ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಲಕ್ಷ್ಮಿ ಎಲ್ಲಿದ್ದಾಳು : ಪುಟ-3

By Super
|
Google Oneindia Kannada News

ಕೇಳಿದ್ದ ಕೊಡುವವಳೆ ಎಲ್ಲಿಯೂ ಹೋಗದಿರೆ

ಲಕ್ಷ್ಮಿ ಚಂಚಲಳು ಎಂಬ ಮಾತು ಹೊಸದೇನಲ್ಲ. ಈಗ ಇದ್ದು, ಇನ್ನು ಕೆಲವೇ ಕ್ಷಣಗಳಲ್ಲಿ ಇಲ್ಲವಾಗುವ ನೀರ ಅಲೆಯಂತೆ (' ಲಕ್ಷ್ಮೀಸ್‌ ತೋಯ-ತರಂಗ- ಭಂಗ ಚಪಲಾ’) ಅಸ್ಥಿರ ಸ್ವಭಾವದವಳು ಎಂಬ ಎಚ್ಚರಿಕೆ ಎಲ್ಲರೂ ಕೊಡುತ್ತಾರೆ. ' ತಾಯಿ, ಈ ಮಾತನ್ನು ಸುಳ್ಳಾಗಿಸು’, ಎಂದು ಚಮತ್ಕಾರವಾಗಿ ಹೇಳುವ ಶ್ರೀ ಪ್ರಸನ್ನ ತೀರ್ಥರ ಲಕ್ಷ್ಮೀಸ್ತುತಿಯಾಂದು ಸಹ ಇದೆ :

'' ಕೇಳಿದ್ದ ಕೊಡುವವಳೆ, ಚಂಚಲಳು ನೀನೆಂದು
ಕೊಂಚ ಭಯ ಪಡುವವರು ತಿಳಿಯದವರು ;
ಇರಲಿ, ನೀ ಬಂದೆನ್ನ ಹೃದಯಲಿ ಮನೆ ಮಾಡು,
ನಿಶ್ಚಂಚಲೆಯೆ ಆಗಿ ನೆಲಸು, ಸತತ ಹರಸು!

('' ವಾಂಛಿತದಾಯಿನಿ, ಚಂಚಲಾ ತ್ವಂ ಇತಿ ಕಿಂಚಿದ್‌ ಅಸ್ತಿ ಭಯಂ ಅಜ್ಞ-ಜನಾನಾಮ್‌। ತ್ವಂ ಚ ಮದೀಯೇ ಗೃಹೇ ಸತತಂ ನಿಶ್ಚಂಚಲಾ ಭವ ಪ್ರಸನ್ನಮುಖೀ ।। ತ್ವಾಂ ವನ್ದೇ ಮಾತರಮ್‌ ।।’’)

ಇಂಥ ಪರಿವಾರದ- ಸಮೃದ್ಧಳಾದ ಲಕ್ಷ್ಮೀ ಎಲ್ಲಿ ಎಲ್ಲಿ ನೆಲಸಿ ಇದ್ದಾಳು ? ಪುರಾಣಗಳಲ್ಲಿ ಹಲವೆಡೆ ಇಂದ್ರ, ಬೃಹಸ್ಪತಿ, ಪ್ರಹ್ಲಾದ ಮುಂತಾದವರು ಕೇಳಿದ ಪ್ರಶ್ನೆಯೇ ಇದು. ಸಿಗುವ ಸಾಮಾನ್ಯ ಉತ್ತರ : ''ಪುಣ್ಯ, ಧರ್ಮ ಮತ್ತು ಸತ್ಯ ಇದ್ದ ಕಡೆ ಲಕ್ಷ್ಮಿ ಸದಾ ಇರುತ್ತಾಳೆ- ಎಂದು.

' ಸುಮನಸ ವಂದಿತ ಪದ ಯುಗಳೆ, ಮನಸಿಜ- ಜನಕನ ಕೋಮಲತಮ ಹೃತ್ಕಮಲದೊಳು ನೆಲಸಿದ ಈ ಶುಭಗೆ ’ ಲಕ್ಷ್ಮಿ ಬೇರೆ ಬೇರೆಯವರಿಗೆ ಬೇರೆ ಬೇರೆ ರೂಪದಲ್ಲಿ ಇದ್ದು ಕಾಣಿಸಿಕೊಂಡಾಳು- ಎಂಬ ಭಾವವನ್ನು ಮಾರ್ಕಂಡೇಯ ಪುರಾಣದ, ದೇವೀ ಮಹಾತ್ಮ್ಯ ಭಾಗದಲ್ಲಿ ನೋಡುತ್ತೇವೆ :

ಪುಣ್ಯ ಕಾರ್ಯಗಳ ಎಸಗುವರ ನೆಲೆಯಲ್ಲಿ ಸಿರಿ, ಸಂಪತ್ತು ;
ಪಾಪಿಗಳ ಸೆರೆಯಲ್ಲಿ ದಾರಿದ್ರ್ಯದಾಪತ್ತು, ದೈನ್ಯ ವಿಪತ್ತು ;
ಸುಮನಸರ ಹೃದಯದಲಿ ಬೆಳಗುವ ಬುದ್ಧಿಯ ಮಹತ್ತು ;
ಸಜ್ಜನರ ಶ್ರದ್ಧೆಯ ಸೊತ್ತು,
ಕುಲೀನ ನಾರಿಯ ಸಹಜ ಲಜ್ಜೆಯ ಒತ್ತು
- ಹೀಗೆ ಬಗೆಬಗೆ ರೂಪದಲಿರುವೆ ;
ಲಕ್ಷ್ಮಿ, ಜಗವ ಕಾಪಾಡು, ಹೊತ್ತು !

(ಯಾ ಶ್ರೀಃ: ಸ್ವಯಂ ಸುಕೃತೀನಾಂ ಭವನೇಷು,
ಅಲಕ್ಷ್ಮೀ: ಪಾಪಾತ್ಮನಾಂ,
ಕೃತಧಿಯಾ ಹೃದಯೇಷು ಬುದ್ಧಿ :,
ಶ್ರದ್ಧಾಂ ಸತಾಂ, ಕುಲಜನ-ಪ್ರಭವಸ್ಯ ಲಜ್ಜಾ,
ತಾಂ ತ್ವಾಂ ನತಾ : ಸ್ಮ, ಪರಿಪಾಲಯ, ದೇವಿ, ವಿಶ್ವಮ್‌ ।। )

ವ್ಯಾಸ ಭಾರತದಲ್ಲೂ ಈ ಪ್ರಶ್ನೆ ಮರುಕಳಿಸುತ್ತದೆ. ಲಕ್ಷ್ಮಿಯನ್ನೇ ನೇರವಾಗಿ ಕೇಳುವ ಪ್ರಸಂಗ ಅದು. ಕೇಳಿದವರು ಬೇರೆ ಯಾರೂ ಅಲ್ಲ, ಅವಳ ಪ್ರತಿಬಿಂಬವಾದ ರುಕ್ಮಿಣಿಯೇ:

ಯಾರು ಯಾರುಗೆ ಒಲಿದು ನೀ ನಲಿವೆ, ಸಿರಿಯೆ?
ಯಾರು ಯಾರಲ್ಲಿರುವೆ? ನಿಲ್ಲುವೆಯೆ ನೆಲಸಿ?
ಜೀವ-ಜಡ-ಜಗ-ರಕ್ಷಣೆಯ ಪೂರಕದ ಓ ತತ್ತ್ವವೇ,
ಲಕ್ಷ್ಮಿಯೆ, ನಿನ್ನ ಮನದಿಂಗಿತವ ತಿಳಿಯ ಹೇಳೆ!
(ಕಾನಿ ಇಹ ಭೂತಾನಿ ಉಪಸೇವಸೇ ತ್ವಂ? ಸಂ-ತಿಷ್ಠಸೇ ಕಾನ್‌ ಇವ, ಸೇವಸೇ ತ್ವಂ? ಕಾನಿ ತ್ರಿಲೋಕೇಶ್ವರ-ಭೂತಕಾನ್ತೇ, ತ್ತತ್ತ್ವೇನ ಮೇ ಬ್ರೂಹಿ, ಮಹರ್ಷಿ-ಕನ್ಯೇ।। - ಮಹಾಭಾರತ, ಅನುಶಾಸನ ಪರ್ವ 11.4)

ಲಕುಮಿಯ ನೆಲೆಯ ನೀವ ಬಲ್ಲಿರಾ.. ನೀವು ಬಲ್ಲಿರಾ..

ತಾನು ಎಲ್ಲಿರುತ್ತಾಳೆ, ಇರಬಹುದು, ಇರಬಯಸಳು- ಎಂಬುದನ್ನ ಲಕ್ಷ್ಮಿ ಪಟ್ಟಿ ಮಾಡಿ ಹೇಳುತ್ತಾಳೆ. ಸಾರಾಂಶಿಸಿ ಹೇಳುವುದಾದರೆ,
ಆತ್ಮವಿಶ್ವಾಸಿಗಳಲ್ಲಿ, ದಕ್ಷರಲ್ಲಿ, ಸಾಹಸಿಗಳಲಿ,
ಕಾರ್ಯಕುಶಲರಲಿ, ಜಿತೇಂದ್ರಿಯರಲಿ, ಕೃತಜ್ಞರಲಿ,
ಕ್ರೋಧ- ರಹಿತರಲಿ, ಮೋಹ-ಮರೆತವರಲ್ಲಿ,
ಮದವ ತುಳಿದವರಲ್ಲಿ,
ಸೌಂದರ್ಯದ ನೆಲೆವೀಡಾದವರಲ್ಲಿ, ಶುಚಿ ಇದ್ದ ಕಡೆಯಲ್ಲಿ,
ಗುಣದ ಖಣಿಯಾದವರಲ್ಲಿ-
ಲಕ್ಷ್ಮಿ ಇರಲು ಸಂತೋಷಿಸುವಳು.

ಇದಕ್ಕೆ ವ್ಯತಿರಿಕ್ತ ಗುಣ (ದೋಷ?) ವುಳ್ಳವರನ್ನು ಅವಳು ಬೇಗ ತೊರೆದು ಹೋಗಿ ಬಿಡುತ್ತಾಳಂತೆ!
ಸದ್ಗುಣ, ಸಚ್ಚಾರಿತ್ರ್ಯ, ಸದುದ್ದೇಶಗಳನ್ನೇ ಬಾಳ ದೀವಿಗೆಯಾಗಿ ಉಳ್ಳವರ ಎದೆಯಲ್ಲಂತೂ ನೆಮ್ಮದಿಯಿಂದ ಇರುತ್ತಾಳೆ; ಕೇಳಿದರೆ ಹೇಳಿಯಾಳು:
ನಂಬಿ ಮೊರೆ ಹೊಕ್ಕವರ, ತುಂಬಿ ಭಕ್ತಿಯನೊಂದೆ
ಬೇರೆಲ್ಲದಕೆ ಬರಿದಾಗಿಸಿಕೊಂಡವರ ಹೃದಯದಲ್ಲಿ,
ಭಾವಪರವಶರಾಗಿ ಕರೆದವರ ಎದುರಿನಲಿ,
ನೆನೆದವರ ಮನದಲ್ಲಿ ಬೇಕೆಂದ ರೂಪದಲಿ ಮೈದೋರುವೆ !

ಲಕ್ಷ್ಮಿ ಎಲ್ಲಿದ್ದಾಳು : ಪುಟ-4

English summary
Everything you wanted to know about divine God of Mundane Money. An article by Shikaripura Harihareshwara.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X