• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಹೆಸರಲ್ಲೇನಿದೆ ?ವಾಲ್ಮೀಕಿ ರಾಮಾಯಣದ ನೀತಿಕತೆ

By Staff
|

Anecdotes from Valmiki Ramayanaರಾಮಾಯಣ ಪೂಜ್ಯವಾದ ಒಂದು ಗ್ರಂಥ. ಆದಿಕವಿಯ ಒಂದು ಅಪ್ರತಿಮ, ಉತ್ಕೃಷ್ಟ ಸಂಸ್ಕೃತ ಮಹಾಕಾವ್ಯವಾಗಿ ಅದನ್ನು ಅಧ್ಯಯನ ಮಾಡುವುದರಲ್ಲಿ ನನಗೆ ಹೆಚ್ಚು ಆಸಕ್ತಿ; ಈ ಹಿನ್ನೆಲೆಯಲ್ಲಿ ಈ ಲೇಖನ.

ಶಿಕಾರಿಪುರ ಹರಿಹರೇಶ್ವರ, ಸರಸ್ವತೀಪುರಂ, ಮೈಸೂರು

ಸೀತಾಪಹರಣದ ಕಥೆಯನ್ನು ನಾವೆಲ್ಲ ಬಲ್ಲೆವು; ಈ ಸೀತಾಪಹರಣದ ಪ್ರಸಂಗವೇ ರಾಮಾಯಣದ ಕೇಂದ್ರಬಿಂದು ಎನುವುದು ನಿಮಗೆ ಗೊತ್ತಾ ? ಹೌದು, 'ತನ್ನ ಹೆಂಡತಿ ಸೀತೆಯೊಡನೆ ಶ್ರೀರಾಮಚಂದ್ರ ಕಾಡಿಗೆ ಹೋಗಿದ್ದ; ಅಲ್ಲಿ ಸೀತೆಯನ್ನು ರಾವಣ ಕದ್ದೊಯ್ದ"- ಇಷ್ಟು ಮಾತ್ರ ಒಂದು ಕಾಲದಲ್ಲಿ ಜನಜನಿತವಾಗಿದ್ದ ಜಾನಪದ ಕತೆ. ಅದಕ್ಕೆ ಚಾರಿತ್ರಿಕಾಂಶಗಳ ತೆಕ್ಕೆ , ಪಾತ್ರಪೋಷಣೆಯ ಪುಷ್ಟಿ ತುಷ್ಟಿ, ಕಾವ್ಯಾಲಂಕಾರಗಳ ರೆಕ್ಕೆ ಪುಕ್ಕ ಬಂದದ್ದು ಆಮೇಲೆ.

ತಮಸಾ ನದಿಯಲ್ಲಿ ಸ್ನಾನ, ಪ್ರಾತರಾಹ್ನಿಕಗಳನ್ನು ಮುಗಿಸಿಕೊಂಡು ಆಶ್ರಮಕ್ಕೆ ಹಿ೦ತಿರುಗುತ್ತಿದ್ದಾಗ ಮಹರ್ಷಿ ವಾಲ್ಮೀಕಿಗಳೆದುರಿಗೆ ಒಂದು ಘಟನೆ ನಡೆಯಿತು: ಮರದ ಮೇಲೆ ವಿಹರಿಸುತ್ತಿದ್ದ ಕ್ರೌಂಚಮಿಥುನದಲ್ಲಿ ಒಂದನ್ನು ಯಾರೋ ಒಬ್ಬ ಬೇಡ ಬಾಣಬಿಟ್ಟು ಕೊಂದ. ಗೋಳಾಡುತ್ತಿದ್ದ ಜೊತೆಹಕ್ಕಿಯ ಹೃದಯವಿದ್ರಾವಕ ಅಳಲು ಋಷಿಯ ಮೃದುಎದೆಯನ್ನೂ ಕುಕ್ಕಿತು. ವಾಲ್ಮೀಕಿ ಬೇಡನನ್ನು ಶಪಿಸಿ, ಶೋಕತಪ್ತರಾಗಿ ಉದ್ವಿಗ್ನ ಮನಸ್ಕನಾಗಿ ಆಶ್ರಮಕ್ಕೆ ಬಂದರು. ಅಲ್ಲಿಗೆ ಆಗಲೇ ಅತಿಥಿಯಾಗಿ ಬಂದಿದ್ದ ದೇವರ್ಷಿ ನಾರದರು ವಾಲ್ಮೀಕಿಗಳಿಗೆ ಸಮಾಧಾನ ಮಾಡಿದ ನಂತರ, “ನಿನ್ನ ಮನಸ್ಸಮಾಧಾನಕ್ಕೋಸ್ಕರ ಏನಾದರೊಂದು ಸೃಜನಾತ್ಮಕ ಹವ್ಯಾಸದಲ್ಲಿ ನಿನ್ನನ್ನು ತೊಡಗಿಸಿಕೋ"- ಸಲಹೆ ಮಾಡಿದರು.

ಮೇಲೆ ಹೇಳಿದ ಅಪಹರಣ ಕತೆಯ ಎಳೆಯನ್ನಷ್ಟೇ ಹೇಳಿದರು; ಜೊತೆಗೆ, “ನೋಡು, ಈ ವಿಷಯವನ್ನು ಇಟ್ಟುಕೊಂಡು, ಇದರ ಹಿಂದೆ ನಡೆದಿರಬಹುದಾದ ಪೂರ್ವಕಥೆ (ಫ್ಲ್ಯಾಷ್‌ಬ್ಯಾಕ್), ಮುಂದೆ ನಡೆದಿರಲೇಬೇಕಾದ ಉತ್ತರಭಾಗ -ಎಲ್ಲವನ್ನೂ ಒಂದು ಕಾವ್ಯವಾಗಿ, ನಿನ್ನ ಪ್ರತಿಭೆಗೆ ಅನುಗುಣವಾಗಿ ರಚಿಸು. ಭೂಮಿಯ ಮೇಲೆ ಗಿರಿಗಳು ನದಿಗಳು, ಆಗಸದಲ್ಲಿ ಸೂರ್ಯಚಂದ್ರರು ಇರುವವರೆಗೂ ಅದು ಉಳಿಯಲಿ!"- ಎಂದು ಹಾರೈಸಿ ಹೋದರು. (ಈ ಊಹೆಗೆ ಆಧಾರ ಶ್ರೀಮದ್‌ವಾಲ್ಮೀಕಿ ರಾಮಾಯಣದ ಬಾಲಕಾಂಡದ ಮೊದಲ ಸರ್ಗದಲ್ಲೇ ಇದೆ, ಆದರೆ, ಸ್ವಲ್ಪ ಬದಲಾವಣೆಗಳೊಂದಿಗೆ: ಅಲ್ಲಿ ವಾಲ್ಮೀಕಿಗೆ ಕಾವ್ಯ ಬರೆಯಲು ಬ್ರಹ್ಮ ಪ್ರಚೋದಿಸುತ್ತಾನೆ, ಮೊದಲಿಗೆ ತಪಸ್‌ಸ್ವಾಧ್ಯಾಯ ನಿರತ ಮುನಿಪುಂಗವ ನಾರದರು ಕಥಾಭಿತ್ತಿಯನ್ನು ಸಿಂಹಾವಲೋಕನ ಮಾಡಿಸುತ್ತಾರೆ.)

ರಾಜಾ ಶ್ರೀರಾಮಚಂದ್ರ ತನ್ನ ಪಟ್ಟದ ಯುವರಾಣಿ ಸೀತೆಯೊಡನೆ ಉದ್ಯಾನವಿಹಾರಕ್ಕೆ ಹೋಗಿದ್ದಾಗ ಎಂದೋ, ಅಥವಾ ಇನ್ನಾವುದೋ ಬೇರೆ ಸನ್ನಿವೇಶಗಳನ್ನು ಕಲ್ಪಿಸಿಕೊಂಡು ಸೀತಾಪಹರಣಕ್ಕೆ ಒಂದು ಪೂರ್ವಕತೆ ಬರೆಯಬಹುದಿತ್ತು; ನಮ್ಮ ಪುಣ್ಯ, ವಾಲ್ಮೀಕಿ ಹಾಗೆ ಮಾಡಲಿಲ್ಲ.

ಯಾರವನು? ಎಲ್ಲಿಹನು? ಲೋಕ ಮೆಚ್ಚುವ ಮಾರ,

ವೀರಾಧಿವೀರ ದಿಟ್ಟೆದೆಯ ಗುಣವಂತ ಹಮ್ಮೀರ?

ಧರ್ಮಜ್ಞ ಕೃತಜ್ಞ, ಸತ್ಯವೇ ಮೂರ್ತಿವೆತ್ತ ಮಹಾತ್ಮ,

ಇಟ್ಟ ನಡೆ ಬಿಟ್ಟಳುಕಿ ಸರಿಯದಿಹ ಒಬ್ಬ ಧೀರ ಶೂರ?

(ಕೋ ನು ಅಸ್ಮಿನ್ ಸಾಂಪ್ರತಂ ಲೋಕೇ, ಗುಣವಾನ್ ಕಶ್ ಚ ವೀರ್ಯವಾನ್|

ಧರ್ಮಜ್ಞಶ್ ಚ ಕೃತಜ್ಞಶ್ ಚ ಸತ್ಯವಾಕ್ಯೋ ದೃಢವ್ರತ: ||೧:೧:೨||)

-ಎಂದು ಪ್ರಶ್ನಿಸಿಕೊಳ್ಳುತ್ತಿದ್ದ, ಯೋಚಿಸುತ್ತಿದ್ದ, ಚಿತ್ರಿಸಿಕೊಳ್ಳುತ್ತಿದ್ದ.

ವಾಲ್ಮೀಕಿಯ ನಂತರ ಬಂದ ಅನೇಕ ಚಿಕ್ಕ-ದೊಡ್ಡ ಕವಿಗಳು, ತಮ್ಮ ಕಲ್ಪನೆಯ ಕುದುರೆಯನ್ನೇರಿ, ಈ ಚೆಲುವೆಯ ಕಳವಿನ ಪ್ರಸಂಗದ ಹಿಂದಿನ ಮುಂದಿನ ಕತೆಗಳಲ್ಲಿ ಅಲ್ಲಲ್ಲಿ ತಾವು ಮನಗಂಡ ಬದಲಾವಣೆಗಳನ್ನ ನಮಗೆ ಕಾಣಿಸಲು ಬಹಳ ಪ್ರಯತ್ನಿಸಿದ್ದಾರೆ. ಅದ್ಭುತ ರಾಮಾಯಣ, ಆಧ್ಯಾತ್ಮ ರಾಮಾಯಣ, ಆನಂದ ರಾಮಾಯಣ, ಜೈನ ರಾಮಾಯಣ, ಜಾತಕಕಥೆಗಳ ಬೌದ್ಧ ರಾಮಾಯಣ, ಮಹಾಭಾರತದ ರಾಮೋಪಾಖ್ಯಾನ, ಬೇರೆ ಭಾಷೆಗಳಲ್ಲಿನ ಪುನರವಲೋಕನ- ಅಬ್ಬಾ, ರಾಮಾಯಣಗಳ ಗಡಣದ ಈ ಭಾರದಲಿ ಫಣಿರಾಯ ತಿಣುಕುತ್ತಿದ್ದಾನೆಂದು ಕುಮಾರವ್ಯಾಸ ಹೇಳಿದ್ದು ಈ ಕಾರಣಕ್ಕೇ. ಈ ಹೊತ್ತು ಇನ್ನೊಂದೆರಡು ಔನ್ಸ್/ಗ್ರ್ಯಾಂ ಭಾರ ಹೆಚ್ಚಾದರೆ, ಭೂಮಿ ತನ್ನ ಕಕ್ಷೆ ತಪ್ಪಿ ಹೋದೀತೆಂಬ ಆತಂಕ ಬೇಡ! ಮುಂದೆ ಓದಿ.

***

ಸೀತೆಯನ್ನು ಅಪಹರಿಸಿಕೊಂಡು ಬಂದ ರಾವಣ, ಅವಳ ಮೇಲೆ ಬಲಾತ್ಕಾರ ಮಾಡಲಿಲ್ಲ. ಅವನಿಗೆ ಗೊತ್ತಿತ್ತು: ತಾನಾಗಿ ಒಲಿದು ಬಂದ ವನಿತೆಯೊಡನೆ ಮಾತ್ರ, ಸ್ಫೂರ್ತಿ ಮೂಡಿಸಿದ ಕವಿತೆಯೊಡನಾಟದಂತೆ, ಸರಸ ಸಾಧ್ಯ. ಒಲವಿಲ್ಲದಿರೆ ಒಮ್ಮುಖದ ನಡೆಗಳೆಲ್ಲ ಬರೀ ನೀರಸ- ಅಂತ. ರಾವಣನಿಗೆ ಆಪ್ತರಾದವರು ಅವನಿಗೆ ಎಷ್ಟೆಷ್ಟೋ ಬುದ್ಧಿ ಹೇಳಲು ಪ್ರಯತ್ನಿಸಿದರು.

“ಸೀತೆ ಸಾಧು ವ್ಯಕ್ತಿ. ಯಾರಿಗೂ, ನಿನಗೂ ತೊಂದರೆ ಕೊಟ್ಟವಳಲ್ಲ. ತನಗೆ ಇಷ್ಟಬಂದವನನ್ನ ಆರಿಸಿಕೊಂಡು, ಇಷ್ಟಬಂದ ರೀತಿ ಬದುಕಲಿಚ್ಚಿಸಿದವಳು. ಆ ಸೀತೆಯನ್ನ ನೀನೇಕೆ ಬಯಸುವೆ? ನಿನ್ನನ್ನೇ ಮೆಚ್ಚಿ ಮಣಿಯುವ, ನಿನ್ನ ಮನ ತಣಿಸಲೆಳಸುವ ಬೇರೆ ಎಷ್ಟೊಂದು ಕನ್ಯಾಮಣಿಯರಿಲ್ಲವೇ? ಈ ಸೀತೆಯೇ ಏಕೆ?"- ಎಂದೆಲ್ಲಾ ಹಿತವಚನ ನೀಡಿದರು. ಅವನಿಗದು ಹಿಡಿಸಲಿಲ್ಲ.

'ಸೀತೆ"ಯ ಹೆಸರೇ ಅವನ ಕನಸು ನನಸು ಮನಸಿನಲ್ಲೂ ಸುಳಿದಾಡುತ್ತಿತ್ತು. ಮಲಗಿದರೆ, ಎಚ್ಚರವಾದರೆ ಅದೇ ಹೆಸರು- 'ಸೀತೆ"ಯದೇ ಜಪ, ಅದೇ ಹೆಸರಿನದೇ ಧ್ಯಾನ. ಬೇರೆ ಯಾರೂ, ಯಾವ ಹೆಸರೂ ಅವನಿಗೆ ರುಚಿಸದು. ಅಲ್ಲಿ ಹೆಂಡತಿಯನ್ನು ಕಳೆದುಕೊಂಡ ಗಂಡ ಶ್ರೀರಾಮ, ಕಾಡಿನಲ್ಲಿ ಅಲೆಯುತ್ತ, ಗಿಡ ಮರ ಬಳ್ಳಿಗಳಲ್ಲೂ ಸೀತೆಯನ್ನೇ ಕಾಣುತ್ತಾ, ಜಾನಕಿ ವೈದೇಹಿ, ಮೈಥಿಲಿ- ಎನ್ನುತ್ತ, ಸೀತೆಯ 'ಹೆಸರ"ನ್ನೇ ಕೂಗಿ ಕರೆಯುತ್ತ ಅಲೆದಾಡುತ್ತಿದ್ದಾನೆ; ಇಲ್ಲಿ ಅವಳನ್ನು ಅಪಹರಿಸಿದ ಪ್ರೇಮಿಯೂ ಅವಳು ಒಲಿದಾಳೇ- ಎಂದು ಅವಳ 'ಹೆಸರ"ನ್ನ ಹಾಡಿಕೊಳ್ಳುತ್ತಿದ್ದಾನೆ; ಕೂಡಲು ಬೇಡಿಕೊಳ್ಳುತ್ತಿದ್ದಾನೆ, ಕಾಡಿಕೊಳ್ಳುತ್ತಿದ್ದಾನೆ.

ವಿಭೀಷಣ ಬಂದು ಅರಮನೆಯಲ್ಲಿ ರಾವಣನನ್ನು ಕಂಡ. 'ಅಣ್ಣಾ, ಸೀತೆಯ ಯೋಚನೆಯನ್ನು ಬಿಡು. ಅವಳು ಬೇರೆಯವರ ಸ್ವತ್ತು. 'ಸೀತೆ"ಯೆಂಬ ಹೆಸರನ್ನೇ ನೀನು ಎತ್ತುವುದು ಉಚಿತವಲ್ಲ. ನಾನು ಕೇಳಿದ್ದೇನೆ: ಸೀತೆ ತನ್ನ ತಂದೆ ತಾಯಿಗಳಿಗೆ ಅಚ್ಚು ಮೆಚ್ಚಿನ ಮಗಳು. ಏನೋ ಯಜ್ಞಕ್ಕಾಗಿ -ಯಾವುದೋ ಜ್ಞಾನಯಜ್ಞವೇ ಇರಬೇಕು- ನೆಲ ಬಗೆಯುತ್ತಿದ್ದಾಗ ಸಿಕ್ಕವಳು ಈ 'ಸೀತೆ". ಹೆಸರಿಗೆ ತಕ್ಕಂತೆ, ನೇಗಿಲು ಗೀಚಿದ ಸಾಲಿನಷ್ಟು ತೆಳ್ಳಗೆ ಬೆಳ್ಳಗೆ ಬಳುಕುವ ಶರೀರದವಳೇ ಆಗಿ ಉಳಿದು, ಸಾಕಿದವರ ಮನಸ್ಸನ್ನೂ ಮನೆಯನ್ನೂ ತುಂಬಿ ನಲಿಸಿದವಳು. ಆ ಹೆಸರೇ ಅವಳನ್ನು ಹೊತ್ತು ಬೆಳಸಿದವರ ಜೀವದುಸಿರು. ಯಾರು ಯಾರು ಈ 'ಸೀತೆ"ಯನ್ನು ತಮ್ಮದೇ ಮಗುವಿನಂತೆ ಪಾಲನೆ ಪೋಷಣೆ ಮಾಡಿ ಬೆಳೆಸಿದರೋ, ತಮ್ಮ ಕಣ್ಣ ಪಾಪೆಯಂತೆ ನೋಡಿಕೊಂಡರೋ, ಅವರೆಲ್ಲರ ಮನಸ್ಸನ್ನ ನೋಯಿಸಬೇಡ; ಶಾಪಕ್ಕೆ ಗುರಿಯಾಗಬೇಡ. ಇನ್ನು ಸೀತೆಯನ್ನು ಕೈಹಿಡಿದವ. ಅವನ ನೋವಿನ, ತಾಪದ, ಕೋಪದ ದಳ್ಳುರಿಗೆ ನೀನು ಸಿಕ್ಕು ಬೂದಿಯಾಗಬೇಡ. ಕ್ಷಮೆ ಕೇಳು, ನಿನ್ನದಲ್ಲದ್ದನ್ನ ತನ್ನದೆಂದುಕೊಳ್ಳಬೇಡ. ಹಿ೦ತಿರುಗಿಸಿಬಿಡು. ತಪ್ಪು ಮಾಡದವರು ಯಾರಿದ್ದಾರು (ನ ಕಶ್ಚಿನ್ ನ ಅಪರಾಧ್ಯತಿ)?- ಎಂದು ಔದಾರ್ಯದಿಂದ ಅವಳೂ ಮನ್ನಿಸಿಯಾಳು. ಇದು ಉಭಯತಾಪಿ ಕ್ಷೇಮ."

“ಹೌದು, ಮಹಾಸ್ವಾಮಿ. 'ಸೀತೆ" ಎಂಬ ಹೆಸರು ಪವಿತ್ರವಾದದ್ದು. ಋಗ್ವೇದದಲ್ಲಿ ನಾಲ್ಕನೆ ಮ೦ಡಲದಲ್ಲಿಯೇ ಅದು ಉಲ್ಲೇಖಿತವಾಗಿದೆ; ಆದರೂ.. .."- ಅಲ್ಲೇ ಇದ್ದ ಒಬ್ಬ ಕುಲಪುರೋಹಿತರು ದನಿಗೂಡಿಸಿದರು. ರಾಕ್ಷಸನಾಗಿದ್ದರೇನಂತೆ, 'ರಾಮೋ ಸ್ವಸ್ತಿ" ಎನ್ನುವವರಂತೆ, 'ರಾವಣೋ ಸ್ವಸ್ತಿ" ಎನ್ನುವವರೂ ಅರಮನೆಯ ಊಳಿಗದಲ್ಲಿ ಇದ್ದೇ ಇರುತ್ತಾರಲ್ಲವೇ?

“ನನಗೆ ಗೊತ್ತು," ರಾವಣನೆಂದ, “ನನ್ನ ಹೆಸರು ಋಗ್ವೇದದಲ್ಲಿ ಎಲ್ಲೂ ಇಲ್ಲ, ನನ್ನ ಹೆಸರಿನವರಾರೂ ಆ ಕಾಲದಲ್ಲಿ ಇರಲಿಲ್ಲ; ಅದೂ ನಿಮಗೆ ಗೊತ್ತೆ?"

“ಹೆಸರೂ.. .."

“ಹೌದು ಹೆಸರು. ಅಭಿಧಾನ, ಅಂಕಿತ ಮುಖ್ಯವಲ್ಲ- ಎನ್ನಬೇಡಿ. ಋಗ್ವೇದದಲ್ಲೇ 'ನಾಮ" ಎಂಬ ಪದ ಇಪ್ಪತ್ತೇಳು ಸಲ ಬಂದಿದೆ; 'ನಾಮಾನಿ" ಹದಿಮೂರು ಬಾರಿ, 'ನಾಮಭಿ:" ಏಳು ಪಟ್ಟು, 'ನಾಮ್ನಾ" ಎರಡು ಕಡೆ, 'ನಾಮಧೇಯ೦" ಒಮ್ಮೆ- ಬಂದಿದೆ. ಇದು ಗೊತ್ತೆ?"- ವೇದಗಳನ್ನು ಅರೆದು ಕುಡಿದಿದ್ದವನನ್ನ ಶಾಸ್ತ್ರಾರ್ಥದಲ್ಲಿ ಸೋಲಿಸಲಾದೀತೇ?

ಮುಂದುವರಿದು, ರಾವಣ ಹೇಳುತ್ತಾನೆ: “ಇರಲಿ, ಆದದ್ದು ಆಗಿ ಹೋಯಿತು. ಈಗ ಚಿಂತಿಸಿ ಫಲವಿಲ್ಲ. ನಾನೊಬ್ಬ ಯೋಧ; ಹಿಂದಕ್ಕೆ ಹೆಜ್ಜೆ ಇಟ್ಟು ನನಗೆ ಅಭ್ಯಾಸವಿಲ್ಲ. ಅವಳ ಆ ಗಂಡ, ಏನವನ ಹೆಸರು? ವಿಭೀಷಣ, ಅವ ನೀನು ಹೇಳುವಷ್ಟು ಪರಾಕ್ರಮಿಯೇ ಆಗಿದ್ದರೆ, ಅವನೇ ಬಂದು, ನನ್ನೊಡನೆ ಕಾದು, ಗೆಲಿದು, ಅವಳನ್ನ ಬಿಡಿಸಿಕೊಂಡು ಹೋಗಲಿ. ಹಾಗಾಗದಿದ್ದರೆ ಅವಳು ನನ್ನವಳೇ!"

“ಸೀತೆಯ ಬಗ್ಗೆ ನಮಗೆ ಗೌರವ ಇರುವುದೇನೋ ಎಲ್ಲರಿಗೂ ಗೊತ್ತಿರುವ ವಿಷಯವೇ. ಆದರೆ, ಮಹಾರಾಜರು ಹೇಳುವುದೂ ಸರಿಯೇ. ಬೇಕಾದರೆ, ಹೊಡೆದಾಡಿ ಬಿಡಿಸಿಕೊಳ್ಳಲಿ, ಯಾರು ಬೇಡ ಅಂತ ತಡೆಯುತ್ತಿದ್ದಾರೆ? ಬಲವಿದ್ದವರಿಗೇ ನೆಲ ತಾನೇ?"-ಎಂದು ಅಡ್ದಗೋಡೆಯ ಮೇಲೆ ದೀಪವಿಟ್ಟರು ಒಬ್ಬರು, ಹೊತ್ತು ತಿರುಗಿದತ್ತ ಕೊಡೆ ಹಿಡಿಯುವ ಪ್ರವೃತ್ತಿಯ ಅಮಾತ್ಯರು.

“ನಮ್ಮ ಖರ-ದೂಷಣರನ್ನ ಕೊಂದುದಕ್ಕೆ ಇದು ಮುಯ್ಯಿ; ಮಹಾರಾಜರ ತಂಗಿ ಶೂರ್ಪನಖಿಯನ್ನು ಅವಮಾನಿಸಿದ್ದಕ್ಕೆ ಇದು ಪ್ರತೀಕಾರ. ಇವೆಲ್ಲಕ್ಕೂ ಮಿಗಿಲಾಗಿ, ಅತ್ಯಂತ ಬಲಶಾಲಿಯಾದ ಶತ್ರುವೊಬ್ಬ ಮಾನಸಿಕ ದಾರ್ಢ್ಯ ಕಳೆದುಕೊಂಡು, ವಿರಹದ ಕೊರಗಿನಲ್ಲೇ ಸೊರಗಿ, ನಿಸ್ತ್ರಾಣನಾಗಿ ಸಾವನ್ನಪ್ಪುವಂತೆ ಮಾಡುವುದೂ ಒಂದು ರಾಜಕೀಯ ಯುದ್ಧತಂತ್ರವೇ!"- ಇನ್ನೊಬ್ಬ ಅಮಾತ್ಯ ಸಮರ್ಥಿಸಿದ.

ವಿಭೀಷಣ ಕೇಳುತ್ತಾನೆ: “ಗೆದ್ದು ಗಳಿಸಿದ್ದೇ ಉಳಿಯದು; ಇನ್ನು, ಕದ್ದು ತಂದಿದ್ದು? ನನ್ನ ಮಾತನ್ನಂತೂ ಕೇಳುವ ಮನಸ್ಥಿತಿಯಲ್ಲಿ ನೀನಿಲ್ಲ. ಅಣ್ಣಾ, ಬೇಗ ನಿನಗೆ ವಿವೇಕ ಬರಲಿ- ಎಂದು ಆಶಿಸುವೆ. ಅದು ಸರಿ, ಯಾವುದೇ ಕಾರಣಕ್ಕೂ ನೀನು ಅವಳನ್ನು ದುರುಪಯೋಗ ಮಾಡಿಕೊಳ್ಳುವುದಿಲ್ಲ ತಾನೆ?"

“ಹುಚ್ಚ, ಹುಚ್ಚ", ರಾವಣ ಪ್ರತ್ಯುತ್ತರಿಸುತ್ತಾನೆ, “ನಾನಷ್ಟು ಕೀಳಲ್ಲ. 'ಸೀತೆ" ನನಗೆ ಬೇಕು. ಆದರೆ, 'ಹೇಗಾದರೂ ಬೇಕು" ಅಲ್ಲ. ತಾನಾಗಿ ಒಪ್ಪಿ ಬಂದರೆ ಮಾತ್ರ."

ಹೆಚ್ಚು ಮಾತನಾಡಿ ಪ್ರಯೋಜನವಿಲ್ಲವೆಂದು, ವಿಭೀಷಣ ಹೊರಟು ನಿಂತ. ರಾವಣ ಕೇಳಿದ:“ವಿಭೀಷಣ, ಒಂದು ಮಾತು. ನೀನು ಏನೆಂದೆ? 'ಸೀತೆ"ಯ ಹೆಸರೇ ವಿಶಿಷ್ಟವಾದದ್ದು ಎಂದೆಯಲ್ಲವೇ? ಹೌದು, ನನಗೂ ಹಾಗೆಯೇ ಅನ್ನಿಸುತ್ತೆ. 'ಸೀತೆ" 'ಸೀತೆ". ಎಷ್ಟೊಂದು ಸುಂದರ ಸಂಜ್ಞೆ. ನನಗೊಂದು ಅಭಿಪ್ರಾಯ ಹೊಳೆಯುತ್ತಿದೆ. .. .."

“ಏನದು?"

“ಮಿಥಿಲೆಯಲ್ಲಿ ಜನಕನ ಮಗಳಿಗೆ ಈ ಹೆಸರನ್ನಿಟ್ಟ ಬಳಿಕ, ಬೇರೆ ಯಾರಿಗೂ ಎಲ್ಲೂ ಈ ಹೆಸರನ್ನ ಇಟ್ಟೇ ಇಲ್ಲವೆನ್ನುತ್ತೀಯಾ?"

“ನನಗೆ ತಿಳಿದಂತೆ ಇಲ್ಲ. ಯಾಕೆ?"

“ನನ್ನ ವಿಚಾರ ಬಿಡು; ಇಷ್ಟು ದೂರದಲ್ಲಿದ್ದರೂ ಇಲ್ಲಿನ ನಮ್ಮವರಿಗೂ ಈ ಹೆಸರೇ ತುಂಬಾ ಪ್ರಿಯವಾದದ್ದು ಎನ್ನುತ್ತೀಯಾ?"

“ಹೌದು, ಏಕೆ?"

“ನಮ್ಮ ಲಂಕೆಯಲ್ಲಿ ಈಗಿರುವ ಇಪ್ಪತ್ತೈದರಿಂದ ಮೂವತ್ತೈದು ವಯಸ್ಸಿನ ಎಲ್ಲಾ ಹೆಂಗಸರ ಹೆಸರನ್ನು 'ಸೀತೆ"ಯೆಂದು ಬದಲಾಯಿಸತಕ್ಕದ್ದು- ಎಂದು ರಾಜಾಜ್ಞೆ ಮಾಡೋಣ ಎಂದುಕೊಂಡಿದ್ದೇನೆ. ಏನನ್ನುತ್ತೀಯೆ?"

“ನಿನಗೆ ನಿಜಕ್ಕೂ ಹುಚ್ಚು ಹಿಡಿದಿದೆ!"- ಎಂದು ಹೇಳಿ, ವಿಭೀಷಣ ಅರಮನೆಯಿಂದ ಹೊರಗೆ ಹೊರಟ.

“ಹಾಗಲ್ಲ, ತಮ್ಮಾ. ಸೀತೆಯನ್ನ ಮೊದಲೇ ನೋಡದರು ಯಾರಾದರೂ ಹುಡುಕಿಕೊಂಡು ಇಲ್ಲಿಗೆ ಬಂದರೆ, ಹೆಸರಿನ ಗೊಂದಲ ಸಾಕಷ್ಟು ಆಗಲಿ- ಎಂದು!"

**

ರಾಜಾಜ್ಞೆ ಜಾರಿಗೆ ಬಂದಂತೆ ಕಾಣದು. ಆಮೇಲೆ ಆಗಿದ್ದು, ಹನುಮಂತಪ್ರವೇಶ, ಲಂಕಾದಹನ, ಸೇತುಬಂಧ, ರಾಮ-ರಾವಣ ಸಮರ, ರಾವಣಸಂಹಾರ- ಇತ್ಯಾದಿಗಳು.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more