ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನಾಟಕರಂಗದಲ್ಲಿ ನನ್ನ ತಾಲೀಮುಗಳು-ಹರಿ

By Staff
|
Google Oneindia Kannada News

A passion for Kannada playsಕನ್ನಡ ನಾಟಕದ ಓದು, ನಾಟಕ ರಚನೆ, ಅಭಿನಯ ..ಇವೆಲ್ಲ ಒಂದು ಹುಚ್ಚು ಎನ್ನುವುದುಂಟು. ಆದರೆ, ಲೇಖಕರಿಗೆ ಈ ಹುಚ್ಚು ಬಾಲ್ಯದಿಂದಲೂ ಬೆಳೆದುಬಂದ ಬಿಡಿಸಲಾರದ ನಂಟು. ಈ ನಂಟಿನ ನಂಟನು ಬಲ್ಲವರೇ ಬಲ್ಲರು!

*ಶಿಕಾರಿಪುರ ಹರಿಹರೇಶ್ವರ, ಮೈಸೂರು

ನೈವೇಲಿಯ ಕನ್ನಡ ಸಂಘ ಎಂದೊಡನೆ ನನ್ನ ನೆನಪಿನ ಕಟ್ಟು ಬಿಚ್ಚಿ ಹರಡಿಕೊಂಡು ಆಗಸದಗಲ ವರ್ಣಮಯ ಚಿತ್ರಪಟವಾದಾಗ, ಆ ಬಾಂದಳದಲ್ಲಿ ಮಿನುಗುವ ಚುಕ್ಕೆಗಳೆಂದರೆ ನಾವೆಲ್ಲ ಆಡಿದ ನೂರೈವತ್ತಕ್ಕೂ ಮೀರಿದ ಸಂಖ್ಯೆಯ ಬೇರೆ ಬೇರೆ ನಾಟಕಗಳು. ಈ ನಾಟಕದ ಬಗ್ಗೆ ಹುಚ್ಚು ಹೇಗೆ ನನ್ನನ್ನ ಆವರಿಸಿತ್ತು ಎಂಬುದನ್ನ ತಿಳಿಯಲು ಸ್ವಲ್ಪ ಹಿನ್ನೋಟದ ಅವಶ್ಯಕತೆ ಇದೆ. ಆ ಕಾರಣ, ಕಾಲಯಂತ್ರದಲ್ಲಿ ಸ್ವಲ್ಪ ಹಿನ್ನಡೆಯೋಣ.

*
ನನಗೆ ನಾಟಕವೆಂದರೆ ಬಾಲ್ಯದಿಂದಲೂ ಪಂಚಪ್ರಾಣ. ನಾನು ಹುಟ್ಟಿ ಬೆಳೆದ ವಾತಾವರಣವೂ ಅದಕ್ಕೆ ಕಾರಣ ಇರಬಹುದೇನೋ. ನಮ್ಮ ತಾಯಿಗೆ ನಾಲ್ಕು ಮಂದಿ ಅಣ್ಣ ತಮ್ಮಂದಿರು. ಅವರೆಲ್ಲ ಯಕ್ಷಗಾನದಲ್ಲಿ ಒಂದಲ್ಲ ಒಂದು ಥರಾ ತೊಡಗಿದ್ದವರು. ತೀರ್ಥಹಳ್ಳಿಯ ಕೋಣಂದೂರು ನಮ್ಮಮ್ಮನ ತೌರು. ಆಮೇಲೆ ಅವರೆಲ್ಲ ತೋಟ ಗದ್ದೆ ಹೊಲ ಮನೆ ಮಾಡಿದ್ದು ತೂದೂರುಕಟ್ಟೆಯ ಸಮೀಪದ ಸೋಮವಾರಸಂತೆಯಲ್ಲಿ. ಅಲ್ಲಿಗೇ ನಾನು ಚಿಕ್ಕವನಾಗಿದ್ದಾಗ ಶಾಲೆಗೆ ರಜೆ ಬಂದಾಗ ಹೋಗಿ ಬರುತ್ತಿದ್ದುದು. ಅಮ್ಮನ ಅಣ್ಣ, ನಮ್ಮ ದೊಡ್ದ ಮಾವ ನರಸಿಂಹಮೂರ್ತಿಭಟ್ಟರು ಭಾಗವತರು. ಅವರ ತಮ್ಮ ಶೇಷಣ್ಣ ಮಾವ ಮೃದಂಗ ಪಟುಗಳು. ಮೂರನೆಯ ಮಾವ, ಸುಬ್ರಾಯಭಟ್ಟರು ದುರ್ಗಾ ಪರಮೇಶ್ವರೀ ಮೇಳದಲ್ಲಿ ಹೆಸರಾಂತ ಸ್ತ್ರೀ ವೇಷಧಾರಿ ಕಲಾವಿದರು.

ಕೊನೆಯ ಮಾವ ಲಕ್ಷ್ಮೀನಾರಾಯಣಭಟ್ಟರು ಈ ಯಕ್ಷಗಾನ ತಂಡದ ವ್ಯವಸ್ಥಾಪಕರು. ಅವರು ಶಿವಮೊಗ್ಗದಲ್ಲಿ ಲಾಯರ್ ಒಬ್ಬರ ಕಛೇರಿಯಲ್ಲಿ ಗುಮಾಸ್ತರೂ ಆಗಿದ್ದರಿಂದ ವ್ಯವಹಾರ ನಿಪುಣರು. ಬಾಲ್ಯದಲ್ಲಿ ನಾನು ನೋಡಿದ ಯಕ್ಷಗಾನ ಬಯಲಾಟಗಳಿಗೆ, ಕುಳಿತು ಕೇಳಿದ ತಾಳಮದ್ದಲೆಗಳಿಗೆ ಲೆಕ್ಕವಿಲ್ಲ. ತೊರವೆ ರಾಮಾಯಣ, ಅದ್ಭುತರಾಮಾಯಣ ಅಥವಾ ಜೈಮಿನಿಭಾರತ ಆಧರಿಸಿದ ಏನೇನೋ ಸ್ವಯಂವರಗಳು ಪರಿಣಯಗಳು ಕಲ್ಯಾಣಗಳು ಕಾಳಗಗಳು ಇಲ್ಲವೇ ವಧೆಗಳು. ಉದಾಹರಣೆಗೆ, ವ್ಯಾಸ ಮಹಾಭಾರತದ ಪ್ರಸಂಗಗಳನ್ನೇ ಅಕಾರಾದಿಯಾಗಿ ತೆಗೆದುಕೊಳ್ಳಿ: ಅಭಿಮನ್ಯು ಕಾಳಗ (ಸೈಂಧವ ವಧೆ), ಇಂದ್ರಕೀಲಕ, ಉತ್ತರಗೋಗ್ರಹಣ, ಐರಾವತ ಪ್ರಸಂಗ, ಕುಮುದ್ವತೀ ಕಲ್ಯಾಣ, ಕೃಷ್ಣಾರ್ಜುನರ ಕಾಳಗ, ಗದಾಪರ್ವ, ಘಟೋತ್ಕಚನ ಕಾಳಗ, ಚಿತ್ರಸೇನಕಾಳಗ, ಜರಾಸಂಧ ವಧೆ, ತಾಮ್ರಧ್ವಜನ ಕಾಳಗ, ದ್ರೋಣಪರ್ವ, ದ್ರೌಪದೀ ಪ್ರಲಾಪ, ದ್ರೌಪದೀ ಸ್ವಯಂವರ, ನಳಚರಿತ್ರೆ, ನೀಲಧ್ವಜನ ಕಾಳಗ, ಪಾಂಡವವಿಜಯ, ಬಭ್ರುವಾಹನ ಕಾಳಗ, ಭೀಷ್ಮಪರ್ವ, ಭೀಷ್ಮವಿಜಯ, ರಾಜಸೂಯ ಯಾಗ, ಸುಧನ್ವಕಾಳಗ, ಸುಭದ್ರಾಕಲ್ಯಾಣ ಇತ್ಯಾದಿ. ಹೀಗೆ ಬಣ್ಣದ ತುಂತುರುಗಳು ಎಳೆಯನ ಮನಸ್ಸಿನಮೇಲೆ ಆಗಲೇ ನವಿಲುಗರಿಯಾಟ ಆಡಿಸುತ್ತಿದ್ದುದು ಸಹಜವೇ.

ನನ್ನ ಮಾವ ಲಕ್ಷ್ಮೀನಾರಾಯಣ ಭಟ್ಟರ ಪ್ರಸಂಗಗಳ ಸಂಗ್ರಹದಲ್ಲಿನ ಕೆಲವು ಪುಸ್ತಕಗಳು ಈಗ ನನ್ನ ಬಳಿ ಇವೆ. ಅವುಗಳಲ್ಲಿ ಮುಖ್ಯವಾದವು: ಉಡುಪಿಯ ಶ್ರೀಮನ್ ಮಧ್ವಸಿದ್ಧಾಂತ ಗ್ರಂಥಾಲಯದ, ಪಾವಂಜೆ ಗುರುರಾಜರಾವ್ ಪ್ರಕಾಶಿಸಿದ, ಕುಂಬಳೆ ಪಾರ್ತಿ ಸುಬ್ಬನ 'ವಾಲಿ-ಸುಗ್ರೀವರ ಕಾಳಗ (ಪಂಚವಟಿ ರಾಮಾಯಣ)", ಪ್ರಕಟಣೆ 1934; ನಂದಳಿಕೆ ಲಕ್ಷ್ಮೀನಾರಯಣಪ್ಪ (ಮುದ್ದಣ)ನ 'ರತ್ನಾವತಿ ಕಲ್ಯಾಣ(ದೃಢವರ್ಮ ಕಾಳಗ)", 1951; ವಿ ಬಿ ಸುಬ್ಬಯ್ಯ ಮತ್ತು ಮಕ್ಕಳು, ಮೈಸೂರು ಬುಕ್‌ಡಿಪೋ ಪ್ರಕಟಿತ, 'ರಾವಣೋದ್ಭವ", 1896; ವಾಜಪೇಯಂ ಕೃಷ್ಣಯ್ಯ ಮತ್ತು ಗೋವಿಂದಯ್ಯ, ಬೆಂಗಳೂರು ಪ್ರಕಟಿತ (ರಾಮಾಯಣ ಅಂತರ್ಗತ) ಪುತ್ರಕಾಮೇಷ್ಟಿ, 1913- ಮುಂತಾದವು. ಇವಲ್ಲದೆ, ನೂರಕ್ಕೂ ಹೆಚ್ಚು ಯಕ್ಷಗಾನ ಪ್ರಸಂಗಗಳು ನನ್ನ ಬಳಿ ಇವೆ. ಅವುಗಳ ಮೇಲೆ ಕಣ್ಣಾಡಿಸಿದಾಗ, ಅವುಗಳಲ್ಲಿ ಹಲವನ್ನ ಬಯಲಾಟವಾಗಿ ನೋಡಿದ, ತಾಳಮದ್ದಲೆಯಾಗಿ ಕೇಳಿದ, ಭಾಗವಹಿಸ ಹೊರಟಾಗ ನಡೆದ ಘಟನೆಗಳೆಲ್ಲ ನೆನಪಾಗುತ್ತವೆ.

**
ಯಕ್ಷಗಾನ ಪ್ರಸಂಗದಲ್ಲಿ ಮುಖ್ಯವಾಗಿ ಇರುವ ಐದು ಅಂಶಗಳು ಸಾಹಿತ್ಯ, ಗಾನ, ವಾದನ, ನೃತ್ಯ ಮತ್ತು ಪಾತ್ರಸಂವಾದ. ಇವೆಲ್ಲದುದರ ಸಮ್ಮಿಶ್ರ ಪರಣಾಮ ಬಾಲಕನ ಮೇಲೆ ಬೀಳುತ್ತಿದ್ದುದು ಸಹಜವೇ. ಆಗಲೇ ನಾನು ವಯಸ್ಸಿಗೆ ತಕ್ಕ ಪರಿಮಿತ ಜ್ಞಾನದೊಂದಿಗೆ ಈ ಬಗ್ಗೆ ಯೋಚಿಸುತ್ತಿದ್ದೆ. ಈಗ ಇನ್ನೂ ಹೆಚ್ಚು ವಿವರವಾಗಿ ಚಿ೦ತಿಸಲು ಸಾಧ್ಯವಾಗುತ್ತಿದೆ. ಆಗಲೂ ಅಷ್ಟೆ, ಈಗಲೂ ಅಷ್ಟೆ. ಯಕ್ಷಗಾನ ಪ್ರಸಂಗಗಳ ಜನಪ್ರಿಯತೆ ಅದರ ಗುಣವನ್ನು ಅವಲಂಬಿಸಿರುತ್ತದೆ. 'ಗುಣ" ಎಂಬುದು ಪ್ರಸಂಗದ ವಸ್ತು ಮತ್ತು ಕತೆಯ ಅಂಶಗಳಿಗೆ ಅನ್ವಯಿಸಿದ್ದು; ಬಹಳ ಪ್ರಸಂಗಕಾರರಿಗೆ ಕತೆ ಬೇರೆ ವಸ್ತು ಬೇರೆ ಎಂಬುದು ಗೊತ್ತಿಲ್ಲದೇ ಇರಬಹುದು. ಇಡೀ ಪ್ರಸಂಗದಲ್ಲಿ ನಡೆಯಬಹುದಾದ ಘಟನೆಗಳ ಒಟ್ಟು ಗಟ್ಟಿಯೇ ಕತೆ. ಕತೆಯಲ್ಲಿ ಹುದುಗಿಕೊಂಡಿರುವ ತತ್ವ ಅಥವಾ ಯಾವುದಾದರೊಂದು ಸಮಸ್ಯೆಯು ವಸ್ತು ಎನಿಸಿಕೊಳ್ಳುತ್ತದೆ.

ಉದಾಹರಣೆಗೆ: 'ಭೀಷ್ಮವಿಜಯ"ವನ್ನೇ ತೆಗೆದುಕೊಳ್ಳಿ. ಭೀಷ್ಮನು ಯುದ್ಧಮಾಡಿ 'ಬೇರೊಬ್ಬರಿಗಾಗಿ" ಎಂದುಕೊಂಡು, ರಾಜಕುಮಾರಿ ಅಂಬೆಯನ್ನ ತನ್ನೂರಿಗೆ ಕರೆತರುವ ಕತೆ ನಮಗೆ ಗೊತ್ತಿದೆ. ಅಲ್ಲಿ ರಾಕ್ಷಸ ವಿವಾಹ, ಹೆಣ್ಣಿನ ದುಡುಕು ಸ್ವಭಾವ ತೊಳಲಾಟ, ಪ್ರಬಲ ದೃಢ ಆತ್ಮವಿಶ್ವಾಸದ ಶಕ್ತಿಯೊಡನೆ ಅದರ ಸೆಣಸಾಟಗಳು ಪ್ರಸಂಗದ ವಸ್ತುವಾಗಿದೆ. ಹಾಗೆಯೇ 'ಕೃಷ್ಣಾರ್ಜುನರ ಕಾಳಗ"ದ ಕತೆ; ಅರ್ಜುನ ಕೃಷ್ಣ ಸುಭದ್ರೆಯರ ತೌರು ಮತ್ತು ಗಂಡನ ಮನೆಗಳಲ್ಲಿ ನಡೆವ ಕತೆ ಗೊತ್ತಿದ್ದದ್ದೇ. ಮನೆಮನೆಯವರಲ್ಲಿ ತಲೆದೋರುವ ವಿರಸ, ಗರಗಸ, ಕವಣೆ, ಬವಣೆ ಅದನ್ನು ಪರಿಹರಿಸುವ ಪ್ರಯತ್ನಗಳು ಪ್ರಸಂಗದ ವಸ್ತುವಾಗಿದೆ. 'ಚಂದ್ರಹಾಸ ಚರಿತ್ರೆ"ಯಲ್ಲಿ ರಾಜಕುಮಾರ ಚಂದ್ರಹಾಸನ ಏಳುಬೀಳು, ಮಂತ್ರಿ ದುಷ್ಟಬುದ್ಧಿಯ ಕುಟಿಲೋಪಾಯಗಳು ಕತೆಯನ್ನು ಹೆಣೆಯುತ್ತವೆ. ವಿಧಿಯ ಕೈವಾಡ, ಆಕಸ್ಮಿಕಗಳು, ಸತ್ಯಕ್ಕೇ ಜಯ, ಮೋಸ ಸ್ವಾರ್ಥ ಲಾಲಸೆ ಕೊನೆಗೆ ಮಣ್ಣು ಮುಕ್ಕಲೇಬೇಕಾಗುತ್ತದೆ ಎಂಬುವೇ ಅಲ್ಲಿನ ವಸ್ತು.

ಸಾಮಾನ್ಯವಾಗಿ ಯಕ್ಷಗಾನದ ಕತೆಗಳು ಪುರಾಣಕ್ಕೆ ಸಂಬಂಧಪಟ್ಟವು. ಇಲ್ಲವೇ ರಾಮಾಯಣ ಮಹಾಭಾರತಗಳಿಂದ ಆಯ್ದವು. ಅವುಗಳ೦ತೂ ಸಾರ್ವಕಾಲಿಕ ವಸ್ತುಗಳು ಇರುವ ಸಿದ್ಧ ಆಕರಸಾಮಗ್ರಿಗಳು. ಎಲ್ಲೋ ಅಲ್ಲೊಂದು ಇಲ್ಲೊಂದು ಆಧುನಿಕ ಕತೆ ಇದ್ದಿರಬಹುದು; ಬಾಲಕನಾಗಿದ್ದಾಗ, ಆ ಬಗ್ಗೆ ಮಾವಂದಿರು ಹೇಳಿದ್ದು ಕೇಳಿದ್ದೆ. ಅವುಗಳನ್ನ ನೋಡಿದ ನೆನಪಿಲ್ಲ. ಪ್ರಸಂಗದಲ್ಲಿ ನಿರ್ದಿಷ್ಟ ವಸ್ತು ಇದ್ದು, ವೈಶಿಷ್ಟ್ಯ ಪೂರ್ಣವಾಗಿದ್ದರೆ ಎಂತಹುದಾದರೂ ಯಾರನ್ನಾದರೂ ಆಕರ್ಷಿಸೀತು. ಪ್ರಸಂಗಕಾರ ನಾಟಕ ರಚಿಸುವಾಗ ಅಭಿನೇತೃಗಳು ಪ್ರದರ್ಶಿಸುವಾಗ ಎದ್ದರೋ, ಗೆದ್ದರೋ, ಬಿದ್ದರೋ ಎಂಬುವುದು ಅವರವರ ಜಾಣ್ಮೆಯನ್ನು ಅವಲಂಬಿಸಿರುತ್ತದೆ.

ನಮ್ಮ ಮನೆಗೆ ಬಂದಾಗ ಮಾವಂದಿರೊಡನೆ ನನ್ನ ಮಾತುಕತೆಯೆಲ್ಲಾ ಹೆಚ್ಚಾಗಿ, ಈ ಯಕ್ಷಗಾನದ ಬಗ್ಗೆಯೇ ತಿರುಗಿ ಗಿರಕಿ ಹೊಡೆಯುತ್ತಿತ್ತು. ದೊಡ್ಡಲಾಗ, ಅಂತರಲಾಗ, ಅಡಂತರಲಾಗ ಮಂಡಿ ಬೀಸು ತಿರುಸು ಎಂಬೆಲ್ಲಾ ಹಾರಾಟ ಸುತ್ತಾಟದ ಕುಣಿತಗಳು ಎಂದೆಲ್ಲ ನಟ ಮಾವ ವಿವರಿಸುತ್ತಿದ್ದರು. ಚಂಡೆಯ ಶಬ್ದಕ್ಕೆ ಮೋಹಿತನಾಗಿದ್ದ ಹುಡುಗ ಮನೆಯಲ್ಲಿ ಅಕ್ಕಿ ತುಂಬಿದ ಡಬ್ಬಗಳ ಮೇಲೆ ಕೋಲಿನಿಂದ ತಾಳಬದ್ಧವಾಗಿ ಏನೋ ಒಂದು ಶೈಲಿಯಲ್ಲಿ ಹೊಡೆಯುತ್ತ ಆನಂದ ಪಡುತ್ತಿದ್ದ. ವಿವಿಧ ಮಟ್ಟುಗಳಲ್ಲಿ ಹೇಗೆ ಭಾಗವತ ಹಾಡುತ್ತಾರೆ ಎಂಬ ಛಂದಸ್ಸಿನ, ರಾಗಗಳ ಬಗ್ಗೆ ದೊಡ್ದ ಮಾವ, ಹೂಂಗುಟ್ಟುತ್ತಿದ್ದ ನನಗೆ ಅರ್ಥವಾಗಲಿ ಬಿಡಲಿ, ಹೇಳಿ ತಿಳಿಸುತ್ತಿದ್ದರು. ಅವರೇನು ಶಾಸ್ತ್ರೀಯ ಸಂಗೀತ ಅಭ್ಯಾಸ ಮಾಡಿದ ವಿದ್ವಾಂಸರಲ್ಲ; ಆದರೆ ಭಾಗವತಿಕೆ ಬೇಕಿದ್ದ ಅವಶ್ಯಕ ಸಂಗೀತ ಜ್ಞಾನ ಸಾಕಷ್ಟು ಅವರಲ್ಲಿತ್ತು.

ಹಿಡಿದ ತೆರೆಯ ಹಿಂದೆ ಮೆಲ್ಲಮೆಲ್ಲನೆ ಪ್ರವೇಶಿಸುತ್ತಾ ಭಾಗವತರ ಹಾಡಿನ ತುಣುಕಿನ ನಂತರ, ಆ ತೆರೆ ಕೆಳಗೆ ಬಿದ್ದೊಡನೆ ಪಾತ್ರವು ರಂಗದ ಮೇಲೆ ಕಾಣಿಸಿಕೊಂಡಾಗ ಮೈ ಜುಮ್ಮೆನಿಸುತ್ತಿತ್ತು. ವೇಷ ರಚನೆ, ಕಿರೀಟ, ಕಡಗ, ಕಂಕಣ, ಎದೆಹಾರ, ಭುಜಕೀರ್ತಿ ಇತ್ಯಾದಿ ಆಭರಣಗಳು ದೀವಟಿಗೆಯ ಬೆಳಕಿನಲ್ಲಿ ಕಣ್ಣು ಕೋರೈಸುತ್ತಿದ್ದವು. ಹಳ್ಳಿ ಮನೆಯಲ್ಲಿ ಮುಸ್ಸಂಜೆ ಊಟ ಮುಗಿಸಿಕೊಂಡು, ಅತ್ತೆ ಮಾವಂದಿರೊಡನೆ ಹೊರಟು, ಗದ್ದೆ ತೋಟಗಳ ಬದಿಯ ಮೇಲೆ ನಡೆಯುತ್ತ, ಕುಣಿದು ಕುಪ್ಪಳಿಸುತ್ತ, ಕೆಲವೊಮ್ಮೆ ಅಡ್ದ ಬಂದ ಹೊಳೆಯನ್ನು ನಡೆದೇ ದಾಟಿ, ದೂರದ ಕಟ್ಟಿದ ಚಪ್ಪರದ, ಆಟಪ್ರದರ್ಶನದ ಬಯಲು ಸಭಾ೦ಗಣಕ್ಕೆ ಹೋಗಿ ಕುಳಿತುಕೊಳ್ಳುತ್ತಿದ್ದೆವು; ಬಾಯಿಬಿಟ್ಟುಕೊಂಡು ರಾತ್ರಿಯೆಲ್ಲ ನಿದ್ದೆಗೆಟ್ಟು ಪಾರ್ಥಿಸುಬ್ಬನ ಪ್ರಸಂಗಗಳು ದೇವಿದಾಸನ ದೇವಿಮಹಾತ್ಮೆ, ಹಲಸಿನ ಹಳ್ಳಿ ನರಸಿಂಹಶಾಸ್ತ್ರಿಗಳ ರುಕ್ಮಾಂಗದ ಚರಿತ್ರೆ ಇತ್ಯಾದಿ ಇತ್ಯಾದಿ ಯಕ್ಷಗಾನ ದಶಾವತಾರ ಆಟಗಳನ್ನು ನೋಡಿ ಬರುತ್ತಿದ್ದೆ.

**
ಮಾಧ್ಯಮಿಕ ಶಾಲೆಯಲ್ಲಿ ಓದುತ್ತಿದ್ದಾಗ, ಸಹಪಾಠಿ ಗುರುರಾಜನ ಮನೆಯಲ್ಲಿ 'ಜಾಣಭಟ್ಟ" ಎಂಬ ನನ್ನ ನಾಟಕ ಆಡಿಸಿದ್ದು, ಆಡಿದ್ದು ಹಚ್ಚಹಸುರಿನಂತೆ ನೆನಪಿದೆ. ಅವರ ಮನೆಯ ಮಹಡಿಯ ಮೇಲಿನ ದೊಡ್ಡದೊಂದು ಹಾಲ್ ಇತ್ತು. ಅದೇ ಸಭಾಂಗಣ. ಗೋಡೆಯಿಂದ ಗೋಡೆಗೆ ಮೊಳೆ ಹೊಡೆದು, ಹಗ್ಗ ಕಟ್ಟಿದ್ದಾಯಿತು. ಅವರಿವರ ಮನೆಯಿಂದ ಎರವಲು ತಂದ ಸೀರೆ ಪಂಚೆಗಳೇ ಪರದೆಗಳು. ಅವನ್ನೆಲ್ಲಾ ಒಟ್ಟುಗೂಡಿಸಲು ಏನೆಲ್ಲ ಹರಸಾಹಸ ಮಾಡಬೇಕಾಗಿತ್ತು, ಗೊತ್ತಾ? ಉದ್ದುದ್ದ ಸೀರೆಗಳಾದ್ದರಿಂದ, ಹಗ್ಗ ಮಧ್ಯ ಬರುವಂತೆ ಅವುಗಳನ್ನ ಹಗ್ಗದಮೇಲೆ ಇಳಿಬಿಟ್ಟಾಗ ಪರದೆಗಳಾದವು. ಯಾವ ಪಾತ್ರಕ್ಕೂ ಸರಿಹೋಗದ ಹುಡುಗನನ್ನು ಪುಸಲಾಯಿಸಿ, ಪರದೆ ಎಳೆಯುವುದಕ್ಕೆ ತರಬೇತಿ ಕೊಟ್ಟರೂ, ಅವನು ನೇಪಥ್ಯದಲ್ಲಿ ನಿಂತು, ನಾಟಕ ನೋಡುವುದರಲ್ಲೇ ಮಗ್ನನಾಗಿ ಕೆಲಸ ಮರೆತರೆ, ಪ್ರಾಂಪ್ಟ್ ಮಾಡುತ್ತಿದ್ದ ನಿರ್ದೇಶಕನೇ ಓಡಿಬಂದು ಪರದೆಯನ್ನ ತಾನೇ ಎಳೆಯಬೇಕಾಗುತ್ತಿತ್ತು. ಇಲ್ಲದಿದ್ದರೆ, ಮಾತೆಲ್ಲ ಮುಗಿದು ಹೋಗಿ ಕಕಮಕಿಯಾದ ಪಾತ್ರಧಾರಿಗಳಿಗೆ ಏನು ಮಾಡಬೇಕೆಂಬುದೇ ತೋಚುತ್ತಿರಲಿಲ್ಲ. ಈ ಹಿಂದೆ ಎಂದೂ ಪ್ರೇಕ್ಷಕರ ಮುಂದೆ ನಿಂತು ಮಾತನಾಡಿ ಅಭ್ಯಾಸವಿಲ್ಲದ ಸಭಾಕಂಪನಪೀಡಿತ ಸಹಪಾಠಿಗಳಿಗೆ ತರಬೇತಿ ಕೊಡುವುದೂ ಮಹಾ ನಿರ್ದೇಶಕನಾದ ನನ್ನ ಹೊಣೆಗಾರಿಕೆಯೇ. ಮನೆ ಮನೆಗೆ ಹೋಗಿ, ಅವರನ್ನ ಕರೆತಂದು, ಬೆಣ್ಣೆ ಮಾತಾಡಿ ತಯಾರು ಮಾಡಬೇಕಾಗಿತ್ತು. ಯಾವುದೋ ಒಂದು ಹಿಂದೀ ಚಿತ್ರದಲ್ಲಿ ಕಿಶೋರ್ ಕುಮಾರ ಇದ್ದಂತೆ, ನಿರ್ಮಾಪಕ, ನಾಟಕಕಾರ, ಸಂಗೀತ(?) ನಿರ್ದೇಶಕ, ನಟ, ನಿರ್ದೇಶಕ ಎಲ್ಲಾ ಒಬ್ಬನೇ. ಮಾತು ಮರೆತರೆಂದು ಯಾರನ್ನಾದರೂ ಬೈದರೆ, ಮುಂದಿನ ರಿಹರ್ಸಲ್‌ಗೆ ನಟಸಾರ್ವಭೌಮರುಗಳು ನಾಪತ್ತೆ. ಹೀಗೇ ಕೆಲವು ನಾಟಕಗಳನ್ನ ಆಡಿದ ನೆನಪು ಈಗ ಮರುಕಳಿಸುತ್ತಿವೆ.

ನಮ್ಮ ಮನೆಯ ಮುಂದುಗಡೆ ಮಲ್ಲಿಗೆಯ ಬಳ್ಳಿಗೆ ಹಾಕಿದ ಚಪ್ಪರವನ್ನೇ ರಂಗಮಂಟಪವನ್ನಾಗಿ ಮಾಡಿಕೊಂಡು ಆಡಿದ ಒಂದು ನಾಟಕವೂ ನೆನಪಿಗೆ ಬರುತ್ತಿದೆ. ಏನೋ ಒಂದು ಪೌರಾಣಿಕ ನಾಟಕ. ಸಾಹಿತ್ಯ ಎಲ್ಲಾ ನನ್ನದೇ. ಆ ದಿನಗಳಲ್ಲಿ ಶಿವಮೊಗ್ಗದ ಕೋಟೆ ಶ್ರೀ ಆಂಜನೇಯಸ್ವಾಮಿ ದೇವಸ್ಥಾನದಲ್ಲಿ ಗಮಕಿ ಶ್ರೀ ರಾಮಕೃಷ್ಣಶಾಸ್ತ್ರಿ ಮುಂತಾದವರ ಹರಿಕತೆ ಏರ್ಪಡಿಸುತ್ತಿದ್ದರು. ಆವು ರಾತ್ರಿ ಸುಮಾರು ಒಂಬತ್ತರ ಅನಂತರ ಪ್ರಾರಂಭವಾಗುತ್ತಿದ್ದವು. ಹೋಗುತ್ತಿದ್ದ ಜನರಲ್ಲಿ ಹೆಂಗಸರು, ವಯಸ್ಸಾದ ಗಂಡಸರು, ಮಕ್ಕಳೇ ಜಾಸ್ತಿ. ಎಲ್ಲರೂ ಮನೆಯಲ್ಲಿ ಊಟ ಮುಗಿಸಿಕೊಂಡು, ಬಂದು ಸೇರುತ್ತಿದ್ದರು. ನಮ್ಮಮ್ಮ ದುರ್ಗಿಗುಡಿಯಲ್ಲಿದ್ದ ನಮ್ಮ ಮನೆಯಿಂದ ನಮ್ಮನ್ನೂ ಕರೆದುಕೊಂಡು, ಎಳೆದುಕೊಂಡು, ಕಾಲು ನೋಯುತ್ತೆ ಎಂದಾಗ ಹೊತ್ತುಕೊಂಡು ಅಲ್ಲಿಗೆ ಹೋಗುತ್ತಿದ್ದರು. ಸೊಗಸಾಗಿ ಕತೆ ಉಪಕತೆಗಳೊಂದಿಗೆ ಒಳ್ಳೆ ನಿರೂಪಣೆಯೊಂದಿಗೆ ದಾಸರು ಮಧ್ಯೆ ಮಧ್ಯೆ ಆಶುಕವಿತೆಗಳನ್ನ ಅಲ್ಲೇ ತಾವೇ ರಚಿಸಿ ಹಾಡುತ್ತಾ, ಪುರಾಣಪುಣ್ಯ ಕತೆಗಳನ್ನು ಹೇಳಿ ಮನರಂಜಿಸುತ್ತಿದ್ದರು. ಯಾವುದೋ ಒಂದೆರಡು ಹರಿಕತೆ ಕೇಳಿದ ನಾನು ಅವುಗಳಲ್ಲಿ ದಾಸರು ಹೇಳಿದ ಪ್ರಸಂಗಗಳಿಗೆ ನನ್ನದೇ ಆದ ಸುಳುವು, ಹರಿವು, ತಿರುವು, ಹರವು, ಮುಗಿವು, ನಿಲುವು-ಗಳ ಕೆಲವು ಮಾರ್ಪಾಟುಗಳನ್ನು ಮಾಡಿಕೊಂಡು ಬಾಲ ಬಾಲಿಶವಾಗಿ ರಚಿಸಿದ ಪ್ರಸಂಗಗಳು ಇದ್ದವು. ಸ್ಫೂರ್ತಿ ಬಂದಾಗ ಕುರುಕಿ ಬರೆಹಕ್ಕಿಳಿಸಿದ, ತರಬೇತಿಯ ಸಮಯದಲ್ಲಿ ನಿರಂತರ ಮಾರ್ಪಾಡುಗುತ್ತಿದ್ದ ಮಾತುಕತೆಗಳೇ ಆ ಪ್ರಹಸನಗಳಾಗಿ ರೂಪುಗೊಂಡಿದ್ದವು ನನ್ನ ಆ ಪ್ರಯೋಗಗಳು.

ಅಂತೂ ಆಡಲು ಸಿದ್ಧವಾಗಿರುತ್ತಿತ್ತು ಒಂದು ನವರಸಭರಿತ(!) 'ಮಕ್ಕಳ ನಾಟಕ". ನಮ್ಮ ಬಡಾವಣೆಯಲ್ಲೆಲ್ಲಾ ಜಾಗಟೆ ಹೊಡೆದು ಪ್ರಚಾರ ಮಾಡಿದ್ದಾಯಿತು. ಪ್ರೇಕ್ಷಕರು ಸೇರಿದ್ದಾರೆ. ನಾಟಕ ಇನ್ನೇನು ಪ್ರಾರಂಭವಾಗಬೇಕು, “ಅರೇ, ನಾಟಕ ಆರಂಭವಾಗುವ ಮುನ್ನ, ಒಬ್ಬರು ಉದ್ಘಾಟನೆ ಮಾಡಿದರೆ ಒಳ್ಳೆಯದಲ್ಲವೇ?" ಅನ್ನಿಸಿತು. ಈ ಕೊನೇ ಘಳಿಗೆಯಲ್ಲಿ ಯಾರನ್ನ ಆಹ್ವಾನಿಸುವುದು? ಮುಂದಿನ ಬೀದಿಯಲ್ಲಿ ಒಬ್ಬರು ಹೈಸ್ಕೂಲ್ ಮೇಷ್ಟರಿದ್ದರು. ಓಡಿದೆವು, ಅವರ ಮನೆಗೆ. ವಿಷಯ ತಿಳಿಸಿ, ಬನ್ನಿ ಸಾರ್ ಎಂದು ಗೋಗರೆದೆವು. ಅವರು ದೊಡ್ಡ ಮನಸ್ಸು ಮಾಡಿ, ಬಂದರು. ಭಾಷಣವನ್ನೂ ಮಾಡಿದರು. ನಾಟಕ ಯಶಸ್ವಿಯಾಯಿತು. ಆದರೆ, ಮನೆಯವರ ಹತ್ತಿರ ಪಾತ್ರಧಾರಿಗಳೆಲ್ಲ ಚೆನ್ನಾಗಿ ಬೈಸಿಕೊಂಡೆವು, ಹಲವಾರು ಕಾರಣಗಳಿಗಾಗಿ.
ನೆನಪಿನ ಬುತ್ತಿಯ ಚೀಲವನ್ನು ಬಿಚ್ಚಿದಾಗ, ಎಷ್ಟೊಂದು ಸ್ವಾದಿಷ್ಟ ರಸಸ್ರೋತ ತುತ್ತುಗಳು!

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X