• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಓ ಅನ್ನಲೊಂದು ಹೆಸರು

By Staff
|

ನನ್ನ ಬರಹಗಾರ(?)ಮಿತ್ರನೊಬ್ಬ ತನ್ನ ಹೆಸರನ್ನು ಯಂಡಮುರಿ ವೀರೇಂದ್ರನಾಥ್ ಎಂದು ಬದಲಾಯಿಸಿಕೊಳ್ಳುತ್ತೇನೆಂದು ಹೇಳುತ್ತಿದ್ದ. ಕಾರಣ ಕೇಳಿದರೆ ಹಾಗೆ ಹೆಸರನ್ನು ಬದಲಾಯಿಸಿಕೊಂಡರೆ ನಾನು ಬರೆಯದಿದ್ದರೂ ಲೇಖಕ ಬರೆದರೂ ಲೇಖಕ. ಓದುಗರ ಮನಸ್ಸಿನಲ್ಲಿ ನಿಚ್ಚಳನಾಗಿ ಉಳಿಯಲು ಇದೊಂದೇ ನನಗೆ ಉಳಿದ ಮಾರ್ಗ ಎನ್ನುತ್ತಿದ್ದ. 'ಓ ಅನ್ನಲೊಂದು ಹೆಸರು'ಲೇಖನ ಪ್ರಕಟವಾಗದಿದ್ದರೆ ನಾನು ಕೂಡ ಹಾಗೆ ಮಾಡಬೇಕೆಂದಿದ್ದೇನೆ. ಇನ್ನು ನೀವು?

  • ಆರ್.ಶರ್ಮಾ, ತಲವಾಟ

ನಮ್ಮನ್ನು ಗುರುತಿಸಲು ಹೆಸರು ಅಂತ ಯಾವ ಪುಣ್ಯಾತ್ಮ ಕಂಡು ಹಿಡಿದನೋ ಅವನ ಹೆಸರು ತಿಳಿದಿದ್ದರೆ ಉದ್ದಂಡ ನಮಸ್ಕಾರ ಮಾಡಬಹುದಿತ್ತು. ಒಮ್ಮೊಮ್ಮೆ ಹೆಸರುಗಳಿಂದ ಅವಾಂತರಗಳು ಆದಾಗಲೆಲ್ಲಾ ನನಗೆ ಹೀಗೆ ಅನ್ನಿಸುತ್ತದೆ. ಹುಟ್ಟಿದ ಹನ್ನೊಂದನೇ ದಿವಸ ಅಥವಾ ನಾಮಕರಣದವರೆಗೆ ಚೋಟುದ್ದ ಇರುವ ದೇಹ, ಅಮ್ಮನ ಅಕ್ಕಪಕ್ಕ ಸುಳಿದಾಡುವವರ ಮೂಲಕ ಒಂದು ಹೆಸರನ್ನು ಪಡೆಯುತ್ತದೆ . ಅವರೋ ಆ ದೇಹಕ್ಕೂ ರೂಪಕ್ಕೂ ಹೋಲದ ಅವರ ಮಟ್ಟಕ್ಕೆ ತೋಚುವ ಒಂದು ಹೆಸರನ್ನು ಇಟ್ಟು ಕೈತೊಳೆದುಕೊಳ್ಳುತ್ತಾರೆ. ಅಲ್ಲಿಂದಲೇ ಶುರುವಾಗುತ್ತದೆ ಹೆಸರಿನ ರಗಳೆ, ಆಮೇಲೆ ಸಾಯೋವರೆಗೂ ಮುಂದುವರೆಯುತ್ತದೆ ಕೆಲವರಿದ್ದಂತೂ ಸತ್ತಮೇಲೂ.

ಕನಿಷ್ಟ ನಮ್ಮ ಹೆಸರನ್ನು ನಾವು ಆಯ್ಕೆ ಮಾಡಿಕೊಳ್ಳುವ ಸ್ವಾತಂತ್ರ್ಯವೂ ನಮಗಿಲ್ಲವಲ್ಲ ಎಂದು ಒಮ್ಮೊಮ್ಮೆ ಅನಿಸುತ್ತದೆ. ಒಮ್ಮೆ ಯೋಚಿಸಿ!. ನಾವೆಷ್ಟು ನಿಸ್ಸಹಾಯಕರು, ನಮಗಿಟ್ಟ ಹೆಸರು ಕೆಟ್ಟದ್ದೊ ಅಥವಾ ಒಳ್ಳೆಯದೋ ಎಂದು ನಮಗೆ ಅರ್ಥವಾಗುವ ವರ್ಷಗಳಲ್ಲಿ ಅದು ಜಗಜ್ಜಾಹೀರಾಗಿರುತ್ತದೆ. ಆನಂತರ ನಮಗೆ ಇಷ್ಟವಾಗಲಿ ಇಲ್ಲದಿರಲಿ ನಾವು ಓ ಅನ್ನಲೇ ಬೇಕು. ಅದರ ಬದಲಾಗಿ ಹದಿನೆಂಟು ವರ್ಷದವರೆಗೆ ಬೇರೆಯವರಿಟ್ಟ ಹೆಸರು ಆ ನಂತರ ಕಡ್ದಾಯವಾಗಿ ಅವರಿಗೆ ತಕ್ಕುದಾದ ಹೆಸರನ್ನು ಅವರೇ ಆಯ್ಕೆಮಾಡಿಕೊಂಡು ಬದಲಾಯಿಸಿಕೊಳ್ಳಬೇಕು ಎಂಬ ಸಂಪ್ರದಾಯದ ಕಾನೂನು ಮಾಡಿದರೆ ಸರಿಯಾಗಿತ್ತೇನೋ ಅಂತ ಅನ್ನಿಸುತ್ತದೆ.

ಇದು ಬದುಕಿ ಬಳ್ಳಿ ಹರಿಯುವುದು ಅನಿಶ್ಚಿತ ಎಂಬಂತೆ ಕಾಣುವ ಚೋಟುದ್ದದ ದೇಹ ಇದ್ದಾಗ ಇಡುವ ಹೆಸರು ಮುಂದೆ ದೊಡ್ಡದಾದಾಗ ಎಷ್ಟೊಂದು ಅನರ್ಥಕಾರಿಯಾಗಿಬಿಡುತ್ತದೆ ಎನ್ನುವುದಕ್ಕೆ ನೂರಾರು ಉದಾಹರಣೆ ಕೊಡಬಹುದು. ಸುಂದರಿಯೆಂಬ ಹುಡುಗಿ ಬೆಳೆದಂತೆಲ್ಲಾ ವಂದರಿಯಾದರೆ ಆಕೆಗೂ ತನ್ನ ಹೆಸರನ್ನು ಹೇಳಿಕೊಳ್ಳಲು ನಾಚಿಕೆ. ಘಾಟಾಳಿ ಹುಡುಗಿಗೆ ಸಾದ್ವಿ ಎಂದು, ಅವಳಿಗೂ ಅವಳ ಸ್ವಭಾವಕ್ಕೂ ಹೋಲದ ಹೆಸರು. ಕೃಷ್ಣನ ಮತ್ತೊಂದು ಅವತಾರ ಎತ್ತಿದಂತಹ ಸ್ವಭಾವದವನಿಗೆ ಶ್ರೀ ರಾಮ. ತಂದೆ ತಾಯಿಗಳನ್ನು ಕಣ್ಣೆತ್ತಿಯೂ ನೋಡದವನಿಗೆ ಶ್ರವಣ ಕುಮಾರ, ಹೀಗೆ ಸಾಗುತ್ತಾ ಹೋಗುತ್ತದೆ ನಮ್ಮ ಹಿರಿಯರು ಮಾಡಿದ ನಾಮಕರಣ ಎಂಬ ಪದ್ದತಿಯ ಅನಾನುಕೂಲತೆಗಳು. ಅದೇ ಮರುನಾಮಕರಣ ಎಂಬ ಪದ್ದತಿ ಖಡಾಖಂಡಿತವೆಂದು ಆಗಿದ್ದರೆ ಇಷ್ಟೊಂದು ಅಭಾಸವಿರುತ್ತಿರಲಿಲ್ಲ.

ಈಗ ಹೆಸರು ಬದಲಾಯಿಸುವ ವ್ಯವಸ್ಥೆ ಇದೆ, ಕೋರ್ಟಿನಲ್ಲಿ ಒಂದು ಪ್ರಮಾಣಪತ್ರ ಸಲ್ಲಿಸಿ ನಿಮಗೆ ಬೇಕಾದ ಹಾಗೆ ಹೆಸರು ಬದಲಾಯಿಸಿಕೊಳ್ಳಿರಲ್ಲ ಎಂದು ನೀವು ಹೇಳಬಹುದು. ಊಹ್ಞು... ಅದು ಅಸಾಧ್ಯ. ಕಾರಣ ನಮ್ಮ ಜನರು ಸಂಪ್ರದಾಯ ಒಪ್ಪಿದಷ್ಟು ಸುಲಭವಾಗಿ ಕೋರ್ಟು ಕಚೇರಿಯನ್ನು ಒಪ್ಪುವುದಿಲ್ಲ. ಕೋರ್ಟು ಎಂದಾಕ್ಷಣ ನಮ್ಮ ಹುಡುಗಿಯೊಬ್ಬಳು ಹೆಸರು ಬದಲಾಯಿಸಿಕೊಂಡ ಕತೆ ನೆನಪಾಗುತ್ತದೆ.

ವತ್ಸಲಾ ಎಂಬುದು ಆಕೆಯ ಮನೆಯವರು ಇಟ್ಟ ಹೆಸರು, ಆಕೆ ಕಾಲೇಜಿಗೆ ಹೋದಾಗ ಸ್ನೇಹಿತರು ಅವಳ ಹೆಸರನ್ನು ಗೇಲಿಮಾಡಿದರಂತೆ. ಗೇಲಿ ಮಾಡಲು ಪ್ರಮುಖ ಕಾರಣ ಅವರಿಗೆ ಇವಳ ಹೆಸರನ್ನು ಕೂಗಲು ನಾಲಿಗೆ ಹೊರಳುತ್ತಿರಲಿಲ್ಲ. ಎಲ್ಲರೂ ವಸ್ತಲಾ ವಸ್ತಲಾ ಎನ್ನುತ್ತಿದ್ದರಂತೆ. ಈಕೆ ಬೇಸರಗೊಂಡು ತರಾತುರಿಯಲ್ಲಿ ತನ್ನ ಹೆಸರನ್ನು ಕೋರ್ಟಿನಲ್ಲಿ ಮಾಲಾ ಎಂದು ಬದಲಾಯಿಸಿಕೊಂಡದ್ದಾಯಿತು. ಹೆಸರನ್ನೇನೋ ಬದಲಾಯಿಸಿಕೊಂಡಾಯಿತು ಅದನ್ನು ಈಗ ಎಲ್ಲರಿಗೆ ತಿಳಿಸಬೇಕಲ್ಲ. ಅದೇ ದೊಡ್ಡ ಕೆಲಸವಾಗತೊಡಗಿತು. ಸ್ಥಳೀಯ ಪತ್ರಿಕೆಯಲ್ಲಿ ಹಣ ತೆತ್ತು ಒಂದು ಜಾಹಿರಾತು ನೀಡಿದ್ದಾಯಿತು. ಆ ಕೆಲಸವನ್ನೇನೋ ಹಾಗೂ ಹೀಗೂ ಆಕೆ ನೆರವೇರಿಸಿದಳು ಆದರೆ ಈಗ ಅವಳು ಊಹಿಸದ ಮತ್ತೊಂದು ಸಮಸ್ಯೆ ಬಂದೊದಗಿತು.

ಆಕೆ ತನ್ನ ಹೊಸ ಹೆಸರನ್ನು ಇಂಗ್ಲೀಷಿನಲ್ಲಿ Malaಎಂದು ಬರೆದಾಗ ಅದನ್ನು ಕನ್ನಡದಲ್ಲಿ ಮಲ ಎಂದು ಓದತೊಡಗಿದರು. ಒಂದು ಮಾಡಲು ಹೋಗಿ ಎರಡು ಮಾಡಿಕೊಂಡಂತಾಯಿತು. ಅದೇ ಹದಿನೆಂಟು ತುಂಬಿದ ಕೂಡಲೇ ಹೊಸ ಹೆಸರು ಎಂದಾಗಿದ್ದರೆ ಆರಾಮವಾಗಿ ಗಂಟೆಗಟ್ಟಲೆ ಕುಳಿತು ಒಳ್ಳೆಯ ಹೆಸರನ್ನು ಇಟ್ಟುಕೊಳ್ಳಬಹುದಿತ್ತು. ಜನರು ಅವರಾಗಿಯೇ ನಿನ್ನ ಹೊಸ ಹೆಸರು ಏನೆಂದು ಕೇಳುತ್ತಿದ್ದರು. ಜಾಹಿರಾತು ಕೋರ್ಟು ಕಚೇರಿ ಮುಂತಾದ ಯಾವ ಖರ್ಚೂ ಇರಲಿಲ್ಲ. ಇರಲಿ ಆಗದಿದ್ದರ ಕುರಿತು ಕೊರಗುವುದಕ್ಕಿಂತ ಇದ್ದದ್ದರಲ್ಲಿ ಮಜವನ್ನು ಹುಡುಕುವುದು ಪರಮಸುಖ.

ಕನ್ನಡದ ಹೆಸರುಗಳು ಇಂಗ್ಲೀಷಿನಲ್ಲಿ ಬರೆದಾಗ ಏನೇನೋ ಆಗುತ್ತದೆ ಅಂದೆನಲ್ಲ ಎನೇನೋ ಆಗುವುದಿರಲಿ ಕೆಲವೊಮ್ಮೆ ಕೋಲಾಹಲವನ್ನೇ ಸೃಷ್ಟಿಸಿಬಿಡುತ್ತದೆ ಎನ್ನುವುದಕ್ಕೆ ನನ್ನದೇ ಒಂದು ತಾಜಾ ಉದಾಹರಣೆ ಇದೆ.

ನನ್ನ ಅಕ್ಕನ ಮಗನಿಗೆ ದೀಪಾವಳಿಯ ಒಂದು ಶುಭಾಶಯ ಪತ್ರ ಕಳುಹಿಸಿದ್ದೆ. ನನ್ನ ಪೂರ್ತಿ ಹೆಸರು ಬರೆದರೆ ಶುಭಾಶಯಕ್ಕಿಂತ ಹೆಸರೇ ತುಂಬೀತು ಎಂದು ನನ್ನ ಹೆಸರಿನಲ್ಲಿನ ಮೊದಲನೆ Raಅಕ್ಷರವನ್ನು ಹಾಗು ನಾನು ಅವನ ಮಾವನಾದ್ದರಿಂದ, ಮಾವನ MAಅಕ್ಷರವನ್ನು ಇಂಗ್ಲಿಷಿನಲ್ಲಿ RAMAಎಂದು ಜೋಡಿಸಿ ಕಳುಹಿಸಿದ್ದೆ.ಮಧ್ಯೆ ಎರಡು ಅಕ್ಷರದ ಮಧ್ಯೆ ಒಂದು ಚುಕ್ಕಿಯನ್ನಿಡಲು ಮರೆತಿದ್ದೆ ಅನ್ನಿಸುತ್ತದೆ. ಆ ಶುಭಾಶಯ ಪತ್ರ ಅವನ ಶ್ರೀಮತಿಯ ಕೈಗೆ ಸಿಕ್ಕಿತು. ಆ ಗ್ರೀಟಿಂಗ್ಸ್‌ನಲ್ಲಿ ಪ್ರಣಯಪೂರ್ವಕ ಚಿತ್ರವೇನಾದರೂ ಇತ್ತೋ ಏನೋ, ಈಗ ನೆನಪಿಲ್ಲ. ಪತ್ರ ಸಿಕ್ಕ ಕೂಡಲೆ ಅವನ ಮನೆಯಲ್ಲಿ ರಾಮಾಯಣ ಶುರುವಾಗಿಯೇ ಹೋಯಿತಂತೆ. ನನ್ನ ಬಳಿ ಏನೋ ಮುಚ್ಚಿಟ್ಟಿದ್ದೀರಿ ಯಾರೀಕೆ ರಮ?. ಗಂಗಾ ಕಾವೇರಿ ಗೋದಾವರಿ ಭೂಮಿಯ ಸ್ಪರ್ಶವಾಗಿಯೇ ಹೋಯಿತಂತೆ. ಆತ ಮಾತ್ರ ಕಕ್ಕಾಬಿಕ್ಕಿ, ಇತ್ತ ಹೆಂಡತಿಯೂ ಇಲ್ಲ ಅತ್ತ ರಮ ಗೊತ್ತಿಲ್ಲ.

ನನಗೆ ರಮ ಅನ್ನೋರು ಯಾರೂ ಗೊತ್ತಿಲ್ಲ ಎಂದು ಹೇಳಿದ ಆತನನ್ನು ಆಕೆ ಗೊತ್ತಿಲ್ಲದಿದ್ದರೆ ಅದೇಗೆ ಈ ಪತ್ರ? ಎಂದು ಸೊರ ಸೊರ ಸದ್ದಿನ ನಡುವೆ ಪ್ರಶ್ನೆ. ಎಲ್ಲಿಂದ ಉತ್ತರ ತಂದಾನು ಆತ. ಸದ್ಯ ನಾನು ಅವತ್ತೇ ಶುಭಾಶಯಪತ್ರ ಮುಟ್ಟಿತಾ ಎಂದು ಕೇಳಲು ಫೋನ್ ಮಾಡಿದ್ದೆ. ಅಕಸ್ಮಾತ್ ನಾನು ಫೋನ್ ಮಾಡಿಲ್ಲದಿದ್ದರೆ ಗಂಡ ಹೆಂಡತಿಯರನ್ನು ದೂರ ಮಾಡಿದ ಪಾಪ ನನಗೆ ತಗುಲುತ್ತಿತ್ತೋ ಏನೋ! ಸದ್ಯ ಹಾಗಾಗಲಿಲ್ಲ. ರಮ ಅಲ್ಲ ಅದು ರಾಘು ಮಾವನ ಸಂಕ್ಷಿಪ್ತ ರೂಪವಾದ ರಾ.ಮಾ. ಇಂಗ್ಲೀಷಿನವರ ಯಡವಟ್ಟುತನದಿಂದ ಹೀಗಾಗಿದೆ ಎಂದು ಗೊತ್ತಾದಮೇಲೆ ಅವನ ಶ್ರೀಮತಿಯೂ ಮನಸಾರೆ ನಕ್ಕಳಂತೆ.

ಇಂಗ್ಲೀಷಿನ ವಿಚಾರ ಹಾಗಿರಲಿ ಹೆಸರಿನ ವಿಚಾರದಲ್ಲಿ ಹಿಂದಿ ಜನರಿದ್ದಾರಲ್ಲ ಅವರದು ಮತ್ತೊಂದು ರಾಮಾಯಣ. ನಮ್ಮಲ್ಲಿ ಒಂದು ಜೋಕ್ ಇತ್ತು ಒಬ್ಬಾತ ಹೇಳಿದನಂತೆ ನಾನು ಬ್ರಹ್ಮಚಾರಿ, ಮತ್ತೊಬ್ಬ ಹೇಳಿದನಂತೆ ನಮ್ಮಪ್ಪನೂ ಬ್ರಹ್ಮಚಾರಿ ಮಗದೊಬ್ಬ ಹೇಳಿದನಂತೆ ನಮ್ಮ ಮನೆಯಲ್ಲಿ ನಾನು, ನಮ್ಮಪ್ಪ, ನಮ್ತಾತ ಮೂವರು ಬ್ರಹ್ಮಚಾರಿ. ಅಸಾಧ್ಯವಾದ ಈ ಮಾತನ್ನು ಹೇಳಿದಾಕ್ಷಣ ಸಾಮಾನ್ಯವಾಗಿ ಎಲ್ಲರೂ ಇದೊಂದು ಜೋಕ್ ಎಂದು ಘೊಳ್ಳನೆ ನಗುತ್ತಿದ್ದರು. ನಾನು ಕೂಡ ನಕ್ಕಿದ್ದೆ, ಆದರೆ ಇನ್ನು ನಗುವುದಿಲ್ಲ ಕಾರಣ ಇದು ಆಸಾಧ್ಯವಾದುದೇನಲ್ಲ ಖಂಡಿತ ಸಾಧ್ಯ ಎಂದು ಮೊನ್ನೆ ತಿಳಿಯಿತು.

ಬೆಂಗಳೂರಿಗೆ ಹೋಗುವ ಬಸ್ಸಿನಲ್ಲಿ ಒಬ್ಬರು ಸಿಕ್ಕರು, ಅವರು ಉತ್ತರ ಭಾರತದವರು. ಅವರ ಹೆಸರು ಬ್ರಹ್ಮಚಾರಿ. ಇದು ಒಂದು ಹೆಸರಾಗಲು ಸಾಧ್ಯವಾದಮೇಲೆ ಮೊದಲನೆಯದು ಜೋಕ್ ಎಂದು ನಗುವ ಅಗತ್ಯವೇ ಇಲ್ಲ ಎಂದೆನಿಸಿತು. ನಮ್ಮ ಮಲೆನಾಡಿನಲ್ಲಿ ಕೆಲವು ಕುಟುಂಬಗಳಲ್ಲಿ ಒಂದು ಸಂಪ್ರದಾಯವಿದೆ, ಮನೆಯ ಹಿರಿಯ ಮಗನಿಗೆ ತಿಮ್ಮಪ್ಪ ಎಂದು ಹೆಸರಿಡುತ್ತಾರೆ.ಮೊದಲೆಲ್ಲಾ ಹತ್ತೆಂಟು ಮಕ್ಕಳಾಗುತ್ತಿತ್ತು ಹಾಗಾಗಿ ಸಮಸ್ಯೆ ಇರಲಿಲ್ಲ. ಈಗ ಕುಟುಂಬ ಯೋಜನೆಯ ಕಾಲಬಂದಮೇಲೆ ಹೇಗಾಗಿದೆಯೆಂದರೆ ತಾತ,ಮಗ, ಮೊಮ್ಮೊಗ ಮೂವರೂ ತಿಮ್ಮಪ್ಪ. ಅದೇ ತರಹ ಬ್ರಹ್ಮಚಾರಿಗಳೂ ಮಗ,ಅಪ್ಪ, ತಾತ,ಆಗುತ್ತಾರಲ್ಲ. ಆದರೆ ಇದರಿಂದ ಸಮಸ್ಯೆ ಇರುವುದು ಹೆಂಗಸರಿಗೆ, ಅವರ ಪಾಡು ಹೇಳತೀರದು. ಇದು ಎಷ್ಟೊಂದು ಅತಿರೇಕದ ಸಮಸ್ಯೆ ಎಂದರೆ ತಾಯಿ ಮಗನನ್ನು ಎಲ್ಲರೆದುರು ಹೆಸರು ಹೇಳಿ ಒಂದು ಪಪ್ಪಿಕೊಡೊ ಎಂದು ಕರೆಯುವಂತಿಲ್ಲ,ಅಪ್ಪ ಗುರಾಯಿಸುತ್ತಾನೆ. ಜತೆಯಲ್ಲಿ ಗಂಡನ ಹೆಸರನ್ನು ಇಟ್ಟು ಕರೆದು ಅವನ ಆಯಸ್ಸಿಗೆ ಕುಂದು ತರುತ್ತಾಳೆ ಎಂದು ಕೆಂಗಣ್ಣು ಎದುರಿಸಬೇಕಾಗುತ್ತದೆ.ಇರಲಿ ಅವರವರ ಪಾಡು ಅವರವರಿಗೆ ನಮ್ಮದೇನು? ಅಲ್ಲವೇ?

ಈ ಕಾಲದಲ್ಲಿ ಮಕ್ಕಳು ಹುಟ್ಟುವ ಮೊದಲೇ ಹೆಸರಿನ ಆಯ್ಕೆ ಶುರುವಾಗಿರುತ್ತದೆ. ವೆಬ್ ಸೈಟ್‌ನಲ್ಲಿ ಇರುವ ಲಕ್ಷಾಂತರ ಹೆಸರಿನಲ್ಲಿ ನಮಗಿಷ್ಟವಾದ ಹೆಸರನ್ನು ಆಯ್ಕೆ ಮಾಡಿಕೊಳ್ಳಬಹುದು. ಹಿಂದೆ ನಮ್ಮ ಹಳ್ಳಿಗಳಲ್ಲಿ ಅವರದಷ್ಟೇ ಒಂದು ಪ್ರಪಂಚ. ಹೊಸ ಹೊಸ ಹೆಸರನ್ನು ತರುವುದು ಎಲ್ಲಿಂದ. ಹಾಗಾಗಿ ಬಹಳಷ್ಟು ಮನೆಗಳಲ್ಲಿ ಆ ಊರಿನ ದೇವಸ್ಥಾನದಲ್ಲಿ ಯಾವ ದೇವರು ಪ್ರತಿಷ್ಠಾಪನೆಗೊಂಡಿರುತ್ತಾನೋ ಅವನ ಹೆಸರನ್ನು ಇಟ್ಟು ಕೈ ತೊಳೆದುಕೊಳ್ಳುತ್ತಿದ್ದರು. ಇವತ್ತಿಗೂ ಗಣಪತಿ ದೇವಸ್ಥಾನವಿರುವ ಊರಿನಲ್ಲಿ ಕನಿಷ್ಠವೆಂದರೂ ಹತ್ತಾರು ಗಣಪತಿ ಊರಿನಲ್ಲಿ ಓಡಾಡುತ್ತಿರುತ್ತಾರೆ. ಗಂಡಸರಿಗೆ ಗಣಪತಿ ಎಂಬ ಹೆಸರು ಸರಿ. ಎಂಥಾ ವಿಚಿತ್ರ ನೋಡಿ, ಊರಲ್ಲಿ ಲಕ್ಷ್ಮೀನಾರಾಯಣ ದೇವಸ್ಥಾನ ಇದೆ ಎಂಬ ಒಂದೇ ಕಾರಣಕ್ಕೆ ಅದೇ ಹೆಸರನ್ನು ಗಂಡುಮಕ್ಕಳಿಗೆ ನಾಮಕರಣ ಮಾಡಿಬಿಡುತ್ತಾರೆ. ಲಕ್ಷ್ಮೀ ಸ್ತ್ರಿಲಿಂಗ ನಾರಾಯಣ ಪುಲ್ಲಿಂಗ ಎರಡು ಸೇರಿಸಿದರೆ ಯಾವ ಲಿಂಗ ಸೂಚಕ ಎನ್ನುವ ಈಗಿನ ಹುಡುಗರ ಪ್ರಶ್ನೆಗೆ ಏನಂತ ಉತ್ತರಿಸುವುದು. ನಂಬಿದರೆ ನಂಬಿ ಬಿಟ್ಟರೆ ಬಿಡಿ ನಮ್ಮ ಊರಿನಲ್ಲಿ ಕೆಲವರಂತೂ ಯಾವ ದೇವರಿಗೂ ಸಿಟ್ಟಾಗುವ ಸಮಸ್ಯೆಯೆ ಬೇಡ ಎಂದು ಮಕ್ಕಳಿಗೆ "ದೇವರು" ಎಂದೇ ಹೆಸರಿಟ್ಟುಬಿಟ್ಟಿದ್ದಾರೆ.

ಶಾಖಾಹಾರಿ ದೇವರ ಭಕ್ತರ ಕಥೆ ಹೀಗಾದರೆ ಕುರಿಕೋಳಿ ಬಲಿ ಕೇಳುವ ದೈವ ಭಕ್ತರೂ ಪೈಪೋಟಿಗೆ ಬಿದ್ದವರಂತೆ ತಮ್ಮ ಮಕ್ಕಳಿಗೆ ಭೂತ,ಚೌಡಿ,ಕಾಳಿ,ದೇವಿ ಎಂಬ ಹೆಸರನ್ನಿಟ್ಟು ನಮ್ಮೂರ ರಸ್ತೆಯಲ್ಲಿ ಹಾಡಾಹಗಲೇ ಭೂತ ಬಂದರೂ ಯಾರು ಹೆದರುವುದಿಲ್ಲ ಎಂದು ಹೇಳುವಂತಾಗಿದೆ. ಅಣ್ಣನಿಗೆ ದೊಡ್ದಭೂತ ತಮ್ಮನಿಗೆ ಸಣ್ಣಭೂತ ಎಂಬ ಹೆಸರುಗಳು ಇಲ್ಲಿ ಸರ್ವೇ ಸಾಮಾನ್ಯ. ಆದರೆ ಈ ತರಹದ ಹೆಸರುಗಳು ನಲ್ವತ್ತು ವರ್ಷಗಳಿಂದೀಚೆಗೆ ಮಾಯವಾಗಿದೆ.

ಹೆಸರಿನ ವಿಚಾರವಾಗಿ ನಮ್ಮನ್ನು ಗೊಂದಲಕ್ಕೆ ಬಿಳಿಸಲು ಇನ್ನು ಕೆಲವರು ಗಂಡು ಮಕ್ಕಳಿಗೂ ಹೆಣ್ಣುಮಕ್ಕಳಿಗೂ ಒಂದೇ ತರಹದ ಹೆಸರನ್ನಿಟ್ಟು ಗೋಳು ಮಾಡಿಬಿಡುತ್ತಾರೆ. ಅರುಣ, ವಿನಯ, ಮುಂತಾದ ಹೆಸರುಗಳು ದ್ವಿಲಿಂಗಿಗಳು. ಹೆಸರಿನಮಾತ್ರದಿಂದ ಗಂಡೋ ಹೆಣ್ಣೋ ಎಂದು ಪತ್ತೆಮಾಡಲಾಗದಿರಲಿ ಎಂಬ ತೀರ್ಮಾನ ಅವರದ್ದಿರಬೇಕು. ಇರಲಿ ಹೆಸರನ್ನು ಇಟ್ಟಾದಮೇಲೆ ಮಾಡುವುದಿನ್ನೇನು ಇದ್ದುದರಲ್ಲಿಯೇ ತೃಪ್ತಿಪಡಬೇಕು ಎಂಬ ವೇದಾಂತವೇ ಸಿದ್ಧಾಂತ. ಇದನ್ನು ಓದಿದ ಮೇಲೆ ಹಾಗೆ ಒಪ್ಪಿಕೊಳ್ಳಲು ಆಗದಿದ್ದಲ್ಲಿ ನಿಮ್ಮ ಹೆಸರನ್ನು ನಿಮಗಿಷ್ಟದಂತೆ ಜನರಿಗೆ ಕಷ್ಟವಾಗದಂತೆ ಬೇಕಾದರೆ ಬದಲಾಯಿಸಿಕೊಳ್ಳಿ.

ಇವೆಲ್ಲಾ ಸ್ವದೇಶಿ ಹೆಸರಿನ ಅವಾಂತರಗಳಾದರೆ ನಮ್ಮ ದೇಶದವರ ಹೆಸರು ವಿದೇಶಿ ಜನರ ಬಾಯಿಗೆ ಸಿಕ್ಕಿ ಹೇಗೆ ಅವಾಂತರವಾಗುತ್ತದೆ ಎನ್ನುವುದಕ್ಕೆ ನಮ್ಮ ಸಂಬಂಧಿಯೊಬ್ಬರ ಅನುಭವವೇ ವೇದ್ಯ. ಅವರ ಹೆಸರು ಜಿ.ಮೃತ್ಯುಂಜಯ. ಅದು ನಮ್ಮವರ ನಾಲಿಗೆಯಲ್ಲಿಯೇ ಸುಲಭವಾಗಿ ನುಲಿಯದೆ ಮುರ್ತುಂಜಯ ಎಂದಾಗುತ್ತಿತ್ತು. ಇನ್ನು ಈ ಚಿತ್ರವಿಚಿತ್ರ ಹೆಸರು ತಿಳಿಯದ ವಿದೇಶಿಯರ ಬಾಯಲ್ಲಿ ಏನಾಗಬಹುದು?. ಅವರು ಬೆಹರಿನ್‌ನ ಕಂಪನಿಯೊಂದರಲ್ಲಿ ಇಂಜನಿಯರ್ ಆಗಿ ಕೆಲಸ ಮಾಡುತ್ತಿದ್ದರು. ಇವರು ಕೆಲಸಕ್ಕೆ ಸೇರಿದ ದಿನ ಇವರನ್ನು ಭಾರತೀಯ ಸಹೋದ್ಯೋಗಿಯೊಬ್ಬ ಮಿಕ್ಕವರಿಗೆ ಪರಿಚಯ ಮಾಡಿಕೊಟ್ಟನಂತೆ.

ಮಾರನೇ ದಿನ ಡ್ಯೂಟಿಗೆ ಹೋದಾಗ ಹಾಯ್ ಬಾಯ್ ಆದನಂತರ ಬ್ರಿಟೀಷ್ ಮೂಲದ ಇಂಜನಿಯರ್ ಒಬ್ಬ ಇವರತ್ತ ನೋಡಿ , ಮಿಸ್ಟರ್ ಜಿ.ಮೂರ್ ತುಂಡಯ್ಯ ಕಮ್ ಹಿಯರ್ ಎಂದನಂತೆ, ಒಂದು ಸ್ವಲ್ಪ ಹೊತ್ತು ಇವರು ಆತ ಬೇರೆ ಏನೋ ಹೇಳುತ್ತಿದ್ದಾನೆ ಅಂದುಕೊಂಡರಂತೆ. ಮತ್ತೆ ಆತ ಮೂರ್ ತುಂಡಯ್ಯ ಅಂದಾಗ ಇವರಿಗೆ ತಿಳಿಯಿತು, ತನ್ನ ಹೆಸರಾದ ಮೃತ್ಯುಂಜಯ ಇವನ ನಾಲಿಗೆಯಲ್ಲಿ ಹೊರಳಾಡಿ ಹೀಗೆ ರೂಪಾಂತರಗೊಂಡಿದೆ ಎಂದು. ತಕ್ಷಣ ಈ ರಗಳೆಯೆ ಬೇಡ ಎಂದು ಅವರು ತಮ್ಮ ಹೆಸರನ್ನು ಜಿ.ಎಂ.ಜಯ ಎಂದು ಎಲ್ಲರ ನಾಲಿಗೆಯಮೇಲೆ ಸಾರಾಗವಾಗಿ ನಲಿದು ನುಲಿಯಲು ಅನುಕೂಲವಾಗಲಿ ಎಂದು ಬದಲಾಯಿಸಿಕೊಂಡರಂತೆ.

ಆದರೆ ಅದರಿಂದ ಆನಂತರ ಮತ್ತೊಂದು ಸಮಸ್ಯೆ, ಇವರ ಹೆಸರನ್ನು ಕೇಳಿದ ಭಾರತೀಯ ಮೂಲದ ನೌಕರರು ಇದು ಯಾರೋ ಮಹಿಳೆಯಿರಬೇಕೆಂದು ಸ್ವಲ್ಪ ಖುಷಿಯಿಂದ ಬೇಟಿಗೆ ಬಂದು ಬೆಪ್ಪಾಗುತ್ತಿದ್ದರಂತೆ. ಅವರು ಬೆಪ್ಪಾದರೂ ಪರವಾಗಿಲ್ಲ, ಜನರ ಬಾಯಲ್ಲಿ ಬದುಕಿದ್ದಾಗಲೇ ಮೂರು ತುಂಡಾಗುವುದಕ್ಕಿಂತ ಇದೇ ಲೇಸು ಎಂದು ಜಯ ಎನ್ನುವ ಹೆಸರಿನಲ್ಲಿಯೇ ಮುಂದುವರೆಯುವ ತೀರ್ಮಾನ ಕೈಗೊಂಡರು ಎನ್ನಿ. ಹೀಗೆ ಹೆಸರಿನ ಅವಾಂತರಗಳು ಅನುಕೂಲಗಳು ಬರೆಯುತ್ತಾ ಕುಳಿತರೆ ನಂತರ ಸಂಪಾದಕರು ನನ್ನ ಹೆಸರನ್ನು ಅಳಿಸಿಹಾಕುವುದು ಖಂಡಿತಾ. ಹಾಗಾಗಿ ಅಂತಿಮವಾಗಿ,

ಹೆಸರು ಬದಲಾಯಿಸಿಕೊಳ್ಳಿ ಎಂದಾಗ ನೆನಪಾಯಿತು ನನ್ನ ಬರಹಗಾರ(?)ಮಿತ್ರನೊಬ್ಬ ತನ್ನ ಹೆಸರನ್ನು ಯಂಡಮುರಿ ವಿರೇಂದ್ರನಾಥ್ ಎಂದು ಬದಲಾಯಿಸಿಕೊಳ್ಳುತ್ತೇನೆಂದು ಹೇಳುತ್ತಿದ್ದ. ಕಾರಣ ಕೇಳಿದರೆ ಹಾಗೆ ಹೆಸರನ್ನು ಬದಲಾಯಿಸಿಕೊಂಡರೆ ನಾನು ಬರೆಯದಿದ್ದರೂ ಲೇಖಕ ಬರೆದರೂ ಲೇಖಕ. ಓದುಗರ ಮನಸ್ಸಿನಲ್ಲಿ ನಿಚ್ಚಳನಾಗಿ ಉಳಿಯಲು ಇದೊಂದೇ ನನಗೆ ಉಳಿದ ಮಾರ್ಗ ಎನ್ನುತ್ತಿದ್ದ. 'ಓ ಅನ್ನಲೊಂದು ಹೆಸರು'ಲೇಖನ ಪ್ರಕಟವಾಗದಿದ್ದರೆ ನಾನು ಕೂಡ ಹಾಗೆ ಮಾಡಬೇಕೆಂದಿದ್ದೇನೆ. ಇನ್ನು ನೀವು?

ಲೇಖಕರ ಪೂರ್ಣ ವಿಳಾಸ :

ರಾಘವೇಂದ್ರ ಶರ್ಮಾ.ಕೆ.ಎಲ್.,

ಕಡವಿನಮನೆ,

ಅಂಚೆ;ತಲವಾಟ,

ಸಾಗರ-ಶಿವಮೊಗ್ಗ,

ಪಿನ್: 577 420

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more