• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಸರ್ವತೋಮುಖ ಶಿವನು ಐಮೊಗನಾದಾಗ

By Staff
|

Shiva (Art by Atul Sharma)ಸರ್ವಾಂತರ್ಯಾಮಿ ಶಿವನನ್ನು ಆರಾಧಿಸಲು ಐದು ಹೂಗಳ ಮಂತ್ರಗುಚ್ಛ. ಷೋಡಚೋಪಚಾರ ಪ್ರಿಯರಿಗಾಗಿ ಮಂತ್ರ, ಅರ್ಥ ಮತ್ತು ವ್ಯಾಖ್ಯಾನ.

ಅಂಕಣಕಾರ : ಶಿಕಾರಿಪುರ ಹರಿಹರೇಶ್ವರ, ಮೈಸೂರು

ಭಗವಂತನ ಔಪಾಸನೆಯಲ್ಲಿ ಎರಡು ಬಗೆ. ದೇವರು ನಾಮ-ರೂಪರಹಿತನಾದ ಸರ್ವಾಂತರ್ಯಾಮಿ, ಸರ್ವವ್ಯಾಪಿ, ಸರ್ವಶಕ್ತ- ಎಂದುಕೊ೦ಡು ಸಾಗುವುದು ನಿರ್ಗುಣೋಪಾಸನೆ. ಸತ್ ಚಿತ್ ಆನಂದದ ಈ ಅಪೂರ್ವ ಅನನ್ಯ ಅನುಭವ ಪಡೆಯಲು ತನ್ನನ್ನು ತೊಡಗಿಸಿಕೊಂಡು, ಒಬ್ಬ ಸಾಧಕ ಹಲವು ಮಜಲುಗಳನ್ನು ದಾಟಿ ಅವನ ಹತ್ತಿರ ಹೋಗ ಬಯಸುತ್ತಾನಷ್ಟೆ? ಸಾಲೋಕ್ಯ (ಆ ದಿವ್ಯ ಪರಿಸರವನ್ನು ಹೊಕ್ಕ ಅನುಭವ ಗಳಿಸುವುದು), ಸಾಮೀಪ್ಯ (ಅವನ ಸನಿಹದಲ್ಲಿ ಇದ್ದಂತಾಗುವುದು), ಸಾನ್ನಿಧ್ಯ (ತನ್ನ ಹಿಂದೆ ಮುಂದೆ ಅಕ್ಕ ಪಕ್ಕದಲ್ಲೇ ಅವನು ಇದ್ದಂತೆ ಭಾಸವಾಗುವುದು), ಸಾಯುಜ್ಯ (ಅವನೊಂದಿಗೆ ಮಿಳಿತಗೊಳ್ಳುವುದು)- ಎಂಬ ಗುರಿಯ ಭಕ್ತಿಮಾರ್ಗದ ಬೆಟ್ಟ ಹತ್ತಿ ಮೇಲೆ ಮೇಲೇರಿ ನಡೆಯುವಾಗ, ಈ ಪಯಣಿಗ ಒಂದು ಮೆಟ್ಟಲಿನಲ್ಲಿ ಕೊಂಚ ಸುಧಾರಿಸಿಕೊಂಡು, ಸಂಧಾನಮಾಡಿಕೊಂಡು ಆನಂದಿಸುತ್ತಾನೆ. ಅದೇ ಸಗುಣೋಪಾಸನೆ!

ಏನೂ ರೂಪ, ಯಾವುದೂ ಹೆಸರು ಇಲ್ಲದವನಾದ ಆತ, ಏನಾದರೂ ಮತ್ತು ಎಲ್ಲ ಬಗೆಯ ರೂಪಗಳನ್ನೂ ಹೆಸರುಗಳನ್ನೂ ತಾಳಬಲ್ಲ ತಾನೇ?- ಎಂದುಕೊಳ್ಳುತ್ತಾ ಈ ಶರಣ ತನ್ನ ಆರಾಧ್ಯದೇವನನ್ನು ಶಿವನನ್ನಾಗಿ ಕಾಣುತ್ತಾನೆ. ತನ್ನ ಮನೋಸಾಮರ್ಥ್ಯಕ್ಕೆ ಅನುಗುಣವಾಗಿ ಅವನ ಗುಣಾತಿಶಯಗಳನ್ನು ದರ್ಶಿಸಿಕೊಳ್ಳುತ್ತಾನೆ. ಅವಕ್ಕೆ ತಕ್ಕಂತೆ ಭಗವಂತ ರೂಪುಗೊಳ್ಳುತ್ತಾನೆ. ಗುಣ ಮತ್ತು ರೂಪಕ್ಕೆ ಸರಿಹೊಂದುವ ವಿಶೇಷಣಗಳು, ಸಂಕೇತಗಳು ಅವನ ಹೆಸರುಗಳಾಗುತ್ತವೆ. ಅವನನ್ನೇ ಕಣ್ತುಂಬ ತುಂಬಿಕೊಂಡ ದಿವ್ಯಾವಧಾನಿಗೆ ಆಗ ಗೋಚರಿಸುವ ಶಿವನ ಹೆಸರುಗಳೋ ಅಪಾರ, ಅಮೇಯ, ಅಸಂಖ್ಯಾತ, ಅಗಣಿತ, ಅನಂತ.

ಮಹಾನಾರಾಯಣ ಉಪನಿಷತ್ತು ಯಜುರ್ವೇದದ ತೈತ್ತಿರೀಯ ಆರಣ್ಯಕದ ಒಂದು ವಿಶಿಷ್ಟ ಭಾಗ. ಅದರ ಒಂದು ಸ್ವಾರಸ್ಯಕರ ಅಧ್ಯಾಯದಲ್ಲಿ ಶಿವನ ಗುಣಾತಿಶಯಗಳ ಬಣ್ಣನೆ ಮತ್ತು ಅವನನ್ನು ಧ್ಯಾನಿಸಲು ಅನುವಾಗುವ ಮಂತ್ರಗಳು ಬರುತ್ತವೆ. ಇವೆಷ್ಟು ನೋಹರವಾಗಿವೆಯೆಂದರೆ, ಆಸ್ತಿಕರು ಇವುಗಳ ಅರ್ಥಕ್ಕೆ ಮಾರುಹೋಗಿ, ಮನನ ಮಾಡುತ್ತಾರೆ, ಚಿಂತನೆ ನಡೆಸುತ್ತಾರೆ, ಹೊಸ ಹೊಸ ಅರ್ಥವೈಶಾಲ್ಯಗಳನ್ನು ಅನ್ವೇಷಿಸುತ್ತಾರೆ, ವಿಮರ್ಶಿಸುತ್ತಾರೆ. ಪೂಜಾ ವಿಧಿ ವಿಧಾನಗಳಿಗೆ ಒತ್ತುಕೊಡುವ ಷೋಡಶೋಪಚಾರಪ್ರಿಯರಂತೂ ಎಲ್ಲ ದೇವರ ಅಭಿಷೇಕಕ್ಕೂ ಈ ಮಂತ್ರಗಳನ್ನು ಬಳಸುತ್ತಾರೆ. ಐದು ಹೂಗಳ ಈ ಮಂತ್ರಗುಚ್ಚ ಏನು ಹೇಳುತ್ತದೆ, ಈಗ ನೋಡೋಣ:

1 ಸದ್ಯೋಜಾತ : ಭಗವಂತನು ಸಹಸ್ರಾಕ್ಷ, ಸರ್ವತೋಮುಖಿ; ವಿಶ್ವಾಕ್ಷ, ವಿಶ್ವತೋಮುಖಿ. ಹಾಗೆ ಅವನು ಎಲ್ಲೆಡೆ ನೋಡುತ್ತಿರುವಾಗ ಪೂರ್ವ, ದಕ್ಷಿಣ, ಪಶ್ಚಿಮ, ಉತ್ತರ ಮತ್ತು ಊರ್ಧ್ವ ಎಂಬೀ ಐದು ದಿಕ್ಕುಗಳಿಗೂ ಮುಖಮಾಡಿಕೊಂಡು ಶಿವ ನೋಡುತ್ತಿದ್ದಾನೆಂದು ಭಕ್ತ ಬಗೆಯುತ್ತಾನೆ.

ಪರಮೇಶ್ವರನ ಚಿಂತನೆಗಾಗಿ ಆ ಭಕ್ತನು ಪೂರ್ವಾಭಿಮುಖವಾಗಿ ಕುಳಿತನೆಂದುಕೊಳ್ಳೋಣ; ಆಗ, ಮಹಾದೇವನ ಪಶ್ಚಿಮಾಭಿಮುಖ ಮೂರ್ತಿ ಮೊದಲು ಅವನೆದುರಿಗೆ ಗೋಚರಿಸುತ್ತಿದೆ. ದೇವಾಧಿದೇವತೆಗಳಿಂದಲೂ, ಯೋಗಿಗಳಿಂದಲೂ ಸ್ತುತಿಸಲ್ಪಡುತ್ತಿರುವ ಸ್ಥಾಣುವಿನ ನಿರ್ಮಲವಾದ ಈ ಪಶ್ಚಿಮಮುಖವನ್ನ ಹೀಗೆಯೂ ಬಣ್ಣಿಸುತ್ತಾರೆ: ಮಂಜು ಮುಸುಕಿದ ಬೆಟ್ಟದಡಿ ಮೂಡಿ ಮೇಲೇರುತಿಹ ಚಂದ್ರನ೦ದದಿ ಬೆಳ್ಳಂಬಿಳಿ; ಹಸುವಿನ ಹಾಲಿನ ಕೆನೆಯ ಕಾಂತಿ, ಮನ್ಮಥನ ಸುಟ್ಟು ಬೂದಿ ಮಾಡಿಬಿಟ್ಟ ಕಿಡಿಗಾರುತ್ತಿರುವ ಕಣ್ಣುಗಳು- ನಿನಗೆ ನಮಸ್ಕಾರ! ಈಶ್ವರನ ಈ ಪಶ್ಚಿಮಾಭಿಮುಖವೇ 'ಸದ್ಯೋಜಾತ'. ಸದ್ಯೋಜಾತ ಎಂದರೆ ಏನರ್ಥ? ಸದ್ಯಃ ಜಾತಃ, ಈಗ ತಾನೇ ಹೊಚ್ಚ ಹೊಸದಾಗಿ ಹುಟ್ಟಿದವನು, ಎಂದು. ಅಂದರೆ, ಯಾವಾಗಲೂ ಹೊಸದಾಗಿಯೇ ಇರುವವನು, ನಿತ್ಯನವೀನ ಅಂತ. ಮಹಾನಾರಾಯಣ ಉಪನಿಷತ್ತು ಹೇಳುತ್ತದೆ:

ನಿನ್ನ ಹೇಗೆ ಹಾಡಿ ಹೊಗಳಲಿ ಹೇಳು, ನಿಚ್ಚಂ ಪೊಸತೇ, ವಿನೂತನನೆ;

ಎಂದೆಂದೂ ಈಗ ಈಗಲೇ ಹುಟ್ಟಿ, ನೆಲ ಮುಟ್ಟುವ ಹೊಚ್ಚಹೊಸತೇ!

ಮೈತಳೆವೆ ಎಲ್ಲದರಲೂ, ಎಲ್ಲದನೂ ಹುಟ್ಟಿಸುವಾತನು ನೀನೆ;

ಮತ್ತೆ ಇತ್ತ ಜನ್ಮವೆತ್ತುವುದೇನು ನನಗೆ ಬೇಡವೋ, ಭವನೇ!

ಹುಟ್ಟಿಗೇ ಮೀರಿದವನೆನ್ನನಾಗಿಸೋ ಇನ್ನು, ಹುಟ್ಟಡಗಿಸುವವನೇ!!

(ಸದ್ಯೋಜಾತ೦ ಪ್ರಪದ್ಯಾಮಿ, ಸದ್ಯೋಜಾತಾಯ ವೈ ನಮೋ ನಮಃ|

ಭವೇ ಭವೇ ನ, ಅತಿ-ಭವೇ ಭವಸ್ವ ಮಾಂ, ಭವೋದ್ಭಾವಾಯ ನಮಃ||)

2. ವಾಮದೇವ : ಪ್ರದಕ್ಷಿಣಪೂರ್ವಕವಾಗಿ ಮುಖಗಳನ್ನು ಗಮನಿಸುತ್ತಾ ಬಂದ ಭಕ್ತನಿಗೆ, ಈಗ ಕಾಣಿಸುವುದು ಉತ್ತರಕ್ಕೆ ಮುಖ ಮಾಡಿಕೊ೦ಡ ಪರಶಿವನ ರೂಪ. ಅದು ಹೀಗೆ ಮನೋಹರವಾಗಿದೆಯೆಂದು ಭಕ್ತ ಭಾವಿಸುತ್ತಾನೆ: ವಾಮದೇವ ಅಂದರೆ, ಸು೦ದರವಾದ, ಹೊಳೆಹೊಳೆಯುವ ದಿವ್ಯ ದೇಹವುಳ್ಳವನು. ಉನ್ಮನನ ಅಂದರೆ ಉತ್ಕೃಷ್ಟವಾದ ಮನಸ್ಸುಳ್ಳವನು. ಕಲ ಎಂದರೆ ಅವ್ಯಕ್ತ ಮಧುರ ಧ್ವನಿ, ಇನಿದನಿ, ಚಿಂತೆ, ವ್ಯಥೆ ಎಂಬ ನಾನಾರ್ಥಗಳುಂಟು. ವಿಕರಣ ಅಂದರೆ ರೂಪವನ್ನು ಕೆಡಿಸುವುದು, ವಿಕಾರವಾಗಿ ಮಾಡುವುದು, ಸಲ್ಲದ ಬಲವನ್ನು ಇಲ್ಲದಂತೆ ಮಾಡುವುದೂ, ಒಲ್ಲದ ಕಲವನ್ನು, ಚಿಂತೆ-ವ್ಯಥೆಗಳನ್ನು ದೂರವಾಗಿಸುವ -ಈ ಶ್ರೇಷ್ಠನನ್ನು ಉಪನಿಷತ್ತು ಹೀಗೆ ಹೊಗಳಿ, ನಮಸ್ಕರಿಸುತ್ತದೆ:

ಹೊಳೆಹೊಳೆವ ದಿವ್ಯ ರೂಪದ ಚೆಲುವಾಂತ ಜೊನ್ನೊಡಲ ಚೆನ್ನಿಗನೆ,

ಎಲ್ಲರೆಲ್ಲರ ಹಿರಿಯ, ಎಣೆಯಿರದೆಲ್ಲ ಗುಣಮಣಿಯ ಗಣಿಯೆ,

ನೊಂದ ಬೆಂದವರೊಂದಿಗೆ ಅಳುತ, ನೋಯಿಸುವರ ಅಳಿಸುವವನೆ,

ಬಲಿಷ್ಠರಲಿ ಬಲಿಷ್ಠ ನೀ, ಚರಾಚರಗಳಲಿ ಕಸುವ ತೀಡಿ ತುಂಬುವವನೆ,

ಉತ್ಕೃಷ್ಟ ಚಿಂತಕನೆ, ಸದೆಬಡಿದು ಎಲ್ಲವನು ಮುಗಿಸಿಬಿಡುವಂತಕನೆ,

ಒಲ್ಲದ ಸಲ್ಲದ ಬಲ ಚಿಂತೆ ದುಗುಡಗಳ ಕಡಿದೊಗೆದು ಇಲ್ಲವಾಗಿಸುವವನೆ,

ಕಾಲನೆ- ನಿನಗೆ ನಮನ, ಮತ್ತೆ ಇದೋ ಪುನಃ, ನಮನ!

(ವಾಮದೇವಾಯ ನಮೋ, ಜ್ಯೇಷ್ಠಾಯ ನಮಃ, ಶ್ರೇಷ್ಠಾಯ ನಮಃ,

ರುದ್ರಾಯ ನಮ:, ಕಾಲಾಯ ನಮ:, ಕಲವಿಕರಣಾಯ ನಮೋ,

ಬಲವಿಕರಣಾಯ ನಮೋ, ಬಲಾಯ ನಮೋ, ಬಲಪ್ರಮಥನಾಯ ನಮ:,

ಸರ್ವಭೂತ-ದಮನಾಯ ನಮೋ, ಮನೋನ್ಮಮನಾಯ ನಮಛ||)

3. ಅಘೋರ : ದುಷ್ಟ ಶಿಕ್ಷಣಕ್ಕಾಗಿ ಘೋರರೂಪವನ್ನು ತಾಳುವವನು, ಶಿಷ್ಟ ರಕ್ಷಣೆಗಾಗಿ ಶಾ೦ತರೂಪದಲ್ಲಿ ಮೈದೋರುವವನೂ ಆದ, ಪ೦ಚಮುಖಿ ಮಹಾದೇವನ ದಕ್ಷಿಣ ಮುಖಕ್ಕೆ ಘೋರ-ಅಘೋರವೆ೦ದು ಕರೆದು ಈಗ ಬಣ್ಣಿಸುತ್ತಾನೆ. ಪರಶಿವನ ದಕ್ಷಿಣಾಭಿಮುಖವೇ ಅಘೋರ. ಭಕ್ತರಾದ ನಮ್ಮೆಲ್ಲರ ಯೋಗಕ್ಷೇಮವನ್ನು ಸದಾ ತನ್ನ ಹೊಣೆಯೆಂದುಕೊಂಡಿರುವವನು. ಯೋಗಕ್ಷೇಮದ ಅರ್ಥವೇನು? ಸ್ಥಿತಸ್ಯ ಪಾಲನಂ ಕ್ಷೇಮ:, ಅಪ್ರಾಪ್ತಸ್ಯ ಪ್ರಾಪ್ತಿರ್ ಯೋಗಃ|| ಅ೦ದರೆ, ಇದ್ದದ್ದನ್ನು ಕಾಪಾಡುವುದು ಕ್ಷೇಮ, ಬರಬೇಕಾದದ್ದನ್ನು ಬರುವ೦ತೆ ನೋಡಿಕೊಳ್ಳುವುದು, ಯೋಗ. ಪ್ರಪನ್ನರ, ಶರಣು ಬಂದವರ ಯೋಗಕ್ಷೇಮವು ನನ್ನ ಕರ್ತವ್ಯ ಎನ್ನುವುದೇ ದೇವರೀಯುವ ಶಾಶ್ವತ ಭರವಸೆ. ಹೀಗೆ ಮಾಡುವಾಗ ಸಾತ್ವಿಕರಿಗೆ ಕಾಣಿಸಿಕೊಳ್ಳುವ ಭಗವ೦ತನು ಸೌಮ್ಯ ರೂಪದವನು. ಆದರೆ, ಈ ಸೌಮ್ಯರೂಪವೇ ಪ್ರಚಂಡ ಭೀಕರರೂಪವನ್ನೂ ತಾಳಬಲ್ಲದು, ಅತಿಭಯಂಕರನೂ, ಅತಿಶಾಂತಸ್ವರೂಪಿಯೂ ಆದ ಆ ಶಕ್ತಿ ಅಳಿಸಬಲ್ಲದು; ಅಳಿಸಿಬಿಡಬಲ್ಲದು ಕೂಡ. ಉಪನಿಷತ್ತು ಈ ದ್ವಂದ್ವನ್ನು ಕಾಣುವುದು ಹೀಗೆ:

ದೀನದಲಿತರ ಜನರ, ಮೊರೆಯಿಡುವ ಅನುಸರರ

ಯೋಗಕ್ಷೇಮವ ಹೊರುವ ರಕ್ಷಕನಾಗಿಹ ಶೂರ;

ಕಾಡಿಸುವೆ ಪೀಡಿಸಿ ಅವರ, ಹೆದರಿಸುವೆ ಕೆಟ್ಟವರ;

ದುಷ್ಟರನು ಸದೆಬಡಿವ ಸಮಯದಲಿ ಉಗ್ರ ಘೋರ;

ಬವಣೆಗೊಳಗಾದವರ ಸಂತೈಸಲೆನೆ ಆಗುವೆ ಶಾಂತ-

ಓ ರುದ್ರ, ಏನೆಲ್ಲ ಬಗೆ ಬಗೆಯ ನೀ ರೂಪವಂತ!

(ಅಘೋರೇಭ್ಯೋ ಅಥ ಘೋರೇಭ್ಯೋ, ಘೋರಘೋರತರೇಭ್ಯಃ|

ಸರ್ವೇಭ್ಯ: ಸರ್ವ ಶರ್ವೇಭ್ಯೋ, ನಮಸ್ತೇ ಅಸ್ತು ರುದ್ರರೂಪೇಭ್ಯಃ||)

4. ತತ್ಪುರುಷ : ಈಗ ಪರಶಿವನ ಪೂರ್ವಾಭಿಮುಖ ಗೋಚರಿಸುತ್ತದೆ. ಅವನು ತತ್ಪುರುಷ. ಅಂದರೆ, ತತ್, ಎಲ್ಲವೂ ಅವನೇ, ಎಲ್ಲ ಪುರಗಳಲ್ಲೂ (=ಶರೀರಗಳಲ್ಲಿ) ತು೦ಬಿಕೊ೦ಡಿರುವವನು, ಪರಿಪೂರ್ಣನು. ಆ ಜ್ಯೋತಿರ್ಮಯನಾದ ಸರ್ವಶ್ರೇಷ್ಠ ಭಗವಂತನನ್ನು ಧ್ಯಾನಿಸೋಣ; ಅವನ ನಮ್ಮ ಬುದ್ಧಿಯನ್ನು ಪ್ರಚೋದಿಸಲಿ! (ಓಂ ತತ್ ಸವಿತೃ ವರೇಣ್ಯಂ, ಭರ್ಗೋ ದೇವಸ್ಯ ಧೀಮಹಿ, ಧಿಯೋ ಯೋ ನಃ ಪ್ರಚೋದಯಾತ್||)- ಎಂಬ ಭಾವದ ಹಾರೈಕೆಯೇ ಇದಕ್ಕೆ ಪರ್ಯಾಯವಾದ ಮೂಲ ಗಾಯತ್ರಿ ಮ೦ತ್ರ. ಈ ರುದ್ರ-ಗಾಯತ್ರಿಯನ್ನು ಉಪನಿಷತ್ತು ನಿರೂಪಿಸುವುದು ಹೀಗೆ:

ಮಾತಿಗೆಟಕದವ, ನೋಟಕ್ಕೆ ಮೀರಿದವ,

ಅಳತೆಗಳವಡದ ಶಿವ ಬಣ್ಣನೆಗೆ ದೂರದವ;

ಪರಮಪುರುಷನ ಅರಿಯ ಯತ್ನಿಸುವ, ಬನ್ನಿ,

ಆ ದೇವದೇವನ ಕುರಿತು ಧ್ಯಾನಿಸೋಣ,

ನಮ್ಮ ಚಿತ್ತವನತ್ತ ಕಡೆ ಪ್ರಚೋದಿಸಲೆಂದು

ಅವನನ್ನೇ ಮನಸಾರೆ ಕೇಳಿಕೊಳ್ಳೊಣ!

(ತತ್ಪುರುಷಾಯ ವಿದ್ಮಹೇ, ಮಹದೇವಾಯ ಧೀಮಹಿ|

ತನ್ ನೋ ರುದ್ರ: ಪ್ರಚೋದಯಾತ್||)

5. ಈಶಾನ : ನಾಲ್ಕು ದಿಕ್ಕುಗಳನ್ನೂ ನೋಡುವ ಭಗವಂತ ಊರ್ಧ್ವಮುಖಿಯೂ ಆಗಿ, ಜಗತ್ತನ್ನು ಹರಸುತ್ತಿದ್ದಾನೆ- ಎಂದು ಭಕ್ತನ ಭಾವನೆ. ಅವನೀಗ ಈಶಾನ, ಅಂದರೆ ಎಲ್ಲರನ್ನೂ ಆಳುವವನು. ಪ೦ಚಮುಖಿ ಮಹಾದೇವನ ಊರ್ಧ್ವಮುಖ ಶಾ೦ತವೂ, ತೇಜೋಮಯವಾಗಿಯೂ ಇದ್ದು, ಬಾನನ್ನೆಲ್ಲಾ ಆವರಿಸಿಕೊ೦ಡಿರುವ ಅವನ ಭವ್ಯ ಚಿತ್ರವನ್ನ ಕವಿ ಕೊಡುತ್ತಾನೆ. ಸರ್ವಜ್ಞ ಸ್ವರೂಪಿಯಾದ ಭಗವ೦ತನನ್ನು ಮಹಾನಾರಾಯಣ ಉಪನಿಷತ್ತು ವರ್ಣಿಸುವುದು ಹೀಗೆ:

ನಾವರಸುವೆಲ್ಲ ಬಗೆಯ ಅರಿವಿನ ಅರಸ, ಓಜರ ಓಜ,

ಚರಾಚರದೆಲ್ಲದರ ಹುಟ್ಟುಳಿವು ಅಳಿವಿನ ಒಡೆಯ,

ಜಡಜೀವಜಂತುಗಳ ಕೂಡಿಸಾಡಿಸಿ ಬಿಡಿಸಿ ಆಳುವವ,

ಮಂಗಳವೇ ಮೈತಾಳಿ ಸದಾ ಒಳಿತೀಯುತಿರು ಸದಯ!

(ಈಶಾನ: ಸರ್ವವಿದ್ಯಾನಾಂ, ಈಶ್ವರಃ ಸರ್ವಭೂತನಾಂ,

ಬ್ರಹ್ಮಾಧಿಪತಿರ್, ಬ್ರಹ್ಮಣೋಧಿಪತಿರ್, ಬ್ರಹ್ಮಾ,

ಶಿವೋ ಮೇ ಅಸ್ತು ಸದಾಶಿವೋಮ್||)

ಯಾರು ಈ ರುದ್ರ?: ಇಲ್ಲಿ ಭಕ್ತ ಶಿವನನ್ನು 'ರುದ್ರ'ನೆಂದು ಕರೆಯುತ್ತಾನೆ. ಯಾರು ಈ ರುದ್ರ? ಪ್ರಕೃತಿಯ ಅದಮ್ಯ ಚೈತನ್ಯಗಳ ಅಭಿವ್ಯಕ್ತಿಗೆ ಬೆರಗಾಗಿ ಮಾನವ ಅವನ್ನು ಗೌರವಿಸುತ್ತಿದ್ದ ಕಾಲಕ್ಕೆ ಹೋಗೋಣ. ತಾನು ಕಂಡ ನೆಲ ನೀರು ಗಾಳಿ ಬೆಳಕು ಆಕಾಶಗಳ ಮೂಲಭೂತ ತತ್ವಗಳ ಆಳ, ಹರವು, ಶಕ್ತಿ, ಪ್ರಭಾವವನ್ನ ಅರಿಯಲು ಚಿಂತಕ ಹವಣಿಸ ತೊಡಗಿದ್ದ ಸಮಯ. ಈಗ ಅಂಥ ಕವಿಯೊಬ್ಬನಿಗೆ ಗಗನವವನ್ನೇ ಬೇಧಿಸಿಕೊಂಡು ಕೆಳಗಿಳಿದ 'ರುದ್ರ' ಕಾಣಿಸುತ್ತಾನೆ: ಮೋಡಗಳು ಕಾರ್ಮುಗಿಲಾಗಿ ಆಕಾಶವನ್ನು ಆವರಿಸಿಕೊಂಡು ತಮ್ಮ ತಿಕ್ಕಾಟದಲ್ಲಿ ಮಿಂಚು ಗುಡುಗು ಸಿಡಿಲು ಹಠಾತ್ತನೆ ಒದಗಿ ಬಂದಾಗ ನಡುಗಿದ ಬೆದರಿದ, ಅದಕ್ಕೆ ದೈವತ್ವ ಶಕ್ತಿಯ ಆರೋಪ ಮಾಡಿದ ನೀಲರುದ್ರ ಉಪನಿಷತ್ತಿನ(1-3) ಋಷಿಯ ಈ ಉದ್ಗಾರವನ್ನ ಗಮನಿಸಿ:

ನಿನ್ನ ನೋಡಿದೆ, ಹೌದು, ಇಳಿವುದನದೂ ಕಂಡೆ,

ಬಾನಿನಿಂದಲೆ ಬುವಿಗಿಳಿವುದನು ಕಣ್ಣಾರೆ ಕಂಡೆ;

ಎರಗಿ ಬಂದಪ್ಪಳಿಸುವ 'ರುದ್ರ' ನಿನ್ನನ್ನು ಕಂಡೆ-

ಕರಿ ಕೊರಳ, ಗುಂಗುರು ಕುರುಳುಳ್ಳವನೆ,

ನಾ ಬೆದರಿದೆ! ||1||

ಇಳಿದ ಬಾಂದಳದಿಂದ, ಎದೆಯೆಲ್ಲ ನಡುಗಿತು, ಝಲ್ಲನೆ;

ಇಳೆಯ ಮೇಲಡಿಯಿಟ್ಟ ತಾ ನಡೆದು ಹೊರಟೇ ಹೊರಟ;

ಅಗೊ ನೋಡಿ, ನನ್ನವರೇ, ಆ ತಾಮ್ರ ವರ್ಣದ ಉರಿಯ

ಕಂಡು ಮರೆಯಾಗುತಿಹ ಕರಿ-ಕೊರಳ ಸೋಜಿಗದ ಪರಿಯ! ||2||

ಬಾ ರುದ್ರ, ನೀ ಯಾರ ಹಿಂಸಿಸಲು ಬೇಡ, ಬಾ;

ಎಲ್ಲ ರೋಗಕೆ ಮದ್ದು ನೀನಾಗಿ ಬಾರಾ!

ಕೊಚ್ಚಿ ಕೊಂಡೊಯ್ಯುವ ಬಿರುಗಾಳಿ ನಿದ್ದೆಯನು

ಕದ್ದಿತಲ್ಲ, ಜಾರಿ ಕರಗಲಿ ಅದು ತೀರ ಪೂರ!

ಈ ದಿವ್ಯ ದೇವನ ಕೈಯಲ್ಲಿ ಇರುವುದೇನು? ವಜ್ರಾಯುಧ! ಹಾಗಾಗಿ, ಇವನು ವಜ್ರಬಾಹು. ಇವನಿಗೆ ಕಾಡು, ಮಲೆ, ಬೆಟ್ಟದ ಕೋಡು, ಮರದ ತುದಿಗಳೆಂದರೆ ಅಕ್ಕರೆ; ಅದಕ್ಕೇ ಇವನನ್ನು ಯಜುರ್ವೇದದ ವಾಜಸನೇಯೀ ಸಂಹಿತೆ, ಅತಿ ಎತ್ತರದ ಮರದಮೇಲೆ ನಿನ್ನ ಆಯುಧಗಳನ್ನಿರಿಸಿ, 'ಕೃತ್ತಿ೦ ವಸಾನ ಆ ಚರ' ಬಾ-ಎಂದು ಕೇಳಿಕೊಳ್ಳುವುದು! ಕೋಪ ಬಂದಾಗ ಪ್ರಾಣಿಗಳನ್ನು ಕೊಂದಾನು, ಮನುಷ್ಯರನ್ನೂ ಸಹ ಹಿಂಸಿಸಿಯಾನು; ಬೇಡ!- ಎನ್ನುವುದು. ಅಥರ್ವ ವೇದದಲ್ಲಿ ಇವನ ಬೆನ್ನು ಕೆಂಪು, ಹೊಟ್ಟೆ ನೀಲಗಪ್ಪು, ಹೊಟ್ಟೆ ಕೆಳಗಾಗಿ ಮಲಗೆದ್ದಮೇಲೆ ಬಿಟ್ಟ ಗುರುತೆಲ್ಲ ಸುಟ್ಟ ಕಪ್ಪು! ಇವನು ಬಂದು ಹೋದನೆಂದರೆ, ದೈವ ವೈದ್ಯನೊಬ್ಬ ಬಂದು ಔಷಧಿಯೊಂದನ್ನೇನೋ ಚಿಮುಕಿಸಿ ಗಿಡ ಮರ ನೆಲ ಹೊಲಗಳಿಗೆಲ್ಲ ಹೊಸತನ ತುಂಬಿ ಹೋದಂತೆ! ಈಗ ಹೇಳಿ ಈ ಒಗಟಿಗೆ ನಿಮ್ಮ ಉತ್ತರವೇನು! ಈ 'ರುದ್ರ' ಬರಸಿಡಿಲಲ್ಲದೆ ಇನ್ನೇನು?

ರುದ್ರ! 'ಅಳಿಸುತ್ತಾನೆ, ಕಣ್ಣೀರು ಬರಿಸುತ್ತಾನೆ' (ರೋದಯತಿ, ರುದಿರ್ ಅಶ್ರುವಿಮೋಚನೇ, ಇತಿ ರುದ್ರ:) ಎಂದು ಕೆಲವರೂ, 'ತಾನೇ ಅಳುತ್ತಾನೆ'(ರುದತಿ ಇತಿ ರುದ್ರಃ) ಎಂದು ಇನ್ನು ಕೆಲವರೂ ಹೇಳುವುದುಂಟು. ರುದ್ರ ಆವಿರ್ಭವಿಸಿ ಅತ್ತಿದ್ದೇಕೆ, ಅಳುವುದೇಕೆ? ಸಂಸಾರಬಂಧನದ, ನಮ್ಮ ಈ ಬಿಟ್ಟೂ ಬಿಡಲಾರದ ಜಂಜಾಟವನ್ನು ಕಂಡು ಮನಕರಗಿ ಅವನಿಗೆ ಅಳು ಬಂದಿರಬೇಕು! ಅಳಿಸಿದ್ದೇಕೆ? ತಪ್ಪೆಂದು ಗೊತ್ತಾದಮೇಲೂ ಮಾಡುವವರು ಅದನ್ನು ಬಿಟ್ಟು ಬಿಡದೆ, ಸರಿದಾರಿಗೂ ಹೋಗದೆ, ಹೋಗಲೊಲ್ಲದವರಿದ್ದಾರಲ್ಲ- ಅವರನ್ನು ಹೆದರಿಸಿ, ಬೆದರಿಸಿ, ಅವಶ್ಯಕತೆ ಬಿದ್ದರೆ ಶಿಕ್ಷಿಸಿ, ಹಿಂಸಿಸಿ ಅಳಿಸುತ್ತಾನೇನೋ! ಅಂತೂ, ಅತ್ತು ಅಳುವ ಆಳುವ ದೇವರು, ನಮ್ಮ ರುದ್ರ!

ವಿಶ್ವತೋಮುಖ, ಸರ್ವಸಾಕ್ಷಿ, ಭುವನವನ್ನೆಲ್ಲ ಸದಾ ನೋಡುತ್ತಿರುವ ಕಣ್ಣು , ಅಣುವಿಗಿಂತ ಸಣ್ಣದು, ದೊಡ್ಡದಕ್ಕಿಂತ ಹಿರಿದಾದದ್ದು, 'ಜೀವ ಜಡರೂಪ ಪ್ರಪಂಚವನು ಆವರಿಸಿಕೊಂಡುಂ ಒಳನೆರೆದುಂ' ಇರುವ (ಶ್ವೇತಾಶ್ವತರ ಉಪ 3.3) ಈ ರುದ್ರನನ್ನು ಗುರುತಿಸಿರಿ. ಒಳಗಿರುವ ಬೆಳಕನ್ನು ಗುರುತಿಸಿಕೊಂಡವರೇ ಧನ್ಯರು!

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more
X