ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅ.ರಾ.ಮಿತ್ರ ಅವರು ಅಮೆರಿಕಾಕ್ಕೆ ಬರುತ್ತಿದ್ದಾರೆ !

By Staff
|
Google Oneindia Kannada News
Shikaripura Harihareshwara, Mysore ಶಿಕಾರಿಪುರ ಕೆ. ಹರಿಹರೇಶ್ವರ,
ಸರಸ್ವತೀಪುರಂ, ಮೈಸೂರು

[email protected]

Prof A.Raa. Mitra visiting US ಕರ್ನಾಟಕದ ಆಕಾಶವಾಣಿ, ದೂರದರ್ಶನಗಳಲ್ಲಿ ಲೆಕ್ಕವಿಲ್ಲದಷ್ಟು ಚಿಂತನೆ, ಉಪನ್ಯಾಸಗಳು, ಕುಮಾರವ್ಯಾಸ ಭಾರತದ ವ್ಯಾಖ್ಯಾನ, ಹಾಸ್ಯೋತ್ಸವ ರಂಜನೆ, ಹರಟೆ ಇತ್ಯಾದಿಗಳನ್ನು ಪ್ರಸ್ತುತ ಪಡಿಸಿ ಜನಪ್ರಿಯರಾಗಿರುವ ಪ್ರೊಫೆಸರ್‌ ಅ. ರಾ, ಮಿತ್ರ ಅವರು ಈ ಸೆಪ್ಟೆಂಬರ್‌ 2ಂಂ4 ತಿಂಗಳಿನಲ್ಲಿ ಅಮೆರಿಕಾ ಪ್ರವಾಸ ಕೈಗೊಳ್ಳಲಿದ್ದಾರೆ.

‘ಸಮಗ್ರ ಲಲಿತ ಪ್ರಬಂಧಗಳು’, ‘ವಚನಕಾರರು ಮತ್ತು ಶಬ್ದಕಲ್ಪ’, ‘ಒಳನೋಟಗಳು’, ‘ಛಂದೋಮಿತ್ರ’, ‘ಕೈಲಾಸಂ’, ‘ಪ್ರೇಮನದಿಯ ದಡದಲ್ಲಿ’, ‘ಮಿತ್ರ ಪ್ರಬಂಧಗಳು’- ಮುಂತಾದ ತಮ್ಮ ಕೃತಿಗಳಿಂದ ಹೆಸರುಮಾಡಿರುವ, ನಿಯತಕಾಲಿಕ ಪತ್ರಿಕೆಗಳಿಗೆ ಬರೆಯುವ ತಮ್ಮ ಅಂಕಣ ಬರಹ, ಧಾರವಾಹಿ ಲೇಖನ, ಹರಟೆಗಳಿಂದ ಮನೆಮಾತಾಗಿರುವ ಅಕ್ಕಿಹೆಬ್ಬಾಳು ರಾಮಣ್ಣ ಮಿತ್ರ ಅವರು ಹುಟ್ಟಿದ್ದು 1935ರಲ್ಲಿ. ಮೈಸೂರು ವಿಶ್ವ ವಿದ್ಯಾನಿಲಯದ ಮಹಾರಾಜ ಕಾಲೇಜಿನಲ್ಲಿ ಕನ್ನಡ ಎಂ. ಎ. ವ್ಯಾಸಂಗ ಮಾಡಿ, ಬೆಂಗಳೂರಿನ ಸೇಂಟ್‌ ಜೊಸೆಫ್‌ ಕಾಲೇಜಿನಲ್ಲಿ 1955 ರಲ್ಲಿ ಕನ್ನಡ ಅಧ್ಯಾಪಕರಾಗಿ ಉದ್ಯೋಗ ಪ್ರಾರಂಭಿಸಿ, 1973 ರವರೆಗೆ ಅಲ್ಲಿದ್ದು, ನಂತರ ಸರಕಾರೀ ಕಾಲೇಜು ಶಿಕ್ಷಣ ಇಲಾಖೆಯಲ್ಲಿ ಪ್ರವಾಚಕ (ರೀಡರ್‌)ರಾಗಿ ನೇಮಕಗೊಂಡು, ಮಡಿಕೇರಿ ತುಮಕೂರು ಬೆಂಗಳೂರಿನ ಸರಕಾರಿ ಕಾಲೇಜುಗಳಲ್ಲಿ ಅವರು ಕೆಲಸ ಮಾಡಿದರು, ಪ್ರಾಧ್ಯಾಪಕರಾದರು. ಈ ಮಧ್ಯೆ, ‘ಅಮೇರಿಕನ್‌ ಪೀಸ್‌ ಕೋರ್‌’ ನಲ್ಲಿ ಕನ್ನಡ ಶಿಕ್ಷಕರೂ ಆಗಿದ್ದರು. ಕೊನೆಗೆ, ಬೆಂಗಳೂರಿನ ಮಹಾರಾಣಿ ಕಾಲೇಜಿನ ಪ್ರಾಂಶುಪಾಲ(ಪ್ರಿನ್ಸಿಪಾಲ್‌)ರಾಗಿ ನಿವೃತ್ತರಾದರು, ಮಿತ್ರ ಅವರು.

ವೃತ್ತಿಯಲ್ಲಿ ಇದ್ದಾಗಲೂ, ನಿವೃತ್ತರಾದಮೇಲೂ ಪ್ರಾಧ್ಯಾಪಕ ಮಿತ್ರ ಅವರ ಮಾತುಗಾರಿಕೆಗೆ ಬಹಳ ಬೇಡಿಕೆ. ನಿರರ್ಗಳವಾಗಿ ಹಳಗನ್ನಡ ನಡುಗನ್ನಡ, ನವೋದಯ ನವ್ಯ ನವ್ಯೋತ್ತರ ಸಾಹಿತ್ಯಪ್ರಕಾರಗಳ ಬಗೆಗೆ ನುಡಿ ಚಿಂತನೆಗಳನ್ನ ಹರಿಯಬಿಡಬಲ್ಲ ಅವರನ್ನು ಕರ್ನಾಟಕದ ಎಲ್ಲೆಡೆ ವಿವಿಧ ಶಾಲಾ ಕಾಲೇಜುಗಳಲ್ಲಿ ವಿಚಾರ ಸಂಕಿರಣ ಸಾಹಿತ್ಯೋತ್ಸವಗಳಲ್ಲಿ ನಾನಾ ವಿಷಯಗಳ ಬಗ್ಗೆ ಭಾಷಣಕ್ಕಾಗಿ ಜನ ಆಹ್ವಾನಿಸುತ್ತಾರೆ. ಅವರ ಲಘು ಹಾಸ್ಯಪೂರಿತ ಆದರೆ ಚಿಂತನಶೀಲ ಮಾತುಗಳನ್ನು ಕೇಳಲು ಜನ ಕಿಕ್ಕಿರಿದು ನೆರೆಯುತ್ತಾರೆ. ಈಚೀಚೆಗೆ ಹಾಸ್ಯಗೋಷ್ಠಿಗಳನ್ನು ನಿಯೋಜಿಸಿ ನಡೆಸಿಕೊಡುತ್ತಿರುವ ಪರಿಪಾಠವೂ ಇವರ ಬೆನ್ನಿಗೆ ಬಿದ್ದಿದೆ; ‘ಅಖಂಡ ಕರ್ನಾಟಕದಲ್ಲಿ ಹಾಸ್ಯ ಉಪನ್ಯಾಸಕಾರನನ್ನು ತಯಾರಿಸಿ ಬೆಳೆಸಿದ ಅಪವಾದವೂ ನನ್ನ ಮೇಲಿದೆ,’- ಎನ್ನುತ್ತಾರೆ, ಮಿತ್ರ ಅವರು.

ವಿವಿಧ ವಿಶ್ವವಿದ್ಯಾನಿಲಯಗಳಲ್ಲಿ ಸಾಹಿತ್ಯ ಸಮ್ಮೇಳನಗಳಲ್ಲಿ ಇಂಗ್ಲೀಷ್‌/ಕನ್ನಡಗಳಲ್ಲಿ ಪ್ರಬಂಧ ಮಂಡನೆಯಾಂದೇ ಅಲ್ಲ, ಶಾಲಾ ಕಾಲೇಜುಗಳಿಗೇ ಅದು ಸೀಮಿತಗೊಂಡಿಲ್ಲ- ಸಾಂಸ್ಕೃತಿಕ ಸಂಘಟನೆಗಳೂ ಇವರ ವಿದ್ವತ್ಪೂರ್ಣ ಉಪನ್ಯಾಸಗಳನ್ನು ಸದುಪಯೋಗಪಡಿಸಿಕೊಳ್ಳುತ್ತಿವೆ: ಉದಾಹರಣೆಗೆ, ಭಾರತೀಯ ವಿದ್ಯಾಭವನದಲ್ಲಿ ಕನ್ನಡ ಕಾವ್ಯದ ಸವಿವರ ಉಪನ್ಯಾಸ ಮಾಲಿಕೆಯಲ್ಲಿ ಸುಮಾರು ನೂರು ಉಪನ್ಯಾಸಗಳನ್ನು ನೀಡಿದ ಹೆಗ್ಗಳಿಕೆ ಇವರದು. ಬೆಂಗಳೂರಿನ ಗೋಖಲೆ ಸಾರ್ವಜನಿಕ ಸಂಸ್ಥೆಯಲ್ಲಿ ಕುಮಾರವ್ಯಾಸ, ಲಕ್ಷ್ಮೀಶ, ಡಿವಿಜಿ ಮೊದಲಾದವರ ಬಗೆಗೆ ನೂರಾರು ಉಪನ್ಯಾಸಗಳನ್ನು ಮಾಡಿ ಪಂಡಿತ ಪಾಮರರನ್ನು ರಂಜಿಸಿದ್ದಾರೆ. ಈಗ ‘ಈ-ಟೀವಿ’ ದೂರದರ್ಶನದಲ್ಲಿ ಪ್ರತಿನಿತ್ಯವೂ (ಭಾನುವಾರ ಹೊರತುಪಡಿಸಿ) ಕುಮಾರವ್ಯಾಸ ಭಾರತದ ಬಗೆಗೆ ಡಾ.ನಾಗವಲ್ಲಿ ನಾಗರಾಜ್‌ರವರ ಗಮಕ ವಾಚನದ ನಂತರ ಅ ರಾ ಮಿತ್ರ ಅವರ ವ್ಯಾಖ್ಯಾನ-ಪರಂಪರೆ ಸತತವಾಗಿ ನಡೆಯುತ್ತ ನಾಲ್ಕನೇ ವರ್ಷಕ್ಕೆ ಕಾಲಿಟ್ಟಿದೆ; ಇದೊಂದು ವಿಕ್ರಮ.

ಇವರ ಸಾಧನೆಯನ್ನು ಗುರುತಿಸಿ ಸಂಘ-ಸಂಸ್ಥೆಗಳು ಹಲವಾರು ಪ್ರಶಸ್ತಿಗಳನ್ನಿತ್ತು ಗೌರವಿಸಿವೆ: ಇವುಗಳಲ್ಲಿ ಗೊರೂರು ಪ್ರಶಸ್ತಿ, ಕಾವ್ಯಾನಂದ ಪ್ರಶಸ್ತಿ, ನವರತ್ನರಾಮ ಪ್ರಶಸ್ತಿ ಮತ್ತು ನಗೆರಾಜ ಪ್ರಶಸ್ತಿಗಳು ಮುಖ್ಯವಾದವು.

ಇಂಗ್ಲೆಂಡಿನ ‘ಯು. ಕೆ. ಕನ್ನಡ ಬಳಗ’ದ ಆಹ್ವಾನವನ್ನು ಸ್ವೀಕರಿಸಿ, ಎರಡು ಬಾರಿ ಅಲ್ಲಿಗೆ ಹೋಗಿ, ಇಂಗ್ಲೆಂಡಿನ ವಿವಿಧ ಭಾಗಗಳಲ್ಲಿ ಕನ್ನಡಿಗರನ್ನು ಉದ್ದೇಶಿಸಿ ಉಪನ್ಯಾಸಗಳನ್ನಿತ್ತು ಬಂದಿದ್ದಾರೆ.

***

ತಿಳಿಯಾದ ಹಾಸ್ಯಕ್ಕೆ ಹೆಸರಾದ ಅ. ರಾ. ಮಿತ್ರ ಅವರ ಬರಹಕ್ಕೆ ಅವರ ‘ಛಂದೋಮಿತ್ರ’ದಿಂದ ಆಯ್ದ ಕೆಲವು ಕವನಗಳನ್ನು ಇಲ್ಲಿ ಉಲ್ಲೇಖಿಸ ಬಯಸುತ್ತೇನೆ. ಅದರಲ್ಲಿ ತೊಡಗುವ ಮೊದಲು ಒಂದೆರಡು ಮಾತುಗಳು ಇಲ್ಲಿ ಅಪ್ರಸ್ತುತವಲ್ಲ. ಸಾಹಿತ್ಯಾಭ್ಯಾಸಿಗಳಿಗೆ ಕಾವ್ಯಾಭ್ಯಾಸಿಗಳಿಗೆ ಭಾಷೆಯ ವ್ಯಾಕರಣದಂತೆ ಛಂದಸ್‌ ಶಾಸ್ತ್ರದ ಅಧ್ಯಯನವೂ ಅತಿ ಅವಶ್ಯಕ. ಆದರೆ ಆ ಭಾಗ ಹಲವರಿಗೆ ಕಬ್ಬಿಣದ ಕಡಲೆಯಾಗಿ ಅಡ್ಡ ನಿಲ್ಲುವುದುಂಟು. ಅ.ರಾ.ಮಿತ್ರರ ‘ಛಂದೋಮಿತ್ರ’ (ಕಾಮಧೇನು ಪ್ರಕಾಶನ, 6, ನಾಗಪ್ಪ ರಸ್ತೆ, ಶೇಷಾದ್ರಿಪುರಂ, ಬೆಂಗಳೂರು-20, ಎರಡನೆಯ ಮುದ್ರಣ, 1995) ಆ ಹಾದಿಯನ್ನು ಸಾಕಷ್ಟು ಸುಗಮಗೊಳಿಸಲು ಪ್ರಯತ್ನಿಸುತ್ತದೆ. ಇಲ್ಲಿ ಸಮಕಾಲೀನ ವಸ್ತುಗಳನ್ನ ವಿಷಯವಾಗಿಟ್ಟುಕೊಂಡು ಉದಾಹರಣೆಗಳನ್ನು ಆಯಾಯ ಛಂದಸ್ಸಿನಲ್ಲಿ ಪದ್ಯರಚನೆ ಮಾಡಿದ್ದಾರೆ, ಮಿತ್ರ ಅವರು. ಈಗ ಅವುಗಳನ್ನ ನೋಡೋಣ. (ಅರ್ಥ-ಸೌಲಭ್ಯಕ್ಕೋಸ್ಕರ ಅಲ್ಲಲ್ಲಿ ನಾನು ಪದವಿಭಾಗ ಮಾಡಿದ್ದೇನೆ, ಸೇರಿಸಿಕೊಂಡು ಓದಿ!). ಮೊದಲನೆಯದಾಗಿ, ಇದು ‘ಶರ ಷಟ್ಪದಿ’ಗೆ ಅವರು ಕೊಡುವ ಉದಾಹರಣೆ:

ನಿದ್ದೆಯು ಬರದಿರೆ
ಓದಿರಿ ನನ್ನಯ
ಛಂದೋಗ್ರಂಥವ ಮರೆಯದೆಲೇ।
ಚಂದದಿ ನಿದ್ರೆಯು
ಬಂದೇ ಬರುವುದು
ಒಂದು ಪುಟವು ಮುಗಿವಷ್ಟರೊಳೇ।।

*

‘ಕುವೆಂಪು’ ಅವರ ಕ್ಷಮೆಕೋರಿ, ‘ಕಾರಿನ ಸಹವಾಸ’ವನ್ನು ಅವರು ಬಣ್ಣಿಸುವ, ಈ ‘ಕುಸುಮ ಷಟ್ಪದಿ’ಯ ರಚನೆಯನ್ನು ನೋಡಿ:

ನೀನಂದು ಬಿಳಿಯ ಕಾ
ರನು ತಂದು ‘ಬಾ’- ಎಂದು
ಕರೆದಂದು ನಾನು ಕುಣಿದಾಡುತ್ತಿದ್ದೆ ;
ಉರಿಬಿಸಿಲು ಉಕ್ಕಿತ್ತು ,
ಬೆವರಿಳಿದು ಹರಿದಿತು ್ತ,
ಮೈಯೆಲ್ಲ ಕೊಳಕಾಗಿ ದಬ್ಬುತ್ತಿದ್ದೆ !

*

‘ಭಾಮಿನಿ ಷಟ್ಪದಿ’ಗೆ ಅವರು ಭೈರಿಗೆಯ ಭಾಷಣಕಾರರನ್ನು ಗುರಿಯಾಗಿಕೊಂಡಿದ್ದಾರೆ, ಮುಂದೆ ಓದಿ:

ಕೊರೆವ ಯಂತ್ರಕೆ ನೆಲದ ತಳದಲಿ
ಹರಿಯುವೆಣ್ಣೆಯು ಐದು ನಿಮಿಷಕೆ
ದೊರೆಯದಿದ್ದರೆ ಕೊರೆವುದನ್ನೇ ನಿಲಿಸಿ ನಡೆಯುವರು।
ನೆರೆದ ಸಭಿಕರ ಕಿವಿಯ ತಳದಲಿ
ಕೊರೆವ ಭಾಷಣಕಾರ ಜನರಿಗೆ
ಬರದು ಏಕೋ ಯಂತ್ರ ಬುದ್ಧಿಯು, ಏನು ಮಾಡುವುದು?! ।।

*

ಮತದಾನದ ಸನ್ನಿವೇಶವನ್ನು ನೆನೆಯುತ್ತಾ, ಎಬಡ ರಾಜಕಾರಣಿಯ ಒಂದು ದುಗುಡ ಪರಿಸ್ಠಿತಿಯನ್ನು ಈ ‘ಪರಿವರ್ಧಿನೀ ಷಟ್ಪದಿ’ಯ ಮೂಲಕ ಉದಾಹರಿಸುತ್ತಾರೆ, ಏನದು?:

ಬಿದ್ದರೆ ನನಗೋ ಮೂರೇ ಮತಗಳು;
ಬದ್ಧ ವಿರೋಧಿಗೆ ಮುನ್ನೂರೆಂಟೇ?
ಆದರು ಹೆಂಡತಿ ಕಾಲರ್‌ಪಟ್ಟಿಯ ಹಿಡಿದೇ ಕೇಳಿದಳು:
‘ಒಂದು ಮತವು ಖಂಡಿತ ನಿಮದ್‌, ಒಪ್ಪಿದೆ;
ಒಂದನು ನಾನೇ ಹಾಕಿದ್ದೂ ನಿಜ;
ಸುಂದರಿ ಯಾವಳು ಮೂರನೆಯಾಕೆಯು? ಹೇಳುವಿರೋ, ಬೇಕೋ?’।।

*

‘ನನ್ನ ಪ್ರೇಮಪತ್ರವ ಓದಿ, ನೀ ಮುನಿಯದಿರು ಓ ಇನಿಯಾ’ - ಎಂದೆಲ್ಲ ಹಾಡಿರುವುದನ್ನ ನಾವು ಹಿಂದೆ ಕೇಳಿದ್ದೇವೆ. ‘ವಾರ್ಧಕ ಷಟ್ಪದಿ’ಯ ಉದಾಹರಣೆಗೆ ಕೊಡುವ ಮಿತ್ರರ ಈ ‘ಪ್ರೇಮಪತ್ರ’ವನ್ನು ಓದಿ:

‘ಕೋಟಿ ಯೋಜನವಿರಲಿ, ದಾಟಿ ಬರುವೆನು ಹೆಣ್ಣೆ ;
ಬೆಟ್ಟ ಬಾನುಗಳಾಚೆ ಹಾರುವೆನು ನಿನಗಾಗಿ;
ತಟವಟವೆ ಗೊತ್ತಿಲ್ಲ, ಬಿಸಿಲು ಮಳೆ, ಬಿರುಗಾಳಿ- ಯಾವುದಕು ನಾ ಜಗ್ಗೆನೆ!
ತುಂಟಿ, ಕೇಳೀ ಮಾತ:- ಸಂಜೇಗೇನಾದರೂ
ತೊಟತೊಟನೆ ಮಳೆ ಹನಿಯೆ ನೆಗಡಿ ಬರುವುದು ನನಗೆ;
ಗಂಟಿಸದೆ ಮುಖವನ್ನ, ನನ್ನ ಕಾಯದೆ ನೀನು ಹೊರಟುಬಿಡು, ಮನೆಗೀಗಲೆ!’

*

‘ಬೇರೆಲ್ಲೋ ಮೋಸಹೋಗೋದು ಸರಿಬರದು, ನಮ್ಮಂಗಡಿಗೇನೆ ಬನ್ನಿ’- ಎಂಬುದು 21 ಅಕ್ಷರಗಳ ‘ಸ್ರಗ್ದರಾ ವೃತ್ತ’ದ ಚಹರೆ ಎನ್ನುತ್ತಾ, ಆ ವೃತ್ತಕ್ಕೆ ‘ಸಂಗೀತ-ಗುರು-ತರುಣಿ ಶಿಷ್ಯೆಯ ಪ್ರಸಂಗ’ದ ಮಾದರಿ ಪದ್ಯವನ್ನು ಕೊಡುವ ವೈಖರಿ ನೋಡಿ:

‘ದ್ವೈತಂ ನಮ್ಮೊಂದು ತತ್ತ್ವಂ; ಮಗಳೆ, ತಿಳಿದಿರೈ- ಗೀತವೇ ಬೇರೆ, ಸಂ-
ಗೀತಂ ಪೇಳ್ವಾತನೇ ಬೇರೆ; ಮನೆತನದ ಮರ್ಯಾದೆಯೂ ಮುಖ್ಯ, ಗೊತ್ತೆ?’-
ಇಂತೆಲ್ಲಂ ತಂದೆ ಮುನ್ನಂ ತಿಳಿಸಿ ಕಲಿಯಲಿಕ್ಕೆಂದು ಬಿಟ್ಟಿರ್ದೊಡಂ ಆ
ಗೀತಾಚಾರ್ಯಂಗೆ ಸೋತಳ್‌ ಮಗಳು, ನಿಜದಿ ಅದ್ವೈತಮಂ ಸಾಧಿಸಿರ್ದಳ್‌! ।।

*

ಕೊನೆಯಲ್ಲಿ , ಮದಿಸಿದ ಆನೆಯಾಂದು (ಇಪ್ಪತ್ತು ಅಕ್ಷರಗಳ) ‘ಮತ್ತೇಭ ವಿಕ್ರೀಡಿತ ವೃತ್ತ’ದಲ್ಲಿ ಕುಣಿದಾಡುವುದನ್ನು ಬೇರೆ ಬೇರೆ ಉದಾಹರಣೆಗಳೊಂದಿಗೆ, ‘ನಗರ ಜೀವನ’, ‘ಅಪಘಾತ’, ‘ಕುಡುಕನ ಸೂತ್ರ’ ಮತ್ತು ‘ಡೊನೇಷನ್‌’-ಶೀರ್ಷಿಕೆಯಡಿಗಳಲ್ಲಿ ಇವರು ಬಣ್ಣಿಸುವುದನ್ನ ನೋಡೋಣ:

ನನಗೇಕ್‌ ಇಲ್ಲಿಗೆ ಬೆಂಗಳೂರು ನಗರಕ್ಕ್‌ ಆಯ್ತಪ್ಪ ವರ್ಗಾಂತರಂ
ಮನೆಯೇ ಸಿಕ್ಕುವುದಿಲ್ಲಿ ಕಷ್ಟ , ಮನೆಗ್‌ ಅಡ್ವಾನ್ಸೇನು ಸಾಮಾನ್ಯವೇ?
ಕೊನೆಗ್‌ ಆ ನರ್ಸರಿ ಶಾಲೆಗೂನು ತೆರಬೇಕಲ್ಲಪ್ಪ ಭಾರೀ ಹಣಂ-
ಅನುಮಾನಕ್ಕ್‌ ಎಡೆಯಿಲ್ಲದಂಥ ಬದುಕೇ ದುಸ್ತಾರಮ್‌ ಈ ಊರಿನೋಳ್‌!

*

ಅಪಘಾತಂಗಳ ಕಂಡು ಕಂಡು ಕುಸಿದೆಂ- ಢಿಕ್ಕೀಪ್ರಿಯರ್‌ ಈ ಜನರ್‌
ಚಪಲರ್‌ ವೇಗದ ಸಾಹಸೋದ್ಯಮಗಳಿಂ ಸಿಕ್ಕಂತೆ ಮುನ್ನುಗ್ಗುವರ್‌;
ಜಪಿಪಂತ್‌ ಆಯಿತ್‌ ಅಕಾಲಮೃತ್ಯುವನ್‌ ಇವರ್‌ ಜೀವಕ್ಕೆ ಹಾಹಾರವಂ-
ಕೃಪೆಯಂ ದೇವನ್‌ ಅದೆಂತು ಗೈಯುವನ್‌, ಪೇಳ್‌, ಕಾಲಂಗೆ ನೇರ್‌ ಆದರಂ?

*

ಮನೆಯಲ್ಲೇ ಕುಡಿಯೋಣವೆಂದರ್‌ ಅದಕಂ ಕರ್ಫ್ಯೂ ವಿಧಾನಂ ಗಡಾ,
ಶನಿಕಾಟಂಗಳು ಅಶ್ರುವಾಯು ಸಿಡಿತಂ ಪತ್ನೀ ಸುಪುತ್ರರ್ಕಳಿಂ;
ಕೊನೆಗ್‌ ಆ ಮಾಲಿಕ ಕೂಡ ಒಮ್ಮಿಗಿಲೆ ಲಾಠೀಛಾರ್ಜು ಗೈಸಿರ್ದಪಂ-
ಕೊನೆಯಾಯ್ತೇ ನನಗೊಂದೆ ಸೂತ್ರವ್‌ ಅದುವೇ ‘ಕಂಡಲ್ಲಿ ಗುಂಡಿಕ್ಕುವೆಂ’!

*

ತುಳಿವೆಂ ಸಾವಿರ ಶಾಲೆ ಮೆಟ್ಟಿಲುಗಳಂ ಪುತ್ರಂಗೆ ಸೀಟೊಂದಕೇ
ಕಳೆದೇ ಬಿಟ್ಟರು ಮಾನ ವಂತಿಗಳಂ ಕೇಳುತ್ತ ಧಾರಾಳದಿಂ
ಮಳೆಯನ್ನ್‌ ಎಲ್ಲಿ ತರೋಣ, ಹೇಳಿ, ಬರದಿಂ ಕಂಗೆಟ್ಟ ಆದಾಯದೊಳ್‌?-
ತಳಿಯನ್ನ್‌ ಉತ್ತಮ ರೀತಿಯಂ ಬೆಳಸಲಿಕ್ಕ್‌ ಎಲ್ಲಿರ್ಪುದ್‌ ಅಂತರ್‌ಜಲಂ?

***

ಪ್ರೊ। ಮಿತ್ರ ಅವರದು ಸುಖೀ ಸಂಸಾರ. ಅವರ ಎಲ್ಲ ಸಾಧನೆಗಳಿಗೆ ಸಹಕಾರಿಯಾಗಿರುವ ಸೌಜನ್ಯಶೀಲ ವ್ಯಕ್ತಿ ಧರ್ಮಪತ್ನಿ ಶ್ರೀಮತಿ ಲಲಿತಾ ಮಿತ್ರ ಅವರು. ಮಗ, ಕೀರ್ತಿ ಎ. ಮಿತ್ರ ಅಮೆರಿಕಾದ ಪೋರ್ಟ್‌ ಲ್ಯಾಂಡ್‌, ಆರಿಗಾನ್‌ನಲ್ಲಿ ಸಾಫ್ಟ್‌ವೇರ್‌ ಎಂಜಿನಿಯರ್‌ ಆಗಿದ್ದಾನೆ. ಮಗಳು, ಕುಮಾರಿ ಸೌಮ್ಯ ಎ. ಮಿತ್ರಳು ಬಿಎಸ್‌ಸಿಯ ನಂತರ, ಇಂಗ್ಲೀಷ್‌ನಲ್ಲಿ ಎಂ. ಎ. ಮುಗಿಸಿ, ರಿಸೋರ್ಸ್‌ ಡೆವಲಪ್‌ಮೆಂಟ್‌ನಲ್ಲಿ ಸ್ನಾತಕೋತ್ತರ ಡಿಪ್ಲೊಮಾ ತೆಗೆದುಕೊಂಡು ಬೆಂಗಳೂರಿನಲ್ಲಿ ತಂದೆತಾಯಿಗಳೊಂದಿಗಿದ್ದಾಳೆ.

ಅಮೆರಿಕಾದ ಫ್ಲಾರಿಡಾದ ಆರ್ಲೆಂಡೊನಲ್ಲಿ 2004 ರ ಸೆಪ್ಟಂಬರ್‌ನಲ್ಲಿ ನಿಯೋಜಿಸಲಾಗಿರುವ ವಿಶ್ವಕನ್ನಡ ಸಮ್ಮೇಳನದಲ್ಲಿ ಭಾಗವಹಿಸಲು ವಿಶೇಷ ಅತಿಥಿಯಾಗಿ ಕನ್ನಡದ ಈ ಹೆಸರಾಂತ ವಿದ್ವಾಂಸ, ಪ್ರೊಫೆಸರ್‌ ಅ. ರಾ. ಮಿತ್ರ ಅವರು ಹೋಗಿಬರುತ್ತಿದ್ದಾರೆಂಬುದು ಅಲ್ಲಿನ ಕನ್ನಡಿಗರಿಗೆ, ಸಾಹಿತ್ಯಾಸಕ್ತರಿಗೆ ಒಂದು ಸಂತಸದ ಸುದ್ದಿ. ಅಮೆರಿಕಾದ ಅವರ ಪ್ರವಾಸ ಕಾರ್ಯಕ್ರಮದ ಬಗ್ಗೆ ಹೆಚ್ಚಿನ ವಿವರಗಳಿಗೆ ಸಂಪರ್ಕಿಸಿ: ವಿ-ಅಂಚೆ: [email protected]

ಮುಖಪುಟ / ಎನ್‌ಆರ್‌ಐ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X