ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಬು, ಶಬರಿ, ವ್ಯಾಕರಣ ಮತ್ತು ಬಿಟ್ಟಿ ಸಿನೆಮಾ

By Staff
|
Google Oneindia Kannada News

ಪ್ರತಿ ತಿಂಗಳೂ ಮೊದಲ ಭಾನುವಾರ, ಮೇಷ್ಟರಿಗೆ ಅವರ ಮನೆಯಲ್ಲಿ ಗುರುಪತ್ನಿಯ ಅಮೃತಹಸ್ತದಿಂದ ಒಂದು ಖಾಸಗೀ ಅಭ್ಯಂಜನದ ಕಾರ್ಯಕ್ರಮ. ಆ ದಿನ ಮನೆಯ ಇಬ್ಬರು ಹೆಣ್ಣು ಮಕ್ಕಳು ಮತ್ತು ಕಿರಿಯ ಮಗನ ಜೊತೆ ನನ್ನನ್ನು ಅವರ ಖರ್ಚಿನಲ್ಲಿ ಮನೆ ಹತ್ತಿರದ ಥಿಯೇಟರ್‌ನ ಮಧ್ಯಾಹ್ನದ ಮ್ಯಾಟಿನೀ ಸಿನೆಮಾಕ್ಕೆ ಕಳಿಸುತ್ತಿದ್ದರು.

ಅಂಕಣಕಾರ : ಶಿಕಾರಿಪುರ ಹರಿಹರೇಶ್ವರ, ಮೈಸೂರು

Harihareshwara, Mysoreನಾನು ಶಿವಮೊಗ್ಗದ ಸರ್ಕಾರೀ ಪ್ರೌಢಶಾಲೆಗೆ ಸೇರಿದೆ. ನಮ್ಮದು ಬಾಲಕ-ಬಾಲಕಿಯರ ಸಹ-ವಿದ್ಯಾರ್ಜನೆಯ ಶಾಲೆ. ಆದರೆ ಅಲ್ಲಿದ್ದವರು ಕೆಲವೇ ಕೆಲವು ವಿದ್ಯಾರ್ಥಿನಿಯರು. ಅವರಲ್ಲಿ ಹೆಸರು ಮಾಡಿದವರೆಂದರೆ ಶಾಂತಲಾ (ಹೆಸರು ಬದಲಾಯಿಸಿದ್ದೇನೆ.) ಪಕ್ಕದಲ್ಲಿದ್ದ ಮೇರಿ ಇಮ್ಮ್ಯಾಕುಲೇಟ್ ಗರ್ಲ್ಸ್ ಹೈಸ್ಕೂಲ್(ಕಾನ್ವೆಂಟ್)ನಲ್ಲಿ ಓದುತ್ತಿದ್ದ ನಮ್ಮಕ್ಕನ ಗೆಳತಿ ಇವರು. ಹೋದವಾರ, ಸ್ವಾಮಿದೇವನೆ ಪ್ರಾರ್ಥನೆಯ ಬಗ್ಗೆ ಬರೆದಿದ್ದೆನಲ್ಲ; ಅದೇ ಪ್ರಾರ್ಥನೆಯ ಆಯ್ದ ಏಳೆಂಟು ಪದ್ಯಗಳನ್ನು ಈ ಕಾನ್ವೆಂಟ್‌ನಲ್ಲಿಯೂ ಪ್ರಾರ್ಥನೆಯಾಗಿ ಹೇಳಿಸುತ್ತಿದ್ದರು. ಒಂದೇ ಪುಟ್ಟ ವ್ಯತ್ಯಾಸದೊಂದಿಗೆ- ತೇ ನಮೋಸ್ತು ನಮೋಸ್ತು ತೇ' ಬದಲಾಗಿ, ನಿನ್ನ ನಮಿಸುವೆ ನಮಿಸುವೆ'- ಎಂದು. ತನ್ನ ಕಾನ್ವೆಂಟ್‌ನ ಕೆಲವು ಸಾ೦ಸ್ಕೃತಿಕ ಕಾರ್ಯಕ್ರಮಗಳಿಗೆ ನನ್ನನ್ನು ನಮ್ಮಕ್ಕ ಕರೆದೊಯ್ಯುತ್ತಿದ್ದಳು.

ಅಲ್ಲಿ ನೋಡಿದ ಶಬರಿ ನೃತ್ಯರೂಪಕ ಇನ್ನೂ ನೆನಪಿನಲ್ಲಿದೆ. ಆಗ ಹೊಳೆಯದ್ದೆಲ್ಲಾ ಈಗ ಸುಳಿವುಗೊಡುತ್ತಿದೆ: ವಾಲ್ಮೀಕಿಗಳ ಶಬರಿ ಪಂಪಾ ತೀರದಲ್ಲಿ ದೊರಕುವ ನಾನಾವಿಧವಾದ ಕಂದಮೂಲಫಲಗಳನ್ನು ಬರಲಿರುವ ಆ ಪುಣ್ಯಪುರುಷ ಅತಿಥಿಗಾಗಿಯೇ ಶೇಖರಿಸಿಡುತ್ತಿದ್ದಾಳೆ. ಕುವೆಂಪುವಿನ ಶಬರಿ ಕಾಯುತಿಹಳು ಈರೈದು ವತ್ಸರಗಳಿ೦, ರಾಮ ಲಕ್ಷ್ಮಣ ಸೀತೆಯರಿಗಾಗಿ, ನಿಚ್ಚಮುಂ, ಉಣಿಸನ್ ಅಣಿ ಮಾಡಿ.' ಪುತಿನ ಅವರ ಶಬರಿ ನೀನಿಹುದೆಲ್ಲೋ ನಾನರಿಯೆ; ನಿನ್ನೆಡೆಗೈದುವ ಬಳಿಯರಿಯೆ; ನೀ ಬಹೆ ಎನ್ನುವ ನೆಚ್ಚಿನೊಳು, ನಾನಿಹೆ ಬಯಕೆಯ ಹುಚ್ಚಿನೊಳು- ರಾಮಾ ನೀನೆ೦ದ್ ಐತರುವೆ?'- ಎಂದು ಉದ್ವಿಗ್ನಳಾಗಿದ್ದಾಳೆ. ವಿಚಾರದ ಸಿರಿವಂತಿಕೆಗೆ ಹೆಸರಾದ ವಿ. ಸೀತಾರಾಮಯ್ಯನವರ ಶಬರಿ ಕಾದಿರುವಳು, ರಾಮ ಬರುವನೆಂದು, ತನ್ನ ಪೂಜೆಗೊಳುವನೆಂದು. ಶಬರಿವೊಲು ಜನವು ದಿನವೂ ಯುಗಯುಗವು ಕರೆಯುತಿಹುದು.' ನಿಜ. ಆದರೆ, ಭರವಸೆಗಳ್ ಅಳಿಯವಾಗಿ, ಮನವೆಲ್ಲ ಬಯಕೆಯಾಗಿ, ಹಗಲೂ ಇರುಳೂ ಜಾಗರಾಗಿದ್ದುಕೊಂಡು, ಅವನಿಗಾಗಿಯೇ ಕಾದು ಕೂಗು'ತ್ತಲಿರುವ ಆರ್ತರಿಗೆ ನುಡಿ ಸೋತ ಮೂಕಪ್ರೇಮ'ದವರಿಗೆ ಮಾತ್ರ ರಾಮ ಗೋಚರವಾದಾನು. ಉಳಿದ ಕೂಗು ಬರೀ ಅರಣ್ಯರೋದನವಷ್ಟೇ ಆದೀತು. ಕೋತಿಯ ಕೂಸೋ, ಕೊತ್ತಿಯ ಮರಿಯೊ ಪ್ರಪತ್ತಿಯ ಮಾತನಾಡುತ್ತೇವೆ; ಸೀರೆಯ ಗಂಟಿನಮೇಲೆ ಒಂದು ಕೈಯನ್ನು ಭದ್ರವಾಗಿ ಹಿಡಿದಿರಿಸಿಕೊಂಡೇ, ಇನ್ನೊಂದು ಕೈಯನ್ನ ಮೇಲಕ್ಕೆತ್ತಿ ಕೃಷ್ಣಾ, ಕೃಷ್ಣಾ'- ಎಂದು ಮೊರೆಯಿಡುತ್ತಿರುವ ದ್ರೌಪದಿಯರ ಮಾನಸಂರಕ್ಷಣೆಗೆ ಆ ಆಪದ್ಬಾಂಧವ ಬಂದಾನೇ?
****
ಸಾಹಿತ್ಯ, ಸಾಂಸ್ಕೃತಿಕ ಚಟುವಟಿಕೆಗಳ ಪಾದರಸವಾಗಿದ್ದು, ಆಮೇಲೆ ಒಂದಾದ ಮೇಲೊಂದು ವಿಕ್ರಮಗಳನ್ನು ಸಾಧಿಸಿದವರೂ ಮೇಲೆ ಹೇಳಿದ ದಿಟ್ಟ ತರುಣಿ ಶಾಂತಲಾ ಅವರೇ. ರಾಜ್ಯದ ಸಿಂಡಿಕೇಟ್ ಬ್ಯಾಂಕ್ ತನ್ನ ವಿಶೇಷ ಯೋಜನೆಯೊಂದಾಗಿ, ಸಂಪೂರ್ಣವಾಗಿ ಎಲ್ಲಾ ಕೆಲಸಗಳನ್ನೂ ಮಹಿಳೆಯರೇ ನಿರ್ವಹಿಸುವ ತನ್ನ ಸುಸಜ್ಜಿತ ಆಲ್ ವಿಮೆನ್ಸ್ ಬ್ರ್ಯಾ೦ಚ್' ಒಂದನ್ನು ಬೆಂಗಳೂರಿನ ಶೇಷಾದ್ರಿಪುರದಲ್ಲಿ ತೆರೆದಾಗ, ಆ ಉಲೂಪಿ ಚಿತ್ರಾಂಗದಾ ಪ್ರಮದೆಯರಿಂದ ಸುಶೋಭಿತ ಶಾಖೆಗೆ ಪ್ರಬಂಧಕರಾಗಿ ನೇಮಕಗೊಂಡು, ಬ್ಯಾಂಕ್‌ನ ವ್ಯವಹಾರ ವಹಿವಾಟುಗಳನ್ನ ಸುಸೂತ್ರವಾಗಿ ನಡೆಸಿ, ಜನಮನ್ನಣೆಗಳಿಸಿ, ಯಶಸ್ವಿಯಾದವರೂ ಇವರೇ. ಯಾರು ಹೇಳಿದ್ದು: ನೂರು ಜುಟ್ಟುಗಳು ಒಂದೆಡೆ ಸೇರಿ ಇರಬಹುದು, ಮೂರು ಜಡೆಗಳು ಒಂದೇ ಸೂರಿನಡಿ ನೆಮ್ಮದಿಯಿಂದ ಇರುವುದು ದುಸ್ಸಾಧ್ಯ ಎಂದು!

ನಮ್ಮ ಅಮ್ಮನ ಕೊರಳಿನ ಚಿನ್ನದ ಅವಲಕ್ಕಿ ಸರವನ್ನ ಇವರ ಬ್ಯಾಂಕಿನಲ್ಲಿ ಎಷ್ಟು ಬಾರಿ ಒತ್ತೆಯಿಟ್ಟು, ಹಣತಂದು, ನಮ್ಮ ಕಷ್ಟಕಾಲ ಜಾರಿದ ಮೇಲೆ ಹಣ ಹಿಂತಿರುಗಿಸಿ ಬಿಡಿಸಿಕೊಂಡು ಬಂದಿದ್ದೆವೋ- ಲೆಕ್ಕವಿಲ್ಲ. ನಮ್ಮ ಮನೆಯಲ್ಲಿ ಏನೋ ಒಂದು ಹಬ್ಬದ ಹೆಚ್ಚು ಖರ್ಚೋ, ಮನೆ ರಿಪೇರಿಗೋ ಅಥವಾ ಸ್ಕೂಲು-ಕಾಲೇಜಿಗೆ ಸೇರಲು ಹಣದ ಕೊರತೆಯೋ, ಏನೋ ತಾಪತ್ರಯ ಆಗಿದೆ- ಎಂಬುದು ಇವರ ಬ್ಯಾಂಕಿಗೆ ಹೋದಕೂಡಲೇ ನಾವು ಹೇಳದೇನೇ ಅವರಿಗೆ ಗೊತ್ತಾಗಿ ಬಿಡುತ್ತಿತ್ತು. ಹಲವಾರು ಆರ್ಥಿಕವಾಗಿ ಹಿಂದುಳಿದ, ಪ್ರತಿಭಾವಂತ ವಿದ್ಯಾರ್ಥಿ ವಿದ್ಯಾರ್ಥಿನಿಯರನ್ನ ಪೋಷಿಸಿದವರು ಇವರು. ತಾವು ಬಹಳ ಕಷ್ಟಪಟ್ಟು ಮುಂದೆ ಬಂದವರಾದ್ದರಿಂದಲೋ ಏನೋ, ನೊಂದವರನ್ನ ಕಂಡರೆ ಇವರ ಎದೆ ಬಲು ಬೇಗ ಕರಗುತ್ತಿತ್ತು. ಪರೋಪಕಾರಿಗಳೂ, ಜನಪ್ರಿಯರೂ ಆಗಿದ್ದ ಈ ಅಸಮಾನ್ಯ ಸಾಹಸಿ, ಆಮೇಲೆ ತನ್ನ ಜೀವನದ ಸಂಧ್ಯಾಕಾಲದಲ್ಲಿ ಅಮೆರಿಕಾಕ್ಕೆ ವಲಸೆ ಬಂದು ನ್ಯೂಯಾರ್ಕ್‌ನ ಬ್ಯಾಂಕ್ ಒಂದರಲ್ಲಿ ಸಹ ಕೆಲಸ ಮಾಡಿದರು.

ಪ್ರೌಢಶಾಲೆಯಲ್ಲಿ ಇಂಗ್ಲಿಷಿನ ಮೇಷ್ಟರು ಟಿ.ಎನ್. ಲಕ್ಷ್ಮಣರಾವ್, ಅಂಕಗಣಿತದ ವೆಂಕಟಾಚಲಯ್ಯ, ಐಚ್ಛಿಕಗಣಿತದ ರಾಮರಾವ್, ಇತಿಹಾಸ ಹೇಳಿಕೊಡುತ್ತಿದ್ದ ಸೀತಾರಾಮಯ್ಯ, ಶಿಶುಗೀತೆಗಳ ಆಶುಕವಿ ಹಿಂದಿಯ ಮಾರ್ಕಾಂಡೆಯರಾವ್, ಸಂಸ್ಕೃತದ ಸದಾಶಿವಯ್ಯ- ಇವರುಗಳೆಲ್ಲ ನನ್ನ ಮೇಲೆ ತುಂಬಾ ಪ್ರಭಾವ ಬೀರಿದ ಅಧ್ಯಾಪಕರುಗಳು. ಉಳಿದವರ ಬಗ್ಗೆ ನಿಧಾನವಾಗಿ ಪರಿಚಯಿಸುವೆ; ಲಕ್ಷ್ಮಣರಾಯರು ಮಾಡುತ್ತಿದ್ದ ಪಾಠದಲ್ಲಿ ಅಬು ಬೆನ್ ಆದಮ್ ಪದ್ಯ, ಹ್ಯಾಜ್‌ಲಿಟ್ ತನ್ನ ಮಗನಿಗೆ ಬರೆದ ಕಾಗದದ ಪಾಠಗಳು ಕಣ್ಣಿಗೆ ಕಟ್ಟಿದಂತಿದೆ. ಮೊದಲು ಇಂಗ್ಲಿಷಿನ ಮೇಷ್ಟರ ಕತೆ:
****
ದೇವರ ಮೇಲೆ ನಾವಿಡುವ ಭಕ್ತಿ ಒತ್ತಟ್ಟಿಗಿರಲಿ, ನಮ್ಮ ನೆರೆಹೊರೆಯವರ ಮೇಲೆ ನಾವು ತೋರುವ ಪ್ರೀತಿ ವಿಶ್ವಾಸಗಳೇ, ದೇವರು ನಮ್ಮನ್ನು ಇಷ್ಟಪಡಲು ಬಳಸುವ ಮಾನದಂಡಗಳು- ಎನ್ನುವ ಮಾತನ್ನು ಧ್ವನಿಸುವ, ಅಬು ಬೆನ್ ಆಡೆಮ್ ಎಂಬವನ ಬಗ್ಗೆ ಹೇಳುವ ಒಂದು ಸ್ವಾರಸ್ಯಕರವಾದ ಕಥನಕವನವಿದೆ; ಅದನ್ನೇ ನಾನು ಈ ಮೊದಲು ಹೇಳಿದ್ದು. ಅಲ್ಪಸ್ವಲ್ಪ ಮಾರ್ಪಾಟುಗಳೊಂದಿಗೆ ಅದರ ಭಾವಾನುವಾದ ಹೀಗಿದೆ:
ಮಲಗಿದ್ದನೊಬ್ಬ ಸಂತ, ಮುಂಜಾವಿನಲಿ ಏನೋ ಸದ್ದು ಆದಂತಾಗಿ,
ಅರೆ ಎಚ್ಚರವಾಗಿ ಎದ್ದ; ಕಣ್ತೆರೆಯೆ, ಕೋಣೆಯಲಿ ಬೆಳ್ಳಂಬೆಳಕು,
ಕಣ್ಣ ಕೋರೈಸಿದೆ, ಮಸುಕು ಮಸುಕಾಗಿ ತೋರುತಿದೆ, ದೂರದಲಿ
ಕುಳಿತಿಹನೊಬ್ಬ ಭವ್ಯ ದಿವ್ಯಪ್ರಭೆಯೆ ಮೂರ್ತಿವೆತ್ತ ದೇವದೂತ.
ಕಂಟ ಕೈಯಲಿ ಹಿಡಿದು, ಓಲೆಗರಿಯೊಂದರ ಮೇಲೆ ಕೊರೆದು
ಏನೋ ಬರೆವ ಸನ್ನಾಹದಲಿ ತೊಡಗಿಹುದ ಕಂಡ ನಮ್ಮ ಸಂತ.
ನೀನಾರು? ಬಂದೆ ನೀನಿಲ್ಲೇಕೆ? ಏನು ನೀ ಬರೆಯುತಿಹೆ?''
ಹೇಳು ಹೇಳೆಂದ ಬಡಬಡಿಸಿ ಬೆರಗು ಗಡಿಬಿಡಿಯ ನಡುವೆ.

ಸಗ್ಗದಿ೦ ಬುವಿಗೈತಂದಿರುವೆ; ಕಣ್ಣಾರೆ ನೋಡ ಬಂದಿರುವೆ-
ದೇವದೇವನ ಯಾರು ಮನಸಾರೆ ಭಜಿಸುವರೋ, ಶರಣರೋ,
ಯಾರವನ ಮೆಚ್ಚುಗೆಯ ಭಕ್ತರೋ, ಅನುರಕ್ತರೋ, ಮುಕ್ತರೋ-
ಅವರ ಹೆಸರಿನ ಪಟ್ಟಿ ನಾ ಬರೆಯುತಿರುವೆ''ನೆಂದ ದೇವದೂತ.

ಹಾಗೇನು? ದೊಡ್ದ ಪಟ್ಟಿಯೇ ಇರಬೇಕು; ಇರಲಿ, ಬಿಡು.
ಕೊಂಚ ಮುಜಗರ ನನಗೆ, ನಾಚಿಕೆ ದಾಕ್ಷಿಣ್ಯ ಸಂಕೋಚ;
ಹೇಗೆ ಕೇಳಲಿ ನಿನ್ನ, ತಪ್ಪಿಲ್ಲ ಎನೆ ಸಲಿಗೆಯಲಿ ಕೇಳುವೆನು-
ನನ್ನ ಹೆಸರೂ ಅಲ್ಲಿ, ಎಲ್ಲೋ ಬುಡದಲಿ ಇದೆ ತಾನೆ ಕೊನೆಗೆ?''

ಇಲ್ಲ, ಎಲ್ಲೂ ಕಾಣುವುದಿಲ್ಲವಲ್ಲ!'' ಇರಲಿ ಬಿಡು, ಆ ಪಟ್ಟಿ ಅತ್ತ ಇಡು;
ತನ್ನ ನೆರೆಹೊರೆ ಪ್ರೀತಿಸುವರ ನಡುವೆ ನನ್ನ ಹೆಸರಿದೆಯಾ ಸ್ವಲ್ಪ ನೋಡು.''

ಉತ್ತರವೇ ಬರಲಿಲ್ಲ, ನೋಡಿದರೆ, ಮಾಯವಾದನು ಬೆಳಕಿನ ದೂತ;
ಕೋಣೆಯಲಿ ಹಬ್ಬಿತು ಕರಿ ನೀರವತೆ, ಎಲ್ಲೆಲ್ಲೂ ಮೌನ ಶಾಂತ.

ಬೆಳಗಾಯ್ತು, ಸಂತನು ಎದ್ದ; ನೋಡಿದರೆ, ಅಲ್ಲಿ ಓಲೆಗರಿ ಬಿದ್ದಿತ್ತು;
ಕಣ್ಣಾಡಿಸಿದ, ಅಲ್ಲಿತ್ತು ಪ್ರಭು ಮೆಚ್ಚಿ ಹರಸಿದ ಜನರ ಚಿಕ್ಕ ಪಟ್ಟಿಯಲಿ,
ಬೆರಳೆಣಿಕೆಯಷ್ಟು ಸಾಲುಗಳು, ಸಂತನ ಹೆಸರೋ ಮೇಲೆ ಮೊಟ್ಟ ಮೊದಲು!
** ** **
ನಮ್ಮ ಇಂಗ್ಲಿಷ್ ಮೇಷ್ಟರು ಲಕ್ಷ್ಮಣರಾವ್ ಬಗ್ಗೆ ಹೇಳುತ್ತಿದ್ದೆ. ಇಂಗ್ಲಿಷ್ ವ್ಯಾಕರಣವನ್ನು ನಮಗೆ ಹೇಳಿಕೊಟ್ಟ ಪ್ರಾತ:ಸ್ಮರಣಿಯರು ಅವರು. ವ್ಯಾಕರಣ, ವಾಕ್ಯರಚನೆ, ವಾಕ್ಯವಿಶ್ಲೇಷಣೆ, ಪ್ರಬಂಧರಚನೆ, ಪತ್ರಲೇಖನಗಳು ಅವರ ಬೋಧನೆಯಲ್ಲಿ ಮಿಳಿತಗೊಂಡಿದ್ದ ವಿಷಯ. ಅವರಿಗೆ ರೆನ್ ಎಂಡ್ ಮಾರ್ಟಿನ್ ಗ್ರಾಮರ್ ಪ್ರಿಯವಾದ ಗ್ರಂಥ. ಆದರೆ, ಏಕೋ ಆ ಬಾರಿ ನಮಗೆ ಬೇರೆ ಯಾರದೋ ಇನ್ನೊಬ್ಬ ಗ್ರಂಥಕರ್ತರ ಪುಸ್ತಕವನ್ನ ಪಠ್ಯವಾಗಿ ಇಟ್ಟಿದ್ದರು. ಪಟ್ಟು ಬಿಡದ ಜಟ್ಟಿ ಹೆಜ್ಜೆ ಹೆಜ್ಜೆಗೂ ತಮ್ಮ ಪ್ರಿಯವಾದ ಆ ಗ್ರಂಥವನ್ನೇ ಉಲ್ಲೇಖಿಸಿ ತೃಪ್ತಿಪಟ್ಟುಕೊಳ್ಳುತ್ತಿದ್ದರು. ಅಂತೂ ವ್ಯಾಕರಣವೆ೦ಬ ಪ್ರತ್ಯೇಕ ವಿಷಯವನ್ನಂತೂ ವಾರಕ್ಕೆ ಎರಡು ಮೂರು ಬಾರಿ ಹೇಳಿಕೊಡುತ್ತಿದ್ದರು. ಇದೇಕೆ ಇಷ್ಟು ವಿವರವೆಂದರೆ, ಈಗಿನ ಪಠ್ಯಕ್ರಮದಲ್ಲಿ ಹಾಗೆ ವ್ಯಾಕರಣ'ವೆಂದೇ ಬೇರೆ ಬೋಧನ ವಿಷಯವಿಲ್ಲ; ಇಂಗ್ಲಿಷಿನ ಪಠ್ಯದ ಪಾಠಗಳ ಅನುಬಂಧವಾಗಿಯೇ ಈ ವ್ಯಾಕರಣದ ವಿಷಯಗಳನ್ನ ಸೇರಿಸಿಬಿಟ್ಟಿದ್ದಾರೆ. ಕೆಲವು ಅನುಕೂಲಗಳನ್ನ ಮನಸ್ಸಿನಲ್ಲಿಟ್ಟುಕೊಂಡು ಹೀಗೆ ಮಾಡಿದ್ದಾರೆಂದರೂ, ಸಾಧಕ ಬಾಧಕಗಳೆಲ್ಲವನ್ನೂ ಇಟ್ಟು ತಕ್ಕಡಿಯಲ್ಲಿ ತೂಗಿದಾಗ ಹಿಂದಿನ ಕ್ರಮವೇ ಜಗ್ಗಿ ನೆಲಮುಟ್ಟೀತು.

ಕನ್ನಡದಲ್ಲೂ ಅಷ್ಟೆ, ಸಂಸ್ಕೃತದಲ್ಲೂ ಅಷ್ಟೆ. ಅದೇ ಕ್ರಮವನ್ನು ಅನುಸರಿಸುತ್ತಿದ್ದಾರೆ. ಸದ್ಯಕ್ಕೆ ಕನ್ನಡದ ಮಾತನಾಡೋಣ: ಪ್ರತಿ ಪಾಠಗಳ ಅನುಬಂಧವಾಗಿ ಕೊಟ್ಟಿರುವ ವ್ಯಾಕರಣಾಂಶಗಳು ಚೆನ್ನಾಗಿಯೇನೋ ಇವೆ; ವಿದ್ಯಾರ್ಥಿಗೆ ಸಾಕು ಎಂದೆನಿಸುವುದಿಲ್ಲ, ನನಗೆ. ತೀನಂಶ್ರೀ ಅವರ ಹೆಸರಾಂತ ಮಧ್ಯಮವ್ಯಾಕರಣ'ವನ್ನು ಓದಿ ಕನ್ನಡವನ್ನು ಕಲಿತ ನಮ್ಮಂಥ ಮಂದಿಗೆ ಆಮೇಲೆ ಬಂದ, ಈಗಲೂ ಬರುತ್ತಿರುವ ಯಾವ ಕನ್ನಡ ವ್ಯಾಕರಣವೂ ಖಚಿತತೆಯಲ್ಲಿ ವಿಷಯನಿರೂಪಣೆಯಲ್ಲಿ ಸಮಗ್ರತೆಯಲ್ಲಿ ಆ ಮಟ್ಟದ ಗುಣ ಮುಟ್ಟಿದೆಯೆನಿಸದು. ನಾಗವರ್ಮನ ಕಾವ್ಯಾವಲೋಕನ', ಕೇಶಿರಾಜನ ಶಬ್ದಮಣಿದರ್ಪಣ', ಕನ್ನಡ ಕೈಪಿಡಿಯಲ್ಲಿ ಬಿಎಂಶ್ರೀ ಅವರ ಹಳಗನ್ನಡವ್ಯಾಕರಣ'-ಮು೦ತಾದವು ಆಮೆಲೆ ನಮಗೆ ಅಭ್ಯಾಸಕ್ಕೆ ಬೇಕಾಯ್ತು, ನಿಜ. ಮೊದಲು ಹೊಸಗನ್ನಡದ ವೈಶಿಷ್ಟ್ಯ ವೈಖರಿ, ಅದರ ಮೇಲಣ ಮಿಡಿತ, ತುಡಿತ, ಹಿಡಿತಕ್ಕೆ ಬೆಂಬಲವೀಯುವ ಒಂದು ಪ್ರವೇಶಿಕೆಯಾದ ವ್ಯಾಕರಣ ಬೆಳೆಯುವವರಿಗೆ ಅವಶ್ಯಕವಾಗಿತ್ತು. ಸುಭಾಷಿತ ರತ್ನಭಾ೦ಡಾಗರದಲ್ಲಿ (42:2) ವ್ಯಾಕರಣದ ಬಗ್ಗೆ ಒಂದು ಚೆನ್ನುಡಿ ಹೀಗೆ ಬರುತ್ತದೆ: ಯದ್ಯಪಿ ಬಹು ನ ಅಧೀಷೇ, ತಥಾಪಿ ಪಠ, ಪುತ್ರ, ವ್ಯಾಕರಣ೦| ಸ್ವಜನ ಶ್ವಜನೋ ಮಾ ಭೂತ್, ಸಕಲ೦ ಶಕಲ೦, ಸಕೃತ್ ಶಕೃತ್|| ಅದರ ಕನ್ನಡ ಭಾವ ಹೀಗಿದೆ:

ಪದಗಳನು ಸರಿಯಾಗಿ ಉಚ್ಚರಿಸಿ ಹೇಳುವಿರಾ?

ಏನು ಕಲಿಯದಿದ್ದರೂ ಬೇಡ ಎಲೋ ಮಗನೆ,
ಸರಿಯಾಗಿ ಪದಗಳನು ಉಚ್ಚರಿಸಿ ಹೇಳುವುದ
ಮೊದಲು ಕಲಿ, ಸ-ಶ-ಷಗಳ ಭೇದ ತಿಳಿ;
ಅ-ಕಾರ ಹ-ಕಾರಗಳ ಬದಲಾಯಿಸದೆ ನುಡಿ;
ಹೆಚ್ಚುಸಿರು ಬಿಡುವ ಕಡೆ ಕೊ೦ಚವೇ ಬಿಡಬೇಡ-
ಪ್ರಾಣ ಅಲ್ಪವಾಗಿಸಬೇಡ ಮಹತ್ತಾಗಿರಬೇಕಾದ ಕಡೆ.
ಗೊತ್ತೆ? ನಮ್ಮ ಜನ ಸ್ವಜನರಾಗುವರು, ಮತ್ತೆ
ಅವರೇನೆ ನಾಯಿಗಳ ಹಿ೦ಡು ಶ್ವಜನರೆ೦ದಾಗ;
ಸಕೃತ್ ಎ೦ದರೆ ಒಮ್ಮೆ, ಶಕೃತ್ ಎ೦ದರೆ ಅಮೇಧ್ಯ;
ಇಡೀ ಎಲ್ಲಕ್ಕೆ ಸಕಲ ವೆನ್ನುವರು, ಬಲ್ಲವರು;
ಶಕಲ ವೆ೦ದರೆ ತು೦ಡು- ತಪ್ಪಾಡದಿರು ಹುಷಾರು!

ಅಲ್ಪಪ್ರಾಣ ಮಹಾಪ್ರಾಣಗಳನ್ನು ಸರಿಯಾಗಿ ಉಚ್ಚರಿಸುವುದರ ಜೊತೆಗೆ ವ್ಯಾಕರಣಬದ್ಧವಾಗಿ ಮಾತನಾಡಬೇಕು ಎ೦ಬ ಗುರಿ ಹಿ೦ದಿನ ಕಾಲದ ಕಲಿತವರಲ್ಲಿ ಇತ್ತು. ಇದಕ್ಕೆ ಉದಾಹರಣೆಯಾಗಿ ಕೆಲವು ಕತೆಗಳು ಇವೆ. ಊಟಕ್ಕೆ ಉಳಿತ ಗ೦ಡ ಮೊಸರನ್ನು ತೆಗೆದುಕೊ೦ಡು ಬಾ-ಎ೦ದು ಹೇಳಲು ಹೊರಟವನು, ದಧಿಮಾನಯ'ಎ೦ದು ತಪ್ಪಾಗಿ ಹೇಳಿದಾಗ ಹೆ೦ಡತಿ ಮೊಸರನ್ನು ತರಲಿಲ್ಲವ೦ತೆ. ಕಾರಣ ದಧಿ ಆನಯ'(ಮೊಸರನ್ನು ತಾ) ಮತ್ತು ದಧಿ ಮಾ ಆನಯ'(ಮೊಸರನ್ನು ತರಬೇಡ) -ಇವೆರಡರ ವ್ಯತ್ಯಾಸವನ್ನ ಅವಳು ತಿಳಿದಿದ್ದಳಂತೆ.
** **
ಇರಲಿ, ಹಕ್ಕಿ ಎತ್ತಲೋ ಹಾರಿತು. ಮತ್ತೆ ಮೇಷ್ಟರ ಮನೆಗೆ ಬರೋಣ. ಪ್ರತಿ ತಿಂಗಳೂ ಮೊದಲ ಭಾನುವಾರ, ಮೇಷ್ಟರಿಗೆ ಅವರ ಮನೆಯಲ್ಲಿ ಗುರುಪತ್ನಿಯ ಅಮೃತಹಸ್ತದಿಂದ ಒಂದು ಖಾಸಗೀ ಅಭ್ಯಂಜನದ ಕಾರ್ಯಕ್ರಮ. ಆ ದಿನ ಮನೆಯ ಇಬ್ಬರು ಹೆಣ್ಣು ಮಕ್ಕಳು ಮತ್ತು ಕಿರಿಯ ಮಗನ ಜೊತೆ ನನ್ನನ್ನು ಅವರ ಖರ್ಚಿನಲ್ಲಿ ಮನೆ ಹತ್ತಿರದ ಥಿಯೇಟರ್‌ನ ಮಧ್ಯಾಹ್ನದ ಮ್ಯಾಟಿನೀ ಸಿನೆಮಾಕ್ಕೆ ಕಳಿಸುತ್ತಿದ್ದರು. ಹೀಗೆ ಕೈಯಲ್ಲಿ ಕಾಸಿಲ್ಲದಿದ್ದರೂ ಹಲವಾರು ಕನ್ನಡ/ಹಿಂದೀ ಸಿನಿಮಾ ನೋಡಿಬರಲು ಅದೃಷ್ಟ ಪಡೆದಿದ್ದೆ. ಕನ್ನಡದವೇ ಹೆಚ್ಚು. ಆಗತಾನೇ ಬಿಡುಗಡೆಯಾಗಿದ್ದ ಹೊಸಹೊಸ ಚಿತ್ರಗಳನ್ನು ನೋಡಿಬರಲು ನಸೀಬು ಖುಲಾಯಿಸಿದ್ದು ಆವಾಗಲೇ. ಬೇಗ, ಬೇಗ ಬದಲಾಯಿಸಬೇಡಿ; ತಿಂಗಳಿಗೊಮ್ಮೆ ಚಿತ್ರ ಬದಲಾಯಿಸಿ, ಸಾಕು- ಎಂಬ ನನ್ನ ಅಹವಾಲು ದುರ್ಗಿಗುಡಿಯ ವಿನಾಯಕ ಟಾಕೀಸ್‌ನವರ ಕಿವಿಯ ಮೇಲೆ ಹೇಗೋ ಬಿದ್ದಿರಲು ಸಾಕು. ನಾಟಕದ ಹುಚ್ಚಿನ ಒ೦ದು ಕಪಿಗೆ ಈ ಬಿಟ್ಟಿ ಸಿನಿಮಾ ಅವಕಾಶ ಆಗಾಗ್ಗೆ ಕಳ್ಳ ಭಟ್ಟಿ ಕುಡಿಸಿದಂತೆಯೂ ಆಗಿತ್ತು.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X