ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ದೆಹಲಿ ಕರ್ನಾಟಕ ಸಂಘದ ಸಾಹಿತ್ಯ ಸಂಚಿಕೆ ‘ಅಭಿಮತ’ : ಒಂದು ಅವಲೋಕನ

By Staff
|
Google Oneindia Kannada News
Shikaripura Harihareshwara, Mysore ಶಿಕಾರಿಪುರ ಕೆ. ಹರಿಹರೇಶ್ವರ,
ಸರಸ್ವತೀಪುರಂ, ಮೈಸೂರು

[email protected]

ಕರ್ನಾಟಕದಿಂದ ದೂರ ಹೋಗಿ ಜೀವನ ನಡೆಸುತ್ತಿರುವ ಕನ್ನಡಿಗರು ತಾವಿದ್ದಲ್ಲೆಲ್ಲಾ ವೃಂದ, ಕೂಟ, ಸಂಘ, ಸಂಸ್ಥೆಗಳನ್ನು ಕಟ್ಟಿಕೊಂಡು, ತಮ್ಮ ಸಾಂಸ್ಕೃತಿಕ ಚಟುವಟಿಕೆಗಳಿಗೆ ತಕ್ಕ ವೇದಿಕೆಯಾಂದನ್ನು ನಿರ್ಮಿಸಿಕೊಳ್ಳುತ್ತಿರುವುದು ಕನ್ನಡಿಗರ ಒಂದು ಹೆಚ್ಚುಗಾರಿಕೆ. ಇಂತಹ ಹೊರನಾಡ ಕನ್ನಡ ಸಂಘಗಳಲ್ಲಿ ರಾಷ್ಟ್ರದ ರಾಜಧಾನಿಯಾದ ದೆಹಲಿಯ ಕರ್ನಾಟಕ ಸಂಘ ಹಲವು ಬಗೆಯ ವೈಶಿಷ್ಟ್ಯಗಳನ್ನ ಮೆರೆಯುತ್ತಿದೆ. ಈ ಸಾಧನೆಗಳಲ್ಲಿ ಮುಖ್ಯವಾದದ್ದು ‘ಅಭಿಮತ’ ಹೆಸರಿನ ಸಾಹಿತ್ಯ ಪತ್ರಿಕೆ.

ಜುಲೈ 2004ರ ಸಂಪುಟ 14, ಸಂಚಿಕೆ 10ನ್ನು ನೋಡಿದಾಗ ಹದಿನಾಲ್ಕು ವರ್ಷಗಳಿಂದ ಈ ಪತ್ರಿಕೆ ನಡೆಯುತ್ತಿದೆ ಎಂಬ ವಿಚಾರವನ್ನ ತಿಳಿದು ಸಂತೋಷವಾಯಿತು. ಈಗ ಇದರ ಸಂಪಾದಕರಾದ ಉಷಾ ಭರತಾದ್ರಿ, ಅಧ್ಯಕ್ಷರಾದ ಡಾ। ಪುರುಷೋತ್ತಮ ಬಿಳಿಮಲೆ, ಸಾಂಸ್ಕೃತಿಕ ಸಮಿತಿಯ ಅಧ್ಯಕ್ಷರಾದ ವಸಂತ ಶೆಟ್ಟಿ ಬೆಳ್ಳಾರೆ, ಪ್ರಧಾನ ಕಾರ್ಯದರ್ಶಿಗಳಾದ ಎಸ್‌.ಕೃಷ್ಣ ಭಟ್‌, ಸಂಪಾದಕ ಮಂಡಳಿಯ ಸದಸ್ಯರು ಚೆನ್ನು ಎಸ್‌ ಮಠದ, ಬರಹಗಾರ್ತಿ ರೇಣುಕಾ ನಿಡುಗುಂದಿ ಮತ್ತು ಸಂಘದ ಇನ್ನಿತರ ಪದಾಧಿಕಾರಿಗಳ ಶ್ರದ್ಧಾಪೂರ್ಣ ಚಟುವಟಿಕೆಗಳನ್ನು ‘ಅಭಿಮತ’ ದಾಖಲಿಸಿರುವುದನ್ನು ಓದಿ ಸಂತೋಷವಾಯಿತು.

Cover page of ‘Abhimata’, July 2004 issue.ಜುಲೈ 2004 ರ ಸಂಚಿಕೆ ಮೈತುಂಬಿಕೊಂಡು ಬಂದಿದೆ; ಈಗ ನನ್ನ ಕೈಯಲ್ಲಿದೆ; ಹಿಂದಿನ ಸಂಚಿಕೆಗಳಿಗಿಂತ ಇದು ಹೊಸ ವಿನ್ಯಾಸವನ್ನೂ ಹೊಂದಿದೆ. ದೆಹಲಿಯ ಕರ್ನಾಟಕ ಸಂಘ ಮತ್ತು ಅಲ್ಲಿನ ಸುತ್ತ ಮುತ್ತಣ ಬೇರೆ ಬೇರೆ ಕನ್ನಡ ಸಂಘಗಳ (ಉದಾಹರಣೆಗೆ: ಜನಕಪುರಿ ಕನ್ನಡ ಕೂಟ, ದೆಹಲಿಯ ಕನ್ನಡ ಶಾಲೆ, ವಸುಂಧರಾ ಕನ್ನಡ ಕೂಟ, ನವದೆಹಲಿಯ ಕನ್ನಡ ಲೇಡೀಸ್‌ ಕ್ಲಬ್‌, ದೆಹಲಿಯ ಒಕ್ಕಲಿಗ ಗೌಡಸಂಘ, ದೆಹಲಿ ಕನ್ನಡಿಗರ ಪೋಲಿಸ್‌ ಕಲ್ಯಾಣ ಸಂಘ- ಮುಂತಾದ) ಸಂಘಟನೆಗಳ ಕಾರ್ಯಕ್ರಮಗಳ ಮೇಲೂ ಈ ಸಂಚಿಕೆ ಚಿತ್ರಿತ ಬೆಳಕು ಚೆಲ್ಲಿದೆ.

ಖ್ಯಾತ ಕವಿ, ನಾಟಕಕಾರ ಡಾ।। ಹೆಚ್‌. ಎಸ್‌. ಶಿವಪ್ರಕಾಶ್‌ ಅವರು ಈಗ ದೆಹಲಿಯ ಜವಹರಲಾಲ್‌ ನೆಹರೂ ವಿಶ್ವವಿದ್ಯಾಲಯದ ‘ಕಲೆ ಮತ್ತು ಸೌಂದರ್ಯ’ ವಿಭಾಗದಲ್ಲಿ ಪ್ರಾಧ್ಯಾಪಕರು. ಅವರು ಅಮೆರಿಕಾದ ಅಯೋವ ವಿಶ್ವವಿದ್ಯಾಲಯದ ಕನ್ನಡ ವಿಭಾಗಕ್ಕೆ ಬಂದು ಸ್ವಲ್ಪ ಸಮಯ ಇದ್ದು, ಅಲ್ಲೂ ಅಮೆರಿಕಾದ ಹಲವೆಡೆಗಳಲ್ಲೂ ತಮ್ಮ ವಿದ್ವತ್ಪೂರ್ಣ ಉಪನ್ಯಾಸಗಳನ್ನ ಸಂಘ ಸಂಸ್ಥೆಗಳ ವೇದಿಕೆಗಳ ಮೇಲೆ ಕೊಟ್ಟು ಬಂದವರು. ಅವರ, ಚಿಕ್ಕದಾದರೂ ಬಹಳ ಮಹತ್ವಪೂರ್ಣ ಉಪನ್ಯಾಸವೊಂದನ್ನು ಉತ್ತರ ಕ್ಯಾಲಿಫೋರ್ನಿಯಾ ಕನ್ನಡ ಕೂಟದ ಕಾರ್ಯಕ್ರಮವೊಂದರಲ್ಲಿ ಏರ್ಪಡಿಸುವ ಹುನ್ನಾರದಲ್ಲಿ ನಾನೂ ಪಾಲ್ಗೊಂಡಿದ್ದೆ. ಇತ್ತೀಚೆಗೆ ಮೈಸೂರಿಗೆ ಅವರು ಭೇಟಿಯಿತ್ತಾಗ ನಮ್ಮ ಮನೆಯ ಸಭಾಂಗಣದಲ್ಲಿ ಪ್ರಾಧ್ಯಾಪಕ ಶಿವಪ್ರಕಾಶ್‌ರೊಂದಿಗೆ ಮೈಸೂರಿನ ಸಾಹಿತಿ ಮಿತ್ರರ ಸಂವಾದ-ಗೋಷ್ಠಿ ಬಹಳ ಚೆನ್ನಾಗಿ ನಡೆುತು. ಪ್ರೊ।। ಟಿ. ವಿ. ವೆಂಕಟಾಚಲ ಶಾಸ್ತ್ರಿಗಳ ಅಧ್ಯಕ್ಷತೆಯಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ , ಶಿವಪ್ರಕಾಶರ ಇತ್ತೀಚಿನ ವಿವಾದಾತ್ಮಕ ಕೃತಿ ‘ಬತ್ತೀಸರಾಗ’ (ಪ್ರಕಟಣೆ 2003, ಅನಿಮಿಷ ಪ್ರಕಾಶನ, ಹೊನ್ನಾಳಿ) ದ ಬಗ್ಗೆ ವಿಪುಲವಾದ ಚರ್ಚೆ ನಡೆದದ್ದು ಇನ್ನೂ ನನ್ನ ನೆನಪಿನಲ್ಲಿ ಹಸಿರಾಗಿಯೇ ಇದೆ. ಈ ‘ಬತ್ತೀಸರಾಗ’ ಆತ್ಮವೃತ್ತದ ಒಂದು ಸ್ವಾರಸ್ಯಕರ ಭಾಗವನ್ನು ‘ಅಭಿಮತ’ವು ತನ್ನ ಜುಲೈ ಸಂಚಿಕೆಯಲ್ಲಿ ಪ್ರಕಟಿಸಿದೆ.

ಕಾವ್ಯವಿಭಾಗದಲ್ಲಿ, ಎಂ. ಎನ್‌. ಪ್ರಭಾಕರರ ಒಂದು ಪುಟ್ಟ ‘ನಗ್ನ ಸತ್ಯ’ ಕವನವಿದೆ; ‘ಅಜ್ಜ ನೆಟ್ಟ ಆಲದ ಮರಕ್ಕೆ ಗೂಟ ಬಡಿದು ನೇತಾಡಲು ಅಪ್ಪ ಬಲವಂತ ಪಡಿಸಿದ ತಾಕೀತು ಎಷ್ಟು ಕ್ಷುಲ್ಲಕ’, ನಾಣ್ನುಡಿಯ ಈ ಸಾರ್ವಕಾಲಿಕ ಸತ್ಯ ಹೇಗೆ ಬೆತ್ತಲೆಯಾಗಿ ಕಣ್ಣ ಮುಂದೆ ನಿಂತೀತು- ಎನ್ನುವುದನ್ನ ಈ ಕವನ ಹೇಳ ಹೊರಟಿದೆ. ‘ಯಾರಿವಳು ನಿಶಾ? ಯಾರಿವಳು- ಎಂಬ ಅಚ್ಚರಿ ನಿಮಗೆ ಆಗಬಹುದಲ್ಲ ! ಕೇಳಿ, ಹಾಗಾದರೆ ಇವಳೊಬ್ಬಳು ಚೆಲುವೆ’- ಎನ್ನುತ್ತಾರೆ ತಮ್ಮ ನಿಶಾ ಕವನದಲ್ಲಿ , ಅದನ್ನು ಬರೆದ ಸುಧಾಕರ ಕುರಂದವಾಡರು.

ಅಮ್ಮನನ್ನು ನೆನೆದು ಕೊಂಡಾಡಲು ಒಂದು ಅಕ್ಷರಮಾಲೆಯನ್ನ ಹೆಣೆದು, ಡಾ।। ಅಹಲ್ಯಾ ಚಿಂತಾಮಣಿಯವರು ತಮ್ಮ ಜನ್ಮದಾತೆಯನ್ನ ಸಿಂಗರಿಸಿದ್ದಾರೆ.

ಹಾಗೆ ನೋಡಿದರೆ, ಎಲ್ಲಾ ಭಾಷೆಯ ವರ್ಣಮಾಲೆಯ ಎಲ್ಲಾ ಅಕ್ಷರಗಳು ಸರಸ್ವತೀ ಆರಾಧನೆಗೆ ಬೀಜಾಕ್ಷರಗಳೇ ಅಲ್ಲವೇ? ಅವು ಅಳಿಯದವು; ಆದ್ದರಿಂದಲೇ ‘ಅ-ಕ್ಷರ’ಗಳು ಎನಿಸಿಕೊಂಡವು. ಸಂಸ್ಕೃತ ವರ್ಣಮಾಲೆಯಲ್ಲಿ ‘ಅ’ ಇಂದ ಹಿಡಿದು ‘ಹ’ ವರೆಗೆ ಒಟ್ಟು ಐವತ್ತು ಅಕ್ಷರಗಳು (ಸ್ವರಗಳು 15, ಅನುಸ್ವಾರ ಮತ್ತು ವಿಸರ್ಗಗಳು ಸೇರಿ 2, ವರ್ಗೀಯ ವ್ಯಂಜನಗಳು 25, ಅವರ್ಗೀಯ ವ್ಯಂಜನಗಳು 8. ನೋಡಿ: ಆರ್ಥರ್‌ ಮ್ಯಾಕ್ಡೋನಾಲ್ಡ್‌, ‘ವಿದ್ಯಾರ್ಥಿಗಳಿಗೆ ಒಂದು ಸಂಸ್ಕೃತ ವ್ಯಾಕರಣ’). ಈ ಗಣನೆಗೆ ಅನುಸಾರವಾಗಿಯೇ ದೇವಿಯನ್ನು ‘ಪಂಚಾಶತ್‌-ಪೀಠರೂಪಿಣಿ’, ಅಂದರೆ, ಐವತ್ತು ಪೀಠಗಳ ಅಧಿಷ್ಠಾತ್ರಿ- ಎಂದು ‘ಲಲಿತಾಸಹಸ್ರನಾಮ’(833) ದಲ್ಲಿ ಹೇಳಿರುವುದು. ಕಾಮರೂಪ ಕ್ಷೇತ್ರದಿಂದ ಹಿಡಿದು, ಛಾಯಾಛತ್ರ ಕ್ಷೇತ್ರದವರೆಗೆ ಇರುವ ದೇವಿಯ ಎಲ್ಲಾ ಪೀಠಗಳಿಗೆ ಇದು ಅನ್ವಯಿಸುತ್ತದೆಂಬ ಮಾತಿಗಿಂತ, ‘ಅಕ್ಷರಗಳೇ ದೇವಿಯ ನೆಲೆದಾಣ ಪೀಠಗಳು’ ಎಂಬ ಭಾವನೆಯೇ ಹೆಚ್ಚು ಸೊಗಸು. ‘ಅ’ಕಾರದಿಂದ ‘ಹ’ಕಾರದವರೆಗೆ ಇರುವ ಈ ಎಲ್ಲ ವರ್ಣಗಳಿಗೆ ಅಂದರೆ, ಅಕ್ಷರಗಳಿಗೆ ‘ಮಾತೃಕೆ’ ಎಂದೂ ಹೇಳುತ್ತಾರೆ. ಪ್ರತಿಯಾಂದು ಅಕ್ಷರಕ್ಕೂ ಬೇರೆ ಬೇರೆ ಬಣ್ಣ(=ವರ್ಣ)ವನ್ನು ಆರೋಪಿಸುವುದೂ ಉಂಟು. ಅದಕ್ಕೇ ಶಬ್ದಬ್ರಹ್ಮಸ್ವರೂಪಿಣೀ ದೇವಿ ‘ಮಾತೃಕಾವರ್ಣರೂಪಿಣಿ’ ಯೂ ಆಗಿದ್ದಾಳೆಂದು ಅಲ್ಲಿ (‘ಲಲಿತಾಸಹಸ್ರನಾಮ’-577) ನಂಬಿದವರು ಗುರುತಿಸುವುದು. ‘ಅನ್ನಪೂರ್ಣಾಸ್ತೋತ್ರ’ದಲ್ಲಿ ಆಚಾರ್ಯ ಶಂಕರರು ‘ಆದಿಕ್ಷಾನ್ತಸಮಸ್ತವರ್ಣನಕರೀ’ (ಪದ್ಯ 7)-ಎಂದಾಗ, ‘ಅ+ಆದಿ, ಕ್ಷ+ಅನ್ತವಾದ, ಅಂದರೆ ಅ-ಮೊದಲುಗೊಂಡು ಕ್ಷ-ದ ವರೆಗೆ ಇರುವ ಎಲ್ಲ ಬೀಜಾಕ್ಷರಗಳನ್ನು ಸೃಜಿಸುವಾಕೆ’ಯನ್ನೇ ನೆನೆಯುತ್ತಾರೆ. ‘ಅ’ ಇಂದ ‘ಳ’ ವರೆಗಿನ ಈಗಿನ ಕನ್ನಡದ ಅಕ್ಷರಬಳ್ಳಿಯಲ್ಲಿಯೂ ಇರುವುದು ಒಟ್ಟು ಐವತ್ತು ಅಕ್ಷರಗಳೇ. (ಸ್ವರಗಳು 14, ಅನುಸ್ವಾರ-ವಿಸರ್ಗಗಳು 2, ವರ್ಗೀಯವ್ಯಂಜನಗಳು 25 ಮತ್ತು ಅವರ್ಗೀಯ ವ್ಯಂಜನಗಳು 9. ನೋಡಿ: ತೀನಂಶ್ರೀ ‘ಕನ್ನಡ ಮಧ್ಯಮವ್ಯಾಕರಣ’ ಪುಟ 15-18, ಮುಳಿಯ ತಿಮ್ಮಪ್ಪಯ್ಯ, ‘ಕನ್ನಡ ಅಕ್ಷರಮಾಲೆ’ ಸಮಗ್ರಸಾಹಿತ್ಯ 2:567-577 ಇತ್ಯಾದಿ). ಹೊಸಗನ್ನಡದ ಶಾರದೆಯೂ ಹೀಗಾಗಿ ಐವತ್ತು ಅಕ್ಷರಪೀಠಗಳಲ್ಲಿ ನೆಲೆಗೊಂಡವಳೇ! (ಕ್ಷ, ಜ್ಞ, ತ್ರ-ಗಳು ಬಿಡಿ ಅಕ್ಷರಗಳಲ್ಲ ; ಒತ್ತಕ್ಷರಗಳು!)

ಇರಲಿ, ಜಗನ್ಮಾತೆ ದೇವಿಯನ್ನೂ ತಮ್ಮ ಜನ್ಮದಾತೆ ತಾಯಿಯನ್ನೂ ಸಮೀಕರಿಸಿರುವ ಕವಯತ್ರಿಯ ಈ ಪ್ರಯತ್ನ ಸ್ತುತ್ಯರ್ಹ.

***

ಡಾ।। ಪುರುಷೋತ್ತಮ ಬಿಳಿಮಲೆ ಅವರ ಲೇಖನ ‘ಉದಾರವಾದೀ ಮಾನವತೆಯ ಕವಿ. ಕೆ. ಎಸ್‌. ನರಸಿಂಹಸ್ವಾಮಿ’ ತುಂಬಾ ಸಾಮಯಿಕವಾದದ್ದು. ಕಾರಣ ಮೊನ್ನೆ ಭಾನುವಾರ (ಆಗಸ್ಟ್‌ 22 ಸಂಜೆ ನವದೆಹಲಿಯ ಚಾಣಕ್ಯಪುರಿಯ ಕೌಟಿಲ್ಯ ಮಾರ್ಗದಲ್ಲಿ ಇರುವ ಕರ್ನಾಟಕ ಭವನದಲ್ಲಿ ಒಂದು ಒಳ್ಳೆಯ ಕಾರ್ಯಕ್ರಮ ನಿಯೋಜಿತವಾಗಿತ್ತು. ದೆಹಲಿಯ ಎಲ್ಲಾ ಕನ್ನಡ ಸಂಘಗಳ ಮತ್ತು ಕರ್ನಾಟಕ ಭವನದ ಸಹಯೋಗದೊಂದಿಗೆ ‘ದೆಹಲಿ ಕರ್ನಾಟಕ ಸಂಘ’ ಈ ಕಾರ್ಯಕ್ರಮ ಹಮ್ಮಿಕೊಂಡಿತ್ತು. ಮಲ್ಲಿಗೆಯ ಮಾಲೆಯ ಕವಿ ದಿವಂಗತ ಕೆ. ಎಸ್‌. ನರಸಿಂಹಸ್ವಾಮಿ ಅವರ ನೆನಪಿಗಾಗಿ ಈ ಸಂಜೆಯ ಕಾರ್ಯಕ್ರಮ ನಿಯೋಜಿತವಾಗಿತ್ತು. ಕಾರ್ಯಕ್ರಮದ ಕೇಂದ್ರ ಬಿಂದುವಾದ ಆಧುನಿಕ ಕನ್ನಡ ಕಾವ್ಯದ ಅತ್ಯಂತ ಜನಪ್ರಿಯ ಕವಿ ನರಸಿಂಹಸ್ವಾಮಿಗಳ ಬಗ್ಗೆ, ಅವರ ಮುಖ್ಯ ಕವನ ಸಂಕಲನಗಳ ಬಗ್ಗೆ ಸಿಂಹಾವಲೋಕನ ಮಾಡುವ ಈ ಉತ್ತಮ ಲೇಖನ, ಇಂತಹ ಮಹತ್ವದ ಕವಿಯಾಬ್ಬನ ಬಗೆಗೆ ರಾಜಧಾನಿಯ ಕನ್ನಡಿಗರು ಚರ್ಚಿಸುತ್ತಿರುವುದರ ಸಂಜೆಯೇ ಅಭಿಮತದಲ್ಲಿ ಪ್ರಕಟಗೊಂಡಿರುವುದು ತುಂಬಾ ಸಾಂಕೇತಿಕವೂ, ಉಪಯುಕ್ತ ನೇಪಥ್ಯವೂ ಆಗಿದೆ. ಈ ಸಂಜೆಯ ಕಾರ್ಯಕ್ರಮದಲ್ಲಿ ಪ್ರಾಸ್ತಾವಿಕ ಭಾಷಣ ಮಾಡಿದವರು ಪ್ರಾಧ್ಯಾಪಕ ಹೆಚ್‌. ಎಸ್‌. ಶಿವಪ್ರಕಾಶ್‌ ಅವರೇ. ಭೀಮಸೇನ್‌ ಭಜಂತ್ರಿ ಅವರ ಸಂಗೀತ ನಿರ್ದೇಶನದಲ್ಲಿ ಭಾವಗೀತೆಗಳ ಗಾಯನ ನಡೆಯಿತು. ವಸುಂಧರಾ ಕನ್ನಡ ಕೂಟದವರಿಂದ ವಿಶೇಷ ಕಾರ್ಯಕ್ರಮವಿತ್ತು, ನವದೆಹಲಿಯ ಕನ್ನಡ ಮಹಿಳಾ ಕೂಟದವರಿಂದ ಸಮೂಹ ಗೀತೆ ಇತ್ತು. ಬಿ. ವಿ. ಅಡ್ಕೋಳಿ ಅವರಿಂದ ಕಾರ್ಯಕ್ರಮ ನಿರೂಪಣೆ ನಡೆಯಿತು. ಮೈಸೂರಿನಿಂದ ತರಿಸಿಕೊಂಡಿದ್ದ ಕವಿ ಕೆ. ಎಸ್‌. ನರಸಿಂಹ ಸ್ವಾಮಿಗಳ ಭಾವಚಿತ್ರವೊಂದು ಅಲ್ಲಿ ಅನಾವರಣಗೊಂಡಿತು.

ದೆಹಲಿಯ ಉಚ್ಚನ್ಯಾಯಾಲದ ನ್ಯಾಯಾಧೀಶರಾಗಿ ಇತ್ತೀಚೆಗೆ ನೇಮಕಗೊಂಡ ಕಾಸರಗೋಡಿನ ಕನ್ನಡಿಗ ನ್ಯಾಯಮೂರ್ತಿ ಎನ್‌. ರವೀಂದ್ರ ಭಟ್ಟರನ್ನು ಕುರಿತು ಇರುವ ಲೇಖನ ಅವರನ್ನು ಚೆನ್ನಾಗಿ ಪರಿಚಯಿಸುತ್ತದೆ. ದೆಹಲಿಯಲ್ಲಿ ನಡೆದ ಹಿಂಸಾತ್ಮಕ ಗೊಂದಲವಾಗಿರಲಿ, ನಾಗಾ ಜನರ ಹಕ್ಕು-ಬಾಧ್ಯತೆಗಳ ಪ್ರಶ್ನೆಯಾಗಿರಲಿ, ಅಲ್ಪಸಂಖ್ಯಾತರ ಸವಲತ್ತುಗಳಾಗಿರಲಿ- ನೊಂದವರ ಪರವಾಗಿ ನ್ಯಾಯಾಲಯಗಳಲ್ಲಿ ನಿರಂತರ ಹೋರಾಟ ನಡೆಸಿ, ಬುದ್ಧಿಮತ್ತೆಯನ್ನು ಮೆರೆಸಿ, ಜಯಿಸಿ, ಪರಿಹಾರ ಒದಗಿಸಿಕೊಟ್ಟ ಖ್ಯಾತಿ ನ್ಯಾಯವಾದಿ ಭಟ್ಟರದು. ಈಗವರು ಉಚ್ಚನ್ಯಾಯಾಲದ ನ್ಯಾಯಾಧೀಶರು. ಇದು ಕನ್ನಡಿಗರೆಲ್ಲರ ಹೆಮ್ಮೆಯ ವಿಷಯ.

ಅಂತೆಯೇ, ರಾಜ್ಯಸಭೆಯ ಉಪಾಧ್ಯಕ್ಷಸ್ಥಾನವನ್ನು ಅಲಂಕರಿಸಿರುವ ಕನ್ನಡಿಗ ರೆಹಮಾನ್‌ ಖಾನ್‌ ಬಗ್ಗೆಯೂ ಒಂದು ಅಭಿನಂದನಾ ಲೇಖನ ಇಲ್ಲಿದೆ. ಇದಲ್ಲದೆ, ದೆಹಲಿ ಕರ್ನಾಟಕ ಸಂಘವು ಕನ್ನಡ ಶಾಲೆಯ ಆವರಣದಲ್ಲಿ ಆಯೋಜಿಸಿದ್ದ, ಏಳನೂರ ಐವತ್ತಕ್ಕೂ ಹೆಚ್ಚು ಮಂದಿ ನೆರೆದಿದ್ದ ಒಂದು ಅಭೂತಪೂರ್ವ ಸಮಾರಂಭ ಜುಲೈ ಹದಿನೈದರಂದು ನಡೆಯಿತು; ಅಲ್ಲಿ ಕೇಂದ್ರಸರ್ಕಾರದ ನಾಲ್ವರು ಮಂತ್ರಿಗಳೂ ಸೇರಿದಂತೆ ಒಟ್ಟು ಹದಿನೇಳು ಮಂದಿ ಕನ್ನಡಿಗ ಸಂಸತ್‌ ಸದಸ್ಯರಿಗೆ ಅಭಿನಂದನೆ ಸಲ್ಲಿಸುವ ಈ ಕಾರ್ಯಕ್ರಮದ ಸಚಿತ್ರ ವರದಿ ವೀಕ್ಷಕವಿವರಣೆಯಂತೆ ಓದಿಸಿಕೊಂಡು ಹೋಗುತ್ತದೆ. ಈ ಬಗ್ಗೆ ಬಿ ವಿ ಅಡ್ಕೋಳಿಯವರು ಪ್ರತಿಕ್ರಿಯಿಸಿದ್ದು ಸಮಂಜಸ: ಡಾ। ಬಿಳಿಮಲೆಯವರು ಅಂದು ಹೇಳಿದ, ‘ಒಂದು ಕೈಯಲ್ಲಿ ಬೆಂಕಿ(ದೀಪ), ಇನ್ನೊಂದು ಕೈಯಲ್ಲಿ ನೀರು ಹಿಡಿದು ನಾರಿಯಾಬ್ಬಳು ನಡೆದು ಬರುತ್ತಿರುವ’ ಮಾತು, ವಿರುದ್ಧಶಕ್ತಿಗಳ (‘ದೀಪವು ನಿನ್ನದೆ, ಗಾಳಿಯೂ ನಿನ್ನದೇ!’ ರೀತಿಯ) ಸಮನ್ವಯಕ್ಕೆ ಅದೆಂಥ ಸವಾಲೆಂಬುದನ್ನ ಸಮರ್ಥವಾಗಿ ಸಂಕೇತಿಸುತ್ತದೆ.

ಮಂಗಳೂರು ಕ್ಷೇತ್ರದಿಂದ ಲೋಕಸಭೆಗೆ ಆಯ್ಕೆಗೊಂಡಿರುವ ಸದಾನಂದ ಗೌಡರಿಗೆ ದೆಹಲಿಯ ಒಕ್ಕಲಿಗ ಗೌಡಸಂಘದವರು ಸನ್ಮಾನ ಮಾಡಿದುದರ ಬಗ್ಗೆ ಭಾರತಿ ನಾಗರಾಜರು ಬರೆದಿದ್ದಾರೆ; ಸಿ. ಎಂ ನಾಗರಾಜು ಅವರು, ಸಹಾಯಕ ಪೋಲಿಸ ಕಮೀಷನರ್‌ ಬಿ ಎಲ್‌ ಸುರೇಶರಿಗೆ ದೆಹಲಿ ಕನ್ನಡಿಗರ ಪೋಲಿಸ್‌ ಕಲ್ಯಾಣ ಸಂಘದವರು ಇತ್ತ ಬೀಳ್ಕೊಡುಗೆಯ ಸಮಾರಂಭದ ಬಗ್ಗೆ ಬರೆದಿದ್ದಾರೆ. ‘ಸೋಲಿಲ್ಲದ ಸರದಾರ’ನೆಂದು ಮನೆಮಾತಾಗಿದ್ದ ಅತ್ಯಂತ ಹಿರಿಯ ಲೋಕಸಭಾ ಸದಸ್ಯ ದಿವಂಗತ ರಾಮಚಂದ್ರ ವೀರಪ್ಪನವರ ಬಗ್ಗೆ ಒಂದು ಶ್ರದ್ಧಾಂಜಲಿ ಲೇಖನವಿದೆ.

‘ಓದುಗರ ಪತ’್ರಗಳ ಮಾಲೆಯೂ ಇಲ್ಲಿದೆ. ‘ಸಂಪಾದಕರ ನುಡಿ’ಯಲ್ಲಿ ವಸಂತ ಶೆಟ್ಟಿ ಬೆಳ್ಳಾರೆಯವರದ್ದೂ, ‘ನಾವು-ನೀವು’ನಲ್ಲಿ ಡಾ। ಪುರುಷೋತ್ತಮ ಬಿಳಿಮಲೆಯವರದ್ದೂ, ‘ಸಮಕ್ಷಮ’ದಲ್ಲಿ ಎಸ್‌ ಕೃಷ್ಣಭಟ್ಟರದ್ದೂ ಅಂಕಣ ಲೇಖನಗಳು ಚೆನ್ನಾಗಿ ಮೂಡಿ ಬಂದಿವೆ.

ದೆಹಲಿ ಕರ್ನಾಟಕ ಸಂಘ ಸಾಹಿತ್ಯಕ ಕಾರ್ಯಕ್ರಮಗಳನ್ನು ನಡೆಸುವಲ್ಲಿ ಹಿಂದೆ ಬಿದ್ದಿಲ್ಲ. ರೇಣುಕಾ ನಿಡಗುಂದಿಯವರು ಇಂತಹ ‘ಸಾಹಿತ್ಯಸಂಜೆ’ಯಾಂದನ್ನು ಬಲು ಸೊಗಸಾಗಿ ‘ಅಭಿಮತ’ದ ಈ ಸಂಚಿಕೆಯಲ್ಲಿ ವರದಿ ಮಾಡಿದ್ದಾರೆ. ದೆಹಲಿಯ ತುಲಾರಾಂ ಮರ್ಗದಲ್ಲಿ ಕನ್ನಡಸಂಘದ ಕಟ್ಟಡವೊಂದು ಮೇಲೇರುತ್ತಿದೆ. ಅದರ ತಳಾವರಣದಲ್ಲಿ ಜುಲೈ 30ರಂದು ನಡೆದದ್ದು ಈ ‘ಸಾಹಿತ್ಯಸಂಜೆ’. ಇಲ್ಲಿ ನಡೆದದ್ದು ಒಂದು ಉನ್ನತಮಟ್ಟದ ವಿಚಾರಗೋಷ್ಠಿ . ಭಾಗವಹಿಸಿದವರು ಕನ್ನಡಸಾಹಿತ್ಯದ ಉದ್ದಾಮ ಪಂಡಿತರು. ಹಂಪಿ ವಿಶ್ವವಿದ್ಯಾಲಯದ ಡಾ। ವಿಠಲರಾವ್‌ ಗಾಯಕವಾಡ (ಭಾಷಾಂತರ ವಿಭಾಗ), ಡಾ। ವೀರೇಶ ಬಡಿಗೇರ (ಹಸ್ತಪ್ರತಿಶಾಸ್ತ್ರ ವಿಭಾಗ), ಪ್ರಾ। ವಿ.ವಿ.ನಾವುಡ (ಹಸ್ತಪ್ರತಿ ಶಾಸ್ತ್ರ ವಿಭಾಗ), ಕುವೆಂಪು ವಿಶ್ವವಿದ್ಯಾಲಯದ ಪ್ರೊ। ತೀ ನಂ. ಶಂಕರನಾರಾಯಣ (ನಿರ್ದೇಶಕರು, ಕನ್ನಡ ವಿಭಾಗ), ಡಾ। ಕೆ. ಎಂ. ಮೈತ್ರಿ (ಮುಖ್ಯಸ್ಥರು, ಬುಡಕಟ್ಟು ಅಧ್ಯಯನ ವಿಭಾಗ) ಡಾ।ಬೋರಲಿಂಗಯ್ಯ (ಬುಡಕಟ್ಟು ಅಧ್ಯಯನ ವಿಭಾಗ), ಪ್ರೊ. ಕರೀಗೌಡ ಬೀಚನಹಳ್ಳಿ (ಭಾಷಾಂತರ ವಿಭಾಗ) ಮತ್ತು ಡಾ।ಪ್ರೇಂ ಕುಮಾರ್‌ (ಸಹಾಯಕ ಕುಲಸಚಿವರು)- ಇವರೆಲ್ಲರೂ ಅಂದು ವೇದಿಕೆಯ ಮೇಲಿದ್ದರು. ಸಾಹಿತಿಗಳೊಂದಿಗೆ ಕಳೆದ ಇಂತಹದೊಂದು ಸಾಹಿತ್ಯಸಂಜೆ ಚಿರಸ್ಮರಣೀಯ ಎಂದು ಬಂದವರೆಲ್ಲರೂ ಉದ್ಗರಿಸುತ್ತಿದ್ದರೆಂದು ಲೇಖಕಿ ರೇಣುಕಾ ನಿಡಗುಂದಿಯವರು ತಿಳಿಸುತ್ತಾರೆ.

ದೆಹಲಿಯ ಕರ್ನಾಟಕ ಸಂಘದ ‘ಅಭಿಮತ’ ಸಾಹಿತ್ಯಪತ್ರಿಕೆ ಹೀಗೇ ಒಳ್ಳೊಳ್ಳೆಯ ಲೇಖನಗಳಿಂದ ಕೂಡಿ ನಿಲ್ಲದೆ ಪ್ರಕಟಗೊಳ್ಳುತ್ತಿರಲಿ- ಎಂದು ಆಶಿಸಿ, ಹಾರೈಸುವೆ!

ಮುಖಪುಟ / ಎನ್‌ಆರ್‌ಐ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X