ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನಮ್ಮ್ ಮುದ್ದುನ್ ಎಸ್ರು ಮಣ್ಣ್ ಮಾಡವ್ರಂತೆ ಕಣ್ಲ

By Staff
|
Google Oneindia Kannada News

na. bhaskarಒಂದಪಾ ಫಾರಿನ್ಗೆ ಹೋಗ್ಬೇಕು ಕಣ್ಲಾ, ಅದೆಂಗಿರ್ ತೈತೆ ನೋಡ್ಬೇಕು ಕಣ್ಲಾ, ನಮ್ ಹುಡುಗ್ರು ಅಲ್ಲಿ ಎಂಗದರೋ, ಏನೋ.. ಎಂಬೋದು ಬಸ್ಯನ, ರುದ್ರನ, ಚಂದ್ರನ, ಕರಿಯನ ಆಸೆ. ಹೋಗ್ ಬರೋದ್ ಹೆಂಗಂತ ನಿಂಗೇನಾರ ಗೊತ್ತೇನಣ್ಣ ? ಅಂಗೆ ವಸಿ ಹೇಳ್ಬಾರ್ದಾ.

ನಾ ಭಾಸ್ಕರ, ಅಕ್ಲೆಂಡ್

"ಯಾರ್ದಪ ಪೋನು ಈಟೊತ್ನಗೆ?" ಬಚ್ಚಪ್ಪ ಅಂಗಳಕ್ಕೆ ಬಂದು ಜಗಲಿಯ ಮೇಲಿದ್ದ ಎಲೆಅಡಿಕೆಯ ತಟ್ಟೆಗೆ ಕೈಹಾಕುತ್ತಾ ಕೇಳಿದ. ದೂರದ ಸಂಬಂದಿ ರಾಮಣ್ಣನ ಮನೆಯ ಖಾರದೂಟದ ಆಸ್ಪೋಟದಿಂದ ಇನ್ನೂ ಹೊಗೆಯಾಡುತ್ತಿದ್ದ ಬಾಯಿಗೆ ಒಂದು ಚಿಟಿಕೆ ಸಕ್ಕರೆ ಹಾಕಿಕೊಂಡು ಪಕ್ಕದಲ್ಲಿ ಬಂದು ಕೂತ.

"ಅದೇ ನನ್ನ್ ಬಾಮೈದ ಮುದ್ದ ಅವ್ನಲ್ಲೊ, ಅವುಂದು" ರಾಮಣ್ಣ ದಿಂಬನ್ನು ತಟ್ಟಿ ಸರಿಮಾಡಿಕೊಂಡು ಒರಗುತ್ತ "ತಿಂಗ್ಳದ್ನೈದ್ ದಿವ್ಸುಕ್ ಒಂದ್ಸಲ ಪೋನ್ ಮಾಡ್ತಾನೇ ಇರ್ತನೆ" ಅಂದ.

"ಓ ಗೊತ್ತ್ ಬುಡು, ಅದೇ ಡೆಲ್ಲಿನಗೋ ಪಾರಿನ್ನಗೋ ಅವ್ನಲ್ಲ?" ಬಚ್ಚಪ್ಪ ವೀಳ್ಯದೆಲೆಯ ತೊಟ ಮುರಿದು ಸ್ವಲ್ಪ ಸುಣ್ಣ ಸವರಿ ದವಡೆಗೆ ತುರುಕಿದ.

"ಲೈ, ಸೊಪ್ಪಿನ್ ಸಂತೇಲ್ ಸೀಮೆ‌ಅಸದ್ ಯವಾರ ಕೇಳ್ದಂಗ್ ಕೇಳ್ತ್ಯ ನೀನು. ಡೆಲ್ಲಿನೂ ಪಾರಿನ್ನೂ ಒಂದೇ ಏನ್ಲ? ಯಾವನಾರ ನೀನ್ಕೇಳದ್ ನೋಡುದ್ರೆ ನಮ್ಮ್ ಮುದ್ದ ಇಲ್ಲೇ ನಿಮ್ಮ್ ಗುಳುವ್ನಳ್ಳಿ ತಾವ್ ಜಲ್ಲಿ ಕಂತ್ರಾಟು ಮಾಡುಸ್ತಾವ್ನೇನೋ ಅನ್ಕಂಬೇಕ್ ನೋಡು. ಡೆಲ್ಲಿ ಇರದು ನಮ್ಮ್ ದೇಸ್ದಗೆ, ಇವ್ನಿರೋ ಪಾರಿನ್ನು ಇಲ್ಲ್ಗ್ ಅತ್ಸಾವ್ರ ಮೈಲಿ ಆಯ್ತದೆ, ಗೊತ್ತೇನ್ಲೇ" ಅನ್ನುತ್ತ ಭಾಮೈದುನನಿಂದ ಪಡೆದಿದ್ದ ದೂರದ ಹೊಸ ಮಾಹಿತಿಯನ್ನು ಬಚ್ಚಪ್ಪನ ಮೇಲೆ ಎಸಗಿದ ರಾಮಣ್ಣ.

"ಅಂಗಾರೆ ಶಾನೆ ದೂರ ಅನ್ನು"

"ಎಲ್ಡು ದಿನ ಓಗ್ಬೇಕ್ ಕಣ್ಲೇ, ಪಯಾಣ"

"ಹಡುಗ್ನಗೆ?" ಎಂದ ಬಚ್ಚಪ್ಪ, ತನ್ನೂರಿಂದ ನೂರು ಮೈಲಿ ಆಚೆಯೂ ನೋಡಿರದ ಸಹಜ ಮುಗ್ಧತೆಯಿಂದ, ಹತ್ತುಸಾವಿರ ಮೈಲಿಯ ಅಂದಾಜು ಸಿಗದೆ ತಡಕಾಡುತ್ತ.

"ಇಲ್ಲ ಎತ್ತಿನ್‍ಗಾಡಿಯಗೆ ! ಲೈ, ಹಡುಗ್ನಗೋಗಕ್ಕೋದ್ರೆ ಮುದುಕ್ನಾಗೋಗಿರ್ತ್ಯ ಓಗೋವತ್ಗೆ. ಇಮಾನ್ದಗೆ ಕಣ್ಲ"

"ಓಲಿ ಏನಂತಪ್ಪ ಸೆಮಾಸಾರ, ಯಾವಗ್ ಬತ್ತನಂತೆ? ಬರೋ ತಿಂಗ್ಳು ನಿಮ್ಮೂರ್ ಜಾತ್ರೆ ಟೇಮ್ಗೆ ಬಂದೋಗು ಅಂದಿದ್ರೆ?"

"ಊಂ, ತಿಗೀಟು ಕಳುಸ್ತ್ಯಾ? ಮುವ್ವರಿಂದ ಎಲ್ಡ್ ಲಕ್ಸಾಯ್ತದಂತೆ" ಅನ್ನುತ್ತಾ ಬಚ್ಚಪ್ಪನ ಕಡೆ ಗೇಲಿಯ ಹುಬ್ಬು ಕುಣಿಸಿದ ರಾಮಣ್ಣ.

"ವಾ, ಒಂದ್ಸಲಿ ಬಂದೋದ್ರೆ ಒಂದೆಕ್ರೆ ತ್ವಾಟ ಗದ್ದೆ ಮಾರ್ದಂಗೆ ಅನ್ನು ಲೆಕ್ಕಾಸ್ಯಾರ. ಯೇನ್ ಅವ್ನಿರೋ ಊರೆಸ್ರು?"

"ಅದ್ರೆಸ್ರೇ ಬಾಯಿ ತಿರ್ಗಲ್ಲ ಕಣ, ಅದೆಂತದೋ ನೀಜಿಲೆಂಡಂತೆ. ಲಂಡನ್ನು ಅಮೇರಿಕ ಇದ್ದಂಗೆ ಅದೂನೂ ಒಂತರಾ ಮುಂದ್ವರ್ದಿರೋ ದೇಸನಂತೆ"

"ಓ? ಏನಕ್ ಎಸ್ರುವಾಸಿನಂತೆ?" ಎಲೆಅಡಿಕೆಯ ರಸ ಸೋರದಂತೆ ತುಟಿ ಮುಂದು ಮಾಡಿಟ್ಟುಕೊಂಡು ಕೇಳಿದ ಬಚ್ಚಪ್ಪ.

"ಕುರಿಗಳ್ಗೆ"

"ಯೇ..ನೀನೂ ಸರಿ"

"ಊಂ ಕಣ್ಲ, ಆ ದೇಸ್ದೋರ್ ಆದಾಯ ಏನಿದ್ರೂ ಕುರಿ ಸಾಕದು, ಅಸೀನ್ ಆಲು ಬೆಣ್ಣೆ ಯಾಪಾರ, ಇಂತದ್ರಗೇನಂತೆ"

"ಸರೋಯ್ತು ಬುಡು. ಆ ಮೇನತ್ತು ನೋಡಕ್ ಅತ್ಸಾವ್ರ ಮೈಲಿ ಓಬ್ಯಾಕಿತ್ತ ನಮ್ಮ್ ಮುದ್ದ, ನಮ್ಮೂರಗಿರುಲ್ವೆ?" ಅನ್ನುತ್ತ ಬಚ್ಚಪ್ಪ ಬಾಯಲ್ಲಿದ್ದ ಕೆಂಪು ರಸವನ್ನು ದೂರಕ್ಕೆ ಉಗಿದು "ಓಲಿ ಎಲ್ಲಾರು ಸಂದಾಕವ್ರಂತ?" ಎಂದು ಕೇಳಿದ.

"ಅದ್ಯಾವೂರ್ ಚಂದ್ವೋ ತಗಿ" ರಾಮಣ್ಣ ಸ್ವಲ್ಪ ಅಸಮಾಧಾನವಾಗಿಯೇ ಅಂದ, "ಪೋನ್ ಮಾಡ್ದಗೆಲ್ಲ ಎನ್ಮಾಡೀಯೋ ಮುದ್ದಾ ಅಂದ್ರೆ ಇಲ್ಲಾ ಪಾತ್ರೆ ತೊಳಿತಿವ್ನಿ ಅಂತನೆ, ಇಲ್ಲಾ ಕಸ ಗುಡುಸ್ತಿವ್ನಿ ಅಂತನೆ, ಇಲ್ಲಾ ಅನ್ನಕ್ಕಿಡ್ತಿವ್ನಿ ಅಂತನೆ"

"ಅಯ್, ಯಾಕ್ ಕೆಲ್ಸ್ದೋರ್ನ್ ಮಡಿಕಂಡಿಲ್ವೆ?"

"ಕೆಲ್ಸ್ದೋರ್ ಮಡಿಕಂಡ್ರೆ ಇವುನ್ಗೆ ಬರೋ ಸಂಬ್ಳ ಪೂರ್ತ ತಗ್ದು ಅವ್ರಿಗ್ ಕೊಡ್ಬೇಕಾಯ್ತದಂತೆ"

ಬಚ್ಚಪ್ಪ ಬೆಚ್ಚಿಬಿದ್ದ. "ಅಯ್ಯೊವ್ರ್‌ಮನ್ಕಾಯೋಗ ! ಇಂಜ್ನೇರ್ಗುಳ್ಗೂ ಮನೆ ಕೆಲ್ಸ್ದೋರ್ಗೂ ಒಂದೇ ಸಂಬ್ಳವೆ?"

"ಒಂತರಾ ಅಂಗೆ ಅನ್ಕೋ"

"ಓಲಿ ಆ ಕೆಲ್ಸ್ಗುಳ್ನ ಅಂಸವ್ವ ಮಾಡಕುಲ್ವೆ?"

"ಯಾ?"

"ಅದೇ ನಮ್ಮ್ ಮುದ್ದನ್ ಎಂಡ್ರೂ, ಅಂಸವ್ವಾಂತಲ್ವೆ ಅವ್ಳೆಸ್ರು?"

"ಓ...ಥೂ ಕುಲ್ಗೆಡ್ಸಿಕ್ತ್ಯ ಕಣ ನೀನು. ಅವ್ಳ್ ಉಟ್ಟೆಸ್ರು ಲಕ್ಸ್ಮಿ ಕಣ್ಲ. ಪಾಪ ಅವ್ರಪ್ಪ ಅಮ್ಮ ಕಷ್ಟ್ಪಟ್ಟು ಕರಿಯಕ್ ಸಿಟಿ ಎಸ್ರು ಇರ್ಲೀಂತ 'ಅಂಸ' ಅಂತ ಮಡ್ಗಿದ್ರೆ ಅಂಸವ್ವ ಅಂದು ಅದ್ನ ಒಂದೇ ಏಟ್ಗೆ ನಿಮ್ಮ್ ಗುಳುವ್ನಳ್ಳಿ ಎಸ್ರು ಮಾಡಾಕ್ಬುಟ್ಟೆ, ಆ ಪಾರಿನ್ನೋರು ನಮ್ಮ್ ಮುದ್ದನ್ ಎಸುರ್‍ನ 'ಮಡ್' ಮಾಡ್ದಂಗೆ"

"ಯಾಕ್ ಆ ಪಾರಿನ್ನೋರ್ಗೆ ಮುದ್ದುಕಿಸ್ಣಾ ಅನ್ನಕ್ ಬಾಯಿ ತಿರ್ಗಕುಲ್ವೆ? ಮಡ್ ಅಂದ್ರೇನ?" ಎಂದು ಕೇಳಿದ ಬಚ್ಚಪ್ಪ.

"ಅವ್ರ್ ಬಾಸೇಲಿ ಮಡ್ ಅಂದ್ರೆ ಮಣ್ಣಂತೆ. ಅಂಸುನ್ ಎಸ್ರುನೂವೆ ಅವ್ರ್ ಆಪೀಸಲ್ಲಿ 'ಯಾಮ್ ಸಾ' ಅಂತ ಕರಿತರಂತೆ. ಅಂಗಂದ್ರೇನ್ಲ ಅಂತ ಮುದ್ದುನ್ ಕೇಳುದ್ರೆ ಅಂದಿ ಕುಯ್ಯೋ ಗರ್ಗಸ ಅಂದ್ನಪ್ಪ"

"ಎಲಾ ಇವ್ನ, ಮುದ್ದನ್ ಮಣ್ಣ್ ಮಾಡಿ ಅಂಸವ್ವುನ್ ಮಾಂಸ ಮಾಡಾಕವ್ರೆ ಅನ್ನು. ಅದ್ಸರೀ, ಇಬ್ರೂವೆ ಆಪೀಸ್ಗೊಂಟೋದ್ರೆ ಮನೆ ಕೆಲ್ಸ?"

"ಎಲ್ಲಾದ್ಕೂ ಮಿಸೀನ್ಗುಳವಂತೆ ಕಣ. ಬಟ್ಟೆ ಒಗ್ಯಕ್ಕೊಂದ್ ಮಿಸೀನು, ಕಸ ಗುಡ್ಸಕ್ಕೊಂದ್ ಮಿಸೀನು, ತಟ್ಟೆ ತೊಳ್ಯಕ್ಕೊಂದ್ ಮಿಸೀನು. ಆ ದೇಸ್ದಲ್ಲಿ ಅಸೀನಾಲು ಕರಿಯದೂ ಮಿಸೀನೇನಂತೆ"

"ನೀನೇಳದ್ ನೋಡುದ್ರೆ ಇತ್ಲುಕಡೆ ಕೆಲ್ಸುಕ್ಕು ಒಂದ್ ಇರ್ಬೌದೇನಪ್ಪ. ಅಂದಂಗೆ ಅದೇನೋ ಮಾದಿಗ್ರ ಮೆರ್ವಣಿಗೆ ಇಸ್ಯ ಮಾತಾಡ್ತಿದ್ದೆ ಪೋನಲ್ಲಿ?"

"ಥೂ ಮಾದಿಗ್ರಿಸ್ಯ ಅಲ್ಲ್ಕಣ್ಲೆ - ನೀನೀ ಜಾತಿ ಎಸ್ರಾಡದು ಬುಟ್ಟಾಕು, ಆ ಕಾಲ ಓಯ್ತು" ಎಂದು ಬಚ್ಚಪ್ಪನನ್ನು ಗದರಿಸಿದ ರಾಮಣ್ಣ, "ಆ ದೇಸುದ್ ಇನ್ನೊಂದ್ ಇಸೇಸ ಏನ್ ಗೊತ್ತೇನ್ಲೇ? ಅಲ್ಲಿ ಎಂಗುಸ್ರುನ್ ಎಂಗುಸ್ರೇ ಗಂಡುಸ್ರುನ್ ಗಂಡುಸ್ರೇ ಕೂಡ್ಕ್ಯಂಡ್ ಮದ್ವ್ಯಾಗ್ಬೌದಂತೆ, ಸರ್ಕಾರ್ದೋರ್ ರಿಜಿಷ್ಟ್ರೂ ಮಾಡ್ತಾರಂತೆ. ಅಂತೋರೊಂದೀಟು ಜನ ವರ್ಸುಕ್ಕೊಂದ್ಸಲ ಪ್ಯಾಟೆ ರಸ್ತೆಗುಳಲ್ಲಿ ಮೆರ್ವಣ್ಗೆ ಒಯ್ತರಂತೆ. ಅದ್ನ 'ಮಾರ್ಡಿ ಗ್ರಾ' ಅಂತರಂತೆ." ಎಂದ.

"ತಕ್ಕಳಪ್ಪ !" ಬಚ್ಚಪ್ಪ ಬೆರಗಾಗಿ ಕಣ್ಣು ಬಿಟ್ಟು ಕುಳಿತ "ಒಳ್ಳೆ ಐನಾತಿ ಸಿಶ್ಟಮ್ಮೇ ಮಡಿಕಂಡವ್ರೆ ಬುಡತ್ಲಗೆ"

"ಊಂ, ವಸಿ ಅಂಗೇಯ. ಅವ್ರ್ ಪಾರ್ಲ್‍ಮ್ಯಂಟ್ನಗಿರೋ ಒಬ್ಳು ಮೆಂಬ್ರೂನೂ ಮುಂಚೆ ಗಂಡ್ಸಾಗಿದ್ಲಂತೆ"

"ಅದ್ಯಾವ್ ದೊಡ್ಡಿಸ್ಯ ಬುಡು, ನಾವ್ ಡಕಾಯ್ತಿನೇ ಮಾಡ್ಕಣಿಲ್ವೆ? ಅಂದ್ರೂ ಬಲ್ನನ್ಮಗನ್ದ್ ದೇಸನೇ ಅದು ! ಒಂದ್ಕಿತ ನೋಡ್ಕಂಬರವ ನಡಿ ಮತ್ತಿಗ, ಮುದ್ದುನ್ಗೇಳಿ ತಿಗೀಟು ತರ್ಸ್ಕಂಡು" ಎಂದ ಬಚ್ಚಪ್ಪ ಹುರುಪಿನಿಂದ.

"ಲೈ, ನ್ಯಟ್ಗೆ ಬೆಂಗ್ಳೂರೇ ನೋಡಿಲ್ಲ ಒಂಟ್ಬುಟ್ಟ ಇವ್ನು ಸೀದ ಪಾರಿನ್ಗೆ. ಬೆಳಿಗ್ಗೆ ಬಿರ್ನೆದ್ದು ಪಷ್ಟ್ ಬಸ್‍ಗೇ ಊರ್ಗೋಂಟೋಯ್ತಿನಿ ಅಂತಿದ್ದೆ, ಮಲ್ಗೋ ಟೇಂ ಆಗಿಲ್ವ? ಬಿದ್ಗ ನಡಿ" ಎಂದು ಗದರುತ್ತಾ ಬಚ್ಚಪ್ಪನ ಹುರಿಪಿನ ಮೋಂಬತ್ತಿಯನ್ನು ನಿರ್ದಯವಾಗಿ ನಂದಿಸಿ ಒಳನಡೆದ ರಾಮಣ್ಣ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X