ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಉನ್ನತ ವ್ಯಾಸಂಗಕ್ಕೆ ಇಂಗ್ಲೆಂಡಿಗೆ ಕಾರ್ನಾಡ್ ಪಯಣ

By ಡಾ. 'ಜೀವಿ' ಕುಲಕರ್ಣಿ, ಮುಂಬಯಿ
|
Google Oneindia Kannada News

ಗಿರೀಶರು ಮುಂಬಯಿಗೆ ಮರಳಿದ ಎರಡೇ ದಿನಗಳಲ್ಲಿ ಅವರ ತಾಯಿಯ ಇನ್‌ಲ್ಯಾಂಡ್ ಪತ್ರ ಬಂದಿತ್ತು. ಮಗನಿಗೆ ಇಂಗ್ಲೆಂಡಿನಲ್ಲಿ ಅಭ್ಯಾಸ ಮಾಡಲು ಜಗತ್ತಿನ ಅತಿ ದೊಡ್ಡ ಸ್ಕಾಲರ್ಶಿಪ್ ದೊರೆತದ್ದಕ್ಕೆ ತಂದೆ ತಾಯಿಗಳಿಬ್ಬರಿಗೂ ಅತ್ಯಂತ ಆನಂದವಾಗಿತ್ತು. ವಾತ್ಸಲ್ಯಮೂರ್ತಿ ತಾಯಿಯ ಪತ್ರದ ಕೊನೆಯ ಸಾಲನ್ನು ಗಿರೀಶ ಇಪ್ಪತ್ತು ಸಲ ಓದಿದ್ದರಂತೆ.

ಇಂದು ಅಲ್‌ಕಾಝಿಯನ್ನು ಆಧುನಿಕ ಭಾರತೀಯ ರಂಗಮಂಚದ ಕಾರಣಪುರುಷ ಎಂದು ಒಪ್ಪಿಕೊಳ್ಳುತ್ತಾರೆ. ಅವರ ತಂದೆ ಅರಬ ಕೋಟ್ಯಾಧೀಶರಾಗಿದ್ದರು. ಪುಣೆಯಲ್ಲಿ ವಾಸಿಸುತ್ತಿದ್ದರು. ಅಲ್‌ಕಾಝಿಯ ಜನ್ಮ ಪುಣೆಯಲ್ಲೇ ಆಯಿತು. ಸುಲ್ತಾನ್ ಪದಮಸೀ ಎಂಬ ತರುಣ ಪ್ರತಿಭಾವಂತ ಯುವಕ ಮುಂಬಯಿಯಲ್ಲಿ ಥಿಯೇಟರ್ ಗ್ರೂಪ್ ಎಂಬ ನಾಟ್ಯಸಂಸ್ಥೆಯನ್ನು ಆರಂಭಿಸಿದ್ದ. ಅಲ್‌ಕಾಝಿ ಆ ಸಂಸ್ಥೆಯನ್ನು ಸೇರಿದರು. ಮುಂದೆ ಅವನ ಸೋದರಿಯನ್ನೇ ಮದುವೆಯಾದರು. ಅಲ್‌ಕಾಝಿ ಮುಂದೆ ಲಂಡನ್ನಿಗೆ ಹೋಗಿ ಅಲ್ಲಿಯ ರಾಯಲ್ ಅಕಾಡಮಿ ಆಫ್ ದಿ ಡ್ರೆಮೆಟಿಕ್ ಆರ್ಟ್ಸ್ ಶಾಲೆಯ ವಿದ್ಯಾರ್ಥಿಯಾದರು. ಅವರಿಗೆ ಲಂಡನ್ ರಂಗಭೂಮಿಯಲ್ಲಿ ದುಡಿಯುವ ಅವಕಾಶ ಹಾಗೂ ಆಹ್ವಾನವಿದ್ದರೂ ಮುಂಬೈಗೆ ಮರಳಿದರು. ತನ್ನದೇ ಆದ ಥಿಯೇಟರ್ ಯುನಿಟೆಂಬ ಸಂಸ್ಥೆಯನ್ನು ಪ್ರಾರಂಭಿಸಿದರು.

Girish Karnad's autobiography part 9

ಸ್ವಾತಂತ್ರ್ಯೋತ್ತರ ಕಾಲದಲ್ಲಿ ಇಂಗ್ಲಿಷ್ ನಾಟಕಕಾರ ಜಾರ್ಜ್ ಬರ್ನಾರ್ಡ್ ಷಾ ಭಾರತೀಯ ರಂಗಮಂಚದ ಅಧಿದೇವತೆಯಾಗಿದ್ದ. ಸಮಾಜೋದ್ಧಾರವೇ ನಾಟಕಕಾರನ ಗುರಿ ಎಂಬುದು ಷಾನ ಧೋರಣೆಯಾಗಿತ್ತು. ನಾಟಕದ ಆರಂಭದಿಂದ ಕೊನೆಯವರೆಗೆ ಅವನ ಸಂವಾದಗಳಲ್ಲಿ ಹಾಸ್ಯದ ಚಟಾಕಿ ಪುಟಿಯುತ್ತಿದ್ದವು. ವ್ಯಂಗ್ಯವೇ ಅವನ ಕೈಯಲ್ಲಿ ಸಮಾಜ ಸುಧಾರಣೆಯ ಸಾಧನವಾಗಿತ್ತು. ಇದರಿಂದಾಗಿ ಯಾವುದೇ ಮಾನಸಿಕ ಸೆಳೆತವಿಲ್ಲದೆ ನಗುನಗುತ್ತಾ ಅವನ ನಾಟಕಗಳನ್ನು ನೋಡಿ ಆಸ್ವಾದಿನಬಹುದಾಗಿತ್ತು. ಅಂಥ ನಾಟಕಗಳ ಪ್ರಯೋಗಕ್ಕೆ ರಂಗದ ಸೆಟ್ ಕೂಡ ಕಷ್ಟದ್ದಾಗಿರಲಿಲ್ಲ. ಮರಾಠಿಯಲ್ಲಿ ಮಾಮಾ ವಾರೇರಕರ್, ಪಿ.ಕೆ.ಅತ್ರೆ, ಮೋ.ಗ.ರಾಂಗಣೇಕರ್, ವಸಂತ ಕಾಣೇಕರ್, ವಿಜಯ ತೇಂಡೂಲಕರ್ ಬರ್ನಾರ್ಡ್ ಷಾನ ರೀತಿಯ ನಾಟಕಗಳನ್ನು ಬರೆದರು. ಕನ್ನಡದಲ್ಲಿ ಕೈಲಾಸಂ, ಶ್ರೀರಂಗ ಈ ಸಂಪ್ರದಾಯದ ನಾಟಕಗಳನ್ನು ಬರೆದರು ಎಂದು ಕಾರ್ನಾಡ ಬರೆಯುತ್ತಾರೆ.

ಅಲ್‌ಕಾಝಿ ಮುಂಬಯಿ ರಸಿಕರಿಗೆ ಒಂದು ಸಂಪೂರ್ಣ ಹೊಸ ನಾಟ್ಯ ಸಾಹಿತ್ಯವನ್ನೇ ತೆರೆದಿಟ್ಟರು. ಷಾನನ್ನು ಬದಿಗೆ ತಳ್ಳಿ, ಸಾಮಜಿಕ ಸಮಸ್ಯೆಗಳನ್ನು ತೆರೆಯ ಮರೆಗೆ ಸರಿಸಿದರು. ಅನೂಯನಂಥ ಐರೋಪ್ಯ ನಾಟಕಕಾರನ ಅಂತಿಗೊನೆಯಂಥ ದುರಂತ ಕೃತಿಗಳನ್ನು ಎತ್ತಿಕೊಂಡರು. ಅಲ್‌ಕಾಝಿ ಅನೂಯ್‌ನ ಯೂರಿಡಿಸಿ(Eurydice) ನಾಟಕವನ್ನೂ ರಂಗಭೂಮಿಗೆ ತಂದರು. ಅದು ಅಂತಿಗೊನೆಯಷ್ಟು ಯಶಸ್ವಿಯಾದ ನಾಟಕವಲ್ಲ. ಆದರೆ ಕಾರ್ನಾಡರನ್ನು ಸ್ತಂಭಿತಗೊಳಿಸಿದ್ದು ಸ್ವೀಡಿಶ್ ನಾಟಕಕಾರ ಸ್ಟ್ರಿಂಡಬರ್ಗ್(Strindberg)ನ ನಾಟಕ ಮಿಸ್ ಜ್ಯೂಲಿ(Miss Julie). ಒಬ್ಬ ಮೇಲುವರ್ಗದ ಹುಡುಗಿ ತನ್ನ ಮನೆಯಾಳಿನೊಡನೆ ದೈಹಿಕ ಸಂಬಂಧ ಬೆಳೆಸಿ ಆ ನಾಚಿಕೆಯನ್ನು ತಾಳಲಾರದೆ ಆತ್ಮಹತ್ಯೆ ಮಾಡಿಕೊಳ್ಳುವ ದುರಂತ ಕಥಾನಕ.

ಮುಂಬಯಿಯಲ್ಲಿದ್ದಾಗ ಅಲ್‌ಕಾಝಿಯಯವರ ನಾಟಕಗಳನ್ನು ನೋಡಿದರು, ಅವರನ್ನು ಭೇಟಿಯಾಗಲು ಗಿರೀಶರಿಗೆ ಸಾಧ್ಯವಾಗಲಿಲ್ಲ. (ಮುಂದೆ ಅಲ್‌ಕಾಝಿ ದೆಹಲಿಯ ನ್ಯಾಶನಲ್ ಡ್ರಾಮಾ ಅಕಾಡೆಮಿಯ ನಿರ್ದೇಶಕರಾದರು. ಗಿರೀಶ ಕಾರ್ನಾಡರ ತುಘಲಕ್ ನಾಟಕದ ಹಿಂದಿ ರೂಪಾಂತರವನ್ನು ಅಭೂತಪೂರ್ವವಾಗಿ ರಂಗಕ್ಕೆ ತಂದರು. ಅಂದು ವಿದೇಶಗಳಲ್ಲಿ ಪ್ರದರ್ಶನಗೊಳ್ಳುತ್ತಿದ್ದ ಭಾರತ ದರ್ಶನ ಕಾರ್ಯಕ್ರಮದಲ್ಲಿ ಭಾರತವನ್ನು ಪ್ರತಿನಿಧಿಸುವ ನಾಟಕ ತುಘಲಕ್ ಆಗಿತ್ತು. ಅದರ ಶ್ರೇಯಸ್ಸು ಅಲ್‌ಕಾಝಿಗೇ ಸಲ್ಲುತ್ತದೆ. ಆ ನಾಟಕ ಪ್ರಯೋಗವನ್ನು ನೋಡಿ ಪ್ರಭಾವಿತರಾದ ಮುಂಬೈ ರಂಗಕರ್ಮಿ ಅಲೆಕ್ ಪದಮಸೀ ಗಿರೀಶರಿಂದ ಆ ನಾಟಕ ಆಂಗ್ಲ ಅನುವಾದ ಮಾಡಿಸಿದರು, ಅಷ್ಟೇ ಅಲ್ಲ, ಮುಂಬೈಯಲ್ಲಿ ಪ್ರಯೋಗಿಸಿದರು.-ಲೇ)

ರ‍್ಹೋಡ್ಸ್ ಸ್ಕಾಲರ‍್ಶಿಪ್ ದೊರೆತ ಖುಶಿಯಲ್ಲಿ ಗಿರೀಶಗೆ ಎಂ.ಎ. ಅಂಥ ಮಹತ್ವದ್ದು ಎನಿಸಲಿಲ್ಲ. ಡ್ರಾಪ್ ತೆಗೆದುಕೊಂಡು ಧಾರವಾಡಕ್ಕೆ ಬಂದರು. ಅವರ ಅಣ್ಣ ಭಾಲಚಂದ್ರ ವಾರಣಾಸಿಯಲ್ಲಿದ್ದರು, ರೇಲ್ವೆಯಲ್ಲಿ ದೊಡ್ಡ ಅಧಿಕಾರಿಯಾಗಿದ್ದರು. ಮೂರುವಾರ ಗಿರೀಶ ಅಲ್ಲಿದ್ದರು. ಇಂಗ್ಲೆಂಡಿಗೆ ತೆರಳುವ ಪೂರ್ವದಲ್ಲಿ ಭಾರತದ ಇತಿಹಾಸ ಪುರಾಣಗಳ ಅಭ್ಯಾಸದಲ್ಲಿ ತೊಡಗಿದರು. ಚಕ್ರವರ್ತಿ ರಾಜಗೋಪಾಲಾಚಾರಿಯವರು ಇಂಗ್ಲಿಷ್‌ನಲ್ಲಿ ಬರೆದ ಮಹಾಭಾರತ, ರಾಮಾಯಣಗಳನ್ನು ಓದಿದರು. ಇಡಿಯ ಮಹಾಭಾರತವನ್ನು ಮೂರುನೂರು ಪುಟಗಳಲ್ಲಿ ರಾಜಾಜಿ ಭಟ್ಟಿಯಿಳಿಸಿದ್ದರೂ ಉಪಕಥೆಗಳನ್ನು ಬಿಟ್ಟಿರಲಿಲ್ಲ, ಕೆಲವು ಮಹತ್ವದ ಕಥೆಗಳನ್ನು ಸುಂದರವಾಗಿ ಸಂಗ್ರಹಿಸಿ ಕೊಟ್ಟಿದ್ದರು. ಅವುಗಳಲ್ಲಿಯ ಯಯಾತಿಯ ಕಥೆ ಇವರಿಗೆ ಬಹಳ ಹಿಡಿಸಿತು, ಅದರಿಂದ ಉತ್ತೇಜಿತರಾದರು. ತಂದೆ ಯಯಾತಿಯ ವೃದ್ಧಾಪ್ಯವನ್ನು ಮಗ ಪುರು ಸ್ವೀಕರಿಸಿ ವೃದ್ಧನಾಗುವ ಸನ್ನಿವೇಶ ಬಹಳ ನಾಟಕೀಯವಾಗಿತ್ತು, ದುರಂತಮಯವಾಗಿತ್ತು.

ಕಥೆಯನ್ನು ಓದಿ ಮುಗಿಸುತ್ತಿರುವಂತೆ ಒಂದು ಪ್ರಶ್ನೆ ಗಿರೀಶರನ್ನು ಕೆಣಕಿತು. ಮಗನಿಗೆ ಒಬ್ಬ ಹೆಂಡತಿಯಿರುತ್ತಿದ್ದರೆ ಈ ಪರಿಸ್ಥಿತಿಯಲ್ಲಿ ಅವಳು ಏನು ಮಾಡುತ್ತಿದ್ದಳು? ಗಿರೀಶರಿಗೆ ಮೊದಲು ಕಣ್ಣಿಗೆ ಕಟ್ಟಿದ್ದೇ ಆ ದೃಶ್ಯ: ಯಯಾತಿ(ಮಾವ) ಚಿತ್ರಲೇಖೆ(ಸೊಸೆ)ಯ ನಡೆಯುವ ವಾಗ್ವಾದ. ಅಂತಿಗೊನೆ ನಾಟಕದಲ್ಲಿ ನಾಯಕಿ ನ್ಯಾಯದ ವಿರುದ್ಧ ಬಂಡೆಬ್ಬಿಸಿದ್ದು ನೆನಪಾಯಿತು. ಗಿರೀಶ ಯೋಚಿಸುತ್ತಿರುವಂತೆ ಇವರ ಕಣ್ಣೆದುರಿಗೆ ಈ ಕ್ಲೈಮ್ಯಾಕ್ಸ್ ಸುತ್ತ ಉಳಿದ ನಾಟಕ ಮೈತಳೆಯಲಾರಂಭಿಸಿತು. ತಾವು ನಾಟಕ ಬರೆಯುತ್ತಿದ್ದೇನೆ ಎಂದು ಅವರಿಗೆ ಎನಿಸಲೇ ಇಲ್ಲ. ಪಾತ್ರಗಳು ಜೀವಂತವಾಗಿ ಸಂಭಾಷಣೆ ಮಾಡುತ್ತ ತಮ್ಮ ಎದುರಿಗೆ ಓಡಾಡುತ್ತಿರುವಂತೆ, ತಾವು ಲಿಪಿಕಾರನಂತೆ ಬರೆಯುತ್ತ ಹೋದರು. ಒಂದು ತರಹದ ಭೂತಸಂಚಾರದ ಅನುಭವ ಆಗಿತ್ತು. ನಾಟಕ ರಚನೆಯಲ್ಲಿ ಈ ತರಹದ ಪರವಶತೆಯನ್ನು ಮುಂದೆ ಎಂದೂ ಅನುಭವಿಸಲಿಲ್ಲ ಎಂದು ಬರೆಯುತ್ತಾರೆ.

ತಾವು ಇಂಗ್ಲೆಂಡಿಗೆ ಮೂರು ವರುಷ ಹೋಗುವ ಚಿತ್ರ, ಅಲ್ಲಿಂದ ತಾವು ಮರಳಿ ಬರಲಿಕ್ಕಿಲ್ಲ ಎಂಬ ಚಿಂತೆ. ಮೂರು ವರ್ಷಗಳಲ್ಲಿ ಬಿಳಿಯ ಹೆಣ್ಣನ್ನು ಕಟ್ಟಿಕೊಂಡು ಎಲ್ಲಿ ತಮ್ಮ ಮಗ ಪಶ್ಚಿಮದ ಮೋಹಕ್ಕೆ ಒಳಗಾಗುತ್ತಾನೋ ಎಂಬ ಆತಂಕ ಇವರ ತಂದೆತಾಯಿಗಳಿಗಿತ್ತು. ಆ ತುಮುಲ ಸನ್ನಿವೇಶದ ಪ್ರಭಾವ ಪುರುವಿನಲ್ಲಿ ಮೈಗೂಡಿದಂತೆ ಅವರಿಗೆ ಎನಿಸಿತ್ತು. ಪಶ್ಚಿಮದ ವಿಜಯಯಾತ್ರೆಯ ಸಿದ್ಧತೆಯ ಜೊತೆಗೆ ಮುಂದೆ ತಮ್ಮ ಬರವಣಿಗೆ ಮಾಧ್ಯಮ ಇಂಗ್ಲಿಂಷೇ ಎಂದು ನಿರ್ಧರಿಸಿದ್ದರು. ಮೂಲ ಸಂಸ್ಕೃತ ಕಥೆ, ರಾಜಾಜಿಯವರ ಇಂಗ್ಲಿಷ್ ಪುಸ್ತಕ ಓದಿದ್ದು, ಯಯಾತಿ ನಾಟಕ ಹೇಳದೆ ಕೇಳದೆ ಕನ್ನಡದಲ್ಲಿ ಮೂಡಿ ಬಂದಿತ್ತು. ವಾರಣಾಸಿಯಿಂದ ಮರಳಿ ಧಾರವಾಡಕ್ಕೆ ಬರುವಾಗ ಮಿತ್ರ ಅಶೋಕ ಕುಲಕರ್ಣಿ ಬೆಳಗಾಂವ ಪ್ಲ್ಯಾಟ್‌ಫಾರ್ಮಿಗೆ ಬಂದು ಭೆಟ್ಟಿಯಾದರು. ಗಿರೀಶ ತಾವು ಬರೆದ ನಾಟಕದ ಬಗ್ಗೆ ಹೇಳಿದಾಗ ಮಿತ್ರನಿಗೆ ಅಶ್ಚರ್ಯವಾಗಿತ್ತು. ಕನ್ನಡದಲ್ಲಿ ಹೇಗೆ ಬರೆದಿ? ಇಂಗ್ಲಿಷಿನಲ್ಲಿ ಬರೆಯಲಿಲ್ಲವೇ? ಎಂದು ಕೇಳಿದ್ದರು. ಗಿರೀಶ ಧಾರವಾಡ ತಲುಪಿದಮೇಲೆ ನಾಟಕವನ್ನು ಮತ್ತೆ ತಿದ್ದಿ ಬರೆದರು. ಮನೋಹರ ಗ್ರಂಥಮಾಲೆಯ ಅಟ್ಟಕ್ಕೆ ಹೋಗಿ ಜಿ.ಬಿ.ಜೋಶಿಯವರಿಗೆ ಆ ನಾಟಕ ಓದಲು ಕೊಟ್ಟರು. ಅವರು ಎರಡು ದಿನ ಬಿಟ್ಟು ಬಾ ಎಂದರು. ಇವರು ಮರಳಿ ಜಿ.ಬಿ.ಯವರನ್ನು ಕಾಣಲು ಹೋದಾಗ ಅವರು ಹಸ್ತಪ್ರತಿಯನ್ನು ಮರಳಿಕೊಟ್ಟರು. ಕೊನೆಯ ಅಂಕಿನಲ್ಲಿಯ ಬರುವ ದಾಸಿಯ ಸ್ವಗತ ಛಲೋ ಆಗೇದ ಎಂದರು.

ಗಿರೀಶ ಸಪ್ಟೆಂಬರ್ ಏಳನೆಯ ತಾರೀಖು (1960) ಮುಂಬಯಿಯ ಬೆಲಾರ್ಡ್ ಪಿಯರ್ ಸೇರಿ ಅಲ್ಲಿ ಇಂಗ್ಲೆಂಡಿಗೆ ಹೋಗುವ ಸ್ಟ್ರ್ಯಾಥ್‌ನವೇರ್ (Strathnaver) ಎಂಬ ಹಡಗವನ್ನೇರಿದರು. ಹದಿನೇಳು ನೂರು ಜನರನ್ನು ಸಾಗಿಸುವ ಹಡಗ. ಅದರಲ್ಲಿ ಉಚ್ಚ ವ್ಯಾಸಂಗಕ್ಕಾಗಿ ಇಂಗ್ಲೆಂಡಿಗೆ ತೆರಳುವ ವಿದ್ಯಾರ್ಥಿಗಳೇ ಹೆಚ್ಚಾಗಿದ್ದರು. ಇವರ ಮನೆತನದಲ್ಲಿ ವಿಲಾಯತಿಗೆ ಹೋಗುವ ಮೊದಲ ವ್ಯಕ್ತಿ ಇವರಾಗಿದ್ದರಿಂದ ಅವರನ್ನು ಬೀಳ್ಕೊಡಲು ಕಾರ್ನಾಡರ ಇಡಿ ಪರಿವಾರವೇ ಬಂದಿತ್ತು. ಮಲೇಶಿಯಾದಲ್ಲಿ ನೆಲೆಸಿದ ಅಕ್ಕ ಪ್ರೇಮಾ ಪತಿಯೊಂದಿಗೆ ಬೀಳ್ಕೊಡಲು ಬಂದಿದ್ದರು.

ಅವರನ್ನು ಬೀಳ್ಕೊಡಲು ಇಬ್ಬರು ಮಿತ್ರರು ಬಂದಿದ್ದರು. ಅದರಲ್ಲಿ ನಾನೂ(ಜೀವಿ) ಇದ್ದೆ ಎಂಬುದು ನನಗೆ ಅಭಿಮಾನದ ಸಂಗತಿಯಾಗಿತ್ತು. ಇನ್ನೊಬ್ಬ ಮಿತ್ರ ಶೀನ (ಎಸ್.ಎನ್.ಕುಲಕರ್ಣಿ). ಶೀನ ಗಿರೀಶರ ಕ್ಲಾಸ್‌ಮೇಟ್ ಆಗಿದ್ದ. ಗಣಿತದ ವಿದ್ಯಾರ್ಥಿಯಾಗಿದ್ದ. ಗಿರೀಶ, ಶೀನು, ವಸಂತ (ವಿ.ಕೆ.ಪ್ರಭು) ಒಂದೇ ಡೆಸ್ಕಿನಲ್ಲಿ ಕೂಡುತ್ತದ್ದರಂತೆ. ವಸಂತ ಮುಂದೆ ಅಮೆರಿಯಲ್ಲಿ ನೆಲಸಿದ, ಶ್ರೇಷ್ಠ ವಿಜ್ಞಾನಿ ಎಂದು ಹೆಸರು ಗಳಿಸಿದ. ಕರ್ನಾಟಕ ವಿಶ್ವ ವಿದ್ಯಾಲಯದ ಕುಲಪತಿ ಡಿ.ಸಿ.ಪಾವಟೆ ಮಗನನ್ನು ಬೀಳ್ಕೊಡಲು ಬಂದಿದ್ದರು. ಅವರ ಮಗನಿಗೆ ಕೆಂಬ್ರಿಜ್‌ನಲ್ಲಿ ಸೀಟು ದೊರೆತಿತ್ತು. ಪಾವಟೆ ನನ್ನನ್ನು ಗುರುತಿಸಿದರು, ಗಿರೀಶನನ್ನು ಬೀಳ್ಕೊಡಲು ಬಂದಿದ್ದೀಯಾ? ಮುಂಬೈಯಲ್ಲಿ ಏನು ಮಾಡುತ್ತೀ? ಎಂದು ಕೇಳಿದರು. ಇಲ್ಲಿಯ ಕಾಲೇಜೊಂದರಲ್ಲಿ ಪ್ರಾಧ್ಯಾಪಕನಾಗಿದ್ದೇನೆ ಎಂದು ಹೇಳಿದೆ. ಗಿರೀಶರನ್ನು ಬೀಳ್ಕೊಡುವುದೂ ಒಂದು ಅವಿಸ್ಮರಣೀಯ ಸಂದರ್ಭವಾಗಿತ್ತು.

English summary
Kannada laureate Dr. G.V. Kulkarni writes about Jnanpith awardee, Kannada playwrite Dr. Girish Karnad's autobiography 'Adadata Aayushya' in his column Jeevana Mattu Sahitya. Here is part 9. In this episode Karnad writes about influence of theatre.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X