• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

'ಹೌಸಿಂಗ್ ಗುರು' ಬಿರುದಾಂಕಿತ ಕನ್ನಡಿಗ ರಮೇಶ ಪ್ರಭು

By ಡಾ| ಜೀವಿ' ಕುಲಕರ್ಣಿ
|

ಇಂದು ರಿಯಲ್ ಎಸ್ಟೇಟ್ (ಭೂ ಮಾಲಿಕತ್ವ), ಹೌಸಿಂಗ್(ಗೃಹ ನಿರ್ಮಾಣ) ಹಾಗೂ ರಿಡೆವಲೆಪ್‌ಮೆಂಟ್ (ಪುನರ್ನಿವೇಶನ) ಬಹಳದೊಡ್ಡ ಉದ್ಯಮಗಳಾಗಿ ಬೆಳೆಯುತ್ತಿವೆ. ಈ ಕ್ಷೇತ್ರದಲ್ಲಿ ಕಾಯದೆಯ ಆತಂಕಗಳು, ವ್ಯಕ್ತಿ ಹಾಗೂ ಸಹಕಾರಿ ಸಂಘಗಳ ಸಂಘರ್ಷಗಳು ಬೃಹದಾಕಾರ ಪಡೆಯುತ್ತಿವೆ.

ಈ ಕ್ಷೇತ್ರದಲ್ಲಿ ಖ್ಯಾತರಾದ ಚಾರ್ಟರ್ಡ್ ಅಕೌಂಟಂಟ್ ರಮೇಶ ಪ್ರಭು ಅವರು ಕನ್ನಡಿಗರು. ಅವರು ಹೌಸಿಂಗ್ ಗುರು' ಎಂಬ ಗೌರವ ಪದವಿ ಪಡೆದಿದ್ದಾರೆ. ಈ ಕ್ಷೇತ್ರದಲ್ಲಿ ಬಹಳ ದೊಡ್ಡ ಹೆಸರು ಗಳಿಸಿದ್ದಾರೆ. ಮನೆಯ ನಿರ್ಮಾಣದಲ್ಲಿ ಡೆವಲಪರ್, ಆರ್ಕಿಟೆಕ್ಟ್, ಚಾರ್‍ಟರ್ಡ್ ಅಕೌಂಟೆಂಟ್ ಇವರ ಅನುಸಂಧಾನದೊಂದಿಗೆ ಸಾಮಾನ್ಯ ಪ್ರಜೆಗಳಾದ ಗ್ರಾಹಕರ ಹಿತಾಸಕ್ತಿಗಳು ತಳಕು ಹಾಕಿರುವುದರಿಂದ ಇದಕ್ಕೆ ಹೆಚ್ಚಿನ ಮಹತ್ವವಿದೆ.

ಕಲಿಯುಗದ ಕಲ್ಪತರು ರಾಯರ ಬಣ್ಣಿಸುವ ಧ್ವನಿ ಸುರುಳಿ

ರಮೇಶ ಪ್ರಭು ಜನಿಸಿದ್ದು 13 ನವೆಂಬರ್, 1965, ದಕ್ಷಿಣ ಕನ್ನಡ ಜಿಲ್ಲೆಯ ಉಪ್ಪುಂದ ಗ್ರಾಮದಲ್ಲಿ. ತಂದೆ ಶಂಕರ ಪ್ರಭು, ತಾಯಿ ಚಂದ್ರಾವತಿ ಪ್ರಭು. ಮಧ್ಯಮ ವರ್ಗದ ಕುಟುಂಬ. ಮನೆಯಲ್ಲಿ ಮಿಠಾಯಿ ತಯಾರಿಸಿ, ಸುತ್ತಮುತ್ತಲ ಹಳ್ಳಿಗಳಲ್ಲಿ ವಾರಕ್ಕೊಂದು ಸಲ ನಡೆಯುವ ಪೇಟೆಯಲ್ಲಿ ಮಾರುವ ವೃತ್ತಿಯನ್ನು ಹೊಂದಿದ್ದರು. ದೊಡ್ಡ ಸಂಸಾರ ಮೂರು ಗಂಡು ಹಾಗು ಐದು ಹೆಣ್ಣು ಮಕ್ಕಳು.

Housing Guru - Mumbai Kannadiga Ramesh Prabhu

ಗಂಡು ಮಕ್ಕಳಲ್ಲಿ ಕಿರಿಯ ಮಗ ರಮೇಶ. ಎಸ್.ಎಸ್.ಸಿ.ಯಲ್ಲಿ ಸ್ಕೂಲಿಗೆ ಪ್ರಥಮನಾಗಿ ಪಾಸಾದರು. ಅದೇವೇಳೆ ಅಣ್ಣ ಗೋವರ್ಧನ ಪ್ರಭು ಅವರಿಗೆ ಮುಂಬೈಯಲ್ಲಿ ಬ್ಯಾಂಕಿನಲ್ಲಿ ಕೆಲಸ ದೊರೆಯಿತೆಂದು ಹೊರಟಾಗ ತಮ್ಮನನ್ನು ಜೊತೆಗೆ ಕರೆದುಕೊಂಡು ಬರುತ್ತಾರೆ. ಅಣ್ಣ 9 ವರ್ಷ ಹಿರಿಯ. ರಮೇಶ ಕೋಟೆಯಲ್ಲಿಯ ಕನ್ನಡ ಭವನ ಜ್ಯೂನಿಯರ್ ರಾತ್ರಿ ಕಾಲೇಜು ಸೇರುತ್ತಾರೆ. ನಂತರ ವಸಯಿಯ ಕಾಲೇಜಿನಲ್ಲಿ ಒಂದು ವರ್ಷ ಕಲಿಯುತ್ತಾರೆ. ಬಿ.ಕಾಂ.ಕಲಿಯಲು ಎಂ.ವಿ. ಕಾಲೇಜು ಪ್ರಾರಂಭಿಸಿದ ಕಾಮರ್ಸ್ ವಿಭಾಗಕ್ಕೆ ಅರ್ಜಿ ಹಾಕುತ್ತಾರೆ.

ಆ ಕಾಲದಲ್ಲಿ ಕಾಮರ್ಸ್ ಡಿಗ್ರಿ ಕಾಲೇಜಿನಲ್ಲಿ ಸೀಟು ಸಿಗುವುದು ಅಸಾಧ್ಯವಾಗಿತ್ತು. ನನ್ನ ಕಡೆಗೆ ಬಂದಾಗ ನಾನು ಪ್ರಿನ್ಸಿಪಾಲರಾಗಿದ್ದ ಮುಳಗಾಂವಕರರನ್ನು ಭೆಟ್ಟಿಯಾದೆ. ಅವರಿಗೆ ಕನ್ನಡ ವಿದ್ಯಾರ್ಥಿಗಳ ಬಗ್ಗೆ ಪ್ರೀತಿ ಇತ್ತು. ನನ್ನ ಶಿಫಾರಸಿನ ಮೇರೆಗೆ ಸೀಟು ಕೊಟ್ಟರು. ಉತ್ತಮ ತರಗತಿಯಲ್ಲಿ ರಮೇಶ ಪಾಸಾದರು (1987). ಮುಂದೆ ಸಿ.ಎ. ಆಗಲು ಆರ್ಟಿಕಲ್‌ಶಿಪ್ ದೊರೆಯಿತು. ಮೂರು ವರ್ಷ ಮುಗಿಯುವ ಮೊದಲೆ, ಪ್ರಥಮ ಪ್ರಯತ್ನದಲ್ಲೇ ಸಿ.ಎ. ಪಾಸಾದದ್ದು ಒಂದು ದಾಖಲೆ. ಸ್ವತಂತ್ರವಾಗಿ ಪ್ರಾಕ್ಟೀಸು ಶುರು ಮಾಡುತ್ತ ನಾಲ್ಕು ವರ್ಷ ವಸಯಿ ಕಾಲೇಜಿನಲ್ಲಿ ಅರೆಕಾಲಿಕ ಪ್ರಾಧ್ಯಾಪಕರಾಗಿ ದುಡಿದರು.

ಬೆಂಗಳೂರು ರಿಯಲ್ ಎಸ್ಟೇಟ್ ಕಂಪನಿಗಳಿಂದ 3 ಸಾವಿರ ಕೋಟಿ ರು. ಪಂಗನಾಮ!

ಆಗಾಗ ರಮೇಶ ಭೆಟ್ಟಿಯಾಗುತ್ತಿದ್ದರು. ಗುರುಗಳೇ ಎಂದು ಪ್ರೀತಿಯಿಂದ ಸಂಬೋಧಿಸುತ್ತಿದ್ದರು. ನಮ್ಮ ಸಂಬಂಧ ಇನ್ನಷ್ಟು ಸಮೀಪ ಬರಲು ಅವರ ಮದುವೆ ಕಾರಣವಾಯ್ತು. ನನ್ನ ಸನ್ಮಿತ್ರ ಆನಂದರಾಯ ಹಾಗೂ ಸುನೀತಾ ಪೈ ಅವರ ಮಗಳಾದ ಸಹನಾಳನ್ನು ಅವರು ಮದುವೆಯಾದರು. ಕಾಲಕಾಲಕ್ಕೆ ಅವರ ಪ್ರಗತಿಯನ್ನು ಸಮೀಪದಿಂದ ನೋಡತೊಡಗಿದೆ.

ಎಲ್ಲ ಸಿ.ಎ.ಗಳಂತೆ ಅಕೌಂಟಿಂಗ್ ಹಾಗೂ ಆಡಿಟ್‌ನಲ್ಲಿ ಅಷ್ಟೇ ತೊಡಗದೇ ಮತ್ತೇನಾದರೂ ಹೊಸತನ್ನು ಸಾಧಿಸಬೇಕೆಂಬ ಛಲ ಅವರಲ್ಲಿತ್ತು. ವಿದ್ಯಾರ್ಥಿಯಾಗಿದ್ದಾಗ ಒಂದು ಹೌಸಿಂಗ್ ಸೊಸೈಟಿಯಲ್ಲಿ ಲೆಕ್ಕ ಬರೆದು ಸ್ವಲ್ಪ ಪಾಕೆಟ್-ಮನಿ ಗಳಿಸುತ್ತಿದರು. ಆಗ ಅವರಿಗೆ ಹೌಸಿಂಗ್ ಸೊಸೈಟಿಗಳ ಸಮಸ್ಯೆಗಳ ಪರಿಕಲ್ಪನೆ ಬಂತು. ಸಹಕಾರಿ ಗೃಹ ನಿರ್ಮಾಣ ಸಂಸ್ಥೆಗಳ ಸಮಸ್ಯೆಗಳನ್ನು, ಅವುಗಳ ಪರಿಹಾರಗಳನ್ನು ಕೂಲಂಕಷವಾಗಿ ಅಭ್ಯಾಸ ಮಾಡಿದರು. ಸಲಹೆ ಕೊಡಲು ಪ್ರಾರಂಭಿಸಿದರು.

ರಿಯಲ್ ಎಸ್ಟೇಟ್ ಬಗ್ಗೆ, ಕನ್ವೇಯನ್ಸಿಂಗ್ ಬಗ್ಗೆ, ರಿಡೆವಲಪ್‌ಮೆಂಟ ಬಗ್ಗೆ ಲೇಖನ ಬರೆಯತೊಡಗಿದರು. ಟೈಂಸ್ ಆಫ್ ಇಂಡಿಯಾದಂತಹ ಪತ್ರಿಕೆಗಳಲ್ಲಿ ಪ್ರಕಟವಾಗತೊಡಗಿದವು. ಮಹಾರಾಷ್ಟ್ರ ಟೈಮ್ಸ್, ಲೋಕಸತ್ತಾ ಮೊದಲಾದ ಮರಾಠಿ ಪತ್ರಿಕೆಗಳಿಂದ ಆಮಂತ್ರಣ ಬಂದಾಗ ಬರೆದರು. ಮಹಾರಾಷ್ಟ್ರ ಸೊಸೈಟೀಜ್ ವೆಲ್ಫೇರ್ ಅಸೋಸಿಯೇಶನ್ (ಎಮ್.ಎಸ್.ಡಬ್ಲಿವ್.ಎ.) ಪ್ರಾರಂಭಿಸಿದರು. ತಮ್ಮ ಸಂಸ್ಥೆಯ ಮುಖಪತ್ರ ಹೌಸಿಂಗ ಸೊಸೈಟೀಜ್ ರಿವ್ಯೂ ಪ್ರಾರಂಭಿಸಿದರು. ಇದರ ಸರ್ಕ್ಯುಲೇಶನ 60 ಸಾವಿರ ಪ್ರತಿಗಳು!

'ಕನ್ನಡ ನಾಮಫಲಕ ಹಾಕಿ, ಇಲ್ಲದಿದ್ದರೆ ದಂಡ ಕಟ್ಟಿ'

ಮಹಾರಾಷ್ಟ್ರದಲ್ಲಿ ಒಂದು ಲಕ್ಷ ಕೊ-ಆಪರೇಟಿವ್ ಹೌಸಿಂಗ್ ಸೊಸೈಟಿಗಳು ಇವೆ, ಅವುಗಳಲ್ಲಿ ನೂರರಲ್ಲಿ ಅರವತ್ತರಷ್ಟು ಸಂಸ್ಥೆಗಳು ಇವರ ಸದಸ್ಯರು. ಗ್ರಾಹಕರಿಗೆ ಬೇಕಾದ ಎಲ್ಲ ಸಹಾಯವನ್ನು ಇವರ ಸಂಸ್ಥೆ ಒದಗಿಸುತ್ತದೆ. ಇವರ ಆಫೀಸಿನಲ್ಲಿ 150 ಜನ ಕೆಲಸಕ್ಕಿದ್ದಾರೆ. ಅವರ ಆಫೀಸಿಗೆ ನಾನು ಹೋದಾಗ ಬಹಳ ಜನರು ಕಾಯುತ್ತ ಕುಳಿತಿದ್ದರು. ನಾನು ನೇರವಾಗಿ ಅವರ ಕ್ಯಾಬಿನ್ನಿಗೆ ಹೋದೆ. ಪ್ರೀತಿಯಿಂದ ಸ್ವಾಗತಿಸಿದರು. ಅವರ ಪಿ.ಆರ್.ಓ.(ಜನ ಸಂಪರ್ಕಾಧಿಕಾರಿ) ಅರ್ಜುನ್ ಬಾಚುಟೆ ಅವರ ಪರಿಚಯ ಮಾಡಿಕೊಟ್ಟರು.

ನಂತರ ಅರ್ಜುನರನ್ನು ಮಾತಾಡಿಸಿ ನಿಮ್ಮ ಬಾಸ್ ಅವರ ಕಾರ್ಯವೈಖರಿ ಹೇಗಿದೆ? ಎಂದು ಕೇಳಿದೆ. ದಿನಕ್ಕೆ ಹದಿನೆಂಟು ತಾಸು ದುಡಿಯುತ್ತಾರೆ. ಇವರಂತಹ ಕರ್ಮಯೋಗಿಗಳು ದೊರೆಯುವುದೇ ಅಪರೂಪ ಎಂದರು. ಎಲ್ಲರೊಡನೆ ಪ್ರೀತಿಯಿಂದ ನಡೆದುಕೊಳ್ಳುತ್ತಾರೆ. ಎಂಥ ಸಮಸ್ಯೆ ತಂದರೂ ಪರಿಹಾರ ಒದಗಿಸುತ್ತಾರೆ ಎಂದರು. ಇವರು ಇಂಗ್ಲೀಷಿನಲ್ಲಿ ಲೇಖನ ಬರೆಯುತ್ತಾರೆ ಗೊತ್ತಿದೆ, ಆದರೆ ಮಾರಾಠಿ ಪತ್ರಿಕೆಗೆ ಹೇಗೆ ಲೇಖನ ಬರೆಯುತ್ತಾರೆ?'' ಎಂದು ಕೇಳಿದೆ. ಅವರಿಗೆ ಮರಾಠಿ ಮಾತಾಡಲು ಬರುತ್ತದೆ. ಅವರು ಡಿಕ್ಟೇಟ್ ಮಾಡುತ್ತಾರೆ, ಮರಾಠಿ ತಜ್ಞರು ಬರೆದುಕೊಳ್ಳುತ್ತಾರೆ. ನಂತರ ಅದರಲ್ಲಿ ತಪ್ಪು ಇದ್ದರೆ ರಮೇಶ ಅವರೇ ತಿದ್ದುತ್ತಾರೆ.

ಇಂಗ್ಲೀಷಿನಲ್ಲಿ 40 ಪುಸ್ತಕ ಬರೆದಿದ್ದಾರೆ. ಅವರ ಹೊಸ ಪುಸ್ತಕದ ಬಿಡುಗಡೆ ದಿಲ್ಲಿಯಲ್ಲಿ ಆಯಿತು. (ಹೊಸ ದೆಹಲಿಯ ಯುನೈಟೆಡ್ ಫೆಡರೇಶನ್ ಆಫ್ ಚಾರ್ಟರ್ಡ್ ಅಕೌಂಟೆಟ್ಸ್, ಪ್ರಕಾಶನ ಮಾಡಿದ್ದಾರೆ). ಅದನ್ನು ನಮ್ಮ ಕೇಂದ್ರ ವಿತ್ತ ಸಚಿವ ಅರುಣ ಜೇಟ್ಲಿಯವರೇ ಮೊನ್ನೆ ಶುಕ್ರವಾರ (28 ಜುಲೈ) ಬಿಡುಗಡೆ ಮಾಡಿದರಂತೆ. ಒಂದು ಪ್ರತಿ ನನಗೆ ರಮೇಶ ಕೊಟ್ಟರು. ಅದು ಆರ್.ಇ.ಆರ್.ಎ.(ರಿರಾ)ದ ಬಗ್ಗೆ ಬರೆದ ಹ್ಯಾಂಡ್‌ಬುಕ್ ಆಗಿದೆ. (OVERVIEW OF THE REAL ESTATE(Regultion anad Development) ACT, 2016 AND RULES, 2017).

ಶನಿವಾರ (29 ಜುಲೈ) ಬಾಂದ್ರ-ಕುರ್ಲಾ ಕಾಂಪ್ಲೆಕ್ಸ್‌ನಲ್ಲಿ ಆಯೋಜಿತವಾದ ಚಾರ್ಟರ್ಡ್ ಅಕೌಂಟೆಂಟ್ಸ್ ಅಸೋಸಿಯೇಶನ್ನಿನ ವಿಶೇಷ ಸಭೆಯಲ್ಲಿ ರಮೇಶ ಅವರು ಆಹ್ವಾನಿತರಾಗಿದ್ದರು. ನಾನೆಂದೆ, ರಮೇಶ, ನಿಮ್ಮ ಭಾಷಣ ನಾನು ಕೇಳಬೇಕು. ಅವರೆಂದರು, ಹೈಲೀ ಟೆಕ್ನಿಕಲ್ ವಿಷಯ ಇದೆ ಸರ್, ನಿಮಗೆ ಅರ್ಥವಾಗಲಿಕ್ಕಿಲ್ಲ. ಆದರೆ ತಾವು ಭಾಷಣಕ್ಕೆ ಬಂದರೆ ನನಗೆ ಹೆಚ್ಚಿನ ಸಂತೋಷ. ರಿರಾ ಕಾಯದೆಯ ಬಗ್ಗೆ ಅವರ ಭಾಷಣವಿತ್ತು. ಪವರ್ ಪಾಯಿಂಟ್ ಪ್ರೆಸೆಂಟೇಶನ್. ನೂರು ಜನ ಸದಸ್ಯರು ಬಂದಿದ್ದರು. ಈ ಭಾಷಣ ಮನೆಯಲ್ಲೆ ಸಾವಿರ ಜನ ಕೇಳುವ ವ್ಯವಸ್ಥೆ ಮಾಡಿದ್ದರಂತೆ. ಓದುಗರಿಂದ ಪ್ರಶ್ನೆ ಆಹ್ವಾನಿಸಿ ಉತ್ತರಿಸುವ ಪದ್ಧತಿ ಚೆನ್ನಾಗಿದೆ ಎಂದೆ. ನೀವು ಬರಿ ಲೆಕ್ಚರ್ ಕೊಡುವುದರೊಂದಿಗೆ ಪ್ರಶ್ನೋತ್ತರ ಅಳವಡಿಸಿದ್ದು ಹೆಚ್ಚು ಆಕರ್ಷವಾಗಿದೆ. ನಮ್ಮ ವಿದ್ಯಾರ್ಥಿ ಬೆಳೆದ ಎತ್ತರ ಕಂಡು ಅನುಭವಿಸಲು ನಿಮ್ಮ ಲೆಕ್ಚರ್ ಕೇಳಲು ಬಂದೆ'' ಎಂದು ಶ್ಲಾಘಿಸಿದೆ.

ಮಿತ್ರ ಆನಂದ ಪೈ ಹಾಗೂ ಸುನೀತಾ ಪೈ ಅವರಿಗೆ ತಮ್ಮ ಅಳಿಯನ ಪ್ರಗತಿಯ ಬಗ್ಗೆ ಕೇಳಿದಾಗ ಅವರು ಸಂತಸಪಟ್ಟರು. ಅವರಿಗೆ ಎರಡು ಹೆಣ್ಣು ಮಕ್ಕಳು. ಹಿರಿಯ ಮಗಳು ಸಹನಾ, ರಮೇಶ ಅವರ ಪತ್ನಿ. ಎರಡನೆಯ ಮಗಳು ಸೌಮ್ಯಾ. ಅವಳು ಅಮೆರಿಕೆಯಲ್ಲಿ ಸಾಫ್ಟ್ ವೇರ್ ಇಂಜಿನಿಯರ್ ಆಗಿದ್ದಾಳೆ. ರಮೇಶ ಅಂದರೆ ಅಳಿಯನಲ್ಲ, ಮಗನೇ ಆಗಿದ್ದಾನೆ. ನಮಗೆ ಗಂಡುಮಕ್ಕಳಿಲ್ಲ ಎಂಬ ಕೊರತೆಯನ್ನು ಹೋಗಲಾಡಿಸಿದ್ದಾನೆ. ಅವರ ಮಕ್ಕಳು ಸಿದ್ಧಾರ್ಥ ಹಾಗೂ ಶ್ರೇಯಸ್ ನಮ್ಮ ಮನೆಯಲ್ಲೇ ಬೆಳೆದರು. ಒಳ್ಳೆಯ ಸಂಸ್ಕಾರ ಪಡೆದಿದ್ದಾರೆ, ಗುರುಹಿರಿಯರನ್ನು ಗೌರವಿಸುತ್ತಾರೆ ಎಂದು ಭಾವಪೂರಿತರಾಗಿ ಹೇಳಿದರು. ಮುಂಬೈಗೆ ಕರೆದುಕೊಂಡು ಬಂದು ಆಶ್ರಯ ನೀಡಿದ ಅಣ್ಣ ಗೋವರ್ಧನ ಹೇಳುತ್ತಾರೆ, ನಮ್ಮ ಮನೆತನಕ್ಕೆ ಕೀರ್ತಿ ತಂದ ತಮ್ಮನ ಬಗ್ಗೆ ನನಗೆ ಅಭಿಮಾನವಿದೆ ಎನ್ನುತ್ತಾರೆ.

ರಮೇಶ ಅವರು ಎಲ್ಲ ಪಾರ್ಟಿಯ ಮುಂದಾಳುಗಳ ಪ್ರೀತಿ ಸಂಪಾದಿಸಿದ್ದಾರೆ. ಅವರುಗಳು ಸಂಘಟಿಸುವ ಸೆಮಿನಾರುಗಳಲ್ಲಿ ವಿದ್ವತ್ಪೂರ್ಣ ಪ್ರವಚನ ನೀಡಿದ್ದಾರೆ. ಅವರು ತಮ್ಮ ಜೀವನದಲ್ಲೇ ಮರೆಯಲಾಗದ ಗೌರವ ದೆಹಲಿಯ ರಾಷ್ಟ್ರಪತಿ ಭವನದಲ್ಲಿ ದೊರೆಯಿತು. ಅವರು 2012 ಜೂನ್ ತಿಂಗಳ ಮಧ್ಯದಲ್ಲಿ ಮೂರು ದಿನ ಭಾರತದ ಪ್ರಥಮ ಪ್ರಜೆ, ರಾಷ್ಟ್ರಪತಿ ಪ್ರತಿಭಾತಾಯಿ ಪಾಟೀಲರ ಅತಿಥಿಯಾಗಿದ್ದರು. ಅವರ ಭವನದಲ್ಲಿ ತಮ್ಮ ಕಾರ್ಯದ ಬಗ್ಗೆ ಪ್ರೆಸೆಂಟೇಶನ್ ಮಾಡಿದರು. ಅವರೊಡನೆ ಸಹಭೋಜನ, ಗಾರ್ಡನ್ನಿನಲ್ಲಿ ವಿಹಾರ, ಪ್ರೇಕ್ಷಣೀಯ ಸ್ಥಳಗಳ ವೀಕ್ಷಣೆ ಮಾಡಿದರು. ಇವರ ಕುಟುಂಬದವರನ್ನು ವಿಮಾನ ನಿಲ್ದಾಣದಿಂದ ಸ್ಪೆಷಲ್ ಸೆಕ್ಯುರಿಟಿ ಜನ ಕರೆತಂದದ್ದು, ರಾಜ ಮರ್ಯಾದೆ ಪಡೆದ ಬಗ್ಗೆ ಅವರ ಸಹನಾ ಹೇಳಿದರು. ಅದರ ವಿಶೇಷ ಛಾಯಾಚಿತ್ರ ನೋಡಿ ನಾನೂ ಆನಂದಿತನಾದೆ.

English summary
Housing Guru - Mumbai Kannadiga Ramesh Prabhu has carved his own niche in the field of real estate in Mumbai. GV Kulkarni writes about the achiever.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more
X