ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಗಜಗೌರಿವ್ರತ ಮತ್ತು ಕೊಂತಿಪೂಜೆ

By Staff
|
Google Oneindia Kannada News

ಕರ್ನಾಟಕದ ಹಬ್ಬ ಹರಿದಿನ ವ್ರತ ಉತ್ಸವ ತೇರು ಊರಹಬ್ಬ ಜಾನಪದ ಆಚರಣೆಗಳ ಒಳಪದರಗಳು ಸಮೃದ್ಧವಾದದ್ದು ಮತ್ತು ಅರ್ಥಗರ್ಭಿತವಾದದ್ದು. ಪ್ರಾದೇಶಿಕ ವೈಶಿಷ್ಟ್ಯ, ಸಮುದಾಯದ ತನ್ಮಯತೆ ಮತ್ತು ಮುಗ್ಧತೆಯೇ ಈ ಸಂಭ್ರಮಾಚರಣೆಗಳ ಜೀವಾಳ. ಪರಂತು, ಈ ಹೊತ್ತಿನ ಜಾಗತೀಕರಣದ ಸುನಾಮಿಯಲ್ಲಿ ನಮ್ಮತನವನ್ನು ಸಾರಿಹೇಳುವ ಈ ವ್ರತಗಳು ಈ ಜಾನಪದ ಕಥೆಗಳು ಕೇವಲ ನೆನಪುಗಳಾಗುತ್ತಿವೆಯೆ? ಅಂತರ್ಜಾಲದಲ್ಲಿ, ಗೂಗಲ್ ಇಂಜಿನ್‌ನಲ್ಲಿ ಸಂರಕ್ಷಿಸಲ್ಪಟ್ಟ ಡೇಟಾಗಳಾಗುತ್ತಿವೆಯೇ? ಭಯವಾಗುತ್ತದೆ.

ಅಂಕಣಕಾರ : ಶಿಕಾರಿಪುರ ಹರಿಹರೇಶ್ವರ, ಮೈಸೂರು

Gajagowri Vratha and kOnthi Poojeಪ್ರಖ್ಯಾತ ಹರಿಕಥೆ ದಾಸರಾದ ಗುರುರಾಜುಲು ನಾಯ್ಡು ಅವರ ಗಜಗೌರೀವ್ರತ ಹರಿಕಥೆಯನ್ನ ನೀವೆಲ್ಲ ಕೇಳಿರಬೇಕು. ನಾವು ಪತ್ರಿಕೆ ನಡೆಸುತ್ತಿದ್ದಾಗ ಅಮೆರಿಕನ್ನಡದ ಅಭಿಮಾನಿಗಳೊಬ್ಬರು ಸೌದೀಅರೇಬಿಯಾದಿಂದ ಆ ಹರಿಕಥೆಯ ಧ್ವನಿಮುದ್ರಿಕೆಯನ್ನ ನಮಗೆ ಅಮೆರಿಕಾಕ್ಕೆ ಕಳಿಸಿದ್ದರು- ಎತ್ತಣ ಮಾಮರ, ಎತ್ತಣ ಕೋಗಿಲೆ, ಎತ್ತಣಿಂದೆತ್ತ ಸಂಬಂಧವಯ್ಯ?-ಅಲ್ಲವೇ? ಪ್ರಪಂಚಾದ್ಯಂತ ಕನ್ನಡಿಗರು ಇದ್ದಕಡೆಯೆಲ್ಲ, ಹರಿಕಥೆಯ ಬಗ್ಗೆ ಆಸಕ್ತಿ ಇದ್ದವರಲೆಲ್ಲ, ಈ ಕಥೆ ಎಷ್ಟು ಜನಪ್ರಿಯವಾಗಿತ್ತು(ದೆ)- ಎಂಬುದನ್ನು ಸಮರ್ಥಿಸಲು ಹೀಗೆ ಹೇಳಿದೆ, ಅಷ್ಟೆ. ಮಹಾಭಾರತದಲ್ಲಿ ಪಾಂಡವರ ತಾಯಿ ಕುಂತಿಯು ಗೌರಿಯ ಪೂಜೆಯನ್ನ ಮಾಡಬೇಕೆಂದು ಬಯಸಿದುದು, ಅದಕ್ಕಾಗಿ ಪಾಂಡವರು ದೇವೇಂದ್ರನ ಐರಾವತ ಆನೆಯನ್ನೇ ಭೂಮಿಗೆ ಇಳಿತಂದುದು ಮತ್ತು ಇದಕ್ಕೆ ಸಂಬಂಧಿಸಿದ ಹಿನ್ನೆಲೆಯ ವಿವರಗಳೇ ಈ ಹರಿಕಥೆಯ ಮುಖ್ಯ ವಸ್ತು.

ಕುಂತಿಯ ಈ ಗಜಗೌರಿ ವ್ರತವನ್ನ ಆಧರಿಸಿ, ಮತ್ತು ಸ್ವಲ್ಪ ವಿಭಿನ್ನವಾಗಿಯೂ ಸಹ 'ಕೊಂತಿಪೂಜೆ" ಎಂದೂ ಸಹ ಕರ್ನಾಟಕದ ಹಲವಾರು ಕಡೆ ಆಚರಿಸುವುದುಂಟು. (ಈ 'ಕೊಂತಿಪೂಜೆ"ಯ ಬಗ್ಗೆ ಈ ಲೇಖನದ ಕೊನೆಯಲ್ಲಿ ಚರ್ಚಿಸುತ್ತೇನೆ.) ಮೊದಲು ಗಜಗೌರೀವ್ರತ. ನಾನು ಹುಡುಗನಾಗಿದ್ದಾಗ ನಮ್ಮ ಅಜ್ಜ ಪುರೋಹಿತ ಶಾಮಭಟ್ಟರು ಶಿವಮೊಗ್ಗದಲ್ಲಿ ಹಲವಾರು ಕಡೆ ಈ ಗಜಗೌರೀವ್ರತವನ್ನ ಹಳ್ಳಿಗರ ಮನೆಗಳಲ್ಲಿ ಮಾಡಿಸುತ್ತಿದ್ದಾಗ, ಅವರ ಜೊತೆಗೆ 'ಗಿಂಡಿಮಾಣಿ"ಯಾಗಿ ನಾನೂ ಹೋಗುತ್ತಿದ್ದೆ; ಅದಿನ್ನೂ ನನ್ನ ನೆನಪಿನಲ್ಲಿ ಹಸಿರಾಗಿದೆ.

***
ಗಜಗೌರೀವ್ರತದ ಸಾರಾಂಶ ಇಷ್ಟು: ಪಾಂಡವರು ತಮ್ಮ ತಾಯಿ ಕುಂತಿಯೊಂದಿಗೆ ರಾಜಧಾನಿ ಹಸ್ತಿನಾವತಿಯಿಂದ ದೂರದಲ್ಲಿದ್ದಾರೆ. ಇತ್ತ ಅರಮನೆಯಲ್ಲಿ ಕೌರವರ ಪರಿವಾರ ಸಕಲ ವೈಭೋಗಗಳಿಂದ ಕೂಡಿ ಸಂತೋಷವಾಗಿದ್ದಾರೆ. ಚಕ್ರವರ್ತಿಯ ಪಟ್ಟಮಹಿಷಿ ಗಾಂಧಾರಿಗೆ ಒಮ್ಮೆ ಗೌರಿಪೂಜೆಯನ್ನ ಮಾಡಬೇಕು ಅಂತ ಅನಿಸಿತಂತೆ. ತನ್ನ ಮಕ್ಕಳ ಅಭ್ಯುದಯಕ್ಕಾಗಿ ವಿಜೃಂಭಣೆಯಿಂದ ಇದನ್ನು ಆಚರಿಸಬೇಕೆಂದು ಅವಳು ಮನಸು ಮಾಡುತ್ತಾಳೆ. ಗುರುಗಳಾದ ವೇದವ್ಯಾಸರನ್ನ ಬರಮಾಡಿಕೊಂಡು ವ್ರತಾಚಾರಣೆಯ ಬಗ್ಗೆ ಸಲಹೆ ಕೇಳುತ್ತಾಳೆ. ಅವರು ಹೇಳಿದಂತೆ ಎಲ್ಲಾ ವ್ಯವಸ್ಥೆಗಳನ್ನ ರಾಜೋಚಿತವಾಗಿ, ತನ್ನ ನೂರೊಂದು ಮಕ್ಕಳ ಸಹಾಯದಿಂದ ಮಾಡಿಕೊಂಡು ವ್ರತವನ್ನ ಸಾಂಗವಾಗಿ ಆಚರಿಸುತ್ತಾಳೆ.

ಆದರೆ ಒಂದೇ ಒಂದು ತಪ್ಪು ಮಾಡುತ್ತಾಳೆ. ತನ್ನ ಬಂಧುಬಾಂದವರನ್ನೆಲ್ಲ ಈ ಮನೆಹಬ್ಬಕ್ಕೆ ಕರೆದರೂ, ಸ್ತ್ರೀ ಸಹಜ ಮಾತ್ಸರ್ಯದಿಂದ ತನ್ನ ಓರಗಿತ್ತಿಯಾದ ಕುಂತಿಯನ್ನು ಮಾತ್ರ ಈ ಮನೆಯ ಹಬ್ಬಕ್ಕೆ ಕರೆಯುವುದಿಲ್ಲ. ತನ್ನ ಮಕ್ಕಳ ಕುಂದುಗಳನ್ನೇ, ಅವರು ಮಾಡಿರಬಹುದಾದ ಚಿಕ್ಕಪುಟ್ಟ ತಪ್ಪುಗಳನ್ನೇ ದೊಡ್ಡದು ಮಾಡಿಕೊಂಡು ಪ್ರಜೆಗಳೆಲ್ಲ ಆಡಿಕೊಳ್ಳುತ್ತಾರೆ, ದೂಷಿಸುತ್ತಾರೆ. ಜೊತೆಗೆ, ತನ್ನ ಓರಗಿತ್ತಿ ಕುಂತಿಯ ಮಕ್ಕಳಾದ ಪಾಂಡವರು ಅಷ್ಟೇನೂ ಸ್ಥಿತಿವಂತರಲ್ಲದಿದ್ದರೂ, ಜನ ಅವರನ್ನು ಮೆಚ್ಚಿ ಮಾತನಾಡುತ್ತಾರೆ; ಯಾರೂ ಮಾಡಲಾಗದ್ದನ್ನು ಅವರು ಏನೋ ಮಹಾ ಮಾಡಿಬಿಟ್ಟಿದ್ದಾರೆ ಅನ್ನುವಂತೆ, ಸಾಹಸ ಎಂದು ಬಣ್ಣಿಸಿ ಹಾಡಿಹೊಗಳುತ್ತಾರೆ- ಎಂದೆಲ್ಲಾ ಗಾಂಧಾರಿಗೆ ಹೊಟ್ಟೆಯುರಿ. ತನ್ನ ಗಂಡನ ದೃಷ್ಟಿಯ ಬಗ್ಗೆ ಒಂದೇ ಅಲ್ಲ, ದುರ್ಯೋಧನಾದಿ ತನ್ನ ಎಲ್ಲಾ ಮಕ್ಕಳ ಕೆಟ್ಟ ನಡತೆಯ ಬಗ್ಗೆಯೂ ಅವಳು ಕುರುಡಿಯಾಗಿದ್ದಾಳೆ. ಅವರ ಕೆಟ್ಟ ಸುದ್ದಿಗಳ ಬಗ್ಗೆ ಕಿವುಡಿಯೂ ಆಗಿಹೋದ ಈ ಮಹಾತಾಯಿ ಹೊಟ್ಟೆಕಿಚ್ಚನ್ನು ತೀರಿಸಿಕೊಳ್ಳುವುದು ಈ ರೀತಿ: ಕುಂತಿಯನ್ನ ತನ್ನ ಮನೆಯ ಹಬ್ಬಕ್ಕೆ ಗಾಂಧಾರಿ ಕರೆಯುವುದಿಲ್ಲ.

ಅಪೂರ್ವವಾದ ಈ ಮನೆಹಬ್ಬಕ್ಕೆ ಕರೆ ಬಂದೀತು, ಇವತ್ತು ಬಂದೀತು, ಈಗ ಬಂದೀತು, ಇನ್ನೇನು ಬಂದೀತು- ಎಂದು ಕಾದು ಕುಳಿತ ಕುಂತಿಗೆ ಕೊನೆಗೂ ಆಹ್ವಾನ ಬರುವುದಿಲ್ಲ. ಅವಳಿಗೆ ತುಂಬಾ ನಿರಾಸೆಯಾಗುತ್ತದೆ, ದುಃಖವಾಗುತ್ತದೆ. ತನಗೆ ಅವಮಾನವಾಯಿತು ಅಂತ ಕುಂತಿ ಕೋಪಗೊಳ್ಳುತ್ತಿಲ್ಲ, ಅಳುತ್ತಿಲ್ಲ. ಅಷ್ಟು ವಿಜೃಂಬಣೆಯಿಂದ ಪೂಜೆಗೊಳ್ಳುತ್ತಿದ್ದ ಗೌರಿಯ ದರ್ಶನ ಮಾಡುವ ಅವಕಾಶ, ಅದರಿಂದ ದೊರಕಬಹುದಾದ ಪುಣ್ಯ ತನಗೆ ತಪ್ಪಿಹೋಯಿತಲ್ಲಾ- ಅನ್ನುವ ಕೊರಗು ಕುಂತಿಯದು. ಕರೆಯದೆ ಹೋದರೂ, ತಾನೇ ಅರಮನೆಗೆ ಹೋಗಿ ಬರುವ ಸನ್ನಾಹದಲ್ಲಿ ಅವಳು ಸಿದ್ಧಳಾಗಿಯೇ ಇದ್ದಳು; ಆದರೆ, ಹಾಗೆ ಅವಳು ಹೋಗಬೇಕು- ಎನ್ನುವುದರ ಒಳಗಾಗಿ ಪೂಜೆ ಮುಗಿದೇ ಹೋಗಿತ್ತು. ಕುಂತಿ ಮುಲುಮುಲು ಅಳುತ್ತ ಮನೆಯಲ್ಲೇ ಉಳಿದಳು.

ತಾಯಿ ಹೀಗೆ ವ್ಯಥೆಪಡುತ್ತಿರುವದನ್ನ ನೋಡಿ, ಅವಳನ್ನೇ ಕೇಳಿ ಪಾಂಡವರು ವಿಷಯವನ್ನು ತಿಳಿದುಕೊಳ್ಳುತ್ತಾರೆ. ಯುಧಿಷ್ಠಿರನಿಗೆ ಇದು ಬಹಳ ಸಣ್ಣ ವಿಚಾರವಾಗಿ ತೋರುತ್ತದೆ. ಒಂದು ದುರ್ಗಾಪೂಜೆಯನ್ನ ತಾಯಿ ಮಾಡಬೇಕು, ಅಷ್ಟೇ ತಾನೆ? ಅದಕ್ಯಾಕೆ ಇಷ್ಟೆಲ್ಲ ರಂಪ. ನಾವೂ ಪೂಜೆ ಮಾಡಿದರಾಯಿತು. ದೇವರ ಆಶೀರ್ವಾದ ಪಡೆದರಾಯಿತು- ಅನ್ನುತ್ತಾನೆ ಧರ್ಮರಾಯ. ನಕುಲ ಸಹದೇವರು ಇದಕ್ಕೆ ದನಿಗೂಡಿಸುತ್ತಾರೆ. ಭೀಮಾರ್ಜುನರ ವಿಚಾರವೇ ಬೇರೆ. ಕೌರವರು ಯಾವ ರೀತಿ ಹಬ್ಬ ಮಾಡಿದರೋ, ಅದಕ್ಕಿಂತ ಅದ್ಧೂರಿಯಾಗಿ ನಾವು ಮಾಡಿಬಿಡೋಣ. ಯಾರು ಯಾರನ್ನು ಅವರು ಕರೆದಿದ್ದರೋ, ಅವರನ್ನೆಲ್ಲ ನಾವೂ ಕರೆಯೋಣ. ಯಾರನ್ನು ಅವರು ಕರೆಯಲು ಮರೆತರೋ ಅವರನ್ನೂ ಕರೆಯೋಣ. ಜೊತೆಗೆ ಆ ನಮ್ಮ ದೊಡ್ಡಮ್ಮ ಗಾಂಧಾರಿಯನ್ನೂ ಅಹ್ವಾನಿಸೋಣ. ಉರಿದರೆ ಹೊಟ್ಟೆ ಉರಿದುಹೋಗಲಿ, ನಮಗೇನಂತೆ, ಸಾಂಗವಾಗಿ ಪೂಜೆಯೂ ಅಗಬೇಕು; ಬಂದವರೆಲ್ಲ ತಿಂದು ತೇಗಿ ನಲಿದು ಒಲಿದು ಸಂತೋಷದಿಂದ ಮನೆಗೆ ಮರಳಿ ಹೋಗಬೇಕು, ಹಾಗೇ ಮಾಡೊಣ- ಇದು ಭೀಮಾರ್ಜುನರ ಅಪೇಕ್ಷೆ.

ಯಥಾಪ್ರಕಾರ ಸುದ್ದಿ ತಿಳಿದು ನಾರದರು ಪ್ರತ್ಯಕ್ಷರಾಗುತ್ತಾರೆ. ಭೀಮಾರ್ಜುನರ ಆಸೆಯ ಕಿಡಿಯನ್ನ ಆಕಾಂಕ್ಷೆಯ ದಳ್ಳುರಿಯಾಗಿಸಿಬಿಡುತ್ತಾರೆ. “ಗೌರೀಪೂಜೆ ತಾನೇ? ಮಾಡಿ. ಅದೂ ತಾಯಿಯ ಅಭೀಪ್ಸೆಯನ್ನ ಪೂರೈಸುವುದೇ ಮಕ್ಕಳ ಆದ್ಯ ಕರ್ತವ್ಯ. ದಿನವೂ ಮಾಡುವ ಪೂಜೆಯೇ ಇದು, ಅಲ್ಲ; ಎಂದೋ ಒಮ್ಮೆ ಮಾಡುವ ದೇವೀ ಮಹೋಪಾಸನೆ. ನಡೆಯಲಿ, 'ನ ಭೂತೋ ನ ಭವಿಷ್ಯತಿ"ಯ ರೀತಿಯಲ್ಲಿ ರುದ್ರಾಣಿಯ ಆರಾಧನೆ. ನಿಮ್ಮಮ್ಮನ ಪೂಜೆಗೆ ಇಂದ್ರಲೋಕದಿಂದ ಕಾಮಧೇನು, ಕಲ್ಪವೃಕ್ಷ, ಉಚ್ಛೈಶ್ರವ ಮುಂತಾದ ಅಮೂಲ್ಯ ವಸ್ತುಗಳನ್ನೇ ಏಕೆ ತರಿಸಿಕೊಳ್ಳಬಾರದು? ಇಂದ್ರನ ಐರಾವತ ಅನೆಯನ್ನೂ ಬೇಕಾದರೆ ತರಿಸಿಕೊಳ್ಳಿ. ನೀವು ಕೇಳಿದರೆ ಇಲ್ಲವೆನ್ನುವ ಧೈರ್ಯ ಆ ಸುರಪತಿಗಿದೆಯೇ? ಗೌರಿಯನ್ನ ವಿಧಿವತ್ತಾಗಿ ಪೂಜಿಸಿ, ಐರಾವತದ ಮೇಲೆ ಅಂಬಾರಿಯಲ್ಲಿ ಆ ಪಾರ್ವತೀದೇವಿಯನ್ನು ಕುಳ್ಳಿರಿಸಿ, ಊರಿನಲ್ಲೆಲ್ಲ ಮೆರವಣಿಗೆ ಮಾಡಿಸಿ, ಎಲ್ಲರಿಗೂ ದರ್ಶನ ಸಿಗುವಂತೆ ಮಾಡಿ"- ಎಂದು ನಾರದ ಸಲಹೆ ಕೊಡುತ್ತಾರೆ. “ಭೀಮಾರ್ಜುನರೇ, ನಿಮಗಿದು ಖಂಡಿತಾ ಸಾಧ್ಯ. ಬೇಕಾದರೆ, ನಿಮ್ಮ ಆಪ್ತಬಂಧು ಶ್ರೀಕೃಷ್ಣನ ಸಹಾಯವನ್ನೂ ಕೇಳಿ ಪಡೆದುಕೊಳ್ಳಿ"- ಎಂದು ಹೇಳಿ ಮುಂದೆ ನಡೆಯುವ ನಾಟಕದ ರೂಪುರೇಷೆಗಳನ್ನ ಮನಸ್ಸಿನಲ್ಲೇ ಊಹಿಸಿಕೊಳ್ಳುತ್ತ, ನಾರದರು ದೇವೇಂದ್ರನ ಆಸ್ಥಾನಕ್ಕೆ ಹಾರುತ್ತಾರೆ.

“ಭೂಮಿಯ ಮೇಲಿನ ಜನ ಏನೇನೊ ಹುಚ್ಚಾಸೆಗಳನ್ನ ದೊಡ್ಡದಾಗಿ ಇಟ್ಟುಕೊಂಡಿರುತ್ತಾರೆ. ಸ್ವರ್ಗದಲ್ಲಿರುವ ನಾವು ಅವೆಲ್ಲಕ್ಕೂ ಬಡಪೆಟ್ಟಿಗೆ ಮಣಿಯಬೇಕೆಂದೇನೂ ಇಲ್ಲ. ನಿನ್ನ ಬಳಿ ಇರುವ ಐರಾವತವೇ ಮೊದಲಾದ ಅಮೂಲ್ಯ ವಸ್ತುಗಳು ಪಾಂಡವರಿಗೆ ಪೂಜೆಗಾಗಿ ಬೇಕೆಂದಿದ್ದರೆ, ಸ್ವರ್ಗದಿಂದ ಭೂಮಿಗೆ ಒಂದು ಏಣಿಯನ್ನೋ ಸೇತುವೆಯನ್ನೋ ಅವರೇ ಕಟ್ಟಲಿ; ಆಮೇಲೆ, ಅವನ್ನು ನೀನವರಿಗೆ ಕಳುಹಿಸಿದರಾಯಿತು"- ಎಂದು ನಾರದರು ದೇವೇಂದ್ರನಿಗೆ ಸಲಹೆ ಮಾಡುತ್ತಾರೆ. ಪಾಂಡವರ ಅರ್ಜುನ ಶ್ರೀಕೃಷ್ಣನ ಸಹಾಯದಿಂದ ಬಾಣಗಳ ಸೇತುವೆಯನ್ನ ಕಟ್ಟಿದನೇ? ಐರಾವತ ಕೆಳಗೆ ಇಳಿದು ಬಂತೇ? ಭವಾನಿಯ ಮೂರ್ತಿಯನ್ನು ಮಾಡಲೋಸುಗ, ಭೀಮ ಜೇಡೀ ಮಣ್ಣಿನ ಗುಡ್ಡವನ್ನೇ ಮನೆಯ ಬಾಗಿಲ ಬಳಿ ತಂದಿಳಿಸಿದನೇ? ಕುಂತಿಯು ಗೌರೀಪೂಜೆಯನ್ನು ಮಾಡಿದಳೇ? ಅನೆಯ ಮೇಲೆ ಸಾಲಂಕೃತ ಹೈಮವತಿಯ ಮೆರವಣಿಗೆ ರಾಜಧಾನಿಯಲ್ಲೆಲ್ಲ ನಡೆಯಿತೇ? ಗಾಂಧಾರಿ ಮತ್ತು ಕುಂತಿ ಒಂದಾದರೇ?- ಇವೆಲ್ಲಕ್ಕೆ ಉತ್ತರವನ್ನ ನಮ್ಮ ಗುರುರಾಜಲು ನಾಯ್ಡು ಅವರ ಬಾಯಲ್ಲೇ ಉಪಕತೆಗಳ ಹಿತಮಿತ ಮಿಶ್ರಣದ ನಡುವೆ ಕೇಳಬೇಕು.

ಆದರೆ, ಟಿ.ಎಸ್. ಕೃಷ್ಣಯ್ಯಶೆಟ್ಟಿಯವರ ವ್ರತರತ್ನಾಕರ ಗ್ರಂಥದ ಆಧಾರದ ಮೇಲೆ ನಮ್ಮಜ್ಜ ಶಾಮಭಟ್ಟರು ಗಜಗೌರೀ ವ್ರತವನ್ನ ಭಾದ್ರಪದ ಬಹುಳ ಅಷ್ಟಮಿಯ ದಿನ, ಅಥವಾ ಸೂರ್ಯನು ಮಕರ ರಾಶಿಗೆ ಬಂದ ದಿನದ ಮಾರನೆಯ ದಿನ ಮಾಡಿಸುತ್ತಿದ್ದಾಗ, ಈ ನನ್ನ ಮಾತನ್ನು ನಂಬಿ, ಮೇಲೆ ಹೇಳಿದ ಈ ಕತೆಯನ್ನು ಖಂಡಿತಾ ಹೇಳುತ್ತಿರಲಿಲ್ಲ. ಅವರು ಹೇಳುತ್ತಿದ್ದುದು: ಪೂರ್ವಕಾಲದಲ್ಲಿ ಕೃಷ್ಣಾನದಿ ತೀರದಲ್ಲಿ ಮಂಗಳಗಿರಿ ಎಂಬ ಹೆಸರಿನ ಒಂದು ಪಟ್ಟಣವಿತ್ತಂತೆ. ಅಲ್ಲಿ ಒಬ್ಬ ಸೋಮಯಾಜಿ ಎಂಬ ಶ್ರೋತ್ರಿಯನೊಬ್ಬನ ಹೆಂಡತಿ ಜೇಡಿಮಣ್ಣಿನಲ್ಲಿ ಗೌರೀದೇವಿಯ ಪ್ರತಿಮೆಯನ್ನು ಮಾಡಿ ಪೂಜಿಸುತ್ತಾ ಇದ್ದಳಂತೆ. ಅವಳಿಗೆ ಈ ವ್ರತಪ್ರಭಾವದಿಂದ ಪುತ್ರಪೌತ್ರಾದಿ ಸಂಪತ್ತುಗಳು ಲಭ್ಯವಾಯಿತು- ಎಂಬ ನೀರಸ ವ್ರತಕತೆಯನ್ನ ಹೇಳಿ, ನಮ್ಮಜ್ಜ ಮನೆಗೆ ಬರುತ್ತಿದ್ದರು. ಸ್ಕಾಂದಪುರಾಣದ ಋಷಿಕವಿಗೆ ಮಹಾಭಾರತದ ಈ ಗಜಗೌರೀ ಪೂಜೆಯ ಕತೆ ಏಕೆ ಹೊಳೆಯಲಿಲ್ಲವೋ ದೇವರೇ ಬಲ್ಲ!

*****
ಕೊ೦ತೀ ಪೂಜೆ : ಕರ್ನಾಟಕದ ಮೈಸೂರು, ಮಂಡ್ಯ ಮತ್ತು ಇನ್ನಿತರ ಜಿಲ್ಲೆಗಳಲ್ಲಿ ಹಳ್ಳಿಗರು ಆಚರಿಸುವ ಒಂದು ಕೃಷಿಗೆ ಸಂಬಂಧಿಸಿದ ಆಚರಣೆ- ಕೊ೦ತೀ ಪೂಜೆ. ಮಹಾಭಾರತದ ಪಾಂಡವರು ವ್ಯವಸಾಯವನ್ನು ರೂಢಿಸಿದವರಲ್ಲಿ ಮೊದಲಿಗರೆಂಬ ಭಾವನೆ ನಮ್ಮ ರೈತಾಪಿ ಜನರಲ್ಲಿ ತಳವೂರಿದೆ. ಅಂತೂ ಇಂತೂ ಕುಂತಿ ಮಕ್ಕಳಿಗೆ ಕಷ್ಟ ತಪ್ಪಿದ್ದಲ್ಲ- ಎಂಬ ಗಾದೆಯಂತೆ, ಮಕ್ಕಳನ್ನು ಕಟ್ಟಿಕೊಂಡು ಊರೂರು ಅಲೆಯುತ್ತ ಕಾಡುಮೇಡು ಸುತ್ತುತ್ತ ಕುಂತಿ ಪಟ್ಟ ಬವಣೆ ಅಷ್ಟಿಷ್ಟಲ್ಲ. ಈ ಕೊ೦ತೀ ಪೂಜೆಯ ಬಗ್ಗೆ ಒಂದು ವಿಶೇಷ ಅಧ್ಯಯನವನ್ನೇ ಪ್ರೊ| ಕ್ಯಾತನಹಳ್ಳಿ ರಾಮಣ್ಣನವರು ಮಾಡಿ ಪ್ರಕಟಿಸಿದ್ದಾರೆ.

ಪ್ರಖ್ಯಾತ ಜಾನಪದ ವಿದ್ವಾಂಸ ಜೀಶಂ ಪರಮಶಿವಯ್ಯನವರು ಅವರು ಹೇಳುವಂತೆ, ಪಾಂಡವರೊಂದಿಗೆ ಆ ಮಹಾತಾಯಿ ಕೊಂತಿ ಆ ಕಾಲದಲ್ಲಿ ತಮ್ಮ ಹಳ್ಳಿಗಳಲ್ಲೆಲ್ಲ ಆಡ್ಡಾಡಿ ಹೋಗಿದ್ದಾಳೆ- ಎಂದೇ ಗ್ರಾಮಸ್ಥರ ನಂಬಿಕೆ. ಅವರು ಬಿಟ್ಟಹೋದ ಗುರುತುಗಳನ್ನ ನೋಡಿಕೊಂಡು ಆ ಆದರ್ಶ ಧರ್ಮಭೀರುಗಳನ್ನ ನೆನೆಸಿಕೊಂಡು ಹಾಡುವುದು ಅವರ ಸಂಪ್ರದಾಯ. ಸತ್ಯವುಳ್ಳ ಧರ್ಮರು ಸತ್ತರು ಎನದಿರಿ| ಸತ್ತರೆ ಲೋಕ ಉಳಿಯದು- ಧರ್ಮರು| ಬಿತ್ತಿ ಹೋಗವರೆ ಅವರೆಯ||- ಎಂಬ ತ್ರಿಪದಿ ಬಹಳ ಜನಪ್ರಿಯವಾದದ್ದು. ಕಾರ್ತೀಕಮಾಸವೆಂದರೆ, ಸಾಮಾನ್ಯವಾಗಿ ರೈತನ ಹೊಲಗಳಲ್ಲಿ ಬೆಳೆ ತೆನೆದೂಗುವ ಕಾಲ. ಅವರೆಯ ಹೂವು ಅರಳುವ, ಹುಚ್ಚೆಳ್ಳು ಬಿರಿಯುವ ಕಾಲ. ಈ ಸಮಯದಲ್ಲಿ ಈ ಜಿಲ್ಲೆಗಳಲ್ಲಿ ವಿಶೇಷವಾಗಿ ಆಚರಿಸುವ ಹಬ್ಬವೆಂದರೆ ಕೊಂತೀಪೂಜೆ. ಇನ್ನೊಬ್ಬ ಹೆಸರಾಂತ ಜಾನಪದ ಪಂಡಿತ, ಡಾ| ಪಿ.ಕೆ. ರಾಜಶೇಖರ್ ಅವರ ಮೌಖಿಕ ಮಹಾಕಾವ್ಯ ಜನಪದ ಮಹಾಭಾರತ ದಲ್ಲಿ ಸಹ ಈ ಪಾಂಡವರ-ಅವರೆಕಾಳಿನ ಪ್ರಸ್ತಾಪ ಬರುತ್ತದೆ.

****
ಜನಪದ ಮಹಾಭಾರತದಲ್ಲಿ ಅವರೆಕಾಳಿನ ಪ್ರಸಂಗ ಹೀಗಿದೆ : ಪಾಂಡವರ ನೆನಪು ಶಾಶ್ವತವಾಗಿ ಭೂಮಿಯ ಮೇಲೆ ಇರಲಿ- ಎಂಬ ಕಾರಣಕ್ಕೆ “ಹೊರಟು ನಿಂತಾಗ ವನಕೆ, ಕೊಂತ್ಯಮ್ಮ, ಪುತ್ತುರರ ಕರೆದಳ್ ಆಗ, ಕುಂತಲ್ಲಿ ನಿಂತಲ್ಲಿ ಕೊಂತಮ್ಮನ ಮಕ್ಕಳ, ಹೆಸರುಳಿಯಬೇಕಂದಳು- ಕೊಂತ್ಯಮ್ಮ, ಹೆಸರುಕಾಳ್ ಎರಚಿದಳು" “ವನಕೆ ಹೋಗುವ ಹೊತ್ತಲಿ- ಕೊಂತಮ್ಮ, ಮುಳ್ಳಿಮದ ಅವರೆಕಾಳ, ತಗುದು ಧರ್ಮರ ಕೈಗೆ ಕೊಡುತ ಅಂದಳು ಕೊಂತಿ, ಪಾಂಡವರು ಅವರೆ ಅವರೆ." “ಪಾಂಡವರು ಅವರೆ ಅವರೆ- ಮಕ್ಕಳೆ, ಪಾಂಡವರು ಅವರೆ ಅಂತ, ಜಗ ತಿಳಿದುಕೊಳ್ಳಲಿ ಅವರೆ ಬಿತ್ತೀರಂತ, ಅವರೆ ಕಾಳನ್ನು ಕೊಟ್ಟಳು- ಕೊಂತ್ಯಮ್ಮ, ಅವರೆ ಬಿತ್ತಿರಿ ಅಂದಳು||" “ಧರುಂರಾಯ ತಕ್ಕೊಳಪ್ಪ ಈ ಅವರೆಕಾಳುಗಳ, ಗಜಗೌರೀ ವ್ರತ ಮಾಡುವಾಗ, ದೇವಲೋಕದಿಂದ ಬಂದಿದ್ದ ಕಾಳುಗಳಲ್ಲಿ, ಈ ಅವರೆ ಕಾಳು ಪಾಂಡವರು ತಕ್ಕೊಂಡಿದ್ದು, ನಾನು ಈ ನೆಲದ ಮಗಳು, ಈ ನೆಲದ ಮೇಲೆ ನ್ಯಾಯ ನೀತಿ ಸತ್ಯಧರ್ಮಗಳು ಇರೋನ್ಗಂಟ, ಪಾಂಡವರು ಅವರೆ ಅಂತ, ಈ ಅವುರೆಕಾಳ ನೋಡ್ಕೊಂಡು, ಜಗತ್ಯದ ಜನ ತಿಳುಕೊಳ್ಳಿ ಕಾಣ್ರಪ್ಪ, ಪಾಂಡವರು ಧರ್ಮಕ್ಕಾಗಿ ಹೋರಾಡ್ದೋರು ಅನ್ನುವಂತಾದ್ದಕ್ಕೆ, ಈ ಅವರೆ ಕಾಳು ಸಾಕ್ಷಿ ಆಗಿರಲ್ರಪ್ಪ, ನಿಮುಗೆ ಒಳ್ಳೇದಾಗಲಿ, ನಾವಿನ್ನು ಗಿಡೀಗೆ ಹೋಯ್ತಿದ್ದೀವಿ, ನಿಮ್ಮ ಹೆಸರು ಹಸುರಾಗಿರಲಿ ಕಣ್ರಪ್ಪ"- ಅಂತ ಹೇಳಿ ಮಕ್ಕುಳ್‌ಗೆ ಆಸುರ್ವಾದ ಮಾಡುದ್ಲು, ಗಾಂಧಾರಿ ದ್ರುತುರಾಷ್ಟ್ರ, ವಿದುರ, ಸೆಂಜೇಯರು, ಕೊಂತಮ್ಮನ ಕರ್‍ಕೋಂಡು ಕಾಡುದಾರಿ ಹಿಡಿದ್ರು||.....ಅವರೇಯ ಬಿತ್ತಿದರು- ಪಾಂಡವರು, ಅವರೆ ಅಂತ ಸಾರಿದರು, ಅವರೇಯ ಗಿಡ ಚಿಗಿತು ಹೂ ಕಚ್ಚಿ ನಗುವಾಗ, ಪಾಂಡವರ ಹೆಸರಾಯಿತು- ಜಗತ್ಯದಲಿ, ಪಾಂಡವರ ಹೆಸರಾಯಿತು||"

ರೈತರೆಲ್ಲ ಹೇಳ್ತಿದ್ದಾರೆ : “ಕೊಂತಮ್ಮ ತಾಯಿ ನೀನು ಕೊಟ್ಟಂಥ ಈ ಅವರೆ ಕಾಳು ಹೂ ಕಚ್ಚಿ ಫಲ ಫಲಾಂತ ಅದೆ. ಇದು ಕಾರ್ತೀಕ ಮಾಸ ನನ್ನವ್ವ, ಪ್ರತೀ ಕಾರ್ತಿಕದಲ್ಲೂ ಈ ಅವರೇ ಗಿಡ ಹೂ ಕಚ್ಚಿದಾಗ, ನಿನ್ನ ಮಕ್ಕಳ ಸೊರಣೆ ಮಾಡಿ, ಕೊಂತಮ್ಮನ ಪೂಜೆ ಅಂತ್ಹೇಳಿ ನಿನ್ನ ಪೂಜೆ ಮಾಡ್ತೀವಮ್ಮ"- ಅಂದ್ರು || ಪಾಂಡವರ ಹೆಸರಿನಲ್ಲಿರುವ ಈ ಅವರೆ ಗಿಡದಲ್ಲಿ ಬಿಡುವ ಅವರೆಕಾಯಿಯಲ್ಲಿ, ಯಾವ ತಳಿಯಲ್ಲಾದರೂ, ಐದಕ್ಕಿಂತ ಹೆಚ್ಚು ಕಾಳುಗಳು ಇರುವುದಿಲ್ಲ ಎಂಬುದು ಹಳ್ಳಿಯ ಜನರ ನಂಬಿಕೆ.

****
ಕೇರಿಕೇರಿಗಳಲ್ಲಿ ಮೂರುದಿನಗಳಿಂದ ನಲವತ್ತೈದು ದಿನ ಪರ್ಯಂತ ಆಚರಿಸುವ ಈ ಪೂಜೆಯಲ್ಲಿ ಹಳ್ಳಿಗರೆಲ್ಲ ಪಾಲುಗೊಳ್ಳುತ್ತಾರೆ. ಬಯಲಾಗಬಹುದು, ದೇಗುಲವಾಗಬಹುದು, ಮನೆಯ ಮುಂದಣ ಜಗಲಿಯೇ ಆಗಬಹುದು, ತಾಯಿ ಗೌರಿಯನ್ನು ಕೂರಿಸಲು ಎಲ್ಲ ಎಡೆಗಳೂ ಪ್ರಶಸ್ತವೇ. ಕೊನೆಯ ದಿನ, ಮಣ್ಣಿನ ಮೂರ್ತಿಗೆ ಸಕಲ ಭೂಷಣಗಳ ಅಲಂಕಾರ ಮಾಡಿ, ತಲೆಯ ಮೇಲೆ ಹೊತ್ತು ಊರೆಲ್ಲ ಮೆರವಣಿಗೆ ಮಾಡಿ, ಅವರೆಯ ಹೊಲದಲ್ಲಿ ವಿಸರ್ಜನೆ ಮಾಡುವುದು ಇಲ್ಲಿನವರ ಪದ್ಧತಿ. ಅಂದು ಹೆಂಗೆಳೆಯರ ಹಾಡು ಹಸೆ, ಕುಣಿತ, ಊರಿನ ಕಲಾವಿದರ ಮನರಂಜನಾ ಕಾರ್ಯಕ್ರಮ, ಹಳ್ಳಿಗರೆಲ್ಲಾ ಒಟ್ಟಾಗಿ ಕುಳಿತು ಊಟ ಮಾಡುವ ರಾತ್ರಿಯ ಭಾರೀ ಔತಣಕೂಟ- ವಿಶೇಷ ಆಕರ್ಷಣೆಗಳು. ದಸರಾ ಹೇಗೆ ಕರ್ನಾಟಕದ ಒಂದು ವಿಶಿಷ್ಟ ನಾಡಹಬ್ಬವೋ, ಹಾಗೆಯೇ ಈ ಕೊಂತಿ ಪೂಜೆಯೂ ಸಹ ಕನ್ನಡನಾಡಿನ ಒಂದು ಮಣ್ಣಿನಮಕ್ಕಳ ಮನೆಯಹಬ್ಬವೆನ್ನುವುದರಲ್ಲಿ ಸಂದೇಹವಿಲ್ಲ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X