• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

‘ವಿದೇಶದಲ್ಲಿ ಕನ್ನಡದ ಸ್ಥಿತಿ-ಗತಿ’ ವಿಚಾರ ಸಂಕಿರಣದ ಬಗ್ಗೆ ನಾಲ್ಕು ಮಾತು

By ಶಿಕಾರಿಪುರ ಹರಿಹರೇಶ್ವರ
|

ಹೊರದೇಶಗಳಲ್ಲಿ ಕನ್ನಡದ ಸ್ಥಿತಿ-ಗತಿ’ ಕುರಿತು ಮೇ ಹದಿನಾಲ್ಕರಂದು- ‘ಉಪಾಸನಾ’ ಮತ್ತು ‘ಅಂಜಲಿ’ ಗಳ ಸಂಯುಕ್ತ ಆಶ್ರಯದಲ್ಲಿ , ಬೆಂಗಳೂರಿನಲ್ಲಿ ವಿಚಾರ ಸಂಕಿರಣವೊಂದು ನಡೆಯಿತಷ್ಟೆ. ಅದರಲ್ಲಿ ಮಾನ್ಯರಾದ ಡಾ. ಯು.ಆರ್‌. ಅನಂತಮೂರ್ತಿಗಳು, ಡಾ. ಜಿ.ಎಸ್‌. ಶಿವರುದ್ರಪ್ಪನವರು, ಡಾ. ಎನ್‌. ಎಸ್‌. ಲಕ್ಷ್ಮೀನಾರಾಯಣ ಭಟ್ಟರು, ಡಾ. ಬಿ.ಸಿ. ರಾಮಚಂದ್ರ ಶರ್ಮರು, ಡಾ. ಎಚ್‌. ನಾಗ ಐತಾಳರು, ಮತ್ತು ನಾನು (ಎಸ್‌. ಕೆ. ಹರಿಹರೇಶ್ವರ) ಆಹ್ವಾನಿತರಾಗಿ ಹೋಗಿ ಭಾಗವಹಿಸಿದ್ದೆವು.

ಸಂಕಿರಣದ ಬಗ್ಗೆ ‘ವಿಜಯ ಕರ್ನಾಟಕ’, ‘ಪ್ರಜಾವಾಣಿ’, ‘ಕನ್ನಡಪ್ರಭ’ ಮೊದಲಾದ ಪತ್ರಿಕೆಗಳಲ್ಲಿ ಪ್ರಕಟಿತ ವರದಿಯನ್ನು ಓದಿದ್ದೇನೆ; ಅಂತರ್ಜಾಲ ತಾಣಗಳಲ್ಲಿ ಪತ್ರಿಕೆಗಳಲ್ಲಿ- ಬಂದ ವರದಿಗಳನ್ನೂ ಓದಿದ್ದೇನೆ. ಅದನ್ನು ಕುರಿತು ದಟ್ಸ್‌ಕನ್ನಡ.ಕಾಂನಲ್ಲಿ ಬಿಸಿ ಬಿಸಿ ಚರ್ಚೆ ನಡೆಯುತ್ತಿರುವುದನ್ನು ನಾನು ಗಮನಿಸಿದ್ದೇನೆ.

ಈ ಚರ್ಚೆ ಪ್ರಾರಂಭವಾಗಿ ಮೊಳಕೆಯಾಡತೊಡಗಿದ ದಿನಗಳಲ್ಲೇ ನಾನು ನ ಪ್ರಧಾನ ಸಂಪಾದಕರಿಗೆ ಒಂದು ವಿಚಾರವನ್ನು ಸಲಹೆ ಮಾಡಿದೆ; ಕಾರ್ಯಕ್ರಮವನ್ನು ವ್ಯವಸ್ಥೆ ಮಾಡಿದವರಲ್ಲಿ ಒಬ್ಬರಾದ ‘ಉಪಾಸನಾ’ ನಿರ್ದೇಶಕರಿಗೂ, ಅದನ್ನೇ ಹೇಳಿದೆ. ನಾನು ಕೊಟ್ಟ ಆ ಸಲಹೆ ಏನೆಂದರೆ: ಹೇಗೂ ಕಾರ್ಯಕ್ರಮದ ವೀಡಿಯೋ ತೆಗಿದಿದ್ದೀರಿ; ಭಾಗವಹಿಸಿದ ಎಲ್ಲರ ಭಾಷಣಗಳ ಪೂರ್ಣ ಪಾಠವನ್ನು, ಆದಷ್ಟು ಬೇಗ, ಒಂದೊಂದಾಗಿ ಏಕೆ ನಿಮ್ಮ ಜಾಲತಾಣದಲ್ಲಿ ಪ್ರಕಟಿಸ ಬಾರದು? ಸಾಮಾನ್ಯವಾಗಿ, ಪ್ರಕಟಿತ ವರದಿಗಳು, ಯಾವದೇ ಪತ್ರಿಕೆಯಲ್ಲಾಗಲೀ, ಸಂಕ್ಷಿಪ್ತವಾಗಿ ಇರುತ್ತವೆ. ಯಾರು ಯಾರು ಏನು ಏನು ಹೇಳಿದರು- ಎಂಬುದರ ಪೂರ್ಣ ಪಾಠ ಓದುಗರಿಗೆ ಲಭ್ಯವಾದರೆ, ಊಹಾಪೋಹಗಳಿಗೆ ಕಡಿವಾಣ ಬೀಳುತ್ತೆ, ವಾತಾವರಣ ತಿಳಿಯಾಗುತ್ತೆ- ಎಂದು.

ಇನ್ನೂ ಆ ಸಲಹೆ ಕಾರ್ಯಗತವಾದಂತೆ ತೋರುವುದಿಲ್ಲ. ಹೀಗಾಗಲು ಕಾರಣಗಳು ಹಲವಿರಬಹುದು. ಅವುಗಳನ್ನು ಇಲ್ಲಿ ನಾನು ಚರ್ಚಿಸ ಹೊರಟಿಲ್ಲ. ಭಾಗವಹಿಸಿದವರಿಂದ ಸ್ಪಷ್ಟೀಕರಣ ಲೇಖನಗಳು ಪ್ರಕಟಿತವಾದರೆ ಒಳಿತೇನೋ; ಇದನ್ನೇ ಮಾತನಾಡಿದವರೊಂದಿಗೂ ಆಗಲೇ ಹೇಳಿದ್ದೇನೆ. ಆ ದಿಶೆಯಲ್ಲಿ ಒಂದು ಸಣ್ಣ ಪ್ರಯತ್ನ, ನನ್ನ ಈ ಲೇಖನ.

*

ವಿಚಾರ ಸಂಕಿರಣದಲ್ಲಿ ಎಲ್ಲರಿಗಿಂತ ಮೊದಲು ಮಾತನಾಡಿದವರು ಡಾ. ಲಕ್ಷ್ಮೀನಾರಾಯಣ ಭಟ್ಟರು. ಭಟ್ಟರ ಭಾಷಣ ಅಮೆರಿಕಾದ ಕನ್ನಡಿಗರಿಗೆ ಸೀಮಿತವಾಗಿದ್ದು, ಗಂಭೀರವೂ ವಿಚಾರಾತ್ಮಕವೂ ಆಗಿತ್ತು. ನಾನು ಅದನ್ನು ಲಕ್ಷ್ಯ ಕೊಟ್ಟು ಕೇಳಿದ್ದಲ್ಲದೆ ಅವರು ಮಾಡಿಕೊಂಡಿದ್ದ ಟಿಪ್ಪಣಿಗಳ ಹಾಳೆಗಳನ್ನೂ ಕೇಳಿ ತೆಗೆದುಕೊಂಡು ಬಂದಿದ್ದೆ. ಅದನ್ನೆಲ್ಲ ಆಧರಿಸಿ ಶ್ರೀ ಭಟ್ಟರು ಮಾಡಿದ ಭಾಷಣದ ಸಾರಾಂಶವನ್ನು ಕೆಳಗೆ ಕೊಡುತ್ತಿದ್ದೇನೆ. ಅದು ಹೀಗಿದೆ:

‘ನಾನು (ಲಕ್ಷ್ಮೀನಾರಾಯಣ ಭಟ್ಟರು) ಎರಡು ಸಲ ಅಮೇರಿಕಕ್ಕೆ ಹೋಗಿಬರುವ ಅವಕಾಶ ಒದಗಿತ್ತು. ಅಲ್ಲಿದ್ದಾಗ ನಾನು ಪೂರ್ತಿಯಾಗಿ ಅಮೇರಿಕನ್ನಡಿಗರ ನಡುವೆಯೇ ಇದ್ದೆ. ನ್ಯೂಯಾರ್ಕ್‌, ನ್ಯೂಜರ್ಸಿ, ಬಾಸ್ಟನ್‌, ಕಾಗೋ, ಲಾಸ್‌ ಏಂಜಲೀಸ್‌ ಮೊದಲಾದ ಹದಿನಾಲ್ಕು ನಗರಗಳಲ್ಲಿ ಓಡಾಡಿ ಅವರ ಜೀವನವನ್ನು ಪ್ರತ್ಯಕ್ಷ ನೋಡಿದೆ. ಆ ಅನುಭವದಿಂದ ನನಗೆ ಅನಿಸಿದ್ದೆಂದರೆ, ‘ಅಲ್ಲಿಯ ಕನ್ನಡಿಗರು ತಮ್ಮ ನಾಡು, ಸಂಸ್ಕೃತಿ, ಸಾಹಿತ್ಯ, ಕಲೆ, ಭಾಷೆಗಳ ಬಗ್ಗೆ ತುಂಬಾ ಗಂಭೀರವಾದ ಕಾಳಜಿ ಇಟ್ಟುಕೊಂಡಿದ್ದಾರೆ, ಕನ್ನಡವನ್ನು ಕಾಪಾಡಿಕೊಳ್ಳಲು ಎಲ್ಲ ಪ್ರಯತ್ನಗಳನ್ನೂ ಮಾಡುತ್ತಿದ್ದಾರೆ’- ಎಂದು

‘ತವರು ನೆಲದ ಸಾಂಸ್ಕೃತಿಕ ಸ್ಮರಣೆಗಳನ್ನು ಉಳಿಸಿ ಕಾಪಾಡಿಕೊಳ್ಳುವ ಒಳತುಡಿತ ಎಲ್ಲರಲ್ಲೂ ಇರುತ್ತದೆ. ತನ್ನ ವಂಶ ನಾಡು, ದೇಶ ಎಲ್ಲದರ ಪೂರ್ವ ಚರಿತ್ರೆಯನ್ನೂ ವ್ಯಕ್ತಿ ತಿಳಿಯಬಯಸುತ್ತಾನೆ. ತನ ್ನ ವ್ಯಕ್ತಿತ್ವದ ಬೇರುಗಳನ್ನು ತಿಳಿಯುವ, ಆ ಮೂಲಕ ತನ್ನನ್ನು ಪೂರ್ತಿಯಾಗಿ ಅರಿಯುವ ತವಕ, ಕುತೂಹಲ ಅದು. ಅಲೆಕ್ಸ್‌ ಹೇಲಿ ಬರೆದ ರೂಟ್ಸ್‌ ಎಂಬ ಕಾದಂಬರಿ ಇದಕ್ಕೆ ನಿದರ್ಶನ. ಅಮೇರಿಕದ ಒಬ್ಬ ಕಪ್ಪು ಪ್ರಜೆ (ಆಫ್ರಿಕನ್‌ ಅಮೆರಿಕನ್‌) ತನ್ನ ಪೂರ್ವಿಕರ ಜೀವನ ವಿವರ ಅರಿಯಲು ಹಿಂದೆ ಅವರು ಬಾಳಿ ಬದುಕಿದ್ದ ಸ್ಥಳಗಳನ್ನು ಅರಸಿಕೊಂಡು ಹೋಗಿ, ಏನೆಲ್ಲ ಶ್ರಮಪಟ್ಟು ಕೃತಕೃತ್ಯನಾದ ರೋಮಾಂಚಕ ಕಥೆ ಅದು. ಆ ಕಥೆ ಚಲನಚಿತ್ರವಾಗಿ ಅಮೆರಿಕದ ಟೀವಿಯಲ್ಲಿ ಒಂದು ಮಧ್ಯಾಹ್ನ ಪ್ರಸಾರವೂ ಆಯಿತು. ಪ್ರಸಾರದ ಹೊತ್ತಿನಲ್ಲಿ ಅಮೇರಿಕದ ಮಹಾನಗರಗಳ ರಸ್ತೆಗಳೆಲ್ಲ ನಿರ್ಜನವಾಗಿ ಬಿಕೋ ಎನ್ನುತ್ತಿದ್ದವು. ಎಲ್ಲ ಜನ ತಮ್ಮ ಮನೆಗಳಲ್ಲಿ ಟೀವಿಗಳಿಗೆ ಕಣ್ಣು ಕೀಲಿಸಿಕೊಂಡು ಕುಳಿತಿದ್ದರು - ಕಪ್ಪು ಪ್ರಜೆಗಳು ಮಾತ್ರವಲ್ಲ ಬಿಳಿಯರೂ ಸಹ. ಕಾರಣ ಇಷ್ಟೆ. ತನ್ನ ಮೂಲದ ಬಗ್ಗೆ ಗಂಭೀರ ಕಳಕಳಿ, ಕುತೂಹಲ ತವಕ ಎಲ್ಲರಲ್ಲೂ ಇರುವುದು ಸಹಜ.’

ಇದರ ಜೊತೆಗೆ ಶ್ರೀ ಲಕ್ಷ್ಮೀನಾರಾಯಣ ಭಟ್ಟರು ಇ. ಫಿಷರ್‌ ಎಂಬ ಮಾರ್ಕ್ಸ್‌ಸಿಸ್ಟ್‌ ಕಲಾ ವಿಮರ್ಶಕನು ವ್ಯಕ್ತಿಗೆ ತನ್ನ ಮೂಲದ ಬಗ್ಗೆ ಇರುವ ಕುತೂಹಲ ಶ್ರದ್ಧೆಗಳ ಬಗ್ಗೆ ಕೆಲವು ಮಾತು ತಿಳಿಸಿದರು: ‘ಅಮೇರಿಕದಲ್ಲಿರುವ ಎಲ್ಲ ಅನ್ಯ ದೇಶದ ಜನರೂ ತಮಗೆ ಒಂದು ಪ್ರತ್ಯೇಕ ಅಸ್ತಿತ್ವ ಇದೆ ಎಂದು ಭಾವಿಸುತ್ತಾರೆ. ತಮ್ಮ ಸಂಸ್ಕೃತಿ, ಧರ್ಮ, ಮತೀಯ ವಿಧಿ, ಸಾಹಿತ್ಯ, ಭಾಷೆ ಎಲ್ಲವನ್ನೂ ಕಾಪಾಡಿಕೊಳ್ಳಲು ಯತ್ನಿಸುತ್ತಾರೆ. ಅಮೆರಿಕನ್ನಡಿಗರೂ ಹಾಗೆಯೇ. ತಮ್ಮ ಪ್ರಾಚೀನ ಸಂಸ್ಕೃತಿ, ಪರಂಪರೆ, ಸಾಹಿತ್ಯಗಳ ಬಗ್ಗೆ ಅವರಿಗೆ ಗಾಢವಾದ ಅರಿವು ಇದೆ. ಅವರು ಅದನ್ನು ಬಹಳ ಅಮೂಲ್ಯ ಎಂದು ಭಾವಿಸುತ್ತಾರೆ. ಆ ಸಂಬಂಧವಾದ ಚಟುವಟಿಕೆಗಳಿಗಾಗಿಯೇ ಮಾಡಿಕೊಂಡ ಸುಮಾರು ಮೂವತ್ತು ಕನ್ನಡ ಕೂಟಗಳು ಅಲ್ಲಿವೆ. ಉಗಾದಿ, ಗಣಪತಿ ಹಬ್ಬ, ದೀಪಾವಳಿ ಇಂಥ ಹಬ್ಬಗಳನ್ನೆಲ್ಲ ಮನೆಯಲ್ಲಿ ಮಾತ್ರವಲ್ಲದೆ ಕನ್ನಡ ಕೂಟಗಳಲ್ಲಿ ಒಟ್ಟಾಗಿ ಕೂಡಿ ಆಚರಿಸುತ್ತಾರೆ. ಶಾಸ್ತ್ರೀಯ ಸಂಗೀತ, ಕನ್ನಡ ಕವಿತೆ ಮೊದಲಾದುವನ್ನೆಲ್ಲ ಹಾಡುತ್ತಾರೆ. ಮಕ್ಕಳಿಂದ ನೃತ್ಯ ಕನ್ನಡ ನಾಟಕ ಮಾಡಿಸುತ್ತಾರೆ. ಇಲ್ಲಿಯಂತೆ ಭರತ ನಾಟ್ಯ, ಶಾಸ್ತ್ರೀಯ ಸಂಗೀತಗಳನ್ನು ಕಲಿಸುವ ಸೌಲಭ್ಯಗಳು ಅಲ್ಲಿ ಸಾಕಷ್ಟು ಇಲ್ಲದಿದ್ದರೂ, ಅದಕ್ಕಾಗಿ 50-60 ಮೈಲಿ ದೂರ ಮಕ್ಕಳನ್ನು ಕರೆದೊಯ್ದು ಶಿಕ್ಷಣ ಕೊಡಿಸುವವರೂ ಇದ್ದಾರೆ. ವಿಜಿಪ್ರಕಾಶ್‌, ರಮ್ಯಾಗಿರೀಶ್‌, ಆಶಾ ರಾಜಗೋಪಾಲ್‌ ಇವರೆಲ್ಲ ಅಲ್ಲಿರುವ ಅನೇಕ ಭರತ ನಾಟ್ಯ ಶಿಕ್ಷಕಿಯರಲ್ಲಿ ಕೆಲವರು ಮಾತ್ರ. ಇದಲ್ಲದೆ ಅಲ್ಲಿ ಎಪ್ಪತ್ತೈದಕ್ಕೂ ಮೀರಿ ಭಾರತೀಯ ದೇವಾಲಯಗಳಿವೆ. ಇತರ ಭಾರತೀಯರ ಜೊತೆ ಕನ್ನಡಿಗರೂ ತಮ್ಮ ಮಕ್ಕಳನ್ನು ಪದೆ ಪದೇ ಅಲ್ಲಿಗೆ ಕರೆದೊಯ್ದು ಭಾರತೀಯ ಸಂಸ್ಕಾರ ತಮ್ಮ ಮಕ್ಕಳಲ್ಲಿ ಚಿಕ್ಕಂದಿನಿಂದಲೇ ಬೇರೂರುವಂತೆ ಮಾಡಲು ವಿಶೇಷವಾಗಿ ಪ್ರಯತ್ನಿಸುತ್ತಾರೆ. ತಮ್ಮ ಮುಂದಿನ ಪೀಳಿಗೆಯೂ ಭಾರತೀಯ ಜೀವನ ಪದ್ಧತಿಯನ್ನು ತಿಳಿದಿರಬೇಕೆಂಬುದೇ ಇದೆಲ್ಲಕ್ಕೆ ಮೂಲ ಪ್ರೇರಣೆ.

ಈ ಮೇಲಿನ ಮಾತುಗಳನ್ನು ಹೇಳುವಾಗ ಲಕ್ಷ್ಮೀನಾರಾಯಣ ಭಟ್ಟರು ತಮಗೆ ಪರಿಚಿತರಾದ ಅಲ್ಲಿಯ ಕನ್ನಡಿಗರ ಜೀವನದ ಕೆಲವು ಘಟನೆಗಳ ನಿದರ್ಶನ ನೀಡಿದರು. ಹತ್ತಾರು ಕನ್ನಡ ಕೂಟಗಳ, ದೇವಾಲಯಗಳ ಬಗ್ಗೆ ಪ್ರಸ್ತಾಪಿಸಿದರು. ಈಶಾನ್ಯ ವಲಯ ಸಮ್ಮೇಳನ, ಫೀನಿಕ್ಸ್‌ ಸಮ್ಮೇಳನ, ಹ್ಯೂಸ್ಟನ್‌ ವಿಶ್ವ ಕನ್ನಡ ಸಮ್ಮೇಳನ, ಡೆಟ್ರಾಯಿಟ್‌ ವಿಶ್ವ ಕನ್ನಡ ಸಮ್ಮೇಳನಗಳ ಬಗ್ಗೆ ಕೆಲವು ಮಾತು ಹೇಳಿದರು. ಅಲ್ಲಿದ್ದೂ ಕನ್ನಡದಲ್ಲಿ ಉತ್ತಮ ಪುಸ್ತಕಗಳನ್ನು ಪ್ರಕಟಿಸಿರುವ (ಏ.ಕೆ.ರಾಮಾನುಜಮ್‌, ಗಿರಿ, ಕೃಷ್ಣರಾಜು, ನಟರಾಜ್‌, ಹರಿಹರೇಶ್ವರ, ವೈ ಆರ್‌ ಮೋಹನ್‌, ಅಲಮೇಲು, ರಂಗಾಚಾರ್‌, ಎಚ್‌ ಕೆ ಚಂದ್ರಶೇಖರ್‌, ನಾಗ ಐತಾಳ್‌, ನಳಿನಿ ಮೈಯ-ಇನ್ನೂ) ಹಲವರ ಹೆಸರನ್ನು ಪ್ರಸ್ತಾಪಿಸಿದರು.

ಅಲ್ಲಿಯ ಕನ್ನಡ ಕೂಟಗಳು ಹೊರತರುತ್ತಿರುವ ಕೆಲವು ನಿಯತಕಾಲಿಕಗಳನ್ನೂ, ಸುಮಾರು ಹತ್ತು ವರ್ಷಕಾಲ ನಡೆದ ‘ಅಮೆರಿಕನ್ನಡ’ ಪತ್ರಿಕೆಯನ್ನೂ, ಹ್ಯೂಸ್ಟನ್‌ ವಿಶ್ವಕನ್ನಡ ಸಮ್ಮೇಳನದ ಅಂಗವಾಗಿ ಹೊರತಂದ ಸ್ಮರಣಸಂಚಿಕೆ ಮತ್ತು ‘ದರ್ಶನ’ ಗ್ರಂಥವನ್ನೂ, ಡೆಟ್ರಾಯಿಟ್‌ ವಿಶ್ವಕನ್ನಡ ಸಮ್ಮೇಳನದ ‘ಸ್ಪಂದನ’ ಸ್ಮರಣ ಸಂಚಿಕೆಯನ್ನೂ ನೆನಸಿಕೊಳ್ಳಲು ಭಟ್ಟರು ಮರೆಯಲಿಲ್ಲ.

ಇಲ್ಲಿಂದ ಅಮೇರಿಕಕ್ಕೆ ಹೋದ ಸಾಹಿತಿ, ಕಲಾವಿದರನ್ನು ಅಲ್ಲಿ ವಿಶೇಷ ಆದರ ಪ್ರೀತಿಗಳಿಂದ ನಡೆಸಿಕೊಳ್ಳುವ ಅಮೆರಿಕನ್ನಡಿಗರ ರೀತಿಯನ್ನು ಭಟ್ಟರು ಹೃತ್ಪೂರ್ವಕವಾಗಿಯೇ ಪ್ರಶಂಸಿಸಿದರು. ‘ಇವರು ನಮ್ಮವರು- ಎಂಬ ಪರಿಶುಧ್ಧ ಪ್ರೀತಿಯಾಂದೇ ಇದೆಲ್ಲಕ್ಕೆ ಕಾರಣವೇ ಹೊರತು ಅವರಿಗೆ ನಮ್ಮಿಂದ ಆಗಬೇಕಾದ್ದು ಏನೂ ಇಲ್ಲ. ಕನ್ನಡ ಕುರಿತ ಅಭಿಮಾನ ಆಸ್ಥೆಗಳಲ್ಲಿ ಅವರು ಇಲ್ಲಿರುವ ನಮ್ಮನ್ನು ಮೀರಿಸಿದ್ದಾರೆ’- ಎಂದರು.

ತಾವು ಹುಟ್ಟಿ ಬೆಳೆದ ನಾಡಿಗೆ ಏನಾದರೂ ಕೊಡುಗೆ ನೀಡಬೇಕೆಂಬ ಉದ್ದೇಶದಿಂದ ಹುಟ್ಟಿಕೊಂಡ ಬಿ. ಟಿ. ಎಲ್‌ ಪ್ರತಿಷ್ಠಾನ, ಕೆ. ಆರ್‌. ಎಸ್‌ ಪ್ರತಿಷ್ಠಾನ, ಲವ್‌ ಕ್ಯಾಸಲ್‌ ಮುಂತಾದ ಸಂಸ್ಠೆಗಳ ಬಗ್ಗೆಯೂ ಮಾತು ಬಂತು. ಹಾಗೇ ಬಿ. ವಿ. ಜಗದೀಶ್‌, ಕುಮಾರ ಮಳವಳ್ಳಿ ಹೊದಲಾದವರು ಕನ್ನಡ ಚಟುವಟಿಕೆಗಳಿಗೆ ನೀಡುತ್ತಿರುವ ಉದಾರ ಸಹಾಯುವನ್ನೂ ಭಟ್ಟರು ಪ್ರಸ್ತಾಪಿಸಿದರು. ‘ಅಲ್ಲಿಯ ಕನ್ನಡಿಗರು ಮಲಗುವುದು ಅಮೇರಿಕದ ಮಂಚಗಳ ಮೇಲೆ; ಆದರೆ ಅವರು ಕಾಣುವುದು ಮಾತ್ರ ಕರ್ನಾಟಕದ ಕನಸನ್ನು’- ಎಂದರು.

ಒಂದೆರಡು ಕಡೆ ಹಳಿ ತಪ್ಪಿದ್ದನ್ನು ಬಿಟ್ಟರೆ (ಉದಾಹರಣೆಗೆ, ‘ಪ್ರಸ್ಥಾನತ್ರಯ’ದ ಪ್ರಸಂಗ), ಮಾಹಿತಿಯನ್ನು ಒದಗಿಸುವುದರತ್ತ ಕೇಂದ್ರೀಕೃತವಾಗಿದ್ದ ಭಟ್ಟರ ಭಾಷಣ ಒಟ್ಟಾರೆ ಗಂಭೀರ ಸ್ವರೂಪದ್ದಾಗಿದ್ದು, ವಿಶ್ಲೇಷಣಾತ್ಮಕವಾಗಿಯೂ ಇತ್ತು. ಅಷ್ಟೊಂದು ದಿನಗಳ ಹಿಂದೆ ಕುವೆಂಪುರವರಂತ ದೃಷ್ಟಾರ ಕವಿ, ‘ಎಲ್ಲಾದರು ಇರು, ಎಂತಾದರು ಇರು, ಎಂದೆಂದಿಗು ನೀ ಕನ್ನಡವಾಗಿರು’- ಎಂದು ಬರೆದದ್ದು ಬಹುಶಃ ಅಮೆರಿಕದ ಕನ್ನಡಿಗರಿಗಾಗಿಯೇ. ಆದರೆ ಅದು ನಮಗೆ ಯಾರಿಗೂ ಗೊತ್ತಿರಲಿಲ್ಲ’, ಎಂದು ಭಟ್ಟರು ಮಾತು ಮುಗಿಸಿದರು.

ಇದು ಭಟ್ಟರ ಭಾಷಣದ ಸಂಗ್ರಹ ರೂಪ. ಅವರ ಟಿಪ್ಪಣಿ ಹಾಳೆಗಳಲ್ಲಿನ ಅನೇಕ ಪದಗಳು, ಪದಪುಂಜಗಳು, ನಾಲ್ಕಾರು ವಾಕ್ಯಗಳು ಇದರಲ್ಲಿ ಅವರು ಹೇಳಿರುವಂತೆಯೇ ಈ ಲೇಖನದಲ್ಲಿ ಇವೆ. ಉಳಿದದ್ದು ಅವರ ಭಾಷಣ ಟಿಪ್ಪಣಿಗಳನ್ನು ಆಧರಿಸಿ, ಈಗ ನನಗೆ ನೆನಪಿದ್ದಂತೆ ನಾನು ಮಾಡಿರುವ ವರದಿ.

*

ಇಲ್ಲಿ ನಾನು ಬೇರೆ ಯಾರ ಉಪನ್ಯಾಸಗಳ ಬಗ್ಗೆಯೂ ಬರೆಯದೆ, ಡಾ. ಭಟ್ಟರ ಮಾತುಗಳಿಗೆ ಮಾತ್ರ ಲೇಖನವನ್ನು ಸೀಮಿತ ಗೊಳಿಸಿಕೊಂಡಿದ್ದೇನೆ. ಕಾರಣವಿಷ್ಟೆ :

ನಾನೂ ಸೇರಿದಂತೆ, ಹಲವಾರು ಮಂದಿ ಉತ್ತರ ಅಮೆರಿಕಾದ ಕನ್ನಡ ಲೇಖಕರಿಗೆ ಎಷ್ಟೊಂದು ಬಗೆಗಳಲ್ಲಿ ಕೈಹಿಡಿದು ನಡೆಸುತ್ತಿದ್ದಾರೆ ಲಕ್ಷ್ಮೀನಾರಾಯಣ ಭಟ್ಟರು. ಲೇಖನಗಳನ್ನು ತಿದ್ದಿಕೊಡುವಲ್ಲಿ, ಇಲ್ಲಿ ಪತ್ರಿಕೆಗಳಲ್ಲಿ ಅವು ಪ್ರಕಟವಾಗುವಂತೆ ನೋಡಿಕೊಳ್ಳುವಲ್ಲಿ , ನಮ್ಮವರ ಪುಸ್ತಕಗಳ ಪ್ರಕಾಶಕರನ್ನು ಹುಡುಕಿಕೊಡುವಲ್ಲಿ , ಆ ಪುಸ್ತಕಗಳ ಬಗ್ಗೆ ವಿಮರ್ಶಾತ್ಮಕ ಮುನ್ನುಡಿ, ಬೆನ್ನುಡಿ ಬರೆದು ಕೊಡುವಲ್ಲಿ , ಪುಸ್ತಕಗಳ ಬಿಡುಗಡೆ ಸಮಾರಂಭಗಳ ಏರ್ಪಾಟಿನಲ್ಲಿ , ಹೆಸರಾಂತ ಪತ್ರಿಕೆಗಳಲ್ಲಿನ ತಮ್ಮ ಅಂಕಣ ಬರಹಗಳಲ್ಲಿ ಆ ಪುಸ್ತಕಗಳ ಬಗ್ಗೆ ಬರೆಯುವಲ್ಲಿ - ಹೀಗೆ ವಿಧವಿಧವಾಗಿ ವಿದೇಶದ ಕನ್ನಡ ಲೇಖಕರನ್ನು ಪ್ರೋತ್ಸಾಹಿಸುತ್ತಿದ್ದಾರೆ ಪ್ರೊಫೆಸರ್‌ ಭಟ್ಟರು.

ವಿಚಾರ ಸಂಕಿರಣದ ಸಂಬಂಧವಾಗಿ ಒಬ್ಬರು ಬರೆದ ಪತ್ರದಲ್ಲಿ, ಇನ್ನೂ ಕೆಲವರು ಫೋನಿನಲ್ಲಿ , ‘ಸೆಮಿನಾರಿನಲ್ಲಿ ಲಕ್ಷ್ಮೀನಾರಾಯಣ ಭಟ್ಟರು ಏನು ಮಾತಾಡಿದರೆನ್ನುವುದು ಪತ್ರಿಕೆಯಲ್ಲಿ ವರದಿಯಾಗಿಲ್ಲ’- ಎಂದು ತಿಳಿಸಿದ್ದರು. ಆ ಸಂಬಂಧದಲ್ಲಿ ನನ್ನ ಈ ಲೇಖನ ಸಮಾಧಾನ ಒದಗಿಸೀತೆಂದು ನಾನು ನಂಬುವೆ.

English summary
S.K.Harihareshwara writes what exactly N.S.Lakshminarayana Bhatta spoke in Bangalore Seminar on The status of Kannada in foreign countries.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more
X