• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಹಳಗನ್ನಡ ಸಾಹಿತ್ಯಕ್ಕೆ ಸಂಗೀತದ ಮೆರುಗು

By Staff
|

Shantha Jagadishಗಾಯಕಿ, ಲೇಖಕಿ, ಪ್ರಕಾಶಕಿಯಾಗಿ ಮೈಸೂರಿನ ಶಾಂತಾ ಜಗದೀಶ್ ಅವರ ಸಾಧನೆ ವಿಶಿಷ್ಟವಾದದ್ದು. ಹಳಗನ್ನಡ ರಚನೆಗಳಿಗೆ ರಾಗಸಂಯೋಜಿಸಿ ಹಾಡುವ ಕಲೆ ಅವರಿಗೆ ದೈವದತ್ತವಾಗಿಯೇ ಒಲಿದು ಬಂದಿರಬೇಕು.ಸಾಹಿತ್ಯ ಮತ್ತು ಸಂಗೀತದೊಂದಿಗೆ ಸದಾ ಮಧುರ ವೀಣೆ ಮಿಡಿಯುವ ಈ ಅಪರೂಪದ ಕವಿಯಿತ್ರಿಯ ಪರಿಚಯ ನಿಮಗಿರಲಿ.

ಶಿಕಾರಿಪುರ ಹರಿಹರೇಶ್ವರ, ಮೈಸೂರು

ಒಂದು ಹಳ್ಳಿಯ ಪ್ರಾಥಮಿಕ ಶಾಲೆ. ಎಂದಿನ೦ತೆ ಒಂದು ದಿನ. ಇನ್ನೂ ಶಾಲೆಯ ಘಂಟೆ ಹೊಡೆದಿಲ್ಲ; ಪ್ರಾರ್ಥನೆ ಆಗಿಲ್ಲ, ತರಗತಿ ಪ್ರಾರಂಭವಾಗಿಲ್ಲ. ಶಾಲೆಯ ಅಂಗಳದಲ್ಲಿ ಮಕ್ಕಳೆಲ್ಲ ಅದೂ ಇದು ಹರಟುತ್ತ, ನಿಂತಿದ್ದಾರೆ. ಅಲ್ಲೇ ಹತ್ತಿರದ ಮರದ ನೆರಳಲ್ಲಿ ಕೆಲವರು ಪುಟಾಣಿ ಹುಡುಗಿಯರು ಗುಂಪಾಗಿ ಕುಳಿತಿದ್ದಾರೆ. ಅವರಲ್ಲಿ ಹುಡುಗಿಯೊಬ್ಬಳು ಎದ್ದು ನಿಂತು, “ಮೊನ್ನೆ ಮೇಷ್ಟರು ನಮಗೆ ಹೇಳಿಕೊಟ್ಟರಲ್ಲ, ಆ ಪದ್ಯಕ್ಕೆ ನಾನೊಂದು ಹೊಸ ರಾಗ ಹಾಕಿದ್ದೇನೆ, ಹಾಡ್ತೀನಿ, ಕೇಳ್ತೀರಾ?"- ಎನ್ನುತ್ತಾಳೆ. “ಹೇಳು, ಹೇಳು" ಎಂದು ಗೆಳತಿಯರು ಪುಸಲಾಯಿಸುತ್ತಾರೆ. ಆಗ ಆ ಪುಟ್ಟ ಬಾಲಕಿ, ತನ್ನ ಕನ್ನಡ ಪಠ್ಯಪುಸ್ತಕದಲ್ಲಿನ ಕವನವೊಂದನ್ನ ತಾನೇ ಹಾಕಿದ ರಾಗ ಸಂಯೋಜನೆಯೊಂದಿಗೆ ಹಾಡುತ್ತಾಳೆ:

“ತಿರುಕನ್ ಓರ್ವನ್ ಊರ ಮುಂದೆ

ಮುರುಕು ಧರ್ಮಶಾಲೆಯಲ್ಲಿ

ಒರಗಿರುತ್ತಲ್ ಒಂದು ಕನಸ ಕಂಡನ್ ಎಂತೆನೆ|

ಪುರದ ರಾಜ ಸತ್ತನ್ ಅವಗೆ

ವರಕುಮಾರರ್ ಇಲ್ಲದಿರಲು

ಕರಿಯ ಕೈಗೆ ಕುಸುಮಮಾಲೆಯಿತ್ತು ಪುರದೊಳು|| .. .. ..

ಅನಿತರೊಳಗೆ ನೃಪರ ಕಂಡು

ಮನೆಯ ಮುತ್ತಿದಂತೆಯಾಗಿ

ಕನಸ ಕಾಣುತಿರ್ದು ಹೆದರಿ ಕಣ್ಣ ತೆರೆದನು||

ಮೆರೆಯುತಿರ್ದ ಭಾಗ್ಯವೆಲ್ಲ

ಹರಿದು ಹೋಯಿತೆಂದು ತಿರುಕ

ಮರಳಿ ನಾಚುತ್ತಿದ್ದ ಮರುಳನಂತೆಯಾಗಲೇ||"

ಹಿಂದಿನ ದಿನ ಟೀಚರ್ ಕ್ರಿ.ಶ.1500ರ ಮುಪ್ಪಿನ ಷಡಕ್ಷರಿಕವಿಯ ಭೋಗಷಟ್ಪದಿಯ ಈ ತಿರುಕನ ಕನಸಿನ ಪಾಠ ಮಾಡುವಾಗ ತದೇಕಚಿತ್ತಳಾಗಿ ಪದ್ಯವನ್ನು ಹುಡುಗಿ ಕೇಳಿಸಿಕೊಂಡಿದ್ದಳು. ಕಥಾಸಂದರ್ಭವನ್ನು ಉಪಾಧ್ಯಾಯರು ಬಣ್ಣಿಸಿದ್ದುದು ಈ ಬಾಲಪ್ರತಿಭೆಯಮೇಲೆ ಏನೋ ಪ್ರಭಾವ ಬೀರಿತ್ತು. ತನ್ನ ವಯಸ್ಸಿಗೆ ಸಹಜವಾದ, ಕಂಡದ್ದು ಕೇಳಿದ್ದು ಊಹಿಸಿದ್ದೂ ಎಲ್ಲಾ ಸೇರಿಸಿ ಸ್ವಲ್ಪ ಭಾವುಕತನದಿಂದ ಆ ಬಡ ಭಿಕ್ಷುಕನ ಮನದಾಸೆಯನ್ನು ಅತ್ಯಂತ ಹೃದಯಂಗಮವಾಗಿ ಈ ಬಾಲಕಿ ಹಾಡಿ ಮುಗಿಸಿದಳು. ಆಗ, ಯಾರೋ ದೊಡ್ಡವರು ಚಪ್ಪಾಳೆ ಹೊಡೆದಂತಾಯಿತಂತೆ. ನೋಡಿದರೆ, ಇವರಾರಿಗೂ ಗೊತ್ತಾಗದಂತೆ ಅಲ್ಲಿಗೆ ಬಂದು ಹಿಂದೆ ನಿಂತ ಶಾಲೆಯ ಉಪಾಧ್ಯಾಯರಿಂದ ಷಹಾಬಾಸಗಿರಿಯ ಚಪ್ಪಾಳೆ ಕೇಳಿ, ಹುಡುಗಿ ನಾಚಿ ಮುದ್ದೆಯಾದಳಂತೆ.

ಇದನ್ನು ನೆನೆಸಿಕೊಂಡು ಹೇಳುತ್ತಾರೆ ಮೈಸೂರಿನ ಗಾನಕೋಗಿಲೆಯೆಂದೇ ಮನ್ನಣೆ ಪಡೆದಿರುವ ಕವಯಿತ್ರಿ, ಈ ಘಟನೆಯೇ ನನ್ನ ಹಾಡುಗಾರಿಕೆಗೆ ನಾಂದಿಯಾಯಿತು ಎನ್ನುತ್ತಾರೆ. ಈ ಐವತ್ತೊಂಬತ್ತರ ಇಳಿವಯಸ್ಸಿನಲ್ಲೂ ಓದನ್ನೇ ಒಂದು ಸತತ ಹವ್ಯಾಸ ಮಾಡಿಕೊಂಡಿರುವ ಗಾಯಕಿ ಶಾಂತಾ ಜಗದೀಶ್. ಮೈಸೂರು ಆಕಾಶವಾಣಿಯಲ್ಲಿ ಉದ್ಘೋಷಕಿಯಾಗಿ, ಅಲ್ಲಿಯೇ ಸುಮಾರು ಐದು ವರ್ಷ ಕಾಲ ಸುಗಮ ಸಂಗೀತ ಕಲಾವಿದೆಯಾಗಿ ಕೆಲಸ ಮಾಡಿದ ಕಲಾವಿದೆ. ಸುಮಾರು ನಲವತ್ತು ವರ್ಷಗಳಿಂದ ಕರ್ನಾಟಕ ರಾಜ್ಯಾದ್ಯ೦ತ ಹಾಗೂ ಸುಗಮ ಸಂಗೀತ, ಹಳೆಗನ್ನಡ ಗೀತೆಗಳು ಮತ್ತು ಶರಣರ ವಚನ ಗಾಯನ ಕಾರ್ಯಕ್ರಮಗಳನ್ನು ನೀಡಿ ಜನಪ್ರಿಯತೆಗಳಿಸಿರುತ್ತಾರೆ. ಮುಂಬಯಿ ಸಾಹಿತ್ಯ ಸಮ್ಮೇಳನದಲ್ಲಿ ಹಾಡಿದ ಕೀರ್ತಿ ಇವರದು.

ರಾಷ್ಟ್ರಕವಿ ಕುವೆಂಪು ಭಾಗವಹಿಸಿದ ಸಭೆಯಲ್ಲಿ, ಕುವೆಂಪು ಅವರೇ ರಚಿಸಿದ “ಓ ನನ್ನ ಚೇತನ, ಆಗು ನೀ ಅನಿಕೇತನ" ಗೀತೆಯನ್ನು ಹಾಡುವ ಸುಯೋಗ ಒಮ್ಮೆ ಇವರಿಗೆ ಒದಗಿ ಬಂದಿತ್ತಂತೆ; ಆ ಹಾಡನ್ನು ಆಲಿಸಿದ ಕುವೆಂಪು ಅವರು, ಹಾಡು ಮುಗಿದ ನಂತರ, ಶಾಂತಾರವರನ್ನು ಹತ್ತಿರ ಕರೆದು, “ಚೆನ್ನಾಗಿ ಹಾಡಿದೆ ತಾಯಿ" ಎಂದು ನುಡಿದರಂತೆ. ಹೀಗೆ ಆಯಾಯ ಕವಿಗಳ ಮುಂದೆ ಅವರ ಕವನಗಳನ್ನು ಬೇರೊಂದು ರೀತಿಯಲ್ಲಿ ಹಾಡಿದಾಗ, ಅವರ ಮೆಚ್ಚುಗೆ ಪಡೆದಾಗ ಗಾಯಕಿಗೆ ಆದ ಸ೦ತೋಷ ಅಷ್ಟಿಷ್ಟಲ್ಲ. ರಾಷ್ಟ್ರಕವಿ ಜಿ ಎಸ್ ಎಸ್, ನಿಸಾರ್ ಅಹಮದ್, ಅಡಿಗರು, ಪುತಿನ, ವಿಸೀ. ಕೆ.ಎಸ್ .ನರಸಿಂಹಸ್ವಾಮಿ, ಲಕ್ಷ್ಮೀನಾರಾಯಣ ಭಟ್ಟರು ಮುಂತಾದ ಅನೇಕ ಜನಪ್ರಿಯ ಕವಿಗಳ ಭಾವಗೀತೆಗಳ ರಸದೊಡಲಿಗೆ ಜೀವ ತುಂಬಿ ಹಾಡ ತೊಡಗಿದರು. ಜೊತೆಗೆ, ಹಳಗನ್ನಡ ಕಾವ್ಯಗಳ ಆಯ್ದ ಪದ್ಯಗಳಿಗೆ ಆಧುನಿಕವಾಗಿ ರಾಗ ಸಂಯೋಜಿಸಿ, ಹಾಡಿದ ಮೊಟ್ಟ ಮೊದಲ ಗಾಯಕಿ ಎನಿಸಿಕೊಂಡರು.

ಶಾಂತಾ ಅವರು ಪಂಪ ರನ್ನ ಜನ್ನ ಆಂಡಯ್ಯ ಹರಿಹರ ಕುಮಾರವ್ಯಾಸ ಮೊದಲಾದವರ ಕಾವ್ಯಪದ್ಯಗಳಿಗಲ್ಲದೆ, ಶರಣ ಶರಣೆಯರ ವಚನಗಳು, ದಾಸರ ಪದಗಳು, ಶಾಸನ ಪದ್ಯಗಳು ಹಾಗೂ ಕನ್ನಡದ ಮೊಟ್ಟ ಮೊದಲ ಕಾವ್ಯವೆನಿಸಿದ ಶ್ರೀವಿಜಯಕೃತ, ಕವಿರಾಜಮಾರ್ಗದ ಪದ್ಯಗಳಿಗೂ ರಾಗ ಸಂಯೋಜಿಸಿ ಹಾಡಿದ್ದಾರೆ. ಹಳೆಗನ್ನಡದ ಪದಪ್ರಯೋಗಳೂ ಅರ್ಥವಾಗುವ ಹಾಗೆ, ಪದವಿಭಾಗ ಮಾಡಿ ಅವರು ಹಾಡಿದಾಗ ಬರುವ ಶೋಭೆಯೇ ವಿಶಿಷ್ಟವಾದದ್ದು.

“ಸಾಧುಗೆ ಸಾಧು, ಮಾಧುರ್ಯಂಗೆ ಮಾಧುರ್ಯಂ;

ಬಾಧಿಪ್ಪ ಕಲಿಗೆ ಕಲಿಯುಗ ವಿಪರೀತನ್;

ಮಾಧವನೀತನ್ ಪೆರನ್ ಅಲ್ಲ||"

ಎಂದು ಕ್ರಿ.ಶ.700ರ ಬಿಜಾಪುರ ಜಿಲ್ಲೆಯ ಬಾದಾಮಿ ತಾಲ್ಲೂಕಿನ, ತಟ್ಟುಕೋಟೆಯ ಬಂಡೆಕಲ್ಲಿನ ಮೇಲಿರುವ, ಕಪ್ಪೆ ಅರಭಟ್ಟನ ಶಾಸನಪದ್ಯವನ್ನು ಸಹೃದಯರಿಗೆ ಅವರು ಮನದಟ್ಟು ಮಾಡಿಸುವಾಗ ಸಭೆಯಲ್ಲಿ ಒಡಮೂಡುವ ವಾತಾವರಣವೇ ಭಿನ್ನವಾದದ್ದು;

“ಕಾವೇರಿಯಿಂದಂ ಆ ಗೋದಾವರಿವರಂ ಇರ್ಪ ನಾಡದು,

ಆ ಕನ್ನಡದೊಳ್ ಭಾವಿಸಿದ ಜನಪದಂ,

ವಸುಧಾವಳಯ ವಿಲೀನ ವಿಶದ ವಿಷಯ ವಿಶೇಷಮ್||"

ಎಂದು ಕ್ರಿ. ಶ.877ರ ಶ್ರೀವಿಜಯನ ಕವಿರಾಜಮಾರ್ಗದ ನಾಂದಿಪದ್ಯವನ್ನು ಶ್ರೋತೃಗಳಿಗೆ ಅವರು ಪರಿಚಯಿಸುವುದೇ ಒಂದು ಸೊಬಗು.

“ಚಾಗದ ಭೋಗದ ಅಕ್ಕರದ ಗೇಯದ ಗೊಟ್ಟಿಯ ಅಲಂಪಿನ

ಇಂಪುಗಳ್ಗೆ ಆಗರ ಆದ ಮಾನಸರೆ ಮಾನಸರ್;

ಅಂತವರಾಗಿ ಪುಟ್ಟಲ್ ಏನಾಗಿಯುಂ ಏನೋ ತೀರ್ದುಪುದೆ;

ತೀರದೊಡಂ ಮರಿದುಂಬಿಯಾಗಿ, ಮೇಣ್ ಕೋಗಿಲೆಯಾಗಿ,

ಪುಟ್ಟುವುದು ನಂದನದೊಳ್ ಬನವಾಸಿ ದೇಶದೊಳ್||"

ಎಂದು ಕ್ರಿ.ಶ.941ರ ಪಂಪನ ವಿಕ್ರಮಾರ್ಜುನವಿಜಯದ ಜನಪ್ರಿಯಪದ್ಯದ ಜೇನಸವಿಯನ್ನು ಕೇಳುಗರಿಗೆ ಅವರು ಉಣಬಡಿಸುವುದೇ ಒಂದು ಸೊಗಸು. ಹೀಗೆ, ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಶಾಂತಾ ಜಗದೀಶ್ ಹಾಡುತ್ತಾರೆಂದರೆ ಸಭೆಯಲ್ಲಿನ ವಿಶ್ವವಿದ್ಯಾನಿಲಯದ ಅಧ್ಯಾಪಕರಿಗೆ, ಸಾಹಿತ್ಯದ ವಿದ್ಯಾರ್ಥಿಗಳಿಗೆ, ಆಸಕ್ತ ರಸಿಕರಿಗೆ ಎಲ್ಲಿಲ್ಲದ ಖುಷಿ; ಏಕೆಂದರೆ ಶಾಂತಾ ಅವರು ಆರಿಸಿಕೊಳ್ಳುವುದು ಶಾಸನದ ಅಪೂರ್ವ ಮಾಣಿಕ್ಯಪದ್ಯಗಳನ್ನ ಇಲ್ಲವೇ ಹಳಗನ್ನಡದ ಕಾವ್ಯದಲ್ಲಿನ ಆಣಿಮುತ್ತುಗಳನ್ನ.

ಇವರ ಅನೇಕ ಧ್ವನಿಸುರುಳಿಗಳೂ ಹೊರಬಂದಿವೆ. ಪ್ರೊ| ಜಿಎಸ್‌ಎಸ್ ನೇತೃತ್ವದಲ್ಲಿ ಬಂದ ಧ್ವನಿಸುರುಳಿ 'ಸಿರಿಗನ್ನಡಂ ಗೆಲ್ಗೆ"ಯಲ್ಲಿ ಕವಿರಾಜಮಾರ್ಗ ಹಾಗೂ ಪಂಪಭಾರತದ ಜನಪ್ರಿಯ ಪದ್ಯಗಳನ್ನು ಹಾಡಿದ್ದಾರೆ; "ಕವನೋತ್ಸವ"ದಲ್ಲಿ ಮೈಸೂರಿನ ಹೆಸರಾಂತ ಕವಿಗಳ ರಚನೆಗಳು, ಸಿಪಿಕೆ, ಎಚ್‌ಎಸ್‌ಕೆ, ಅಕ್ಬರ್ ಅಲಿ, ಸುಜನಾ ಮುಂತಾದವರ ಹಾಡುಗಳು ಇವೆ. "ಹೂಮಾಲೆ" ಧ್ವನಿಸುರುಳಿ ಮಹಿಳೆಯರ ಕವನಗಳಿಗೆ ಮುಡುಪಾಗಿದೆ. "ಬೆಳಕಿನ ರಾಗ", "ಜೀವನ ಗಾನ", "ಅಭಿನವನಾದ", "ಈಶ ಸುಧಾ" ಇವೆಲ್ಲವೂ ಹಿರಿ ಕಿರಿಯ ಕನ್ನಡ ಕವಿಗಳ, ಹೊಸ ಮಾದರಿಯ ರಾಗ ಸಂಯೋಜನ ಮಾಡಿ ಹಾಡಿದ ಭಾವಗೀತೆಗಳ ಹೂಗುಚ್ಛ. 'ಬನ್ನಿ ವಚನ ಹಾಡೋಣ"ವಂತೂ ಶರಣರ ವಚನಗಳಿಗೇ ಮೀಸಲಿಟ್ಟ ಒಂದು ಕದಳೀವನ.

ಹಂತಹಂತವಾಗಿ ತಮ್ಮ ಸಾಧನೆಯ ಪಥದಲ್ಲಿ ಮೇಲೇರುತ್ತ ಬಂದ ಶಾಂತಾ ಅವರನ್ನ ಸಂಘ ಸಂಸ್ಥೆಗಳು ಗೌರವಿಸಿ, ಇತ್ತ ಬಿರುದುಗಳಿಗೆ ಕೊರತೆಯಿಲ್ಲ. ಅನೇಕಾರು ಸಂಘಸಂಸ್ಥೆಗಳು ಅವರ ಗಾಯನ ಪ್ರತಿಭೆಗೆ ತಲೆದೂಗಿ ಪ್ರಶಸ್ತಿ, ಬಿರುಗಳನ್ನು ನೀಡಿ ಸತ್ಕರಿಸಿವೆ.ಲೇಖಕಿಯಾಗಿಯೂ ಶಾಂತಾ ಜಗದೀಶ್ ಅವರು ಹೆಸರು ಮಾಡಿದ್ದಾರೆ: ಅವರ ಎರಡು ಸೆಳೆ (ಕವನ ಸಂಕಲನ, ಪ್ರಸೂತಿ ಪ್ರಕಾಶನ, ಮೈಸೂರು), ಸ್ಪಂದನ (ವಿಮರ್ಶೆಗಳು,), ಮೌಲ್ಯ (ಕವನಸಂಕಲನ)ಬೆಳಕಾಗಲಿ ಬದುಕು (ಸೇವಾಪರ ಗೀತೆಗಳು), ಶಾಂತನುಡಿ (ಆಧುನಿಕ ವಚನಗಳು)ಗಳು ಪ್ರಕಟಗೊಂಡಿವೆ.

ಗಾಯನದಂತೆ ತಮ್ಮ ಕಾವ್ಯರಚನೆಯಲ್ಲಿ ಸೃಜನಶೀಲತೆಯನ್ನು ಶಾಂತಾ ಜಗದೀಶ್ ಅವರು ಹೇಗೆ ಬೆಳೆಸಿಕೊಳ್ಳುತ್ತಿದ್ದಾರೆಂಬುದಕ್ಕೆ ಒಂದು ನಿದರ್ಶನ ನೋಡೋಣ. ಅವರ 'ಮೌಲ್ಯ" ಕವನಸಂಕಲನದಲ್ಲಿನ 'ಬೆಂಕಿಯಲ್ಲಿ ಒಗೆದ ಬಟ್ಟೆ"ಯಲ್ಲಿ:

“ಅಶೋಕವನದಲ್ಲಿ ಕುಳಿತ ಇಡೀ ಒಂದು ವರುಷ

ಒಂದೇ ಸೀರೆಯಲ್ಲಿ ಕೊಳೆತು ನಾರುತ್ತಿದ್ದ

ಸೀತೆಯ ಕೊಳೆಯನೆಲ್ಲ ನೀರಲ್ಲಿ ತೊಳೆದರೆ

ಹೋಗುವುದಿಲ್ಲವೆಂದು ಅವಳನ್ನು ಸೀರೆಯ ಸಮೇತ

ಬೆಂಕಿಂಯೊಳಗೇ ಅದ್ದಿ ತೆಗೆದಿರಬೇಕು ರಾಮ-

ರಾಮ ರಾಮ!"

ಬರೆದುದೆಲ್ಲವೂ ಗಟ್ಟಿಯಾಗಿ ಉಳಿಯಬಲ್ಲವೆಂದು ಹುಸಿ ನಂಬಿಕೆ ಬೇಕಿಲ್ಲ. ಲಹರಿ ಬಂದಂತೆ, ಸ್ಪೂರ್ತಿ ತುಡಿದಂತೆ ಸ೦ಗೀತ; ಹಾಡಿದುದೆಲ್ಲವೂ ಎದೆ ತುಂಬಿ ಬಾರದೇ ಹೋಗಲೂ ಬಹುದಲ್ಲವೇ? ಭಾವುಕರು ಗುನುಗುನಿಸುವುದೆಲ್ಲವೂ ಮುಖ್ಯವಾಗಿ ಸ್ವ-ಸಂತೋಷಕ್ಕೇನೇ. ಆ ಕಲಾವಿದರೆಲ್ಲರೂ ಉತ್ತಮಿಕೆಯನ್ನೇ ಗುರಿಯಾಗಿರಿಸಿಕೊಂಡು ಮುಂದುವರಿಯುವ ಸತತ ಅಭ್ಯಾಸಿಗಳು; ನಿರಂತರ ಅನ್ವೇಷಕರು. ತಾವು ಬರೆಯುವುದಲ್ಲದೆ, ಬೇರೆಯವರ ಬರೆಹಗಳಿಗೂ ಬೆಳಕು ಕಾಣಿಸುವ ಹಂಬಲ ಶಾಂತಾ ಅವರದು. ಹೀಗಾಗಿ, ಇವರು 'ಭಾವಸಂಪದ" ಎಂಬ ಪ್ರಕಾಶನಸಂಸ್ಥೆಯನ್ನು ಸ್ಥಾಪಿಸಿ, ಉದಯೋನ್ಮುಖ ಬರಹಗಾರರಿಗೆ ಪ್ರೋತ್ಸಾಹ ಕೊಡುತ್ತಿದ್ದಾರೆ. ಈ ಪ್ರಕಾಶನ ಸಂಸ್ದ್ಥೆಯಿಂದ ಹೊರಬಂದ ಕೆಲವು ಕೃತಿಗಳು ಹೀಗಿವೆ: ನಾನೂ ನೀನು, ಭಾವದೀಪ, ಗುಚ್ಛ ಗರಿಗೆದರಿದ ಗೀತ, ಚಿತ್ರಾಂಜಲಿ, ಕುಸುಮಾಂಜಲಿ, ಅಮೃತ ಕಂಬನಿ, ಧ್ವನಿ, ಸ್ಪಂದನ, ಸಮ್ಮಿಳನ ಮೌಲ್ಯ.

ಮೈಸೂರಿನಲ್ಲಿ ವಾಸಿಸುತ್ತಿರುವ ಗಾಯಕಿ ಶಾ೦ತಾ ಜಗದೀಶ್ ದಿವಂಗತ ಬಿ.ಕೆ.ರಾಜಶೇಖರಯ್ಯ ಮತ್ತು ಆರ್ ಸರ್ವಮಂಗಳಮ್ಮ ಅವರ ಮಗಳು. ಅವರ ಪತಿ ಡಾ| ಜಗದೀಶ್ ವೃತ್ತಿಯಲ್ಲಿ ವೈದ್ಯರು. ಮಗ ಜೆ. ನಾಗಾನಂದ್ ಸಾಫ್ಟ್ಟ್‌ವೇರ್ ಇಂಜನಿಯರ್, ಅಮೆರಿಕಾದಲ್ಲಿ ವಾಸಿಸುತ್ತಿದ್ದಾರೆ. ಮಗನನ್ನು ಭೇಟಿಮಾಡಿ ಅಲ್ಲಿದ್ದು ಬರಲು, ಆಸಕ್ತ ಕನ್ನಡ ರಸಿಕರೆದುರು ಯಥಾವಕಾಶ ಹಾಡಿಯೂ ಬರಲು ಪ್ರವಾಸದ ನಿಮಿತ್ತ ಶಾಂತಾ ಜಗದೀಶ್ ಅಮೆರಿಕಾಕ್ಕೆ ಹೊರಟಿದ್ದಾರೆ, ಕೆಲವು ತಿಂಗಳು ಅಲ್ಲಿ ಇರುತ್ತಾರೆ.

ಶಾಂತಾ ಜಗದೀಶ್ ಅವರ ಸುಶ್ರಾವ್ಯ ಸಂಗೀತವನ್ನು ಕೇಳ ಬಯಸುವ ಅಮೆರಿಕಾದ ಕನ್ನಡ ಸಂಘಸಂಸ್ಥೆಗಳು ಮತ್ತು ಅಭಿಮಾನಿಗಳು ಈ ಅವಕಾಶದ ಸದುಪಯೋಗ ಪಡೆದುಕೊಳ್ಳಬಹುದು. ಸಂಪರ್ಕ ವಿಳಾಸ: ಕೇರ್ ಆಫ್ ಜೆ. ನಾಗಾನಂದ್ ಫೋನ್: (203) 404-505. E-mail : naganandj@gmail.com

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more