ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಫ್ಲಾರಿಡಾ ಸಮ್ಮೇಳನಕ್ಕೆ ‘ನಗೆಗೊಳಲ’ ಪ್ರೊ.ಎಂ.ಕೃಷ್ಣೇಗೌಡರು

By Staff
|
Google Oneindia Kannada News
Shikaripura Harihareshwara, Mysore ಶಿಕಾರಿಪುರ ಕೆ. ಹರಿಹರೇಶ್ವರ,
ಸರಸ್ವತೀಪುರಂ, ಮೈಸೂರು

[email protected]

ಹಳ್ಳಿಯಾಗಿರಲಿ, ಪಟ್ಟಣವಾಗಿರಲಿ, ನಗರವಾಗಿರಲಿ ಈಗ ಕರ್ನಾಟಕದಲ್ಲಿ ಯಾರ ಭಾಷಣವೆಂದರೆ ಜನ ದೂರದೂರದಿಂದ ಸಭೆ ಆರಂಭವಾಗುವ ಮೊದಲೇ ಬಂದು ನೆರೆದು, ಸಭಾಂಗಣ ತುಂಬಿ ತುಳುಕಾಡುತ್ತಾ ಇರುತ್ತದೋ ಅಲ್ಲಿ ಪ್ರೊ. ಎಂ.ಕೃಷ್ಣೇಗೌಡರು ಇರಲೇಬೇಕು; ಈ ಜನಪ್ರಿಯ ನಗೆಸಾಹಿತಿ ಕೃಷ್ಣೇಗೌಡರು ಮೈಸೂರಿನ ಸಂತ ಫಿಲೋಮಿನಾ ಕಾಲೇಜಿನಲ್ಲಿ ಕನ್ನಡ ಪ್ರಾಧ್ಯಾಪಕರು.

ಪಂಡಿತರನ್ನೂ ಪಾಮರರನ್ನೂ ಸಮಾನವಾಗಿ ಉಲ್ಲಾಸಮಯ ವಾತಾವರಣದಲ್ಲಿ ತಿಳಿಹಾಸ್ಯದ ಹೊನಲಿನಲ್ಲಿ ಈಜಾಡಿಸುವ ಕೃಷ್ಣೇಗೌಡರು ಹುಟ್ಟಿದ್ದು ಮಂಡ್ಯ ಜಿಲ್ಲೆ ಪಾಂಡವಪುರ ತಾಲ್ಲೂಕ್‌ ‘ಕನಗನ ಮರಡಿ’ ಎಂಬ ಗ್ರಾಮದಲ್ಲಿ (ಜನನ: ಡಿಸೆಂಬರ್‌ 18, 1958). ಅವರ ತಂದೆ, ಮರೀಗೌಡರು; ತಾಯಿ, ಶ್ರೀಮತಿ ದೇವಮ್ಮನವರು.

ಇವರ ಬಾಲ್ಯದ ವಿದ್ಯಾಭ್ಯಾಸ ನಡೆದುದೆಲ್ಲಾ ಸ್ವಗ್ರಾಮದಲ್ಲೇ. ಆಮೇಲೆ, ಪಾಂಡವಪುರದ ವಿಜಯ ಪ್ರೌಢಶಾಲೆಯಲ್ಲಿ , ನಂತರ ಮೈಸೂರಿನ ಶಾರದಾ ವಿಲಾಸ ಕಾಲೇಜಿನಲ್ಲಿ ಮತ್ತು ಯುವರಾಜ ಕಾಲೇಜಿನಲ್ಲಿ ವ್ಯಾಸಂಗ. ಮೊದಲು ವಿಜ್ಞಾನದ ವಿದ್ಯಾರ್ಥಿಯಾಗಿ ಬಿ. ಎಸ್‌ಸಿ. ಪದವಿ ಪಡೆದರೂ, ಆನಂತರ ಮಾನಸಗಂಗೋತ್ರಿಯ ಕನ್ನಡ ಅಧ್ಯಯನ ಸಂಸ್ಥೆಯಲ್ಲಿ ಕನ್ನಡ ಆರಿಸಿಕೊಂಡು, ಎಂ. ಎ., ಪದವಿಯನ್ನು (1982ರಲ್ಲಿ) ಪ್ರಥಮ ರ್ಯಾಂಕ್‌ ಮತ್ತು ಚಿನ್ನದ ಪದಕಗಳೊಂದಿಗೆ ಪಡೆದು ಕೃಷ್ಣೇಗೌಡರು ನಡೆದರು.

ಕೃಷ್ಣೇಗೌಡರು ಮೈಸೂರಿನ ಸಂತ ಫಿಲೋಮಿನಾ ಕಾಲೇಜಿನಲ್ಲಿ ಕನ್ನಡ ಅಧ್ಯಾಪಕರಾಗಿ ವೃತ್ತಿ ಆರಂಭಿಸಿದ್ದು 1983ರಲ್ಲಿ ; ಈಗ ಅದೇ ಕಾಲೇಜಿನಲ್ಲಿ ವಿದ್ಯಾರ್ಥಿಗಳ ಮೆಚ್ಚುಗೆಯ ಕನ್ನಡ ಪ್ರಾಧ್ಯಾಪಕರಾಗಿದ್ದಾರೆ.

ವಿದ್ಯಾರ್ಥಿ ದೆಸೆಯಿಂದಲೇ ಚರ್ಚಾಪಟುವಾಗಿ, ಹಾಡುಗಾರನಾಗಿ, ನಟನಾಗಿ ರಾಜ್ಯ, ರಾಷ್ಟ್ರಮಟ್ಟದ ಹಲವಾರು ಸ್ಪರ್ಧೆಗಳಲ್ಲಿ ಭಾಗವಹಿಸಿದ, ನೂರಾರು ಬಹುಮಾನಗಳ ವಿಜೇತರು ಇವರು. 1979ರಲ್ಲಿ ಮಂಡ್ಯ ಜಿಲ್ಲಾ ವಿದ್ಯಾರ್ಥಿ ಬಳಗದಿಂದ ‘ಪ್ರತಿಭಾ ವೀರ’ ಪ್ರಶಸ್ತಿಪಡೆದರು. ಮಾನಸಗಂಗೋತ್ರಿಯಲ್ಲಿ ನಡೆದ ವಿವಿಧ ಪ್ರತಿಭಾ ಸ್ಪರ್ಧೆಗಳಲ್ಲಿ ಅತ್ಯಂತ ಹೆಚ್ಚು ಬಹುಮಾನ ಗಳಿಸಿದವರಿಗೆ ಒಂದು ಛಾಂಪಿಯನ್‌ಷಿಪ್‌ ಪಾರಿತೋಷಕ ಕೊಡುವ ಸಂಪ್ರದಾಯವಿತ್ತು ; ನಿಮ್ಮ ಊಹೆ ನಿಜ- 1981 ಮತ್ತು 1982 ರಲ್ಲಿ ಅದನ್ನು ಬುಟ್ಟಿಗೆ ಹಾಕಿಕೊಂಡವರೂ ಇವರೇ. ಇವೆಲ್ಲ ಸಾಧನೆಗಳ ಪರಿಣಾಮವಾಗಿ, 1983 ರಲ್ಲಿ ನವದೆಹಲಿಯ ಇಂಡಿಯಾ ಇಂಟರ್‌ ನ್ಯಾಷನಲ್‌ ರೂರಲ್‌ ಕಲ್ಚರಲ್‌ ಸೆಂಟರ್‌ನವರು ಏರ್ಪಡಿಸಿದ್ದ ರಾಷ್ಟ್ರಮಟ್ಟದ ಅಂತರ ವಿಶ್ವವಿದ್ಯಾನಿಲಯ ಪ್ರತಿಭಾ ಪ್ರದರ್ಶನದಲ್ಲಿ ಮೈಸೂರು ವಿಶ್ವವಿದ್ಯಾನಿಲಯವನ್ನು ಪ್ರತಿನಿಧಿಸಿದ್ದರು, ಪ್ರೇಕ್ಷಕರಿಂದ ವಿಶೇಷ ಮೆಚ್ಚುಗೆಯ ಪುರಸ್ಕಾರವನ್ನೂ ಪಡೆದಿದ್ದರು.

ವಿಶ್ವವಿದ್ಯಾನಿಲಯದ ವಿದ್ಯಾರ್ಥಿಯಾಗಿದ್ದಾಗ ಕೃಷ್ಣೇಗೌಡರು ಮೈಸೂರಿನ ‘ಹೊನ್ನಾರು ಜನಪದ ಗಾಯನ ವೃಂದ’ ದ ಪ್ರಧಾನ ಗಾಯಕನಾಗಿ ರಾಜ್ಯಾದ್ಯಂತ ಮೂಲಧಾಟಿಯಲ್ಲಿ ಜನಪದಗೀತೆಗಳ ಪ್ರಸಾರ ಕೈಗೊಂಡಿದ್ದರು. 1982 ರಿಂದ 1986 ರವರೆಗೆ ಮೈಸೂರು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಕಾರ್ಯದರ್ಶಿಯಾಗಿಯೂ ಕರ್ತವ್ಯ ನಿರ್ವಹಿಸಿದ್ದರು. ಮತ್ತು , 1996-97ರಲ್ಲಿ ಕರ್ನಾಟಕ ಸರ್ಕಾರದ ನಿಯೋಜನೆ ಮೇರೆಗೆ ಮೈಸೂರು ಜಿಲ್ಲಾ ಸಾಕ್ಷರತಾ ಆಂದೋಲನದ ಮುಖ್ಯ ಸಂಯೋಜನಾಧಿಕಾರಿಯಾಗಿ ಪ್ರೇರಣೆ, ಸಂಘಟನೆ, ಮತ್ತು ಸಾಕ್ಷರತಾ ಸಾಮಾಗ್ರಿ ನಿರ್ಮಾಣ ಚಟುವಟಿಕೆಗಳನ್ನು ಯಶಸ್ವಿಯಾಗಿ ನಡೆಸಿದರು. 1999ರಲ್ಲಿ ತಮಿಳುನಾಡಿನ ತಿರುಚಿರಾಪಳ್ಳಿಯಲ್ಲಿ ‘ಕಾವೇರಿ-ಎ ಲಿವಿಂಗ್‌ ಮ್ಯೂಸಿಯಂ’ ಎಂಬ ವಿಷಯದ ಬಗ್ಗೆ ನಡೆದ ರಾಷ್ಟ್ರೀಯ ವಿಚಾರ ಸಂಕಿರಣದ ಮುಖ್ಯ ಭಾಷಣಕಾರನಾಗಿ ಮಂಡಿಸಿದ ಇವರ ಪ್ರಬಂಧ ವಿಶೇಷ ಮೆಚ್ಚುಗೆ ಪಡೆಯಿತು.

ಕೃಷ್ಣೇಗೌಡರು ಒಳ್ಳೆಯ ಮಾತುಗಾರರು, ಮೇಲಾಗಿ ಆಶುಭಾಷಣಕಾರರು; ಹಾಗಾಗಿ, ಆಕಾಶವಾಣಿ ಮತ್ತು ದೂರದರ್ಶನಗಳಲ್ಲಿ ಹಲವಾರು ಬಾರಿ ಮೈಸೂರು ದಸರಾ ಮೆರವಣಿಗೆಯ ವೀಕ್ಷಕ ವಿವರಣೆಗೆ ಇವರನ್ನೇ ಆರಿಸಿಕೊಂಡರು. ಆಕಾಶವಾಣಿಯಲ್ಲಿ ಗಾಯನ, ಭಾಷಣ, ಹರಟೆ, ನಾಟಕ ಮುಂತಾದ ಕಾರ್ಯಕ್ರಮಗಳಲ್ಲದೆ ದೂರದರ್ಶನದ ಹಲವಾರು ಕಾರ್ಯಕ್ರಮಗಳಲ್ಲಿ ಇವರು ಪಾಲುಗೊಂಡಿದ್ದಾರೆ. ಉದಯ ಟಿ. ವಿ. ಯ ‘ಚಿಂತಕರ ಚಾವಡಿ’ ಯಲ್ಲಿ ಹಲವು ಬಾರಿ ಸಾಹಿತ್ಯಕ ಹರಟೆ ನಡೆಸಿದ್ದಾರೆ. ಈ-ಟಿವಿ ದೂರದರ್ಶನದ ‘ಅಣ್ಣ ಬಸವಣ್ಣ’ ಮೆಗಾ ಧಾರವಾಹಿಯಲ್ಲಿ ‘ಬಿಜ್ಜಳ’ನ ಪಾತ್ರ ವಹಿಸಿದ್ದರು. ಅದೇ ದೂರದರ್ಶನ ವಾಹಿನಿಯ ‘ಪಾ. ಪ. ಪಾಂಡು’ ಮತ್ತು ಇತರ ಧಾರಾವಾಹಿಗಳಲ್ಲೂ ಅಭಿನಯಿಸಿದ್ದಾರೆ. ಇತ್ತೀಚೆಗೆ ಬೆಂಗಳೂರು ದೂರದರ್ಶನ ಕೇಂದ್ರದ ‘ಬೆಳಗು’ ಕಾರ್ಯಕ್ರಮದಲ್ಲಿ ಇವರ ಸಂದರ್ಶನವೂ ನಡೆಯಿತು.

ಈವರೆಗೆ ಕೃಷ್ಣೇಗೌಡರ ನಾಲ್ಕು ಧ್ವನಿಸುರಳಿಗಳು ಬಿಡುಗಡೆಯಾಗಿವೆ: ‘ಮಲೆಮಾದೇಶ್ವರ’, ‘ಹಾಡೋ ಮುತ್ತಿನರಗಿಣಿ’, ‘ಹಾಲರವಿ ಬಂದೋ’ (ಜನಪದ ಗೀತೆ) ಮತ್ತು ‘ಕಾಮೆಂಟ್ರಿ ಕೆಂಪಣ್ಣ’ (ಹಾಸ್ಯ).

ಭಾಷಣಕಾರರಾಗಿ ರಾಜ್ಯದ ಎಲ್ಲಾ ಊರುಗಳನ್ನು ಕೃಷ್ಣೇಗೌಡರು ಸುತ್ತಿಬಂದಿದ್ದಾರೆ; ಅಲ್ಲೆಲ್ಲಾ ಸಾಹಿತ್ಯ, ಧಾರ್ಮಿಕ, ಶೈಕ್ಷಣಿಕ, ಸಾಂಸ್ಕೃತಿಕ ಮತ್ತು ಹಾಸ್ಯ ವಿಷಯಗಳಲ್ಲಿ ಸಾವಿರಾರು ವೇದಿಕೆಗಳಿಂದ ಭಾಷಣ ಮಾಡಿದ್ದಾರೆ. ಲಕ್ಷಾಂತರ ಜನ ಪಾಲ್ಗೊಳ್ಳುವ ‘ತರಳಬಾಳು ಹುಣ್ಣಿಮೆ’ ಮತ್ತು ‘ಶಿವರಾತ್ರಿಶ್ವರ ಜಯಂತಿ’ ಕಾರ್ಯಕ್ರಮದಲ್ಲಿ ಹನ್ನೆರಡು ವರ್ಷಗಳಿಂದ ಪ್ರತೀ ವರ್ಷ ನಿರಂತರ ಭಾಷಣ ಮಾಡುತ್ತಿರುವುದು ಕೃಷ್ಣೇಗೌಡರು ನಿರ್ಮಿಸಿರುವ ಒಂದು ದಾಖಲೆಯಾಗಿದೆ!

ಮೈಸೂರಿನಿಂದ ಪ್ರಕಟವಾಗುವ ‘ಮೈಸೂರು ದಿಗಂತ’ ಪತ್ರಿಕೆಯಲ್ಲಿ ಸತತವಾಗಿ ಐದು ವರ್ಷಗಳ ಕಾಲ ದಿನಕ್ಕೊಂದು ‘ಕವಣೆಕಲ್ಲು’ (ಹನಿ ಗವನ); ವಾರಕ್ಕೊಂದು ‘ಬೆಳಕಂಚು’ (ವ್ಯಕ್ತಿ ಚಿತ್ರ) ಮತ್ತು ‘ಚಿಟುಕುಮುಳ್ಳು’ (ಸಂಕೀರ್ಣ ಬರಹಗಳು) ಎಂಬ ಅಂಕಣಗಳಲ್ಲಿ ಇವರು ಬರೆಯುತ್ತಿದ್ದರು.

ಇವರ ಹಲವಾರು ಕತೆ, ಕವಿತೆ, ವಿಮರ್ಶೆ, ಹಾಸ್ಯ ಹಾಗೂ ಚಿಂತನ ಬರಹಗಳು ವಿವಿಧ ಪತ್ರಿಕೆಗಳಲ್ಲಿ, ಗ್ರಂಥಗಳಲ್ಲಿ ಪ್ರಕಟವಾಗಿದೆ. ಅಲ್ಲದೆ ಹಲವಾರು ಸಾಹಿತ್ಯಕ ಕೃತಿಗಳ ಮತ್ತು ಸಂಸ್ಮರಣಾ ಗ್ರಂಥಗಳ ಸಂಪಾದಕನಾಗಿಯೂ ಕೆಲಸ ನಿರ್ವಹಿಸಿದ್ದಾರೆ. ಕೃಷ್ಣೇಗೌಡರ ‘ಕವಣೆ ಕಲ್ಲು’ ಹನಿಗವನಗಳ ಸಂಕಲನ ಪ್ರಕಟವಾಗಿದೆ (1998, ಮಳಲಿ ಪ್ರಕಾಶನ, ಮೈಸೂರು).

ಮೈಸೂರಿನಲ್ಲಿ ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಚಿತ ತರಬೇತಿ ನೀಡುವ ‘ಜ್ಞಾನಬುತ್ತಿ’ ಎಂಬ ಒಂದು ಅಪರೂಪದ ಸಾಹಿತ್ಯ, ಸಂಸ್ಕೃತಿ, ಶಿಕ್ಷಣ ಪ್ರಸಾರದ ಸಂಸ್ಥೆ ತುಂಬಾ ಸ್ತುತ್ಯರ್ಹ ಕೆಲಸ ಮಾಡುತ್ತಿದೆ. ಅದರ ಸ್ಥಾಪಕರಲ್ಲೊಬ್ಬರಾಗಿ ಕೃಷ್ಣೇಗೌಡರು 1986 ರಿಂದಲೂ ಕನ್ನಡ ಎಂ. ಎ. ಮತ್ತು ಸಂಸ್ಥೆಯ ಇನ್ನಿತರ ಬೋಧಕ ಕಾರ್ಯಕ್ರಮಗಳಲ್ಲಿ ಭಾಗಿಯಾಗಿದ್ದಾರೆ.

ಕೃಷ್ಣೇಗೌಡರ ಇವೆಲ್ಲ ಸಾಧನೆಗಳನ್ನ ಗುರುತಿಸಿ, ವಿವಿಧ ಕನ್ನಡ ಸಂಘಗಳು, ರೋಟರಿ, ಲಯನ್ಸ್‌ ಮುಂತಾದ ಸೇವಾ ಸಂಸ್ಥೆಗಳು, ಪ್ರಶಸ್ತಿ ಪುರಸ್ಕಾರಗಳನ್ನು ನೀಡಿ ಕೃಷ್ಣೇಗೌಡರನ್ನು ಸನ್ಮಾನಿಸಿ, ಗೌರವಿಸಿವೆ. ಸಂತೃಪ್ತ ಜೀವನ ನಡೆಸುತ್ತಿರುವ ಕೃಷ್ಣೇಗೌಡರದು ಸುಖೀ ಸಂಸಾರ. ಪತ್ನಿ ಕಲ್ಪನಾ ಮತ್ತು ಮಕ್ಕಳು ಸಿಂಚನ ಸುಗಂಧಿನಿ(15), ಸುಗಮ ಸುಹಾಸಿನಿ(12) ಅವರೊಂದಿಗೆ ಕನ್ನಡದ ಸಾಂಸ್ಕೃತಿಕ ರಾಜಧಾನಿಯಾದ ಮೈಸೂರಿನಲ್ಲಿ ವಾಸಿಸುತ್ತಿದ್ದಾರೆ.

ಮಂಬರುವ ಸೆಪ್ಟೆಂಬರ್‌ ಮೊದಲ ವಾರದಲ್ಲಿ ಅಮೆರಿಕಾದಲ್ಲಿ ನಡೆಯಲಿರುವ ಫ್ಲಾರಿಡಾದ ವಿಶ್ವಕನ್ನಡಸಮ್ಮೇಳನದಲ್ಲಿ ಭಾಗವಹಿಸಲು ಆಹ್ವಾನಿತ ಅತಿಥಿಯಾಗಿ ಪ್ರೊಫೆಸರ್‌ ಕೃಷ್ಣೇಗೌಡರು ಪ್ರವಾಸ ಹೊರಟಿದ್ದಾರೆ. ಸದ್ಯಕ್ಕೆ, 2004ರ ಸೆಪ್ಟೆಂಬರ್‌ ಇಪ್ಪತ್ತೊಂದರವರೆಗೆ ಅಮೆರಿಕಾದಲ್ಲಿರುವ ಅಭಿಪ್ರಾಯ ಇವರದು. ವಿಶ್ವಕನ್ನಡಸಮ್ಮೇಳನದಲ್ಲಿಯೂ, ಅಮೆರಿಕಾದ ವಿವಿಧ ಕನ್ನಡ ಸಂಘಸಂಸ್ಥೆಗಳ ವೇದಿಕೆಗಳಿಂದಲೂ ಇವರ ಹಾಸ್ಯಪೂರಿತ ವಿದ್ವತ್ಪೂರ್ಣ ಭಾಷಣಗಳನ್ನು ಕೇಳುವ ಸದವಕಾಶ ಅಮೆರಿಕಾದ ಕನ್ನಡಿಗರಿಗೆ ಮೊಟ್ಟಮೊದಲಬಾರಿಗೆ ಒದಗುತ್ತಿರುವುದು ಅಲ್ಲಿನ ಸಾಹಿತ್ಯಾಸಕ್ತರೆಲ್ಲರ ಸುದೈವ!

***

ಕೃಷ್ಣೇಗೌಡರ ವಿಳಾಸ :

ಕಚೇರಿ : ಪ್ರೊ. ಎಂ. ಕೃಷ್ಣೇಗೌಡ, ಪ್ರಾಧ್ಯಾಪಕ, ಕನ್ನಡ ವಿಭಾಗ, ಸಂತ ಫಿಲೋಮಿನಾ, ಕಾಲೇಜು, ಮೈಸೂರು- 570015 :

ಮನೆ : ನಂ.1779, ‘ಕಲಾಕೃಷಿ’, 4ನೇ ಮುಖ್ಯರಸ್ತೆ, ಹಂಪಿ ಸರ್ಕಲ್‌ ಹತ್ತಿರ, ಹೆಬ್ಬಾಳು 2ನೇ ಹಂತ, ಮೈಸೂರು-570017 :: ಫೋನ್‌: ಅಮೆರಿಕಾದಿಂದ: 011-91-821-2490728(ಕಾಲೇಜು); 2301084 (ಮನೆ)

ವಿ-ಅಂಚೆ: [email protected]

ಮುಖಪುಟ / ಎನ್‌ಆರ್‌ಐ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X