• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಸಂಸ್ಕೃತ ಕಬ್ಬಿಣದ ಕಡಲೆಯಲ್ಲ : ಡಾ. ತಿರುಮಲ ಸಂದರ್ಶನ

By Prasad
|

ಡಾ| ತಿರುಮಲ ಪ್ರಹ್ಲಾದ ಕುಲಕರ್ಣಿ (1972) ಬೆಂಗಳೂರಿನ ಪೂರ್ಣಪ್ರಜ್ಞ ವಿದ್ಯಾಪೀಠದಲ್ಲಿ ಸಂಸ್ಕೃತ ಪ್ರಾಧ್ಯಾಪಕರು. ಇವರು ಗುರುಕುಲ ಪದ್ಧತಿಯಲ್ಲಿ ನ್ಯಾಯ, ವೇದಾಂತ, ವ್ಯಾಕರಣ, ಅಲಂಕಾರ, ಕಾವ್ಯ ಮುಂತಾದವುಗಳ ತಲಸ್ಪರ್ಶಿ ಅಭ್ಯಾಸದೊಂದಿಗೆ ಪೇಜಾವರ ಮಠಾಧೀಶರಾದ ಪರಮಪೂಜ್ಯ ಶ್ರೀಶ್ರೀ ವಿಶ್ವೇಶತೀರ್ಥ ಶ್ರೀಗಳಲ್ಲಿ ಅಭ್ಯಾಸಮಾಡಿ ಸುಧಾ ಮಂಗಲ (1996) ಪೂರೈಸಿದ ವಿದ್ವಾಂಸರು.

ಕರ್ನಾಟಕ ಮುಕ್ತ ವಿಶ್ವವಿದ್ಯಾಲಯದಿಂದ ಸಂಸ್ಕೃತದಲ್ಲಿ ಎಂ.ಎ. ಪದವಿಯನ್ನು (1999) ಪಡೆಯುವುದರ ಜೊತೆಗೆ ಶ್ರೀಶ್ರೀ ಸುವಿದ್ಯೇಂದ್ರ ತೀರ್ಥರ ಮಾರ್ಗದರ್ಶನದಲ್ಲಿ ತಂತ್ರಸಾರ ಸಂಗ್ರಹದ ಮೇಲೆ ಪಂ.ರಟ್ಟೀಹಳ್ಳಿ ವೆಂಕಟಪತ್ಯಚಾರ್ಯರು 300 ವರ್ಷಗಳ ಹಿಂದೆ ರಚಿಸಿದ ಗುರುವರ್ಥದೀಧಿತಿ ಎಂಬ ವಿದ್ವತ್ಪೂರ್ಣ ಟಿಪ್ಪಣಿಯ ಸಂಶೋಧನಾತ್ಮಕ ಸಂಪಾದನೆ ಮಾಡಿ ಪಿಎಚ್.ಡಿ. ಪದವಿಯನ್ನು (2008) ಪಡೆದರು.

ಹೈದರಾಬಾದ್ ವಿಶ್ವ ವಿದ್ಯಾಲಯದಲ್ಲಿ ಕಂಪ್ಯೂಟರ್ ಪ್ರಶಿಕ್ಷಣಕ್ಕಾಗಿ ಎರಡು ವರ್ಷ ಡೆಪ್ಯುಟೇಶನ್ ಮೇಲೆ ತೆರಳುವ ಅವಕಾಶ ಪಡೆದು(1998-2000) ಸಂಸ್ಕೃತ ಮತ್ತು ಕಂಪ್ಯೂಟರ್ ವಿಷಯದಲ್ಲಿ ಆಳವಾದ ಅಧ್ಯಯನ ಹಾಗೂ ಸಂಶೋಧನೆ ನಡೆಸಿದರು. ಇಂದು ದೇಶದಲ್ಲಿ ಸಂಸ್ಕೃತ ಹಾಗೂ ಕಂಪ್ಯೂಟರ್ ಕ್ಷೇತ್ರದಲ್ಲಿ ಅಧಿಕೃತವಾಗಿ ಮಾತನಾಡುವ ಕ್ಷಮತೆಯನ್ನು ಪಡೆದ ಬೆರಳೆಣಿಕೆಯ ವಿದ್ವಾಂಸರಲ್ಲಿ ಇವರೂ ಒಬ್ಬರಾಗಿದ್ದಾರೆ.

ಇವರು ತಮ್ಮ ಶಿಷ್ಯ ಜೈದೀಪ ಜೋಶಿಯೋಂದಿಗೆ (ಐಐಟಿ ಮುಂಬೈ ಪದವೀಧರ) ರಚಿಸಿದ ನ್ಯಾಯಶಾಸ್ತ್ರದ ಬಗ್ಗೆ ಬರೆದ ಇಂಗ್ಲಿಷ್ ಗ್ರಂಥವು (The Language of Logic- Navyaa-nyaaya Perpectives) ಮಣಿಪಾಲ್ ಯುನಿವರ್ಸಿಟಿ ಪ್ರೆಸ್‌ನಿಂದ(2013) ಪ್ರಕಟವಾಗಿದೆ. ಅವರ ಹೊಸ ಪ್ರಯೋಗ ಸರಲ-ಕಠಿನ ಸಂಸ್ಕೃತಮ್' ಸಂಸ್ಕೃತವನ್ನು ಸುಲಭವಾಗಿ ದೇಶೀಯರಿಗೆ, ವಿದೇಶಿಯರಿಗೆ ಕಲಿಸುವ ನವವಿಧಾನವಾಗಿದ್ದು ಈ ಪುಸ್ತಕದ 5,000 ಪ್ರತಿಗಳನ್ನು ಭಾಗವತ ಪ್ರತಿಷ್ಠಾನ, ಭಂಡಾರಕೆರೆ ಮಠದವರು (2015) ಪ್ರಕಾಶನಗೋಳಿಸಿ ಸಂಸ್ಕೃತ ಪ್ರೇಮಿಗಳಿಗೆ ಮಹದುಪಕಾರವನ್ನು ಮಾಡಿದ್ದಾರೆ. ಈ ಪುಸ್ತಕ ರಚನೆಗೆ ಕಾರಣ, ಅದರ ನಾವಿನ್ಯ, ಅದರ ಪ್ರಯೋಜದ ಬಗ್ಗೆ ಲೇಖಕರ ಮುಖದಿಂದ ತಿಳಿದುಕೊಳ್ಳುವ ಕಿರು ಪ್ರಯತ್ನ ಈ ಸಂದರ್ಶನದ ಉದ್ದೇಶ.

ಜೀವಿ : ಈ ಪುಸ್ತಕ ಬರೆಯಬೇಕೆಂಬ ಇಚ್ಛೆ ನಿಮಗೆ ಯಾವಾಗ ಅಂಕುರಿಸಿತು?

ತಿರುಮಲ : ಎರಡು ವರ್ಷಗಳ ಕಾಲ (1998-2000) ಹೈದರಾಬಾದಿನ ಕೇಂದ್ರೀಯ ವಿಶ್ವವಿದ್ಯಾಲಯದಲ್ಲಿ ಕಂಪ್ಯೂಟರಿನ ವಿಶೇಷ ಶಿಕ್ಷಣಕ್ಕಾಗಿ ನನ್ನನ್ನು ನಿಯೋಜಿಸಿದಾಗ, ಅಲ್ಲಿ ಯಾವುದೋ ಲೇಖನದಲ್ಲಿ ಓದಿದ್ದು ನೆನಪಾಗುತ್ತದೆ. ವಿದೇಶದ ವಿಶ್ವವಿದ್ಯಾಲಯವೊಂದರಲ್ಲಿ ಇಂಗ್ಲಿಷ್ ಬಾರದ ವಿದ್ಯಾರ್ಥಿಗಳಿಗೆ ಇಂಜಿನಿಯರಿಂಗಿಗೆ ಬೇಕಾದಷ್ಟು ಇಂಗ್ಲಿಷ್ ಎಮ್.ಬಿ.ಬಿ.ಎಸ್.ಗೆ ಬೇಕಾದಷ್ಟು ಇಂಗ್ಲಿಷ್ ಎಂದು ಎರಡು-ಮೂರು ತಿಂಗಳುಗಳಲ್ಲಿ ಇಂಗ್ಲಿಷ್ ಭಾಷೆಯನ್ನು ಕಲಿಸಿ, ಮುಂದೆ ನಾಲ್ಕಾರು ವರ್ಷ ಸರಾಗವಾಗಿ ಎಲ್ಲರಂತೆ ಓದಲು ವಿದ್ಯಾರ್ಥಿಗಳನ್ನು ಸಿದ್ಧಪಡಿಸಲಾಗುತ್ತದೆ. ಇದನ್ನು ಅನುಸರಿಸಿ ಸಂಸ್ಕೃತ-ಕನ್ನಡದಂತಹ ಭಾಷೆಗಳನ್ನು ಈ ಭಾಷೆ ಅರಿಯದವರಿಗೆ ಯಾಕೆ ಕಲಿಸಲು ಪ್ರಯತ್ನಿಸಬಾರದು? ಎಂಬ ವಿಚಾರ ಬಂತು, ಅದು ಹುಳದಂತೆ ನನ್ನ ತಲೆಯನ್ನು ಕೊರೆಯುತ್ತಲೇ ಇತ್ತು.

ಜೀವಿ : ಇದು ಕಾರ್ಯರೂಪಕ್ಕೆ ಇಳಿಯಲು ಹೇಗೆ ಸಾಧ್ಯವಾಯಿತು?

ತಿರುಮಲ : 2008ರಿಂದ ನಾಲ್ಕು ವರ್ಷ ಕೇಂದ್ರ ಸರ್ಕಾರದ Preparing tool-kit for Sanskrit and Sanskrit - Hindi Machine translation ಎಂಬ ಯೋಜನೆ ಅಂಬಾ ಕುಲಕರ್ಣಿ, ಪ್ರಾಧ್ಯಪಕಿ, ಸಂಸ್ಕೃತ ವಿಭಾಗ, ಕೇಂದ್ರೀಯ ವಿಶ್ವವಿದ್ಯಾಲಯ, ಹೈದರಾಬಾದ್ ಇವರ ಸಮರ್ಥ ನೇತೃತ್ವದಲ್ಲಿ ನಡೆಯಿತು. ಬೆಂಗಳೂರಿನ ಕೇಂದ್ರಕ್ಕೆ ನಾನು ಸಂಯೋಜಕನಾಗಿದ್ದೆ. ಇದರಲ್ಲಿ ಸಂಸ್ಕೃತ ಭಾಷಾ ವಿಶ್ಲೇಷಣೆಗೆ ಅನೇಕ ಉಪಕರಣಗಳು ಸಿದ್ಧವಾದವು.

ದೊರೆತ ಹೊಸ ಉಪಕರಣಗಳ ಸಹಾಯದಿಂದ ವೇದಾಂತ-ಸಂಸ್ಕೃತ ಎಂಬ ಪಠ್ಯಕ್ರಮವನ್ನು ಸಿದ್ಧಪಡಿಸಬಹುದು ಎಂದು ಅನಿಸತೊಡಗಿತು. ಈ ಬಗ್ಗೆ ದೆಹಲಿಯ DIT (Department of Information and Technology)ಯಲ್ಲಿ ನಡೆದ ಯೋಜನೆಯ ಸಭೆಯೊಂದರಲ್ಲಿ ನಾನು ಪ್ರಸ್ತಾಪವನ್ನು ಸಲ್ಲಿಸಿದಾಗ ಉಪಸ್ಥಿತರಿಂದ ಉತ್ತಮ, ಸಕಾರಾತ್ಮಕ ಪ್ರತಿಕ್ರಿಯೆ ದೊರೆಯಿತು.

ಈ ನೂತನ ಪ್ರಯೋಗಕ್ಕಾಗಿ, ವೃತ್ತಿಯಲ್ಲಿ ಮಾಹಿತಿ ತಂತ್ರಜ್ಞಾನ (Information Technology) ಮತ್ತು ಜೈವಿಕ ತಂತ್ರಜ್ಞಾನ (Bio-technology) ಕ್ಷೇತ್ರಗಳಲ್ಲಿ ಕೆಲಸ ಮಾಡುತ್ತಿರುವ ಸರ್ವಶ್ರೀ ವಾಸುದೇವ, ಶ್ರೀವತ್ಸ, ವೇಣುಗೋಪಾಲ, ವಿಜಯಸಾರಥಿ ಮತ್ತು ಸುಮಂತ್ ಎಂಬ ಐದು ಜನರಿಗೆ ಈ ಕ್ರಮದಲ್ಲಿ ಪಾಠ ಮಾಡಲಾಯಿತು. ಅತಿ ಹೆಚ್ಚು ಬಳಕೆಯಲ್ಲಿರುವ, 95%ಕ್ಕಿಂತ ಹೆಚ್ಚು ಬರುತ್ತಿರುವ, ಶಬ್ದ-ಅವ್ಯಯ-ಸಂಧಿ-ಸಮಾಸ-ಕ್ರಿಯಾಪದ ಮತ್ತು ಇತರ ಭಾಷಾಸಂಬಂಧಿ ಅಂಕಿ-ಅಂಶಗಳನ್ನು ಗಮನಿಸಿ ಅವುಗಳಿಗೆ ಹೆಚ್ಚು ಒತ್ತು ನೀಡಿ ಕಲಿಸುವುದು; ಇದರಿಂದ ಹೊಸ ಓದುಗರು ಯಾವ ಪಾಠ ಕೇಳಿದರೂ ಹೆಚ್ಚಿನ ಭಾಗವನ್ನು ಅರ್ಥೈಸಿಕೊಳ್ಳಲು ಸಾಧ್ಯವಿದೆ ಎಂಬ ಮಾತು ಮನದಟ್ಟಾಯಿತು.

ಜೀವಿ : ಸಂಸ್ಕೃತ ಭಾಷೆ ಕಲಿಯುವುದು ಕಬ್ಬಿಣದ ಕಡಲೆ ಎನ್ನುತ್ತಾರಲ್ಲ, ಇದರ ಬಗ್ಗೆ ನಿಮ್ಮ ಅಭಿಪ್ರಾಯವೇನು?

ತಿರುಮಲ : ನನ್ನ ಅನುಭವಕ್ಕೆ ಬಂದ ಸಂಗತಿ - ಅನೇಕ ಜಿಜ್ಞಾಸುಗಳು, ಶ್ರದ್ಧಾವಂತರು, 35-40 ವಯಸ್ಸಿನಲ್ಲಿ ಇರುವವರು, ಸುಶಿಕ್ಷಿತರು, ತಮ್ಮ ಕ್ಷೇತ್ರದಲ್ಲಿ ಪ್ರಬುದ್ಧರು, ವೇದಾಂತಾಭ್ಯಾಸ ಮಾಡುವ ಉದ್ದೇಶದಿಂದ ಗುರುಗಳ ಬಳಿಗೆ ಬರುತ್ತಾರೆ. ಶನಿವಾರ-ಭಾನುವಾರದಂತಹ ರಜಾದಿನಗಳಲ್ಲಿ ಒಂದೆರಡು ಗಂಟೆ ಬಿಡುವು ಮಾಡಿಕೊಂಡು, ಗೀತೆಯನ್ನೊ ಅಥವಾ ಯಾವುದೋ ಶಾಸ್ತ್ರದ ಪ್ರಕರಣ ಗ್ರಂಥವನ್ನೊ ಮುಂದಿಟ್ಟುಕೊಂಡು ಪಾಠ ಆರಂಭವಾಗುತ್ತದೆ. ಕೆಲವು ತಿಂಗಳು ಆಗುತ್ತಿದ್ದಂತೆ, ಪ್ರಾರಂಭದ ಹಂತದಲ್ಲಿ ಗುರುಗಳು ಕನ್ನಡದಲ್ಲಿ ಹೇಳಿದ್ದು ಅರ್ಥವಾಗುತ್ತಿದೆ; ಮೂಲ ಗ್ರಂಥದಿಂದ ವಿಷಯಗಳನ್ನು ಅರಿಯಲು ಆಗುತ್ತಿಲ್ಲ ಎಂಬ ಅರಿವು ಮೂಡುತ್ತದೆ.

ಗುರುಗಳೆ! ಸ್ವಲ್ಪ ಸಂಸ್ಕೃತಪಾಠವನ್ನೂ ಮಾಡಿರಿ ಎನ್ನುತ್ತಾರೆ. ಅದೇ ಸಮಯದಲ್ಲಿ, ಸಮಾಂತರವಾಗಿ ಸಂಸ್ಕೃತಪಾಠವೂ ಆರಂಭವಾಗುತ್ತದೆ. ಸಾಂಪ್ರದಾಯಿಕ ಕ್ರಮದಲ್ಲಿ ಅಕಾರಾಂತ-ಇಕಾರಾಂತಾದಿ ಪುಲ್ಲಿಂಗ-ಸ್ತ್ರೀಲಿಂಗ-ನಪುಂಸಕ ಲಿಂಗಗಳ ಶಬ್ದಗಳ ಪರಿಚಯ, ಸರ್ವನಾಮಗಳ ಪರಿಚಯ, ಕ್ರಿಯಾಪದಗಳ, ದಶಲಕಾರಗಳ ಪರಿಚಯ, ಜೊತೆಗೆ ಯಾವುದಾದರೊಂದು ಪಠ್ಯಪುಸ್ತಕದ ಪಾಠ - ಹೀಗೆ ಸಾಗುತ್ತದೆ. ನಾಲ್ಕಾರು ತಿಂಗಳಾದರೂ, ಸಂಸ್ಕೃತಪಾಠ ಸಾಕಷ್ಟು ನಡೆದಿದ್ದರೂ, ಮೂಲಗ್ರಂಥಗಳಲ್ಲಿ ಇನ್ನೂ ಹೆಚ್ಚಿನ ಭಾಗ ಅರ್ಥವೇ ಆಗುತ್ತಿಲ್ಲ. ಅದೆಷ್ಟು ಸಂಧಿಗಳು! ಅದೆಷ್ಟು ಸಮಾಸಗಳು! ನಿಧಾನವಾಗಿ ಆಸಕ್ತಿ ಕಡಿಮೆ ಆಗುತ್ತದೆ. ಅದರ ಫಲವಾಗಿ ಪಾಠಕ್ಕೆ ವಿಘ್ನಗಳು ಹೆಚ್ಚುತ್ತಾ, ಕೆಲವು ಕಾಲ ಕುಂಟುತ್ತಾ ಸಾಗಿ, ಒಂದು ದಿನ ಸಂಸ್ಕೃತ ಪಾಠ ನಿಂತುಹೋಗುತ್ತದೆ.

ಕೆಲವರು ಎಷ್ಟು ಅರ್ಥ ಆಗುವುದೊ ಆಗಲಿ ಎಂದು ರಾಜಿಯಾಗಿತ್ತಾರೆ, ಶಾಸ್ತ್ರದ ಪಾಠ ಬಿಡದೆ ಮುಂದುವರೆಸುತ್ತಾರೆ. ಅವರಿಗೆ ಮೂಲ ಗ್ರಂಥ ಎಷ್ಟು ಅರ್ಥವಾಗುತ್ತದೆ? ಎಂದು ಕೇಳಿದರೆ, ಅಲ್ಪ, ಸ್ವಲ್ಪ.' ಎಂಬ ಉತ್ತರ ಬರುತ್ತದೆ. ಕೆಲವರು ಪ್ರಚಂಡರು. ಎಲ್ಲ ತೊಡಕುಗಳನ್ನು, ಆತಂಕಗಳನ್ನು ದಾಟಿ ಅರ್ಥಮಾಡಿಕೊಂಡೇ ಓದುವ ಹಟ ಮಾಡುತ್ತಾರೆ. ಯಶಸ್ಸನ್ನೂ ಗಳಿಸುತ್ತಾರೆ. ಇಂಥವರು ವಿಶೇಷವಾಗಿ ಅಭಿನಂದನಾರ್ಹರು.

ಇನ್ನೊಂದೆರಡು ವಾಸ್ತವಗಳು. ಆಯುರ್ವೇದ-ಯೋಗಶಾಸ್ತ್ರ ಮುಂತಾದ, ಸಂಸ್ಕೃತದಲ್ಲಿ ಮಾತ್ರ ಅವುಗಳ ಬಗ್ಗೆ ಸಾಹಿತ್ಯವಿರುವ ಕ್ಷೇತ್ರಗಳಲ್ಲಿ ಕೆಲಸ ಮಾಡುವ ಅನೇಕ ವೈದ್ಯರಿಗೆ, ಸಾಧಕರಿಗೆ ಮೂಲಗ್ರಂಥಗಳನ್ನು ಓದುವ, ಅವುಗಳಲ್ಲಿ ಅಡಗಿರುವ ಸೂಕ್ಷ್ಮಾಂಶಗಳ ಅರ್ಥಗ್ರಹಣ ಮಾಡುವ, ಅವುಗಳನ್ನು ಪ್ರಚುರಪಡಿಸುವ ಮಹದಾಸೆ ಇರುವುದು ಸ್ವಾಭಾವಿಕ. ಸಂಸ್ಕೃತವನ್ನು ಎಷ್ಟೆಂದು ಕಲಿಯುವುದು? ಎಲ್ಲಿಂದ ಕಲಿಯುವುದು?

ಕಳೆದ ಒಂದು ಶತಮಾನದಲ್ಲಿ ಭಾಷಾಶಾಸ್ತ್ರ ಬಹಳ ಬೆಳೆದಿದೆ. ದಿಗ್ಭಮೆಯಾಗುವಷ್ಟು ಪ್ರಗತಿ ಸಾಧಿಸಿದೆ. ನಮ್ಮ ವಿಶ್ವವಿದ್ಯಾಲಯಗಳಲ್ಲಿ ವಿವಿಧ ಭಾಷೆಯ ನೂರಾರು ಸಮರ್ಥ ವಿದ್ವಾಂಸರು, ಪರಿಣತರು ಹೊಸ ಹೊಸ ಸಂಶೋಧನೆಗಳನ್ನು ಮಾಡಿ ರಾಷ್ಟ್ರೀಯ-ಅಂತಾರಾಷ್ಟ್ರೀಯ ವಿಚಾರಗೋಷ್ಠಿಗಳಲ್ಲಿ ಪ್ರಬಂಧಗಳನ್ನು ಮಂಡಿಸಿದ್ದಾರೆ, ಮಂಡಿಸುತ್ತಲೇ ಇದ್ದಾರೆ.

ದುರದೃಷ್ಟಕರ ವಾಸ್ತವಾಂಶವೆಂದರೆ ಭಾಷಾಶಾಸ್ತ್ರದ ಪಿತಾಮಹ ಪಾಣಿನಿಯ ಕೊಡುಗೆಯನ್ನು ಇವರು ತಿಳಿದಿಲ್ಲ, ಅವನ ಮೂಲಗ್ರಂಥವನ್ನು ಓದಿಲ್ಲ. ಯಾವುದೋ ಪ್ರಸಂಗದಲ್ಲಿ ಈ ಬಗ್ಗೆ ಪಾಣಿನಿ-ಪರಂಪರೆ ಏನು ಹೇಳುತ್ತದೆ? ಎಂದು ತಿಳಿಯಬಯಸಿದರೂ, ಅವರಿಗೆ ತಿಳಿಯುವ ಸುಲಭ ದಾರಿಯಿಲ್ಲ. ಮತ್ತೆ ಅದೇ ಪಶ್ನೆ ಎದುರಾಗುತ್ತದೆ: ಸಂಸ್ಕೃತವನ್ನು ಎಷ್ಟೆಂದು ಕಲಿಯುವುದು? ಎಲ್ಲಿಂದ ಕಲಿಯುವುದು?!

ಜೀವಿ : ಕನಸುಗಳು ತಮ್ಮ ಗರ್ಭದಲ್ಲಿ ವಾಸ್ತವದ ಬೀಜ ಧರಿಸಿರುತ್ತವೆ. ಇದರಲ್ಲಿ ನಿಮಗೆ ಪೂರ್ತಿ ವಿಶ್ವಾಸವಿದ್ದಂತೆ ತೋರುತ್ತದೆ. ನಿಮ್ಮ ಸಂಸ್ಕೃತವನ್ನು ಸುಲಭವಾಗಿ ಕಲಿಸುವ ಪದ್ಧತಿಯಿಂದ ಏನನ್ನು ಸಾಧಿಸಬಹುದು?

ತಿರುಮಲ : ವೇದಾಂತ ಓದಲು ಬರುವ ಎಲ್ಲರೂ ಪ್ರತಿ ಪದವನ್ನು ಅರ್ಥಾನುಸಂಧಾನ ಮಾಡಿಕೊಂಡು ಓದಬೇಕು. ಚರಕ-ಸುಶ್ರುತರ ಗ್ರಂಥಗಳ ತಲಸ್ಪರ್ಶಿ ಪಾಂಡಿತ್ಯ ಗಳಿಸಿದ ನೂರಾರು ಆಯುರ್ವೇದ ವೈದ್ಯರು ನಮ್ಮ ಸುತ್ತಲೂ ಇರಬೇಕು. ಇನ್ನು ಮುಂದೆ ಆಯುರ್ವೇದ ಓದುವ ಎಲ್ಲರೂ ಸಂಸ್ಕೃತವನ್ನು ವ್ರತವೆಂದು ಓದಬೇಕು, ಕಾಟಾಚಾರಕ್ಕೆ ಓದದಂತಾಗಬಾರದು. ರಾಜ್ಯಶಾಸ್ತ್ರದಲ್ಲಿ ಪಿಎಚ್.ಡಿ. ಮಾಡುವ ವಿದ್ಯಾರ್ಥಿ ತನ್ನ ಸಂಶೋಧನೆಯ ವಿಷಯದ ಬಗ್ಗೆ ಕೌಟಿಲ್ಯ ಏನು ಹೇಳುತ್ತಾನೆ ಎನ್ನುವುದನ್ನು ಓದುವಂತಾಗಬೇಕು, ಮತ್ತೆ ಉಲ್ಲೇಖಿಸುವಂತೆ ಕೂಡ ಆಗಬೇಕು.

ನ್ಯಾಯಮೂರ್ತಿ ರಾಮಾ ಜೋಯಿಸರು ಸ್ಮೃತಿಗ್ರಂಥಗಳಿಂದ ಆಯ್ದು ನೀಡಿದ ಅಪೂರ್ವ ವಾಕ್ಯಗಳನ್ನು ಓದಿ ಅರ್ಥೈಸಬಲ್ಲ, ಅವನ್ನು ತಮ್ಮ ನಿರ್ಣಯಗಳಲ್ಲಿ ಉಲ್ಲೇಖಿಸುವ ಹತ್ತಾರು ವಕೀಲರು, ನ್ಯಾಯಾಧೀಶರು ಮುಂದೆ ಬರಬೇಕು. ಶಾಲಾಕಾಲೇಜುಗಳಲ್ಲಿ ಸಂಸ್ಕೃತವನ್ನು ಓದುವ ವಿದ್ಯಾರ್ಥಿಗಳ ಸಂಸ್ಕೃತವನ್ನು ಗ್ರಹಿಸುವ ಮಟ್ಟ ಇದರಿಂದ ಹೆಚ್ಚಾಗಲಿ. ಇದುವೆ ನನ್ನ ಮಹದಾಶೆಯಾಗಿದೆ.

ಜೀವಿ : ನೀವು ಬರೆದ ಪುಸ್ತಕ ಈ ದಿಶೆಯಲ್ಲಿ ಒಂದು ವಿನೂತನ ಪ್ರಯತ್ನ ಎಂಬ ಮಾತು ಯಾರಾದರೂ ಒಪ್ಪಬಹುದು. ಈ ಪ್ರಯತ್ನದ ಬಗ್ಗೆ ನಿಮಗೇನೆನಿಸುತ್ತದೆ?

ತಿರುಮಲ : ಈ ಪುಸ್ತಕವು ಈ ದಿಶೆಯಲ್ಲಿ ಮೊದಲ ಪ್ರಯತ್ನ ಎನ್ನಲಾಗದಿದ್ದರೂ ವಿನೂತನ ಆವಿಷ್ಕರಣ, ಹೊಸ ಪ್ರಯತ್ನ ಎನ್ನಬಹುದು. ಕಠಿಣ ಸಂಸ್ಕೃತವನ್ನು ಸರಳವಾಗಿ, ಸುಲಭವಾಗಿ ಕಲಿಸುವ ಪ್ರಯತ್ನ. ದುರ್ಗದ ಗೋಡೆಯನ್ನು ಏರಲು ಒದಗಿಸಿದ ನಿಚ್ಚಣಿಕೆ ಇದು. ಈ ಪುಸ್ತಕದ ಉಪಸ್ಥಿತಿ, ಇಂದು ಅಧ್ಯಯನದಲ್ಲಿ ಬಳಸಲಾಗುವ ಯಾವ ಪುಸ್ತಕವನ್ನೂ ಮೂಲೆಗುಂಪು ಮಾಡುವುದಲ್ಲ, ಅನ್ಯ ಪುಸ್ತಕಗಳಿಗೆ ಇದು ಪೂರಕವಾಗಿದೆ. ಇದು ಈ ಪುಸ್ತಕದ ವೈಶಿಷ್ಟ್ಯ ಹಾಗೂ ಉದ್ದೇಶ ಕೂಡ.

ಜೀವಿ : ಇದೇ ಕ್ರಮದಲ್ಲಿ ಕನ್ನಡೇತರರಿಗೆ ಕನ್ನಡವನ್ನು ಸುಲಭವಾಗಿ ಕಡಿಮೆ ಕಾಲದಲ್ಲಿ ಕಲಿಸುವ ಪುಸ್ತಕವನ್ನು ನೀವೇಕೆ ರಚಿಸಬಾರದು?

ತಿರುಮಲ : ನನ್ನ ಬಾಯಿಯಲ್ಲಿರುವ ಮಾತನ್ನು ನೀವು ಆಡಿದಿರಿ. ಖಂಡಿತವಾಗಿಯೂ ರಚಿಸುವ ಉದ್ದೇಶ ನನ್ನದಾಗಿದೆ. 1999ರಲ್ಲೇ ಕಂಪ್ಯೂಟರಿನಲ್ಲಿ ಕನ್ನಡವನ್ನು ವಿಶ್ಲೇಷಿಸಲು ಬೇಕಾದ ಪರಿಕರ ಸಿದ್ಧವಾಗಿದೆ.

ಜೀವಿ : ಪರಿಕರ ಎಂದರೇನು? ಸ್ವಲ್ಪ ವಿವರಿಸಿರಿ.

ತಿರುಮಲ : ಕಂಪ್ಯೂಟರಿಗೆ ಕನ್ನಡ ವಾಕ್ಯವನ್ನು ನೀಡಿದರೆ ಅದರ ಪ್ರತಿ ಪದವನ್ನು ವಿಶ್ಲೇಷಿಸಿ ಲಿಂಗ-ವಿಭಕ್ತಿ-ವಚನಾದಿಗಳನ್ನು ತಿಳಿಸುವ ಪದವಿಶ್ಲೇಷಕ (Morphological Analyser), ಸಂಧಿವಿಶ್ಲೇಷಕಗಳು ಸಿದ್ಧವಾಗಿವೆ. ಇವುಗಳನ್ನು ಬಳಸಿ ಗ್ರಾಂಥಿಕ ಕನ್ನಡ ಕಲಿಯಲು, ಮಾತನಾಡುವ ಕನ್ನಡ ಕಲಿಯಲು ಎಷ್ಟು ಕನ್ನಡ ಬೇಕು ಎಂಬುದನ್ನು ಕರಾರುವಾಕ್ಕಾಗಿ ಅಂಕಿ-ಅಂಶಗಳೊಂದಿಗೆ ಕಂಡುಕೊಳ್ಳಲು ಸಾಧ್ಯವಿದೆ. ಕನ್ನಡ ಸಂಸ್ಥೆಗಳು ಮುಂದೆ ಬಂದರೆ ಈ ಕಾರ್ಯವೂ ಬೇಗ ಸಿದ್ಧವಾಗುತ್ತದೆ.

ಜೀವಿ : 1999ರಲ್ಲಿ ಸಿದ್ಧವಾಗಿದ್ದರೂ ಇದರ ಪ್ರಸಿದ್ಧಿ ಇದ್ದಂತಿಲ್ಲ. ಇವುಗಳನ್ನು ಯಾರು ಸಿದ್ಧಪಡಿಸಿದ್ದಾರೆ?

ತಿರುಮಲ : ಕೇಂದ್ರ ಸರ್ಕಾರದ ಸಹಾಯದಿಂದ ಹೈದರಾಬಾದಿನ ಕೇಂದ್ರೀಯ ವಿಶ್ವವಿದ್ಯಾಲಯದಲ್ಲಿನ CALTS ಎಂಬ ವಿಭಾಗದಲ್ಲಿ ಇದು ಸಿದ್ಧಪಡಿಸಲಾಗಿದೆ.

ಜೀವಿ : ನಿಮ್ಮ ಪುಸ್ತಕವನ್ನು ಹೇಗೆ ಸ್ವೀಕರಿಸಲಾಗುತ್ತಿದೆ?

ತಿರುಮಲ : ಬಹಳ ಒಳ್ಳೆಯ ಪ್ರತಿಸ್ಪಂದನ ದೊರೆಯುತ್ತಿದೆ. ಅಲ್ಲಲ್ಲಿ ಇದರ ಪಾಠಗಳು ನಡೆಯುತ್ತಿವೆ. ವಿದೇಶಗಳಿಂದ ಕೂಡ ಒಳ್ಳೆಯ ರೆಸ್ಪಾನ್ಸ್ ದೊರೆತಿದೆ. ರಶಿಯಾದಿಂದ ಬಂದ ಪತ್ರ ನನಗೆ ಆನಂದ ಹಾಗೂ ಆಶ್ಚರ್ಯವನ್ನುಂಟುಮಾಡಿತು.

Mr. Marcis Gasuns, Latvia (Near Russia)

Congratulations. This is an excellent module. Samskrt looks very easy, simple and approachable through this method. The graphical representations while dealing with each and every topic, makes the book interesting and attentive. Clear idea is there while giving in the subject. First and last lessons are real highlights. What are common- what are different. Enough for any beginner.

ಜೀವಿ : ವಿದ್ಯಾರ್ಥಿಗಳ ಮೇಲೆ ಇದರ ಪ್ರಯೋಗ ಆಗಿದೆಯೆ?

ತಿರುಮಲ : ಮೈಸೂರಿನ ಪ್ರಮತಿ ಶಾಲೆಯಲ್ಲಿ 7ರಿಂದ 10ನೇ ತರಗತಿಯ 40 ಮಕ್ಕಳ ಮೇಲೆ ಯಶಸ್ವಿ ಪ್ರಯೋಗ ಆಗಿದೆ. ಅವರು ನೀಡಿರುವ ಪ್ರತಿಕ್ರಿಯೆಯಲ್ಲಿ ಕೆಲವು ಹೀಗಿವೆ...

After this course, I think Sanskrit will become more interesting, as we can understand it better now.' Our problems are solved and our questions answered.' I didn't know learning Sanskrit was this easy.' This course brought us near to Sanskrit.' We can score more in Sanskrit.' I learnt how Sanskrit was easy and hard at the same time.' I got that Sanskrit is not a tough subject at all, when we learn it like this by enjoying it.'

ಜೀವಿ : ಸಂಸ್ಕೃತದ ಅಧ್ಯಯನ-ಅಧ್ಯಾಪನ ಕ್ಷೇತ್ರದಲ್ಲಿ ಹೊಸ ಶಕೆಯನ್ನು ಆರಂಭಿಸಬಹುದಾದ ಈ ಪುಸ್ತಕದ ಬಗ್ಗೆ ಹೆಚ್ಚಿನ ಮಾಹಿತಿ ಎಲ್ಲಿ ಸಿಗುತ್ತದೆ?

ತಿರುಮಲ : ಈ ಜಾಲತಾಣದಲ್ಲಿ ಈ ಬಗ್ಗೆ ಸಮಗ್ರ ಮಾಹಿತಿಯನ್ನು ನೀಡಲಾಗಿದೆ.

(ಡಾ| ತಿರುಮಲ: +919448879734)

English summary
Dr Tirumala Kulkarni has written a book on how to teach Sanskrit in a easy way to Indians and foreigners. Dr. GV Kulkarni from Mumbai has interviewed him.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more
X