ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನಾಗತಿಹಳ್ಳಿ ಚಂದ್ರಶೇಖರ್‌ರವರೊಂದಿಗೆ ಒಂದು ಸಂಜೆ

By ಶಿಕಾರಿಪುರ ಹರಿಹರೇಶ್ವರ
|
Google Oneindia Kannada News

ಮಂಗಳವಾರ, ದಿನಾಂಕ: ಅಕ್ಟೋಬರ್‌ 05, 2004. ಮಧ್ಯಾಹ್ನ ಮೂರು ಗಂಟೆಯಿಂದಲೇ ನಮ್ಮ ಮೈಸೂರು ಸರಸ್ವತೀಪುರದ ಮನೆಗೆ ಸ್ನೇಹಿತರು ಒಬ್ಬೊಬ್ಬರಾಗಿ ಬರಲಾರಂಭಿಸಿದ್ದರು. ಎಲ್ಲರಿಗೂ ಫೋನ್‌ ಮಾಡಿ ತಿಳಿಸಿದ್ದೆವು: ಕಾರ್ಯಕ್ರಮ ಸಂಜೆ 5:30 ರಿಂದ 6:30 ರವರೆಗೆ- ಎಂದು. ಇಲ್ಲೀಗ ಬಹಳ ಜನ ಮಿತ್ರರಿಗೆ ಮತ್ತು ಪರಿಚಿತರಿಗೆ, ಪ್ರತ್ಯಕ್ಷವಾಗಿ ಆಗಲೀ ಕರ್ಣಾಕರ್ಣಿಯಾಗಿಯಾಗಲೇ ಗೊತ್ತು: ನಾವು ನಡೆಸುವ ಕಾರ್ಯಕ್ರಮಗಳು ವೇಳೆಗೆ ಸರಿಯಾಗಿ ಶುರುವಾಗುತ್ತವೆ- ಎಂದು; ತಡವಾದರೆ, ಮೊದಲು ನಡೆದುದೆಲ್ಲಾ ತಮ್ಮ ಪಾಲಿಗೆ ಇಲ್ಲಾ- ಎಂದೂ ಸಹ. ಹಾಗಾಗಿ ಮೊದಲೇ ಬಂದು ಸುಖಾಸೀನರಾಗುತ್ತಾರೆ. (ಇತ್ತೀಚೆಗೆ ನಾವು ಇಲ್ಲಿನ ಕಲಾಮಂದಿರದಲ್ಲಿ ನಡೆಸಿದ 'ಮುಕ್ತ’ ಧಾರಾವಾಹಿಯ ಸಂವಾದದ ಕಾರ್ಯಕ್ರಮವನ್ನೂ ಹಾಗೇ ಹೇಳಿದ ಸಮಯಕ್ಕೇ ಪ್ರಾರಂಭಿಸಿದ್ದು; ಅಲ್ಲಿ ಆಗಲೇ ಕಲಾಮಂದಿರ ತುಂಬಿ, ಸುಮಾರು ಒಂದು ಸಾವಿರದ ನಾಲ್ಕುನೂರು ಜನ ಕುಳಿತಿದ್ದರು. ಇನ್ನೊಂದು ಘಟನೆ: ಆಗಿನ್ನೂ 'ಮನ್ವಂತರ’ ಮುಗಿದಿತ್ತು; ನಾವಿನ್ನೂ ಮೈಸೂರಿಗೆ ಹೋದ ಹೊಸತು. ನಮ್ಮ ಮನೆಯಲ್ಲೇ 'ಟಿ ಎನ್‌ ಸೀತಾರಾಂ ಅವರೊಂದಿಗೆ ಒಂದು ಸಂವಾದ’ ಕಾರ್ಯಕ್ರಮವನ್ನು ಚಿಕ್ಕದಾಗಿ ಹಮ್ಮಿಕೊಂಡಿದ್ದೆವು. ಬೆಂಗಳೂರಿನಿಂದ ಬರಬೇಕಿದ್ದ ಅವರ ಪ್ರಯಾಣ ಅನಿವಾರ್ಯವಾಗಿ ಸ್ವಲ್ಪ ತಡವಾಯಿತು, ಅರ್ಧ ಗಂಟೆ ಅಷ್ಟೇ. ಆದರೆ, ಮುಖ್ಯ ಅತಿಥಿಗಳಿಗೆ ಕಾಯದೆ, ಹೇಳಿದ ವೇಳೆಗೆ ಪ್ರಾರ್ಥನೆಯಾಂದಿಗೆ ಕಾರ್ಯಕ್ರಮ ಪ್ರಾರಂಭಿಸಿ ಬಿಟ್ಟಿದ್ದೆವು. ನಮ್ಮನ್ನೇನೂ ಸೀತಾರಾಂ ದಂಪತಿಗಳು ತಪ್ಪು ತಿಳಿದುಕೊಳ್ಳಲಿಲ್ಲ; ಬದಲಾಗಿ ಪ್ರಶಂಸಿದರು!)

ಇವತ್ತಂತೂ 'ಸ್ವಲ್ಪ ಖಾಸಗಿಯಾಗಿ ಮಾತನಾಡಿ ಹೋಗೋಣ’ -ಎಂಬ ಬಯಕೆಯ ಇದ್ದವರಂತೂ ಮೊದಮೊದಲೇ ಬಂದು ಹಾಜರಿದ್ದರು. ಇನ್ನೊಂದು ಕಾರ್ಯಕ್ರಮಕ್ಕೆ ಹೋಗಬೇಕಿದ್ದವರೂ ಸಹ ಹಾಗೇನೇ ಮಾಡಿದ್ದರು. ನಾಗತಿಹಳ್ಳಿ ಚಂದ್ರು ನಾಲ್ಕೂವರೆಯವೇಳೆಗೆ ಬಂದರು. ಬಂದವರೊಂದಿಗೆ ನಮ್ಮೊಂದಿಗೆ ಹರಟೆ ಹೊಡೆಯಲಾರಂಭಿಸಿದರು.

ಐದು ಗಂಟೆಯ ವೇಳೆಗೆ ಸಂಜೆಯ ತಿಂಡಿ-ತೀರ್ಥ ಉಪಾಹಾರವನ್ನು ಹೊತ್ತ ಐದಾರು ಮಂದಿ ಭಂಟರು ಧಡಬಡನೆ ವ್ಯಾನ್‌ನಿಂದ ಬಂದಿಳಿದರು. ಕೇಸರೀ ಬಾತ್‌, ಬೋಂಡಾದ ವಾಸನೆಗಳು ಕಾಫಿ-ಟೀ ವಾಸನೆಯ ಜೊತೆಗೆ ಸೇರಿ ಮನೆಯೆಲ್ಲಾ ಹರಡಿ, ಮೂಗಿಗೆ ಘಮ್ಮೆಂದು ಹೊಡೆಯಲಾರಂಭಿಸಿದವು. ಅಡಿಗೆಯ ಯದುನಾಥ್‌ ಅವರು ಯಾವಾಗಲೂ ಹೀಗೆಯೇ- ಒಳ್ಳೆಯ ಜನ, ಮಾರಾಯರೇ. ಹೇಳಿದ ವೇಳೆಗೆ ಸರಿಯಾಗಿ ಊಟ-ತಿಂಡಿಗಳನ್ನು ಜೊತೆಗೆ ಅದಕ್ಕೆ ಬೇಕಾದ ನೀರು ಎಲೆ ತಟ್ಟೆ ಲೋಟಾ ಚಮಚ ಕರವಸ್ತ್ರ ಇತ್ಯಾದಿಗಳನ್ನು ಠಾಕೋ ಠೀಕಾಗಿ ಕಳಿಸಿಬಿಡುತ್ತಾರೆ, ಕೆಲವೊಮ್ಮೆ ತಾವೇ ಬಂದು ಬಡಿಸುವುದೂ ಉಂಟು. ಅಡಿಗೆ ಆಗತಾನೆ ಮಾಡಿದ್ದೂ, ರುಚಿರುಚಿಯಾಗಿಯೂ ಇರುತ್ತೆ. ಮಂಡೆ ಬಿಸಿಮಾಡುವುದು ಖಂಡಿತಾ ಇಲ್ಲ ; ನಿರಾಳವಾಗಿ ಉಸಿರಾಡುತ್ತಾ ನಾವು ಕಾರ್ಯಕ್ರಮ ನಡೆಸಬಹುದು. ನಾವು ಹಾಗೇ ಮಾಡಿದ್ದು.

ಸರಿಯಾಗಿ ಐದೂವರೆಗೆ ಪ್ರಖ್ಯಾತ ರಂಗಕರ್ಮಿ ಸಿ. ಜಿ. ಕೃಷ್ಣಸ್ವಾಮಿಯವರನ್ನು ವೇದಿಕೆಗೆ ಕರೆದೆ; ತಾವು ಅಧ್ಯಕ್ಷರಾಗಿದ್ದು, ಈ ಸಂಜೆಯ ಅನೌಪಚಾರಿಕ ಸಂವಾದ-ಸಭೆಯನ್ನು 'ತಮಗೆ ಸರಿ ತೋಚಿದ ರೀತಿಯಲ್ಲಿ’ ನಡೆಸಿಕೊಡಬೇಕೆಂದು ಕೇಳಿಕೊಂಡೆ. ಸಂಜೆಯ ಕೇಂದ್ರಬಿಂದುವಾಗಿದ್ದ ಮಾನ್ಯ ನಾಗತಿಹಳ್ಳಿ ಚಂದ್ರಶೇಖರರನ್ನು ವೇದಿಕೆಗೆ ಕರೆದು, ಅವರನ್ನೂ ಬಂದಿದ್ದ ಎಲ್ಲರನ್ನೂ ಸ್ವಾಗತಿಸಿದೆ.

***

ಭಾಗವಹಿಸಲು ಬಂದಿದ್ದ ಆಹ್ವಾನಿತರೆಲ್ಲರನ್ನು, ಅಕಾರಾದಿಯಾಗಿ ಸಂಕ್ಷಿಪ್ತವಾಗಿ, ಸಭೆಗೆ ಪರಿಚುಸಿದೆ: ಅಲ್ಲಿ ಇದ್ದವರೆಂದರೆ, ಅನಂತಪದ್ಮನಾಭ (ನಾಗತಿಹಳ್ಳಿ ಚಂದ್ರಶೇಖರ್‌ರವರ ಅಭಿಮಾನಿ, ರಂಗಕರ್ಮಿ, ಸಾಹಿತ್ಯಪ್ರಿಯರು), ಅರವಿಂದಾ (ರಂಗನಟಿ, 'ವಂಶವೃಕ್ಷ’ನಾಟಕದಲ್ಲಿ ಲಕ್ಷ್ಮಿಯ ಪಾತ್ರವಹಿಸಿದ್ದವರು; ಸಾಹಿತ್ಯಪ್ರಿಯರು), ಪ್ರಾಧ್ಯಾಪಕ ಕೃಷ್ಣೆಗೌಡ, ಎಂ. (ಖ್ಯಾತ ಹಾಸ್ಯ ಭಾಷಣಕಾರರು, ಸಾಹಿತಿಗಳು; ಪ್ರಾಧ್ಯಾಪಕರು, ಸೈಂಟ್‌ ಫಿಲೋಮಿನಾಸ್‌ ಕಾಲೇಜ್‌), ಕೆಂಪೇಗೌಡ, ಎಂ. (ಸಾಹಿತ್ಯಪ್ರಿಯರು; ಉಪಕಾರ್ಯದರ್ಶಿಗಳು, ಜಿಲ್ಲಾ ಪಂಚಾಯತ್‌, ಮೈಸೂರು; ಈ ಬಾರಿಯ ಮೈಸೂರು ದಸರಾ ಸಾಂಸ್ಕೃತಿಕ ಪ್ರದರ್ಶನದ ಒಂದು ವಿಭಾಗದ ಮುಖ್ಯಸ್ಥರು), ಜಯಪ್ಪ ಹೊನ್ನಾಳಿ (ಎರಡು ಕವನ ಸಂಕಲನಗಳ ಕರ್ತೃ; ಹಲವು ಕವಿಗೋಷ್ಠಿಗಳಲ್ಲಿ ಇವರ ಕವನಗಳ ವಾಚನ ಮತ್ತು ಗಾಯನಗಳಿಂದ ಹೆಸರಾದವರು; ಅಧ್ಯಕ್ಷರು: ಸರ್ವಜ್ಞ ಕನ್ನಡ ಸಂಘ, ಸಂಪಾದಕರು: 'ಒಡಲಾಳ’ ಪತ್ರಿಕೆ), ಜ್ಯೋತಿ (ಸಂಗೀತ ವಿದುಷಿ, ಮೈಸೂರು ವಿಶ್ವವಿದ್ಯಾನಿಲಯದಲ್ಲಿ ಪಿಹೆಚ್‌ಡಿ ವಿದ್ಯಾರ್ಥಿನಿ; ಹವ್ಯಾಸಿ ಕಲಾವಿದರು), ಡಾ।। ಪಾರ್ಶ್ವನಾಥ್‌, ಹೆಚ್‌. ಎ. (ವೈದ್ಯರು, ನಾಟಕಶಾಸ್ತ್ರದಲ್ಲಿ ಡಿಪ್ಲೊಮಾ ಪಡೆದವರು, ರಂಗಕರ್ಮಿ, ನಟ ನಿರ್ದೇಶಕರು, ವಿಮರ್ಶಕರು, ಪತ್ರಿಕಾ ವರದಿಗಾರರು, ಸಂಶೋಧಕರು), ಪುಷ್ಪಾ ಸುಬ್ರಹ್ಮಣ್ಯ (ಸಂಗೀತವಿದುಷಿ ಮತ್ತು ಸಂಗೀತ ಶಿಕ್ಷಕಿ; ಸಾಹಿತ್ಯ-ನಾಟಕಪ್ರಿಯರು; ನಾಗತಿಹಳ್ಳಿಯವರ ಪುಸ್ತಕಗಳ ಅಭಿಮಾನಿ), ಪುಷ್ಪಲತಾ ಡಿ. ಎನ್‌. (ಸಾಹಿತ್ಯಪ್ರಿಯರು; ನಾಗತಿಹಳ್ಳಿಯವರ ಕಿರುತೆರೆಯ ಧಾರಾವಾಹಿಗಳ ಅಭಿಮಾನಿ ಮತ್ತು ನಿತ್ಯಪ್ರೇಕ್ಷಕರು), ಮಲ್ಲಿಕಾರ್ಜುನ, ಎಂ. ಇ. (ಉದಯೋನ್ಮುಖ ಬರಹಗಾರ, ವಿಮರ್ಶಕರು; ವಿವಿಧ ಪತ್ರಿಕೆಗಳಲ್ಲಿ ಇವರ ಲೇಖನಗಳು ಪ್ರಕಟಿತವಾಗಿವೆ), ಮುಕ್ತಾ, ಸಿ. ಎನ್‌. (ಮೈಸೂರಿನ ಖ್ಯಾತ ಕಾದಂಬರಿಕಾರರು; ಹಲವು ನಿಯತಕಾಲಿಕಗಳಲ್ಲಿ ಇವರ ಕಾದಂಬರಿಗಳು ಧಾರಾವಾಹಿಯಾಗಿ ಪ್ರವಹಿಸುತ್ತಿವೆ, ಇವರ ಕೆಲವು ಕತೆಗಳು ಕಿರುತೆರೆಯನ್ನು ಕಂಡಿವೆ), ಮೋಹನ್‌, ಕೆ. ಆರ್‌. ('ಸ್ಟಾರ್‌ ಆಫ್‌ ಮೈಸೂರು’ ಮುಂತಾದ ಪತ್ರಿಕೆಗಳಿಗೆ ಬರೆಯುವವರು; 'ದೆಹಲಿ ಕನ್ನಡ ಸಂಘ’ ಮುಂತಾದವುಗಳಲ್ಲಿ ಸಕ್ರಿಯವಾಗಿ ಭಾಗವಹಿಸಿದ್ದವರು, ರಂಗಣ್ಣ ಎಂ. ಆರ್‌. (ಹಲವಾರು ಕವನಸಂಕಲನಗಳ ಮತ್ತು ಪ್ರಬಂಧಸಂಕಲನಗಳ ಕರ್ತೃ; ಸಮರ್ಥ ಸಂಘಟಕರು; ಮುಖ್ಯಸ್ಥರು: ಹೊಯ್ಸಳ ಕನ್ನಡ ಸಂಘ; ಸಂಪಾದಕರು: 'ಸವಿಗನ್ನಡ’ ಪತ್ರಿಕೆ), ರವೀಂದ್ರ ಗೋರೆ (ರಂಗನಟರು; ಪ್ರಜಾವಾಣಿಯಲ್ಲಿ ಮೈಸೂರು ಪ್ರಸಾರ ವಿಭಾಗದ ಮುಖ್ಯಸ್ಥರು), ರಾಜಶೇಖರ್‌ ಕದಂಬ (ನಟ, ನಿರ್ದೇಶಕರು, ಸಾಹಿತಿಗಳು; 'ಕದಂಬ’ ರಂಗವೇದಿಕೆ ಮುಖ್ಯಸ್ಥರು), ರಾಮಣ್ಣ, ಯು. ಎಸ್‌. (ರಂಗಕರ್ಮಿ; ಜಾನಪದದಲ್ಲಿ ವಿಶೇಷ ಅಧ್ಯಯನ ನಡೆಸುತ್ತಿರುವವರು, ಮೈಸೂರು ವಿಶ್ವವಿದ್ಯಾನಿಲಯ), ಡಾ। ರಾಮನಾಥ್‌, ಹೆಚ್‌. ಕೆ. (ರಂಗನಟ, ನಿರ್ದೇಶಕ, 'ಕನ್ನಡ ರಂಗಭೂಮಿಯ ವಿಕಾಸ’ ಪ್ರಬಂಧಕ್ಕೆ ಡಾಕ್ಟರೇಟ್‌ ಪಡೆದವರು), ರಾಮಾನುಜಮ್‌ (ಮುಖ್ಯಸ್ಥರು, ಕರ್ನಾಟಕ ರಾಜ್ಯದ ಭಾರತೀಯ ವಿದ್ಯಾಭವನಗಳು; ಮಾಜಿ ಅಧ್ಯಕ್ಷರು ಹೆಚ್‌. ಎಂ. ಟಿ. ಕಾರ್ಖಾನೆಗಳು; 'ಕೊರವಂಜಿ’ಯಲ್ಲಿ 'ಕೊಳ್ಳೇಗಾಲದ್ರಾಮಾನುಜ’ ಹೆಸರಿನಲ್ಲಿ ಬರೆಯುತ್ತಿದ್ದ ಲೇಖಕರು), ವಿಜಯಲಕ್ಷ್ಮಿ ಅನಂತಮೂರ್ತಿ (ದಿವಂಗತ ಪ್ರಾ। ಸಿಂಧುವಳ್ಳಿ ಅನಂತಮೂರ್ತಿ ಅವರ ಪತ್ನಿ; ಸುರುಚಿ ಕಲಾತಂಡದ ವ್ಯವಸ್ಥಾಪಕರು), ಡಾ। ವೆಂಕಟೇಶ್‌ ಮೂರ್ತಿ (ರಂಗಕರ್ಮಿ, 'ವಂಶವೃಕ್ಷ’ದಲ್ಲಿ ಕಾತ್ಯಾಯಿನಿಯ ಗಂಡ ರಾಜಾರಾವ್‌ ಆಗಿದ್ದವರು; ಬರಹಗಾರರು), ವೇಣುಗೋಪಾಲ್‌, ಡಿ ಕೆ. (ಸಮಾಜಸೇವಕರು; ನಾಗತಿಹಳ್ಳಿಯವರ ಸಮುದಾಯಸೇವೆಯನ್ನು ಮೆಚ್ಚಿಕೊಂಡವರು; ಮಾಲೀಕರು ಶಾಶ್ವತಿ ಪ್ಲಾಸ್ಟಿಕ್ಸ್‌, ಮೈಸೂರು) ಶಕುಂತಲಾ ವೇಣುಗೋಪಾಲ್‌ (ಸಾಹಿತ್ಯಪ್ರಿಯರು; ಸಮಾಜಸೇವಕರು, ನಾಗತಿಹಳ್ಳಿಯವರ ಚಲನಚಿತ್ರಗಳನ್ನು ಮೆಚ್ಚಿಕೊಂಡವರು), ಪ್ರಾ। ಶ್ರೀಧರಮೂರ್ತಿ, ಸಿ. ವಿ., (ರಂಗನಟ ನಿರ್ದೇಶಕರು, ಮುಖ್ಯಸ್ಥರು, ಕನ್ನಡ ವಿಭಾಗ, ಸೈಂಟ್‌ ಫಿಲೋಮಿನಾಸ್‌ ಕಾಲೇಜ್‌), ಸಂದೀಪ್‌ ಶೆಣೈ (ವಕೀಲರು, ಬರಹಗಾರರು, ಸಂಪಾದಕರು: 'ಅವರ್‌ಕರ್ನಾಟಕ ಡಾಟ್‌ಕಾಂ’ ಕನ್ನಡ-ಇಂಗ್ಲಿಷ್‌ ಅಂತರ್ಜಾಲ ದಿನಪತ್ರಿಕೆ), ಸುಬ್ರಹ್ಮಣ್ಯ, ಎಸ್‌. (ಸಾಹಿತ್ಯ-ನಾಟಕಪ್ರಿಯರು; ನಾಗತಿಹಳ್ಳಿಯವರ ಚಲನಚಿತ್ರ ಕಿರುತೆರೆಯ ಚಿತ್ರಗಳ ಅಭಿಮಾನಿ) ಮತ್ತು ಹನುಮಂತರಾಯಪ್ಪ (ನಾಗತಿಹಳ್ಳಿಯವರ ಅಭಿಮಾನಿ, ಇಂಗ್ಲಿಷ್‌ ಸಾಹಿತ್ಯವನ್ನು ಆಳವಾಗಿ ಅಭ್ಯಾಸ ಮಾಡಿರುವ ಪೋಲಿಸ್‌ ಇನ್ಸ್‌ಪೆಕ್ಟರ್‌) ಮತ್ತು ಇವರ ಮನೆಯವರು, ಇನ್ನುಳಿದ ನಾಗತಿಹಳ್ಳಿ ಚಂದ್ರು ಅವರ ಅಭಿಮಾನಿಗಳು.

ಇನ್ನೂ ಕೆಲವು ರಂಗಕರ್ಮಿಗಳು ಬರಬೇಕಿತ್ತು; ಕಾರ್ಯಭಾರದಿಂದ ಬರಲಾಗಲಿಲ್ಲ, ಹಾಗೆಂದು ತಿಳಿಸಿದ್ದರು, ಕೂಡ. ಅವರುಗಳು ಬಂದಿದ್ದರೆ, ಸಭೆ ಇನ್ನಷ್ಟು ಕಳೆಗಟ್ಟುತ್ತಿತ್ತು ಎಂಬ ಮಾತು ಬೇರೆ. ಬಂದಿದ್ದರೆಲ್ಲರ ಪರಿಚಯವನ್ನು ಈಗ ಓದುಗರಿಗೂ ಮಾಡಿಕೊಡುತ್ತಿರುವ ಉದ್ದೇಶವೆಂದರೆ- ಬಹುತೇಕ ಈ ಎಲ್ಲ ಚಿಂತನಶೀಲ ಬರಹಗಾರರೂ ಸಂವಾದದಲ್ಲಿ ಸಕ್ರಿಯವಾಗಿ ಪಾಲುಗೊಂಡವರು; ಸಂಜೆ ಏಳೂಕಾಲು ಗಂಟೆಯವರೆಗೂ ನಡೆದ ಸಭೆಯ ಕಾವನ್ನು ಆಗಾಗ್ಗೆ ಹೆಚ್ಚಿಸಿ, ಚಕಮಕಿಯ ಕಿಡಿಗಳನ್ನು ನಗೆ ಚಟಾಕಿಗಳನ್ನೂ ಹಾರಿಸಿ, ವಾತಾವರಣವನ್ನು ಬೆಚ್ಚಗೆ ಇರಿಸಿದ್ದವರು. (ಮಧ್ಯೆ ಒಮ್ಮೆ, ಸಭೆಯ ವಾತಾವರಣದಲ್ಲಿ ಸ್ವಲ್ಪ ತಂಪು ಮೂಡಲೆಂದು, ವಿದುಷಿ ಜ್ಯೋತಿಯವರ ಒಂದು ಸುಶ್ರಾವ್ಯ ಗಾಯನವೂ ನಡೆಯಿತು.)

***

ಪ್ರಶ್ನೆಗಳು ಚೂಪಾಗಿ ಹಾರಿದವು; ಉತ್ತರಗಳೂ ಹರಿತವಾಗಿ ಹಾರಿ, ಎರಡೂ ಕಡೆ ಕೊಯ್ಯುವಂತಿದ್ದವು. ಆಗ ಬಂದಿದ್ದವರು ಕೇಳಿದ್ದನ್ನ ಬರೆದಿಟ್ಟುಕೊಂಡದ್ದರಲ್ಲಿ ಕೆಲವನ್ನು ಮಾದರಿಗಾಗಿ ಇಲ್ಲಿ ನೆನಪಿಸಿಕೊಳ್ಳುತ್ತಿದ್ದೇನೆ:

  • ನೀವು ಸಾಹಿತ್ಯಕ್ಷೇತ್ರ, ನಾಟಕ, ಬೆಳ್ಳಿತೆರೆ, ದೂರದರ್ಶನದ ಕಿರುತೆರೆ - ಈ ಎಲ್ಲಾ ಕ್ಷೇತ್ರಗಳಲ್ಲಿ ಮಿಂಚಿದ್ದೀರಿ; ಇವುಗಳಲ್ಲಿ ನಿಮಗೆ ಅತ್ಯಂತ ಪ್ರಿಯವಾದದ್ದು?
  • ಸಾಹಿತ್ಯಕ್ಷೇತ್ರದಲ್ಲಿ ನೀವು ಗಳಿಸಿರುವ ಪರಿಣತಿಯನ್ನು ಎಷ್ಟರಮಟ್ಟಿಗೆ ನಿಮ್ಮ ನಿರ್ದೇಶನದ ಸಿನೆಮಾ, ಟಿ ವಿ ಗಳಲ್ಲಿ ಬಳಸಿಕೊಳ್ಳಲು, ಅಳವಡಿಸಿಕೊಳ್ಳಲು, ದುಡಿಸಿಕೊಳ್ಳಲು ಸಾಧ್ಯವಾಗಿದೆ?
  • ಪರಭಾಷಾ ಚಿತ್ರಗಳನ್ನು ಬಹಿಷ್ಕರಿಸುವ ನಮ್ಮ ಜನ ಪರಭಾಷಾ ನಟನಟಿಯರನ್ನೇ ಮೆಚ್ಚಿ ಕೊಂಡಾಡುವುದು ನಿಮ್ಮ ಅಭಿಪ್ರಾಯದಲ್ಲಿ, ಏಕೆ?
  • ನಿಮ್ಮಂಥ ಸೃಜನಶೀಲ ಬರಹಗಾರರು ಈಗೀಗ ಕಿರುತೆರೆಯ ಚಿತ್ರಗಳಿಗೇ, ಅದರ ಧಾರಾವಾಹಿಗಳಿಗೇ ಅಂಟಿಕೊಂಡಿರುವುದು ಏಕೆ?
  • ನಿಮ್ಮ ದೃಷ್ಟಿಯಲ್ಲಿ ಒಂದು ಅತ್ಯುತ್ತಮ ಚಲನ ಚಿತ್ರ ಎಂದರೆ ಹೇಗಿದ್ದಿರಬೇಕು?
  • ವಿದೇಶಗಳಲ್ಲಿ ನೀವು ಚಿತ್ರೀಕರಣ ಮಾಡಿ ನುರಿತಿದ್ದೀರಲ್ಲ ; ಅಲ್ಲಿ ಚಿತ್ರೀಕರಣ ಮಾಡುವುದಕ್ಕೂ ಇಲ್ಲಿ ಚಿತ್ರೀಕರಣ ಮಾಡುವುದಕ್ಕೂ ವಿಶೇಷವಾದ ಅನುಕೂಲ-ಅನಾನುಕೂಲ ವಿಚಾರಗಳೇನು?
  • ಹಿಂದೆಲ್ಲಾ ಸಮೃದ್ಧವಾಗಿ ಬರೆದು ಪ್ರತಿ ವರ್ಷ ಒಂದಾದರೂ ಪುಸ್ತಕ ಪ್ರಕಟಿಸುತ್ತಿದ್ದವರು ನೀವು; ನಿಮ್ಮ ಬರವಣಿಗೆ ಮತ್ತು ಪುಸ್ತಕ ಪ್ರಕಾಶನ ಕುಂಠಿತವಾಗಿ ಹೋಗಿದೆಯೇ? ಬರೀ 'ಹಾಯ್‌ ಬೆಂಗಳೂರ್‌’ನ ಕಾಲಂಗೇ ಸೀಮಿತವಾಗಿ ಹೋಗಿಬಿಟ್ಟಿತಾ? ಈ ಧಾರಾವಾಹಿಗಳ ಮಧ್ಯೆ ನೀವು ಕಳೆದು ಹೊಗಿದ್ದೀರಾ?
  • 'ಎದೆ ತುಂಬಿ ಹಾಡಿದೆನು’ ಹಾಡುತ್ತಿದ್ದಾಗ ಕೇಳುಗರು ಜನ ಕುಡಿಯುತ್ತಾ ಮಾತನಾಡುತ್ತಾ ಅಲೆದಾಡುತ್ತಾ ಇದ್ದರೆಂದು ತೋರಿಸಿದ್ದೀರಲ್ಲ ; ಹೀಗೆ ಮಾಡಿದ್ದು ಇದನ್ನು ಬರೆದ ಕವಿಗೆ ಒಂದು ರೀತಿಯಲ್ಲಿ ಅವಮಾನಕರವಾಗಿ ತೋರಲಿಲ್ಲವೇ?
  • ನೀವು ರಾಜಕೀಯಕ್ಕೆ ಇಳಿಯುವ ಪ್ರಯತ್ನ ಮಾಡಲಿಲ್ಲವೇ? ಬೇರೆಯವರು ಯಾರಾದರೂ ಇಷ್ಟು ಜನಪ್ರಿಯತೆ ಇರುವ ನಿಮ್ಮನ್ನು ರಾಜಕೀಯರಂಗಕ್ಕೆ ಬಳಸಿಕೊಳ್ಳಲು ಪ್ರಯತ್ನಿಸಲಿಲ್ಲವೇ?
  • ಕಿರುತೆರೆಯಲ್ಲಿ ಸಾವಿರಕ್ಕೂ ಹೆಚ್ಚು ಪ್ರಸಂಗಗಳನ್ನು ತೋರಿಸಿರುವ ನಿಮ್ಮ ಮೆಗಾ ಧಾರಾವಾಹಿ 'ವಠಾರ’ದಲ್ಲಿ ಕೌಟುಂಬಿಕ ಹಿನ್ನೆಲೆಯ ಚಿತ್ರೀಕರಣ ಸೊಗಸಾಗಿ ಮಾಡಿದ್ದೀರಿ; ಏನದಕ್ಕೆ ಪ್ರೇರಣೆ?
  • ನಿಮ್ಮ 'ಬಿಳ್ಳಿಚುಕ್ಕಿ’ಯಿದೆಯಲ್ಲ, ಕಲಾವಿದರ ಬದುಕು ಚಿತ್ರಿಸುವ ಪ್ರಯತ್ನದ ಈ ಧಾರಾವಾಹಿಗೆ ಮಿನುಗು ತಾರೆ ಕಲ್ಪನಾ ಸ್ಫೂರ್ತಿಯೇನು? ಅಥವಾ ದೃಶ್ಯ ಮಾಧ್ಯಮದಲ್ಲಿ ಸ್ತ್ರೀ ಶೋಷಣೆಯನ್ನು ಮನಗಾಣಿಸುವ ಪ್ರಯತ್ನವೇನಾದರೂ ನಡೆದಿದೆಯಾ?
  • ದೃಶ್ಯಮಾಧ್ಯಮದಲ್ಲಿ ನಿರ್ದೇಶಕನಾಗಿ ನಿಮ್ಮ ಬದ್ಧತೆಯೇನು?
  • ಕಿರುತೆರೆಯಲ್ಲಿ ಮಕ್ಕಳ ಧಾರಾವಾಹಿಯ ಕೊರತೆ ಎದ್ದುಕಾಣುತ್ತದೆ; ಯಾಕೆ ನೀವು ಇತ್ತ ಗಮನ ಹರಿಸಿ, ನೀವೇ ಮಕ್ಕಳ ಧಾರಾವಾಹಿಯಾಂದನ್ನು ಕಿರುತೆರೆಯಲ್ಲಿ ನಿರ್ದೇಶಿಸಬಾರದು?

***

ಚಂದ್ರೂಗೆ ಮಾತನಾಡುವುದನ್ನು ಹೇಳಿಕೊಡಬೇಕೆ? ಕನ್ನಡ ಎಂ.ಎ. ಪರೀಕ್ಷೆಯಲ್ಲಿ ಅತ್ಯುತ್ತಮ ಪ್ರತಿಭೆಗೆ ಎಂಟು ಚಿನ್ನದ ಪದಕ ಬಂದಿತ್ತೆಂದು ಕೇಳಿ ಬಲ್ಲೆ . ಹಲವು ವರ್ಷಗಳ ಕಾಲ ಮೇಷ್ಟರಾಗಿದ್ದವರು; ನಿರ್ದೇಶಕರಾಗಿ ಮಾತನಾಡುವುದನ್ನು ಹೇಳಿಕೊಡುವವರು. ಎಲ್ಲಿ ಏನು ಹೇಳಬೇಕು, ಏನು ಆಡಬಾರದು; ಏನು ಬರೆಯಬಾರದು ಎಂದೂ ಚೆನ್ನಾಗಿ ಬಲ್ಲವರು. ನೂರಾರು ಸಭೆ ಸಮಾರಂಭಗಳಲ್ಲಿ ನಿರರ್ಗಳವಾಗಿ ವಾಗ್ಝರಿ ಹರಿಸಿ, ಮಾತಿನ ಮೋಡಿ ಕಾಣಿಸಿದವರು. ಇವತ್ತೂ ಹಾಗೇ ಆಯಿತು. ಹೊತ್ತು ಕಳೆದದ್ದೇ ಗೊತ್ತಾಗಲಿಲ್ಲ. ಮೇಜಿನ ಮೇಲೆ ನಾವು ಪ್ರದರ್ಶನಕ್ಕಿರಿಸಿದ್ದ, ಚಂದ್ರು ಬರೆದ 'ಅಭಿವ್ಯಕ್ತಿ’ ಪ್ರಕಾಶನದ ಎಲ್ಲಾ ಪುಸ್ತಕಗಳನ್ನೂ ಜನ ನೋಡಿದರು; ಪ್ರಶ್ನೆ ಕೇಳಿದರು. ಪ್ರಶ್ನೋತ್ತರಗಳ ನಡುವೆಯೇ ಸಭಿಕರೆಲ್ಲರಿಗೂ ಕುಳಿತಲ್ಲಿಯೇ ಮೊದಲು ಹೇಳಿದೆನಲ್ಲ , ಆ ತಿಂಡಿ-ಬಾಳೆಹಣ್ಣು-ಕಾಫಿ ಸರಬರಾಜು ಆಯಿತು. ತಟ್ಟೆಗಳು ಖಾಲಿಯಾದವು.

ಸಭೆ ಮುಗಿದು ಮನೆಗೆ ಹಿಂತಿರುಗುವಾಗ, ಬಂದ ಪ್ರತಿಯಾಬ್ಬರಿಗೂ ಸುಮಾರು ಇನ್ನೂರು ಪುಟಗಳ ಪ್ರಬಂಧ ಸಂಕಲನದ ಕನ್ನಡ ಪುಸ್ತಕವೊಂದನ್ನು ಉಡುಗೊರೆಯಿತ್ತೆವು; ಅರಿಸಿನಕುಂಕುಮದೊಂದಿಗೆ, ಮಲ್ಲಿಗೆಯ ಹೂವಿನ ಹಾರದ ತುಂಡೊಂದನ್ನು ಮುಡಿಯಲು ಮಹಿಳೆಯರಿಗೆಲ್ಲ ಕೊಟ್ಟು ನಾಗಲಕ್ಷಿಅವರನ್ನು ಬೀಳ್ಕೊಟ್ಟಳು.

'ಹೌದು, ಸಭಿಕರು ಕೇಳಿದ ಪ್ರಶ್ನೆಗಳನ್ನು ಮಾತ್ರ ಬರೆದಿದ್ದೀರಿ; ಚಂದ್ರು ಪ್ರತಿಕ್ರಿಯಿಸಿದ ಉತ್ತರಗಳ ಪ್ರಸ್ತಾಪವೇ ಇಲ್ಲವಲ್ಲ’- ಎಂದು ನೀವು ಕೇಳುವಿರಷ್ಟೆ . 'ಚಂದ್ರು ಅವರು ಇವಕ್ಕೂ ಇನ್ನುಳಿದವಕ್ಕೂ ಅಂದು ಸಂಜೆ ಕೊಟ್ಟ ಉತ್ತರಗಳನ್ನು ಅವರೇ ಒಂದು ಲೇಖನದಲ್ಲಿ ಬರೆದು ಈ ಜನಪ್ರಿಯ ಅಂತರ್ಜಾಲಪತ್ರಿಕೆಗೆ ಕಳಿಸಲಿ’- ಎಂದು ಕೇಳಿಕೊಳ್ಳುತ್ತಾ, ನಾಗತಿಹಳ್ಳಿ ಚಂದ್ರಶೇಖರರ ಸ್ವಾರಸ್ಯಕರ ಮಾತುಗಳಲ್ಲೇ ಅವರ ಅಭಿಪ್ರಾಯಗಳನ್ನು ಓದುಗರು ತಿಳಿದುಕೊಳ್ಳುವಂತಾಗಲಿ, ಎಂದು ಹಾರೈಸುತ್ತಾ ನಾನು ವಿರಮಿಸುತ್ತೇನೆ.

English summary
An evening with Nagathihalli Chandrashekhar. Report by Shikaripura Harihareshwara, Mysore
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X