ ಆನ್ ಮಾಡ್ದೆ. ಭಾವಾಜಿ ಕಾಂಗ್ರ್ಯಾಟ್ಸ್. ಜೋರ್ ಲಗಾಕೆ ಐಸಾ ಅಂದ. ಅದಕ್ಕೆ ಇವರು "ಅವಳಿಗೆ ಸರಿಯಿಲ್ಲ. ನಿಂಗೂ ಬೇರೆ ಕೆಲಸ ಇಲ್ಲ ಅಂದ್ರು, ಅದೂ ಈ ವಯಸ್ಸಲ್ಲಿ" ಅಂತ ಕಾಮೆಂಟ್ ಹೊಡೆದ್ರು. ಅದಕ್ಕೆ ಅವನು ಹಿಂದಿಯಲ್ಲಿ ಡಯಲಾಗ್ ಬಾರ್ಸ್ದಾ. ಬಂದರ್ ಕಿತ್ನಾ ಭಿ ಬುಢಾ ಕ್ಯೋನ ಹೋಜಾಯ್, ಗುಲಾಟ್ ಮಾರ್ನಾ ನಹಿ ಛೋಡ್ತಾ. (ಮಂಗ ಎಷ್ಟೇ ಮುದಿಯಾದ್ರು ತಿಪ್ಪರಲಾಗವನ್ನು ಹಾಕುವುದು ಬಿಡುವುದಿಲ್ಲ) ಅಥವಾ ಕನ್ನಡದಲ್ಲಿ ಹೀಗೂ ಹೇಳಬಹುದು, ಹುಣಸೆ ಮರ ಮುಪ್ಪಾದರೂ ಹುಳಿ ಮುಪ್ಪಾಗಲ್ಲ. ಇವರ ಮುಖದಲ್ಲಿ ಎನೋ ಸಾಧಿಸಿದ ತೃಪ್ತಿ. ಬಹುಶಃ ಅಲೆಕ್ಸಾಂಡರ್ ಪುರುವನ್ನು ಸೆರೆ ಹಿಡ್ದಾಗಲೂ ಇಷ್ಟು ಸಂತಸ ಪಟ್ಟಿರಲಿಕ್ಕಿಲ್ಲ ಬಿಡಿ.

ಅಷ್ಟರಲ್ಲಿ ನನ್ನ ಕಿರಿ ಮಗಳು ಎಂಟರ್ ಆದ್ಲು. ನಿಂಗೆ ಆಡಲಿಕ್ಕೆ ಒಂದು ಮಗು ಬೇಕಾ ಅಂದೆ. ಅವಳು ಹಿಂದುಸ್ತಾನದಲ್ಲಿ ಹುಟ್ಟಿದ್ರೂ ಮಾತು ಮಾತ್ರ ಆಂಗ್ಲ ಅಥವಾ ಫ್ರೆಂಚ್ ದೇಶದಿಂದ ಬಂದವರ ಹಾಗೆ. ಮಾಮನ್, ಆರ್ ಯು ಡಾರ್ನ್ ಔಟ್ ಅಫ್ ಯುವರ್ ಮೈಂಡ್. ಯಾಂಡ್ ಫಲಿಸ್ ಐ ಹೇವ್ ಟು ಸ್ಟಡಿ ಫಾರ್ ಮೈ ಸಾಯನ್ಸ್ ಎಕ್ಸಾಂ. ಸೊ ಡೊಂಟ್ ಡಿಸ್ಟರ್ಬ್ ಮಿ. (maman, are you darn out of your mind? And puh-lease I have to study for my science exam. So don"t disturb me) ಅವಳು ಹತ್ತನೆ ತರಗತಿ. ಇವತ್ತು ಅವಳಿಗೆ ವಿಜ್ಞಾನದ ಪೇಪರ್ ಇತ್ತು.

ನಾನು ಮಗುವಿನ ಗುಂಗಿನಲ್ಲಿರಬೇಕಾದ್ರೆ ಪುನಃ ಹಿರಿ ಮಗಳು ಬಂದು "ಯಾಕೆ ಅಷ್ಟು ಟೆನ್‌ಶನ್, ಒಂದು ಮಗುವನ್ನು ಎಡೋಪ್ಟ್ ಮಾಡುವಾ" ಎಂಬ ಪುಕ್ಕಟೆ ಸಲಹೆ ಕೊಟ್ಟಳು. ಸೋ ಮೈ ಡಿಯರ್ ಫ್ರೆಂಡ್ಸ್ (ರವಿ ಬೆಳಗೆರೆ ಇಸ್ಟೈಲ್) ದ ಐಡಿಯಾ ವಾಸ್ ಎಬೋರ್ಟಡ್ ಬಿಫೋರ್ ಇಟ್ ವಾಸ್ ಕನ್ಸೀವ್ಡ್. (The idea was aborted before it was conceived).

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X