ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಡಾ.ಲೀಲಾಪ್ರಕಾಶ್ ಅವರ ಕಥಾ ಜಗತ್ತು

By Staff
|
Google Oneindia Kannada News

Short story collection by Dr. Leela Prakash, Mysore'ಕೊನೆಗೆ ಎಲ್ಲರೂ ಸುಖವಾಗಿದ್ದರು,ಎಲ್ಲರೂ ಸುಖವಾಗಿರಲಿ' ಎಂಬ ಧಾಟಿಯ ಮೈಸೂರು ಡಾ. ಲೀಲಾ ಪ್ರಕಾಶ್ ಅವರ 'ಅನಿವಾಸಿ ಮತ್ತು ಇತರ ಕಥೆಗಳು' ಕಥಾಗುಚ್ಛದಲ್ಲಿರುವ ಏಳು ಸಣ್ಣಕಥೆಗಳ ವಿಮರ್ಶೆ. ಡಾ. ಲೀಲಾ ಅವರು ಮೈಸೂರಿನ ಜೆಎಸ್‌ಎಸ್ ಆಯುರ್ವೇದೀಯ ಮಹಾವಿದ್ಯಾಲಯದಲ್ಲಿ ಹಿರಿಯ ಸಂಸ್ಕೃತ ಉಪನ್ಯಾಸಕಿಯಾಗಿದ್ದಾರೆ.

ಅಂಕಣಕಾರ : ಶಿಕಾರಿಪುರ ಹರಿಹರೇಶ್ವರ, ಮೈಸೂರು

ಕತೆ, ಕಾದಂಬರಿ, ಕವನಸಂಕಲನ, ವಿಮರ್ಶಾ ಲೇಖನಗಳ ಸಂಪುಟಗಳು, ಶಾಸ್ತ್ರಗ್ರಂಥಗಳು, ಹೀಗೆ ಹಲವು ಪ್ರಕಾರಗಳಲ್ಲಿ ಗ್ರ೦ಥರಚನೆ ಮಾಡಿರುವ ಕನ್ನಡ ಸಂಸ್ಕೃತ ಮತ್ತು ಇಂಗ್ಲೀಷಿನಲ್ಲಿ ಸಮಾನ ಪ್ರಭುತ್ವ ಪಡೆದಿರುವ ಸಂಸ್ಕೃತ ಪ್ರಾಧ್ಯಾಪಕರಾದ ಡಾ| ಲೀಲಾಪ್ರಕಾಶ್ ಅವರ ಕಥೆಗಳ ಹೂಗುಚ್ಛ 'ಅನಿವಾಸಿ ಮತ್ತು ಇತರ ಕಥೆಗಳು' ಇತ್ತೀಚೆಗೆ ಶಿಕಾಗೋನಲ್ಲಿ ನಡೆದ 5ನೇ 'ಅಕ್ಕ' ವಿಶ್ವಕನ್ನಡ ಸಮ್ಮೇಳನದಲ್ಲಿ ಲೋಕಾರ್ಪಣೆಗೊಂಡಿತು.

ಸರಳವಾಗಿ ಓದಿಸಿಕೊಂಡು ಹೋಗುವ ಸುಭಗ ಶೈಲಿಯ ಕಥಾನಕಗಳಿರುವ ಈ ಸಂಕಲನದಲ್ಲಿ ಅನಿವಾಸಿ, ಮುಕ್ತಾ, ಇಂಟರ್ವ್ಯೂ, ಶೆಲ್ವಪಿಳ್ಳೆ ಅಯ್ಯಂಗಾರ್, ಮರೀಚಿಕೆ, ಲವ್ ಮ್ಯಾರೇಜ್ ಮತ್ತು ಕಾಲ್‌ಚೇನು ಎ೦ಬ ಏಳು ಕಥೆಗಳಿವೆ. ಒಂದೊಂದೂ ಬೇರೆ ಬೇರೆ ವಸ್ತುವನ್ನು ಕೇಂದ್ರವಾಗಿಟ್ಟುಕೊಂಡು ಹೆಣೆದಿರುವ ನಿರೂಪಣೆಗಳು. ಎಲ್ಲದರಲ್ಲೂ ಸಾಮಾನ್ಯವಾಗಿರುವ ಒಂದೇ ಅಂಶವೆಂದರೆ ಎಲ್ಲ ಕತೆಗಳ ನಾಯಕಿಯರು ಚೆಲುವೆಯರು! ಬಹಳ ಮಂದಿ ಅದೃಷ್ಟವಂತರು.

ವಿದೇಶದಲ್ಲಿ ಉದ್ಯೋಗಾವಕಾಶಗಳನ್ನು ಅರಸಿ ಹೋಗಿ ಅಲ್ಲಿಯೇ ನೆಲಸಿ, ಮಕ್ಕಳೊಂದಿಗೆ ವಾಸಿಸುತ್ತ ವೃತ್ತಿಜೀವನದಲ್ಲಿ ಹೆಸರು ಮಾಡಿ, ಏನೇನೋ ಕನಸುಗಳನ್ನು ಕಟ್ಟಿಕೊಂಡು ತಾಯ್ನಾಡಿಗೆ ಮರಳಿ, ಭ್ರಮನಿರಸನವಾಗಿ ಸಾಂಸಾರಿಕ ತೊಂದರೆಗಳಿಂದ ಜರ್ಝರಿತನಾಗಿ ಮತ್ತೆ ವಿದೇಶಕ್ಕೇ ಹಿ೦ತಿರುಗುವ ವೈದ್ಯನೊಬ್ಬನ ದುರಂತಜೀವನದ ಪ್ರಭಾವೀ ಚಿತ್ರಣ ಮೊದಲ ಕತೆ 'ಅನಿವಾಸಿ'ಯಲ್ಲಿ ಇದೆ. ಸಂಕಲನದ ಗಮನಾರ್ಹ ಕಥೆ ಇದು.

ಸಾಂಪ್ರದಾಯಿಕ ಮನೆತನವೊಂದರ ಮಗಳಾಗಿ ಹುಟ್ಟಿ, ಹೊಸತಿನ ಆಕರ್ಷಣೆ, ಹಳತಿನ ಬಗ್ಗೆ ಗೌರವಗಳ ಇಬ್ಬಂದಿಯ ತೊಳಲಾಟದಲ್ಲಿ ನುಲಿಯುತ್ತಲೇ ಬೆಳೆದ ಹುಡುಗಿಗೆ ವಿಧಿವಶಾತ್ ಮಹತ್‌ಸಾಧನೆಗೆ ಒಂದು ಅನುಕೂಲ ವಾತಾವರಣ ದೊರಕುವವೇಳೆಗೆ ಹಟಮಾರಿ ತಂದೆ ದೂರವಾಗುವ ವಿಷಾದಾಂತ 'ಮುಕ್ತಾ'ದಲ್ಲಿದೆ.

ಹುಟ್ಟಿಸಿದ ದೇವರು ಹುಲ್ಲು ಮೇಯಿಸುವನೇ (ಅಥವಾ ಮೇಯಿಸದೆ ಬಿಟ್ಟಾನೆ?) ಎಂಬಂತೆ, ಇಲ್ಲಿ ಬಾಳಲು ಎಲ್ಲರಿಗೂ ಒಂದಲ್ಲ ಒಂದು ರೀತಿಯ ಅವಕಾಶ ಇದ್ದೇ ಇದೆ; ಅದೃಷ್ಟ ಬಾಗಿಲು ತಟ್ಟಿದಾಗ, ತಡಮಾಡದೆ ತೆರೆದು ಕೈಕುಲುಕಬೇಕು ಎನ್ನುವ ಸಂದೇಶ 'ಇಂಟರ್‌ವ್ಯೂ'ನಲ್ಲಿದೆ. ಬಯಸಿದ್ದೆಲ್ಲ ಕೈಗೂಡಿತು; ತನ್ನ ಇಚ್ಛೆಯಂತೆಯೇ ಜಗತ್ತೆಲ್ಲ ತನ್ನ ಸುತ್ತ ಸುತ್ತುತ್ತಿದೆ, ಹತ್ತಿದ ಏಣಿಯನ್ನು ತಳ್ಳಿ ಮೇಲೇರಿದರೂ ತೊಂದರೆಯಿಲ್ಲ, ತಾನೇ ಜಾಣ ಎನ್ನುವ ಮನೋಭಾವದವನಿಗೆ ಕೈಹಿಡಿದವಳು ಕಲಿಸುವ ಪಾಠದ ಅನಿರೀಕ್ಷಿತ ತಿರುವು 'ಶೆಲ್ಪಪಿಳ್ಳೆ ಅಯ್ಯಂಗಾರ್' ಕಥೆಯ ಸರಕು.

ಕೆಲವರ ಜಾಯಮಾನ ದುಃಖಿಸುವುದು. ಕೈಗೆ ಎಟುಕಿದರೂ ತನ್ನದಾಗಿಸಿಕೊಳ್ಳಲಾರದ ಪರಿಪಾಠ. ವಿಧಿ, ಪೌರುಷ, ಆತ್ಮಬಲ ಈ ಮೂರರ ಸೆಣಸಾಟದಲ್ಲಿ ವಿಧಿಯದೇ ಮೇಲುಗೈ. ಬಿಸಿಲುಗುದುರೆಯ ಸವಾರಿ 'ಯೋ ಧ್ರುವಾಣಿ ಪರಿತ್ಯಜ್ಯ ಅಧ್ರುವಂ ಪರಿಷೇವತೇ' ಉತ್ತರಾರ್ಧಗಳು. ಇಂತಹದೊಂದರ ಸಿನಿಮೀಯ ಸನ್ನಿವೇಶ 'ಮರೀಚಿಕೆ'ಯಲ್ಲಿದೆ.

ಪ್ರೀತಿ, ಪ್ರೇಮ, ಅನುರೂಪ ದಾಂಪತ್ಯ, ಮೆಚ್ಚಿದವರೊಡನೆ ಬಾಳ ಸಾಂಗತ್ಯ ಇವೆಲ್ಲ ಸುಖೀ ಸಂಸಾರದ ಮೂಲ ಸೂತ್ರಗಳಾದರೂ, ಎಲ್ಲ ಪ್ರೇಮವಿವಾಹಗಳಿಗೂ ನೆಮ್ಮದಿ ಸುಲಭವಾಗಿ ಶಾಶ್ವತವಾಗಿ ದೊರಕುವ ದಕ್ಕುವ ಸರಕಲ್ಲ. ಆವೇಶದಲ್ಲಿ ಕುಣಿದಾಡಿದ, ಹುಚ್ಚು ಕುದುರೆಗಳ ಲಗಾಮನ್ನು ಯಾರು ಯಾರೋ ಯಾವ ಯಾವ ಸಮಯದಲ್ಲೋ ಹಿಡಿದೆಳೆಯಬಹುದು. ಲಗ್ಗೆ ಮುರಿದು, ಹಗ್ಗ ಹರಿದು ಪ್ರಪಾತಕ್ಕೆ ಬೀಳುತ್ತಿರುವಾಗ ಕಾಣದ ಕೈಯೊಂದರ ಆಸರೆದೊರಕಲೂ ಬಹುದು. ಇದಕ್ಕೆ ನಿದರ್ಶನ 'ಲವ್ ಮ್ಯಾರೇಜ್'.

ಅಮಾಯಕರನ್ನು ಮೋಸಗೊಳಿಸಿ ಸ್ವಾರ್ಥಸಾಧನೆ ಮಾಡಿಕೊಳ್ಳುವ ಅತಿವಿನಯದ ಧೂರ್ತನೊಬ್ಬನ ಕತೆ 'ಕಾಲ್ಚೇನು'. ಎಲ್ಲಿಯವರೆಗೆ ಏನೂ ಅರಿಯದ ಕುರಿಗಳು ಇರುತ್ತಾರೋ ಅಲ್ಲಿಯವರೆಗೆ ತೋಳಗಳೂ ಹಸುಮೊಗದ ಹುಲಿಗಳೂ ವಂಚಿಸಲು ಹೊಂಚು ಹಾಕುತ್ತಲೇ ಸುಳಿದಾಡುತ್ತಿರುತ್ತಾರೆಂಬ ಕಟುಸತ್ಯಕ್ಕೊಂದು ಉದಾಹರಣೆಯಾಗಿ ಈ ಕತೆ ಮೂಡಿಬಂದಿದೆ.

ಡಾ| ಲೀಲಾ ಪ್ರಕಾಶರ ಕತೆಗಳಲ್ಲಿ ಸಮಾಜದ ವಿವಿಧ ಸ್ತರಗಳ ಜನರ ಬದುಕಿನ ಒಳನೋಟವನ್ನು ಚಿತ್ರಿಸುವ ಪ್ರಯತ್ನ ನಡೆದಿದೆ. ಈ ಕತೆಗಳು ಸಮಸ್ಯೆಯ ವಿಶ್ಲೇಷಣೆಗಿಂತ ಪರಿಣಾಮಗಳನ್ನು ಚಿತ್ರಿಸುವುದರಲ್ಲಿ ಜಾಣ್ಮೆ ಮೆರೆದಿವೆ. ನೈತಿಕತೆ, ಸಾಂಪ್ರದಾಯಿಕತೆ, ಆಧುನಿಕತೆಯ ಸಂಘರ್ಷ, ಭ್ರಮನಿರಸನ, ತಾಳಿದವನು ಬಾಳಿಯಾನು, ಒಳ್ಳೆಯದಕ್ಕೇ ಕೊನೆಗೆ ಗೆಲುವು ಇತ್ಯಾದಿಗಳ ನಿರಂತರ ಪರಿಭ್ರಮಣೆಯಲ್ಲಿ ಪಾತ್ರಗಳು ವಿವಿಧ ಭಂಗಿಗಳಲ್ಲಿ ಗೋಚರಿಸುತ್ತವೆ. ಅನಿರೀಕ್ಷಿತ ತಿರುವುಗಳ೦ತೂ ಮೆರುಗನ್ನು ಹೆಚ್ಚಿಸಿಯೇ ಇವೆ. ಸುಲಭೋಪಾಯದ ಸುಖಾ೦ತ ಸೂತ್ರಗಳೆಂದರೂ ಜರಿದರೂ ಸರಿ, ಎಲ್ಲವೂ ಮಂಗಳದಾಯಕ ಮುಕ್ತಾಯಗಳು.

ಕಲ್ಲು ಕುಟ್ಟಿ ಜೀವಿಸುವ ಕೂಲಿಯ ಹೆಂಗಸು ಚೆನ್ನಿಯ ಮಗಳು ಪಾರ್ವತಿಗೆ ಹುಬ್ಬಳ್ಳಿಯ ಹುಡುಗ ಬಸವರಾಜು ಮೋಸಮಾಡಲೋಸುಗ ಕೊಂಡೊಯ್ದರೂ ('ಕಾಲ್ಚೇನು' ಕತೆ), ಮಾನ ಉಳಿಸಲು ಚೆನ್ನ ಬಂದಾನು. ಆಕಾಶ ಕಳಚಿ ತಲೆಯ ಮೇಲೆ ಬಿದ್ದ೦ತಾದರೂ ಮನೋನ್ಮಣಿಯನ್ನು ('ಲವ್ ಮ್ಯಾರೇಜಿ'ನ ಕತೆ) ವರಿಸಲು, ಕತ್ತಾಲಾವರಿಸಿದ ಅವಳ ಬಾಳಿಗೆ ಬೆಳಕ ಬೀರಲು, ಅತ್ತೆಯ ಮಗ ಪ್ರಕಾಶನೇ ಬಂದಾನು. ಪ್ರಮೋದರಾಯನಾಗಿ ಬದಲಾದವನ ಸಣ್ಣತನ ಬಟ್ಟಂಬಯಲಾದಾಗ ಆ ಶೆಲ್ವಪಿಳ್ಳೆಗೆ ಬುದ್ಧಿಕಲಿಸಲು ಬೇರಾರೂ ಅಲ್ಲ, ಅವನ ಬಾಲ್ಯದ ಒಡನಾಡಿ ಸಹಪಾಠಿ ಹೆಂಗೆಳತಿ ಸುಜಾತಳೇ ಬಂದಾಳು. ವೆಂಕಟಸುಬ್ಬಾಶಾಸ್ತ್ರಿಗಳು ಬಡಪೆಟ್ಟಿಗೆ ಒಪ್ಪದಿದ್ದರೂ, ಮಗಳು ಮುಕ್ತಾ ತನ್ನ ಬೌದ್ಧಿಕ ಸಂಗ್ರಾಮದಲ್ಲಿ ವಿಜಯಪತಾಕೆಯನ್ನು ಹಾರಿಸಲು ('ಮುಕ್ತಾ' ಕತೆ) ಮನೋಹರನೇ ಅನುವಾದಾನು. ಯಾವ ಕಟ್ಟುಪಾಡಿಗೂ ಬದ್ಧಳಾಗಿರಲು ಸಮ್ಮತಿಸದ, ಅಮ್ಮ ಸೀತಾಳನ್ನೂ, ಅಪ್ಪ ನರಹರಿಯನ್ನೂ ಧಿಕ್ಕರಿಸಿ ಹೊಸಿಲು ದಾಟುವ, ಹುಚ್ಚು ಹುಮ್ಮಸ್ಸಿನ ಏರು ಜವ್ವನೆ ಹಾರುಹಕ್ಕಿ ಪರೀಕಾಳನ್ನು ('ಅನಿವಾಸಿ' ಕತೆ) ತನ್ನದೇ ಮನೋಭಾವದ ಮನದಿನಿಯ ಮನೀಷಕುಮಾರ ಹಾರಿಸಿಕೊಂಡು ಹೋದಾನು.

ಇಲ್ಲಿನ ಕತೆಗಳು 'ಆಮೇಲೆ ಕೊನೆಯಲ್ಲಿ ಅವರೆಲ್ಲರೂ ಸುಖವಾಗಿದ್ದರು' ಧಾಟಿಯ ಸುಖಾಂತ್ಯಗಳು; ಹಳೆ ಕನ್ನಡ ಸಿನಿಮಾಗಳಂತೆ ಶುಭಂ ಹೇಳುತ್ತಾ ನೆಮ್ಮದಿಕೊಡುವ೦ತಹವು. ಒತ್ತಡಗಳು, ಅನಿಸಿಕೆಗಳು ಮತ್ತು ಭಾವನೆಗಳ ಸಂಘರ್ಷಕ್ಕೆ ನಾವು ಈ ಸಂಕಲನದ 'ಅನಿವಾಸಿ'ಯತ್ತ ಮತ್ತೆ ತಿರುಗಬೇಕು. ವೈಯಕ್ತಿಕ ಸಮಸ್ಯೆಗಳಿಗೆ ಬುದ್ಧಿಪೂರ್ವಕ ಪರಿಹಾರ ಎಷ್ಟು ಸಾಧ್ಯ? ಬದುಕು ವಿಭ್ರಮೆ ಮತ್ತು ವಾಸ್ತವಿಕತೆಯ ತೂಗುಯ್ಯಾಲೆಯಲ್ಲಿ ಏನೆಲ್ಲ ಆ೦ದೋಲನವನ್ನ ಅನುಭವಿಸಿತ್ತದೆ, ವಿಭಿನ್ನ ಸಂಸ್ಕೃತಿಗಳ ನಡುವಣ ಜೀವನ ಎಂತಹ ಬಿಗಿ ಹಗ್ಗದ ಮೇಲಣ ನಡೆ, ಇದು ಯಾವ ಪರಿಯ ಅಸಿಧಾರಾವ್ರತ, ತಾವೇ ಹೆಣೆದುಕೊಂಡ ಬಲೆಗೆ ಹೇಗೆ ಬಲಿ ಬಿದ್ದ೦ತಾಯ್ತು ಎಂಬುದೆಲ್ಲದರ ಒಳನೋಟವಾದ ನರಹರಿ-ಸೀತಾರವರ ತ್ರಿಶಂಕು ಪರಿಸ್ಥಿತಿಯ ಚಿತ್ರಣದಲ್ಲಿ ಕತೆಗಾರ್ತಿ ಗೆದ್ದಿದ್ದಾರೆ. ಒಳ್ಳೆಯ ಬರಹದ ನಾಲ್ಕು ಸಾಧನಸಾಮಗ್ರಿಗಳಾದ ಮೊನಚು, ಹದನ, ಬಿಗುವು ಮತ್ತು ಮಿತವ್ಯಯಗಳನ್ನು ಈ ಮೊದಲ ಕತೆಯಲ್ಲಿ ಮೆರೆಸಿದಂತೆ ಉಳಿದ ಕತೆಗಳಲ್ಲೂ ಇನ್ನಷ್ಟು ತಂದಿದ್ದರೆ ಸಂಕಲನದ ಸೊಗಸು ಇನ್ನೂ ಹೆಚ್ಚುತ್ತಿತ್ತು.

** ** **
ಲೇಖಕಿ ಬಗ್ಗೆ : ಈಗ ಮೈಸೂರಿನ ಜೆಎಸ್‌ಎಸ್ ಆಯುರ್ವೇದೀಯ ಮಹಾವಿದ್ಯಾಲಯದಲ್ಲಿ ಹಿರಿಯ ಸಂಸ್ಕೃತ ಉಪನ್ಯಾಸಕಿಯಾಗಿರುವ ಲೇಖಕಿ ಡಾ| ಕೆ. ಲೀಲಾ ಪ್ರಕಾಶ್ ಅವರು ಮನಸ್‌ಶಾಸ್ತ್ರವನ್ನು ಐಚ್ಛಿಕವಾಗಿ ತೆಗೆದುಕೊಂಡು ತಮ್ಮ ಬಿಏ ಪದವಿ ಪರೀಕ್ಷೆಯಲ್ಲಿ ಏಳನೇ ರ್‍ಯಾ೦ಕ್‌ನ್ನೂ, ಎಂಎನಲ್ಲಿ ಎರಡು ಚಿನ್ನದ ಪದಕಗಳನ್ನೂ, ನಗದು ಬಹುಮಾನವನ್ನೂ ಗಳಿಸಿ ಉತ್ತೀರ್ಣರಾದವರು. ಇವರು ಸಂಸ್ಕೃತದಲ್ಲಿ ರುದ್ರಟನ ಅಲಂಕಾರಶಾಸ್ತ್ರದ ಅಧ್ಯಯನ ವಿಷಯದಲ್ಲಿ ಪಿಎಚ್‌ಡಿ ಪದವಿ ಪಡೆದರು. ಇದಕ್ಕಾಗಿ ಮಂಡಿಸಿದ ಇವರ ಸ೦ಪ್ರಬಂಧ ಶಿಕಾಗಾದ ಪ್ರಸಿದ್ಧ ಸಂಸ್ಕೃತ ವಿದ್ವಾಂಸ ಪ್ರೊ| ಶೆಲ್ಡನ್ ಪೋಲಾಕ್ ಅವರಿಂದ ಮೆಚ್ಚುಗೆ ಪಡೆಯಿತು. ಡಾ|ಕೆ ಕೃಷ್ಣಮೂರ್ತಿಗಳ ಚಿನ್ನದ ಪದಕ ಮತ್ತು ಸಿ ಆರ್ ನರಸಿಂಹ ಶಾಸ್ತ್ರಿಗಳ ಪಾರಿತೋಷಕವನ್ನೂ ಅದು ಗಳಿಸಿತು.

ಪ್ರಸಿದ್ಧ ಸಂಸ್ಕೃತ ವಿದ್ವಾಂಸ ಡಾ| ಕೆ ಕೃಷ್ಣಮೂರ್ತಿಗಳ ಮಗಳಾದ ಇವರು ತಮ್ಮ ತಂದೆಯವರ ಹೆಸರಿನಲ್ಲಿ ಒಂದು ಸಂಶೋಧನ ಪ್ರತಿಷ್ಠಾನವನ್ನು ಸ್ಥಾಪಿಸಿ, ಆಸಕ್ತರ ಸಂಸ್ಕೃತದ ಅಧ್ಯಯನಕ್ಕೆ ಸೂಕ್ತ ವಾತಾವರಣವನ್ನು ಮೈಸೂರಿನಲ್ಲಿ ಕಲ್ಪಿಸಲು ತೊಡಗಿದ್ದಾರೆ. ಡಾ|ಲೀಲಾ ಅವರ ಅನೇಕ ಸಂಶೋಧನ ವಿಮರ್ಶಾ ಲೇಖನಗಳು ನಿಯತ ಕಾಲಿಕಗಳಲ್ಲಿ, ಸಂಭಾವನಾ ಗ್ರಂಥಗಳಲ್ಲಿ ಪ್ರಕಟಗೊಂಡಿವೆ. ಈ ಬಾರಿಯ 2008ರ ಶಿಕಾಗೋ ವಿಶ್ವಕನ್ನಡ ಸಮ್ಮೇಳನದಲ್ಲಿ ಇವರ ಪ್ರಬಂಧ ಸಂಕಲನ 'ವಸ್ತುವೈವಿಧ್ಯ' ಮತ್ತು ಸಂಸ್ಕೃತ ಕಾವ್ಯಗಳ ಸಿಂಹಾವಲೋಕನ 'ಕವಿ ಕಾವ್ಯ ವಿವೇಚನೆ' ಪುಸ್ತಕಗಳೊಂದಿಗೆ ಈ ಕಥಾ ಸಂಕಲನ 'ಅನಿವಾಸಿ ಹಾಗೂ ಇತರ ಕಥೆಗಳು' ಸಹ ವಿಶ್ವಾರ್ಪಣೆಗೊಂಡಿತು.

[ಪುಸ್ತಕ ವಿವರ: 'ಅನಿವಾಸಿ ಹಾಗೂ ಇತರ ಕಥೆಗಳು' ಲೇಖಕಿ: ಡಾ| ಲೀಲಾ ಪ್ರಕಾಶ್; ವಿದ್ಯುತ್ ಪ್ರಕಾಶನ, ನ೦. 22, 'ಚಿರಂತನ', 1ನೇ ಮುಖ್ಯರಸ್ತೆ, ಕೃಷ್ಣಮೂರ್ತಿ ಬಡಾವಣೆ, ಕುವೆಂಪು ನಗರ, ಮೈಸೂರು-570 009; ಫೋನ್: 98860-56177; ಪುಟಗಳು 14+104]

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X