• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಕಲಿಯುಗದ ಕಲ್ಪತರು ರಾಯರ ಬಣ್ಣಿಸುವ ಧ್ವನಿ ಸುರುಳಿ

By 'ಜೀವಿ' ಕುಲಕರ್ಣಿ
|

ಆಗಸ್ಟ್ 19, 20, 21 ಮೂರು ದಿನಗಳ ಕಾಲ ಕಲಿಯುಗದ ಕಲ್ಪತರು ಹಾಗೂ ಕಾಮಧೇನು ಎಂಬ ಖ್ಯಾತಿ ಪಡೆದ ಶ್ರೀರಾಘವೇಂದ್ರ ಸ್ವಾಮಿಗಳ ಆರಾಧನಾ ಮಹೋತ್ಸವದಲ್ಲಿ ಭಾಗವಹಿಸುವ ಸೌಭಾಗ್ಯ ನನಗೆ ಪ್ರ್ರಾಪ್ತವಾಯಿತು.

ಶ್ರೀಮಠದಲ್ಲಿ ಈಗ ಸುವರ್ಣಯುಗ ಪ್ರಾರಂಭವಾಗಿದೆ ಎಂದು ಭಕ್ತಜನರು ಉದ್ಗಾರ ತೆಗೆಯುತ್ತಿದ್ದಾರೆ. ಈ ಮಾತಿನಲ್ಲಿ ಅಚ್ಚರಿಪಡುವಂತಹದೇನಿಲ್ಲ. ಬೃಹತ್ ಬಹುಕಿಲೋ ಭಾರದ ಅತ್ಯಾಕರ್ಷಕ ಸುವರ್ಣ ಕಳಸವು ಸ್ಥಾಪಿತವಾಗಿದೆ, ಬೃಹತ್ ಸುವರ್ಣ ಮಂಟಪ ಸಿದ್ಧವಾಗಿದೆ, ಶ್ರೀರಾಮ ದೇವರ ನೈವೇದ್ಯಕ್ಕೆ ವಿಶಾಲವಾದ ಸುವರ್ಣದ ಹರಿವಾಣವನ್ನು ಭಕ್ತರೊಬ್ಬರು ಕೊಟ್ಟಿದ್ದಾರೆ. ವೃಂದಾವನದ ಸುತ್ತಲೂ ಕಲ್ಲಿನ ಭವ್ಯ ಮಂದಿರ ಅತ್ಯಂತ ಕಡಿಮೆ ಸಮಯದಲ್ಲಿ ಪೂರ್ತಿಗೊಂಡಿದೆ. ಅದಕ್ಕಾಗಿ ಕೋಟ್ಯಂತದ ಅನುದಾನ ಸಲ್ಲಿಸಿದವರು ಬಳ್ಳಾರಿಯ ಸೂರ್ಯನಾರಯಣ ರೆಡ್ಡಿಯವರು.

ಶನಿವಾರ 19ರಂದು ಪೀಠಾಧಿಪತಿಗಳಾದ ಶ್ರೀ ಸುಬುಧೇಂದ್ರತೀರ್ಥರು ರೆಡ್ಡಿ ಅವರಿಗೆ ಅನುಗ್ರಹ ಪ್ರಶಸ್ತಿಯನ್ನು ನೀಡಿ ಸತ್ಕರಿಸಿದರು. ಇದೇ ವೇಳೆಗೆ ನನ್ನ ಬಾಲ್ಯ ಸ್ನೇಹಿತ ಹಾಗೂ ಸಹಪಾಠಿಯಾಗಿದ್ದ ಡಾ| ವಾದಿರಾಜ ಪಂಚಮುಖಿಯವರಿಗೂ ಅನುಗ್ರಹ ಪ್ರಶಸ್ತಿಯ ಜೊತೆಗೆ ಒಂದು ಲಕ್ಷ ರೂಪಾಯಿಯ ಗೌರವಧನವಾಗಿ ಕೊಟ್ಟು ಸತ್ಕರಿಸಿದರು.

ಇದೇ ಸಭೆಯಲ್ಲಿ "ಗುರು ರಾಘವೇಂದ್ರಾ ದಯ ತೋರೋ" ಎಂಬ ನಾನು ಬರೆದ ಎಂಟು ಹಾಡುಗಳುಳ್ಳ ಪರಿಷ್ಕೃತ ಕನ್ನಡ ಧ್ವನಿಸುರುಳಿಯ ಜೊತೆಗೆ ಅದರ ತೆಲುಗು ಅನುವಾದದ ಧ್ವನಿ ಸುರುಳಿಯನ್ನೂ ಶ್ರೀಗಳು ಲೋಕಾರ್ಪಣೆ ಮಾಡಿದರು. ಅದರ ತೆಲುಗು ಅನುವಾದ ಮಾಡಿದ ಡಾ| ಉಮಾದೇವಿ ಬಲ್ಲೂರಿಯವರೂ ಸಂಗೀತ ಸಂಯೋಜಕಿ, ಗಾಯಕಿ ಹಾಗೂ ನಿರ್ಮಾಪಕಿ ರಮ್ಯ ವಸಿಷ್ಠ ಅವರೂ ಉಪಸ್ಥಿತರಿದ್ದರು. ಅಂದು ನನಗೆ ಅವಿಸ್ಮರಣಿಯವಾದ ಆನಂದವನ್ನು ತಂದ ದಿನವಾಗಿ ಪರಿಣಮಿಸಿತು.

ಮೂರೂ ದಿನದ ಪೂಜೆ, ಮೆರವಣಿಗೆ, ರಥೋತ್ಸವ, ಬೃಹತ್ ಪ್ರಮಾಣದ ಅನ್ನ ಸಂತರ್ಪಣೆ, ಸಂಜೆಯ ಸಭಾ ಕಾರ್ಯಕ್ರಮದಲ್ಲಿ ನೃತ್ಯ, ಸಂಗೀತ, ನಾಟಕ ಕಾರ್ಯಕ್ರಮಗಳು ಬಹಳ ಆಕರ್ಷಕವಾಗಿದ್ದವು. ಕನ್ನಡ ತೆಲುಗು ಇಂಗ್ಲಿಷ್ ಪತ್ರಿಕೆಗಳು ಶ್ರೀಮಠದ ಸಾಧನೆಯ ಬಗ್ಗೆ ವಿಶೇಷ ಪುರವಣಿ ಪ್ರಕಟಿಸಿದ್ದರಲ್ಲದೆ, ಕೆಲವು ಪತ್ರಿಕೆಗಳು ಉಚಿತವಾಗಿ ಹಂಚಲ್ಪಟ್ಟವು. ಈ ಸಲದ ವೈಶಿಷ್ಟ್ಯವೆಂದರೆ ಭಕ್ತಾದಿಗಳಿಗೆ ಶ್ರೀಗಳು ಮಂತ್ರಾಕ್ಷತೆಯೊಂದಿಗೆ ಸಹಸ್ರಾರು ವೃಕ್ಷಗಳ ಸಸಿಗಳನ್ನು ದಾನವಾಗಿ ಕೊಟ್ಟು ಹಸಿರುಕ್ರಾಂತಿಯ ಹರಿಕಾರರಾಗಲು ಕರೆಯಿತ್ತರು.

ಮೂರನೆಯ ದಿನ ಮಠದ ಹೊರಗೆ ನಡೆದ ತೇರಿನ ಉತ್ಸವ ಬಹಳ ಆಕರ್ಷಕವಾಗಿತ್ತು. ಹೆಲಿಕಾಪ್ಟರಿನಿಂದ ಪುಷ್ಪವೃಷ್ಟಿ ಆಯೋಜಿಸಲಾಗಿತ್ತು. ತೇರಿನ ಮೇಲೆ ಕುಳಿತು ಶ್ರೀಗಳು ಭಾಷಣ ಮಾಡುತ್ತ ತಮ್ಮ ಮುಂದಿನ ಕಾರ್ಯಗಳ ಬಗ್ಗೆ ಸೂಚನೆ ಇತ್ತರು. ವಿದ್ಯೆಯ ಕ್ಷೇತ್ರದಲ್ಲಿಯೂ ತಿರುಪತಿಯಂತೆ ಮಂತ್ರಾಲಯವೂ ಮುನ್ನಡೆಯಲಿದೆ, ಮಂತ್ರಾಲಯ ವಿಶ್ವವಿದ್ಯಾಲಯವಾಗಲಿದೆ, ಕಲಾ, ವಿಜ್ಞಾನ, ವಾಣಿಜ್ಯ ಕಾಲೇಜು ಅಷ್ಟೇ ಅಲ್ಲ, ಇಂಜಿನಿಯರಿಂಗ್ ಹಾಗೂ ಮೆಡಿಕಲ್ ಕಾಲೇಜುಗಳನ್ನೂ ಸ್ಥಾಪಿಸಲಿದೆ ಎಂದರು.

ಮೂರು ದಿನಗಳ ಕಾಲ ಲಕ್ಷಾವಧಿ ಭಕ್ತ ಸಮೂಹದಲ್ಲಿ ಬೆರೆತು ಬೆಳಗಿನಿಂದ ರಾತ್ರಿಯವರೆಗೆ ನಡೆದ ಎಲ್ಲ ಕಾರ್ಯಕ್ರಮಗಳಲ್ಲಿ ಪ್ರೇಕ್ಷಕನಾಗಿರುವುದು ಒಂದು ಅಭೂತಪೂರ್ವ ಅನುಭವವಾಗಿತ್ತು. ಬೃಂದಾವವನ ದರ್ಶನಕ್ಕೆ ಬಂದ ಭಕ್ತರಿಗೆ ಅನುಕೂಲವಾಗುವಂತಹ ಎಲ್ಲ ವ್ಯವಸ್ಥೆ ಮಾಡಲಾಗಿತ್ತು.

ಈ ಮೊದಲು ಮಾರ್ಚ್ 15ರಂದು 6 ಹಾಡುಗಳುಳ್ಳ ಕನ್ನಡ ಧ್ವನಿಸುರುಳಿಯ ಬಿಡುಗಡೆಯನ್ನು ಶ್ರೀಸುಬುಧೇಂದ್ರತೀರ್ಥರು ಮಾಡಿದ್ದರು. (ಅದರ ಛಾಯಚಿತ್ರ ಮಿತ್ರ ಮಂತ್ರಾಲಯದ ಶ್ರೀಗಳ ಆಪ್ತಛಾಯಾಗ್ರಾಹಕರಾದ ಶ್ರೀನಿಧಿ ನನಗೆ ಕಳಿಸಿ ನನ್ನ ಸಂತಸ ಹೆಚ್ಚಿಸಿದ್ದಾರೆ.) ಮೊದಲಿನ ಧ್ವನಿಸುರುಳಿಯಲ್ಲಿ ನಾನು ಮೊದಲು ಬರೆದ ಆರು ಹಾಡುಗಳು ಮಾತ್ರ ಇದ್ದವು. ಈಗ ಬಿಡುಗಡೆಗೊಂಡ ಪರಿಷ್ಕೃತ ಧ್ವನಿಸುರುಳಿಯಲ್ಲಿ ಎಂಟು ಹಾಡುಗಳಿವೆ, ಸಿತಾರ ಹಾಗೂ ವೀಣೆಗಳ ವಿಶೇಷ ಸಂಗೀತ ಜೋಡಿಸಲಾಗಿದೆ. ತೆಲುಗು ಅನುವಾದದ ಧ್ವನಿಸುರುಳಿ ಸಿದ್ಧವಾಗಿದೆ, ಜೊತೆಗೆ ಬಿಡುಗಡೆ ಪಡೆದಿದೆ.

ಹಾಡುಗಳ ಹಿಂದಿನ ರೋಚಕ ಕಥೆ : ನಾನಿನ್ನೂ ವಿದ್ಯಾರ್ಥಿಯಾಗಿರುವಾಗ (1957ರಲ್ಲಿ) ಮಿತ್ರ ಹಾರ್ಮೋನಿಯಂ ವಾದಕ ವಾಸುದೇವ(ವಸಂತ) ಕನಕಾಪುರ್ ಅವರು ಪಾದಯಾತ್ರೆ ಮಾಡಿ ಮಂತ್ರಾಲಯಕ್ಕೆ ಸೇವೆಗೆ ಹೊರಟಾಗ ಅವರಿಗಾಗಿ ರಚಿಸಿದ ಹಾಡು 'ಗುರು | ರಾಘವೇಂದ್ರಾ ದಯತೋರೊ|'. (ತಂದೆಯು ನೀನೆ, ತಾಯಿಯು ನೀನೆ | ಭವದಾ ಕಂಟಕ ಮುಳ್ಳಿನ ಹಾಸಿಗೆ | ತೊರೆಯುತ ನಡೆದಿಹೆ ನಿನ್ನಯ ಕಡೆಗೆ | ಜೀವದ ಕುಸುಮವ ಬಾಡಿಸ ಬೇಡವೊ | ಬಂದಿದೆ ಏರಲು ನಿನ್ನಯ ಅಡಿಗೆ ||) (ಸುಖವೋ ದುಃಖವೊ ತಾಪದ ಹೊನಲೊ | ಬೇರೆಯ ಬಣ್ಣದ ಒಂದೇ ನೀರು | ಏಳು ಬಣ್ಣಗಳ ಬೆಳ್ಳಗೆ ಮಾಡುವ | ಲೋಲಕ ದೃಷ್ಟಿಯ ನೀಡುವರಾರು ||)

ಇದನ್ನು ವಿಜಯ್ ಪ್ರಕಾಶ್ ಹಾಗೂ ರಮ್ಯ ವಸಿಷ್ಠ ಹಾಡಿದ್ದಾರೆ. ವಿಜಯ್ ಪ್ರಕಾಶ್ ಇಂದು ಭಾರತಲ್ಲಿ ಅಷ್ಟೇ ಏಕೆ ವಿದೇಶದಲ್ಲಿಯೂ ಹೆಸರು ಗಳಿಸಿದ ಕನ್ನಡ ಕಲಾವಿದ. ನನ್ನ ಸ್ನೇಹಕ್ಕೆ ಕಟ್ಟುಬಿದ್ದು, ಶ್ರೀರಾಯರ ಮೇಲಿನ ಭಕ್ತಿಯಿಂದ ಹಾಡಲು ಒಪ್ಪಿದರು. ಈ ಧ್ವನಿಸುರುಳಿಗೆ ಹೆಚ್ಚಿನ ಘನತೆಯನ್ನು ತಂದರು. ಅರವತ್ತು ವರ್ಷಗಳ ಹಿಂದೆ ಬರೆದ ಇನ್ನೊಂದು ಹಾಡು ಶ್ರೀ ಗುರುರಾಯ (ವೃಂದಾವನದೊಳು ಇಂದಿಗೂ ವಾಸಿಸಿ | ಆಶೀರ್ವದಿಸುವ ಗುರುರಾಯ | ಸದಾ ಕಾಲಕೂ ಭಕ್ತರ ಗಡಣಕೆ | ಧೈರ್ಯವ ನೀಡುವ ಮಹರಾಯಾ ||) ಅದನ್ನು ಪ್ರಸಿದ್ಧ ಗಾಯಕಿ ಸಂಗೀತಾ ಕಟ್ಟಿ(ಕುಲಕರ್ಣಿ) ಹಾಡಿದ್ದಾರೆ.

ನನ್ನ ಅಮೇರಿಕಾ ಪ್ರವಾಸದ ಮೊದಲ ಪುಸ್ತಕದಲ್ಲಿ ('ಜೀವಿ ಕಂಡ ಅಮೇರಿಕಾ') ಸಂಗೀತಾ ಪ್ರಥಮ ಕನ್ನಡ ವಿಶ್ವ ಸಮ್ಮೇಲನದಲ್ಲಿ ಹಾಡಿದ್ದರು. ಅವರ ಇತರ ಕಾರ್ಯಕ್ರಮಗಳ ಬಗ್ಗೆ ಬರೆದಿರುವೆ. ಮೂರನೆಯ ಹಾಡು 'ಶರಣು ಬಂದಿಹೆ ಎನ್ನುವುದನ್ನು (1965) ಮಂತ್ರಾಲಯದ ಯಾತ್ರೆ ಕೈಕೊಂಡಾಗ ಬರೆದಿದ್ದೆ. (ನಾನು ಚಿನ್ನವಿರಲು ನನ್ನ ಕಾಸಿ ಬಡಿಯಿರಿ | ಕಾಸಿ ಬಡಿದು ದೇವನಡಿಯ ಕಡಗ ಮಾಡಿರಿ | ನಾನು ಬೆಳ್ಳಿಯಿರಲು ನನ್ನ ಮೊರೆಯ ಕೇಳಿರಿ | ತಮ್ಮ ಪಾದದಡಿಯ ಪಾದುಕೆಯ ಮಾಡಿರಿ |) ಇದನ್ನು ಚಂದನ ವಾಹಿನಿ ದೂರದರ್ಶನದ 'ಎದೆತುಂಬಿ ಹಾಡುವೆನು' ಸ್ಪರ್ಧೆಯಲ್ಲಿ ಪ್ರಥಮಸ್ಥಾನ ಗಳಿಸಿದ, ನನ್ನ ಹಾಡುಗಳನ್ನು ಕೆಲವು ಸಂದರ್ಭಗಳಿಲ್ಲಿ ಹಾಡಿ ಜನಾನುರಾಗ ಗಳಿಸಿದ್ದ ಸುರೇಖಾ ಹೆಗಡೆ ಹಾಡಿದ್ದಾರೆ.

ನಾಲ್ಕನೆಯ ಹಾಡು ನೀ ದಯತೋರೊ | ಗುರು ರಾಘವೇಂದ್ರಾ| 1965ರಲ್ಲಿ ಬರೆದ ಹಾಡು. (ಪ್ರಹ್ಲಾದನಾದಾಗ | ನರಸಿಂಹನೊಲಿದ | ನರಸಿಂಹನೊಲಿದ | ಕಂಬ ಒಡೆದು ಬಂದ | ನೀ ದಯತೋರೊ ಗುರು ರಾಘವೇಂದ್ರಾ)( ಗುರು ವ್ಯಾಸನಾದಾಗ | ಕೃಷ್ಣನೊಲಿದು ಬಂದ | ಕೃಷ್ಣನೊಲಿದು ಬಂದ | ಕೊಳಲೂದುತ ನಿಂದ | ನೀ ದಯ ತೋರೊ ಗುರು ರಾಘವೇಂದ್ರಾ) (ಗುರುರಾಜನಾಗಿರೆ | ಮೂಲರಾಮನೊಲಿದ | ಮೂಲರಾಮನೊಳಿದ | ಕೃಪಾ ವೃಷ್ಟಿ ಕರೆದ | ನೀ ದಯ ತೋರು ಗುರುರಾಘವೇಂದ್ರಾ|) ಈ ಹಾಡನ್ನು ಮರಾಠಿಯ ಪ್ರಸಿದ್ಧ ಭಕ್ತಿಗೀತ 'ತುಮ್ಹೀ ಬಿಗಡಲೋ ಆಮ್ಹೀ ಬಿಗಡಾನಾ' ಎಂಬ ಹಾಡಿನ ಗತ್ತಿನಲ್ಲಿದೆ. ಆ ಧಾಟಿಯ ಬದಲು ಸ್ವತಂತ್ರ ಧಾಟಿ ಹಚ್ಚಿ ರಮ್ಯ ಸ್ವರಸಂಯೋಜನೆ ಮಾಡಿ ಬಹಳ ಸೊಗಸಾಗಿ ಹಾಡಿದ್ದಾರೆ.

ಐದನೆಯ ಹಾಡು 'ಕಂಡೆನಾ ಕನಸಿನಲಿ ಗುರುರಾಯರ |' ಇದನ್ನು ಪ್ರಸಿದ್ಧ ಯುವ ಗಾಯಕ ಅಜಯ್ ವಾರಿಯರ್ ಹಾಡಿದ್ದಾರೆ. ಇದನ್ನು 1971ರಲ್ಲಿ ಬರೆದಿದ್ದೆ. ಮಂತ್ರಾಲಯಕ್ಕೆ ಹೋದಾಗ ಸ್ವಪ್ನದಲ್ಲಿ ಕಂಡ ಅನುಭವ ಕಥನ ಇಲ್ಲಿದೆ. (ಕೈಯಲ್ಲಿ ಜಪಮಾಲೆ ಕಂಗಳಲಿ ಕರುಣೆಯಿರೆ | ಕಾವಿ ವಸನವ ತೊಟ್ಟ ವೀತರಾಗರು ಬರೆ | ನಯನದಲಿ ಕಂಬನಿಯ ಧಾರೆ ಸ್ವಾಗತಿಸಿತ್ತು | ಧನ್ಯತೆಯ ಕುಸುಮಗಳ ಜೀವ ತಾ ಅರ್ಪಿಸಿತು|) ಆರನೆಯ ಹಾಡು ಬೇಂದ್ರೆಯವರು 1958ರಲ್ಲಿ, ನಾನಿನ್ನೂ ಧಾರವಾಡದಲ್ಲಿ ವಿದ್ಯಾರ್ಥಿಯಾಗಿದ್ದಾಗ, ನನ್ನಿಂದ ದೇವತೆಗಳ ಬಗ್ಗೆ ಹಾಗೂ ಗುರುಗಳ ಬಗ್ಗೆ ಆರತಿ ಪದ್ಯಗಳನ್ನು ಬರೆಸಿದ್ದರು, ಅದರಲ್ಲಿ ಇದೂ ಒಂದು. ಇದನ್ನು ರಮ್ಯ ಹಾಡಿದ್ದಾರೆ.

ಜಯಜಯ ಜಯಜಯ ಯತಿ ರಾಘವೇಂದ್ರ | ಭವರೋಗಗಳಿಗೆಲ್ಲ ನೀನೇ ವೈದ್ಯೇಂದ್ರ|| ಭಕ್ತಿಯ ಬೀರಿದೆ ಪ್ರಹ್ಲಾದನಾಗಿ | ಪಾಂಡಿತ್ಯ ತೋರಿದೆ ಗುರು ವ್ಯಾಸನಾಗಿ | ಭಕ್ತಿ ಪಾಂಡಿತ್ಯಕ್ಕೆ ಗುರು ರಾಘವೇಂದ್ರ | ಸುಧೆಯ ಸಾಗರಕೆ ಪರಿಮಳ ಚಂದ್ರ ||) ಯತಿವರೇಣ್ಯ ಜಯತೀರ್ಥರು ಬರೆದ 'ಶ್ರೀಮನ್ಯಾಯಸುಧಾ' ಗ್ರಂಥಕ್ಕೆ ಶ್ರೀ ರಾಘವೇಂದ್ರರು ಟಿಪ್ಪಣಿ ಬರೆದಿದ್ದಾರೆ. ಸುಧೆಯನ್ನು ಸಾಗರಕ್ಕೆ ಹೋಲಿಸಿ ರಾಘವೇಂದ್ರರ 'ಪರಿಮಳ' ಗ್ರಂಥವನ್ನು ಸಮುದ್ರವನ್ನು ಉಕ್ಕೇರಿಸುವ ಚಂದ್ರನಿಗೆ ಹೋಲಿಸಲಾಗಿದೆ.) ಮರಾಠಿಯ ಜಯದೇವ ಹಾಡುಗಳ ಧಾಟಿಯನ್ನು ಬಿಟ್ಟು ಸ್ವತಂತ್ರ ಧಾಟಿಯನ್ನು ರಮ್ಯ ಸಂಯೋಜಿಸಿ ಹೆಚ್ಚು ಆಕರ್ಷಕ ಮಾಡಿದ್ದಾರೆ.

ಈ ಹಾಡು ಬಹಳೇ ಚಿತ್ತಾಕರ್ಷಕವಾಗಿದ್ದರಿಂದ ಧ್ವನಿಸುರುಳಿಯಲ್ಲಿ ಕೊನೆಗೆ ಇಡಲಾಗಿದೆ. ನಾನು ಬರೆದ 6 ಹಾಡುಗಳು 'ಸಂಜೀವಿನಿ' ಕವನ ಸಂಗ್ರಹದಲ್ಲಿ ಪ್ರಕಟವಾಗಿವೆ. ಧ್ವನಿಸುರುಳಿಯಲ್ಲಿ 8 ಎಂಟು ಹಾಡು ಇದ್ದರೆ ಒಳ್ಳೆಯದು ಎಂಬ ರಮ್ಯ ಅವರ ಸಲಹೆಯ ಮೇರೆಗೆ ಎರಡು ಹಾಡುಗಳನ್ನು ಇತ್ತೀಚೆಗೆ ಬರೆದೆ. ಉಡುಪಿಯಲ್ಲಿ ಶ್ರೀಕೃಷ್ಣ ಸನ್ನಿಧಾನದಲ್ಲಿ ಬರೆದ ಏಳನೆಯ ಹಾಡು (25-1-2016) 'ರಾಘವೇಂದ್ರ ಪಾಹಿಮಾಂ|' (ನಿಮ್ಮ ಸ್ತೋತ್ರ ಪಠಿಸೆ ಮೂಕ ವಾಗ್ಮಿಯಾಗಿ ಮೆರೆವನು | ಯಾತ್ರೆಗೈವ ಕುಂಟ ಕೂಡ ಗುರಿಯ ಕಡೆಗೆ ನಡೆವನು | ಮಧ್ವ ಶಾಸ್ತ್ರ ತಿಳಿಯಲಿಕ್ಕೆ ನಿಮ್ಮ ಗ್ರಂಥ ಕನ್ನಡಿ | ಬೈಗು-ಬೆಳಗು ಪಠಿಸಲು 'ಸಂಕಲ್ಪ ಗದ್ಯ' ಮುನ್ನುಡಿ |.) ಇದನ್ನು ರಮ್ಯ ಹಾಡಿದ್ದಾರೆ.

ಎಂಟನೆಯ ಪದ್ಯ ಅಭಿನವ ಮಂತ್ರಾಲಯ ಎಂದು ಪ್ರಸಿದ್ಧಿ ಪಡೆದ ಮುಂಬೈಯ ಉಪನಗರ ಜೋಗೇಶ್ವರಿ ಮಠದಲ್ಲಿ ರಚಿಸಿದ್ದು (29-1-2016). 'ಪೂಜ್ಯಾಯ ರಾಘವೇಂದ್ರಾಯ | ಸತ್ಯ ಧರ್ಮ ರತಾಯಚ' ಎಂದು ಅಪ್ಪಣ್ಣಾಚಾರ್ಯರ ಸ್ತೋತ್ರ ಹೇಳುತ್ತದೆ. (ಶ್ರೀರಾಘವೇಂದ್ರ ಗುರುಗಳು ಪೂಜ್ಯರು, ಸತ್ಯ ಹಾಗೂ ಧರ್ಮದಲ್ಲಿ ತೊಡಗಿದವರು). ಅವರು ಕಲ್ಪತರು ಹಾಗೂ ಕಾಮಧೇನು ಆಗಿದ್ದಾರೆ. (ಭಜಿಸುವವರ ಕಲ್ಪವೃಕ್ಷ ನಮಿಸುವವರು ಕಾಮಧೇನು | ಯತಿಗಳಲ್ಲಿ ಸಾರ್ವಭೌಮ ರಾಘವೇಂದ್ರ ಗುರುಗಳು |) ಶ್ರೀ ರಾಘವೇಂದ್ರರು ಎಲ್ಲರನ್ನೂ, ಕೆಲವರನ್ನು ವಿಶೇಷವಾಗಿ ಉದ್ಧರಿಸುತ್ತಾರೆ ಎಂಬುದು ಕವಿಕಲ್ಪನೆ. (ಸತ್ಯಮಾರ್ಗದಲ್ಲಿ ಇರುವ ಭಕ್ತರನ್ನು ಪೊರೆವರು | ಧರ್ಮದಲ್ಲಿ ನಿರತರಾಗೆ ಕರವ ಹಿಡಿದು ಕರೆವರು). ಇದನ್ನು ಹಾಡಿದವರು ತರುಣ ಪ್ರಸಿದ್ಧ ಕಲಾವಿದ ಶಶಾಂಕ ಶೇಷಗಿರಿ. ಧ್ವನಿಸುರುಳಿಯ ಪ್ರಾರಂಭದಲ್ಲಿ ಹಾಡುಗಳ ಹಿನ್ನೆಲೆಯನ್ನು ನಿರೂಪಿಸಿದವರು ಡಾ| ತಿರುಮಲ ಕುಲಕರ್ಣಿಯವರು.

ಅರವತ್ತು ವರ್ಷಗಳಲ್ಲಿ ಬರೆದ ಹಾಡುಗಳು ಒಂದೆಡೆ ಲಭ್ಯವಾಗಿವೆ. ಅವುಗಳ ಹಿನ್ನೆಲೆಯ ಬಗ್ಗೆ ಬರೆಯುವುದು ಅವಶ್ಯವೆನಿಸಿದ್ದರಿಂದ ಒಂದು 32 ಪುಟಗಳ ಪುಸ್ತಿಕೆಯನ್ನು ಮುದ್ರಿಸಿ ಧ್ವಸುರುಳಿಯೊಂದಿಗೆ ಉಚಿತವಾಗಿ ಹಂಚಲಾಯಿತು. ಧ್ವನಿಸುರುಳಿಯ ಹಾಡುಗಳ ಪುಸ್ತಕ ಪ್ರಕಟಿಸುವುದು ಕ್ವಚಿತ. ಆದರೆ ಇಲ್ಲಿ ಹಾಡಿರುವ ಎಲ್ಲ ಕಲಾವಿದರ (ಸಂಗೀತಾ ಕಟ್ಟಿ-ಕುಲಕರ್ಣಿ, ವಿಜಯ ಪ್ರಕಾಶ, ರಮ್ಯ ವಸಿಷ್ಠ, ಅಜಯ್ ವಾರಿಯರ್, ಸುರೇಖಾ ಹೆಗಡೆ, ಶಶಾಂಕ್ ಶೇಷಗಿರಿ) ಛಾಯಾಚಿತ್ರಗಳನ್ನೂ ಒಳಗೊಂಡ ಪುಸ್ತಿಕೆ ಪ್ರಕಟವಾಗಿದ್ದರಿಂದ ಹಾಡಲು ಬಯಸುವ ಯುವ ಗಾಯಕರಿಗೆ ಸಂತೋಷವನ್ನುಂಟು ಮಾಡಿದೆ. ಇಲ್ಲಿ ಹಾಡುಗಳ ಪೂರ್ಣಪಾಠ ಒದಗಿಸಲಾಗಿದೆ. (ಆಸಕ್ತರು ಸಂಪರ್ಕಿಸಬಹುದು: +919324242172).

ಕನ್ನಡ, ತೆಲುಗು ಧ್ವನಿಸುರುಳಿಗಳು ಈಗ ಲಭ್ಯವಾಗಿವೆ. ಮರಾಠಿ ಹಾಗೂ ತಮಿಳಿನಲ್ಲಿಯೂ ಧ್ವನಿಸುರುಳಿ ಸಿದ್ಧತೆಯ ದಾರಿಯಲ್ಲಿವೆ. ಭಾರತದಲ್ಲಿ 135 ಶ್ರೀ ರಾಘವೇಂದ್ರಸ್ವಾಮಿ ಮಠಗಳು ಇವೆ, ಸ್ವತಂತ್ರವಾದ ನೂರಾರು ಮಠಗಳು ದೇಶವಿದೇಶಗಳಲ್ಲಿ ಹರಡಿವೆ. ಇವುಗಳಲ್ಲಿ ಬೆಂಗಳೂರಿನ ಉತ್ತರ ತಾಲ್ಲೂಕು ವಡ್ಡರಹಳ್ಳಿಯಲ್ಲಿ ಶ್ರೀಗುರುಶೇಷರು ಸ್ಥಾಪಿಸಿದ 'ಕಾಮಧೇನು ಕ್ಷೇತ್ರ', 'ಶ್ರೀ ಗುರುರಾಘವೇಂದ್ರ ಸೇವಾಶ್ರಮ'ವೂ ಒಂದು.

ಬಹುಭಾಷೆಗಳಲ್ಲಿ ಧ್ವನಿಸುರುಳಿಗಳನ್ನು 'ರಮ್ಯ ಕಲ್ಚರಲ್ ಫೌಂಡೇಷನ್' ಅವರು ಹೊರತರುತ್ತಿದ್ದಾರೆ, ಪ್ರತಿಯೊಂದು ಮಠಕ್ಕೂ ಧ್ವನಿ ಸುರುಳಿಗಳನ್ನು ತಲುಪಿಸುವ ಯೋಜನೆಯನ್ನು ರೂಪಿಸಿದ್ದಾರೆ. ರಾಘವೇಂದ್ರಸ್ವಾಮಿಗಳ ಭಕ್ತರಿಂದ ಈ ಸೇವಾಕಾರ್ಯಕ್ಕೆ ಅನುದಾನ ಬರುತ್ತಿದೆ. ಈ ಸೇವೆಯಲ್ಲಿ ದಾನವನ್ನು ಸಲ್ಲಿಸಲು ಬಯಸುವವರು ಕೆಳಗೆ ಕಾಣಿಸಿದ ಅಕೌಂಟಿಗೆ ಹಣ ಕಳಿಸಬಹುದು. Mandra Cultural Foundation, Current AC No. 50200016898330 HDFC BANK, Malleshwaram Branch, Bangalore-560 003. ದಾನಿಗಳಿಗೆ 80-G ಅನ್ವಯ ಆಯಕರ ವಿನಾಯತಿಯ ಸೌಲಭ್ಯವಿದೆ. ವಿವರಗಳಿಗೆ ಸಂಪರ್ಕಿಸಬಹುದು: jeevi65@gmail.com.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Audio cd with devotional songs on Kaliyugada Kalpataru Sri Raghavendra Swamy was released by Mantralaya seer Sri Subudhendra Teertha in Mantralaya during 345th aradhana mahotsava. The songs are written by GV Kulkarni and sung by Ramya Vasishta and Vijay Prakash.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more