• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ವಿಚ್ಚುವಿನ ಚಾಳುಕ್ಯ ಕರ್ನಾಟಕ ಪ್ರಶಸ್ತಿ ಪ್ರಸಂಗ

By Staff
|

ಚಾಳುಕ್ಯ ಕರ್ನಾಟಕ ಸಂಘದವರು ಕೊಡುತ್ತಿರೋ ಚಾಳುಕ್ಯ ಕರ್ನಾಟಕರತ್ನ ಪ್ರಶಸ್ತಿ'ಗೆ ಸಮಿತಿ ಅಧ್ಯಕ್ಷರಾಗಿರುವ ವಿಚ್ಚುರವರು ಅರ್ಹರನ್ನು ಆಯ್ಕೆ ಮಾಡಲು ಹಾಕಿಕೊಂಡಂಥ ಕಟ್ಟಳೆಗಳಾದರೂ ಎಂಥವು? ಯಾರು ಅರ್ಹರು? ಯಾರು ವರ್ಜ್ಯರು?

ಶಿಕಾರಿಪುರ ಹರಿಹರೇಶ್ವರ, ಸರಸ್ವತೀಪುರಂ, ಮೈಸೂರು.

ಮೊನ್ನೆ ಬೆಳಗ್ಗೆ ಆಗಿನ್ನೂ ಎದ್ದು, ಬಚ್ಚಲಮನೆಯಲ್ಲಿ ಮುಖ ತೊಳೆದುಕೊಳ್ಳುತ್ತಿದ್ದೆ. ಮನೆಯ ಮುಂದುಗಡೆ ಹೊರಬಾಗಿಲಿನ ಬಳಿ ಗುಡಿಸಿ, ಸಾರಿಸಿ, ರಂಗೋಲಿ ಹಾಕುತಿದ್ದ ಮನೆಗೆಲಸದ ರತ್ನಮ್ಮ ಬನ್ನಿ, ಬನ್ನಿ, ರಾಯರು ಎದ್ದಿದ್ದಾರೆ. ಒಳಗಿದ್ದಾರೆ. ಒಳಗೆ ಬನ್ನಿ''- ಎನ್ನುವುದು ನನಗೆ ಬಚ್ಚಲುಮನೆಗೇ ಕೇಳಿಸಿತು.

ಯಾರಪ್ಪ, ಇಷ್ಟು ಬೆಳಗ್ಗೆಯೇ ನಮ್ಮ ಮನೆಗೆ ನನ್ನನ್ನ ಹುಡುಕಿಕೊಂಡು ಬಂದಿರೋರು. ಮನೆಗೆಲಸದಾಕೆಯೇ ಬನ್ನಿ, ಬನ್ನಿ' ಅಂತ ಸ್ವಾಗತಿಸುತ್ತಿದ್ದಾಳೆ ಎಂದ ಮೇಲೆ, ಯಾರೋ ಬಹಳ ಪರಿಚಿತರೇ ಇರಬೇಕು; ನಮ್ಮ ಮನೆಗೆ ಆಗಾಗ್ಗೆ ಬಂದು ಹೋಗುತ್ತಿರುವವರೇ ಇರಬೇಕು''- ಅಂದುಕೊಂಡು, ಬೇಗಬೇಗ ಮುಖಮಾರ್ಜನ ಮಾಡಿಕೊಂಡು, ಟವಲ್ಲಿನಿಂದ ಮುಖ ಒರೆಸಿಕೊಳ್ಳುತ್ತಲೇ, ಬಚ್ಚಲಮನೆಯಿಂದ ಹಾಲ್‌ಗೆ ಬಂದೆ. ದಿವಾನಖಾನೆಯಲ್ಲಿ ನೋಡಿದರೆ, ಸುಖಾಸೀನನಾಗಿ, ಆರಾಮಾಗಿ ನ್ಯೂಸ್‌ಪೇಪರ್ ಓದುತ್ತಾ ಕುಳಿತುಕೊಂಡಿದ್ದಾನೆ, ನನ್ನ ಚೆಡ್ಡಿ ದೋಸ್ತು ವಿಚ್ಚು!

ವಿಚ್ಚು ಬಗ್ಗೆ ನಿಮಗೆ ಮೊದಲೇ ಸ್ವಲ್ಪ ಪರಿಚಯ ಮಾಡಿಕೊಡದಿದ್ದರೆ ಮುಂದೆ ಹೇಳುವ ಕಥೆ ನಿಮಗೆ ಅಷ್ಟು ಸ್ವಾರಸ್ಯಕರವಾಗಿರುವುದಿಲ್ಲ. ನಾನೂ ಅವನೂ ಬಾಲ್ಯದ ಗೆಳೆಯರು. ಅವನಿಗೆ ಅವನ ಮನೆಯವರೂ, ನಾವೆಲ್ಲರೂ ವಿಚ್ಚು ಅಂತಲೇ ಕರೆಯುವ ಅಭ್ಯಾಸ. ಅವನೇನೋ ತನ್ನ ಹೆಸರನ್ನ ವಿಶ್ವನಾಥ್ ಕೌಂಡಿನ್ಯ ಅಂತ ತನ್ನ ಬಿಸಿನೆಸ್ (ವಿಸಿಟಿಂಗ್) ಕಾರ್ಡಿನಲ್ಲಿ ಛಾಪಿಸಿಕೊಂಡಿದ್ದ. ಯಾರಾದರೂ ಕೇಳಿದರೆ, ತನ್ನದು ಆ ಗೋತ್ರ, ಆ ಕೌಂಡಿನ್ಯ ಋಷಿಗಳು ಪುರಾಣಗಳಲ್ಲಿ, ಮಹಾಭಾರತದಲ್ಲಿ ಇನ್ನಿತರ ಗ್ರಂಥಗಳಲ್ಲಿ ಎಲ್ಲೆಲ್ಲಿ ಅವರು ಬಂದು, ಏನೇನು ಮಾಡಿ ಹೋದರು, ಅವರಿಗೆ ಎಷ್ಟು ಜನ ಹೆಂಡತಿಯರು, ಮಕ್ಕಳು- ಇತ್ಯಾದಿ ಎಲ್ಲವನ್ನೂ ಗಂಟೆಗಟ್ಟಲೆ ಕೊರೆಯುತ್ತಿದ್ದ. ಕನ್ನಡದ ಪ್ರಖ್ಯಾತ ಕಾದಂಬರಿಕಾರರಿದ್ದಾರಲ್ಲ, ಅವರ ಹೆಸರು ನಿಮಗೆ ಗೊತ್ತೇ ಇದೆ, ಆದ್ದರಿಂದ ಅವರನ್ನ ಇಲ್ಲಿ ಎಳೆತರುವುದು ಬೇಡ, ಅವರು ಯಾವಾಗಲೋ ಒಂದು ಸರಿ, ಏನ್ಸಮಾಚಾರ, ಏನ್ಸಮಾಚಾರ' ಅಂತ ಹತ್ತಾರು ಸರಿ ಕೇಳಿದ ಮೇಲೆ ಬೇರೆ ಏನೂ ಹೊಳೆಯದೆ, ಬಾಯಿತಪ್ಪಿ ಹೌದು, ಈ ಕೌಂಡಿನ್ಯ ಹೆಸರು ನಿಮಗೆ ಹೇಗೆ ಅಂಟಿಕೊಂಡಿತು''- ಅಂತ ಅವನನ್ನ ಕೇಳಿದ್ದಕ್ಕೆ, ವಿಚ್ಚೂನೇ ಹೇಳಿದ್ದು, ಅವರ ಮುಂದಿನ ಕಾದಂಬರಿಗಾಗುವಷ್ಟು ಅಥವಾ ಇನ್ನೂ ಹೆಚ್ಚು ಕೌಂಡಿನ್ಯರ ವಿಷಯಾನ ಇವನೇ ನಿರರ್ಗಳವಾಗಿ ಹೇಳಿ ಬಂದಿದ್ದಾನಂತೆ, ಆ ಕಾದಂಬರಿ ಬರೋದನ್ನೇ ಕಾಯ್ತಾ ಇದಾನಂತೆ. ವಿಷಯ ಎಲ್ಲೆಲ್ಲೋ ಹೋಯ್ತು, ನಿಜ. ಆದರೆ, ಒಂದು ಮಾತ್ರಾ ನಿಜವಾದ ಎಚ್ಚರಿಕೆಯ ಮಾತು. ಅಪ್ಪಿ ತಪ್ಪಿಯೂ ನೀವು ವಿಚ್ಚೂನ ಭೇಟಿಯಾದಾಗ, ಯಾರು ಈ ಕೌಂಡಿನ್ಯ' ಅಂತ ಕೇಳಿ, ಆಮೇಲೆ ಒದ್ದಾಡಬೇಡಿ.

ನಮ್ಮ ವಿಚ್ಚೂಗೆ, ತನ್ನ ಕೌಂಡಿನ್ಯಸ ಗೋತ್ರದ ಬಗ್ಗೆ ಎಷ್ಟು ಅಭಿಮಾನವೋ, ಅಷ್ಟೇ ತಾನು ಚಾಳುಕ್ಯ ಕರ್ಣಾಟಕ ವಂಶಸ್ಥ ಎಂಬುದರ ಬಗ್ಗೆ ಅತಿ ಹೆಮ್ಮೆ. ಉದಾಹರಣೆ: ತಳುಕು ಪದ ಇದೆಯಲ್ಲ, ಅದು ಚಳುಕು ಪದದಿಂದ ಬಂದಿರಬೇಕೆಂದು ಅವನ ಸಂಶೋಧನೆ. ಅದು ಹೇಗೆ ಸಾಧ್ಯ?- ಎಂದು ಯಾರಾದರೂ ಭಾಷಾವಿಜ್ಞಾನಿಗಳು ಕೇಳಿದರೆ, ತ್ಸು ತ್ಸು ಎಂಬುದನ್ನ ಕೆಲವರು ತ್ಚು ತ್ಚು ಅ೦ತಲೂ, ಚ್ಚು ಚ್ಚು ಅಂತಲೂ ಹೇಳುತ್ತಾರೆಂದು ತನ್ನ ಕ್ಷೇತ್ರಕಾರ್ಯದಲ್ಲಿ ಕಂಡುಹಿಡಿದಿದ್ದಾನಂತೆ. ಆದರಿಂದ ತಳುಕಿನ ಜನ ಚಾಳುಕ್ಯ ಮೂಲದವರಂತೆ. ತಳುಕಿನ ವೆಂಕಣ್ಣಯ್ಯನವರೂ, ತ ಸು ಶಾಮರಾರಾಯರೂ ಆ ಮೂರು ಮತ್ತೊಂದು ತಲೆಮಾರಿನವರೆಲ್ಲ ತನ್ನ ಪೂರ್ವಜರೆಂದೇ ಬೀಗಿಕೊಳ್ಳುತ್ತಾನೆ.

ಇಷ್ಟಕ್ಕೇ ನಿಲ್ಲಿಸಿದ್ದರೆ, ನಮಗೇನೂ ತೊಂದರೆ ಇರುತ್ತಿರಲಿಲ್ಲ. ಕನ್ನಡನಾಡಿನ ಎಲ್ಲಾ ಮಹಾಪುರುಷರೂ ಒಂದಲ್ಲ ಒಂದು ರೀತಿ ಈ ಚಾಳುಕ್ಯ ಕರ್ನಾಟಕತ್ವಕ್ಕೆ ಏನೋ ಒಂದು ಸಂಬಂಧಪಟ್ಟಿರಲೇಬೇಕು- ಎಂಬ ದೃಢ ವಿಶ್ವಾಸ ಅವನದು. ಮೊನ್ನೆ ಇಲ್ಲಿ ಮೈಸೂರಿನಲ್ಲಿ ಆದಿಕವಿ ಪಂಪನ ಆದಿಪುರಾಣ, ವಿಕ್ರಮಾರ್ಜುನ ವಿಜಯ- ಕಾವ್ಯಗಳ ಗಮಕವಾಚನ, ವ್ಯಾಖ್ಯಾನ ಅದ್ಧೂರಿಯಾಗಿ ಹನ್ನೆರಡುದಿನ ಪ್ರತಿದಿನ ಸಂಜೆ ನಡೆಯಿತಲ್ಲ. ಕವಿ ಜೈನನಾಗುವುದಕ್ಕೆ ಮುನ್ನ, ಕಮ್ಮೆ ಕುಲದ ಬ್ರಾಹ್ಮಣನಾಗಿದ್ದ- ಎಂದು ವ್ಯಾಖ್ಯಾನಕಾರರು ತಮ್ಮ ಪ್ರಾಸ್ತಾವಿಕ ಮಾತುಗಳಲ್ಲಿ ತೇಲಿಸಿ ಹೇಳಿದರೆ, ಭೀಮಪಯ್ಯನ ಮಗನಾದ ಈ ಪಂಪನು ಚಾಲುಕ್ಯ ಕರ್ನಾಟಕ ಕುಲದವನಾಗಿರಬಹುದೇ- ಎಂಬ ಪ್ರಶ್ನೆ, ದಿನವೂ ಕಾರ್ಯಕ್ರಮಕ್ಕೆ ಹೋಗುತ್ತಿದ್ದ ವಿಚ್ಚುವಿನ ತಲೆಯೊಳಗೆ, ಅದು ಹೇಗೋ, ಹೊಕ್ಕು ಕೊರೆಯುತ್ತಿತ್ತು. ಎಲ್ಲರೂ ನೋಡು ನೋಡುತ್ತಲೇ, ಕೊನೆಯ ದಿನ ಎದ್ದುನಿಂತು, ಕೇಳಿಯೇ ಬಿಟ್ಟ- ಸ್ವಾಮಿ ವಿದ್ವಾಂಸರೆ, ನನ್ನದೊಂದು ಪ್ರಶ್ನೆ'' ಅಂತ. ಅವನ್ನು ಸುಮ್ಮನಾಗಿಸಿ ಕೂರಿಸುವುದರಲ್ಲಿ, ನಮಗೆಲ್ಲ ಕುರಿ ಕೋಣ ಬಿದ್ದು ಹೋಯಿತು. ಆದರೆ ಅವನೇನೂ ಸ್ವಲ್ಪವೂ ವಿಚಲಿತನಾದಂತೆ ತೋರಲಿಲ್ಲ.

ಪಂಪನ ಪೂರ್ವಜರು ವೆಂಗಿಮಂಡಲದವರಂತೆ. ಈ ವೆಂಗಿಮಂಡಲ ಮೊದಲು ಕೃಷ್ಣಾ-ಗೋದಾವರೀ ನಡುವೆ ಸಮುದ್ರತೀರದ ಪ್ರದೇಶವಾಗಿತ್ತಂತೆ. ಬಾದಾಮಿಯ ಚಾಲುಕ್ಯರು ಇದನ್ನು ಸಾಧಿಸಿದರಂತೆ, ನಂತರ ಕಲ್ಯಾಣದ ಚಾಲುಕ್ಯರ ಕಾಲದಲ್ಲಿ ಈ ಹೆಸರಿನ ರೂಢಿ ಮುನ್ನಡೆಯಿತಂತೆ. ಹೀಗೆಲ್ಲ ಬರೆದ ಪ್ರಖ್ಯಾತ ಸಂಶೋಧಕ ಪ್ರೊ| ಶಾಸ್ತ್ರಿಗಳ ಪುಸ್ತಕವೇ ವಿಚ್ಚುವಿನ ಕೈಯಲ್ಲಿ ಇತ್ತು. ಅದನ್ನೇ ಉಲ್ಲೇಖಿಸುತ್ತ, ಸ್ವಾಮಿ ವಿದ್ವಾಂಸರೆ, ನನ್ನದೊಂದು ಪ್ರಶ್ನೆ'' ಎಂದು ವಿಚ್ಚು ತನ್ನ ಬಾಣ ಬಿಟ್ಟಿದ್ದ. ದೂರದರ್ಶನದಲ್ಲಿ ಕೆಲವೊಮ್ಮೆ ಉದ್ದುದ್ದನೆಯ, ಎರಡು ನಿಮಿಷಕ್ಕೂ ಹೆಚ್ಚು ಕಾಲ ತೆಗೆದುಕೊಳ್ಳುವ, ತಲೆ ಬುಡ ಗೊತ್ತಾಗದ ಪ್ರಶ್ನೆಯ ರೂಪದ ತಮ್ಮ ಹೇಳಿಕೆಗಳನ್ನ ಸಂದರ್ಶಕರು ಕೇಳುತ್ತಾರಲ್ಲ, ಹಾಗೆ ಇತ್ತು ವಿಚ್ಚುವಿನ ಪ್ರಶ್ನೆ. ಆದರೆ ಒಂದೇ ವ್ಯತ್ಯಾಸ. ಪಕ್ಕದಲ್ಲಿ ತಲೆತಗ್ಗಿಸಿ ಕುಳಿತಿದ್ದ ಅವನ ಹೆಂಡತಿ ಷರಟು ಹಿಡಿದು ಎಳೆಯುತ್ತಿದ್ದುದು ಬಲವಾದಾಗ, ಕೊನೆಯಲ್ಲಿ ಅವನು ಅಪ್ಪಣೆಕೊಡಿಸಿದ ಮುಕ್ತಾಯ ವಾಕ್ಯ: ನನ್ನ ಅಭಿಪ್ರಾಯದಲ್ಲಿ ಪಂಪನು ಚಾಲುಕ್ಯ ಕರ್ನಾಟಕ ವಂಶಸ್ಥ; ಆಧಾರಗಳನ್ನು ಕ್ರೋಢೀಕರಿಸುತ್ತಿದ್ದೀನಿ. ನೀವೇನನ್ನುತ್ತೀರಿ?'- ಎಂಬ ವಿಚ್ಚುವಿನ ಘೋಷಣೆ.

ಸ್ವಲ್ಪ ದಿನಗಳ ಹಿಂದೆ ಬಸವಣ್ಣನವರ ಬಗ್ಗೆಯೂ, ಹೀಗೆಯೇ, ಒಂದು ವಿಚಾರಸಂಕಿರಣದಲ್ಲಿ ಸಭಿಕನಾಗಿ ಹೋಗಿದ್ದ; ಯಾರು ಬೇಕಾದರೂ ಪ್ರಶ್ನೆಗಳನ್ನು ಕೇಳಿ, ಸಂವಾದದಲ್ಲಿ ಭಾಗವಹಿಸಬಹುದು- ಎಂದು ಸಂಘಟಕರು ಹೇಳಿದ ಕೂಡಲೇ, ವಿಚ್ಚು ಛಂಗನೆ ಎದ್ದು, ವೇದಿಕೆಯಲ್ಲಿದ್ದವರಿಗೆಲ್ಲ ನಡುಕ ಹುಟ್ಟಿಸಿದ, ಮುಂದಾದ ಅನಾಹುತದ ಕತೆಯನ್ನ, ಈಗ ಬೇಡ, ಇನ್ನೊಮ್ಮೆ ಯಾವಾಗಲಾದರೂ ಹೇಳುತ್ತೇನೆ. ವಿಚ್ಚುವಿನ ಪ್ರಕಾರ ಜಗಜ್ಜೋತಿ ಬಸವೇಶ್ವರರೂ ಕಮ್ಮೆಗಳಲ್ಲ, ಚಿದಾನಂದಮೂರ್ತಿಗಳು ಒಪ್ಪಲಿ ಯಾ ಬಿಡಲಿ, ಕಲಬುರ್ಗಿಯವರು ಕೋಪಮಾಡಿಕೊಳ್ಳಲಿ ಸುಮ್ಮನಿರಲಿ, ಬಂಜಗೆರೆಯವರು ಹೊರಗೋ ಒಳಗೋ ಕೆಣಕಲಿ ಅಥವಾ ಮಣಿಯಲಿ- ವಿಚ್ಚು ಹೇಳುತ್ತಾನೆ, ಅವರು ಚಾಳುಕ್ಯ ಕರ್ನಾಟಕ ಬ್ರಾಹ್ಮಣರೇ. ಅವನ ವಾದದ ಸಾರಾಂಶ ಏನೆಂದರೆ: ಕಲ್ಯಾಣದಲ್ಲಿ ತಾನೆ ಬಸವಾದಿ ಈ ಶಿವಶರಣರೆಲ್ಲ ಇದ್ದದ್ದು; ಕಲ್ಯಾಣದ ಚಾಳುಕ್ಯರು ತಾನೇ ಕರ್ನಾಟಕವನ್ನಾಳಿ ಹೆಸರು ಮಾಡಿದ್ದು- ಇಷ್ಟು ಸ್ಪಷ್ಟವಾಗಿರುವಾಗ ಒಂದೆರಡು ಕಳಚಿದ ಕೊಂಡಿಗಳನ್ನು ಹುಡುಕಿ ಜೋಡಿಸಿದರಾಯಿತು, ಬಸವಣ್ಣನವರ ಪೂರ್ವಾಶ್ರಮದ ವಿವರಗಳೆಲ್ಲ ಸಿಕ್ಕೇ ಹೋಯಿತು, ಎನ್ನುತ್ತಾನೆ ವಿಚ್ಚು.

ರನ್ನ ಜನ್ನ ಪೊನ್ನ -ಮುತಾದವರುಗಳ ಚಾಳುಕ್ಯತ್ವದ ಬಗ್ಗೆ ಇತಿಹಾಸವನ್ನ ತಿರುಚಿ ಮುರುಚಿ ಜಾಳಾಡುತ್ತಿದ್ದಾನೆ, ನಮ್ಮ ವಿಚ್ಚು. ಯಾರು ಯಾರೋ ಏನೇನೋ ಅಸಂಬದ್ಧ ವಿಷಯಗಳ ಮೇಲೆ ಬರೆದು ಡಾಕ್ಟರೇಟ್ ತೆಗೆದುಕೊಳ್ಳುತ್ತಿರುವಾಗ ವಿಚ್ಚು ಏಕೆ ಇಂತಹ ರಸವತ್ತಾದ ವಿಷಯದ ಮೇಲೆ ಸಂಪ್ರಬಂಧ ಬರೆದು ಡಿ.ಲಿಟ್ ಗಿಟ್ಟಿಸ ಬಾರದು, ಹೇಳಿ.

ಇರಲಿ, ವಿಷಯ ಮತ್ತೆ ಹಳಿ ತಪ್ಪಿತು. ಇಲ್ಲಿ ದಿವಾನಖಾನೆಗೆ ಬಂದ ನಾನು ವಿಚ್ಚುವನ್ನು ಸ್ವಾಗತಿಸುವುದರೊಳಗೆ, ಅಡಿಗೆ ಮನೆಯಿಂದ ನನ್ನ ಹೆಂಡತಿ ವೆಂಕಟಲಕ್ಷ್ಮಿ, ಏನು ಕೌಂಡಿನ್ಯ ವಂಶೋದ್ಭವರು, ಬೆಳ ಬೆಳಗ್ಗೇನೇ ಇತ್ತ ದಯಮಾಡಿಸಿದ್ದು? ಸ್ವಲ್ಪ ಕಾಫಿ ಕೊಡಲೇ? ಅಥವಾ ಟೀ ಪ್ರಿಫರ್ ಮಾಡುತ್ತೀರಾ?''- ಎಂದು ಕೇಳಿದಳು.

ನೀವು ಕೈಯಾರೆ ಮಾಡಿಕೊಡೋದಾದರೆ ಏನು ಕೊಟ್ಟರೂ ಕುಡಿಯಲು ಅಭ್ಯಂತರವಿಲ್ಲ''- ಎಂದ ವಿಚ್ಚು. ಈ ಮಾತಿನ ಅರ್ಥ ಆಗಬೇಕಾದರೆ, ನೀವು ಇನ್ನು ಸ್ವಲ್ಪ ಕಾಲ ತಡೆಯಬೇಕು. ಬಾಗಿಲಿಗೆ ರಂಗೋಲಿ ಹಾಕಿ ಮುಗಿಸಿ, ಮನೆಕೆಲಸದಾಕೆ ಒಳಬಂದಳು; ಅಡಿಗೆ ಮನೆಗೆ ಹೋದಳು. ತಕ್ಷಣ, ವಿಚ್ಚು ಹೇಳಿದ- ಬೇಡ ಬಿಡಿ, ಏನೂ ತೊಂದರೆ ತೊಗೊಳ್ಳ ಬೇಡಿ, ನಾನು ಮನೇಲೇ ಕಾಫಿ ಕುಡಿದು ಬಂದಿದೀನಲ್ಲ.''

ಅಡಿಗೆ ಮನೆಯಿಂದ ಮನೆಕೆಲಸದಾಕೆ ತಂದು ಕೊಟ್ಟ ಕಾಫೀನ ನಾನು ಕುಡಿಯುತ್ತ, ಕೇಳಿದೆ: ವಿಚ್ಚು ಏನ್ಸಮಾಚಾರ? ಏನು ಇಷ್ಟು ಬೆಳಗ್ಗೇನೇ ಬಂದೆ. ಏನಾದರೂ ವಿಶೇಷ?''

ನಿನ್ನ ಸಲಹೆ ಕೇಳೋಣ ಅಂತ ಬಂದೆ. ನಿನ್ನ ಹತ್ತಿರ ಮಾತನಾಡಿಕೊಂಡು ಆಮೇಲೆ, ಒಂದು ಮುಖ್ಯವಾದ ಮೀಟಿಂಗ್ ಅಟೆಂಡ್ ಮಾಡೋದಕ್ಕೆ ಹೋಗಬೇಕು. ಅದಕ್ಕೆ.''

ಏನಪ್ಪ ಅ೦ಥ ಘನಂದಾರೀ ಕೆಲಸ, ನನಗೆ ಗೊತ್ತಿಲ್ಲದಿರೋ ನಿನ್ನ ವ್ಯವಹಾರ''- ಅಂತ ನಾನು ರೇಗಿಸಿದೆ.

ನೋಡು, ಜಗಳ ಆಡಲಿಕ್ಕೆ ನನಗೆ ಈಗ ಸಮಯ ಇಲ್ಲ. ಇದು ಬಹಳ ಮುಖ್ಯವಾದದ್ದು ಮತ್ತು ಬಹಳ ಗೌಪ್ಯವಾದದ್ದು''

ಓ, ಅಷ್ಟು ಇಂಪಾರ್ಟೆಂಟು ಮತ್ತು ಟಾಪ್ ಸೀಕ್ರೆಟ್- ಅಂತ ಆದಮೇಲೆ, ವೆಂಕಟಲಕ್ಷ್ಮಿ ಆಮೇಲೆ ರತ್ನಮ್ಮ ಕೇಳಿಸಿಕೊಂಡರೆ ತೊಂದರೆ ಇಲ್ಲ ತಾನೆ?''- ಅಂದೆ.

ತೊಂದರೆ ಏನೂ ಇಲ್ಲ, ಆದರೆ, ಅನೌನ್ಸ್‌ಮೆಂಟ್ ಮಾಡೋದಕ್ಕೆ ಮುಂಚೇನೇ ಪಬ್ಲಿಕ್ ಮಾಡೋಲ್ಲ ಅಂತಾದರೆ, ಮಾತ್ರ.''- ಎಂದ.

ಎಲಾ ಇವನ, ಏನಯ್ಯ ಅದು ಗುಟ್ಟು ಗುಟ್ಟು? ಏನಾದರೂ ಭಾರತರತ್ನ ಪ್ರಶಸ್ತಿ ಕೊಡೋ ಆಯ್ಕೆ ಸಮಿತಿಗೆ ನಿನ್ನನ್ನ ಸೇರಿಸಿಕೊಂಡಿದಾರೇನಯ್ಯ? ಕಂಗ್ರಾಟ್ಸ್ ವಿಚ್ಚು!''- ಅಂತ ಚುಡಾಯಿಸಿದೆ.

ಒಂದು ಥರಾ ಭಾರತರತ್ನ ಇದ್ದ ಹಾಗೇ ಅ೦ತ ಅನ್ನು. ಸುತ್ತಿ ಬಳಸಿ ಹೇಳೋದೇನು, ಇದು ನಮ್ಮ ಚಾಳುಕ್ಯ ಕರ್ನಾಟಕ ಸಂಘದವರು ಕೊಡುತ್ತಿರೋ ಚಾಳುಕ್ಯ ಕರ್ನಾಟಕರತ್ನ ಪ್ರಶಸ್ತಿ'. ಯಾರು ಯಾರಿಗೆ ಕೋಡೋದು ಅನ್ನೋದಕ್ಕೆ ಒಂದು ಆಯ್ಕೆ ಸಮಿತಿ ಮಾಡಿದ್ದರು. ಮೊನ್ನೆ ಕಮಿಟಿ ಮೀಟಿಂಗ್ ನಡೀತು. ಅಲ್ಲೋ ಮಾರಾಮಾರಿ, ಹಣಾಹಣಿ, ಜಟಾಪಟಿ, ಜಂಗೀಕುಸ್ತಿ. ಯಾರಿಗೆ ಕೊಡಬೇಕು ಅನ್ನೋದಕ್ಕಿಂತ, ಯಾರಿಗೆ ಕೊಡಕೂಡದು- ಅನ್ನೋ ಮಾತು, ವಾದ, ಕಾರಣ, ಸಮರ್ಥನೆ ಇವೇ ಕುಣಿದಾಡಿದವು....''

ದೇರ್ ವಾಸ್ ಮೋರ್ ಹೀಟ್, ದ್ಯಾನ್ ಲೈಟ್- ಅನ್ನು'', ಅಂದೆ.

ಎಂಥದೋ ಒಂದು. ಕೊನೆಗೆ ಏನಾಯ್ತು ಗೊತ್ತಾ?''

ಏನು?''- ವೆಂಕಟಲಕ್ಷ್ಮಿ ಮತ್ತು ನಾನು ಕುತೂಹಲ ತಡೆಯಲಾರದೆ, ಒಟ್ಟಿಗೇ ಕೇಳಿದೆವು.

ನನ್ನ ಮೇಲೇನೇ ಎಲ್ಲಾ ಜವಾಬ್ದಾರಿ ಹಾಕಿ ಬಿಟ್ಟಿದ್ದಾರೆ.''

ಅಭಿನಂದನೆಗಳು. ನಿಮಗಲ್ಲದೆ, ಇನ್ನಾರ ಕೊರಳಿಗೆ ಹಾಕಬೇಕು ಭಾರಾನ? ನೀವೇ ಅಲ್ವೇ ಆ ಸಂಘಕ್ಕೆ ಅಧ್ಯಕ್ಷರು. ಒಳ್ಳೆದೇ ಆಯ್ತು ಬಿಡಿ, ಯಾರಾದ್ರೂ ಯೋಗ್ಯರನ್ನ ಅರ್ಹರನ್ನ ಹುಡುಕಿ ಪ್ರಶಸ್ತಿ ಕೊಟ್ಟರಾಯ್ತು. ಅದಕ್ಯಾಕ್ಕಿಷ್ಟು ತಲೆ ಕೆಡಿಸಿಕೊಳ್ತೀರಾ?''- ವೆಂಕಟಲಕ್ಷ್ಮಿ ಸಮಾಧಾನ ಪಡಿಸುವ ಮಾತನಾಡಿದಳು.

ಲಕ್ಷ್ಮೀ, ನೀನು ಸುಮ್ಮನಿರು. ಇನ್ನೂ ಏನೋ ಕರಾಮತ್ತು ಇದೆ, ಇದರ ಒಳಗೆ ಹೊರಗೆ. ಹೇಳಪ್ಪ ವಿಚ್ಚು, ನಿನ್ನ ಹೆಗಲೇರಿದ ಈ ಭಾರ ಅಂದ್ಯಲ್ಲ ಎಷ್ಟು ಕೇಜಿ? ಎಷ್ಟು ಟನ್? ಯಾವ ಥರದ್ದು?''- ಅಂದೆ ನಾನು.

ಆರಿಸೋನು ನಾನೇ ಕಣಯ್ಯ. ಏಕಸದಸ್ಯ ಆಯೋಗ- ಇದ್ದ ಹಾಗೆ ಅನ್ನು ಬೇಕಾದರೆ. ಆದರೆ, ಒಂದು ಎಂಟು- ಹತ್ತು ಕಂಡಿಷನ್‌ಗಳನ್ನ ಹಾಕಿಬಿಟ್ಟಿದ್ದಾರೆ. ಅವೆಲ್ಲ ತೃಪ್ತಿಕರವಾಗಿ ಇದ್ದರೆ ಮಾತ್ರ, ಅಂಥ ವ್ಯಕ್ತಿಗೆ ನಮ್ಮ ಚಾಳುಕ್ಯ ಕರ್ನಾಟಕ ಪ್ರಶಸ್ತಿ ಕೊಡಬಹುದು- ಅ೦ತ ಕಮಿಟಿಯವರು ತೀರ್ಮಾನಿಸಿದ್ದಾರೆ.''

ಬಿಡಯ್ಯ, ಬಿಡು. ಒಂದು ನೂರು ಜನಗಳ ಪಟ್ಟೀನ ರಾತೋ ರಾತ್ರಿ ಸಿದ್ಧಪಡಿಸಿಕೊಡಬಲ್ಲೆ. ಅದರಲ್ಲಿ ಆರಿಸಿಕೋ, ನಿನಗೆ ಬೇಕು ಅನ್ನಿಸಿದವರನ್ನ.''- ಹೇಳಿದೆ, ನಾನು.

ಅಷ್ಟು ಸುಲಭ ಅಲ್ಲ ಕಣಪ್ಪ ನನ್ನ ಕೆಲಸ. ಕಂಡೀಷನ್‌ಗಳು ಬಹಳ ತೀಕ್ಷ್ಣವಾಗಿವೆಯಪ್ಪ. ನೀನು ನಂಬೋಲ್ಲ.''- ಪೇಚಾಡಿಕೊಂಡ ವಿಚ್ಚು.

ಒಂದೆರಡು ಹೇಳಿ ನೋಡೋಣ''- ಕೇಳಿದಳು ವೆಂಕಟಲಕ್ಷ್ಮಿ.

ಪ್ರಶಸ್ತಿ ಯಾರಿಗೇ ಕೊಟ್ಟರೂ, ಅವರ ಹೆಂಡತಿ ಅಥವಾ ಗಂಡ ಇಬ್ಬರೂ ಚಾಳುಕ್ಯ ಕರ್ಣಾಟಕರೇ ಆಗಿರಬೇಕು....''

ಪ್ರೊಫೆಸರ್ ಶಾಸ್ತ್ರಿಗಳು, ಮಹಾಮಹೋಪಾಧ್ಯಾಯ ಗುಂಡಪ್ಪನವರು, ವೇದವಾರಿಧಿ ರಾಮಾಜೋಯ್ಸರು, ಪಂಡಿತರತ್ನ ರಾಘವೇಂದ್ರರ ಭಟ್ಟರು, ನಾಟ್ಯಮಯೂರಿ ಸೀತಾ ಕುಪ್ಪುಸ್ವಾಮಿ, ಜರ್ನಲಿಸ್ಟ್ ವಿಷ್ಣುಶರ್ಮರು- ಇವರುಗಳು ಲಿಸ್ಟ್‌ನಿಂದ ಔಟ್''- ಎಂದೆ ನಾನು.

ಏಕೆ''- ಕೇಳಿದಳು ವೆಂಕಟಲಕ್ಷ್ಮಿ.

ಹೊಳೀಲಿಲ್ವಾ? ಇವರೆಲ್ಲರ ಹೆಂಡತಿಯರೂ ಬ್ರಾಹ್ಮಣರಿರಬಹುದು, ಆದರೆ ನಾನ್-ಚಾಳುಕ್ಯ ಕರ್ನಾಟಕರು.''

ಮೊದಲನೆ ನಿಯಮ ಸರಿಹೋಗಿ, ಅವರಿಗೆ ಮಕ್ಕಳಿದ್ದರೆ, ಅಳಿಯ ಅಥವಾ ಸೊಸೆಯರು ಚಾಳುಕ್ಯ ಕರ್ನಾಟಕದವರೇ ಆಗಿರ ಬೇಕು....'' ಮುಂದುವರಿಸಿದ ವಿಚ್ಚು.

ಅಮೆರಿಕಾಕ್ಕೆ ಯೂರೋಪಿಗೆ ಹೋಗಿ ನಾವು ಅಲ್ಲೇ ನೆಲೆಸಿ, ಮೂವತ್ತು ವರುಷದ ಮೇಲೆ ಆಯ್ತು ಅಂತ ಬೀಗುವ ಮಹನೀಯರಲ್ಲಿ ಬಹಳ ಜನ ಈ ಮ್ಯೂಸಿಕಲ್ ಛೇರ್ ಆಟದಿಂದ ಈಗ ಹೊರಗೆ!''- ಎಂದೆ ನಾನು.

ನಮಗೆ ಬಿಡಿ, ಗುಂಡುಗೋವಿಗಳು. ಮಕ್ಕಳಿಲ್ಲ ಮರಿಯಿಲ್ಲ. ಈ ನಿಯಮ ಏನೂ ಬಾಧಿಸಲ್ಲ''- ಅ೦ದಳು ವೆಂಕಟಲಕ್ಷ್ಮಿ.

ಶಾಕಾಹಾರಿಗಳಾಗಿರಬೇಕು; ಮಾಂಸ-ಮದ್ಯ ಮುಟ್ಟಿರಲೇಬಾರದು, ಮೂಸಿರಲೇಬಾರದು......''-ವಿಚ್ಚು ಮುಂದುವರಿಸಿದ.‌

ಹಾಗಾದರೆ, ವಿದೇಶಕ್ಕೆ ಹೋದ ಮೇಧಾವೀ ಕೆನೆಯ ತೆನೆಗಳೆಲ್ಲ, ಸಾಮಾನ್ಯವಾಗಿ, ನಮ್ಮ ಈ ಪರ್ಯಾಯ ಪ್ರಶಸ್ತಿಪೂಜೆಗೆ ತ್ಯಾಜ್ಯರು, ವರ್ಜ್ಯರು, ಅನರ್ಹರು ಅ೦ದಂತೆ ಆಯಿತು.''- ವೆಂಕಟಲಕ್ಷ್ಮಿ ವ್ಯ೦ಗ್ಯವಾಡಿದಳು.

ಶಾಕಾಹಾರಿಗಳೇ ಆಗಿರಬಹುದು, ಇತರರನ್ನ ಅಡಿಗೆ ಮಾಡೋದಕ್ಕೋ ಬಡಿಸೋದಕ್ಕೋ ಮನೆಯಲ್ಲಿ ಇಟ್ಟುಕೊಂಡೋ, ಬಿಟ್ಟುಕೊಂಡೋ ಇದ್ದರೆ ಅವರಿಗೆ ಪ್ರಶಸ್ತಿ ಕೊಡೋ ಹಾಗಿಲ್ಲ.....''- ವಿಚ್ಚು ಮೆಲ್ಲನ ದನಿಯಲ್ಲಿ ಹೇಳಿದ.

ನಾನೂ ಕೇಳಿಸಿಕೊಂಡೆ. ಬಿಡಿ ಬಿಡಿ, ಲಕ್ಷಮ್ಮನವರೇ, ನಿಮಗೂ ಈ ಪ್ರಶಸ್ತಿ ದಕ್ಕಾಕಿಲ್ಲ''- ಅಡಿಗೆ ಮನೆಯಿಂದಲೇ ದಲಿತರ ಮನೆ ಹೆಣ್ಣು, ನಮ್ಮ ಮನೆಕೆಲಸದಾಕೆ ರತ್ನಮ್ಮ ಕೂಗಿ ಹೇಳಿದಳು.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more