• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಮುತ್ತಿನಂಥ ಮಾತುಗಳು

By ಶಿಕಾರಿಪುರ ಹರಿಹರೇಶ್ವರ
|

ಆಡಿದ ಮಾತು ಬಹುಕಾಲ ನೆನಪಿನಲ್ಲಿ ಉಳಿಯಬೇಕು, ಅಂದರೆ ಅದನ್ನು ಚೆನ್ನಾಗಿ ಹೇಳಬೇಕು. ‘ಚೆನ್ನಾಗಿ’ ಎನ್ನುವುದು ‘ದೇವರು’ ಅಂದ ಹಾಗೆ, ವಿವರಿಸುವುದು ಬಲು ಕಷ್ಟ, ನೂರೆಂಟು ಅರ್ಥ ಬರುತ್ತದೆ. ಹೇಳಬೇಕಾದುದನ್ನ ಹೆಚ್ಚು ವಿವರಿಸುವ ಗೋಜಿಗೆ ಹೋಗದೆ, ಒಂದು ಹೋಲಿಕೆಯನ್ನು ಕೊಟ್ಟು, ಆ ಉಪಮೆಯಲ್ಲಿನ ದೀಪಕ ಅಥವಾ ರೂಪಕಾಂಶದಿಂದಲೇ ಎಲ್ಲಾ ಗುಣ ಲಕ್ಷಣಗಳನ್ನೂ ಸಾಧಿಸಬಹುದು- ಅನ್ನುವುದಾದರೆ, ಇದನ್ನೇ ‘ಮಾತು ಮುತ್ತಿನಂತಿರಬೇಕು’- ಎನ್ನುತ್ತಾರೆ ಬಲ್ಲವರು. ‘ಮುಕ್ತಾ’ ಎಂದರೆ ಮುತ್ತು, ‘ಮುಕ್ತಕ’ ಅಂದರೂ ಮುತ್ತು.

ವಚನಕಾರ ಬಸವಣ್ಣನವರು ಒಂದು ಕಡೆ ಹೇಳುತ್ತಾರೆ:

‘‘ನುಡಿದರೆ ಮುತ್ತಿನ ಹಾರದಂತಿರಬೇಕು / ನುಡಿದರೆ ಮಾಣಿಕ್ಯದ ದೀಪ್ತಿಯಂತಿರಬೇಕು /

ನುಡಿದರೆ ಸ್ಫಟಿಕದ ಶಲಾಕೆಯಂತಿರಬೇಕು / ನುಡಿದರೆ ಲಿಂಗ ಮೆಚ್ಚಿ ಅಹುದೆನಬೇಕು /

ನುಡಿಯಾಳಗಾಗಿ ನಡೆಯದಿದ್ದರೆ / ಕೂಡಲ ಸಂಗಮದೇವನೆಂತೊಲಿವನಯ್ಯ?’’

ಇಲ್ಲಿ ಮಾತೇ ಮುತ್ತು ಅನ್ನುವುದು ಮುಖ್ಯ. ಇಂಥ ಮಾತಿನಲ್ಲಿ ಆನೆಯನ್ನ ಸಾಸಿವೆಯಲ್ಲಿ ಹುದುಗಿಸುವ ಪ್ರಯತ್ನವಿದೆ. ಕಡಲನ್ನ ಮಡಕೆಯಲ್ಲಿ ಅಡಗಿಸಿಡುವ ಹಂಬಲವಿದೆ. ಎಲ್ಲಾ ದೇಶಗಳ, ಜನಾಂಗಗಳ, ಭಾಷೆಗಳ ಆಡುನುಡಿಯಲ್ಲಿ ತಲತಲಾಂತರದಿಂದ ನಡೆದುಬಂದಿರುವ ಸೊಗಸು ಇದು. ವಿಸ್ತಾರವಾಗಿ ಹೇಳಬಹುದಾದುದನ್ನು ಸಂಗ್ರಹ್ಯವಾಗಿ ಹೇಳುವ ಸೂತ್ರ ರೂಪ ಏನಿದೆ, ಅದು ಬಗೆಬಗೆಯ ಬಣ್ಣಗಳಲ್ಲಿ ಎಲ್ಲಾ ಭಾಷೆಗಳಲ್ಲೂ ನಮಗೆ ಗೋಚರಿಸುತ್ತದೆ. ಕೆಲವು ಉದಾಹರಣೆಗಳನ್ನು ತೆಗೆದುಕೊಳ್ಳಿ ಸೂತ್ರಗಳು, ಗಾಥಾಗಳು, ಕುರುಳ್‌ಗಳು, ಶಾಸನಗಳ ದ್ವಿಪದಿ, ತ್ರಿಪದಿಗಳು, ದೋಹೆಗಳು, ವಾಕಗಳು, ವಚನಗಳು, ಗಾದೆಗಳು, ಒಗಟುಗಳು, ಅಷ್ಟೇ ಏಕೆ, ದೇವರನಾಮಗಳ ಪಲ್ಲವಿ ಅನುಪಲ್ಲವಿಗಳೂ ಸಹ ಒಂದುಬಗೆಯ ಈ ಮುಕ್ತಕದ ಬಾನಿನಲ್ಲಿ ಮಿನುಮಿನುಗುವ ಚುಕ್ಕೆಗಳೇ.

ಕನ್ನಡದಲ್ಲಿ ಸರ್ವಜ್ಞ, ತೆಲುಗಿನಲ್ಲಿ ವೇಮನ, ತಮಿಳಿನಲ್ಲಿ ತಿರುವಳ್ಳುವರ್‌, ಹಿಂದಿಯಲ್ಲಿ ಕಬೀರ್‌, ಉರ್ದುವಿನಲ್ಲಿ ರಹೀಮ್‌, ಗುಜರಾತಿಯಲ್ಲಿ ಮೀರಾ, ಕಾಶ್ಮೀರಿಯಲ್ಲಿ ಲಲ್ಲೇಶ್ವರಿ, ಪಂಜಾಬಿಯಲ್ಲಿ ನಾನಕ್‌, ಬಂಗಾಳಿಯಲ್ಲಿ ಬಾವುಲ್‌ಗಳು, ಮರಾಠಿಯಲ್ಲಿ ತುಕಾರಾಂ, ಮಲೆಯಾಳಂನಲ್ಲಿ ಎಳುತ್ತಚ್ಚನ್‌- ಹೀಗೆ ಭಾರತದ ಎಲ್ಲಾ ಭಾಷೆಗಳಲ್ಲೂ ಮುಕ್ತಕ ಸಾಹಿತ್ಯದ ಮೆರವಣಿಗೆ ನಡೆದಿದೆ.

ಮುತ್ತು ಸವಿ. ಅದರ ನೆನಪೂ ಸವಿಯೇ. ಆದರೆ ಇಲ್ಲಿ, ಹೇಳುವ ಮುತ್ತಿನಂತಹ ಸವಿ ಮಾತು ಬಹುಕಾಲ ನೆನಪಿನಲ್ಲಿ ಉಳಿಯ ಬೇಕು ಎಂದಾಗ ಅದರ ಆಶಯ ಸಾರ್ವಕಾಲಿಕವಾಗಿರಬೇಕು, ಸಾರ್ವಜನಿಕವಾಗಿರಬೇಕು, ನಿತ್ಯಸತ್ಯವಾಗಿರಬೇಕು. ಒಂದು ಉದಾಹರಣೆ: ಆಗಿನ್ನೂ ವಿದ್ಯಾಭ್ಯಾಸ ಮುಗಿಸಿ ಹೊರ ತೆರಳುತ್ತಿರುವ ಶಿಷ್ಯನಿಗೆ, ತೈತ್ತಿರೀಯ ಉಪನಿಷತ್ತಿನ ಋಷಿ ‘‘ಮಾತೃದೇವೋ ಭವ, ಪಿತೃದೇವೋ ಭವ, ಆಚಾರ್ಯದೇವೋ ಭವ, ಅತಿಥಿದೇವೋ ಭವ’’ ಎಂದು ಉಪದೇಶಿಸಿದಾಗ, ಈ ಮಾತುಗಳು ಅದು ಅವರಿಗಷ್ಟಕ್ಕೇ ಸೀಮಿತವಾಗಿ ಉಳಿಯದೆ, ಎಲ್ಲರೂ ಎಲ್ಲ ಕಾಲದಲ್ಲೂ ಬಳಸಬಹುದಾದ ಮಾತುಗಳಾಗಿ ಹೋದವು. ಇದನ್ನೇ, ರಾಮಾಯಣದಲ್ಲಿ ವಾಲ್ಮೀಕಿ,

‘‘ತಂದೆ ತಾಯಿಯ ಗುರುವ ಯಾರು ಅವಮಾನಿಪರೋ / ನರಕಯಾತನೆಯನ್ನವರು ಅನುಭವಿಸೇ ತೀರುವರು!’’

(ಮಾತರಂ ಪಿತರಂ ಯೋ ಹಿ ಆಚಾರ್ಯಂ ಅವಮನ್ಯತೇ। ಸ ಪಶ್ಯತಿ ಫಲಂ ತಸ್ಯ ಪ್ರೇತರಾಜ ವಶಂ ಗತಃ।।)

-ಅಂತ ಹೇಳಿದ್ದು ಅಷ್ಟು ಪರಿಣಾಮಕಾರಿರಿುೂಗಲಿಲ್ಲ. ಅವನೇ ಈ ಬಗ್ಗೆ ಶ್ರೀರಾಮನ ಬಾಯಲ್ಲಿ ಸೀತೆಗೆ ಹೇಳಿಸಿದ‘‘ಕಂಡಿಲ್ಲವೆನ್ನುವಿಯಾ ದೇವರನು ನಾನೆಲ್ಲೂ? / ಕಣ್ಣೆದುರೇ ಇಹರಲ್ಲ ತಾಯಿ, ತಂದೆ, ಗುರು;

ಇವರ ಮಾತನು ಮೀರಿ ನಡೆವುದಾದರೂ ಏಕೆ? / ಕೈಗೆ ಎಟುಕದ ಬೇರೆ ದೇವರಾರಾಧನೆ ಬೇಕೆ?’’

(ಸ್ವಾಧೀನಂ ಸಂ-ಅತಿಕ್ರಮ್ಯ ಮಾತರಂ ಪಿತರಂ ಗುರುಮ್‌। ಅಸ್ವಾಧೀನಂ ಕಥಂ ದೈವಂ ಪ್ರಕಾರೈರ್‌ ಅಭಿರಾಧ್ಯತೇ?।। -ಬಾಲಕಾಂಡ 30:33) -ಎಂಬುದೂ ಸಹ ಈ ಮುಂದಿನ ವ್ಯಾಸಭಾರತದ ಮುಕ್ತಕಕ್ಕೆ ಹೋಲಿಸಿದಾಗ ಸ್ವಲ್ಪ ಸಪ್ಪೆಯೇ! ನೋಡಿ, ವ್ಯಾಸರು ಹೇಳುತ್ತಾರೆ:

ತಾಯಿಗಿಂತ ದೊಡ್ಡದಿಲ್ಲ, ಭೂಮಿಗಿಂತ ತೂಕ;

ತಂದೆಗಿಂತ ಇಲ್ಲ ಮೇಲೆ, ಅವನೆತ್ತರ ಮುಗಿಲಿಗೂ;

ಗಾಳಿಗಿಂತ ತುಂಬಾ ವೇಗ, ಹರಿದಾಡುವ ಮನಸು-

ಚಿಂತೆಗಿಂತ ಏನೂ ಜಾಸ್ತಿ ಬೇರೆ ಇಲ್ಲ ಯಾರಿಗೂ!

(ಮಾತಾ ಗುರುತರಾ ಭೂಮೇಃ, ಪಿತಾ ಉಚ್ಚತರಶ್ಚ ಖಾತ್‌।

ಮನಃಶೀಘ್ರತರಃ ವಾಯೋಃ, ಚಿ0ತಾ ಬಹುತರೀ ನೃಣಾಂ।।)

ಇದು ಮುಕ್ತಕ. ಬಾಯ್‌ಬಿರಿದ ಚಿಪ್ಪಿನೊಳಗೆ ಸ್ವಾತಿ ಮಳೆಹನಿಯಾಂದು ಬಿದ್ದು, ಕಾಲಾನುಕಾಲಕ್ಕೆ ಅದು ಮುತ್ತಾಗುತ್ತೆ ಎನ್ನುತ್ತಾರಲ್ಲಾ, ಅದೇ ಇದು. ‘ಹನಿಗವನ’ದಲ್ಲಿ ಇ0ಗ್ಲಿಷಿನ ‘ಹನಿ’ ಇದ್ದರೇನೆ ಸೊಗಸು.

ಸ್ವಲ್ಪ ಅಡ್ಡ ಮಾತು: ಮುತ್ತಿನ ನತ್ತು (ಮೂಗುತಿ) ನಿಮಗೆ ಗೊತ್ತು; ಮೂಗಿನ ಮೇಲೆ ಮುತ್ತನ್ನು ಇಟ್ಟುಕೊಳ್ಳುವುದನ್ನು ಕೇಳಿದ್ದೀರೇನು? ‘ಮೌಕ್ತಿಕ’ ಎಂದರೂ ಮುತ್ತೇ. ‘ನಾಸಾಗ್ರೇ ನವಮೌಕ್ತಿಕಂ’ ಎಂದು, ‘ಕಸ್ತೂರೀ ತಿಲಕವನ್ನು ಲಲಾಟಫಲಕದಲ್ಲಿ ಇಟ್ಟುಕೊಂಡ ಗೋಪಾಲಚೂಡಾಮಣಿ ಬಾಲಕೃಷ್ಣ’ನನ್ನು ಬಣ್ಣಿಸುತ್ತಾ ಶ್ರೀ ಕೃಷ್ಣಕರ್ಣಾಮೃತದಲ್ಲಿ (2:108) ಕವಿ ಲೀಲಾಶುಕ ಹಾಗೆ ಮೂಗಿನ ಮೇಲಣ ಮುತ್ತಿನ ಬಗ್ಗೆ ಹೇಳುತ್ತಾನೆ.

ಅದಿರಲಿ, ಬೃಹತ್ತಿನಿಂದ, ಮಹತ್ತಿನಿಂದ ಭಾರವಾದ ಆ ‘ಭಾರತ’ ಬರೆದ, ಅನೇಕ ಪುರಾಣಗಳ ಗ್ರಂಥ(ಶ್ಲೋಕ)ರಾಶಿಗಳ ಕರ್ತೃ ಎನಿಸಿಕೊಂಡ ಮಹರ್ಷಿ ವ್ಯಾಸರೇ ಮಹಾಭಾರತದಲ್ಲಿ ಹೇಳುವ ಇದಕ್ಕೂ ಕಿವಿಗೊಡಿ:

‘‘ಶ್ಲೋಕಾರ್ಧೇನ ಪ್ರವಕ್ಷ್ಯಾಮಿ ಯದ್‌ ಉಕ್ತಂ ಗ್ರಂಥ ಕೋಟಿಭಿಃ /

ಪರೋಪಕಾರಾಯ ಪುಣ್ಯಾಯ ಪಾಪಾಯ ಪರಪೀಡನಂ।।’’

(ಕೋಟಿ ಗ್ರಂಥಗಳಲ್ಲಿ ಹೇಳಿರುವ ಮಾತನ್ನೇ / ಒಂದರ್ಧ ಶ್ಲೋಕದಲ್ಲಿ ಹೇಳುವೆನು ಕೇಳಿ;

ಇತರರಿಗುಪಕರಿಸುವುದೇನೆ ಪುಣ್ಯ ನಿಜಕ್ಕೂನೂ / ಪರರ ನೋಯಿಸುವುದೆಲ್ಲಾ ಪಾಪವಲ್ತೆ!)

-ಎಂದು ಅವರು ಹೇಳಿದಾಗ, ಅದು ಅಂದಿನಿಂದ ಇಂದಿನವರೆಗೆ ವಿಶ್ವದ ಮೂಲೆ ಮೂಲೆಗಳಲ್ಲಿ ಅನುರಣನಗೊಳ್ಳುವ ಮುತ್ತಿನ ಮಾತಾಯಿತು. ‘ಮುಕ್ತಕ’ ಎಂದರೆ ಸಂಸ್ಕೃತದಲ್ಲಿ ‘ಕ್ಷಿಪಣಿ’ ಎಂಬ ಇನ್ನೊಂದರ್ಥವೂ ಇದೆಯಲ್ಲ, ಅದೀಗ ಸಾರ್ಥಕವಾಯಿತು.

ಅತಿ ಗಹನವಾದ ವೇದಾಂತ ವಿಚಾರಗಳಲ್ಲಿ ಪ್ರಸಿದ್ಧ ಆಚಾರ್ಯರು ಅವರು ಆಗಿದ್ದಿರಬಹುದು. ಆದರೆ ಜನಸಾಮಾನ್ಯರ ನೆನಪಲ್ಲಿ, ಬಾಯಲ್ಲಿ ಶಂಕರಾಚಾರ್ಯರು ಉಳಿದಿರುವುದು ಅವರ ಸ್ತೋತ್ರಸಾಹಿತ್ಯದ ಮುಕ್ತಕಗಳಿಂದಲೇ. ‘ಮೋಹಮುದ್ಗರ’ದ ಭಜಗೋವಿಂದಂ ಮಾಲಿಕೆಯ ಮುತ್ತಿನ ಹೂವುಗಳಿಂದಲೇ, ಒಂದು ಉದಾಹರಣೆಯನ್ನು ಕೇಳಿ-

‘‘ಬಾಲಸ್ತಾವತ್‌ ಕ್ರೀಡಾಸಕ್ತಃ, ತರುಣಸ್ತಾವತ್‌ ತರುಣೀರಕ್ತಃ /

ವೃದ್ಧಸ್ತಾವತ್‌ ಚಿಂತಾಮಗ್ನಃ, ಪರೇಬ್ರಹ್ಮಣಿ ಕೋಪಿ ನ ಲಗ್ನಃ।।’’

ಇಲ್ಲಿ ಪದಗಳು ಎಷ್ಟು ಸೂಕ್ತವಾದವು, ಎಷ್ಟು ಸಮಂಜಸವಾದವು, ಎಷ್ಟು ಅರ್ಥವತ್ತಾದವು, ಗಮನಿಸಿ. ‘‘ಹುಡುಗ-ಹುಡುಗಿಯರು ಆಟದಲ್ಲಿ ಆಸಕ್ತರು, ತರುಣ-ತರುಣಿಯರು ಅನುರಾಗದ ಬಂಧದಲ್ಲಿ ಹೆಣೆದುಕೊಂಡಿದ್ದು, ಪರಸ್ಪರ ಅನುರಕ್ತರು. ಏನೇನೋ ಯೋಚನೆಯಲ್ಲಿ ಮುಳುಗಿ ಎದ್ದು ಮತ್ತೆ ಮುಳುಗುತ್ತಿರುವ ಮುದುಕರು ಚಿಂತೆಯಲ್ಲೇ ಮಗ್ನರು. ಪರಮಾತ್ಮನ ವಿಚಾರದಲ್ಲಿ ಯೋಚನೆ ಮಾಡುತ್ತಾ, ಅದರಲ್ಲೇ ಅಂಟಿಕೊಂಡು ತಲ್ಲೀನರಾಗಿರಲು ಈ ಮೂರು ಅವಸ್ಥೆಗಳಲ್ಲೂ ಯಾರಿಗೂ ವ್ಯವಧಾನ ಇಲ್ಲವಲ್ಲಾ’’- ಎ0ಬುದೇ ಆಚಾರ್ಯ ಶಂಕರರ ಕೊರಗು. ನೋಡಿ, ಇದನ್ನ ಮನಮುಟ್ಟುವಂತೆ ಎಷ್ಟು ಸುಂದರವಾಗಿ ಅವರು ಹೇಳಬಲ್ಲರು? ಇದು ಮುಕ್ತಕ.

ಬೇಟೆಯಾಡಲು ನೀನು/ ಕಾಡುಪ್ರಾಣಿಗಳನ್ನು/

ಬೇರೆಲ್ಲೋ ಅರಸುತ್ತ/ ಅಲೆಯುವುದು ಬೇಕಿಲ್ಲ! /

ಈ ನನ್ನ ತಲೆಯಾಳಗೆ/ ಬೀಡುಬಿಟ್ಟಿರುವೆಲ್ಲ/

ದುಷ್ಟಜಂತುಗಳನ್ನೆ /ನೀ ಕೊಲ್ಲಬಹುದಲ್ಲ!//

ಸತ್ತು ಹುಟ್ಟುವ ಕೆಟ್ಟ-/ದೆಲ್ಲವ ಥಟ್ಟನೆ ಕೊಲ್ಲು/

ಈ ಅಡವಿಯಲಿ ಸಲ್ಲದೆಲ್ಲದರದ್ದ ಸೊಲ್ಲಡಗಿಸು/

ಬಾ ಇಲ್ಲಿ, ಮನೆ ಮಾಡು,/ ಹುಲ್ಲೆ ನವಿಲನೆ ಕುಣಿಸು/

ಶಿವನೆ, ನೀ ಸಾಕೆನುವೆ ‘‘ನನಗೆ ಈ ದಟ್ಟ ಕಾಡು!’’//

(‘‘ಮಾ ಗಚ್ಛ, ತ್ವಂ ಇತಸ್‌ ತತೋ, ಗಿರಿಶ ಭೋ, ಮಯ್ಯೇವ ವಾಸಂ ಕುರು,

ಸ್ವಾಮಿನ್‌ ಆದಿ ಕಿರಾತ, ಮಾಮಕ ಮನಃಕಾನ್ತಾರ-ಸೀಮಾನ್ತರೇ,

ವರ್ತನ್ತೇ ಬಹುಶೋ ಮೃಗಾ ಮದಜುಷೋ ಮಾತ್ಸರ್ಯ ಮೋಹಾದಯಃ

ತಾನ್‌ ಹತ್ವಾ ಮೃಗಯಾ ವಿನೋದ ರುಚಿತಾ ಲಾಭಂ ಚ ಸಂಪ್ರಾಪ್ಯಸಿ।।)

-ಆಚಾರ್ಯ ಶಂಕರ, ‘ಶಿವಾನಂದಲಹರೀ’ 43.

-ಎಂದು ಇನ್ನೊಂದೆಡೆ ಅವರೇ, ಅರ್ಜುನನಿಗೆ ಕಿರಾತನರೂಪದಲ್ಲಿ ದರ್ಶನವಿತ್ತ ಶಿವನಿಗೆ ಸಲಹೆಕೊಡುತ್ತಾರೆ. ಇದೂ ಅರ್ಥವತ್ತಾದ ಮುಕ್ತಕ.

ಹೀಗೆ, ಸಂಸ್ಕೃತದ ಅನೇಕ ಸುಭಾಷಿತಗಳು, ಒಂದೊಂದೂ ಮುಕ್ತಕಗಳೇ. ಕನ್ನಡದಲ್ಲೂ ಸಹ ಪಂಪ, ಪೊನ್ನ, ರನ್ನ, ಜನ್ನ ಹರಿಹರ, ಕುಮಾರವ್ಯಾಸ ಮುಂತಾದ ಕವಿಕೋಗಿಲೆಗಳ ನೆನಪು ನಮಗೆ ಉಳಿದಿರುವುದು ಅವರೆಲ್ಲರ ಕೂಜನದಿಂದಲೇ, ಕಬ್ಬಿಗರು ಆಡಿದ ಆಣಿಮುತ್ತಿನ ಮಾತುಗಳಿಂದಲೇ. ಯಾರಿಗಾದರೂ ಏನಾದರೂ ನಾವು ಹೇಳಬೇಕಾದರೆ ನಾವು ಉಲ್ಲೇಖಿಸುವುದು ಸರ್ವಜ್ಞನ ತ್ರಿಪದಿಗಳನ್ನೇ, ಸೋಮೇಶ್ವರ ಶತಕದ0ಥ, ಹೊನ್ನಮ್ಮನ ಹದಿಬದೆಯ ಧರ್ಮದಂಥ ಅನುಭವಾಮೃತದ ಮಾಣಿಕ್ಯಗಳನ್ನೇ. ದಾಸವಾಣಿಯಲ್ಲಿ ಅಲ್ಲವೇ, ವಚನವಾಙ್ಗ್ಮಯದಲ್ಲಿ ಅಲ್ಲವೇ ಈ ಕಲ್ಲುಸಕ್ಕರೆಯಂಥ ಸೂಳ್‌ನುಡಿಗಳಿಗೆ ಪಚ್ಚೆಯ ನೆಲಗಟ್ಟು, ಕನಕದ ತೋರಣ, ವಜ್ರದ ಕಂಭ, ಹವಳದ ಚಪ್ಪರ ಕಟ್ಟಿ ಅವನ್ನು ಕುಣಿಸಿರುವುದು? ನಮ್ಮನ್ನು ಅವು ತಣಿಸಿರುವುದು?

ಅಂದಿನಿಂದ ಇಂದಿನವರೆಗೆ, ಮಂಕುತಿಮ್ಮನ ಕಗ್ಗದವರೆಗೆ; ಪರಮೇಶ್ವರ ಭಟ್ಟ, ಅಕ್ಬರ್‌ ಆಲಿ, ದಿನಕರ ದೇಸಾಯಿ, ದುಂಢಿರಾಜ್‌ಗಳವರೆಗೆ ಈ ವ್ಯವಸಾಯ ನಿರಂತರವಾಗಿ ನಡೆದುಬಂದಿದೆ. ಈ ಚುಟುಕಗಳು, ಚೌಪದಿಗಳು, ಹನಿಗವನಗಳು, ಶಾಯರಿಯ ಘಜಲ್‌ನ ಸಾಲುಗಳು ಮುಂತಾದವುಗಳೇ ನಾವು ಮೇಲಿಂದ ಮೇಲೆ ಉಲ್ಲೇಖಿಸುವ ರತ್ನಗಳು.

ಆದರೆ, ನಮ್ಮ ಶಕ್ತ್ಯಾನುಸಾರ ತಿಳಿವನ್ನು ಹೊಳೆಯಿಸುವ ಈ ಸಾಣೆ ಹಿಡಿದ ವಜ್ರಗಳನ್ನ ನೋಡಿದಾಗ ನಮಗೆ ಗೋಚರಿಸುವ ಸಾಮಾನ್ಯ ಅಂಶಗಳು ಮೂರು. ಸಂಕ್ಷಿಪ್ತತೆ, ಆರಿಸಿ ಆರಿಸಿ ಜೋಡಿಸಿದ0ಥ ಪದಪುಂಜಗಳು, ಮತ್ತು ದೃಷ್ಟಾಂತ ಅಲಂಕಾರ.

ಒಂದು: ‘ಮುಕ್ತಕ’ವು ಯಾವುದೋ ಒಂದೇ ಒಂದು ವಿಷಯವನ್ನು ಮಾತ್ರ ಸಂಗ್ರಾಹ್ಯವಾಗಿ, ಆ ಎರಡು ಮೂರು ನಾಲ್ಕು ಸಾಲುಗಳಲ್ಲಿಯೇ ಆ ಪದ್ಯದಲ್ಲಿಯೇ ಹೇಳಿ ಮುಗಿಸಬಿಡಬೇಕು. ಹೇಳಿದ ಮೇಲೆ, ‘ಆ ವಿಷಯದ ಬಗ್ಗೆ ಇನ್ನೇನೂ ಉಳಿದಿಲ್ಲವೇನೋ’ ಅನ್ನಿಸಿಬಿಡಬೇಕು.

ಎರಡನೆಯ ಲಕ್ಷಣ: ಪದಗಳ ಕುಣಿತ. ಇಲ್ಲಿ ಪ್ರಾಸ, ಅನುಪ್ರಾಸ, ಯಮಕಗಳ ವಿಜೃಂಭಣೆ ಎದ್ದು ತೋರುವ ಅಂಶ. ಕನ್ನಡದಲ್ಲಂತೂ ಪ್ರಾಸಗಳದ್ದೇ ಶೋಭೆ. ಕೆಲವರ ಹನಿಗವನಗಳಲ್ಲಿ ಅಂತ್ಯಾಕ್ಷರ ಪ್ರಾಸಕ್ಕೆ ಒಂದು ಥರ ಆದ್ಯತೆ.

ಮೂರನೆಯ ಲಕ್ಷಣ: ಎರಡು ಬೇರೆ ಬೇರೆ ಸಂಗತಿಗಳು ಪರಸ್ಪರ ಅರ್ಥಸಾದೃಶ್ಯದಿಂದ ಒಂದನ್ನು ಇನ್ನೊಂದು ಪ್ರತಿಬಿಂಬಿಸುವುದು.

ಮುಕ್ತಕಕ್ಕೆ ಥಟ್ಟನೆ ಅರ್ಥವಾಗುವ, ಮೆಲುಕು ಹಾಕಿದಷ್ಟೂ ಅರ್ಥವಿಸ್ತಾರಗೊಳ್ಳುವ ಗುಣ ಮುಖ್ಯ. ಶ್ಲೇಷೆ, ಪ್ರಸಾದ, ಸಮತೆ, ಮಾಧುರ್ಯ, ಸೌಕುಮಾರ್ಯ, ಅರ್ಥವ್ಯಕ್ತಿ, ಉದಾರತ್ವ, ಓಜಸ್ಸು, ಕಾಂತಿ, ಸಮಾಧಿ- ಈ ಎಲ್ಲಾ ಕಾವ್ಯಗುಣಗಳಲ್ಲಿ ಕೆಲವೂ ಹಲವೋ ಇಲ್ಲಿ ಇದ್ದೀತೆಂದರೆ, ಅದು ಬೋನಸ್ಸು.

*** *** ***

ಸಂಸ್ಕೃತದ ಹೆಸರಾಂತ ಸುಭಾಷಿತ ಸಂಗ್ರಹಗಳಿಂದ ಆಯ್ದ ಕೆಲವು ಮುಕ್ತಕಗಳನ್ನ ಈಗ ನೋಡೋಣ. ಮೂಲದಲ್ಲೇ ತುಂಬಾ ಮಜಾ ಇರುವುದು. ಸಹಾಯಕವಾಗಿರಲಿ ಎಂದಷ್ಟೇ ಕನ್ನಡದ ಭಾವಾರ್ಥ ಇಲ್ಲಿ ಕೊಟ್ಟಿರುವೆ:

ಒಬ್ಬ ಕವಿ ಹೇಳುತ್ತಾನೆ:

ನಿಜ, ನನ್ನ ಈ ಮಾತ ನಂಬಿ, ಸ್ವಲ್ಪ;

ಅವಳ ವಿಚಾರವೇ ಹಾಗೆ;

ನೋಡಿದವರೂ ಅಷ್ಟೆ, ಅವಳ ನೋಡದವರೂ ಅಷ್ಟೆ-

ಇಬ್ಬರೂ ಮೋಸ ಹೋದರು, ಕೊನೆಗೆ ಕೊನೆಗೇ!

ನೋಡಿದವರೆಲ್ಲರ ಹೃದಯ

ಆಗಿ ಹೋಯಿತು ಲೂಟಿ;

ನೋಡದಿದ್ದವರ ಪಾಡು ಬಿಡಿ, ಆ

ಕಣ್ಣಿದ್ದೂ ಕುರುಡಾದವರ ಕತೆಗೆಲ್ಲಿ ಸಾಟಿ?

(ಸಾ ದೃಷ್ಟಾ ಯೈರ್‌ ನ ವಾ ದೃಷ್ಟಾ ಮುಷಿತಾ ಸಮಮ್‌ ಏವ ತೇ।

ಹೃದಯಂ ಹೃತಂ ಏಕೇಷಾಂ, ಅನ್ಯೇಷಾಂ ಚಕ್ಷುಷೋ ಫಲಮ್‌ ।।)

-ಪ್ರಭಾಕರ ದೇವ, ‘ಶಾರ್ಙ್ಗಧರ ಪದ್ಧತಿ’, ಸಂಪಾದಕ: ಶಾರ್ಙ್ಗಧರ, ಕಾಲ 1363.

***

ಉರಿಗಣ್ಣು ಕೊಂದು ಸುಟ್ಟಿರಬಹುದು ಮನ್ಮಥನನ್ನ,

ನೀವು ಹುಟ್ಟಿಸಿಹರಲ್ಲ ನಿಮ್ಮ ಕಣ್ಗಳಿಂದ ಮತ್ತೆ ಅವನ;

ಗೆದ್ದಿರೇ, ಭಲೆ ಭಲೇ, ಆ ಮುಕ್ಕಣ್ಣನನ್ನೇ ನೀವು

ಸೆಳೆಗಣ್ಣ ಕಾಮಿನಿಯರೇ, ನಿಮಗೆ ನೂರು ನಮನ!

(ದೃಶಾ ದಗ್ಧಂ ಮನಸಿಜಂ, ಜೀವಯನ್ತಿ ದೃಶೈವ ಯಾ।

ವಿರೂಪಾಕ್ಷಸ್ಯ ಜಯನ್ತೀಸ್‌ ತಾ ಸ್ತುವೇ ವಾಮಲೋಚನಾಃ ।।)

-ಸಂ. ಕಾಶ್ಮೀರದ ವಲ್ಲಭದೇವ, ‘ಸುಭಾಷಿತಾವಳಿ’, ಸು. 15ನೆಯ ಶತಮಾನ.

***

‘ಏನು ಬೇಕೋ ನನಗೆ, ಅದನೇ ತಾ ಮಾಡುವಳು, ಭೇಷ್‌-

ಎಂದು ಸಂತಸ ಪಡುವ ಪೆದ್ದ ಗಂಡೇ, ಗೊತ್ತೇ ನಿನಗೆ?

ಅವಳೇನ ಮಾಡುವಳೋ ಅದು ಅದೆಲ್ಲವೂ ಪ್ರಿಯವೇ

ಆಗಿ ಹೋಗಿರುವಾಗ ಎಲ್ಲಿಹುದು ಮದ್ದು ನಿನ್ನ ಭ್ರಮೆಗೆ?

(ಯದ್‌ ಏವ ರೋಚತೇ ಮಹ್ಯಂ, ತದ್‌ ಏವ ಕುರುತೇ ಪ್ರಿಯಾ।।

ಇತಿ ವೇತ್ತಿಃ ನ ಜಾನಾತಿ- ತತ್‌ ಪ್ರಿಯಂ ಯತ್‌ ಕರೋತಿ ಸಾ ।।)

-ಸಂ. ಕಾಶೀನಾಥ ಶರ್ಮ, ‘ಸುಭಾಷಿತ ರತ್ನ ಭಾಂಡಾಗಾರ’, 18ನೆಯ ಶತಮಾನ.

***

ಪಯಣ ಹೊರಟಿರುವಂಥ ನಲ್ಲನಿಗೆ ಹೇಳುವಳು, ಈಗಿನ್ನೂ ಮದುವೆಯಾಗಿಹ ಹುಡುಗಿ:

‘‘ಹೋಗದಿರಿ’’ ಎನ್ನುವುದು ಶುಭವಲ್ಲ, ಆಡುವೆನೆ?

‘‘ಹೋಗಿ’’ ಎನ್ನುವುದಂತೂ ಸ್ನೇಹಶೂನ್ಯದ ಸನ್ನೆ;

‘‘ನಿಲ್ಲಿ, ಇಲ್ಲೇ ನಿಲ್ಲಿ’’ ಎಂದೇನೇ ಎಂದೂ ಆ ಆಜ್ಞೆಯ ಮಾತ?

‘‘ನಿಮಗಿಷ್ಟಬಂದತೇನೆ ಮಾಡಿ’’ ನಾನೆನೆ ಆದೀತು ಉದಾಸೀನತೆ;

‘‘ನಿಮ್ಮ ಬಿಟ್ಟಿರಲಾರೆ, ಬದುಕಿರಲಾರೆ’’- ಮಾತ ನಂಬುವಿರೋ ಇಲ್ಲವೋ;

- ಏನ ಹೇಳ ಬೇಕೆಂದರಿಯೆ, ಆಣ್ಮ, ನೀವೇ ಕಲಿಸಿ!

(‘‘ಮಾ ಯಾಹಿ’’ ಇತಿ ಅಮಂಗಲಂ, ‘‘ವ್ರಜ ಕಿಲ’’ ಸ್ನೇಹೇನ ಶೂನ್ಯಂ ವಚಸ್‌।

‘‘ತಿಷ್ಠ’’ ಇತಿ ಪ್ರಭುತಾ, ‘‘ಯಥಾ ರುಚಿ ಕುರುಷ್ವ’’ ಏಷಾ ಅಪಿ ಉದಾಸೀನತಾ।

‘‘ನೋ ಜೀವಾಮಿ ವಿನಾ ತ್ವಯಾ’’ ಇತಿ ವಚನಂ ಸಂಭಾವ್ಯತೇ ವಾ ನಾ ವಾ।

-ತನ್‌ ಮಾಂ ಶಿಕ್ಷಯ, ನಾಥ, ಯತ್‌ ಸಮುಚಿತಂ, ವಕ್ತುಂ ತ್ವಯಿ ಪ್ರಸ್ಥುತೇ।।)

-‘ಸುಭಾಷಿತಾವಳಿ’

***

ಈ ಮುಕ್ತಕಗಳ ಕೃಷಿಯಲ್ಲಿ ತೊಡಗಿ, ಬೆಳೆದು, ಎತ್ತರಕ್ಕೆ ಏರಿ ಹೋದಮೇಲೆ, ತಮಗೆ ನೆರವಾದ ಎಲ್ಲರನ್ನು ನೆನಸಿಕೊಳ್ಳುವ ವಿನಯವಂತರ ಮಾತು ಒಂದಿದೆ:

‘‘ನಿನ್ನ ಅನುಗ್ರಹದಿಂದ ಒಂದು ವೇಳೆ, / ನಾನು ನಿನ್ನಲ್ಲೇನೆ ಸೇರಿಹೋದೆ ಎಂದುಕೊಳ್ಳೊಣ,

ಆಗ ನನಗೂ ನಿನಗೂ ಏನು ಏನು / ಭೇದವೇ ಇಲ್ಲವೇ! -ಎನುವ ಸ್ಥಿತಿಯಾಂದು ಬಂದಿತೆನ್ನೋಣ;

ಆವಾಗಲೂ ನಿನ್ನವನೇನೆ ನಾನು; ನೀನು ನನ್ನವನಾಗೆ!, / ಅದು ಸಾಧ್ಯವಿಲ್ಲ, ಸಾಧ್ಯವಹುದೇ?-

ಸಮುದ್ರದಿಂದಲೇ ಅಲೆಗಳೆಲ್ಲ, ನಿಜ; / ಇರಲಿ, ಅಲೆಗಳಿಂದ ಸಮುದ್ರ ಎನ್ನಬಹುದೇ?’’

(‘‘ಸತಿ ಅಪಿ ಭೇದ ಅಪಗಮೇ, ನಾಥ, ತವ ಅಹಂ ನ, ಮಾಮಕೀ ನಸ್‌ ತ್ವಮ್‌।

ಸಾಮುದ್ರೋ ಹಿ ತರಂಗಃ, ಕ್ವಚನ ಸಮುದ್ರೊ ನ ತಾರಂಗಃ’’)

- ಎಂಬ, ಆಚಾರ್ಯ ಶಂಕರರ ‘ವಿಷ್ಣು ಷಟ್ಪದಿ’ಯ ಮಾತು ಇದು. ನಿಜಕ್ಕೂ ಇದು ಮುತ್ತಿನ ಮಾತೇ.

ಲೋಕದಲ್ಲಿ ಹೇಗಿರಬೇಕು? ಎಲ್ಲರೊಳಗೊಂದಾಗುವುದದೆಂತು? ಬಿಟ್ಟುಕೊಡದ ತನ್ನತನದ ಮಹತ್ವವೇನು?- ಕಬೀರನ ಈ ದೋಹೆಯನ್ನ ನೋಡಿ:

‘‘ಸಬ್‌ ಸೇ ಮಿಲಿಯೇ, ಸಬ್‌ ಸೇ ಹಿಲಿಯೇ / ಸಬ್‌ ಕಾ ಲೀಜಿಯೇ ನಾಮ್‌।

‘ಹ್ಞಾಂ ಜೀ’, ‘ಹ್ಞಾಂ ಜೀ’, -ಸಬ್‌ ಸೇ ಕಹಿಯೇ, / ಬಸಿಯೇ ಅಪನಾ ಗಾಂವ್‌’’

(ಎಲ್ಲರೊಂದಿಗೆ ಕೂಡು, ಎಲ್ಲರೊಂದಿಗೂ ಸೇರು; / ಎಲ್ಲರೆಲ್ಲರ ಹೆಸರ ಹೇಳುತ್ತ ಕೂರು!

‘ಸ್ವಾಮಿ’, ’ಅಯ್ಯಾ’, ‘ಬುದ್ದೀ’ ಆಡುತಿರು ಜನರೆದುರು- / ನಿನ್ನ ಊರಲ್ಲೇನೇ ನೀ ಭದ್ರ ತಳ ಊರು!)

*

‘‘ಬೇರೆ ಬೇರೆಯವರ ಮುಕ್ತಕಗಳನ್ನು ಕೇಳಿ, ಓದಿ, ಆನಂದಿಸಿ. ಆದರೆ, ನೀವೂ ಬರೆಯಿರಿ. ಹಾಗೆ ಬರೆದಾಗ, ನಿಮ್ಮತನವನ್ನು ಬಿಟ್ಟುಕೊಡದ ಹಾಗೆ ಸ್ವಂತಿಕೆಯನ್ನು ಕಂಡುಕೊಳ್ಳಿ, ಬೆಳಸಿಕೊಳ್ಳಿ, ಉಳಿಸಿಕೊಳ್ಳಿ!’’ -ಎಂದು ಕಬೀರ್‌ ಇಲ್ಲಿ ಮುಕ್ತಕ ಕವಿಗಳಿಗೆ ಸೂಚನೆ ಕೊಡುತ್ತಿದ್ದಾನೆಂದು ಬೇಕಾದರೆ ಅಂದುಕೊಳ್ಳಿ!

*

ಕಾಪಿರೈಟ್‌ ಜನವರಿ 2004, ಎಸ್‌. ಕೆ . ಹರಿಹರೇಶ್ವರ

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Muktaka- The art of talking by S.K. Harihareshwara in Mysore
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more