• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಮನೆಹಾಳ ಕಥೆಗಳ ಮನೋಜ್ಞ ಚಿತ್ರಣ

By Staff
|

ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ 30 ವರ್ಷ ಕನ್ನಡ ಪರಿಚಾರಿಕೆ ಮಾಡಿಕೊಂಡಿದ್ದ ಕೆ. ಎಲ್. ಮುಕುಂದರಾವ್ ಸ್ವತಃ ತಾವೇ ಒಂದು ಕಾದಂಬರಿ ಬರೆದಿದ್ದಾರೆ. ಗ್ರಾಮೀಣ ಪ್ರದೇಶಗಳಲ್ಲಿ ಮನೆ ಮನಸ್ಸುಗಳು ಒಡೆದು ಛಿದ್ರವಾಗುತ್ತಿರುವ ಕಾರಣಗಳನ್ನು ಬಗೆಬಗೆಯಾಗಿ ಬಗೆದು ನೋಡುವ ಮನೋಜ್ಞ ಕಾದಂಬರಿಯಿದು. ಅಂತಾರಾಷ್ಟೀಯ ಮಟ್ಟದ ಸ್ಪರ್ಧೆಯಲ್ಲಿ ಪ್ರಶಸ್ತಿಯನ್ನೂ ಪಡೆದ " ಮಾಂಗಲ್ಯ" ಕಾದಂಬರಿಯ ಒಳ-ಹೊರಗು

ಶಿಕಾರಿಪುರ ಹರಿಹರೇಶ್ವರ,ಮೈಸೂರು

ಬೆಂಗಳೂರಿನ ಕೇಂದ್ರ ಕನ್ನಡ ಸಾಹಿತ್ಯ ಪರಿಷತ್ತಿನ ಕಛೇರಿಯಲ್ಲಿ ವಿವಿಧ ವಿಭಾಗಗಳಲ್ಲಿ ಸುಮಾರು ಮೂವತ್ತು ವರುಷಗಳ ಕಾಲ ಕೆಲಸಮಾಡಿದ ಕೆ. ಎನ್. ಮುಕುಂದ ರಾವ್ ಅವರ ಸಾಮಾಜಿಕ ಕಾದಂಬರಿ, ಮಾಂಗಲ್ಯ ಮೈಸೂರಿನಲ್ಲಿ ಲೋಕಾರ್ಪಣೆಗೊಳ್ಳುತ್ತಿದೆ. ಈ ಕೃತಿಯ ವೈಶಿಷ್ಟ್ಯಗಳು ನಾಲ್ಕಾರು; ಅವನ್ನು ಪರಿಚಯಿಸುವುದೇ ಈ ಲೇಖನದ ಉದ್ದೇಶ.

ಸಮಾಜದ ಕಣ್ಣು ತೆರೆಸಬೇಕಾದ ಕಾದಂಬರಿಯೆಂದು ಮೆಚ್ಚುತ್ತ, ಮೈಸೂರಿನ ಸಂವಹನ ಪ್ರಕಾಶನದವರು ಪ್ರಕಟಿಸಿರುವ ಈ ಕಾದಂಬರಿಯ ಮುನ್ನುಡಿಯಲ್ಲಿ, ಮೈಸೂರು ವಿಶ್ವವಿದ್ಯಾನಿಲಯ, ಪತ್ರಿಕೋದ್ಯಮ ವಿಭಾಗ, ಮುಖ್ಯಸ್ಥರಾದ ಡಾ| ನಿರಂಜನ ವಾನಳ್ಳಿಯವರು ಹೀಗೆ ಬರೆಯುತ್ತಾರೆ:

“ಪತ್ರಿಕೆಗಳೂ, ಸಂಘಸಂಸ್ಥೆಗಳೂ ಬರಹಗಾರರನ್ನು ಪ್ರೋತ್ಸಾಹಿಸುವ ಸಲುವಾಗಿ ಹಾಗೂ ಉದಯೋನ್ಮುಖ ಲೇಖಕರನ್ನು ಉತ್ತೇಜಿಸುವ ಸಲುವಾಗಿ ಲೇಖನಸ್ಪರ್ಧೆ, ಕಥಾಸ್ಪರ್ಧೆ, ಕವನಸ್ಪರ್ಧೆಗಳನ್ನು ಆಗಾಗ್ಗೆ ನಡೆಸುವುದುಂಟು. ಹೆಸರಾಂತ ಕನ್ನಡ ದಿನಪತ್ರಿಕೆ, ವಾರಪತ್ರಿಕೆ, ಮಾಸಪತ್ರಿಕೆಗಳಂತ ನಿಯತಕಾಲಿಕಗಳು ಹಲವು ವರ್ಷಗಳಿಂದ ಈ ಬಗೆಯ ಸ್ಪರ್ಧೆಗಳನ್ನು ನಡೆಸಿಕೊಂಡು ಬರುತ್ತಿವೆ. ಇದಲ್ಲದೆ, ಕೆಲವು ಸಂಘಸಂಸ್ಥೆಗಳೂ ಅಕಾಡೆಮಿಗಳೂ ಈಗಾಗಲೇ ಬೆಳಕುಕಂಡಿರುವ ಕೃತಿಗಳನ್ನು ಲೇಖಕರಿಂದ ಮತ್ತು ಪ್ರಕಾಶಕರಿಂದ ಆಹ್ವಾನಿಸಿ, ಅವುಗಳಲ್ಲಿ ಆಯಾಯ ಪ್ರಕಾರಗಳ ಅಡಿಯಲ್ಲಿ ಅತ್ಯುತ್ತಮವಾದುದನ್ನು ಆಯ್ಕೆ ಮಾಡಿಕೊಂಡು ಬಹುಮಾನವನ್ನು ಕೊಡುವುದೂ ಉಂಟು.

“ಇವೆಲ್ಲಕ್ಕೆ ವಿಭಿನ್ನವಾಗಿ, ಅಪರೂಪದ ಒಂದು ಸ್ಪರ್ಧೆಯೊಂದನ್ನು [ವಾಷಿಂಗ್‌ಟನ್ ಡಿ ಸಿ. ಪ್ರದೇಶದ, ಕಾವೇರಿಕನ್ನಡ ಸಂಘದ ಆಶ್ರಯದಲ್ಲಿ ನಡೆದ] ನಾಲ್ಕನೆಯ ಅಕ್ಕ ವಿಶ್ವಕನ್ನಡ ಸಮ್ಮೇಳನ-2006ರ ಅಂಗವಾಗಿ ಸಮ್ಮೇಳನ ಸ್ಮರಣಸಂಚಿಕೆ ಸಮಿತಿಯವರು ಯೋಜಿಸಿದ, ಕರ್ನಾಟಕದಲ್ಲಿರುವ ಉದಯೋನ್ಮುಖ ಕಾದಂಬರಿಕಾರರಿಗೆ ಮಾತ್ರ ಮೀಸಲಾದ, 'ಕಾದಂಬರಿ ಸ್ಪರ್ಧೆ"ಯೊಂದನ್ನು ನಡೆಸಿತು. ಸ್ಪರ್ಧೆಯ ನಿಯಮಗಳಿಗನುಗುಣವಾಗಿ, ನಾಡಿನ ಮೂಲೆಮೂಲೆಗಳಿಂದ ಬಂದ, ಆ ಎಲ್ಲ ಲೇಖಕರ ಅಪ್ರಕಟಿತ ಚೊಚ್ಚಲ ಕಾದ೦ಬರಿಗಳ ಮೌಲ್ಯಮಾಪನ ಮಾಡಿ, ಅವುಗಳಲ್ಲಿನ ಅತ್ಯುತ್ತಮ ಕಾದಂಬರಿಯನ್ನು ಆಯ್ಕೆಮಾಡಿಕೊಡಲು ಒಂದು ಸಮಿತಿ ರಚಿತವಾಯಿತು.

“ಆ ಕಾದಂಬರೀ ಸ್ಪರ್ಧೆಯನ್ನು ಸಂಘಟಕರು ಸಂಯೋಜಿಸಿದಾಗ, ಅದರ ನಿರ್ಣಾಯಕನೊಬ್ಬನಾಗುವ ಯೋಗ ನನ್ನದಾಗಿತ್ತು. ಒಂದು ತಿಂಗಳಲ್ಲಿ ಇಪ್ಪಾತ್ತಾರು ಕಾದಂಬರಿಗಳನ್ನು ಓದಿ, ಅವುಗಳಲ್ಲಿ ಉತ್ಕೃಷ್ಟವಾದುದನ್ನು ತೀರ್ಮಾನಿಸುವ ಹೊಣೆ ಮೂರು ತೀರ್ಪುಗಾರರ ಆಯ್ಕೆ ಸಮಿತಿಯವರಾದ ನಮ್ಮದಾಗಿತ್ತು.

“ಕಾದಂಬರಿಗಳ ಮೌಲ್ಯಮಾಪನ ಮಾಡುವಾಗ ವಸ್ತುವಿನಲ್ಲಿ ವಿನೂತನತೆ; ಸೃಜನಶೀಲತೆ; ಬದುಕಿನ ವಿವಿಧ ಸ್ತರಗಳ ವಿಶಿಷ್ಟ ಚಿತ್ರಣ; ಪಾತ್ರ ಪೋಷಣೆಯಲ್ಲಿ ಜಾಣ್ಮೆ ಕಥಾತ೦ತ್ರ; ಭಾಷೆಯ ಮೇಲೆ ಪ್ರಭುತ್ವ; ಶೈಲಿ ಮತ್ತು ನಿರೂಪಣೆಯಲ್ಲಿ ವೈಶಿಷ್ಟ್ಯ; ಸೂಕ್ಷ್ಮ ಸ೦ವೇದನೆಗಳ ಅಭಿವ್ಯಕ್ತಿ; ಕಲಾತ್ಮಕತೆ ಮತ್ತು ಧ್ವನಿ ಔಚಿತ್ಯಗಳ ಕಾವ್ಯಾತ್ಮಕತೆ; ಮತ್ತು ಓದುಗರ ಮೇಲೆ ಒಟ್ಟು ಪರಿಣಾಮ- ಈ ಹತ್ತು ಅ೦ಶಗಳನ್ನು ಪ್ರಧಾನವಾಗಿ ಇಟ್ಟುಕೊ೦ಡು ನಾವು ಕೃತಿಗಳ ಮೌಲ್ಯಮಾಪನ ಮಾಡಿದೆವು.

“ಅದೊಂದು ಮರೆಯಲಾರದ ಅನುಭವ. ಒಂದೊಂದು ಕಾದಂಬರಿಯ ಗುಂಗಿನಿಂದ ಹೊರಬರುವಾಗಲೇ, ಮತ್ತೊಂದು ಕಾದಂಬರಿಗೆ ಪ್ರವೇಶಮಾಡುವ ಅನಿವಾರ್ಯತೆ. ಕೆಲವು ಕಾದಂಬರಿಗಳು ಗುಂಗು ಮುಟ್ಟಿಸಲಿಲ್ಲ ಎನ್ನುವ ಹಾಗೆಯೇ, ಕನಿಷ್ಠ ಐದಾರು ಕಾದಂಬರಿಗಳ ಗುಂಗಿನಿಂದ ಹೊರಬರಲು ಕೆಲದಿನಗಳೇ ಬೇಕಾಯ್ತು ಎಂಬುದಂತೂ ನಿಜ. ಅದರಲ್ಲಿ ಮೊದಲ ಪ್ರಶಸ್ತಿ ಪಡೆದ ಒಂದು ಕಾದಂಬರಿ ನಿಸ್ಸಂಕೋಚವಾಗಿ ನಾವು ಮೂರರನ್ನೂ ಬಹಳವಾಗಿ ಕಾಡಿತ್ತು. ಹಾಗೆಯೇ ಅದರೊಂದಿಗೆ, ಹಚ್ಚ ಹಸುರಾಗಿ ನೆನಪಿನಲ್ಲಿ ಉಳಿದಿದ್ದ, ಈ ಓಟದ ಪಂದ್ಯದಲ್ಲಿ ಉಳಿದವುಗಳನ್ನು ಹಿಮ್ಮೆಟ್ಟಿಸಿ, ಮುಕ್ತಾಯರೇಖೆಗೆ ಕೆಲವೇ ಸೆಕೆಂಡುಗಳಷ್ಟು ತಡವಾಗಿ ತಲುಪಿದ ಕುದುರೆಗಳಲ್ಲಿ, ಈ 'ಮಾ೦ಗಲ್ಯ" ಕಾದಂಬರಿಯೂ ಒಂದು."- ಎನ್ನುತ್ತಾರೆ ಪ್ರಾಧ್ಯಾಪಕ ವಾನಳ್ಳಿಯವರು.

ಈ ರೀತಿ ಪಂದ್ಯಕ್ಕೆಂದು ರಚಿತವಾದ ಕಾದಂಬರಿಯ ಒಳಗೇನಿದೆ ನೋಡೋಣ: ಇದರ ವಸ್ತು ಹಳ್ಳಿಯ ಜೀವನವನ್ನು ಕುರಿತಾದದ್ದು. ಕೆ. ಎನ್ ಮುಕುಂದರಾಯರ 'ಮಾಂಗಲ್ಯ" ಕಾದಂಬರಿ ಅವರ ಚೊಚ್ಚಲ ಕಾದಂಬರಿ ಎಂದು ಹೇಳಿದರೆ ನಂಬುವ ಮಾತಲ್ಲ. ಏಕೆಂದರೆ, ಇಲ್ಲಿ ಪಳಗಿದ ಕೈಯ ಬರಹದ ಲಕ್ಷಣಗಳು ಕಥಾನಕವುದ್ದಕ್ಕೂ ತೋರುತ್ತಿವೆ; ಅನುಭವಿಸಿ ಕತೆ ಹೇಳುವ ಕಲೆ ಕರಗತ ಮಾಡಿಕೊಂಡಿರುವುದು ಪುಟ ಪುಟಗಳಲ್ಲೂ ಗೋಚರಿಸುತ್ತಿವೆ; ಹಳ್ಳಿಯ ಜೀವನದ ಸೂಕ್ಷ್ಮಾತಿಸೂಕ್ಷ್ಮ ಎಳೆಗಳನ್ನ ಬಿಡಿ ಬಿಡಿಸಿ ಇಲ್ಲಿನ ಪಾತ್ರಗಳನ್ನ ಚಿತ್ರಿಸಿರುವುದನ್ನ ನೋಡುತ್ತೇವೆ; ಸಂಪ್ರದಾಯಸ್ಥ ಮನೆತನದ ಹೆಣ್ಣು ಮಕ್ಕಳ ಮನಸ್ಸಿನ ಒಳತೋಟಿಯನ್ನ ಸಮರ್ಥವಾಗಿ ತಾವೇ ಸೃಜಿಸಿದ ಸನ್ನಿವೇಶಗಳ ಹಿನ್ನೆಲೆಯಲ್ಲಿ ದರ್ಶಿಸಿರುವುದನ್ನ ಗಮನಿಸುತ್ತೇವೆ- ಓದಿದಾಗ, ಮುದವನ್ನೂ ನೀಡುವ ಕಾದಂಬರೀಕಾರರ ಕಥನ ಕೌಶಲ ಕಂಡು, ಭೇಷ್ ಎನಿಸದೆ ಇರದು.

ಇದು ರೈತಾಪಿ ಜನಗಳ ಕತೆ; ಅನುಭವಿಸಿ ಮಾತನಾಡುವುದರಿಂದ ಪಾತ್ರಗಳು ಬೋರಂಟಿ ಬಿಟ್ಟಿಲ್ಲ. ವತನುಗಳ ಇರ್ಸಾಲು, ಪಹಣಿ, ಜಮಾಬಂದಿಗಳ ಮೆರವಣಿಗೆಗೆ ಸಿದ್ಧವಾಗಿರಿ. ತುಡಿಕೆ, ತಾಕು, ಜಿರಾಯಿತಿ, ಬೋದು, ಗುಜರಾನ, ಒಪ್ಪಾರ, ಗಡುಸು, ದಾಷತ್ತು, ಅಕಲಾಯ, ರೋಟಿ, ಉರುಬು, ಕಂಗು, ತಿರುಬೋಕಿ-ಎಂದೆಲ್ಲ ಅಪ್ಪಟ ದೇಸಿಯ ಪದಗಳೇ ಅವರ ದಿನಬಳಕೆಯ ಆಡುನುಡಿಯ ಸೊಗಸು. ಅದನ್ನಿಲ್ಲಿ ಕತೆಗಾರರು ಶುಂಠಿಹುಲ್ಲನ್ನು ಮೇಯಿಸುವ, ಗುಜಮಾವಿನ ರಾಸುಗಳಂತೆ ಹಿಡಿದಿಟ್ಟಿದ್ದಾರೆ.

ಭೂಮಾಲೀಕರ ಶೋಷಣೆಯಿಂದ ಸಾಗುವಳಿ ಮಾಡುವ ಗೇಣಿದಾರರ ಬಾಳು ಬರಡಾಗಿ, ಅಮಾನವೀಯ ವರ್ತನೆಯ ಆ ಕರಾಳ ಮುಖಗಳನ್ನ ಬಣ್ಣಿಸುವ ಕತೆ ಕಾದಂಬರಿಗಳಿಗೇನೂ ಕೊರತೆಯಿಲ್ಲ. ಆದರೆ, ಸದುದ್ದೇಶ ಪೂರಿತ ಸಮಾಜ ಸುಧಾರಣೆಯ ಅಂಗವಾಗಿ ಬಂದ, ಟೆನೆನ್ಸಿ ಕಾಯಿದೆಯ ಫಲಾನುಭವಿಗಳಲ್ಲಿ ಕುರುಡು ಕವಡೆ ಕಿಮ್ಮತ್ತೂ ಸಲ್ಲಿಸದ ಅಪಾತ್ರರೂ ಕೆಲವರು ನುಸುಳಿದರು; ಅವ್ಯವಹಾರಸ್ಥ ಸಜ್ಜನರು ಕೆಲರು ನರಳಿದರು. ಅಂಥವರ ನಡೆನುಡಿಯ ಬಣ್ಣನೆಯಲ್ಲಿ, ಸುಧಾರಣೆಯ ಫಲಶ್ರುತಿಯ ಇನ್ನೊಂದು ಮುಖವನ್ನೂ ಸಾಂದರ್ಭಿಕವಾಗಿ ಇಲ್ಲಿ ಪ್ರಸ್ತಾಪಿಸಲಾಗಿದೆ.

ತನ್ನ ಕ್ರೀಡೆ ಮತ್ತು ಮನೋಲ್ಲಾಸದ ಓನಾಮ ಹೇಳ ತೊಡಗಿದಾಗಿನಿಂದ, ಬಹಳ ಹಿಂದಿನಿಂದಲೂ ಬಂದ ಮನುಷ್ಯನ ಎರಡನೆಯ ಪ್ರಧಾನ ದುರ್ವ್ಯಸನವೆಂದರೆ- ಜೂಜಾಡುವುದು. ಇದಕ್ಕೆ ಬಲಿಯಾಗಿ, ತಾವೂ ಹಾಳಾಗಿ ತಮ್ಮನ್ನು ನಂಬಿದವರನ್ನೂ ಕಣ್ಣೀರಿನಲ್ಲಿ ಕೈತೊಳೆಯುವಂತೆ ನಡೆದುಕೊಂಡ ಸಾಮಾನ್ಯ-ಅಸಾಮಾನ್ಯ -ಬಹುಮಾನ್ಯ ವ್ಯಕ್ತಿಗಳ ಕತೆ ನಮಗೆ ಹೊಸದೇನಲ್ಲ. ಸ್ವಾತಂತ್ರ್ಯೋತ್ತರ ಭಾರತದ ಕೆಲವು ವರ್ಷಗಳ ಹಿಂದಿನ ಮೈಸೂರು ರಾಜ್ಯದ ಒಂದು ಗ್ರಾಮೀಣ ಪರಿಸರದಲ್ಲಿ, ಅಮಾಯಕ ಹಳ್ಳಿಗರು ಹೇಗೆ ಈ ಜೂಜಿನ ಚಟದ ಬಲೆಗೆ ಸಿಕ್ಕಿಹಾಕಿಕೊಂಡು ತೊಳಲಾಡಿದರೆ೦ಬುದನ್ನ ಮನಗಾಣಿಸುವ, ಚೆನ್ನಾಗಿ ಓದಿಸಿಕೊಂಡು ಹೋಗುವ ಸರಳ ಶೈಲಿಯ ಒಂದು ಉತ್ತಮ ಕಾದಂಬರಿ- 'ಮಾಂಗಲ್ಯ".

ಕಾದಂಬರಿಕಾರರು ಹಳ್ಳಿಯ ಜೀವನವನ್ನು ಇದ್ದು, ಕಂಡು, ಅನುಭವಿಸಿದ ರೈತಾಪಿ ಜನಗಳೊಡನಾಟದ ಸಿಹಿ-ಕಹಿ ಮೆದ್ದ ಗ್ರಾಮಸ್ಥ ಕುಟುಂಬದವರು. ಅವರೇ ತಮ್ಮ ಪ್ರಸ್ತಾವನೆಯಲ್ಲಿ ಇದನ್ನು ತೋಡಿಕೊಂಡಿರುವುದನ್ನ ನೋಡಿ:

ಲೇಖಕ ಮುಕುಂದರಾಯರು ಹುಟ್ಟಿ ಬೆಳೆದದ್ದು ಮಾಗಡಿ ತಾಲ್ಲೂಕಿನ ಕಲ್ಯ ಗ್ರಾಮದಲ್ಲಿ. ಚಿಕ್ಕಂದಿನಲ್ಲೇ ಅವರಿಗೆ ಓದುವ ಹುಚ್ಚು. ನೆನೆಸಿಕೊಳ್ಳುತ್ತಾರೆ" ಅವರು ಮಾಗಡಿಯಲ್ಲಿನ ಶಾಲೆಯಲ್ಲಿ ಓದುತ್ತಿದ್ದಾಗ, ಅವರ ಮನೆಯಿದ್ದ ಕಲ್ಯದಿಂದ ಹೊರಟವರೇ ಆ ಮೂರು ಮೈಲಿ ದಾರಿಯುದ್ದಕ್ಕೂ ಗೊರೂರು ರಾಮಸ್ವಾಮಿ ಅಯ್ಯ೦ಗಾರರ ಮೆರವಣಿಗೆ ಕಾದಂಬರಿಯನ್ನು ಓದುತ್ತಲೇ ಕೆಲವು ದಿನ ದಾರಿ ಸವೆಸಿ, ಶಾಲೆಗೆ ತಲುಪುತ್ತಿದ್ದರಂತೆ. ಅದು ಒಂದು ದೊಡ್ದ ಕಾದಂಬರಿ; ಲೈಬ್ರರಿಯಿಂದ ಎರವಲು ಪಡೆದಿದ್ದರು; ಓದಿ ಮುಗಿಸಲು ಹಲವಾರು ದಿನಗಳೇ ಹಿಡಿದಿದ್ದವು. ಆದರೂ ಬಿಡದೇ ದಿನವೂ ದಾರಿಯುದ್ದಕ್ಕೂ ಓದುತ್ತಲೇ ಹೋಗಿ, ಗೆಳೆಯರ ನಗೆಪಾಟಲಿಗೆ ಗುರಿಯಾಗಿದ್ದರಂತೆ. ಹೀಗಿತ್ತು ಮೊದಲಿನಿ೦ದಲೂ ಅವರ ಓದಿನ ಹುಚ್ಚು.

ಮಾಗಡಿಯಲ್ಲಿ ಓದು ಮುಗಿಸಿ, ತುಮಕೂರಿನಲ್ಲಿ ಸ್ವಲ್ಪಕಾಲ ವ್ಯಾಸಂಗ ಮಾಡಿ, ಆಮೇಲೆ ಬೆಂಗಳೂರು ಸೇರಿದೆ. ಚಿಕ್ಕ ಪುಟ್ಟ ಉದ್ಯೋಗಗಳ ತರುವಾಯ ಅವರು ಸೇರಿದ್ದು ಕನ್ನಡ ಸಾಹಿತ್ಯ ಪರಿಷತ್ತನ್ನ. 1954ರಿಂದ ಸುಮಾರು ಮೂವತ್ತು ವರ್ಷಗಳ ಕಾಲ ಕೇಂದ್ರ ಕನ್ನಡ ಸಾಹಿತ್ಯ ಪರಿಷತ್ತಿನ ಎಲ್ಲಾ ವಿಭಾಗಗಳಲ್ಲೂ ಕೆಲಸ ಮಾಡಿದರು. ಅನೇಕಮಂದಿ ವಿದ್ವಾಂಸರೊಡನೆ ಕನ್ನಡದ ಸೇವೆ ಮಾಡುವ ಭಾಗ್ಯ ಅವರದಾಗಿತ್ತು. ಇದರ ಜೊತೆಗೆ ಹುಟ್ಟೂರಾದ ಕಲ್ಯದ ಮಾಗಡಿಯ ಸಂಪರ್ಕವನ್ನು ಸದಾ ಇರಿಸಿಕೊಂಡೇ ಇದ್ದ ಅವರಿಗೆ ಹಳ್ಳಿಯ ಮತ್ತು ಪಟ್ಟಣದ ಜನಜೀವನದ ವಿವಿಧ ಮುಖಗಳ ಪರಿಚಯ ನೇರವಾಗಿ ಲಭಿಸಿತ್ತು.

ಆಗ ಅನಕೃ, ತರಾಸು, ನಿರಂಜನ ಮುಂತಾದ ಜನಪ್ರಿಯ ಕಾದ೦ಬರೀಕಾರರ ಕಾಲ. ಅವರ ಮೇರುಕೃತಿಗಳನ್ನೂ ನಂತರ ಬಂದ ಭೈರಪ್ಪ ಮುಂತಾದವರ ಕಾದಂಬರಿಗಳನ್ನು ಓದಿ ಸಂತೋಷಿಸುತ್ತಿದ್ದ ಅವರು, ಆಗಾಗ ಸಣ್ಣ ಕತೆಗಳನ್ನು ಬರೆಯುತ್ತಿದ್ದರು. ಒಂದು ಕಾದಂಬರಿಯನ್ನ ಏಕೆ ಬರೆಯಬಾರದೆಂಬ ಹಂಬಲ ಅವರಿಗೆ ಆಗಾಗ್ಗೆ ಮೂಡಿ, ಮರೆಯಾಗುತ್ತಿದ್ದಾಗ, ಅದಕ್ಕೆ ವಸ್ತುವನ್ನು ಆರಿಸಿಕೊಳ್ಳುವಾಗ, ಮೊದಲ ಪ್ರಯತ್ನಕ್ಕೆ ಸ್ವಾಭಾವಿಕವಾಗಿ ಕಣ್ಣಾರೆ ಕ೦ಡ ಹಳ್ಳಿಯ ಜನಜೀವನವಲ್ಲದೇ ಮತ್ತೇನು ಸೂಕ್ತವಾದೀತು, ಅನುಕೂಲವಾದೀತು?

ಮುಕುಂದರಾಯರು ಹೇಳುತ್ತಾರೆ: “ನಮ್ಮ ತಂದೆಯ ತಂದೆ, ಮತ್ತು ತಾಯಿಯ ತಂದೆಯವರಿಬ್ಬರೂ ಶಾನುಭೋಗರಾಗಿದ್ದವರು. ಸಮಷ್ಟಿ ಕುಟುಂಬದ ಯಜಮಾನರಾಗಿದ್ದ ನಮ್ಮ ತಂದೆ ಸ್ವಂತ ವ್ಯವಸಾಯ ಮತ್ತು ಆಳುಗಳನ್ನಿಟ್ಟುಕೊ೦ಡು ಬೇಸಾಯ ನಡೆಸಿದವರು. ಹಾಗಾಗಿ ಈ ಕೃಷಿಕ ಜೀವನದ ಒಳಹೊರಗೆಲ್ಲ ನನಗೆ ಅಂಗೈ ಕನ್ನಡಿಯಂತೆ ತೋರುತ್ತಿದ್ದುದರಲ್ಲಿ ಆಶ್ಚರ್ಯವೇನಿಲ್ಲ.

“ಆಲಸಿಗ ಹಳ್ಳಿಗರಲ್ಲಿ ಕೆಲವರು ತಮ್ಮ ಬಿಡುವಿನ ವೇಳೆಯನ್ನ ದುಷ್ಚಟಗಳ ಮಡುವಿಗೊಡ್ಡಿಕೊಳ್ಳುವುದನ್ನೂ ಕಂಡಿದ್ದೆ. ಬಿದ್ದವರು ಮೇಲೆದ್ದುದನ್ನೂ ಗುರುತಿಸಿದ್ದೆ. ಸುಧಾರಣೆಗಳ ಬಿರುಗಾಳಿ ಬೀಸಿದಾಗ ತರಿದ ಕೊಂಬೆಗಳು, ಉರುಳಿದ ಮರಗಳು, ತೂರಿಕೊಂಡು ಹೋದ ಮನೆಮಾಳಿಗೆಗಳನ್ನು ಕಣ್ಣಾರೆ ಕಂಡವನು ನಾನಾಗಿದ್ದರಿಂದ ಈ ಬಗ್ಗೆಯೂ ಬರೆಯಲು ನನಗೆ ಸಾಮಗ್ರಿ ಎದುರಿಗಿತ್ತು."

ಮುಂದುವರಿದು, ಮುಕುಂದರಾವ್ ಹೇಳುತ್ತಾರೆ: “ಹಸ್ತಪ್ರತಿಯನ್ನು ಓದಿದವರು ಕೇಳುವುದುಂಟು: ಇದರಲ್ಲಿ ಬರುವ ಘಟನೆಗಳು ಕೆಲವಾದರೂ ನಿಮ್ಮ ಸ್ವಂತ ಅನುಭವವೇ?- ಎಂದು. ಇಲ್ಲ; ಆದರೆ, ಎಲ್ಲ ಕಣ್ಣಾರೆ ಎದುರೇ ಕಂಡ ನೈಜ ಘಟನೆಗಳು. ಜೊತೆಗೆ ಪೋಣಿಸಿದ ಕಲ್ಪನಾಲೋಕದ ಭಿತ್ತಿಚಿತ್ರಗಳು, ಕೆಲವು. ಆದರೆ ಇಷ್ಟು ಮಾತ್ರ ನಿಜ, ಹಳ್ಳಿಯ ಜೀವನವನ್ನು ಸಾಕಷ್ಟು ಸಹಜವಾಗಿ ಚಿತ್ರಿಸಲು ನಾನು ಪ್ರಯತ್ನಿಸಿದ್ದೇನೆ; ಇದು ಸಾಧ್ಯವಾದದ್ದು ನಾವು ಹಳ್ಳಿಯೊಂದರಲ್ಲಿ ವಾಸಿಸುತ್ತದ್ದರಿಂದಲೇ.

ಹಾಗೆಯೇ, ತುಂಬಿದ ಸಂಸಾರವನ್ನು, ಸಾಂಪ್ರದಾಯಿಕ ಕುಟುಂಬವನ್ನು ಬಣ್ಣಿಸುವಾಗ ನನ್ನ ಮನಸ್ಸಿನಲ್ಲಿ ಹಲಾವಾರು ಆದರ್ಶ ಮನೆತನಗಳ ನೆನಪು ದಟ್ಟವಾಗಿತ್ತು. ಕ್ರಮೇಣ ಮರೆಯಾಗುತ್ತಿರುವ ಇಂತಹ ಸಾತ್ವಿಕ ಅವಿಭಕ್ತ ಕುಟುಂಬಗಳು ಕಾದ೦ಬರಿಗಳಲ್ಲಿ ಮಾತ್ರ ಉಳಿದು ಬಿಡುತ್ತಾವೇನೋ ಎಂಬ ಭಯವೂ ಕಾಡಿದಾಗ ಉತ್ಪ್ರೇಕ್ಷೆ ಮೆಲ್ಲಗೆ ನುಸುಳುತ್ತಾವೇನೋ; ಸಹೃದಯರು ಕ್ಷಮಿಸಬೇಕು.

ಗ್ರಾಮೀಣ ಜನಜೀವನವನ್ನು ವಸ್ತುವಾಗಿರಿಸಿಕೊಂಡು ಬರೆದಿರುವ ನನ್ನ ಮೊದಲ ಕಾದಂಬರಿ 'ಮಾಂಗಲ್ಯ" ಈಗ ನಿಮ್ಮ ಕೈಯಲ್ಲಿದೆ. ಶಂಕರ, ಅವನ ತಂದೆ ಪಟೇಲ್ ರಂಗಪ್ಪ, ತಾಯಿ ಮೀನಾಕ್ಷಮ್ಮ, ಹೆಂಡತಿ ಸುಶೀಲೆ, ಅತ್ತೆ ಭಾಗಮ್ಮ-ನವರ ಈ ಕಥಾನಕದಲ್ಲಿ ಜೂಜುಕೋರ ಪರಮೇಶ ಮತ್ತು ಅವನ ಸಹಚರರ ಧಾಂಧಲೆಯು ಯಾವ ರೀತಿ ಶಾಂತಿಯಿಂದಿದ್ದ ಆ ಹಳ್ಳಿಯ ವಾತಾವರಣವನ್ನು ಬಗ್ಗಡಗೊಳಿಸಿ ಕೊನೆಗೆ, ಒಂದು ಸಾಮಾನ್ಯ ಸಾತ್ವಿಕ ಮನೆತನವೊಂದರ ಸರ್ವನಾಶಕ್ಕೆ ಕಾರಣವಾಯಿತೆಂಬುದನ್ನು ಚಿತ್ರಿಸಲು ಪ್ರಯತ್ನಿಸಿದ್ದೇನೆ. ಇದು ಯಾವ ಹಳ್ಳಿಯಲ್ಲಾದರೂ, ಅಂಥ ಪರಿಸರದ ಯಾವ ಒಂದು ಕುಟುಂಬದಲ್ಲಾದರೂ ನಡೆಯಬಹುದಾದ ಕತೆಯೆಂದು ನಂಬುವೆ."

ಮೈಸೂರಿನಲ್ಲಿ ಈ ಪುಸ್ತಕವನ್ನು ಲೋಕಾರ್ಪಣೆ ನಡೆಯಲಿದೆ. ಅದನ್ನು ಮಾಡುತ್ತಿರುವವರು ಮುಂದೆ, ಇನ್ನು ಕೆಲವೇ ದಿನಗಳಲ್ಲಿ, ಷಿಕಾಗೋದಲ್ಲಿ ವಿದ್ಯಾರಣ್ಯ ಕನ್ನಡ ಕೂಟದ ಆಶ್ರಯದಲ್ಲಿ ನಡೆಯಲಿರುವ 2008ರ ಅಕ್ಕ ವಿಶ್ವಕನ್ನಡ ಸಮ್ಮೇಳನದ ಸಾಹಿತ್ಯವಿಭಾಗದ ಮುಖ್ಯಸ್ಥರಾದ ಕತೆಗಾರ್ತಿ ಕವಯತ್ರಿ ನಳಿನಿ ಮೈಯ್ಯ ಅವರು.

(ಇದರೊಂದಿಗೆ ಜೋಗವ್ವ ಎಂಬ ಇನ್ನೊಂದು ಕಾದಂಬರಿಯೂ ಬಿಡುಗಡೆ ಆಗುತ್ತಿದೆ. ಅದರ ಬಗ್ಗೆ ಮುಂದಿನ ವಾರದ ಲೇಖನದಲ್ಲಿ ಚರ್ಚಿಸುವೆ.) ಕೃತಿಯನ್ನು ಕುರಿತು ಮಾತನಾಡಲಿದ್ದಾರೆ, ಮೈಸೂರು ವಿಶ್ವವಿದ್ಯಾನಿಲಯದ ಕನ್ನಡ ಪ್ರಾಧ್ಯಾಪಕರೂ ಖ್ಯಾತ ವಿಮರ್ಶಕರೂ ಆದ ಪ್ರೊ| ಹನೂರು ಕೃಷ್ಣಮೂರ್ತಿಗಳು. ಸಭೆಯ ಅಧ್ಯಕ್ಷತೆಯನ್ನು ವಹಿಸಲಿರುವವರು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಮತ್ತು ರಂಗಾಯಣದ ಉಪನಿರ್ದೇಶಕರಾಗಿದ್ದ ಹೆಸರಾಂತ ಸಾಹಿತಿ ಮ.ಗು.ಸದಾನಂದಯ್ಯ ಅವರು.

ಕೊನೆಯಲ್ಲಿ, ಮುನ್ನುಡಿಕಾರರಂತೆ ನಾನೂ ಸಹ, “ಈ ಕಾದಂಬರಿಯಲ್ಲಿ ಲೇಖಕರನ್ನು ಕಾಡಿರುವ ಗ್ರಾಮೀಣ ಯುವಕರ ಇಸ್ಪೀಟು ಖಯಾಲಿ ಹಾಗೂ ಅನೈತಿಕ ವ್ಯವಹಾರಗಳು ಮತ್ತು ಪರಿಣಾಮಗಳು ಇದೇ ಸಮಸ್ಯೆಯಿಂದ ಇಂದಿಗೂ ನರಳುತ್ತಿರುವ ಸಮಾಜದ ಕಣ್ಣು ತೆರೆಸಲಿ" ಎಂದು ಆಶಿಸುತ್ತೇನೆ.

(ಪ್ರಕಟಣೆಯ ವಿವರ: ಲೇಖಕರು: ಕೆ.ಎನ್ ಮುಕುಂದರಾವ್, ನಂ.67, ಚನ್ನಮ್ಮ ಟ್ಯಾಂಕ್ ಬಡಾವಣೆ, ತ್ಯಾಗರಾಜ ನಗರ, ಬೆಂಗಳೂರು-560028; ಪ್ರಕಾಶಕರು: ಸಂವಹನ ಪ್ರಕಾಶನ, ನ೦. 12/1ಎ, ಸ೦ಜೆ ಬಜಾ ಹಿ೦ಭಾಗ, ಶಿವರಾಮಪೇಟೆ, ಮೈಸೂರು. ಪುಟಗಳು: 168; ಬೆಲೆ: ಎಂಭತ್ತು ರೂಪಾಯಿಗಳು)

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more