ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬೆಣ್ಣೆ, ಸೀರೆ ಕದಿವಾಗ ಕೃಷ್ಣ ನೊಡನೆಯೂ ಇದ್ದೆ

By ಶಿಕಾರಿಪುರ ಹರಿಹರೇಶ್ವರ
|
Google Oneindia Kannada News

ಕೃಷ್ಣ ಅವತರಿಸಿದಾಗ ಅವನೊಡನೆ ನಾನೂ ಇಲ್ಲಿದ್ದೆ, ಗೊತ್ತೇನು? ನಂದಗೋಕುಲದಲ್ಲಿ ಅವನು ಬೆಣ್ಣೆ , ಸೀರೆ ಕದ್ದಾಗ ನಾನೂ ಇದ್ದೆ. ಅವನ ಕಾರಣ ಬೇರೆ, ನನಗೆ ಬರೀ ಅನುಕರಣ. ಅವನದು 'ಕರೆ’ಯಾದರೆ ನನ್ನದು ಬರೆ ಕರಕರೆ! ಗೋಪಿಯರ ಸೆರಗೆಳೆದು ಕಾಡುತ್ತಿದ್ದ ಆ 'ಪೀನ ಪಯೋಧರ ಮರ್ದನ ಚಂಚಲ ಕರ ಯುಗಶಾಲಿ’ ಕಣ್ಣಿಗೆ ಬೀಳುತ್ತಿದ್ದನೇ ವಿನಾ, ನಾರದ ಭಕ್ತಿಸೂತ್ರದ 'ಸಾ ನಾ ಕಾಮಯಾಮಾನಾ ನಿರೋಧ ರೂಪತ್ವಾತ್‌’ ನನಗೆ ಅರ್ಥವಾಗದ ಒಗಟು! ' ಮುಗಿಲಿಗೊಂದೆ ನೆಗೆತ’ ದಿಂದ ಅವನು ತ್ರಿವಿಕ್ರಮನಾಗುತ್ತಲೇ ಹೋದ. ನಾನು ವಾಮನನಾಗಿಯೇ ಉಳಿದೆ.

''ಆಹಾ ಅದೆಂಥಾ ಆಟ, ಇಲ್ಲಿ ಕಾಲು, ಅಲ್ಲಿ ತಲೆ, ಅದಕೂ ಆಚೆ ನೋಟ!’’ ಆ ಬೆಳಕು ನನ್ನ ಕಣ್ಣಿಗೆ ತಡೆದುಕೊಳ್ಳಲಾರದಷ್ಟು ಪ್ರಖರ, ಅದಕ್ಕೆ ಅಲ್ಲವೇ ಪಾರ್ಥ ತನ್ನ ಸಾರಥಿ, ಗೀತಾಚಾರ್ಯನಿಗೆ ಕೂಗಿಕೊಂಡದ್ದು 'ಸಾಕು, ತಡೆಯಲಾರೆ, ಕಣ್ಣು ಕುಕ್ಕುತ್ತೆ, ಕೃಷ್ಣಾ ; ಹಿಂದೆ ಇದ್ದೆಯಲ್ಲ ಆ ಸೌಮ್ಯ ರೂಪಕ್ಕೆ ಬಾ, ಅದೇ ನನಗೆ ಪ್ರಿಯ’, ಎಂದು? ಅವನೋ ಯೋಗರಾಜನಾದ, ನಾನು, 'ಕೆಸರ ನಡುವೆ ಉಸಿರುಕಟ್ಟಿದ ಕಲ್ಲಿನಂತೆ’ ಪಾಚಿಯಾಗಿ ಎಷ್ಟೇ ಕಾಲ ಕಳೆದರೂ ಕೊಚ್ಚೆಯಲ್ಲಿನ ರಚ್ಚೆಯಾಗೇ ಉಳಿದೆ, ಭೋಗರಾಜನಾಗಿ, ರೋಗರಾಜನಾಗಿ, ಈಗಿನಂತೆ ಆಗಲೂ.

ಬುದ್ಧನೊಂದಿಗೆ ನಾನೂ ಎದ್ದೆ ! ಆದರೆ ಗೆಲ್ಲಲಿಲ್ಲ

ಗೌತಮನ 'ಖಾಸಾ ಶಿಷ್ಯ ಯಾರೆಂದಿರಿ? ನಾನೇ’. ಬುದ್ಧನೋ 'ಜಗವೆಲ್ಲ ಮಲಗಿರಲು ಅವನೊಬ್ಬನೆದ್ದ’. 'ಯಾ ನಿಶಾ ಸರ್ವಭೂತಾನಾಂ ತಸ್ಯಾಂ ಜಾಗರ್ತಿ ಸಂಯಮೀ’- ತಾನೆ? 'ಒಳಗೆ ಬೆಳಗುವ ಬೆಳಕ ಸರಿಪಡಿಸಿಕೊಳಬೇಕು’ ಎನ್ನುತ್ತಾ, ಅವನು ಯಜ್ಞ ಹೋಮಾದಿ ಕರ್ಮಕಾಂಡವನ್ನು ನಿರಾಕರಿಸಿದ; ಜಗತ್‌ಪ್ರಸಿದ್ಧ ಸಿದ್ಧನಾದ ಆ ಬುದ್ಧ ಅರ್ಥ ಮರೆತ ಆಚಾರವನ್ನ ಖಂಡಿಸಿದ ಕೆಂಡ! ಆ ಕುಂಡದಲ್ಲಿ ಕೆಂಡದ ಬಳಿ ಇದ್ದೂ ಬರಿಯ ಇದ್ದಿಲಾಗಿಯೇ ಉಳಿದೆ, ನಾನು. 'ಈಗಿನಂತೆ, ಆಗಲೂ ಹೊತ್ತಿ ಉರಿಯದೆ!’

ಗಾಂಧಿಯ ಬೆನ್ನೂ ಬಿಡಲಿಲ್ಲ , ಗಾಂಧಿಯಂತಾಗಲಿಲ್ಲ

ಇತ್ತೀಚೆಗೆ ಮೊನ್ನೆ ಮೊನ್ನೆಯ ಗಾಂಧಿಯ ಬೆನ್ನ ಹಿಂದೆ 'ಮೊದಲ ಬಂದ ಭೂಪ, ನಾನೆ?’ ಅವನ 'ಸತ್ಯ ಶೋಧನೆ’ಯ ಮೊದಲ ಪುಟಗಳಲ್ಲಿ ನಾನೂ ಓಡಾಡಿದ್ದೇನೆ. ಇನ್ನೂ ಅಲ್ಲೇ ಓಡಾಡುತ್ತಿದ್ದೇನೆ; ಅವನ ಪ್ರಯೋಗಗಳಲ್ಲಿ ನಾನು ಇನ್ನೂ ತಡಕಾಡುತ್ತಿದ್ದೇನೆ; ಮುಂದೆ ಹೋಗಲು ಆಗೇ ಇಲ್ಲ. ಅವನಂತೆ ನಾನೂ ನೂತೆ, ಕೂತೆ, ಹೊತ್ತೆ, ಅತ್ತೆ, ಕೊನೆಗೆ ಅವನು ಚಿನ್ನವಾಗಿ ಹೊಳೆದ, ಎತ್ತರಕ್ಕೆ ಬೆಳೆದ, ಮಹಾತ್ಮನಾಗಿ ಮೆರೆದ. ನಾನೋ ಕಬ್ಬಿಣವಾಗಿಯೇ ಉಳಿದೆ. ಯಾವ ರಸಶ್ರೀಯ, 'ಆಲ್‌ಕೆಮಿ’ಯ ಪರಿಪಾಕ ಅದು? ನನಗದೇಕೆ ಮುಟ್ಟಲಿಲ್ಲ, ತಟ್ಟಲಿಲ್ಲ? ಇಂದಿಗೂ ಗೊತ್ತಿಲ್ಲ!

ಅವರೆಲ್ಲ ಇದ್ದಾಗ ನಾನೂ ಇದ್ದೆ. ರಾಮ, ಕೃಷ್ಣ, ಬುದ್ಧ, ಗಾಂಧಿ- ಇವರೆಲ್ಲ ಬೆಳಕಾಗಿ ಇದ್ದರು; ನಾನೋ 'ದೀಪದ ಕೆಳಗಿನ ಕತ್ತಲಾಗಿ’ ಇದ್ದೆ. ಅಂತೂ ನಾನೂ ಓಡಿದೆ; ನಾನು ಅಲ್ಲೆಲ್ಲಾ ಇದ್ದೆ. ಖಂಡಿತಾ ಅಲ್ಲಿ ಇದ್ದೆ!

English summary
A Review of Gopala Krishna Adigas Poem nanna avathara by Shikaripura Harihareshwara.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X