ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನೀರು, ನದಿ, ‘ತೀರ್ಥ’ ಮತ್ತು ಸ್ನಾನ

By Super
|
Google Oneindia Kannada News

ನಮ್ಮಲ್ಲಿ 'ತೀರ್ಥ’ ಎಂಬ ಪದ (ಧರ್ಮ ಎಂಬ ಪದದಂತೆ) ಸನ್ನಿವೇಶ, ಸಂದರ್ಭಕ್ಕೆ ತಕ್ಕಂತೆ ಹಲವಾರು ಅರ್ಥಗಳನ್ನು ಸ್ಫುರಿಸುವ ವಿಶೇಷ ಪದ! ಇಲ್ಲೀಗ ಅದರ ಬಗ್ಗೆ ಸ್ವಲ್ಪ ವಿವೇಚಿಸೋಣ:

'ತೀರ್ಥ’ವೆಂದರೆ ಪವಿತ್ರ ಜಲ, ಪುಣ್ಯಕ್ಷೇತ್ರ, ಧಾರ್ಮಿಕ ಮಹತ್ವದ ಸ್ಥಳ, ಗೌರವಾನ್ವಿತ, ಶ್ರೇಷ್ಠವಾದದ್ದು ಹೀಗೆಲ್ಲ ಅರ್ಥಗಳು. ದೇವಾಲಯದಲ್ಲಿ ದೇವರಿಗೆ ಅಭಿಷೇಕ ಮಾಡಿದ 'ಚರಣಾಮೃತ’ ನಮಗೆ ಪವಿತ್ರ ; 'ಅದು ಅಕಾಲಮೃತ್ಯುವನ್ನು ಮಥನ ಮಾಡಬಲ್ಲುದು, ಸಕಲ ವ್ಯಾಧಿಗಳನ್ನು ನಿವಾರಿಸಬಲ್ಲುದು, ಎಲ್ಲ ಬಗೆಯ ಪಾಪಗಳ ತಾಪವನ್ನು ಶಮನಗೊಳಿಸಬಲ್ಲುದು’- ಎಂದು ನಂಬಿ, ಆ ತೀರ್ಥಕ್ಕಾಗಿ ಬಲಗೈ ಒಡ್ಡಿ, 'ಮುಪ್ಪಡರುವ ಏನಾದರೂ ರೋಗಕ್ಕೆ ಈಡಾಗುವ ಸಂಭವವಿರುವ ಈ ಕಳೇಬರಕ್ಕೆ ಆ ಮಹಾವೈದ್ಯನ ಚರಣಾಮೃತವೇ ಮುನ್ನೆಚ್ಚರಿಕೆಯ ಮದ್ದು’ ಎಂದುಕೊಳ್ಳುತ್ತೇವಲ್ಲ , ಅದು ತೀರ್ಥ! ತಂದೆ ಮತ್ತು ತಂದೆಗೆ ಸಮಾನರಾದವರನ್ನು ಕನ್ನಡದಲ್ಲಿ 'ತೀರ್ಥರೂಪ’ರೆಂದು ಕರೆಯುವ ವಾಡಿಕೆ ಇಂದಿಗೂ ಉಂಟು. ಜೈನರಿಗೆ ಪೂಜ್ಯರಾದ ಇಪ್ಪತ್ತನಾಲ್ಕು ಜನ ಮಹಾ ಪುರುಷರಲ್ಲಿ ಪ್ರತಿಯಾಬ್ಬರನ್ನೂ 'ತೀರ್ಥಂಕರ’ ಎಂದು ಗೌರವಪೂರ್ವಕವಾಗಿ ಕರೆಯುತ್ತಾರೆ.

ಪ್ರತಿ ನದಿಯೂ ನಮಗೆ ಪವಿತ್ರವೇ, 'ತೀರ್ಥ’ವೇ

ತುಂಗೆಯೂ ನಮಗೆ ಗಂಗೆಯೇ. ನದಿ ಹುಟ್ಟುವ ತಾಣ, ಮೈತುಂಬಿ ಹರಿಯುವ ಕಡೆ, ಇನ್ನೊಂದು ನದಿಯಾಂದಿಗೆ ಕೂಡುವೆಡೆ- ಹೀಗೆ ಎಲ್ಲವೂ ಅದೇನೋ ನಮ್ಮನ್ನು ಆಕರ್ಷಿಸುವ, ಕೊಂಡಾಡುವ ಕವಿಹೃದಯವನ್ನು ಹೆಚ್ಚು ತೇವವಾಗಿಸುವ ಸ್ಥಳವಿಶೇಷಗಳು. ನಂಬುವವರಿಗೆ ಐತಿಹ್ಯಗಳು, ಸ್ಥಳ ಮಹಾತ್ಮೆಗಳು. ಹರಿವ ನದಿ ತಾನೂ ಶುದ್ಧಗೊಂಡು, ತನ್ನಲ್ಲಿ ಮೀಯುವವರನ್ನೂ ಶುದ್ಧಗೊಳಿಸುತ್ತದೆ ಎಂಬ ನಂಬಿಕೆ ಬಹು ಪ್ರಾಚೀನವಾದದ್ದು . ಭಾವುಕ ಕೇಳಿಕೊಳ್ಳುತ್ತಾನೆ:

ಸುಪವಿತ್ರ ಜಲ ನೆಲವ ಶುದ್ಧಿಗೊಳಿಸಲಿ ಹರಿದು,
ಈ ನೆಲದ ಮೇಲಡಿಯಿಟ್ಟು ನಾ ಪುನೀತನಾದೆನಲ್ಲ!
ಎಲ್ಲ ದೈವಾಂಶಗಳ ಪಾವಿತ್ರ್ಯ ನನ್ನನ್ನು
ಒಳಹೊರಗಿನೆಲ್ಲ ಕಳೆ ಕೊಳೆಯ ತೊಳೆದಿರಿಸಲಿ!

(ಆಪ: ಪುನನ್ತು ಪೃಥಿವೀಂ, ಪೃಥಿವೀ ಪೂತಾ ಪುನಾತ್‌ ಮಾಮ್‌। ಪುನನ್ತು ಬ್ರಹ್ಮಣಸ್ಪತಿರ್‌, ಬ್ರಹ್ಮ, ಪೂತಾ ಪುನಾತ್‌ ಮಾಮ್‌।। - ತೈತ್ತಿರೀಯ ಆರಣ್ಯಕ 10.23.1 ; ಮಹಾನಾರಾಯಣ ಉಪ.30.1)

ಎಂಜಲಾದರೂ ತಿಂದು, ತಿನ್ನಬಾರದ ಮೆದ್ದು,
ಅರಿವಿರದೆ ತಪ್ಪು ತಪ್ಪಾಗಿ ನಾ ತುಂಬ ನಡೆದೆ;
ಕೆಟ್ಟದರ ಒಡನಾಟ ಸಹಿಸಿ ಸುಮ್ಮನೆ ಇದ್ದೆ-
ನನ್ನ ಮನ್ನಿಸಿ, ನೀರೆ, ನೀ ಪವಿತ್ರಗೊಳಿಸು ಮುದದೆ!

(ಯದ್‌ ಉಚ್ಛಿಷ್ಟಂ ಅಭೋಜ್ಯಂ ಯದ್‌ ವಾ ದುಷ್ಚರಿತಂ ಮಮ। ಸರ್ವಂ ಪುನನ್ತು ಮಾಂ ಆಪೋ, ಅಸತಾಂ ಚ ಪ್ರತಿಗ್ರಹಂ।। - ಬೋಧಾಯನ ಬ್ರಹ್ಮಕರ್ಮ ಸಮುಚ್ಚಯ)

ಈ ಬಿನ್ನಪಕ್ಕೆ ಕಾರಣ- ನಾವು ಅರಿತೋ ಅರಿಯದೆಯೋ ಮಾಡಿದ ತಪ್ಪುಗಳ ಹೊಣೆಯ ಭಾರವನ್ನು ಕಡಿಮೆ ಮಾಡಿಕೊಳ್ಳಲು, ನಮ್ಮನ್ನು ಶುದ್ಧಿಗೊಳಿಸಿಕೊಳ್ಳಲು, ಈ ಹನ್ನೊಂದು ಸಹಾಯಕವಂತೆ : 'ಕಾಲೋ ಅಗ್ನಿ: ಕರ್ಮ ಮೃದ್‌ ವಾಯುರ್‌, ಮನೋ ಜ್ಞಾನಂ ತಪೋ ಜಲಮ್‌। ಪಶ್ಚಾತ್ತಾಪೋ ನಿರಾಹಾರ: , ಸರ್ವೇ ಅಮೀ ಶುದ್ಧಹೇತವ: ।।’- ಯಾಜ್ಞವಲ್ಕ್ಯ ಸ್ಮೃತಿ 5.31(ಇಲ್ಲಿ ಮೃದ್‌ ಎಂದರೆ ಮಣ್ಣು ಅಥವಾ ಭಸ್ಮ, ವಿಭೂತಿ ; ಉಳಿದವು ಸ್ಪಷ್ಠ.) ಬೇರೆಯೆಲ್ಲದಕಿಂತ ನೀರಂತೂ 'ಶುದ್ಧಿ’ಗೊಂದು ದೈವದತ್ತವಾದ ಸುಲಭ ಸಾಧನ! ಆಶ್ರಯ ಬೇಡಿ ಬಂದ(ಮುಳುಗೇಳುವ) ಯಾರದೋ ತಪ್ಪನ್ನು (ಕೊಳೆಯನ್ನು) ತಾನು ಸ್ವೀಕರಿಸಿ, ಅವರನ್ನು ಶುದ್ಧ (ಸ್ವಚ್ಛ)ರನ್ನಾಗಿ ಪರಿವರ್ತಿಸುವ ಉದಾತ್ತ ಗುಣ ನೀರಿನದು! ಇದೇ ನೀರಿನಲ್ಲಿ ಬಹುತೇಕ ಎಲ್ಲವೂ ಕರಗಿ ಮರೆಯಾಗುವುದರಿಂದ, ಇಂಗ್ಲೀಷಿನಲ್ಲಿ 'ಸೊಲ್ಯುಷನ್‌’ ಪದ 'ದ್ರಾವಣ’ ವೂ ಆಗುತ್ತೆ ; 'ಪರಿಹಾರ’ ವೂ ಆಗಿಬಿಡುತ್ತೆ. ಕರಗುವ 'ಸಾಲ್ವ್‌’ ಬಗೆಹರಿಸಲೂ ಬಳಕೆ ಆಗಿಬಿಡುತ್ತದೆ!

English summary
Manthra pushpa 4 : Concept of Theertha, bath (Snana) and River (Nadi)
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X