ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಜೀವನವನ್ನು ಸಾರ್ಥಕವಾಗಿ ಬದುಕಲು ಪುಸ್ತಕದ ಆಸರೆ!

By ಡಾ. 'ಜೀವಿ' ಕುಲಕರ್ಣಿ, ಮುಂಬಯಿ
|
Google Oneindia Kannada News

ಏಪ್ರಿಲ್ 23ರಂದು ಅಂತಾರಾಷ್ಟ್ರೀಯ ಪುಸ್ತಕ ದಿನಾಚರಣೆ (ಇಂಟರ್-ನ್ಯಾಶನಲ್ ಡೇ ಆಫ್ ದಿ ಬುಕ್) ಎಂದು ಜಗದಾದ್ಯಂತ ಯುನೆಸ್ಕೋ (ಯುನೈಟೆಡ್ ನೇಶನ್ಸ್ ಎಜ್ಯುಕೇಶನಲ್ ಸೈಂಟಿಫಿಕ್ ಅಂಡ್ ಕಲ್ಚರಲ್ ಆರ್ಗನೈಝೇಶನ್) ಆಚರಿಸಿದರು. 23 ಏಪ್ರಿಲ್ ಹಲವು ಲೇಖಕರ ಜನ್ಮದಿನ ಹಾಗೂ ಪುಣ್ಯದಿನವೂ ಆಗಿದೆ. ಇದರಲ್ಲಿ ಮಹತ್ವದ ಲೇಖಕ ವಿಲಿಯಂ ಶೇಕ್ಸಪಿಯರನ ಪುಣ್ಯತಿಥಿಯೂ ಅಹುದು.

ಇದು ಪ್ರಕಾಶಕರ ದಿನ, ಪುಸ್ತಕಗಳ ದಿನ, ಕಾಪಿರೈಟ್ ದಿನ. ಕಾಪಿರೈಟ್ ಆಕ್ಟ್ 1957ರಿಂದ ಅಸ್ತಿತ್ವಕ್ಕೆ ಬಂತು ಇದರಿಂದ ಪುಸ್ತಕ ಪ್ರಕಾಶನದ ಕ್ಷೇತ್ರದಲ್ಲಿ ಮಹತ್ವದ ಬದಲಾವಣೆಗಳಾಗಿವೆ. ಮುಂಬೈ ವಿಶ್ವವಿದ್ಯಾಲಯದ ಕನ್ನಡ ವಿಭಾಗದವರು ಪುಸ್ತಕ ದಿನಾಚರಣೆಯನ್ನು ಆಚರಿಸಿದಾಗ, ನನಗೆ ಮಾತಾಡಲು ವಿಭಾಗದ ಮುಖ್ಯಸ್ಥರಾದ ಡಾ| ಜಿ.ಎನ್.ಉಪಾಧ್ಯರು ಆಮಂತ್ರಿಸಿದರು. ಮತಿಗೆ ಮೊದಲು ಪುಸ್ತಕದ ಬಗ್ಗೆ ಒಂದು ಪದ್ಯವನ್ನು ಓದಿದೆ.

ಪುಸ್ತಕ ದಿನಾಚರಣೆ

ಸರಿಯಾಗಿ ಕೆಲಸಮಾಡುತಿರೆ ಮನುಜನ ಮಸ್ತಕ
ಅವನಿಗೆ ಓದುಬರೆಹ ಬೇಕು, ಅನಿವಾರ್ಯ ಪುಸ್ತಕ
ಪುಸ್ತಕ ಗಂಧಕೊರಡು, ತೇಯ್ದಷ್ಟು ಬರುವುದು ಪರಿಮಳ
ಪುಸ್ತಕದಿಂದ ಜ್ಞಾನ, ಅದುವೆ ದಿವ್ಯ ಜೀವನಕೆ ಸೋಪಾನ

ಶಬ್ದದಿಂದ ಜ್ಞಾನ; ಶಬ್ದ ಶ್ರಾವಣವಾಗಿದೆ, ಚಾಕ್ಷುಷವಾಗಿದೆ
ಓದು ಬರೆಹ ಬಾರದವರೂ ವಿದ್ವಾಂಸರು ಕವಿಗಳು ಆಗಿದ್ದಾರೆ
ಅಸಾಧಾರಣ ವಿದ್ಯೆ ಗಳಿಸಿದ್ದಾರೆ, ಶ್ರಾವಣ ಶಕ್ತಿ ಪಡೆದಿದ್ದಾರೆ
ಜ್ಞಾನ ಪಡೆಯಲು ಮನಸ್ಸು ಬೇಕು, ಜೊತೆಗೆ ಬುದ್ಧಿ ಬೇಕು

ಪುಸ್ತಕ ದಿನಾಚರಣೆ, ಎಂದೊಡನೆ ಏಪ್ರಿಲ್ 23 ನೆನಪಾಗುತ್ತದೆ
ಶೇಕ್ಸ್‌ಪಿಯರ ಮಹಾಕವಿಯ ಪುಣ್ಯತಿಥಿಯ ದಿನವದು, ಅವನೇನು
ಬಹಳ ಕಲಿತಿರಲಿಲ್ಲ, ಮಿಡ್ಲ್‌ಸ್ಕೂಲ್ ವರೆಗೆ ಓದಿದ್ದ, ಅದರೆ
ವಿಶ್ವವೇ ಅವನ ಶಾಲೆಯಗಿತ್ತು, ಜಗತ್ಪ್ರಿಸಿದ್ಧ ನಾಟಕಕಾರನಾದ

ವಿಶ್ವ ಪುಸ್ತಕದ ದಿನ, ಪ್ರಕಾಶಕರ ದಿನ, ಕಾಪಿರೈಟ್‌ನ ದಿನ
ಕಾಲ ಬದಲಾದರೂ ಪುಸ್ತಕವಿಲ್ಲದ ಜಗವಿಲ್ಲ, ಜ್ಞಾನವೂ ಇಲ್ಲ.

ಈ ದಿನಗಳಲ್ಲಿ ಟಿವಿ ರೇಡಿಯೋಗಳ ಅಬ್ಬರದ ಪ್ರಚಾರದಲ್ಲಿ ಎಲ್ಲಿ ಪುಸ್ತಕಗಳು ಅಸ್ತಂಗತವಾಗುವವೋ ಎಂಬ ಭಯ ಆವರಿಸಿದೆ. ಆದರೆ ಪುಸ್ತಕಗಳ ಸ್ಥಾನವನ್ನು ಬೇರೆ ಯಾವ ಮಾಧ್ಯಮಗಳೂ ತುಂಬಲು ಸಾಧ್ಯವಿಲ್ಲ. ಮನೆಗಳಲ್ಲಿ ಚಿಕ್ಕ ಪುಸ್ತಕಗಳ ಸಂಗ್ರಹ ಅವಶ್ಯ ಇರಬೇಕು. ಅವುಗಳಿಂದ ಮನೆಯ ಮಕ್ಕಳಲ್ಲಿ ಓದುವ ಅಭ್ಯಾಸ ಬೆಳೆಯುವುದು.

Read books to lead a satisfactory life

ನಾನು ಬಾಲ್ಯದಲ್ಲಿ, ವಿದ್ಯಾರ್ಥಿ ಜೀವನದಲ್ಲಿ ಪುಸ್ತಕಗಳನ್ನು ಕೊಳ್ಳಲು ಸಾಧ್ಯವಾಗಿರಲಿಲ್ಲ. ಎರವಲು ಪಡೆದ ಪುಸ್ತಕಗಳನ್ನು ಓದಿ ಬೆಳೆದೆ. ಮುಂದೆ ಕೊಳ್ಳುವ ಯೋಗ್ಯತೆ ಬಂದಾಗ ಕೊಳ್ಳಲು ಪ್ರಾರಂಭಿಸಿದೆ. ಒಮ್ಮೆ ನನ್ನ ಪ್ರಾಧ್ಯಪಕರಾಗಿದ್ದ ಡಾ| ರಾ.ಯ. ಧಾರವಾಡಕರರು ನನ್ನ ಅತಿಥಿಯಾಗಿ ಮೂರು ದಿನ ಮುಂಬೈಯಲ್ಲಿ ನಮ್ಮ ಮನೆಯಲ್ಲಿದ್ದರು. ಅವರು ನನ್ನ ಪುಸ್ತಕ ಸಂಗ್ರಹ ನೋಡಿ ಬೆರಗಾಗಿ, ಮೆಚ್ಚಿಗೆ ವ್ಯಕ್ತಪಡಿಸಿ, 'ಜೀವಿ, ನಿನ್ನ ಮನೆಯಲ್ಲಿ ಹದಿನೈದು ದಿನ ಇದ್ದುಬಿಡಬೇಕು ಎನಿಸುತ್ತದೆ. ನಾನು ಓದದೇ ಇದ್ದ, ನಾನು ಬಹಳ ಸಲ ಓದಬೇಕು ಎಂದುಕೊಂಡಿದ್ದ ಪುಸ್ತಕ ನಿನ್ನ ಮನೆಯಲ್ಲಿವೆ' ಎಂಬ ಉದ್ಗಾರ ತೆಗೆದಿದ್ದರು.

ಪುಸ್ತಕ ಸಂಗ್ರಹಿಸುವ ಹವ್ಯಾಸ ನನಗೆ ಪ್ರಾರಂಭವಾದದ್ದು ಗುರುಗಳಾದ ವರಕವಿ ಬೇಂದ್ರೆ ಹಾಗೂ ಗೋಕಾಕರ ಪುಸ್ತಕ ಕೊಳ್ಳುವ ಹವ್ಯಾಸ ಕಂಡಾಗ. ಒಮ್ಮೆ ಬೇಂದ್ರೆ ಹೇಳಿದ್ದು ನೆನಪಾಗುತ್ತದೆ, 'ಒಮ್ಮೆ ನಾನು ಹೆಂಡತಿಗೆ ಸೀರೆ ತರಲು ಪೇಟೆಗೆ ಹೋಗಿದ್ದೆ. ಒಂದು ಹೊಸ ಪುಸ್ತಕ ಅಂಗಡಿಯಲ್ಲಿ ನೋಡಿ, ಸೀರೆಯ ಬದಲು ಪುಸ್ತಕ ಕೊಂಡಿದ್ದೆ. ಹೆಂಡತಿಗೆ ಈ ವಿಷಯ ತಿಳಿಸಿದಾಗ ಅವಳು ನಕ್ಕು ಸಮ್ಮತಿ ಸೂಚಿಸಿದ್ದಳು.' (ಬೇಂದ್ರೆ ಗ್ರೇಟ್ ಆದರೆ ಅವರ ಬಾಳ ಸಖಿ ಅಷ್ಟೇ ಗ್ರೇಟ್)

ನನಗೆ ಪುಸ್ತಕ ಕೊಳ್ಳುವ ಹುಚ್ಚು ಎಷ್ಟು ಎಂದರೆ, ನನ್ನ ಮಕ್ಕಳು ಹೊಸ ಬಟ್ಟೆ ಕೊಡಿಸು ಅಂದರೆ ಎರಡುಸಲ ವಿಚಾರ ಮಾಡುತ್ತಿದ್ದೆ, ಅದೇ ಅವರು ಒಂದು ಪುಸ್ತಕ ತಂದುಕೊಡಲು ಹೇಳಿದರೆ ಕೂಡಲೇ ತಂದುಬಿಡುತ್ತಿದ್ದೆ. ಒಂದು ಘಟನೆ ನೆನಪಾಗುತ್ತದೆ. ನನ್ನ ಎರಡನೆಯ ಮಗ ಹರ್ಷವರ್ಧನ ಹೈಸ್ಕೂಲಿನಲ್ಲಿ ಓದುತ್ತಿದ್ದಾಗ, ನಮ್ಮ ಮನೆಗೆ ಅಮೇರಿಕೆಯಿಂದ ಸಂಬಂಧಿಕರು ಬಂದಿದ್ದರು. ಅವರು ಹಿಟ್ಲರನ ಆತ್ಮಚರಿತ್ರೆ(ಮೈನ್ ಕ್ಯಾಂಫ್) ಬಗ್ಗೆ ವರ್ಣನೆ ಮಾಡಿದ್ದರು. ಅವರೂ ಪೂರ್ತಿ ಓದಿರಲಿಲ್ಲ, ಆದರೆ ಅದರ ಬಗ್ಗೆ ಕೇಳಿದ್ದರು. ನನ ಮಗ ಮನೆಯಲ್ಲಿ ಆ ಪುಸ್ತಕ ಹುಡುಕಿದ. ಅದು ಸಿಗಲಿಲ್ಲ. ಡಾನ್ ಬಾಸ್ಕೋ ಶಾಲೆಯ ಲೈಬ್ರರಿಯಲ್ಲಿ ಹುಡುಕಿದ, ಅಲ್ಲಿಯೂ ದೊರೆಯಲಿಲ್ಲ.

ಅವನು ನನಗೆ ಹೇಳಿದ, 'ಅಪ್ಪಾ, ನಮ್ಮ ಮನೆಯಲ್ಲಿ ಇಷ್ಟೊಂದು ಅಪೂರ್ವ ಗ್ರಂಥಗಳು ಇವೆ, ಹಿಟ್ಲರನ ಆತ್ಮಚರಿತ್ರೆ 'ಮೈನ್ ಕ್ಯಾಂಫ್' ಯಾಕೆ ಇಲ್ಲ?' ನಾನೆಂದೆ 'ನೀನು ಓದುತ್ತೀ ಎಂದು ಪ್ರಾಮೀಜ್ ಮಾಡಿದರೆ ನಿನಗಾಗಿ ಒಂದು ಪ್ರತಿ ಕೊಂಡು ತರುವೆ.'

ಆ ದಿನ ನಾನು ಫ್ಲೋರಾ ಫೌಂಟನ್ ಕಡೆಗೆ ಹೋಗಿದ್ದೆ. ಅಲ್ಲಿ ಸೆಂಟ್ರಲ್ ಟೆಲಿಗ್ರಾಫ್ ಆಫೀಸಿನ ಮುಂದೆ ಹಳೆ-ಹೊಸ ಪುಸ್ತಕಗಳ ಮಾರಾಟ ಕೇಂದ್ರವೇ ಇತ್ತು. ನಾನು ಹುಡುಕಲು ಹೊರಟೆ, ನನಗೆ ಮೊದಲು ಕಂಡ ಪುಸ್ತಕ 'ಮೈನ್ ಕ್ಯಾಂಫ್'. ಪುಸ್ತಕದ ಬೆಲೆ ಕೇಳಿದೆ. ನೂರೈವತ್ತು ರೂಪಾಯಿ ಅಂದ. ಅರ್ಧಬೆಲೆಗೆ ಕೊಟ್ಟ. ಮಗನಿಗೆ ತಂದು ಕೊಟ್ಟೆ. ಅವನು ಪುಸ್ತಕ ಓದಿದ. ನಾಲ್ಕಾರು ಪುಟಗಳ ದೀರ್ಘ ಪತ್ರ ಅಮೇರಿಕೆಯ ಸಂಬಂಧಿಗೆ ಬರೆದು, ಆ ಪುಸ್ತಕದ ಸಂಗ್ರಹ ಬರೆದಿದ್ದ. ನನಗೆ ಪೋಸ್ಟ್ ಮಾಡಲು ಕೊಟ್ಟ. ನಾನು ಅದರ ಜೆರಾಕ್ಸ್ ಪ್ರತಿ ನನ್ನ ಬಳಿ ಇಟ್ಟುಕೊಂಡು ಮೂಲಪತ್ರ ಕಳಿಸಿದ್ದೆ. ಅಮೇರಿಕೆಯಿಂದ ಉತ್ತರ ಬಂತು ಅವನನ್ನು ಪ್ರಶಂಸೆ ಮಾಡಿತ್ತು.

ಅತ್ಯಂತ ಬೆಲೆಯುಳ್ಳ ಪುಸ್ತಕಗಳು ಫುಟ್‌ಪಾಥ್‌ನಲ್ಲಿ ಕವಡೆ ಬೆಲೆಗೆ ದೊರೆಯುತ್ತವೆ. ಅವನ್ನು ಕೊಳ್ಳುವ ಮನಸ್ಸು ನಮಗಿರಬೇಕು, ಆ ಪುಸ್ತಕದ ಮಹತ್ವ ನಮಗೆ ಗೊತ್ತಿರಬೇಕು. ಒಮ್ಮೆ ಕ್ರಾಸ್ ಮೈದಾನದಲ್ಲಿ ಒಂದು ಪುಸ್ತಕ ಪ್ರದರ್ಶನವಿತ್ತು. ಅಲ್ಲಿ ನನಗೆ ಒಂದು ಅಪೂರ್ವ ಪುಸ್ತಕ ದೊರೆಯಿತು. ನನಗೆ ಡಿಕ್ಷನರಿ ಎಂದರೆ ಬಹಳ ಪ್ರೀತಿ. ಬಹಳ ಕಷ್ಟಪಟ್ಟು ಕಿಟೆಲ್ ಡಿಕ್ಷನರಿ ಧಾರವಾಡದಿಂದ ತರಿಸಿದ್ದೆ. ಸುಮಾರು ಎಪ್ಪತ್ತು ಡಿಕ್ಷನರಿಗಳು ಇವೆ. ಅಪ್ಟೆಯವರ ಸಂಸ್ಕೃತ ಡಿಕ್ಷನರಿ ಇದೆ. ಮರಾಠಿಯ ಮೌಲ್ಸ್‌ವರ್ಥನ ಡಿಕ್ಷನರಿ ಇದೆ. ಅನೇಕ ಮರಾಠಿ ಪ್ರಾಧ್ಯಾಪಕರ ಮನೆಯಲ್ಲಿ ಕೂಡ ನಾನು ಅದನ್ನು ನೋಡಿಲ್ಲ.

ಒಮ್ಮೆ ನಾನು ಕ್ರಾಸ್ ಮೈದಾನಿನಲ್ಲಿ ನಡೆದ ಪುಸ್ತಕ ಪ್ರದರ್ಶನದಲ್ಲಿ ಅಪೂರ್ವ ಪುಸ್ತಕ ಕೊಂಡೆ. ಅದೊಂದು ತಾಂತ್ರಿಕ ಶಬ್ದಗಳ ಕೋಶ : A consolidated Glossary of Technical Terms (English-Hindi). ಇದನ್ನು ಸೆಂಟ್ರಲ್ ಹಿಂದಿ ದೈರೆಕ್ಟರೇಟ್, ಮಿನಿಸ್ಟ್ರೀ ಆಫ್ ಎಜ್ಯುಕೇಶನ್, ಗವರ್ನಮೆಂಟೆ ಆಫ್ ಇಂಡಿಯಾ, ಅವರು 1962ರಲ್ಲಿ ಪ್ರಕಟಿಸಿದರು. ಪುಟಗಳು 1370. ಬೆಲೆ ನಂಬುತ್ತೀರಾ? ಕೇವಲ ರೂ.12/-.

ಅನುವಾದ ಹಾಗೂ ಜಾಹೀರಾತು ಕ್ಷೇತ್ರದಲ್ಲಿಯ ಮಿತ್ರ ನನಗೆ ಒಂದು ಸಾವಿರ ರೂಪಾಯ ಆಫರ್ ಮಾಡಿದರು, ಕೊಳ್ಳುವ ಆಮಿಷ ತೋರಿದರು. ಈ ಪದ ಕೋಶ ಎಷ್ಟು ಅಮೂಲ್ಯವಾಗಿದೆ ಎಂದರೆ ಯಾವುದೇ ವೈಜ್ಞಾನಿಕ ಶಬ್ದಕ್ಕೂ ಸಮಾಂತರ ಹಿಂದಿ (ಸಂಸ್ಕೃತ) ಅನುವಾದ ಇಲ್ಲಿ ದೊರೆಯುತ್ತದೆ. ಇದನ್ನು ಸಿದ್ಧಪಡಿಸಿದ ವಿದ್ವಾಂಸರ ಪಟ್ಟಿಯೇ ಅದ್ಭುತವಾಗಿದೆ. ಒಂದು ಲೇಖನವನ್ನು ಹಲವು ಭಾಷೆಯವರು ಅನುವಾದಿಸುತ್ತಿದ್ದರು. ಅದರಲ್ಲಿ 'ಡಿಹೈಡ್ರೇಶನ್' ಎಂಬ ಶಬ್ದ ಬಂದಿತ್ತು. ಅದನ್ನು ಭಾರತೀಯ ಭಾಷೆಗಳಲ್ಲಿ ಅನುವಾದಿಸಬೇಕಾಗಿತ್ತು. ನಾನೊಬ್ಬನೇ ಕನ್ನಡ ಅನುವಾದ ಕೊಟ್ಟಿದ್ದೆ. (ನಿರ್ಜಲೀಕರಣ). ಅದನ್ನು ನಾನು ಪಡೆದದ್ದು ಈ ಅಪೂರ್ವ ಶಬ್ದಕೋಶದಿಂದ.

ಮನೆಯಲ್ಲಿ ರಾಮಾಯಣ(12), ಮಹಾಭಾರತ(32), ಭಾಗವತ (12) ಪುಸ್ತಕಗಳ ಸಂಗ್ರಹ ನೋಡಿದಾಗ, ಮೂಡ್ ಬಂದಾಗ, ಅವನ್ನು ಓದುವ ಖುಶಿಯೇ ಬೇರೆ. ಗಳಗನಾಥದ ಸಮಗ್ರ ಕಾದಂಬರಿಗಳು, ಡಾ| ಗುರುರಾಜ ಕರ್ಜಗಿಯವರು ಕೆಲವು ವರ್ಷಗಳಿಂದ ಪ್ರಜಾವಾಣಿಯಲ್ಲಿ ಬರೆಯುತ್ತಿದ್ದ ಅಂಕಣ 'ಕರುಣಾಳು ಬಾ ಬೆಳಕೆ'(8 ಪುಸ್ತಕಗಳು), ಸ್ವಾಮಿ ಸುಖಬೋಧಾನಂದರ 'ಮನಸೇ ರಿಲ್ಯಾಕ್ಸ್ ಪ್ಲೀಜ್' ಮಾಲಿಕೆಯ ಹತ್ತಾರು ಪುಸ್ತಕಗಳು, ಸುಮ್ಮನೆ ಎತ್ತಿಕೊಂಡರೆ ಸಾಕು ನಮ್ಮನ್ನು ಒಂದು ಬೇರೆಯ ಲೋಕಕ್ಕೇ ಕೊಂಡೊಯ್ಯುತ್ತವೆ.

ಸ್ವಾಮಿ ಸುಖಬೋಧಾನಂದರ ಪ್ರವಚನಗಳನ್ನು ಕೇಳಿದ್ದೇನೆ. ಅವರನ್ನು ಅಮೇರಿಕಎಯಲ್ಲಿ ಶಿಕ್ಯಾಗೊದ ವಿಶ್ವ ಕನ್ನಡ ಸಮ್ಮೇಲನದಲ್ಲಿ (2008ರಲ್ಲಿ) ಕಂಡಿದ್ದೆ. ಅವರ ಯಾವುದೇ ಪುಸ್ತಕ ತೆರೆದು ಓದಿದರೂ ಅದು ನಮಗೆ ಹೊಸ ಭರವಸೆಯನ್ನು ಮೂಡಿಸುತ್ತದೆ. ಅವರು ಸ್ಥಾಪಿಸಿದ ಪ್ರಸನ್ನ ಪ್ರತಿಷ್ಠಾನವು ಧ್ಯಾನದ ವೈಜ್ಞಾನಿಕ ಆಯಾಮಗಳ ಸಂಶೋಧನೆಯಲ್ಲಿ ನಿರತವಾಗಿದೆ. ಅವರ ಪುಸ್ತಕಗಳು ಜೀವನವನ್ನು ಸಾರ್ಥಕವಾಗಿ ಬದುಕುವ ಅನೇಕ ಹೊಸ ವಿಧಾನಗಳನ್ನು ಜನರಿಗೆ ಕಲಿಸಿವೆ. ಜೀವನದಲ್ಲಿ ಒಂದು ಬಾಗಿಲು ಮುಚ್ಚಿದರೆ ಇನ್ನೊಂದು ಬಾಗಿಲು ತೆರೆದುಕೊಳ್ಳುತ್ತದೆ. ಈ ಸತ್ಯವನ್ನು ಅವರು ಜನರ ಅನುಭವದಲ್ಲಿ ಮೂಡುವಂತೆ ಮಾಡಬಲ್ಲರು.

ಸ್ವಾಮೀಜಿಯವರು ಅಮೇರಿಕಾ, ಇಂಗ್ಲೆಂಡ್ ಮತ್ತು ಸ್ವಿಡ್ಜರ್‌ಲ್ಯಾಂಡ್ ದೇಶಗಳ ಅನೇಕ ಪ್ರತಿಷ್ಠಿತ ವೇದಿಕೆಗಳಲ್ಲಿ ಆಹ್ವಾನಿತರಾಗಿ ಉಪನ್ಯಾಸ ನೀಡಿದ್ದಾರೆ. ಟೈಮ್ಸ್ ಆಫ್ ಇಂಡಿಯಾದ 'ಹೂ ಟಾಕ್ಸ್ ದ ಬೆಸ್ಟ್' ಎಂಬ ಸಮೀಕ್ಷೆಯಲ್ಲಿ ಅತ್ಯುತ್ತಮ ಭಾಷಣಕಾರರ ಸಾಲಿನಲ್ಲಿ ಪ್ರಥಮರಾಗಿದ್ದಾರೆ. ಮನಸ್ಸೇ ರಿಲ್ಯಾಕ್ಸ್ ಪ್ಲೀಜ್ ಪುಸ್ತಕ ತಮಿಳು, ಕನ್ನಡ, ತೆಲುಗು ಪುಸ್ತಕದ ಇತಿಹಾಸದಲ್ಲಿ ಅತ್ಯಧಿಕ ಮಾರಾಟದ ದಾಖಲೆ ನಿರ್ಮಿಸಿದೆ ಎನ್ನಲಾಗುತ್ತದೆ. ಅವರೆನ್ನುತ್ತಾರೆ, 'ಗ್ರಂಥಗಳನ್ನು ದಿನ ನಿತ್ಯದ ಪ್ರಾರ್ಥನೆಯಂತೆ ಆಗಾಗ ಓದುತ್ತಿರಬೇಕು. ಏಕೆಂದರೆ ಪ್ರಾರ್ಥನೆಯಿಂದ ಭಗವಂತ ಬದಲಾಗುವುದಿಲ್ಲ, ನೀವು ಬದಲಾಗುತ್ತೀರಿ.'

'ಬದುಕಿನ ಅಚ್ಚರಿಗಳಿಗೆ ಅಂತರಂಗವನ್ನು ತೆರೆದುಕೊಂಡಿರುವುದೇ ಉಜ್ವಲ ಜೀವನದ ಆತ್ಮ. ಬದುಕು ಅಚ್ಚರಿಗಳಿಂದ ತುಂಬಿಕೊಂಡಿರುತ್ತದೆ. ಪ್ರತಿಯೊಂದು ಅಚ್ಚರಿಯೂ ಅಜ್ಞಾತ ನೀಡುವ ಉಡುಗೊರೆಯಾಗಿದೆ ಅನ್ನುತ್ತಾರೆ. ಸೋಲು ಗೆಲವು ಇವೆರಡನ್ನೂ ಸಂಭ್ರಮಿಸಬೇಕಂತೆ. ಸೋತಾಗ ಸ್ವಾನುಕಂಪಕ್ಕೆ ಬಲಿಯಾಗಬಾರದು. ಸೋಲನ್ನು ಮತ್ತೆ ಕಲಿಯಲು ದೊರೆತ ಅವಕಾಶವೆಂದು ತಿಳಿದು ಸಂಭ್ರಮಿಸಲು ಕಲಿಯಬೇಕು. ಕಷ್ಟಗಳು ಕರುಣೆಯ ಕೃತಿಗಳಂತೆ. ಅವನ್ನು ನಿಸರ್ಗದ ದಯೆ ಎಂದು ಪರಿಗಣಿಸಬೇಕು.

ಕಷ್ಟಗಳ ಬಗ್ಗೆ ನಮ್ಮಲ್ಲುಂಟಾಗುವ ನಕಾರಾತ್ಮಕ ಭಾವನೆಗಳಿಗೆ ಬಹುತೇಕ ಕಾರಣ ನಾವೇ. ನಮ್ಮ ಸಂಕಷ್ಟಗಳ ಕೇಂದ್ರ ನಾವೇ. ಇನ್ನಾರೋ ಕಾರಣರಾಗಿದ್ದಾರೆ ಎಂಬ ತಪ್ಪು ತಿಳಿವಳಿಕೆಯನ್ನು ಪರಿಹರಿಸಿಕೊಳ್ಳಲು ನಮ್ಮ ಅಂತರಂಗವನ್ನು ಆಳವಾಗಿ ಅರಿಯಬೇಕು. ಕಷ್ಟದಿಂದ ಪಲಾಯನ ಮಾಡುವವರು ಹುಸಿದಾರಿಗಳನ್ನು ಹುಟ್ಟುಹಾಕುತ್ತಾರೆ. ಮದ್ಯಪಾನ, ಮಾದಕ ದ್ರವ್ಯ ಸೇವನೆ- ಇವು ಹುಸಿದಾರಿಗಳು. ನಿಮ್ಮ ಮನೆಯೊಳಗೆ ಕಳ್ಳನನ್ನು ಪ್ರವೇಶಿಸಲು ಬಿಡುವುದಿಲ್ಲವಷ್ಟೇ? ಹಾಗೆಯೇ ನಕಾರಾತ್ಮಕ ಯೋಚನೆಗಳಿಗೆ ಪ್ರವೇಶವಿಲ್ಲ ಎಂಬ ಬೋರ್ಡನ್ನು ಮನಸ್ಸಿನಲ್ಲಿ ತಗಲಿಸಿಬಿಡಿರಿ.' ಎನ್ನುತ್ತಾರೆ ಸ್ವಾಮಿ ಸುಖಬೋಧಾನಂದ.

'ದುಃಖವನ್ನು ದೈವಿಕ ಶಸ್ತ್ರಚಿಕಿತ್ಸೆ' 'ಕೋಪ ಅಜ್ಞಾನದ ಒಂದು ರೂಪ ಎನ್ನುತ್ತಾರೆ. 'ವರ್ತಮಾನದಲ್ಲಿ ಬದುಕಲು ಕಲಿಯಿರಿ. ಭೂತ, ಭವಿಷ್ಯಗಳ ಬಲೆಯಲ್ಲಿ ಸಿಕ್ಕಿಹಾಕಿಕೊಳ್ಳಬೇಡಿ. ಇದೊಂದು ಮಹತ್ವದ ಶಿಸ್ತು. ನೀವು ಮಾಡುತ್ತಿರುವುದರಲ್ಲೇ ಪ್ರೀತಿ, ಆನಂದಗಳನ್ನು ತಂದುಕೊಳ್ಳಿ' ಎನ್ನುತ್ತಾರೆ. ದುರಾಸೆ ಮತ್ತು ಗರ್ವ ಇವನ್ನು ಎರಡು ಘಟಸರ್ಪಕ್ಕೆ ಹೋಲಿಸುತ್ತಾರೆ. ಗರ್ವವನ್ನು ಆತ್ಮದ ಅಲ್ಸರ್ ಎನ್ನುತ್ತಾರೆ. 'ಅಸಹನೆ ನಿಶ್ಶಬ್ದ ಕೊಲೆಗಾರ.' ಅಸಹನೆಯನ್ನು ನಿಯಂತ್ರಿಸುವ ಬಗೆಗಳನ್ನು ಸೂಚಿಸುತ್ತಾರೆ. ನಾವು ಅನ್ಯರನ್ನು ನೋಡಿ ಹೋಲಿಸಿಕೊಳ್ಳುತ್ತೇವೆ. ನಾವು ಅವರಿಗಿಂತ ಮೇಲಿನವರು, ಕೆಳಗಿನವರು, ಶ್ರೀಮಂತರು, ಬಡವರು. (ಇದು ಸಲ್ಲದು).

'ಪ್ರಕೃತಿಯನ್ನು ಇದ್ದಂತೆ ಒಪ್ಪಿಕೊಳ್ಳಬೇಕು, ಇಲ್ಲದಿದ್ದರೆ ಅಸಹನೆ ತಲೆದೋರುತ್ತದೆ. ನಾವು ಜೀವನದಲ್ಲಿ ಯಶಸ್ವಿಯಾಗಿದ್ದರೂ ಅಸುಖಿಯಾಗಿರುತ್ತೇವೆ. ನಮ್ಮ ಯಶ ಕೂಡ ದೊಡ್ದ ಸೋಲಾಗಿರುತ್ತದೆ. ಅಂತರಂಗವನ್ನು ಒಳಹೊಕ್ಕು ನೋಡುವುದು ಸಾಧ್ಯವಾದಾಗ ಮಾತ್ರ ನಿಜವಾದ ಆನಂದ ದೊರೆಯುತ್ತದೆ. ಆನಂದದ ಈ ಆಂತರಿಕ ಸೆಲೆಯನ್ನು ಕಂಡುಕೊಳುವುದೇ ನಿಜವಾದ ಯಶಸ್ಸು' ಎನ್ನುತ್ತಾರೆ. 'ಮನಸ್ಸೇ ಸ್ವರ್ಗ, ಮನಸ್ಸೇ ನರಕ.' ಪ್ರತಿಯೊಂದು ಮಾತನ್ನು ಕತೆ ಉಪಕತೆಗಳಿಂದ ಬಿಡಿಸಿ ಹೇಳುತ್ತಾರೆ. ಕರ್ಮಯೋಗ ಮತ್ತು ಧ್ಯಾನಗಳ ಮಹತ್ವವನ್ನು ಬಿಂಬಿಸುತ್ತಾರೆ.

ಪ್ರೇಮದಲ್ಲಿ ವಿಫಲನಾದ ತರುಣನೊಬ್ಬ ಮನೆಬಿಟ್ಟು ಹೋದ. ತಂದೆತಾಯಿಗಳಿಗೆ ಹೇಳದೆ ಹೋದುದರಿಂದ ಅವರ ದಿವ್ಯಪ್ರೇಮಕ್ಕೂ ಬೆಲೆಯಿಲ್ಲದಂತೆ ಮಾಡಿದ. ಗಂಗಾತೀರದಲ್ಲಿ ಅವನು ಗಂಗೆಯಿಂದ ಕಲಿತ ಪಾಠದ ಬಗ್ಗೆ ಹೇಳುತ್ತಾರೆ. 'ನನ್ನಂತೆ ಸಾಗರವನ್ನು ಸೇರಲು ಬದ್ಧನಾಗಿರು. ಯಾವುದೇ ಅಡೆತಡೆ ಬಂದರೂ, ಅದಕ್ಕೆ ತಕ್ಕಂತೆ ತಿರುಗಿ ನಾನು ನನ್ನ ಗುರಿ ತಲುಪುವೆ. ನನ್ನಿಂದ ಪಾಠ ಕಲಿತು, ಜೀವನದಿ ಅಳವಡಿಸು.' ಎಂದು ಗಂಗೆ ಹೇಳಿದಂತಾಯಿತು. ತಾರುಣ್ಯಭರಿತ ಜೀವನ ಮಂತ್ರ ಇದು:

A= Attitude (ಮನೋಧರ್ಮ), B= Belief (ನಂಬಿಕೆ), C=Caring Energy (ಪೋಷಕ ಚೈತನ್ಯ)

ವಿಶ್ವಕ್ಕೆ ನೀನು ಸೇವೆ ಸಲ್ಲಿಸಿದರೆ, ವಿಶ್ವವೂ ನಿನ್ನ ಸೇವೆ ಮಾಡುವುದು ಎನ್ನುವ ಸತ್ಯ ಅರಿಯಿರಿ. (ಗೆಲವಿನಲ್ಲೂ ಸಂಭ್ರಮ! ಸೋಲಿನಲ್ಲೂ ಸಂಭ್ರಮ' ಪುಸ್ತಕದಿಂದ)

English summary
Just immerse in the world of books. Pick a Kannada or any other language book of your favorite author from the shelf and start reading. By reading books you can lead a satisfactory life. A write up by Dr G.V. Kulkarni. He also writes about book by Swamy Sukhabodhanand.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X